ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮದ ಮೇಲೆ ತಂತ್ರಜ್ಞಾನದ ಪ್ರಭಾವ...

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನದಲ್ಲಿ ಏನೇ ಬದಲಾವಣೆ ಆದರೂ ಅದು ಜನಜೀವನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದ. ವಿಮಾನದಿಂದ ಹಿಡಿದು ಗುಂಡುಸೂಜಿಯವರೆಗೆ ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬೇಕೇಬೇಕು. ಸುದ್ದಿ ಮಾಧ್ಯಮವೂ ಇದಕ್ಕೆ ಹೊರತಲ್ಲ. ತಂತ್ರಜ್ಞಾನದ ನೆರವಿನಿಂದಲೇ ಇದು ಕೂಡ ಬೆಳೆಯುತ್ತಾ ಬಂದಿದೆ. ಒಂದು ರೀತಿಯಲ್ಲಿ ಮಾಧ್ಯಮಗಳನ್ನು ಅಚ್ಚರಿಯ ರೀತಿಯಲ್ಲಿ ಬೆಳೆಸಿದ ಹೆಗ್ಗಳಿಕೆ ತಂತ್ರಜ್ಞಾನದ್ದು. ಈವರೆಗೆ ಯಾವ ತಂತ್ರಜ್ಞಾನವೇ ಮೇಲು ಎಂದುಕೊಂಡಿದ್ದೆವೆಯೊ ಅದಕ್ಕಿಂತ ಹೊಸದು ಸೇರ್ಪಡೆಯಾಗುತ್ತಲೇ ಇದೆ.   20 ವರ್ಷಗಳಲ್ಲಿ ಸುದ್ದಿ ಮಾಧ್ಯಮಗಳ ಮೇಲೆ ಹೊಸ ತಂತ್ರಜ್ಞಾನ ಗಣನೀಯ ಪರಿಣಾಮ ಬೀರಿದೆ ಎಂದು ಒಂದು ವರದಿ ಹೇಳಿದರೂ ಇದು ಕೇವಲ ಆರಂಭವಷ್ಟೇ.

‘ಸುದ್ದಿ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಮುಂದಿನ ಹಂತದ ತಂತ್ರಜ್ಞಾನ ಇನ್ನಷ್ಟು ತೀವ್ರವಾಗಿರುತ್ತದೆ’ ಎಂದು ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ನಡೆದ ಆನ್‌ಲೈನ್ ನ್ಯೂಸ್‌ ಅಸೋಸಿಯೇಷನ್‌ನ ವಾರ್ಷಿಕ ಸಮಾವೇಶದಲ್ಲಿ ಮಂಡನೆಯಾದ ಅಧ್ಯಯನವೊಂದು ತಿಳಿಸಿದೆ.

ಕಳೆದ ಎರಡು ದಶಕಗಳಲ್ಲಿ ಸುದ್ದಿ ಮಾಧ್ಯಮಗಳು ತಮ್ಮ ಓದುಗರನ್ನು ಮತ್ತು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದ ಎಲ್ಲ ತಂತ್ರಜ್ಞಾನಗಳನ್ನು ಬಳಸಲು ಹರಸಾಹಸಪಟ್ಟಿವೆ. ಪತ್ರಿಕೆಗಳು ಇಂದು  ಆನ್‌ಲೈನ್‌ನಲ್ಲಿ ಸಿಗುತ್ತಿವೆ ಅಲ್ಲದೆ ಮೊಬೈಲ್‌ ಪರದೆಯಲ್ಲಿ ಬಿಚ್ಚಿಕೊಳ್ಳುತ್ತಿವೆ. ಇನ್ನು ಮುಂದೆ ಕೃತಕ ಬುದ್ಧಿಮತ್ತೆ, ಆಗುಮೆಂಟೆಡ್‌ ರಿಯಾಲಿಟಿ, ಸ್ವಯಂಚಾಲಿತ ಪತ್ರಿಕೋದ್ಯಮ ಅಲ್ಲದೆ ಸ್ಮಾರ್ಟ್‌ಫೋನ್‌ ಆಚೆಗೂ ಸಂಪರ್ಕಿಸುವ ತಂತ್ರಜ್ಞಾನ ಅಗತ್ಯವಿದೆ ಎಂದು ವರದಿ ಹೇಳಿದೆ.

ಮಾಧ್ಯಮ ಸಂಸ್ಥೆಗಳಿಗೆ ಇಂದು ‘ವಾಯ್ಸ್‌ ಇಂಟರ್‌ಫೇಸ್‌’ ಒಂದು ದೊಡ್ಡ ಸವಾಲಾಗಿದೆ’ ಎನ್ನುತ್ತಾರೆ ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಸ್ಟೆರ್ನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ನ ವಿಭಾಗವೊಂದರ ಸದಸ್ಯ ಹಾಗೂ ‘ಫ್ಯೂಚರ್ ಟುಡೆ‘ ಸಂಸ್ಥೆಯ ಸ್ಥಾಪಕ ಅಮಿ ವೆಬ್‌. 2023 ರ ಹೊತ್ತಿಗೆ ಕಂಪ್ಯೂಟರ್‌ ಜತೆಗೆ ಶೇ 50 ರಷ್ಟು ಜನರು ಸಂವಹನ ನಡೆಸುತ್ತಾರೆ ಎಂಬುದನ್ನು ಈ ಸಂಸ್ಥೆ ಅಂದಾಜು ಮಾಡಿದೆ.

ಅಮೆಜಾನ್‌ನ ಅಲೆಕ್ಸಾ ಮತ್ತು ಗೂಗಲ್ ಹೋಮ್‌ನಲ್ಲಿ ‘ಚಾಟ್‌ ಆ್ಯಪ್ಸ್‌’ ಮತ್ತು ‘ವಾಯ್ಸ್‌ ಸ್ಕಿಲ್‌’ನಲ್ಲಿ ಸಾಕಷ್ಟು ಕಡಿಮೆ ಸುದ್ದಿಸಂಸ್ಥೆಗಳು ಪ್ರಯೋಗ ಮಾಡಿವೆ. ಇದರಿಂದಾಗಿ ಕೃತಕ ಬುದ್ಧಿಮತ್ತೆ ಪತ್ರಿಕೋದ್ಯಮದ ಭವಿಷ್ಯದ ಅಸ್ತಿತ್ವಕ್ಕೆ ಬೆದರಿಕೆ ಎಂಬುದನ್ನು ಅಮಿ ವೆಬ್‌ ಕಂಡುಕೊಂಡಿದ್ದಾರೆ.ಮುಂಬರುವ ವರ್ಷಗಳಲ್ಲಿ ಪತ್ರಿಕೋದ್ಯಮದ ಮೇಲೆ ಪ್ರಭಾವ ಬೀರುವ 75 ತಂತ್ರಜ್ಞಾನದ ಬದಲಾವಣೆಗಳನ್ನೂ ಈ ಅಧ್ಯಯನ ಗುರುತಿಸಿದೆ. ಇದರಲ್ಲಿ ಧರಿಸಬಹುದಾದ ಉಪಕರಣಗಳು (wearable devices), ಡ್ರೋನ್‌, ಬ್ಲಾಕ್‌ಚೈನ್‌, 360 ಡಿಗ್ರಿ ವಿಡಿಯೊ, ವರ್ಚುವಲ್ ರಿಯಾಲಿಟಿ ಮತ್ತು ನೈಜಕಾಲದ ವಾಸ್ತವ-ತಪಾಸಣೆಗಳು ಸೇರಿವೆ. ತಂತ್ರಜ್ಞಾನದ ಬದಲಾವಣೆಗಳಲ್ಲಿ ಕೆಲವು 24 ರಿಂದ 36 ತಿಂಗಳ ಒಳಗೆ ಮಾಧ್ಯಮಗಳ ಮೇಲೆ ಪ್ರಭಾವ ಬೀರುತ್ತವೆ ಎನ್ನುತ್ತಾರೆ ಅಮಿ ವೆಬ್‌.

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಲ್ಲಿ ತರಬೇತಿ ಪಡೆದರೆ ಪತ್ರಕರ್ತರು ಸೂಪರ್‌ಪವರ್‌ ಆಗುತ್ತಾರೆ. ಹೆಚ್ಚು ಕೆಲಸ ಮಾಡಲು, ಆಳವಾಗಿ ವರದಿ ಮಾಡಲು, ಮಾಹಿತಿಯನ್ನು ತಪಾಸಣೆ ಮಾಡಲು ಹಾಗೂ ಸಂಪಾದನೆಗೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.

ಪತ್ರಿಕೋದ್ಯಮದ ಪರಿಕಲ್ಪನೆಯನ್ನೇ ಡಿಜಿಟಲ್‌ ಮಾಧ್ಯಮ ಸಂಪೂರ್ಣವಾಗಿ ಬದಲಿಸಿದೆ. ರಾಯಿಟರ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸ್ಟಡಿ ಆಫ್‌ ಜರ್ನಲಿಸಂ ಸಿದ್ಧಪಡಿಸಿದ ‘ಡಿಜಿಟಲ್‌ ನ್ಯೂಸ್‌ ರಿಪೋರ್ಟ್‌ 2016’ ರ ಪ್ರಕಾರ, ಶೇ 12 ರಷ್ಟು ಬಳಕೆದಾರರು ಸಾಮಾಜಿಕ ಮಾಧ್ಯಮಗಳೇ ಸುದ್ದಿನ ಪ್ರಮುಖ ಮೂಲ ಎಂದು ಪರಿಗಣಿಸಿದ್ದಾರೆ. ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳ ನೇರ ಪ್ರಸಾರ ಆಗುವುದರಿಂದ ಘಟನೆಗೆ ಸಾಕ್ಷಿಯಾಗಲು ಸಾಧ್ಯವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT