ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ಹೊಸ ಹಾದಿ ಎಲ್ಲಿ?

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಡ್ಡಿ ದರ ಇನ್ನಷ್ಟು ಇಳಿಕೆ’... ಇತ್ತೀಚಿನ ದಿನಗಳಲ್ಲಿ   ಮಾಧ್ಯಮಗಳಲ್ಲಿ ಮತ್ತೆ ಮತ್ತೆ ಇದೇ ತಲೆಬರಹದ ಸುದ್ದಿ ಓದಿ, ಸಾಂಪ್ರದಾಯಿಕ ಹೂಡಿಕೆ ವಿಧಾನ ಅನುಸರಿಸುವವರಿಗೆ ಸ್ವಲ್ಪ ಕಸಿವಿಸಿ ಆಗಿರಬಹುದು. ಜುಲೈ 31ರಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಉಳಿತಾಯ ಖಾತೆಯ ಬಡ್ಡಿ ದರವನ್ನು ಶೇ 3.5ಕ್ಕೆ ಇಳಿಸಿತ್ತು. ಇದಾಗುತ್ತಿದ್ದಂತೆ ಇತರ ಕೆಲವು ಬ್ಯಾಂಕ್‌ಗಳೂ ಇದೇ ನಿರ್ಧಾರ ಕೈಗೊಂಡವು. ಸದ್ಯದಲ್ಲೇ ಇನ್ನಷ್ಟು ಬ್ಯಾಂಕ್‌ಗಳು ಬಡ್ಡಿ ದರ ಇಳಿಸುವ ಸಾಧ್ಯತೆ ದಟ್ಟವಾಗಿದೆ.

ಇಂಥ ಸನ್ನಿವೇಶದಲ್ಲಿ ಹೂಡಿಕೆದಾರರು ಏನು ಮಾಡಬಹುದು?... ಮೊದಲನೆಯದಾಗಿ ಯಾವ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಬಡ್ಡಿ ದರ ಇಳಿಯಿತೆಂದರೆ ‘ಎಲ್ಲವೂ ಮುಗಿಯಿತು’ ಎಂದು ಅರ್ಥವಲ್ಲ. ಎರಡನೆಯದಾಗಿ ಹೂಡಿಕೆದಾರರು ತಮ್ಮ ಹೂಡಿಕೆಯ ಅಲ್ಪಾವಧಿ ಹಾಗೂ ದೀರ್ಘಾವಧಿ ಗುರಿಗಳನ್ನು ಮತ್ತೆ ನಿಗದಿ ಮಾಡಿಕೊಂಡು ಹೂಡಿಕೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಅದಕ್ಕಾಗಿ ಈ ಕೆಳಗಿನ ಕೆಲವು ಆಯ್ಕೆಗಳನ್ನು ಪರಿಶೀಲಿಸಬಹುದು.

ಅಲ್ಪಾವಧಿ ಗುರಿ  ಮೂರು ವರ್ಷಗಳವರೆಗಿನ ಅಲ್ಪಾವಧಿ ಗುರಿ ನಿಗದಿಪಡಿಸಿ ಮುಂದುವರೆಯಬೇಕು. ಭಾರತೀಯರಿಗೆ ಸ್ಥಿರ ಠೇವಣಿ ಮೇಲೆ ಹೆಚ್ಚು ಪ್ರೀತಿ. ಆದರೆ, ಇಲ್ಲಿ ಒಂದೆರಡು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಣದುಬ್ಬರದ ಪ್ರಮಾಣ ಹಾಗೂ ಬಡ್ಡಿ ಮೇಲಿನ ತೆರಿಗೆಯನ್ನು ಲೆಕ್ಕಹಾಕಿ ನೋಡಿದರೆ ಸ್ಥಿರ ಠೇವಣಿಗಳಿಂದ ಬರುವ ನಿವ್ವಳ ಆದಾಯ ಕಡಿಮೆಯೇ ಆಗುತ್ತದೆ. ಅದೂ ಅಲ್ಲದೆ, ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಕಡಿಮೆ ಮಾಡುವ ಸಾಧ್ಯತೆ ಇದೆ. ಹೀಗಿದ್ದರೂ ಹೂಡಿಕೆಯ ಬಗ್ಗೆ ನಿಶ್ಚಿಂತೆಯಿಂದ ಇರಲು ಬಯಸುವವರಿಗೆ ಸ್ಥಿರ ಠೇವಣಿ ಈಗಲೂ ಒಳ್ಳೆಯ ಆಯ್ಕೆ ಆಗಿದೆ.

ಕಾರ್ಪೊರೇಟ್‌ ಠೇವಣಿ ಬ್ಯಾಂಕ್‌ಗಳ ಸ್ಥಿರ ಠೇವಣಿಗಿಂತ ಹೆಚ್ಚಿನ ಆದಾಯ ತಂದುಕೊಡುವ ಕೆಲವು ಕಾರ್ಪೊರೇಟ್‌ ಠೇವಣಿ ಅವಕಾಶಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, ಇಂಥ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಅವುಗಳ ರೇಟಿಂಗ್‌, ಸಂಸ್ಥೆಗಳ ಹಣಕಾಸು ಸ್ಥಿತಿಗಳ ಬಗ್ಗೆ ಅಧ್ಯಯನ ಮಾಡುವುದು ಅಗತ್ಯ. ಸಾಲ ನಿಧಿಗಳುಸಾಲ ನಿಧಿಗಳು ಸ್ಥಿರ ಠೇವಣಿಗೆ ಒಳ್ಳೆಯ ಪರ್ಯಾಯ ಆಗಬಲ್ಲವು. ಒಂದರಿಂದ ಮೂರು ವರ್ಷಗಳ ಅವಧಿಯ ಹೂಡಿಕೆಗೆ ಅಲ್ಪಾವಧಿ ಸಾಲ ನಿಧಿಗಳನ್ನು ಅಥವಾ ಡೈನಾಮಿಕ್‌ ಬಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಬಡ್ಡಿ ದರ ಏರಿಕೆಯಾದಾಗ ಇಂಥ ಬಾಂಡ್‌ಗಳ ಬೆಲೆ ಇಳಿಕೆಯಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ನಿಮ್ಮ ಹೂಡಿಕೆ 3 ರಿಂದ 6 ತಿಂಗಳು ಅಥವಾ ಒಂದು ವರ್ಷದೊಳಗಿನ ಅವಧಿಯದ್ದು ಎಂದಾದರೆ ಅತಿ ಸಣ್ಣ ಅವಧಿಯ ಬಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಲೂ ಅವಕಾಶ ಇದೆ. ಸ್ಥಿರ ಠೇವಣಿಯ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ಇಂಥ ಬಾಂಡ್‌ಗಳಿಗೆ ಬಂಡವಾಳ ಗಳಿಕೆ ತೆರಿಗೆ ವಿಧಿಸಲಾಗುತ್ತದೆ. ಮೂರು ವರ್ಷಕ್ಕೂ ಹೆಚ್ಚಿನ ಅವಧಿಯ ಹೂಡಿಕೆ ಮೇಲೆ ಶೇ 20ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ವಿಧಿಸಲಾಗುತ್ತದೆ. ಅದಕ್ಕೂ ಕಡಿಮೆ ಅವಧಿಯ ಹೂಡಿಕೆಗೆ (ಅಲ್ಪಾವಧಿ) ಹೂಡಿಕೆದಾರರ ಆದಾಯ ತೆರಿಗೆ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಷೇರುಪೇಟೆ ಆಧಾರಿತ ಉಳಿತಾಯ ಯೋಜನೆಗಳು
ಸುಮಾರು ಮೂರು ವರ್ಷಗಳ ಅವಧಿಯ ಹೂಡಿಕೆ ಮಾಡುವುದಾದರೆ ತೆರಿಗೆ ಉಳಿತಾಯ ಮಾಡುವ ಮ್ಯೂಚುವಲ್‌ ಫಂಡ್‌ಗಳು ಲಾಭದಾಯಕವಾಗಬಹುದು. ಇಂಥ ಫಂಡ್‌ಗಳಲ್ಲಿ ಮಾಡಿರುವ ಹೂಡಿಕೆಗೆ ಸೆಕ್ಷನ್‌ 80ಸಿ ಅಡಿ ತೆರಿಗೆ ವಿನಾಯ್ತಿಯೂ ಇದೆ. ಜೊತೆಗೆ ಡಿವಿಡೆಂಡ್‌ಗೂ (ಈ ಆಯ್ಕೆ ಮಾಡಿಕೊಂಡರೆ) ತೆರಿಗೆ ವಿನಾಯ್ತಿ ಇದೆ.

ದೀರ್ಘಾವಧಿ ಹೂಡಿಕೆ
ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಹೂಡಿಕೆ ಇದಾಗಿರುತ್ತದೆ.

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (ಪಿಪಿಎಫ್‌)
2017ರ ಮೊದಲ ತ್ರೈಮಾಸಿಕದಲ್ಲಿ ಸರ್ಕಾರ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಮೇಲಿನ ಬಡ್ಡಿ ದರವನ್ನು ಶೇ 7.80ಕ್ಕೆ ಇಳಿಸಿದ್ದರೂ, ಹೂಡಿಕೆದಾರರಿಗೆ ಇದು ಅಪಾಯರಹಿತವಾದ ಒಳ್ಳೆಯ ದೀರ್ಘಾವಧಿ ಹೂಡಿಕೆ ಆಯ್ಕೆಯಾಗಿದೆ. ಕನಿಷ್ಠ 15ವರ್ಷಗಳ ಅವಧಿಯಲ್ಲಿ ಗಮನಾರ್ಹವಾದ ಆದಾಯ ಗಳಿಸಲು ಇಲ್ಲಿ ಅವಕಾಶ ಇದೆ. ಈ ಹೂಡಿಕೆಗೆ ಸೆಕ್ಷನ್‌ 80ಸಿ ಅಡಿ ತೆರಿಗೆ ವಿನಾಯ್ತಿ ಇರುವುದಲ್ಲದೆ ಹೂಡಿಕೆ ಮತ್ತು ಸಂಗ್ರಹವಾದ ಬಡ್ಡಿ ಎರಡಕ್ಕೂ ತೆರಿಗೆ ಇರುವುದಿಲ್ಲ. ತೆರಿಗೆ ಮುಕ್ತ ಬಾಂಡ್‌

ದೀರ್ಘಾವಧಿ ಹೂಡಿಕೆಗೆ (10 ರಿಂದ 20ವರ್ಷ) ತೆರಿಗೆ ಮುಕ್ತ ಬಾಂಡ್‌ಗಳೂ ಒಳ್ಳೆಯ ಆಯ್ಕೆ ಎನಿಸಬಲ್ಲವು. ವಿಶೇಷವಾಗಿ ಗರಿಷ್ಠ ತೆರಿಗೆ ವ್ಯಾಪ್ತಿಯಲ್ಲಿ ಇರುವವರಿಗೆ ಈ ಬಾಂಡ್‌ಗಳು ಒಳ್ಳೆಯ ಆಯ್ಕೆ. ಹುಡ್ಕೊ, ಎನ್‌ಎಚ್‌ಎಐ, ಎನ್‌ಟಿಪಿಸಿ, ಪಿಎಫ್‌ಸಿ, ಆರ್‌ಇಸಿ ಮುಂತಾದ ಸರ್ಕಾರಿ ಕಂಪೆನಿಗಳು ಇಂಥ ತೆರಿಗೆ ಮುಕ್ತ ಬಾಂಡ್‌ಗಳನ್ನು ನೀಡುತ್ತವೆ. ಇಂತಹ ಬಾಂಡ್‌ಗಳಲ್ಲಿ ಮಾಡುವ ಹೂಡಿಕೆಗೆ ಯಾವುದೇ ತೆರಿಗೆ ವಿನಾಯ್ತಿ ಇಲ್ಲದಿದ್ದರೂ ಇದರಿಂದ ಬರುವ ಬಡ್ಡಿಯ ಮೇಲೆ ತೆರಿಗೆ ಇರುವುದಿಲ್ಲ. ಮಾತ್ರವಲ್ಲ ಹೂಡಿಕೆ ಅತ್ಯಂತ ಸುರಕ್ಷಿತವಾಗಿರುತ್ತದೆ. ಆದರೆ, ಒಂದು ವೇಳೆ ಇವು ಪಕ್ವವಾಗುವುದಕ್ಕೂ ಮುನ್ನ, ಮಾರಾಟ ಮಾಡಿ ಲಾಭ ಗಳಿಸಿದರೆ ಅದಕ್ಕೆ ಬಂಡವಾಳ ಗಳಿಕೆ ತೆರಿಗೆ ಪಾವತಿಸಬೇಕಾಗುತ್ತದೆ.

ಷೇರು ಮಾರುಕಟ್ಟೆ
ಯಾವುದೇ ಅಪಾಯವನ್ನು ಎದುರಿಸುವ ಮತ್ತು ಮಾರುಕಟ್ಟೆಯ ಏರುಪೇರುಗಳನ್ನು ಎದುರಿಸುವ ಶಕ್ತಿ ಇರುವವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಧೈರ್ಯ ಮಾಡಬಹುದು. ಇಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದು.

ಷೇರುಪೇಟೆ ಆಧಾರಿತ ಮ್ಯೂಚುವಲ್‌ ಫಂಡ್‌
ಷೇರುಪೇಟೆಯಲ್ಲಿ ಹೂಡಿಕೆಗೆ ಆಸಕ್ತಿ ಇದೆ, ಆದರೆ ಅದಕ್ಕಾಗಿ ಹೆಚ್ಚು ಸಮಯ ವ್ಯಯಿಸಲು ಆಗುವುದಿಲ್ಲ ಅಥವಾ ಆ ಬಗ್ಗೆ ಹೆಚ್ಚು ಜ್ಞಾನವಿಲ್ಲ ಎನ್ನುವವರು ಷೇರುಪೇಟೆ ಆಧಾರಿತ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡಬಹುದು.

ಉನ್ನತ ಶಿಕ್ಷಣ, ಮಕ್ಕಳ ವಿವಾಹ ಮುಂತಾದ ಉದ್ದೇಶಗಳಿಗಾಗಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಹೂಡಿಕೆ ಮಾಡಿ ಗುರಿ ಸಾಧಿಸಲು ಅವಕಾಶ ಇದೆ. ಇಲ್ಲಿಯೂ ಮಾರುಕಟ್ಟೆಯ ಏರುಪೇರುಗಳಿಂದ ಹೆಚ್ಚು ನಷ್ಟವಾಗದಂತೆ ನೋಡಿಕೊಳ್ಳಲು ಇಟಿಎಫ್‌ ಅಥವಾ ಇಂಡೆಕ್ಸ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಮೇಲೆ ತಿಳಿಸಿದ ಎಲ್ಲ ಆಯ್ಕೆಗಳು ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿಗಿಂತ ಹೆಚ್ಚಿನ ಆದಾಯ ತಂದುಕೊಡಬಲ್ಲವಾದರೂ ಎಲ್ಲ ಆಯ್ಕೆಗಳು ಎಲ್ಲರಿಗೂ ಸೂಕ್ತ ಎನಿಸಲಾರವು. ನಿಮ್ಮ ನಷ್ಟ ತಾಳಿಕೆಯ ಸಾಮರ್ಥ್ಯ ಹಾಗೂ ಆರ್ಥಿಕ ಗುರಿಯನ್ನು ಗಮನದಲ್ಲಿಟ್ಟು ಅದಕ್ಕೆ ಅನುಗುಣವಾಗಿ ಹೂಡಿಕೆ ನಡೆಸುವುದು ಅಗತ್ಯ. ಒಂದೇ ಬಾರಿಗೆ ಪೂರ್ತಿ ಹಣವನ್ನು ಹೂಡಿಕೆ ಮಾಡುವ ಬದಲು ಮೂರು–ನಾಲ್ಕು ತಿಂಗಳ ಖರ್ಚಿಗಾಗುವಷ್ಟು ಹಣವನ್ನು ಉಳಿತಾಯ ಖಾತೆಯಲ್ಲಿಟ್ಟುಕೊಂಡು ಉಳಿದ ಹಣವನ್ನು ವ್ಯವಸ್ಥಿತವಾಗಿ ಹೂಡಿಕೆ ಮಾಡುವುದು ಹೆಚ್ಚು ಜಾಣತನದ ನಿರ್ಧಾರವಾಗಿರಲಿದೆ.

ಯೋಜನೆ  ಬಡ್ಡಿ ದರ (%)

ಸುಕನ್ಯಾ ಸಮೃದ್ಧಿ 8.3

ಹಿರಿಯ ನಾಗರಿಕರ ಉಳಿತಾಯ ಯೋಜನೆ (5 ವರ್ಷ) 8.3

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌)   7.8

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ   7.8

ಕಿಸಾನ್‌ ವಿಕಾಸ್‌ ಪತ್ರ  (ಕೆವಿಪಿ)   7.5

ಅಂಚೆ ಕಚೇರಿ ತಿಂಗಳ ವರಮಾನ 7.5

ಅಂಚೆ ಕಚೇರಿ ಆರ್‌ಡಿ   7.1 ಉಳಿತಾಯ ಠೇವಣಿ 4

ಅಮಿತ್‌ ಭೋರ್‌

(ಲೇಖಕ ವಾಲ್‌ನಟ್‌ ಸಂಸ್ಥೆಯ ಸಿಇಒ ಹಾಗೂ ಸಹ ಸಂಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT