ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳಿಗೆ ಕಿರುಕುಳ ಪ್ರಜೆಗಳ ಹಕ್ಕಿನ ಹರಣಕ್ಕೆ ಸಮ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಮ್ಮ ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರಿಗೆ ಏನಾಗುತ್ತದೆಯೋ ಗೊತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಮುನ್ನ ಅವರ ನಿಲುವು ಒಂದು ರೀತಿ ಇದ್ದರೆ, ಗೆದ್ದ ನಂತರ ದಿಢೀರನೆ ಬದಲಾಗಿ ಬಿಡುತ್ತದೆ. ಅಧಿಕಾರಕ್ಕೆ ಬಂದ ನಂತರ ಅವರದು ಅನುಕೂಲಸಿಂಧು ನೀತಿ. ರಾಜಸ್ಥಾನದಲ್ಲಿ ಅಧಿಕಾರ ನಡೆಸುತ್ತಿರುವ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ಮತ್ತು ಅದಕ್ಕೆ ಕಾನೂನಿನ ರೂಪ ಕೊಡಲು ವಿಧಾನಸಭೆಯಲ್ಲಿ ಮಂಡಿಸಿದ ಮಸೂದೆಯು ಆ ಪಕ್ಷದ ಮತ್ತು ಅದರ ಮುಖಂಡರ ನಿಲುವಿನಲ್ಲಿ ಆಗಿರುವ ಬದಲಾವಣೆಗೆ ಕನ್ನಡಿ ಹಿಡಿಯುವಂತಿದೆ. ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟರು ಮತ್ತು ಸರ್ಕಾರಿ ಸಿಬ್ಬಂದಿಯನ್ನು ತನಿಖೆಯಿಂದ ರಕ್ಷಿಸುವ ‘ಅಪರಾಧ ಕಾನೂನು (ರಾಜಸ್ಥಾನ ತಿದ್ದುಪಡಿ)’ ಮಸೂದೆ ಬಹಳಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಇದರ ಪ್ರಕಾರ ನ್ಯಾಯಾಧೀಶರು ಮತ್ತು ಸರ್ಕಾರಿ ಸಿಬ್ಬಂದಿ ವಿರುದ್ಧ ತನಿಖೆ ಮಾಡುವುದಕ್ಕೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಇಷ್ಟೇ ಆಗಿದ್ದರೆ ಅದರಲ್ಲೇನೂ ವಿಶೇಷ ಇರುತ್ತಿರಲಿಲ್ಲ. ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಈಗಲೂ ಸರ್ಕಾರಿ ನೌಕರರು ತಮ್ಮ ಕರ್ತವ್ಯದ ಭಾಗವಾಗಿ ತೆಗೆದುಕೊಂಡ ನಿರ್ಧಾರಗಳಿಗೆ ಸಂಬಂಧಿಸಿದಂತೆ ಅವರ ಮೇಲೆ ಮೊಕದ್ದಮೆ ಹೂಡಲು ಸರ್ಕಾರದ ಪೂರ್ವಾನುಮತಿ ಅವಶ್ಯ. ಆದರೆ ರಾಜಸ್ಥಾನ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದು ಅನುಮತಿ ಕೊಡುವವರೆಗೂ ಮಾಧ್ಯಮಗಳು ಈ ಯಾರ ಬಗ್ಗೆಯೂ ವರದಿ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕು. ಭ್ರಷ್ಟಾಚಾರವನ್ನು ಎಳ್ಳಷ್ಟೂ ಸಹಿಸುವುದಿಲ್ಲ ಎಂದು ಅವಕಾಶ ಸಿಕ್ಕಾಗೆಲ್ಲ ಗುಡುಗುವ, ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಹೇಳಿಕೊಳ್ಳುವ ಬಿಜೆಪಿಯ ಒಂದು ರಾಜ್ಯ ಸರ್ಕಾರವೇ ಇಂತಹ ಕರಾಳ ಕಾನೂನಿಗೆ ಮುಂದಾಗಿದೆ ಎನ್ನುವುದೇ ಆಘಾತ ತರುವ ಸಂಗತಿ. ಮಾಧ್ಯಮಗಳ ದನಿಯನ್ನು ಹತ್ತಿಕ್ಕುವ ಈ ಪ್ರಯತ್ನ ಖಂಡನೀಯ. ಮುಂದೊಂದು ದಿನ ಇದು ಬಿಜೆಪಿಗೇ ತಿರುಗುಬಾಣವಾದೀತು.

ಪತ್ರಿಕಾ ಸ್ವಾತಂತ್ರ್ಯ ಎಂಬುದು ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಉಲ್ಲೇಖವಾಗದೇ ಇರಬಹುದು. ಆದರೆ ಮೂಲಭೂತ ಮತ್ತು ವಾಕ್‌ ಸ್ವಾತಂತ್ರ್ಯದಲ್ಲಿಯೇ ಅದು ಅಂತರ್ಗತವಾಗಿದೆ. ಪ್ರಜಾಸತ್ತೆಯ ಕಾವಲುಗಾರರಂತೆ ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತಿವೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಹೀಗಿರುವಾಗ ಅಧಿಕಾರದ ಅಮಲು ತಲೆಗೇರಿರುವವರು ಮಾತ್ರ ಅವುಗಳ ಕತ್ತು ಹಿಸುಕುವ ಕುಕೃತ್ಯಕ್ಕೆ ಕೈಹಾಕಿಯಾರು. ಮಾಧ್ಯಮಗಳ ದನಿ ಅಡಗಿಸುವ ಪ್ರಯತ್ನಗಳು ಇದೇ ಮೊದಲ ಸಲ ಏನಲ್ಲ. ಕಾಂಗ್ರೆಸ್‌– ಬಿಜೆಪಿ, ಆ ಪಕ್ಷ– ಈ ಪಕ್ಷದ ಸರ್ಕಾರ ಎಂಬ ಭೇದವಿಲ್ಲದೆ ಹಿಂದೆಯೂ ನಡೆದಿವೆ. ಆದರೆ ಅದರ ವಿರುದ್ಧ ಎದುರಾದ ಆಕ್ರೋಶ, ಬಲವಾದ ಜನಾಭಿಪ್ರಾಯಕ್ಕೆ ಮಣಿದು ಸರ್ಕಾರಗಳು ಹಿಂದೆ ಸರಿದಿವೆ. ಇಷ್ಟೆಲ್ಲ ಉದಾಹರಣೆ ಕಣ್ಣ ಮುಂದಿದ್ದರೂ ರಾಜಸ್ಥಾನ ಸರ್ಕಾರ ಮಾಧ್ಯಮಗಳನ್ನು ಹಣಿಯಲು ಹೊರಟಿರುವುದು ಜನತಂತ್ರಕ್ಕೆ ಮಾಡುವ ಘೋರ ಅಪಚಾರ. ಮಾಹಿತಿ ಪಡೆದುಕೊಳ್ಳುವ, ವಿಷಯ ತಿಳಿದುಕೊಳ್ಳುವ ನಾಗರಿಕರ ಹಕ್ಕುಗಳ ಹರಣ. ಸುಳ್ಳು ಆರೋಪ ಹೊರಿಸಿ ಎಫ್‌ಐಆರ್‌ ದಾಖಲಿಸುವ ಮೂಲಕ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಕೊಡುವುದನ್ನು ತಡೆಯುವುದು ಸುಗ್ರೀವಾಜ್ಞೆಯ ಉದ್ದೇಶ ಎಂಬುದು ರಾಜಸ್ಥಾನ ಸರ್ಕಾರದ ಸಮರ್ಥನೆ. ಆದರೆ ಆ ಆರೋಪಗಳನ್ನು ಸಾರ್ವಜನಿಕರ ಗಮನಕ್ಕೆ ತರದಂತೆ ಮಾಧ್ಯಮಗಳನ್ನು ಕಟ್ಟಿಹಾಕುವುದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ಏಕೆಂದರೆ ಇದರಿಂದ ಭ್ರಷ್ಟರಿಗೆ ರಕ್ಷಣೆ ಸಿಗುತ್ತದೆ. ಸರ್ಕಾರಿ ಅಧಿಕಾರಿಗಳ ಅಕ್ರಮಕ್ಕೆ ಸಾರ್ವಜನಿಕ ಅಂಕುಶವೇ ಇಲ್ಲದಂತಾಗುತ್ತದೆ. ಅಧಿಕಾರದ ಸೂತ್ರ ಹಿಡಿದವರಿಗೆ ಇದ್ಯಾಕೆ ಈ ಕೆಟ್ಟಬುದ್ಧಿ? ಮಸೂದೆಗೆ ಅಲ್ಲಿನ ವಿಧಾನಸಭೆಯಲ್ಲಿ ಭಾರಿ ವಿರೋಧ ಎದುರಾಗಿದೆ. ಆಡಳಿತಾರೂಢ ಬಿಜೆಪಿಯ ಇಬ್ಬರು ಹಿರಿಯ ಸದಸ್ಯರೂ ವಿರೋಧಿಸಿದ್ದಾರೆ. ಇಷ್ಟೆಲ್ಲ ರಾದ್ಧಾಂತದ ನಂತರ ಸದನ ಸಮಿತಿಯ ಪರಾಮರ್ಶೆಗೆ ಸರ್ಕಾರ ಈ ಮಸೂದೆಯನ್ನು ಒಪ್ಪಿಸಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವ ವಿಷಯದಲ್ಲಿ ಯಾರ ತಕರಾರೂ ಇಲ್ಲ. ಆದರೆ ಆ ನೆಪದಲ್ಲಿ ಮಾಧ್ಯಮಗಳ ಕತ್ತು ಹಿಸುಕುವುದು ಯಾಕೆ? ಮಾಧ್ಯಮಗಳ ಹಕ್ಕಿನ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ತಮ್ಮದೇ ಪಕ್ಷದ ರಾಜ್ಯ ಸರ್ಕಾರದ ಕಿವಿ ಹಿಂಡಬೇಕು, ಅದಕ್ಕೆ ಬುದ್ಧಿ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT