ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತತ್ತ್ವವೊಂದಕ್ಕೆ ಮನಸೋತು...

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಾಲಿದಾಸ ನಮ್ಮ ರಾಷ್ಟ್ರಕವಿ. ಅವನ ಪ್ರತಿಭೆ ನಮ್ಮ ಸಂಸ್ಕೃತಿಯ ಹಲವು ಆಯಾಮಗಳನ್ನು ಸಾವಿರಾರು ವರ್ಷಗಳಿಂದಲೂ ಪ್ರಭಾವಿಸುತ್ತ ಬಂದಿದೆ. ಅವನ ನಾಟಕಗಳು, ಮಹಾಕಾವ್ಯಗಳು ಕೇವಲ ಸಂಸ್ಕೃತಸಾಹಿತ್ಯದ ಶ್ರೇಷ್ಠ ಕೃತಿಗಳ ಸಾಲಿನಲ್ಲಷ್ಟೆ ನಿಲ್ಲುವಂಥವಲ್ಲ; ವಿಶ್ವಸಾಹಿತ್ಯದಲ್ಲೂ ಅವು ಶ್ರೇಷ್ಠ ಕೃತಿಗಳಾಗಿಯೇ ಸಲ್ಲುವಂಥವು ಎಂದು ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ.

ರಘುವಂಶ ಮಹಾಕಾವ್ಯ ಮತ್ತು ಅಭಿಜ್ಞಾನಶಾಕುಂತಲ ನಾಟಕ – ಅವನ ಮಹಾಪ್ರತಿಭೆಯ ಶಿಖರಗಳಷ್ಟೆ ಅಲ್ಲ, ಮಾನವಸಂಸ್ಕೃತಿಯ ಮಹಾದರ್ಪಣವೂ ಹೌದು, ಮಹಾದರ್ಶನವೂ ಹೌದು. ಕಾಲಿದಾಸನನ್ನು ಹಲವರು ಸ್ತುತಿಸಿದ್ದಾರೆ, ಆರಾಧಿಸಿದ್ದಾರೆ, ವಿಮರ್ಶಿಸಿದ್ದಾರೆ. ಆ ಮೂಲಕ ಧನ್ಯತೆಯನ್ನು ಕಂಡುಕೊಂಡಿದ್ದಾರೆ. ಕನ್ನಡದಲ್ಲೂ ಕಾಲಿದಾಸನನ್ನು ಕುರಿತು ಸಾಕಷ್ಟು ಅಧ್ಯಯನಗಳೂ ಬರಹಗಳೂ ನಡೆದಿವೆ.

ಬೇಂದ್ರೆ ಅವರು ಕನ್ನಡಕ್ಕೆ ತಂದಿರುವ ‘ಮೇಘದೂತ’ದ ಘನತೆಯ ಬಗ್ಗೆ ನಮಗೆ ಗೊತ್ತಿದೆ. ಆದ್ಯ ರಂಗಾಚಾರ್ಯರು ಕಾಲಿದಾಸನ ಕೃತಿಗಳನ್ನು ಕುರಿತು ಬರೆದಿರುವ ‘ಕವಿಕುಲಗುರು ಕಾಲಿದಾಸ’ ಕೂಡ ಇಲ್ಲಿ ಉಲ್ಲೇಖಾರ್ಹ. ‘ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯ ರಂಗಾಚಾರ್ಯರು ಕನ್ನಡ ಸಾಹಿತ್ಯಲೋಕದ ಶ್ರೇಷ್ಠರಲ್ಲಿ ಒಬ್ಬರು; ಅವರ ಕೊಡುಗೆ ಕನ್ನಡವನ್ನು ಶ್ರೀಮಂತಗೊಳಿಸಿದೆ.

‘ಕವಿಕುಲಗುರು ಕಾಲಿದಾಸ’ – ಈ ಕೃತಿಯ ಮುನ್ನಡಿಯಲ್ಲಿ ಆದ್ಯ ರಂಗಾಚಾರ್ಯರ ಈ ಮಾತುಗಳು ನನ್ನನ್ನು ಸೆಳೆದವು:

‘‘ಕಾಲಿದಾಸನಲ್ಲಿ ನನ್ನದು ‘ನಿಸರ್ಗಸೌಹಾರ್ದ’; ... ತನ್ನ ಕೊನೆಯ ನಾಟಕವಾದ ಅಭಿಜ್ಞಾನ ಶಾಕುಂತಲದ ಭರತವಾಕ್ಯದಲ್ಲಿ,

ಮಮಾಪಿ ಚ ಕ್ಷಪಯತು ನೀಲಲೋಚನಃ

ಪುನರ್ಭವಂ ಪರಿಗತಶಕ್ತಿರಾತ್ಮಭೂಃ ||

‘‘ಸ್ವಯಂಭುವನಾದ, ಸರ್ವಶಕ್ತಿಯಾದ ಶಿವನು ನನಗೆ ಪುನರ್ಜನ್ಮವನ್ನು ಕೊಡದಿರಲಿ’’ ಎಂದಿದ್ದಾನೆ. ಯಾವ ಕಾರಣಕ್ಕೆ ಅವನಿಗೆ ಅಂತಹ ವಿರಕ್ತಿಯೊ? ಆದರೆ ‘‘ಕಾಲಿದಾಸನ ಕೃತಿಗಳನ್ನು ಮತ್ತೆ ಮತ್ತೆ ಓದಿ ಹೆಚ್ಚೆಚ್ಚು ತಣಿಯುವುದಕ್ಕಾಗಿ ನನಗೆ ಅನಂತವಾಗಿ ಪುನರ್ಜನ್ಮಗಳನ್ನು ಕೊಡಲಿ’ ಎಂದು ಅದೇ ದೇವನಲ್ಲಿ ಪ್ರಾರ್ಥನೆ.’’

ಇದರ ಜೊತೆಯಲ್ಲಿಯೇ ನೆನಪಾದುದು ಮಂಕುತಿಮ್ಮ ಕಗ್ಗದ ಈ ಪದ್ಯ:

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |

ನೆನೆಯದಿನ್ನೊಂದನೆಲ್ಲವ ನೀಡುತದರಾ ||

ಅನುಸಂಧಿಯಲಿ ಜೀವಭಾರವನು ಮರೆಯುವುದು |

ಹನುಮಂತನುಪದೇಶ – ಮಂಕುತಿಮ್ಮ ||

ಜೀವನ ಎಂದರೆ ಕಷ್ಟಗಳ ಪರಂಪರೆ ಎಂದೇ ನಮ್ಮ ಗ್ರಹಿಕೆ. ಹೌದು, ಕಷ್ಟಗಳು ಇರುವುದೂ ಸುಳ್ಳಲ್ಲ. ಆದರೆ ಕಷ್ಟಗಳೇ ಇಲ್ಲದ ಜೀವನ ಸಾಧ್ಯವೆ? ಹಾಗೊಂದು ಪೂರ್ಣಸುಖಮಯ ಜೀವನ ಯಾರಿಗಾದರೂ ಲಭಿಸೀತೆ? ಸುಖಕರ ಜೀವನ ಸಾಧ್ಯವಿಲ್ಲ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಜೀವನಪೂರ್ತಿ ನರಳುತ್ತಲೇ ಬದುಕಬೇಕೆ? ಶಾಂಕುತಲ ನಾಟಕವನ್ನು ಓದಿದಾಗ ಕಾಲಿದಾಸನ ಭರತವಾಕ್ಯದ ಹಿಂದಿರುವ ತಾತ್ತ್ವಿಕ ಕಾರಣವನ್ನು ಊಹಿಸಲು ಸಾಧ್ಯವಾಗುವುದು.

ಪ್ರಸ್ತುತ ನಮ್ಮ ವಿಚಾರಕ್ಕೆ ಅದು ಬೇಡವೆನ್ನಿ! ಕಷ್ಟಗಳಲ್ಲಿ ಬೆಂದ ಜೀವ ‘ಈ ಜೀವನ ಸಾಕು ಮಾಡಪ್ಪ’ ಎಂದು ಉದ್ಗರಿಸುವುದು ಸಹಜ. ಇಂಥದೊಂದು ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಕಾಲಿದಾಸನ ಮಾತನ್ನೇ ಹಿಡಿದು ಶ್ರೀರಂಗರು ನಮಗೆ ಸುಖವಾಗಿ ಬದುಕುವ ಗುಟ್ಟನ್ನು ಹೇಳಿದ್ದಾರೆ ಎನ್ನುವುದು ನಾವಿಲ್ಲಿ ಗಮನಿಸಬೇಕಾದ ಸಂಗತಿ.

ಯಾವ ಕಾಲಿದಾಸ ‘ಜೀವನಚಕ್ರದ ತಿರುಗಾಟ’ ಸಾಕು ಎಂದು ಹೇಳಿದನೋ ಆ ಕಾಲಿದಾಸನನ್ನು ಓದಲು ಎಷ್ಟು ಜನ್ಮವಾದರೂ ಒದಗಲಿ – ಎಂದು ಶ್ರೀರಂಗರು ಬಯಸುತ್ತಿದ್ದಾರೆ. ಈ ಮಾತಿನ ಮರ್ಮವನ್ನು ನಾವು ಗ್ರಹಿಸಬೇಕಿದೆ. ನಮ್ಮ ಜೀವನದಲ್ಲಿ ಎದುರಾಗುವ ದುಃಖದಿಂದ ನಮ್ಮನ್ನು ಸದ್ಯಕ್ಕಾದರೂ ಬಿಡುಗಡೆಗೊಳಿಸಬಲ್ಲಂಥದ್ದು ಕಲೆ. ಅದು ಸಂಗೀತ, ಸಾಹಿತ್ಯ, ನಾಟಕ, ಚಿತ್ರ – ಯಾವುದೂ ಆಗಬಹುದು. ಕಲೆಯನ್ನು ಆಸ್ವಾದಿಸುವ ಸಂಸ್ಕಾರವನ್ನು ನಾವು ದಕ್ಕಿಸಿಕೊಂಡರೆ ಅದು ಜೀವನವನ್ನು ಸಹ್ಯವಾಗಿಸುವಂಥ ಕಾಣ್ಕೆಯನ್ನೂ ನೀಡಬಲ್ಲದು.

ಜೀವನವನ್ನು ದುಃಖಪರಂಪರೆಯಿಂದ ಬಿಡುಗಡೆಗೊಳಿಸಬಲ್ಲ ಇನ್ನೊಂದು ದಾರಿಯ ಬಗ್ಗೆ ಡಿವಿಜಿಯವರು ಹನುಮಂತನ ಆದರ್ಶದ ಮೂಲಕ ಕಟ್ಟಿಕೊಟ್ಟಿದ್ದಾರೆ. ಹನುಮಂತನ ಭಾವ–ಬುದ್ಧಿಗಳು ಸದಾ ಶ್ರೀರಾಮನಲ್ಲಿಯೇ ನೆಲೆಗೊಂಡಿತ್ತು. ಹೀಗಾಗಿ ಅವನ ಬದುಕು ಸುಖ–ದುಃಖಗಳ ಒದ್ದಾಟದಿಂದ ಮುಕ್ತವಾಗಿತ್ತು; ಸದಾ ಆನಂದದಲ್ಲಿ ಒಂದಾಗಿತ್ತು.

ಘನವಾದ ತತ್ತ್ವವೊಂದರಲ್ಲಿ ಸದಾ ನಿರತವಾದರೆ ಅದರಿಂದ ಒದಗುವ ಪ್ರಯೋಜನವೇ ಇದು ಎನ್ನುವುದು ಡಿವಿಜಿಯವರ ಉಪದೇಶ. ಎಂದರೆ ನಾವು ಕೂಡ, ಜೀವನದಲ್ಲಿ ಹಿರಿದಾದ ಆದರ್ಶವೊಂದರ ಕಡೆಗೆ ತೀವ್ರವಾದ ಕಾತರವನ್ನೂ ತುಡಿತವನ್ನೂ ದುಡಿತವನ್ನೂ ಮೈಗೂಡಿಸಿಕೊಂಡರೆ ಆಗ ನಮ್ಮ ಬದುಕು ಕೂಡ ಸಹ್ಯವೂ ಆಗುತ್ತದೆ; ಆನಂದಮಯವೂ ಆಗುತ್ತದೆ. ⇒–ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT