ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ವ್ಯವಸ್ಥೆ ಚೇತರಿಕೆ ಕ್ರಮ ಸಮರ್ಪಕ ಅನುಷ್ಠಾನ ಅಗತ್ಯ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಆರ್ಥಿಕ ವೃದ್ಧಿ ದರ ಕುಸಿತದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆರ್ಥಿಕತೆ ಚೇತರಿಕೆಗಾಗಿ ಕ್ರಮಗಳನ್ನು ಪ್ರಕಟಿಸಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಕಡೆಗೂ ಸರ್ಕಾರ ಅಧಿಕೃತವಾಗಿ ಪರಿಗಣನೆಗೆ ತೆಗೆದುಕೊಂಡಿದೆ ಎಂಬುದು ಸ್ಪಷ್ಟ. ಆರ್ಥಿಕತೆ ಕುಸಿತ ಕೇವಲ ‘ತಾಂತ್ರಿಕ’ ಎಂದು ಈವರೆಗೆ ಮಂಡಿಸುತ್ತಿದ್ದ ವಾದಗಳನ್ನು ಬದಿಗಿಟ್ಟು ಆರ್ಥಿಕತೆ ಚೇತರಿಕೆಗಾಗಿ ಕ್ರಮಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಮೂಲ ಸೌಕರ್ಯ ವಲಯ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಒಟ್ಟು ₹ 9 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮತ್ತು ಮರು ಬಂಡವಾಳ ಯೋಜನೆ ಪ್ರಕಟಿಸಿರುವುದು ಮಹತ್ವದ ನಿರ್ಧಾರ. ಖಾಸಗಿ ಬಂಡವಾಳ ಹೂಡಿಕೆ ಮತ್ತು ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣ ಕುಸಿದಿರುವ ಸದ್ಯದ ಸಂದರ್ಭದಲ್ಲಿ ಈ ನಿರ್ಧಾರವು ಬ್ಯಾಂಕ್‌ಗಳಿಗೆ ಹಣಕಾಸು ಶಕ್ತಿವರ್ಧಕವಾಗುವ ಆಶಯ ಹೊಂದಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಸುಭದ್ರ ಬ್ಯಾಂಕಿಂಗ್‌ ವ್ಯವಸ್ಥೆ ಇರಬೇಕಾದುದು ಅಪೇಕ್ಷಣೀಯ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆತು, ಉದ್ಯೋಗಾವಕಾಶ ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆಗೆ ಗರಿಷ್ಠ ಕೊಡುಗೆ ನೀಡುವುದು ಸಾಧ್ಯವಾಗುತ್ತದೆ. ಬಜೆಟ್‌ ನೆರವಿನ ₹ 76 ಸಾವಿರ ಕೋಟಿ ಜತೆಗೆ,  ಬಾಂಡ್‌ಗಳಿಂದ ₹ 1.35 ಲಕ್ಷ ಕೋಟಿ ಸಂಗ್ರಹವಾಗಲಿದೆ. ಈ ಬಾಂಡ್‌ಗಳ ಬಗ್ಗೆ ಸ್ಪಷ್ಟತೆ ಇಲ್ಲ. ಇವು ಹೇಗೆ ಕಾರ್ಯಗತಗೊಳ್ಳುತ್ತವೆ ಎಂಬುದರ ಮೇಲೆ ಈ ಪ್ರಕ್ರಿಯೆಯ ಯಶಸ್ಸು ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯಲಾಗದು.

ಈ ಆರ್ಥಿಕ ಬಲವರ್ಧನೆಯಿಂದಾಗಿ, ಖಾಸಗಿ ವಲಯಕ್ಕೆ ಉದಾರವಾಗಿ ಸಾಲ ನೀಡಲು ಬ್ಯಾಂಕ್‌ಗಳಿಗೆ ಸಾಧ್ಯವಾಗಲಿದೆ. ಇದರಿಂದ ಖಾಸಗಿ ಬಂಡವಾಳ ಹೂಡಿಕೆಯು ಗಮನಾರ್ಹವಾಗಿ ಹೆಚ್ಚಳಗೊಳ್ಳಲು ಸಹಾಯವಾಗಲಿದೆ ಎಂದು ನಿರೀಕ್ಷಿಸಬಹುದು. ಇದರಿಂದ ಉದ್ದಿಮೆ ವಹಿವಾಟಿಗೆ ಉತ್ತೇಜನ ಸಿಗುವುದರ ಜತೆಗೆ ಉದ್ಯೋಗ ಅವಕಾಶಗಳೂ ಹೆಚ್ಚಲಿವೆ. ಮರು ಬಂಡವಾಳ ಮತ್ತು ಇನ್ನಷ್ಟು ಸುಧಾರಣಾ ಕ್ರಮಗಳ ಫಲವಾಗಿ, ಬ್ಯಾಂಕ್‌ಗಳು ದೇಶಿ ಹಣಕಾಸು ವ್ಯವಸ್ಥೆಯಲ್ಲಿ ಇನ್ನಷ್ಟು ಪ್ರಮುಖ ಪಾತ್ರ ನಿರ್ವಹಿಸಲಿವೆ. ಉದ್ಯೋಗ ಸೃಷ್ಟಿಸುವ ಎಂಎಸ್‌ಎಂಇ ವಲಯಕ್ಕೆ ಭಾರಿ ಉತ್ತೇಜನವೂ ದೊರೆಯಲಿದೆ. ಮೂಲ ಸೌಕರ್ಯ ಯೋಜನೆಗಳಲ್ಲಿ ₹ 6.92 ಲಕ್ಷ ಕೋಟಿ ವೆಚ್ಚದ ದೇಶದ ಅತಿದೊಡ್ಡ ಹೆದ್ದಾರಿ ನಿರ್ಮಾಣ ಯೋಜನೆಯೂ ಒಳಗೊಂಡಿರುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಉತ್ತೇಜನ ಸಿಗಲಿದೆ. ಐದು ವರ್ಷಗಳಲ್ಲಿ 80 ಸಾವಿರ ಕಿ.ಮೀ. ಹೆದ್ದಾರಿ ಅಭಿವೃದ್ಧಿ ಜತೆಗೆ ಮಹತ್ವಾಕಾಂಕ್ಷೆಯ ‘ಭಾರತ ಮಾಲಾ’ ಯೋಜನೆ ಕಾರ್ಯಗತಗೊಂಡಾಗ ಸಾರಿಗೆ- ಸಂಪರ್ಕ ಕ್ಷೇತ್ರದಲ್ಲಿ ಹೊಸ ಪರ್ವಕ್ಕೆ ಇದು ಮುನ್ನುಡಿ ಬರೆಯಲಿದೆ. ಈ ಯೋಜನೆಯಲ್ಲಿ ರಾಜ್ಯಕ್ಕೂ ಒಳ್ಳೆಯ ಕೊಡುಗೆ ಸಿಕ್ಕಿದೆ. ಬೃಹತ್ ಪಟ್ಟಣಗಳ ನಡುವಿನ ಆರ್ಥಿಕ ಕಾರಿಡಾರ್ ಯೋಜನೆಯಡಿ ಬೆಂಗಳೂರು- ಮಂಗಳೂರು ಯೋಜನೆ ಒಳಗೊಂಡಿದೆ.

ಈ ಎಲ್ಲ ಹೂಡಿಕೆ ಪ್ರಸ್ತಾವಗಳನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಸರ್ಕಾರ ಗರಿಷ್ಠ ಮುತುವರ್ಜಿ ತೋರಿಸಬೇಕಾಗಿದೆ. ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಲಕ್ಕಾಗಿ ಬ್ಯಾಂಕ್‌ಗಳ ಮೊರೆ ಹೋಗಲಿವೆ. ಈ ಬೇಡಿಕೆ ಪೂರೈಸಲೆಂದೇ ಬ್ಯಾಂಕ್‌ಗಳಿಗೆ ಬಾಂಡ್‌ ರೂಪದಲ್ಲಿ ಮರು ಬಂಡವಾಳ ನೆರವು ಘೋಷಿಸಿರುವುದು ಸರಿಯಾದ ಕ್ರಮವಾಗಿದೆ. ಈ ಬಂಡವಾಳ ನೆರವು ಸರ್ಕಾರದ ವಿತ್ತೀಯ ಕೊರತೆ ಗುರಿ ಸಾಧಿಸಲು ಅಡ್ಡಿಯಾಗದಂತೆಯೂ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಬ್ಯಾಂಕ್‌ಗಳು ಮುಕ್ತ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಅವಕಾಶ ಕಲ್ಪಿಸಿಕೊಡಲೂ ನಿರ್ಧರಿಸಲಾಗಿದೆ. ಆದರೆ 50 ದೊಡ್ಡ ಕಂಪೆನಿಗಳು, ಬ್ಯಾಂಕ್ ಸಾಲದ ಸುಸ್ತಿದಾರ ಪಟ್ಟಿಯಲ್ಲಿರುವುದು ಸಣ್ಣ ಸಂಗತಿಯಲ್ಲ. ಸುಸ್ತಿದಾರ ಕಂಪೆನಿಗಳನ್ನು ಸುಮ್ಮನೇ ಬಿಡುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT