ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನೊಳಗೇ ಅಂತ್ಯ ಕಂಡ ತೆಲಗಿ

ದೇಶದ ಅರ್ಥವ್ಯವಸ್ಥೆಯನ್ನೇ ನಡುಗಿಸಿದ ಹಣ್ಣಿನ ವ್ಯಾಪಾರಿ!
Last Updated 27 ಅಕ್ಟೋಬರ್ 2017, 10:10 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣದ ಮೂಲಕ ದೇಶದ ಅರ್ಥವ್ಯವಸ್ಥೆಯನ್ನೇ ನಡುಗಿಸಿದ್ದ ಅಬ್ದುಲ್ ಕರೀಂ ಲಾಲ್ ತೆಲಗಿ (56) ಗುರುವಾರ ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ.

‘ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿಯನ್ನು ಅ.16ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ದಿನೇ ದಿನೇ ಆರೋಗ್ಯ ಕ್ಷೀಣಿಸುತ್ತಿತ್ತು. ಗುರುವಾರ ಮಧ್ಯಾಹ್ನ 3.55ಕ್ಕೆ ಕೊನೆಯುಸಿರೆಳೆದ’ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಬೆಳಗಾವಿಯ ಖಾನಾಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಖಾನಾಪುರದಿಂದ ಕಾರಾಗೃಹವರೆಗೆ: ತೆಲಗಿಯ ತಂದೆ ಮಿಜೋರಾಂನಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಅವರ ನಿಧನದ ನಂತರ ತೆಲಗಿ ತಾಯಿ ಶರೀಫಾಬಿ ಲಾಡಾಸನ್ ಅವರು ತಮ್ಮ ಮೂವರು ಮಕ್ಕಳ ಜತೆ ಬೆಳಗಾವಿಯ ಖಾನಾಪುರದಲ್ಲಿ ನೆಲೆಸಿದರು.

ರೈಲು ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡೇ ‘ಸರ್ವೋದಯ ವಿದ್ಯಾಲಯ’ ಕಾಲೇಜಿನಲ್ಲಿ ಬಿ.ಕಾಂ ಓದಿದ ತೆಲಗಿ, ಬಳಿಕ ಉದ್ಯೋಗ ಅರಸಿ ಸೌದಿ ಅರೇಬಿಯಾ ಸೇರಿದ. ಅಲ್ಲಿ ಹಮಾಲಿಯಾಗಿ, ಕಾರು ಚಾಲಕನಾಗಿ, ಕ್ಲೀನರ್ ಆಗಿ ಕೆಲಸ ಮಾಡಿದ ಆತ,1990ರಲ್ಲಿ ಭಾರತಕ್ಕೆ ಮರಳಿ ಮುಂಬೈನಲ್ಲಿ ನೆಲೆಸಿದ. ಅವನ ಅಪರಾಧ ಚಟುವಟಿಕೆಗಳು ಪ್ರಾರಂಭವಾಗಿದ್ದು ಅಲ್ಲಿಂದಲೇ ಎನ್ನುತ್ತವೆ ಪೊಲೀಸ್ ಮೂಲಗಳು.

ಮುಂಬೈನ ದಾಲಾ ಸ್ಟ್ರೀಟ್‌ನಲ್ಲಿ ಟ್ರಾವೆಲ್ ಏಜೆನ್ಸಿ ಪ್ರಾರಂಭಿಸಿದ ತೆಲಗಿ, ನಕಲಿ ವೀಸಾ ತಯಾರಿಕೆ ಮೂಲಕ ಅಕ್ರಮ ಸಂಪಾದನೆಗೆ ಇಳಿದ. ಈ ಸಂಬಂಧ ಮುಂಬೈ ಪೊಲೀಸರು 1992ರಲ್ಲಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೇ ವೇಳೆ ವಂಚನೆ ಪ್ರಕರಣದಲ್ಲಿ ರಾಮ್ ರತನ್ ಸೋನಿ ಎಂಬಾತ ಆ ಕಾರಾಗೃಹ ಸೇರಿದ್ದ. ತೆಲಗಿ ಪಾಲಿಗೆ ಆತನೇ ‘ಗುರು’.

‘ಲೇ.. ಹೀಗೆಲ್ಲ ಚಿಲ್ಲರೆ ಕೇಸುಗಳಲ್ಲಿ ಜೈಲಿಗೆ ಬರಬಾರದರು. ಹೊಡೆದರೆ ಕೋಟ್ಯಂತರ ರೂಪಾಯಿಯನ್ನೇ ಹೊಡೆಯಬೇಕು. ಅದಕ್ಕೆ ನನ್ನ ಬಳಿ ಒಂದು ಉಪಾಯವಿದೆ. ನಕಲಿ ಛಾಪಾ ಕಾಗದ ತಯಾರಿಸಿ ಮಾರಾಟ ಮಾಡಿದರೆ, ಕಡಿಮೆ ಅವಧಿಯಲ್ಲೇ ಶ್ರೀಮಂತರಾಗಬಹುದು’ ಎಂದು ಹೇಳಿದ್ದ. ಆತನ ಮಾತನ್ನು ಗಂಭೀರವಾಗಿ ತೆಗೆದುಕೊಂಡ ತೆಲಗಿ, 1992ರಿಂದ 2000ರವರೆಗೆ ಅವ್ಯಾಹತವಾಗಿ ನಕಲಿ ಛಾಪಾ ಕಾಗದ ದಂಧೆ ನಡೆಸಿದ. ತನಿಖಾಧಿಕಾರಿಗಳ ಲೆಕ್ಕಚಾರದ  ಪ್ರಕಾರ ಇದು ಬರೋಬ್ಬರಿ ₹ 32,000 ಕೋಟಿಯ ಹಗರಣ. ಎಸ್‌ಐಟಿ ಅಧಿಕಾರಿಗಳು ಈ ಹಗರಣವನ್ನು ‘ಮದರ್ ಆಫ್ ಆಲ್‌ ಕ್ರೈಂ’ (ಎಲ್ಲ ಅಪರಾಧ ಚಟುವಟಿಕೆಗಳ ತಾಯಿ) ಎಂದು ಕರೆದಿದ್ದಾರೆ!

ತೆಲಗಿ ಕೆಲಸ ಸುಲಭವಾಗಿದ್ದು ಹೀಗೆ..

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಸರ್ಕಾರಿ ಮುದ್ರಣಾಲಯದಲ್ಲಿ ಛಾಪಾ ಕಾಗದಗಳು ಹಾಗೂ ಆರ್ಥಿಕ ವಹಿವಾಟಿನ ದಸ್ತಾವೇಜುಗಳು ಮುದ್ರಣವಾಗುತ್ತಿದ್ದವು. ಅಲ್ಲಿನ ಅಧಿಕಾರಿಗಳು, ಹಳೆಯ ಯಂತ್ರಗಳನ್ನು ಅಚ್ಚು ತೆಗೆದು ಹರಾಜು ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ತನ್ನ ಗುರು ಸೋನಿಯಿಂದ ಈ ವಿಚಾರ ತಿಳಿದ ತೆಲಗಿ, ಹಣದ ಆಮಿಷವೊಡ್ಡಿ ಆ ಮುದ್ರಣಾಲಯದ ಅಧಿಕಾರಿಗಳನ್ನು ಒಲಿಸಿಕೊಂಡಿದ್ದ. ಹೀಗಾಗಿ, ಅವರು ಅಚ್ಚು ಮೊಳೆಗಳನ್ನು ತೆಗೆಯದೆಯೇ ತೆಲಗಿಗೆ ಆ ಯಂತ್ರವನ್ನು ಕೊಟ್ಟಿದ್ದರು. ಇದು ಆತನ ಕೆಲಸವನ್ನು ತೀರಾ ಸರಳಗೊಳಿಸಿತ್ತು. ಆ ಯಂತ್ರ ಬಳಸಿಕೊಂಡೇ ಛಾಪಾ ಕಾಗದ ಮುದ್ರಿಸಲಾರಂಭಿಸಿದ್ದ. ದಂಧೆ ವಿಸ್ತರಿಸಲು ಮುಂಬೈನಲ್ಲಿ ಷೇರು ವಹಿವಾಟು ಕಂಪೆನಿ ಪ್ರಾರಂಭಿಸಿದ ತೆಲಗಿ, 400ಕ್ಕೂ ಹೆಚ್ಚು ಎಂಬಿಎ ಪದವೀಧರರನ್ನು ಮಾರಾಟ ಪ್ರತಿನಿಧಿಗಳಾಗಿ ತೆಗೆದುಕೊಂಡ. ಛಾಪಾ ಕಾಗದ ಅಗತ್ಯವಿರುವ ಸಂಸ್ಥೆಗಳನ್ನು ಪತ್ತೆ ಹಚ್ಚುವುದು ಹಾಗೂ ಬಂಡಲ್‌ಗಟ್ಟಲೇ ಛಾಪಾ ಕಾಗದ ಖರೀದಿಸಲು ಅವರನ್ನು ಒಪ್ಪಿಸುವುದು ನೌಕರರ ಕೆಲಸವಾಗಿತ್ತು.

2000ರ ಆ.19ರಂದು ಬಬ್ರುದ್ದಿನ್ ಹಾಗೂ ವಿಠ್ಠಲ್ ಎಂಬ ಏಜೆಂಟ್‌ಗಳು ಉಪ್ಪಾರಪೇಟೆ ಪೊಲೀಸರಿಗೆ ಸಿಕ್ಕಿಬಿದ್ದರು. ಅವರು ನೀಡಿದ ಸುಳಿವಿನಿಂದ ಪೊಲೀಸರು  ‘ಸಾಯಿ ಎಂಟರ್‌ಪ್ರೈಸಸ್‌’ ಕಚೇರಿ ಹಾಗೂ ಆರ್‌.ಟಿ.ನಗರದ ಮನೆಯೊಂದರ ಮೇಲೆ ದಾಳಿ ಮಾಡಿದ್ದರು. 23 ಮಂದಿಯನ್ನು ಬಂಧಿಸಿ, ₹12 ಕೋಟಿ ಮೌಲ್ಯದ ನಕಲಿ ಛಾಪಾ ಕಾಗದ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಚಾರಣೆ ವೇಳೆ ಆರೋಪಿಗಳು ತೆಲಗಿಯ ಹೆಸರನ್ನು ಬಾಯ್ಬಿಟ್ಟಿದ್ದರು. ಆ ನಂತರ ತೆಲಗಿ ಪತ್ತೆಗೆ ಎಡಿಜಿಪಿ ಶ್ರೀಕುಮಾರ್ ನೇತೃತ್ವದಲ್ಲಿ ‘stamp-IT' ಹೆಸರಿನಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯಾಯಿತು. 2001ರ ನ.7ರಂದು ಎಸ್‌ಐಟಿ ತಂಡವು ಅಜ್ಮೆರಾದಲ್ಲಿ ಆತನನ್ನು ಬಂಧಿಸಿ ರಾಜಧಾನಿಗೆ ಕರೆತಂದಿತು. ಹಗರಣದಿಂದಾಗಿ 2003ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರವು ಛಾಪಾ ಕಾಗದದ ಬಳಕೆಯನ್ನೇ ಬಂದ್ ಮಾಡಿತು.

1,200 ಗಂಟೆ ಸಂಭಾಷಣೆ!: ತೆಲಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಬಳಿಕವೂ ದಂಧೆ ನಿರಾತಂಕವಾಗಿ ನಡೆದಿತ್ತು. ಈ ವಿಷಯ ತಿಳಿದ ಎಸ್‌ಐಟಿ ಮುಖ್ಯಸ್ಥ ಶ್ರೀಕುಮಾರ್, ಆತನ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಧಿಕಾರಿಗಳನ್ನು ನೇಮಿಸಿದ್ದರು. ಈ ಬೇಹುಗಾರಿಕೆಯು ಫಲ ಕೊಟ್ಟಿತ್ತು. ಕಾರಾಗೃಹದಲ್ಲಿ ಆತ ಮೊಬೈಲ್ ಬಳಸುತ್ತಿರುವ ಸ್ಫೋಟಕ ಮಾಹಿತಿ ಎಸ್‌ಐಟಿಗೆ ಸಿಕ್ಕಿತ್ತು. ಮೊಬೈಲ್ ಜಪ್ತಿಗೆ ಮುಂದಾಗದ ಅಧಿಕಾರಿಗಳು, ಅದರ ಜಾಡು ಹಿಡಿದು ಇಡೀ ಜಾಲವನ್ನು ಭೇದಿಸಲು ನಿರ್ಧರಿಸಿದ್ದರು. ಆತನ ಎಲ್ಲ ಕರೆಗಳನ್ನೂ ಟ್ರ್ಯಾಪ್ ಮಾಡಿ, 1,200 ಗಂಟೆಯ ಸಂಭಾಷಣೆಯನ್ನು ಸಂಗ್ರಹಿಸಿದ್ದರು. ಆ ಮೂಲಕ ತೆಲಗಿಯ ಸಹಚರರ ವಿವರಗಳನ್ನು ಕಲೆ ಹಾಕಿದರು. ಅಲ್ಲದೆ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಗುಜರಾತ್‌ನಲ್ಲಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದ ಜಪ್ತಿ ಮಾಡಿದರು. ದೇಶವ್ಯಾಪಿ 64 ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸೇರಿದಂತೆ ಹಲವರು 2004ರ ಜನವರಿಯಲ್ಲಿ ನ್ಯಾಯಾಲಯಕ್ಕೆ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಅದೇ ವರ್ಷ ಏ.13ರಂದು ತನಿಖೆಯನ್ನು ಸಿಬಿಐಗೆ ವಹಿಸಿತು.

ಈ ಪ್ರಕರಣಗಳ ವಿಚಾರಣೆ ನಡೆಸಿದ ಬೆಂಗಳೂರು ತ್ವರಿತಗತಿ ನ್ಯಾಯಾಲಯ, ₹ 200 ಕೋಟಿ ದಂಡ ಹಾಗೂ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 2006ರ ಜನವರಿ 17ರಂದು ಆದೇಶ ಹೊರಡಿಸಿತ್ತು. ಇದಾದ ನಂತರ 2011ರ ಜೂನ್‌ನಲ್ಲಿ ಪುಣೆ ವಿಶೇಷ ನ್ಯಾಯಾಲಯ ಸಹ ಆತನಿಗೆ ₹ 10 ವರ್ಷ ಜೈಲು ಶಿಕ್ಷೆ ಹಾಗೂ ₹ 9 ಲಕ್ಷ ದಂಡ ವಿಧಿಸಿತ್ತು.

‘ಇಲ್ಲೇ ಸಾಯಬೇಕು ಎಂದಿದ್ದ’

ನ್ಯಾಯಾಲಯದ ಅನುಮತಿ ಪಡೆದು 2014ರಲ್ಲಿ ಪುತ್ರಿಯ ವಿವಾಹದಲ್ಲಿ ಪಾಲ್ಗೊಂಡಿದ್ದ ತೆಲಗಿ, ‘ಬೆಂಗಳೂರಿನಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳು ಖುಲಾಸೆಯಾದರೂ, ನನಗೆ ಬೇರೆ ಬೇರೆ ರಾಜ್ಯದ ನ್ಯಾಯಾಲಯಗಳು ಶಿಕ್ಷೆ ಪ್ರಕಟಿಸುತ್ತವೆ. ಹೀಗಾಗಿ, ನನಗೆ ಬಿಡುಗಡೆ ಭಾಗ್ಯವಂತೂ ಇಲ್ಲ. ಯಾವುದೋ ರಾಜ್ಯದ ಸೆರೆಮನೆಯಲ್ಲಿ ಸಾಯಲು ನನಗೆ ಇಷ್ಟವಿಲ್ಲ. ಹೀಗಾಗಿ, ಬೆಂಗಳೂರಿನ ಪ್ರಕರಣ ಖುಲಾಸೆಯಾಗದಂತೆ ನೋಡಿಕೊಳ್ಳಿ’ ಎಂದು ಹೇಳಿದ್ದನ್ನೆಂದು ಆತನ ಪರ ವಕೀಲ ಶಂಕರಪ್ಪ ತಿಳಿಸಿದರು.

ಸಿಕ್ಕಿಬಿದ್ದಿದ್ದ ದಿಗ್ಗಜರು ಯಾರ‍್ಯಾರು?

ಹೈದರಾಬಾದ್‌ನ ಹಿಮಾಯತ್‌ನಗರ ಕ್ಷೇತ್ರದ ಶಾಸಕರಾಗಿದ್ದ ಸಿ.ಕೃಷ್ಣಯಾದವ್, ಮಹಾರಾಷ್ಟ್ರದ ಧುಲೆ ಕ್ಷೇತ್ರದ ಶಾಸಕರಾಗಿದ್ದ ಅನಿಲ್ ಗೋಟೆ, ಆಂಧ್ರಪ್ರದೇಶದ ಮಾಜಿ ಸಚಿವ ಸಿ.ಬಿ.ಕೆ.ಯಾದವ್, ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಆರ್‌.ಎಸ್.ಶರ್ಮಾ, ಜಂಟಿ ಪೊಲೀಸ್ ಕಮಿಷನರ್ ಆಗಿದ್ದ ಎಸ್‌.ಎಸ್.ವೇಘಲ್, ಅಪರಾಧ ವಿಭಾಗದ ಡಿಸಿಪಿ ಪ್ರದೀಪ್ ಸಾವಂತ್, ಬೆಂಗಳೂರಿನಲ್ಲಿ ಎಸ್‌ಐ ಆಗಿದ್ದ ಸಂಗ್ರಾಮ್ ಸಿಂಗ್, ಸಚಿವರೊಬ್ಬರ ಸೋದರ ರೇಹನ್ ಬೇಗ್, ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳಾದ ಜಯಸಿಂಹ ಹಾಗೂ ನಂಜಪ್ಪ, ವಿಕ್ಟೋರಿಯಾ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ 60 ಮಂದಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT