ಜೀವನ ಕ್ರಮ

ಶರತ್ ಋತುವಿನಲ್ಲಿ ಆರೋಗ್ಯಪಾಲನೆ

ಇವುಗಳಿಗೆ ಅನುಸಾರವಾಗಿ ನಮ್ಮ ಆಹಾರ-ವಿಹಾರಾದಿ ಕ್ರಮಗಳನ್ನು ಬದಲಾಯಿಸಿದಲ್ಲಿ ಯಾವುದೇ ಕಾಯಿಲೆ ನಮ್ಮನ್ನು ಬಾಧಿಸುವುದಿಲ್ಲ. ಈ ಬದಲಾವಣೆಗಳಿಂದ ನಾವು ದೀರ್ಘಕಾಲ ರೋಗಮುಕ್ತ ಜೀವನವನ್ನು ಬಾಳಬಹುದು.

ಶರತ್ ಋತುವಿನಲ್ಲಿ ಆರೋಗ್ಯಪಾಲನೆ

–ವೈದ್ಯ ಶ್ರೀವತ್ಸ ಭಾರದ್ವಾಜ

ಪ್ರತಿಯೊಂದು ಋತುಮಾನಕ್ಕೆ ಅನುಗುಣವಾಗಿ ನಮ್ಮ ಜೀವನಕ್ರಮಗಳನ್ನು ಬದಲಾಯಿಸಬೇಕಾಗುತ್ತದೆ. ಇದರಿಂದ ನಮ್ಮ ಶರೀರದಲ್ಲಿ ಸಹಜ ರೋಗನಿರೋಧಕ ಶಕ್ತಿಯು ಬೆಳೆಯುತ್ತದೆ. ಪ್ರಕೃತಿಯಲ್ಲಾಗುವ ಬದಲಾವಣೆಗಳಿಗೆ ಪೂರಕವಾಗಿ ನಮ್ಮ ದೇಹದಲ್ಲಿ ಬಲವಾವಣೆಗಳಾಗುತ್ತವೆ.

ಇವುಗಳಿಗೆ ಅನುಸಾರವಾಗಿ ನಮ್ಮ ಆಹಾರ-ವಿಹಾರಾದಿ ಕ್ರಮಗಳನ್ನು ಬದಲಾಯಿಸಿದಲ್ಲಿ ಯಾವುದೇ ಕಾಯಿಲೆ ನಮ್ಮನ್ನು ಬಾಧಿಸುವುದಿಲ್ಲ. ಈ ಬದಲಾವಣೆಗಳಿಂದ ನಾವು ದೀರ್ಘಕಾಲ ರೋಗಮುಕ್ತ ಜೀವನವನ್ನು ಬಾಳಬಹುದು. ಶರತ್ ಋತುವು ಶರನ್ನವರಾತ್ರಿಯಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಆಷ್ವಯುಜ ಮತ್ತು ಕಾರ್ತಿಕ ಮಾಸಗಳು ಎರಡು ಬರುವ ಕಾರಣ ನವರಾತ್ರಿ ಮತ್ತು ದೀಪಾವಳಿಗಳಂತಹ ಹಲವಾರು ಹಬ್ಬಗಳನ್ನು ಆಚರಿಸುತ್ತೇವೆ.

ಸಹಜವಾಗಿ ಹಬ್ಬ ಹರಿದಿನಗಳಲ್ಲಿ ಆಹಾರದಲ್ಲಿನ ಬದಲಾವಣೆಯು ಹಲವು ರೋಗಗಳಿಗೆ ನಾಂದಿ ಹಾಡುತ್ತದೆ. ಮುಖ್ಯವಾಗಿ ಶರತ್ ಋತುವಿನ ನಮ್ಮ ಜೀವನಕ್ರಮವು ಮುಂಬರುವ ಚಳಿಗಾಲದಲ್ಲಿ ನಮ್ಮನ್ನು ಸುರಕ್ಷಿತವಾಗಿಡುವಲ್ಲಿ ಸಹಾಯ ಮಾಡುತ್ತದೆ.

ಶರತ್ ಋತುವು ಮಳೆಗಾಲದ ನಂತರ ಬರುವ ಕಾರಣ ಮಳೆಗಾಲದ ಚಳಿಗೆ ಒಗ್ಗಿದ ದೇಹವು ದಿನ ಕಳೆದಂತೆ ಶರತ್ ಋತುವಿನ ಸೂರ್ಯನ ಧಗೆಗೆ ತುತ್ತಾಗುತ್ತದೆ. ಇದರಿಂದ ದೇಹದಲ್ಲಿ ಉಷ್ಣತೆ ಜಾಸ್ತಿಯಾಗತೊಡಗುತ್ತದೆ. ಈ ಉಷ್ಣತೆಯಿಂದ ಸುಲಭವಾಗಿ ಪಿತ್ತಸಂಬಂಧಿ ಕಾಯಿಲೆಗಳು ಬರತೊಡಗುತ್ತವೆ. ಹಾಗಾಗಿ ದೇಹದ ಪಿತ್ತವನ್ನು ತಗ್ಗಿಸುವ ಆಹಾರ ವಿಹಾರಾದಿ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

ಶರತ್ ಋತುವಿನಲ್ಲಿ  ಆರೋಗ್ಯರಕ್ಷಣೆ ಬೇಕಿದ್ದರೆ ಇವುಗಳನ್ನು ಪಾಲಿಸಿರಿ:

*ಕಹಿ, ಚೊಗರು ಮತ್ತು ಸಿಹಿಪ್ರಧಾನ ಇರುವ ಆಹಾರವನ್ನು ತಿನ್ನಬೇಕು.

*ಹುಳಿ, ಉಪ್ಪು ಮತ್ತು ಖಾರದ ಆಹಾರವನ್ನು ವರ್ಜಿಸಬೇಕು.

*ಕಟ್ ಸಾರು, ತೊವ್ವೆ, ಹುಗ್ಗಿ/ಕಿಚಿಡಿಗಳನ್ನು ಸೇವಿಸಬೇಕು.

*ದಿನ ಎರಡು ಬಾರಿಯಾದರೂ ಮಲಶೋಧನೆ ಆಗಬೇಕು. ಇದರಿಂದ ಪಿತ್ತದ ಶಮನವಾಗುತ್ತದೆ.

*ತರಕಾರಿಗಳಲ್ಲಿ ಬೂದುಗುಂಬಳ, ಸೋರೆ, ಹರಿವೆಸೊಪ್ಪು, ಮೆಂತ್ಯದ ಸೊಪ್ಪು, ಹಾಗಲಕಾಯಿ, ಪಡವಲಕಾಯಿಗಳಂತಹ ನೀರಿರುವ, ನಾರಿರುವ ತರಕಾರಿಗಳನ್ನು ತಿನ್ನಬೇಕು.

*ಆಹಾರವು ಬಿಸಿಯಾಗಿರುವಾಗಲೇ ತುಪ್ಪವನ್ನು ಬೆರಸಿ ತಿನ್ನಬೇಕು.

*ಬೆಲ್ಲದಿಂದ ಮಾಡಿದ ಸಿಹಿತಿಂಡಿಗಳನ್ನು ತಿನ್ನಬೇಕು.

*ಕಾಡುಜೇನನ್ನು ಆಹಾರದಲ್ಲಿ ಬಳಸುವುದು ಉತ್ತಮ.

*ಹುಳಿ ಬಂದ ಮೊಸರು, ಕರಿದ ಆಹಾರ, ಮಾಂಸಾಹಾರ, ವಿವಿಧ ಮಸಾಲೆಯುಕ್ತ ಆಹಾರ, ಮೆಣಸು, ಟೊಮೆಟೊ, ಹುಣಸೆಯನ್ನು ಉಪಯೋಗಿಸಬಾರದು.

*ಒಗರು, ಕಹಿರಸ ಇರುವ ದಾಳಿಂಬೆ, ನೆಲ್ಲಿಕಾಯಿ, ನೆಲನೆಲ್ಲಿ, ಸೀಬೆ ಚಿಗುರು, ಕುಂಟಾಲ ಹಾಗೂ ಮಾವಿನ ಚಿಗುರಿನ ತಂಬುಳಿಗಳನ್ನು ಅಥವಾ ಚಟ್ನಿಗಳನ್ನು ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

*ಹಣ್ಣುಗಳಲ್ಲಿ ದಾಳಿಂಬೆ, ಕಿತ್ತಾಳೆ, ಸೀತಾಫಲ, ಮುಸಂಬಿ, ಚಿಕ್ಕು ತಿನ್ನಬಹುದು.

*ಹಗಲು ನಿದ್ರೆ ಮಾಡಬಾರದು.

*ದಿನನಿತ್ಯ ಎಳ್ಳೆಣ್ಣೆ ಅಥವಾ ಹರಳೆಣ್ಣೆಯಿಂದ ಅಭ್ಯಂಜನ ಮಾಡಬೇಕು.

*ಬಿಸಿಲಿನಲ್ಲಿ ಹೆಚ್ಚಿನ ಸಮಯ ಕೆಲಸ ಮಾಡಬಾರದು.

*ಜೀರಿಗೆ, ಓಮ, ಲಾವಂಚಗಳಿಂದ ತಯಾರಿಸಿದ ಕಷಾಯಗಳನ್ನು ಕುಡಿಯಬೇಕು.

*ನೆತ್ತಿಗೆ ಐದು ಹನಿ ತುಪ್ಪವನ್ನು ದಿನನಿತ್ಯ ಸವರಿಕೊಳ್ಳಬೇಕು.

*ಪುನರ್ಪುಳಿ(ಕೊಕಂ) ಸಾರು ಕುಡಿದಲ್ಲಿ ಕೈ ಕಾಲು ಉರಿ, ಅತಿಯಾದ ಬೆವರುವಿಕೆ, ಕಣ್ಣುರಿ ಶಮನವಾಗುತ್ತದೆ.

ಈ ರೀತಿಯ ಆಹಾರ–ವಿಹಾರಗಳನ್ನು ಪಾಲಿಸಿದರೆ ಪ್ರಕೃತಿ ಸಹಜವಾದ ಆರೋಗ್ಯ ನಮಗೆ ಸಿಗುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾಯಿಲೆಗೆ ಮದ್ದಲ್ಲದ ಔಷಧಗಳು!

ಉತ್ತಮ ಆರೋಗ್ಯ
ಕಾಯಿಲೆಗೆ ಮದ್ದಲ್ಲದ ಔಷಧಗಳು!

20 Jan, 2018
ಜನಸಂಖ್ಯೆ ಹೆಚ್ಚಳ: ಸಮಸ್ಯೆಯೂ ದ್ವಿಗುಣ

ವರದಿ
ಜನಸಂಖ್ಯೆ ಹೆಚ್ಚಳ: ಸಮಸ್ಯೆಯೂ ದ್ವಿಗುಣ

20 Jan, 2018
ವ್ಯಾಯಾಮಕ್ಕೂ ಇದೆ ನಿಯಮ!

ಆರೋಗ್ಯ
ವ್ಯಾಯಾಮಕ್ಕೂ ಇದೆ ನಿಯಮ!

20 Jan, 2018

ಆರೋಗ್ಯ
ಯಶಸ್ಸಿನ ಬೆನ್ನೇರಿ...

ಅನೇಕ ಮಹಾಸಾಧಕರ ಜೀವನಚರಿತ್ರೆಯನ್ನು ನೋಡಿ; ಅವರಲ್ಲಿ ಯಾರು ಕೂಡ ಸುಲಭವಾಗಿ ಯಶಸ್ಸಿನ ಉತ್ತುಂಗಕ್ಕೇರಿದ ನಿದರ್ಶನಗಳಿಲ್ಲ. ಆದರೆ ಅವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಕಷ್ಟಗಳನ್ನು ದೊಡ್ಡದಾಗಿ...

17 Jan, 2018
‘ಶ್ರದ್ಧೆಯೇ ಮದ್ದು’

ಆರೋಗ್ಯ
‘ಶ್ರದ್ಧೆಯೇ ಮದ್ದು’

17 Jan, 2018