ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಲು ಯೋಗ್ಯವಾದ ಶಾಪ!

Last Updated 31 ಜುಲೈ 2018, 16:32 IST
ಅಕ್ಷರ ಗಾತ್ರ

ಪಕ್ಷಿಯನ್ನು ಕೊಂದ ಕಾರಣ ವಾಲ್ಮೀಕಿಮಹರ್ಷಿಯಿಂದ ಬೇಡ ಶಾಪಕ್ಕೆ ತುತ್ತಾದ. ಬೇಡನನ್ನು ವಾಲ್ಮೀಕಿ ಶಪಿಸಿದರು ಹೌದು; ಆದರೆ ಆ ಶಾಪ ಅವರ ಚಿಂತನೆಗೂ ಕಾರಣವಾಯಿತು. ‘ಎಲಾ, ಈ ಪಕ್ಷಿಯನ್ನು ನೋಡಿ ಶೋಕಪರವಶನಾದ ನಾನು ಏನು ಹೇಳಿಬಿಟ್ಟೆ!’ ಈ ಯೋಚನೆ ವಾಲ್ಮೀಕಿಯ ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಶಾಪವನ್ನು ನೀಡಿದ್ದರ ಬಗ್ಗೆ ಅವನಿಗೆ ಯೋಚನೆ ಹುಟ್ಟಿದ್ದಲ್ಲ; ಆ ಶಾಪ ಪ್ರಕಟವಾದ ರೀತಿ ಅವನಿಗೇ ವಿಶೇಷ ಎನಿಸಿತು. ವಾಲ್ಮೀಕಿಯ ಶಾಪದ ಮಾತುಗಳನ್ನು ಇನ್ನೊಮ್ಮೆ ನೋಡೋಣ:

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ |

ಯತ್ ಕ್ರೌಂಚಮಿಥುನಾದೇಕಮೇಕಮವಧೀಃ ಕಾಮಮೋಹಿತಮ್‌ ||

‘ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ನೀನು ಕೊಂದಿರುವೆ; ನೀನು ಕೂಡ ಹೆಚ್ಚು ಕಾಲ ಬದುಕಬೇಡ.’ ಇದು ಈ ಶಾಪಶ್ಲೋಕದ ತಾತ್ಪರ್ಯ.

ಈ ಶ್ಲೋಕದಲ್ಲಿ ಇಡಿಯ ರಾಮಾಯಣದ ಕಥೆಯೇ ಅಡಗಿದೆ ಎಂದೂ ಹೇಳುವುದುಂಟು. ಅದು ಹೇಗೆಂದರೆ: ‘ಮಾನಿಷಾದ = ಲಕ್ಷ್ಮೀದೇವಿಗೆ ಆಶ್ರಯನಾದ ಮಹಾವಿಷ್ಣುವೆ, ತ್ವಂ = ನೀನು, ಶಾಶ್ವತೀ = ಅಸಂಖ್ಯಾತವಾದ, ಸಮಾಃ = ವರ್ಷಗಳವರೆಗೆ, ಪ್ರತಿಷ್ಠಾಂ = ಕೀರ್ತಿಯನ್ನು, ಆಗಮಃ = ಪಡೆದೆ, ಯತ್‌ = ಏಕೆಂದರೆ, ಕ್ರೌಂಚಮಿಥುನಾತ್‌ = ಕುಟಿಲರಾದ ರಾಕ್ಷಸದಂಪತಿಗಳಲ್ಲಿ (ಎಂದರೆ ರಾವಣ–ಮಂಡೋದರಿಯರಲ್ಲಿ), ಕಾಮಮೋಹಿತಂ = ಕಾಮವಶದಿಂದ ತಪ್ಪು ಮಾಡಿದ, ಏಕಂ = ಒಬ್ಬನಾದ ರಾವಣನನ್ನು, ಅವಧೀ = ಸಂಹಾರ ಮಾಡಿರುವೆ.’

(ಶ್ರೀಮದ್ವಾಲ್ಮೀಕಿ–ರಾಮಾಯಣ, ಅನುವಾದ: ವಿದ್ವಾನ್‌ ಎನ್‌. ರಂಗನಾಥಶರ್ಮಾ)

ರಾವಣನನ್ನು ಕೊಂದ ಶ್ರೀರಾಮನು ವಿಷ್ಣು; ಅವನು ಲಕ್ಷ್ಮಿಗೆ ಆಶ್ರಯನಾದವನು. ಲಕ್ಷ್ಮಿಯೇ ಸೀತೆ. ಸೀತೆಯನ್ನು ರಾಮನಿಂದ ದೂರ ಮಾಡಿದವನು ರಾವಣ. ಆ ರಾವಣನನ್ನು ಕೊಂದು ರಾಮ ಕೀರ್ತಿಯನ್ನು ಸಂಪಾದಿಸಿದ. ಇದು ಮೇಲಣ ಅನ್ವಯದ ಸಾರಾಂಶ.

ಹೀಗೆ ಒಂದೇ ಶ್ಲೋಕದಲ್ಲಿ ಇಡಿಯ ಕೃತಿಯ ಆಶಯವನ್ನೂ ಕಥೆಯನ್ನೂ ತೋರಿಸುವಂಥ ಪ್ರಯತ್ನಗಳು ನಡೆದಿರುವುದು ಸಂಸ್ಕೃತವಾಙ್ಮಯದ ಸಹಜ ವಿದ್ಯಮಾನ. ಆದರೆ ಇದು ಎಷ್ಟೋ ಸಲ ವ್ಯಾಕರಣ ಅಥವಾ ಶಬ್ದಗಳ ಚಮತ್ಕಾರವಾಗಿಯೇ ಕಾಣಿಸುತ್ತದೆ ಎನ್ನುವುದೂ ಸುಳ್ಳಲ್ಲ. ಇಂಥ ಚಮತ್ಕಾರಗಳನ್ನು ಮಾಡದಿದ್ದರೂ ಮೂಲಕೃತಿಯ ಸತ್ವಕ್ಕೇನೂ ತೊಂದರೆ ಎದುರಾಗದೆನ್ನಿ! ರಾಮಾಯಣದ ಶ್ಲೋಕಸಂಖ್ಯೆಗಳೂ ಕಾಂಡಗಳ ಆರಂಭದ ಪದಗಳೂ ಗಾಯತ್ರೀಮಂತ್ರದ ಸೂಚಕಗಳಾಗಿವೆ ಎಂದೂ ಒಕ್ಕಣಿಸುವುದುಂಟು. ಆದರೆ ವಾಲ್ಮೀಕಿರಾಮಾಯಣವನ್ನು ಕಾವ್ಯಮೀಮಾಂಸೆಯ ನೆಲೆಯಿಂದ ನೋಡುವುದರಲ್ಲಿಯೇ ಹೆಚ್ಚಿನ ರಸಾನುಭೂತಿ ಸಾಧ್ಯ ಎನ್ನುವುದನ್ನು ಎಲ್ಲರೂ ಒಪ್ಪತಕ್ಕ ಮಾತೇ ಹೌದು. ಕಾವ್ಯಾನುಭವಕ್ಕೆ ಅಗತ್ಯವಾದುದು ಶಬ್ದ ಮತ್ತು ಅರ್ಥಗಳ ಸಹಜ ದಾಂಪತ್ಯ.

ವಾಲ್ಮೀಕಿಯ ಮನಸ್ಸಿನಲ್ಲಿ ಶಾಪದ ಆಶಯವಾಗಿ ಆಲೋಚನೆ ತೋರಿಕೊಳ್ಳಲಿಲ್ಲ; ಶಾಪದ ಶರೀರದ ಬಗ್ಗೆ ಮೀಮಾಂಸೆ ಹುಟ್ಟಿಕೊಂಡಿತು. ‘ನನ್ನೀ ಶಾಪವು ಹಾಡಲು ಯೋಗ್ಯವಾಗಿದೆಯಲ್ಲ!’ ಇಂಥದೊಂದು ಬೆರಗು ಅವನಲ್ಲಿ ಮೂಡಿತು. ಶಿಷ್ಯನನ್ನು ಉದ್ದೇಶಿಸಿ ವಾಲ್ಮೀಕಿ ಹೇಳಿದ ಮಾತು:

ಪಾದಬದ್ಧೋSಕ್ಷರಸಮಸ್ತಂತ್ರೀಲಯಸಮನ್ವಿತಃ|

ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ||

‘ಶೋಕಾರ್ತವಾಗಿ ನಾನು ಹೇಳಿದ ಈ ವಾಕ್ಯವು ಪಾದಚತುಷ್ಟಯಗಳಿಂದ ಕೂಡಿ, ಅಕ್ಷರಗಳಿಂದ ಸಮವಾಗಿ ವೀಣೆಯಲ್ಲಿ ಲಯದಿಂದ ವಾದ್ಯಗಳೊಡನೆ ಹಾಡಲು ಯೋಗ್ಯವಾದ ಶ್ಲೋಕವಾಗಿ ಉಳಿಯಲಿ, ಅದು ಬೇರೆ ರೀತಿ ಆಗದಿರಲಿ.’

ಹೀಗೆಂದು ಶಿಷ್ಯನಾದ ಭರದ್ವಾಜನಲ್ಲಿ ನುಡಿದ. ಗುರುಗಳ ಶಾಪವನ್ನು ಶಿಷ್ಯ ಕೂಡಲೇ ಕಂಠಪಾಠ ಮಾಡಿದನಂತೆ. ಶಿಷ್ಯನ ಈ ಸಮಯಸ್ಫೂರ್ತಿಯನ್ನು ಕಂಡು ವಾಲ್ಮೀಕಿಗೆ ಸಂತೋಷವಾಯಿತು. ತಮಸೆಯಲ್ಲಿ ಆಮೇಲೆ ಸ್ನಾನವನ್ನು ಮುಗಿಸಿದರು.

ವಾಲ್ಮೀಕಿಮಹರ್ಷಿ ಶಾಪವನ್ನು ಹಾಡಾಗಿ ಉಳಿಯಲಿ ಎಂದು ಆಶಿಸುತ್ತಿದ್ದಾನೆ. ಇದು ಹೇಗೆ? ಮುಂದೆ ನೋಡೋಣ. ಪ್ರಾಯಶಃ, ಶೋಕವು ಶ್ಲೋಕವಾದಾಗ, ಶಾಪವು ಹಾಡಾಗುವುದು ಅನಿವಾರ್ಯ ಎನಿಸಿತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT