ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಸಚಿವರ ಕ್ಷೇತ್ರದಲ್ಲಿ ಬೆಳೆ ದೃಢೀಕರಣ ಇಲ್ಲ!

Last Updated 28 ಅಕ್ಟೋಬರ್ 2017, 9:39 IST
ಅಕ್ಷರ ಗಾತ್ರ

ಹೊಸನಗರ: ಕಂಪ್ಯೂಟರ್‌ ತಂತ್ರಾಂಶ ದೋಷದಿಂದಾಗಿ ಕಂದಾಯ ಸಚಿವರ ಕ್ಷೇತ್ರದಲ್ಲಿ ರೈತರ ಪಹಣಿಯಲ್ಲಿ ಬೆಳೆ ದೃಢೀಕರಣ ಅಚ್ಚಾಗುತ್ತಿಲ್ಲ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಮ ವಿಷಾದಿಸಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
‘ರೈತರ ಪಹಣಿಯಲ್ಲಿನ ಕಾಲಂ ನಲ್ಲಿ ಬೆಳೆ ಅಚ್ಚಾಗುವುದಿಲ್ಲ. ಕಾರಣ ಕೇಳಿದರೆ ಕಂಪ್ಯೂಟರ್ ತಂತ್ರಾಂಶ ದೋಷ’ ಎಂದು ಅಧಿಕಾರಿಗಳು ಹೊಣೆ ಜಾರಿಸುತ್ತಾರೆ ಎಂದು ಆರೋಪಿಸಿದರು.

ಸಚಿವರ ಭರವಸೆ: ಪಹಣಿಯಲ್ಲಿರುವ ಎಲ್ಲಾ ಕಾಲಂ ಗಳನ್ನು ಭರ್ತಿ ಮಾಡುವ ತಂತ್ರಾಂಶವನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನುಷ್ಟಾನ ಮಾಡದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಸಚಿವರು ಭರವಸೆ ನೀಡಿದರು.

ಕೆಲವು ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಚಿವರು ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಇವರಿಗೆ ತಾಕೀತು ಮಾಡಿದರು.

ಉತ್ತಮ ಬೆಳೆ ನಿರೀಕ್ಷೆ: ತಾಲ್ಲೂಕಿನ ಕಸಬಾದಲ್ಲಿ ಶೇ 35, ಹುಂಚಾ ಶೇ37, ಕೆರೆಹಳ್ಳಿ ಶೇ .51ರಷ್ಟು ಮಳೆ ವಾಡಿಕೆಗಿಂತ ಕಡಿಮೆ ಆಗಿದ್ದರೆ ನಗರ ಹೋಬಳಿಯಲ್ಲಿ ಶೇ 14ರಷ್ಟು ಅಧಿಕ ಆಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ತಿಳಿಸಿದರು.

ಈ ವರ್ಷ ಭತ್ತ, ಶುಂಠಿ, ಅಡಿಕೆ ಉತ್ತಮ ಬೆಳೆ ನಿರೀಕ್ಷೆಯಲ್ಲಿದೆ. ಭತ್ತಕ್ಕೆ ಬೆಂಕಿ ರೋಗ ಕಂಡುಬಂದಿದ್ದು, ರೋಗ ನಿವಾರಣೆಗೆ ಮಾಹಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈಗ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇರುವ ಮಣ್ಣು ಪರೀಕ್ಷಾ ಕೇಂದ್ರವನ್ನು ತಾಲ್ಲೂಕು ಹಂತಕ್ಕೆ ತರಬೇಕು. ಇಲ್ಲವಾದರೆ ರೈತರು ಮಣ್ಣು ಪರೀಕ್ಷೆ ಮಾಡಿಸುವುದು ಕಷ್ಟ ಸಾಧ್ಯ. ಕಳೆದ ವರ್ಷ ಮಣ್ಣಿನ ಮಾದರಿ ತೆಗೆದುಕೊಂಡು ಹೋದ ಕೃಷಿ ಇಲಾಖೆ ಸಿಬ್ಬಂದಿ ಇಲ್ಲಿಯ ತನಕ ಮಣ್ಣಿನ ಗುಣಮಟ್ಟ ಕುರಿತಂತೆ ಫಲಿತಾಂಶ ನೀಡಿಲ್ಲ ಎಂದು ಎಪಿಎಂಸಿ ಅಧ್ಯಕ್ಷ ಬಿ.ಪಿ.ರಾಮಚಂದ್ರ ದೂರಿದರು.

ವಿದ್ಯಾವಂತ ಕೃಷಿಕರ ವಲಸೆ ತಡೆಯಿರಿ: ಹಳ್ಳಿಯ ವಿದ್ಯಾವಂತ ಯುವಕರು ಕೃಷಿಗೆ ಬೆನ್ನು ಮಾಡಿ ಹೋಗುತ್ತಿದ್ದಾರೆ. ಇವರನ್ನು ಮರಳಿ ಆಕರ್ಷಿಸಲು ಇಲಾಖೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ನಡೆಸುವಂತೆ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಡೆಂಗಿ ಹಾಗೂ ಎಚ್1ಎನ್1 ಜ್ವರ ರೋಗಿಗಳ ಪ್ರಮಾಣ ಇಳಿಮುಖವಾಗಿದೆ. ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮುಂಜಾಗ್ರತೆ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂತರಾಜ್ ತಿಳಿಸಿದರು. ಜಿ.ಪಂ. ಸದಸ್ಯರಾದ ಶ್ವೇತಾ ಬಂಡಿ, ಕಲಗೋಡು ರತ್ನಾಕರ, ಸುರೇಶ ಸ್ವಾಮಿರಾವ್, ತಾ.ಪಂ. ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT