ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದಷ್ಟೇ ಬಾಗಿಲು: ನಡೆದಷ್ಟೂ ದಾರಿಗಳು!

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಉತ್ಸವದಲ್ಲಿಯೂ ಇಂದು (ಅ. 29) ಪ್ರದರ್ಶಿತವಾಗುತ್ತಿದೆ. ತೆರೆದಷ್ಟೇ ಬಾಗಿಲಿನಿಂದ ಒಳಗಿಣುಕಿದಾಗ ಸಿಕ್ಕ ಹಲವು ಕುತೂಹಲಕಾರಿ ಸಂಗತಿಗಳ ಅಕ್ಷರರೂಪ ಇಲ್ಲಿದೆ.

ಸಾಹಿತ್ಯದ ಜತೆಗೆ ಬೇರೆ ಬೇರೆ ಕಲಾಪ್ರಕಾರಗಳನ್ನು ಕಸಿ ಮಾಡುವುದು, ಆ ಅನುಸಂಧಾನದಲ್ಲಿ ಹೊಸ ಹೊಳಹುಗಳನ್ನು ಕಂಡುಕೊಳ್ಳುವುದು ಹೊಸ ವಿಷಯವೇನಲ್ಲ. ಕನ್ನಡದಲ್ಲಿಯೂ ಇಂಥ ಹಲವು ಪ್ರಯೋಗಗಳು ನಡೆದಿವೆ. ಇಂಥ ಪ್ರಯತ್ನಗಳು ಬೇರೆ ಬೇರೆ ಕಲಾಪ್ರಕಾರಗಳ ನಡುವೆ ಮೇಲ್ನೋಟಕ್ಕೆ ಕಾಣುವ ಗೋಡೆಗಳನ್ನು ಕಿತ್ತು ಹಾಕಿ ಎಲ್ಲ ಕಲೆಗಳೂ ಆಳದಲ್ಲಿ ಒಂದೇ ಮರದ ಬೇರೆ ಬೇರೆ ಕವಲುಗಳಾಗಿರುತ್ತವೆ ಎಂಬ ಸತ್ಯವನ್ನು ಕಾಣಿಸುತ್ತದೆ.

ಒಬ್ಬ ಬರಹಗಾರನನ್ನು, ಶ್ರೇಷ್ಠ ಬರಹಗಳನ್ನು ಹೆಚ್ಚು ಜನರಿಗೆ ತಲುಪಿಸುವ ಜನಪ್ರಿಯ ಮಾದರಿಯಾಗಿ ಮತ್ತು ತನ್ನಿಷ್ಟದ ಬರಹಗಾರನಿಗೆ ಹೊಸ ರೀತಿಯಲ್ಲಿ ಪ್ರತಿಸ್ಪಂದಿಸುವ ಮಾದರಿಯಾಗಿ ಎರಡೂ ನೆಲೆಗಳಲ್ಲಿಯೂ ಇಂಥ ಪ್ರಯತ್ನಗಳು ಆಗೀಗ ನಡೆದಿವೆ.

ಆದರೆ, ನಮ್ಮ ಕಾಲದ ಮುಖ್ಯ ಸಾಹಿತಿಯ ಒಟ್ಟಾರೆ ಸಾಹಿತ್ಯದಲ್ಲಿ ಪದೇ ಪದೇ ಬಳಕೆಯಾಗುವ ಒಂದು ಪ್ರತಿಮೆಯನ್ನು ಇಟ್ಟುಕೊಂಡು ಬಹುಮಾಧ್ಯಮದ ಮೂಲಕ ಅದನ್ನು ಅನುಸಂಧಾನಗೊಳಿಸುವ ಪ್ರಯತ್ನ ಕನ್ನಡದ ಮಟ್ಟಿಗೆ ಹೊಸತು. ಇಂಥದ್ದೊಂದು ಪ್ರಯತ್ನ ಮಾಡುತ್ತಿರುವವರೂ ಕವಿಯೇ ಎನ್ನುವುದು ವಿಶೇಷ.

ತಮ್ಮ ಕಾವ್ಯದ ಮೂಲಕ ಕನ್ನಡದಾಚೆಗೂ ಗುರ್ತಿಸಿಕೊಂಡಿರುವ ಪ್ರತಿಭಾ ನಂದಕುಮಾರ್‌ ಅವರು ಇಂಥದ್ದೊಂದು ಪ್ರಯತ್ನ ಮಾಡುತ್ತಿದ್ದಾರೆ. ‘ಜಯಂತ ಕಾಯ್ಕಿಣಿ ಅವರ ಕೃತಿಗಳಲ್ಲಿ ಬಾಗಿಲಿನ ಪ್ರತಿಮೆ’ ಎಂಬ ವಿಷಯವನ್ನಿಟ್ಟುಕೊಂಡು ‘ತೆರೆದಷ್ಟೇ ಬಾಗಿಲು’ ಎಂಬ ಕಲಾ ಇನ್‌ಸ್ಟಾಲೇಷನ್‌ ರೂಪಿಸಿದ್ದಾರೆ. ಹತ್ತು ನಿಮಿಷಗಳ ಅವಧಿಯ ಈ ಬಹುಮಾಧ್ಯಮ ಇನ್‌ಸ್ಟಾಲೇಷನ್‌ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಪ್ರದರ್ಶಿತವಾಗುತ್ತಿದೆ. ‘ಇದು ಕವಿಗೆ ಕವಿ ಸ್ಪಂದಿಸುವ ಹೊಸ ಪರಿ’ ಎಂದೇ ಹೇಳಿಕೊಳ್ಳುತ್ತಾರೆ ಪ್ರತಿಭಾ ನಂದಕುಮಾರ್‌.

‘ತೆರೆದಷ್ಟೇ ಬಾಗಿಲು’ ಎನ್ನುವುದು ಜಯಂತ ಕಾಯ್ಕಿಣಿ ಅವರ ಒಂದು ಕಥಾಸಂಕಲನದ ಹೆಸರೂ ಹೌದು. ಅವರು ಬಾಗಿಲಿನ ಪ್ರತಿಮೆಯನ್ನು ಬೇರೆ ಬೇರೆ ಥರ ಬಳಸುತ್ತಾರೆ. ಅವರ ಕಾವ್ಯ, ಕಥೆ, ನುಡಿಚಿತ್ರಗಳಲ್ಲಿ ಬಾಗಿಲಿನ ಪ್ರತಿಮೆ ಬಹುತೇಕ ಒಂದು ಪಾತ್ರದ ರೀತಿಯಲ್ಲಿಯೇ ಬರುತ್ತದೆ. ನಾನು ಈ ಹಿಂದೆ ಅವರ ಪದ್ಯದ ‘ಗರ್ಭಗುಡಿಯ ಕತ್ತಲಲ್ಲಿ ಕೀರ್ತನಕಾರನಿಗೆ ಮಾರುಹೋದ ಬಾಲವಿಧವೆ’ ಎಂಬ ಒಂದು ಸಾಲು ಇಟ್ಟುಕೊಂಡು ನೆರಳು–ಬೆಳಕಿನ ಪರಿಕಲ್ಪನೆಯಲ್ಲಿ ಒಂದು ಕೊಲಾಜ್‌ ಪ್ರಯೋಗ ಮಾಡಿದ್ದೆ.

ಈ ವರ್ಷದ ಬೆಂಗಳೂರು ಸಾಹಿತ್ಯ ಉತ್ಸವದವರು ಹೊಸತಾಗಿ ಏನಾದರೂ ಮಾಡಿ ಎಂದು ಕೇಳಿಕೊಂಡರು. ತುಂಬ ಕಾಲದಿಂದ ನನ್ನ ಮನಸ್ಸಿನಲ್ಲಿ ‘ತೆರೆದಷ್ಟೇ ಬಾಗಿಲು’ ಕಲಾ ಇನ್‌ಸ್ಟಾಲೇಷನ್‌ ಮಾಡಬೇಕು ಎಂಬ ಆಸೆ ಇತ್ತು. ಆದ್ದರಿಂದ ಸಾಹಿತ್ಯ ಉತ್ಸವಕ್ಕೆ ಅದನ್ನೇ ಮಾಡಬೇಕು ಎಂದು ನಿರ್ಧರಿಸಿದೆ’ ಎಂದು ತಮ್ಮ ಕಲ್ಪನೆ ಸಾಕಾರಗೊಂಡ ಬಗೆಯನ್ನು ಪ್ರತಿಭಾ ವಿವರಿಸುತ್ತಾರೆ.

ಇದು ‘ಬಹುಮಾಧ್ಯಮ ಪ್ರಸ್ತುತಿ’ (ಮಲ್ಟಿಮೀಡಿಯಾ ಪ್ರಸೆಂಟೇಷನ್‌). ಒಂದು ಬಾಗಿಲು ಇರುತ್ತದೆ. ಅದನ್ನು ದಾಟಿಕೊಂಡು ಒಳಗಡೆ ಬಂದರೆ ಜಯಂತ ಕಾಯ್ಕಿಣಿ ಅವರು ತಮ್ಮ ಸಾಹಿತ್ಯ ಕೃತಿಗಳಲ್ಲಿ ‘ಬಾಗಿಲಿನ ಪ್ರತಿಮೆ’ಯನ್ನು ಬಳಸಿಕೊಂಡಿರುವ ಸಾಲುಗಳನ್ನು ಓದುವ ವಿಡಿಯೊ ಪ್ರಸಾರವಾಗುತ್ತ ಇರುತ್ತದೆ.

ಅದರ ಜತೆಗೆ ಇನ್ನು ಕೆಲವು ವಿಶೇಷ ದೃಶ್ಯಚಿತ್ರಿಕೆಗಳೂ ಇರುತ್ತವೆ. ಹತ್ತು ನಿಮಿಷಗಳ ಅವಧಿಯ ವಿಡಿಯೊ ನಿರಂತರವಾಗಿ ಪ್ಲೇ ಆಗುತ್ತಿರುತ್ತವೆ. ಇವೆಲ್ಲವೂ ಸೇರಿ ಒಂದು ಸಮಗ್ರ ಅನುಭವವನ್ನು ಕಟ್ಟಿಕೊಡುವುದು ಈ ಕಲಾ ಇನ್‌ಸ್ಟಾಲೇಷನ್‌ನ ಉದ್ದೇಶ.

ತಾವೊಬ್ಬ ಕವಿಯಾಗಿ ಇನ್ನೊಬ್ಬ ಕವಿಯ ಸಾಹಿತ್ಯಕ್ಕೆ ಈ ರೀತಿ ಸ್ಪಂದಿಸುವುದು ಪ್ರತಿಭಾ ಅವರಿಗೆ ವಿಶೇಷ ಖುಷಿ ಕೊಟ್ಟಿದೆ. ‘ಯಾರದೇ ಆಗಿರಲಿ, ಜಗತ್ತಿನ ಒಳ್ಳೆಯ ಕಾವ್ಯಕ್ಕೆ ನಾನು ಯಾವಾಗಲೂ ಸ್ಪಂದಿಸುತ್ತಿರುತ್ತೇನೆ. ಒಳ್ಳೆಯ ಕಾವ್ಯ ನನ್ನನ್ನು ಕಾಡಿದ ಹಾಗೆ ಬೇರೆ ಯಾವ ಸಂಗತಿಯೂ ಕಾಡುವುದಿಲ್ಲ. ಜಯಂತ ಕಾಯ್ಕಿಣಿ ನಮ್ಮ ನಡುವಿನ ಶ್ರೇಷ್ಠ ಕವಿ.

ಅವರು ಸಿನಿಮಾ ಗೀತರಚನೆಯಲ್ಲಿ ಯಶಸ್ವಿಯಾಗಲು ಕಾರಣವೇ ಅವರ ಪದಗಾರುಡಿಗತನ. ಅವರ ಕಾವ್ಯಕ್ಕೂ ನಾನು ಮೊದಲಿನಿಂದಲೂ ಸ್ಪಂದಿಸುತ್ತ ಬಂದಿದ್ದೇನೆ. ಚಿಕ್ಕ ಚಿಕ್ಕ ಪೇಂಟಿಂಗ್ಸ್‌, ಕೊಲಾಜ್‌ಗಳನ್ನು ಮಾಡುತ್ತಿದ್ದೆ. ಅದು ತುಂಬ ಖಾಸಗಿಯಾಗಿ ಮಾಡುತ್ತಿದ್ದೆ. ಅದನ್ನು ಸಾರ್ವಜನಿಕವಾಗಿ ‍ಪ್ರದರ್ಶನ ಮಾಡಿರಲಿಲ್ಲ. ಈಗ ಇಂಥದ್ದೊಂದು ಇನ್‌ಸ್ಟಾಲೇಷನ್‌ ಮೂಲಕ ಸ್ಪಂದಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಇದರಲ್ಲಿ ಜಯಂತ ಬರೀ ಕಾವ್ಯಗಳನ್ನಷ್ಟೇ ಅಲ್ಲದೇ, ಗದ್ಯದ ಸಾಲುಗಳನ್ನೂ ಓದಿದ್ದಾರೆ. ಅದರಲ್ಲಿಯೂ ಕಾವ್ಯಗುಣವೇ ಎದ್ದು ಕಾಣುತ್ತದೆ ಎನ್ನುವುದು ಪ್ರತಿಭಾ ಅವರ ಅವಲೋಕನ.

‘ಈಗ ಸ್ಪೋಕನ್‌ ವರ್ಡ್‌ ಪೋಯೆಟ್ರಿ ಮತ್ತು ಪರ್ಫಾರ್ಮಿಂಗ್‌ ಪೋಯೆಟ್ರಿ ಅನ್ನುವುದು ಜಾಗತಿಕ ನೆಲೆಯಲ್ಲಿ ತುಂಬ ಚಾಲ್ತಿಯಲ್ಲಿರುವ ಕಲಾಪ್ರಕಾರ. ನಮ್ಮಲ್ಲಿ ಇನ್ನೂ ವೇದಿಕೆಯ ಮೇಲೆ ನಿಂತು ಕವಿ ಹೇಳುವುದು ಉಳಿದವರು ಕೇಳುವುದು ಎಂಬ ಕವನ ವಾಚನದ ರೂಪ ಹಾಗೆಯೇ ಇದೆ. ಇದರಲ್ಲಿ ಒಂದು ಹೆಚ್ಚು ಇನ್ನೊಂದು ಕಮ್ಮಿ ಅಂತಲ್ಲ, ಇದು ನಮ್ಮ ಮಾದರಿ. ನಮ್ಮ ಸಾಹಿತ್ಯ ಸಮ್ಮೇಳನಗಳೂ ಒಂದು  ನಿರ್ದಿಷ್ಟ ರೂಪದಲ್ಲಿದೆ. ಆದರೆ ಇಂಗ್ಲಿಷಿನಲ್ಲಿ ಬೆಂಗಳೂರು ಸಾಹಿತ್ಯ ಉತ್ಸವ ಆಗಲಿ, ಜೈಪುರ ಸಾಹಿತ್ಯ ಉತ್ಸವ ಆಗಲಿ ಅಥವಾ ಬೆಂಗಳೂರಿನಲ್ಲಿ ನಡೆಯುವ ಕಾವ್ಯ ಉತ್ಸಗಳಾಗಲಿ ಅವರ ಕಾರ್ಯಕ್ರಮದ ರೂಪರೇಷೆ ಬೇರೆ ಥರ ಇರುತ್ತದೆ.

ಅದು ಜನಪ್ರಿಯ ಮಾದರಿ. ಜನರಿಗೆ ಹೆಚ್ಚು ಇಷ್ಟವಾಗುವ ಮಾದರಿ ಅದು. ಬೆಂಗಳೂರು ಸಾಹಿತ್ಯ ಉತ್ಸವದ ಅದ್ದೂರಿತನವನ್ನು ಕನ್ನಡ ಸಾಹಿತ್ಯ ವಲಯದವರು ಅಸಡ್ಡೆಯಿಂದ ನೋಡುತ್ತಾರೆ. ಆದರೆ ಅದರ ಒಳ್ಳೆಯ ಗುಣಗಳನ್ನು ತೆಗೆದುಕೊಂಡು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನ್ವಯಿಸಿಕೊಂಡರೆ ಉಪಯುಕ್ತವಾಗುತ್ತದೆ. ಜನರಿಗೆ ಸಾಹಿತ್ಯದಲ್ಲಿ ಆಸಕ್ತಿ ಬರುತ್ತದೆ. ಇಂದಿನ ಹೊಸ ಪೀಳಿಗೆಗೆ ಸಾಹಿತ್ಯವನ್ನು ಬೇರೆ ರೀತಿ ಪ್ರಸ್ತುತಪಡಿಸಬೇಕಾಗುತ್ತದೆ.

ಅವರನ್ನು ನಾವು ಹಿಡಿದಿಟ್ಟುಕೊಳ್ಳುವುದು ಒಂದು ಗಂಟೆ ಪ್ರಸ್ತುತಿ, ಪ್ರಬಂಧದ ಓದು ಇವೆಲ್ಲದರಿಂದ ಆಗಲ್ಲ. ನಾವೂ ಹೊಸ ಥರದಲ್ಲಿ ಸಾಹಿತ್ಯವನ್ನು ಜನರೊಂದಿಗೆ ಅನುಸಂಧಾನ ಮಾಡುವ ರೀತಿಗಳನ್ನು ಕಂಡುಕೊಳ್ಳಬೇಕು‍’ ಎಂದು ಕನ್ನಡ ಸಾಹಿತ್ಯ ಜಗತ್ತು ಜನರಿಗೆ ತಲುಪಲು ಹೊಸ ದಾರಿಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯ ಕುರಿತೂ ಅವರು ಮಾತನಾಡುತ್ತಾರೆ.

ಅದರ ಜತೆಗೇ ಈ ಇನ್‌ಸ್ಟಾಲೇಷನ್‌ ಅನ್ನು ‘ತನ್ನ ಅಭಿವ್ಯಕ್ತಿಯ ವಿಸ್ತರಣೆಯೇ ಹೊರತು. ಜನರಿಗೆ ತಲುಪಿಸಬೇಕು ಎನ್ನುವುದು ಮುಖ್ಯ ಉದ್ದೇಶ ಅಲ್ಲ’ ಎಂದು ಹೇಳಲೂ ಅವರು ಮರೆಯುವುದಿಲ್ಲ.

‘ಜಯಂತ ಕಾಯ್ಕಿಣಿಯನ್ನು ನಾನು ಹೊಸತಾಗಿ ಜನರಿಗೆ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಆದರೆ, ನಾನು ಒಬ್ಬ ಕವಿಯಾಗಿ ಇನ್ನೊಬ್ಬ ಕವಿಗೆ ಬೇರೆ ಬೇರೆ ಆಯಾಮಗಳಲ್ಲಿ, ಬೇರೆ ಬೇರೆ ರೀತಿಗಳಲ್ಲಿ ಸ್ಪಂದಿಸುತ್ತಿರುತ್ತೇನೆ. ಈ ಇನ್‌ಸ್ಟಾಲೇಷನ್‌ ಕೂಡ ಒಬ್ಬ ಕವಿಯಾಗಿ ನಾನು ಜಯಂತರ ಸಾಹಿತ್ಯದಲ್ಲಿನ ಪ್ರತಿಮೆಗೆ ಹೇಗೆ ಹೊಸ ರೀತಿಯಲ್ಲಿ ಸ್ಪಂದಿಸಿದ್ದೇನೆ ಅನ್ನುವುದೇ ಆಗಿದೆ. ನನ್ನ ಈ ಸ್ಪಂದನ ಬೇರೆಯವರು ಬೇರೆ ಬೇರೆ ರೀತಿಗಳಲ್ಲಿ ಜಯಂತರ ಸಾಹಿತ್ಯಕ್ಕೆ ಸ್ಪಂದಿಸಲು ಅವಕಾಶ ಮಾಡಿಕೊಡುತ್ತದೆ’ ಎನ್ನುವುದು ಅವರ ವಿವರಣೆ.

ಇದೇನೂ ಒಮ್ಮಿಂದೊಮ್ಮೆಲೇ ರೂಪುಗೊಂಡ ಇನ್‌ಸ್ಟಾಲೇಷನ್‌ ಅಲ್ಲ. ಪ್ರತಿಭಾ ಹಲವು ವರ್ಷಗಳಿಂದ ನಿರಂತರವಾಗಿ ಜಯಂತರ ಕಾವ್ಯವನ್ನು ಓದಿಕೊಂಡು, ಚರ್ಚಿಸಿ, ವಿಶ್ಲೇಷಿಸಿದ್ದರ ಫಲವಾಗಿ ಮೂಡಿದೆ.

‘ನಮ್ಮಲ್ಲಿ ಕವಿಗಳನ್ನು ಹೊಸ ಹೊಸ ರೀತಿ ಓದುವುದು, ಅನುಸಂಧಾನ ಮಾಡಿಕೊಳ್ಳುವುದು ಜಾರಿಗೇ ಬರುತ್ತಿಲ್ಲ. ಎಲ್ಲರೂ ಒಂದು ರೀತಿಯಲ್ಲಿ ದ್ವೀಪಗಳಾಗಿಬಿಟ್ಟಿದ್ದಾರೆ. ನಾವು ಒಬ್ಬ ಕವಿಯನ್ನು ಇಂಥ ಪ್ರಯೋಗಾತ್ಮಕ ದಾರಿಗಳ ಮೂಲಕವೇ ಅರ್ಥಮಾಡಿಕೊಳ್ಳಬೇಕು. ನಮ್ಮೊಳಗೆ ಕರೆದುಕೊಳ್ಳಬೇಕು ಎಂದು ನಾನು ನಿರೀಕ್ಷಿಸುತ್ತೀನಿ’ ಎಂದು ತಮ್ಮ ಈ ಪ್ರಯತ್ನದ ಹಿಂದಿನ ಉದ್ದೇಶವನ್ನು ಅವರು ವಿವರಿಸುತ್ತಾರೆ.

ಸದ್ಯಕ್ಕೆ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪ್ರದರ್ಶಿತವಾಗುತ್ತಿರುವ ‘ತೆರೆದಷ್ಟೇ ಬಾಗಿಲು’ ಇನ್‌ಸ್ಟಾಲೇಷನ್‌ ಅನ್ನು ಮುಂದೆ ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರದರ್ಶನ ಮಾಡುವ ಯೋಚನೆಯೂ ಪ್ರತಿಭಾ ಅವರಿಗೆ ಇದೆ.

ಹೊಸ ಹೊಸ ರೀತಿಯಲ್ಲಿ ವಿವಿಧ ಕಲಾಪ್ರಕಾರಗಳನ್ನು ಕಸಿ ಮಾಡುವುದು, ತನ್ಮೂಲಕ ಹೊಸದೊಂದು ಕಾಣ್ಕೆಯನ್ನು ಪಡೆದುಕೊಳ್ಳುವುದು ಯಾವುದೇ ಭಾಷೆ– ಸಂಸ್ಕೃತಿಯ ಬೆಳವಣಿಗೆ ದೃಷ್ಟಿಯಿಂದಲೂ ಮಹತ್ವದ್ದು. ಇಂಥ ಇನ್ನೂ ಹಲವು ಪ್ರಯೋಗಗಳಿಗೆ, ಸ್ಪಂದನದ ಹೊಸ ಮಾದರಿಗಳಿಗೆ ಬಾಗಿಲು ತೆರೆಯುವಂತಾಗುವುದರಲ್ಲಿಯೇ  ‘ತೆರೆದಷ್ಟೇ ಬಾಗಿಲು’ವಿನ ಸಾರ್ಥಕ್ಯವಿದೆ.

*

ಬಿಡಿಗಳ ಮೂಲಕ ಇಡಿಯ ಕಡೆಗೆ ಚಲನೆ...
ಪ್ರತಿಭಾ ನನ್ನೆಲ್ಲ ಪದ್ಯಗಳು, ಕಥೆಗಳು, ಪ್ರಬಂಧಗಳಲ್ಲಿ ಎಲ್ಲೆಲ್ಲಿ ಬಾಗಿಲುಗಳ ಪ್ರತಿಮೆ ಬರುತ್ತದೆ ಎಂಬುದನ್ನು ಗುರ್ತಿಸಿ, ಶ್ರಮವಹಿಸಿ ‘ತೆರೆದಷ್ಟೇ ಬಾಗಿಲು’ ಎಂಬ ಕಲಾ ಇನ್‌ಸ್ಟಾಲೇಷನ್‌ ಮಾಡಿದ್ದಾರೆ. ಅದರ ಒಂದು ಭಾಗವಾಗಿ, ಬಾಗಿಲಿನ ಪ್ರತಿಮೆ ಬರುವ ಕೆಲವು ಸಾಲುಗಳನ್ನೂ ನಾನೂ ಓದಿದೆ. ಹಾಗೆ ಓದಬೇಕಾದರೆ ನನಗೂ ಈ ಪ್ರಯೋಗ ಮಜವಾಗಿದೆ ಅನಿಸಿತು.

ನನ್ನ ಸಾಹಿತ್ಯದಲ್ಲಿ ಬರುವ ಬಾಗಿಲ ಪ್ರತಿಮೆಗಳನ್ನು ಒಟ್ಟಿಗೆ ಓದುವ ಅನುಭವವೇ ವಿಶಿಷ್ಟವಾದದ್ದು. ಆ ಸಮಯದಲ್ಲಿ  ಹಲವು ಗದ್ಯಬರವಣಿಗೆಗಳೂ ಕವಿತೆ ಅಂತಲೇ ಅನಿಸಿತು. ನಾನು ಏನೇ ಬರೆದರೂ ಅದು ಒಂದೇ ರೀತಿ ಆಗಿರುತ್ತದೆ ಅಂತ ಅರಿವಾಯಿತು. ಕಥೆಗಾರ, ಕವಿ, ಪ್ರಬಂಧಕಾರ ಅಂತೆಲ್ಲ ಗುರ್ತಿಸುವುದು ಸುಮ್ಮನೆ. ಆ ಎಲ್ಲವೂ ಒಂದೇ ಆಗಿರುತ್ತದೆ.

ಸಾಮಾನ್ಯವಾಗಿ ಒಮ್ಮೆ ಬರೆದಾದ ಮೇಲೆ ಆ ಬರಹವನ್ನು ಮತ್ತೆ ಓದುವುದಿಲ್ಲ. ಬಿಟ್ಟುಬಿಡುತ್ತೇವೆ. ಆದರೆ, ನನ್ನ ಬರಹಗಳನ್ನು ನಾನೂ ತಿರುಗಿ ಓದುಗನಾಗಿ ಓದುವ ಪ್ರಕ್ರಿಯೆ ತುಂಬ ಚೆನ್ನಾಗಿರುತ್ತದೆ. ಆಗ ಹೊಸ ಹೊಸ ಆಯಾಮಗಳು ಕಾಣುತ್ತವೆ. ಒಂದು ದೊಡ್ಡ ಚಿತ್ರಕಲಾಕೃತಿಯ ಮೇಲೆ ಬೇರೆ ಬೇರೆ ಕಡೆಗಳಲ್ಲಿ ಬೆಳಕು ಬಿಟ್ಟು ನೋಡಿದಾಗ ಬೇರೆ ಬೇರೆ ಥರ ಕಾಣಿಸುತ್ತದಲ್ಲ, ಹಾಗೆಯೇ ಇದು. ಆ ಹಲವು ಆಯಾಮಗಳು ಸೇರಿ ಆ ಕಲಾಕೃತಿಗೊಂದು ವಿನ್ಯಾಸ ದಕ್ಕುತ್ತದೆ. ಪ್ರತಿಭಾ ಅವರ ದೃಷ್ಟಿಕೋನದಲ್ಲಿ ನೋಡಿದಾಗ ನಾನು ಬರೆದ ಅದೇ ಸಾಲುಗಳು ಬೇರೆ ಥರ ಕಾಣುತ್ತಿವೆಯಲ್ಲ ಅನಿಸಿತು. ನನಗೂ ಅದರ ಬಗ್ಗೆ ಕುತೂಹಲ ಖುಷಿ ಎರಡೂ ಆಯಿತು.

ಬಾಗಿಲು ಅದೇ... ಆದರೆ ಮುಂಬಾಗಿಲಾದರೆ ಬೇರೆ, ಹಿಂಬಾಗಿಲಾದರೆ ಬೇರೆ, ಆಸ್ಪತ್ರೆ ಆಪರೇಷನ್‌ ಥಿಯೇಟರ್‌ ಬಾಗಿಲಾದರೆ ಬೇರೆ, ಲಿಫ್ಟಿನ ಬಾಗಿಲು ಬೇರೆ, ದೇವಸ್ಥಾನದ ಬಾಗಿಲು ಬೇರೆ... ಹೀಗೆ ಒಂದೇ ಪ್ರತಿಮೆ ಬೇರೆ ಬೇರೆ ನೆಲೆಗಳಲ್ಲಿ ಇನ್ನೇನನ್ನೋ ತೆರೆದಿಡುತ್ತಿರುತ್ತದೆ.

ಬಾಗಿಲಿನ ಒಂದು ಮಜ ಏನೆಂದರೆ ನಾವು ಬಾಗಿಲಿನಲ್ಲಿ ನಿಂತಿರಲು ಸಾಧ್ಯವಿಲ್ಲ. ಒಂದೋ ಆಚೆ ಹೋಗಬೇಕು ಇಲ್ಲ ಒಳಗೆ ಬರಬೇಕು. ಅದರಾಚೆಗೆ ಏನೋ ಇರುತ್ತದೆ, ಅದಕ್ಕಾಗಿಯೇ ಅದು ಬಾಗಿಲು. ಮನೆಯಲ್ಲಿನ ಅವೆವೇ ವಸ್ತುಗಳು ಬಾಗಿಲು ತೆರೆದಿಟ್ಟಾಗ ಬೇರೆಯದೇ ರೀತಿ ಕಾಣಿಸುತ್ತಿರುತ್ತದೆ. ನಾವು ಬೇರೆ ಯಾರದೋ ಮನೆಗೆ ಹೋದಾಗ ಅಲ್ಲಿ ಜನರಿದ್ದರೆ ಮನೆ ಬೇರೆ ಥರ ಕಾಣಿಸುತ್ತಿರುತ್ತದೆ. ಅದೇ ನೀವೇ ಬಾಗಿಲು ತೆರೆದು ಒಳಹೊಕ್ಕರೆ ಆಗ ಅದು ಬೇರೆ ರೀತಿ ಕಾಣಿಸುತ್ತಿರುತ್ತದೆ.

ಒಳಗಿನ ವಸ್ತುಗಳೆಲ್ಲ ನಿಮಗಾಗಿಯೇ ಕಾಯುತ್ತಿದ್ದವು, ನೀವು ಬಂದ ಮೇಲೆಯೇ ಅವುಗಳಿಗೆ ಜೀವ ಬಂದಿದ್ದು ಅನಿಸುತ್ತದೆ. ಫೋಟೊ, ಕ್ಯಾಲೆಂಡರು, ದೇವರು, ಹೂಗುಚ್ಛ, ಅರ್ಧಬರೆದಿಟ್ಟ ಕಾಗದ, ಅಡುಗೆಕಟ್ಟೆಯಲ್ಲಿ ಮುಚ್ಚಳ ತೆಗೆದೇ ಇಟ್ಟ ಉಪ್ಪಿನ ಭರಣಿ ನೀವು ಮುಚ್ಚಲೆಂದೇ ಕಾಯುತ್ತಿರುತ್ತದೆ. ಈ ಎಲ್ಲ ಅನುಭವವನ್ನೂ ನಮಗೆ ಕೊಡುವುದು ನಾವು ತೆರೆದ ಬಾಗಿಲು!

ಎಲ್ಲ ವಿವರಗಳೂ ಮಾನವೀಯವಾಗುವ ಪ್ರಕ್ರಿಯೆ ಅದು. ಕೊನೆಗೂ ಈ ಎಲ್ಲದರ ಮೂಲಕ ನಡೆಯುವುದು ಮಾನವೀಕರಣ.

ಈ ರೀತಿಯ ಭಿನ್ನ ಪ್ರಯತ್ನಗಳು ಸಾಹಿತ್ಯದ ಬಗ್ಗೆ, ಕಲೆಯ ಬಗ್ಗೆ ಜನರಲ್ಲಿ ರುಚಿ ಹತ್ತಿಸುವ ಕೆಲಸವನ್ನು ಮಾಡುತ್ತದೆ. ಯಾವುದೇ ಕಲೆ ತನ್ನಷ್ಟಕ್ಕೆ ತಾನು ಸ್ವಯಂ ಸಂಪೂರ್ಣವಾಗಿರುವುದಿಲ್ಲ. ಉಳಿದ ಮನಸ್ಸುಗಳ ವಿನ್ಯಾಸಗಳೊಂದಿಗೆ, ಬದುಕಿನ ಎಷ್ಟೆಲ್ಲ ಲಯಗಳು, ಚಲನೆಗಳೊಟ್ಟಿಗೆ ಸಂಪರ್ಕ ಸಾಧಿಸಿದಾಗಲೇ ಬೇರೆಯ ಅನುಭವ ಅದರಿಂದ ಹುಟ್ಟುತ್ತದೆ.

ಎಲ್ಲ ಕಲೆಗಳ ಮೂಲ ಉದ್ದೇಶವೂ ಒಂದೆ; ‘ಗೊತ್ತಿರುವ ಬಿಡಿಗಳ ಮೂಲಕ ಗೊತ್ತಿಲ್ಲದ ಇಡಿಯ ಕಡೆಗೆ ಚಲಿಸುವುದು’. ಒಂದು ಸಿನಿಮಾ ಹಾಡಿನಲ್ಲಿ ಎಷ್ಟೆಲ್ಲ ವಾದ್ಯಗಳ ಸಮೂಹವೇ ಇರುತ್ತದೆ. ಕೊಳಲು, ವೀಣೆ, ಗಿಟಾರ್‌, ಡ್ರಮ್ಸ್‌... ಹೀಗೆ ಎಷ್ಟೆಲ್ಲ ಸೇರಿ ಇನ್ಯಾವುದರದೋ ಕಡೆಗೆ ಮುಖ ಮಾಡುತ್ತದೆ. ಅದು ಆ ಕ್ಷಣದಲ್ಲಿಯೇ ಹುಟ್ಟಿಕೊಳ್ಳುವುದು. ಹೀಗಾಗಿಯೇ ಬಹುಮಾಧ್ಯಮ, ಅಂತರಮಾಧ್ಯಮ, ಕಲಾ ಇನ್‌ಸ್ಟಾಲೇಷನ್‌ಗಳು ಯಾವಾಗಲೂ ಕುತೂಹಲಕಾರಿ ಆಗಿರುತ್ತವೆ.

ಆದರೆ, ಇಂಥ ಪ್ರಯೋಗಗಳಿಗೆ ಒಂದು ಸೃಜನಶೀಲ ಹದ ಇರುತ್ತದೆ. ಅದು ಒಂದು ಹಂತದಲ್ಲಿರುತ್ತದೆ. ಅದನ್ನು ಮೀರಿದರೆ ಈ ಪ್ರಯೋಗಗಳು ಗಿಮಿಕ್‌ ಆಗಿಬಿಡುತ್ತದೆ. ಹೀಗೆ ಇನ್‌ಸ್ಟಾಲೇಷನ್‌ ಕಲೆ ಹದ ತಪ್ಪಿ ಅತಿಗೆ ಹೋದ ಉದಾಹರಣೆಗಳೂ ಇವೆ. ನಾಸಿಕ್‌ ಹತ್ತಿರ ಒಬ್ಬರು ಕಲಾವಿದರು ಸೇತುವೆ ಮೇಲೆ ನಿಂತು ಕೆಳಗೆ ಹರಿಯುತ್ತಿರುವ ನದಿಯಲ್ಲೊಂದಿಷ್ಟು ಬಣ್ಣ ಸೋಕಿಬಿಟ್ಟಿದ್ದರು. ಅದು ನದಿಯ ಮುಂದಿನ ತಿರುವಿನಲ್ಲಿ ಬಣ್ಣಗಳು ಸೇರಿಕೊಂಡು ಒಂದು ಕಲಾಕೃತಿಯಂತೆ ರೂ‍ಪುಗೊಂಡಿತ್ತು. ಆ ಹೊತ್ತಿಗೆ ಗಾಳಿಗೆ, ನೀರಿನ ಹರಿವಿಗೆ ನದಿಯೇ ಮಾಡಿಕೊಂಡ ಚಿತ್ರ ಅದು. ಅಲ್ಲಿ ಕಲಾವಿದನ ಕೌಶಲ ಏನೂ ಇಲ್ಲ. ಎಲ್ಲದಕ್ಕೂ ಒಂದು ಔಚಿತ್ಯ ಇರುತ್ತದೆ. ಆ ಔಚಿತ್ಯದ ಒಳಗಡೆಯೇ ಎಲ್ಲವೂ ನಡೆಯಬೇಕು. ಇಲ್ಲದಿದ್ದರೆ ಕೆಟ್ಟುಹೋಗುತ್ತದೆ.

ಇತ್ತೀಚೆಗೆ ಕಾವ್ಯ, ಗಾಯನ, ಕುಂಚ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಅದು ಒಳ್ಳೆಯದೇ. ಅಲ್ಲಿ ಯಾರೋ ಹಾಡುತ್ತಿರುತ್ತಾರೆ. ಇನ್ಯಾರೋ ಪ್ರತಿಭಾವಂತ ಕಲಾವಿದ ಚಿತ್ರಕಲೆ ಬಿಡಿಸುತ್ತಿರುತ್ತಾರೆ. ಆದರೆ, ಕಾರ್ಯಕ್ರಮ ಮುಗಿದ ಮೇಲೆ ನೋಡಿದರೆ ಆ ಎಲ್ಲ ಕಲಾಕೃತಿಗಳು ವೇದಿಕೆಯ ಹಿಂಭಾಗದಲ್ಲಿ ಬಿದ್ದಿರುತ್ತವೆ. ಈ ರೀತಿಯ ಕಾರ್ಯಕ್ರಮಗಳ ಬಗ್ಗೆ ನನಗೆ ಸ್ವಲ್ಪ ಕಸಿವಿಸಿಯಿದೆ.
–ಜಯಂತ ಕಾಯ್ಕಿಣಿ

*
ಇಡೀ ಮನೆ ರಸ್ತೆಗೆ ಬೆನ್ನು ಹಾಕಿ ಬಾಯಲ್ಲಿ ಸೆರಗು ಕಚ್ಚಿ ಕುಪ್ವುಸದ ಗುಂಡಿಯನ್ನು ಹಾಕಿಕೊಳ್ಳುತ್ತದೆ ಇಲ್ಲಿ ಹಿಂಬಾಗಿಲಲ್ಲಿ.

*
ಹಿಂಬಾಗಿಲ ಮೆಟ್ಟಿಲಲ್ಲಿ ಇಡೀ ವಿಶ್ವ ಕಕ್ಕುಲಲ್ಲಿ ಬಾಲ ಅಲ್ಲಾಡಿಸುತ್ತಾ ಕೂತಿರುತ್ತದೆ.

*
ನಿರ್ದೇಶಕ ಸೂರಿ ಯಾವಾಗಲೂ ಮಾತು ಹೇಳುತ್ತಿರುತ್ತಾರೆ. ‘ಒಬ್ಬ ಕಲಾವಿದನ ಕಲಾಕೃತಿಯಲ್ಲಿ ಅತ್ಯಂತ ಅಸಂಗತವಾದ ಮತ್ತು ಸಿಲ್ಲಿಯಾದ ಸಂಗತಿ ಯಾವುದು ಎಂದರೆ, ಅದು ಆ ಕಲಾವಿದನ ಸಹಿ’. ಆ ಸಹಿಯನ್ನು ಆ ಕಲಾಕೃತಿಯ ಫ್ರೇಮ್‌ನ ಒಳಗೆ ತರುತ್ತಾನೆ. ಆಮೂಲಕ, ಅಲ್ಲಿಯವರೆಗೆ ತನ್ನೆಲ್ಲ ಗುರುತುಗಳನ್ನು– ಭಾರಗಳನ್ನು ಕಳಚಿಕೊಂಡು ಹಗುರವಾಗಿದ್ದ ಕಲಾವಿದ ಸಹಿ ಹಾಕುವ ಆ ಒಂದು ಗಳಿಗೆಯಲ್ಲಿ ಮರಳಿ ತನ್ನ ‘ಆಧಾರ ಕಾರ್ಡ್‌’ಗೆ ಲಿಂಕ್‌ ಆಗಿಬಿಡುತ್ತಾನೆ.
–ಜಯಂತ ಕಾಯ್ಕಿಣಿ 

*


‘ನನ್ನ ಕಾವ್ಯಗಳನ್ನು ಯಾರಾದರೂ ಹೀಗೆ ನೋಡಿದರೆ, ನನ್ನ ಪ್ರತಿಮೆಗಳ ಬಗ್ಗೆ ಹೀಗೆ ಸ್ಪಂದಿಸಿದರೆ ನನಗೆ ಎಷ್ಟು ಸಂತೋಷವಾಗುತ್ತದೆಯೋ ಜಯಂತರ ಕಾವ್ಯದಲ್ಲಿನ ಒಂದು ಪ್ರತಿಮೆಗೆ ಕಲಾ ಇನ್‌ಸ್ಟಾಲೇಷನ್‌ ಮೂಲಕ ಸ್ಪಂದಿಸುವುದೂ ಅಷ್ಟೇ ಸಂತೋಷ ನೀಡಿದೆ.
–ಪ್ರತಿಭಾ ನಂದಕುಮಾರ್‌, ಕವಯತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT