ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಜಿ

ದೀ‍ಪಾವಳಿ ಕಥಾಸ್ಪರ್ಧೆ – 2017
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇಮ್ಮಡಿ ಹುಸೇನಪ್ಪ ತಡೆ ತಲೆದಿಂಬು ಮಾಡಿಕೊಂಡು ನವಿಲೆಹಾಳು ಸುತ್ತಮುತ್ತ ಇರುವ ಕರೆಕಟ್ಟೆ, ಕಂದಗಲ್ಲು, ದೊಡ್ಡಘಟ್ಟ, ತ್ಯಾವಣಿಗಿ, ನಲ್ಲೂರು, ನಲ್ಕುದುರೆ ಮುಂತಾದ ಗ್ರಾಮಗಳಲ್ಲಿ ಅಲೆದಾಡಿಕೊಂಡಿರ‍್ತಿದ್ದ. ಅವನ ಮೂಲ ಹಿರಿಯೂರು ಹತ್ತಿರವಿದ್ದ ಕಸ್ತೂರಿ ರಂಗಪ್ಪನ ಹಳ್ಳಿ. ಅಲ್ಲಿ ಅವನನ್ನು ಸಣ್ಣ ಹುಸೇನಪ್ಪ ಎಂದು ಕರೀತಿದ್ದರು. ಅವರಣ್ಣ ದೊಡ್ಡ ಹುಸೇನಪ್ಪ. ಅವನು ನವಿಲೆಹಾಳಿಗೆ ಬಂದು ವಾಸಿಸಲು ತೊಡಗಿ ಈಗ ಹತ್ತಾರು ವರ್ಷಗಳೇ ಕಳೆದಿವೆ.

ದಿನಪರ್ತೆ ಮೇಲೆ ಅವನ ಹೆಸರಿನಲ್ಲಿದ್ದ ಸಣ್ಣ ಎಂಬುದು ಸವೆದುಹೋಗಿ ಬರೀ ಹುಸೇನಪ್ಪನಾದ. ಆದರೆ ನವಿಲೆಹಾಳಿನ ಕಿಲಾಡಿ ಪಿಂಜಾರರು ‘ಏನ್ಲೇ ಹುಸೇನಿ, ನಿಮ್ಮಣ್ಣ ಹುಸೇನಿ ನಂ.1 ಮತ್ತು ನೀನು ಹುಸೇನಿ ನಂ.2! ಅಂಗಾರೆ ನೀನು ಇಮ್ಮಡಿ ಪುಲಿಕೇಶಿ ತರ ಇಮ್ಮಡಿ ಹುಸೇನಿ. ರಾಜಮನೆತನದ ಪಿಂಜಾರಲೇ ನೀನು’ ಎಂದು ಚುಡಾಯಿಸಿದ ಪರಿಣಾಮವಾಗಿ ಇಮ್ಮಡಿ ಹುಸೇನಿಯೆಂದೇ ಹೆಸರಾದ.

ಈ ಇಮ್ಮಡಿಯ ಕೆಟ್ಟಚಾಳಿ ಅಂದ್ರೆ ಕೆಲಸದ ಮೇಲೆ ಹಳ್ಳಿಗಳನ್ನು ತಿರುಗಿಕೊಂಡು ಹೊರಟನೆಂದರೆ ತಿಂಗಳುಗಟ್ಟಲೆ ನಾಪತ್ತೆಯಾಗಿಬಿಡ್ತಿದ್ದ. ಅವನ ಹೆಂಡತಿ ಜೂಣಮ್ಮ (ಅಲಿಯಾಸ್ ಜೀನತ್) ಗಂಡನಿಗಾಗಿ ಕಾಯುತ್ತ ಕಾಯುತ್ತಲೇ ಹಣ್ಣಾಗಿಹೋಗಿದ್ದಳು. ಸೌಕಾರ್ ನಜೀರಣ್ಣರ ಕಣದ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಇಮ್ಮಡಿ ಕುಟುಂಬ ಬಾಡಿಗೆ ಬಂಕ ಏನೂ ಕೊಡ್ತಿರಲಿಲ್ಲ. ಮನೆಯ ಕಸ ಹೊಡ್ಕಂಡು ಕರೆಂಟು ಬಿಲ್ ಕಟ್ಕಂಡು ಹೋದ್ರೆ ಸಾಕಿತ್ತು. ಆದರೆ ಇಮ್ಮಡಿಯು ಒಂದೊಂದು ಸಲ ಆರಾರು ತಿಂಗಳು ನಾಪತ್ತೆಯಾದಾಗ ಬಿಲ್ಲನ್ನು ಸೌಕಾರರೇ ಕಟ್ಟಿಕೊಳ್ಳಬೇಕಿತ್ತು.

ಕರೆಂಟಿನವರೇನಾದರೂ ಸಂಪರ್ಕ ಕಿತ್ತಾಕಿದರೆ ಸೌಕಾರರ ಮನೆಯವರೇ ತ್ಯಾವಣಿಗಿಗೆ ಹೋಗಿ ದಂಡ ಕಟ್ಟಿ ವಿದ್ಯುತ್ ಸಂಪರ್ಕ ಸರಿಪಡಿಸಿಕೊಳ್ಳಬೇಕಾಗಿತ್ತು. ಇಲ್ಲದೇ ಹೋದರೆ ಜೂಣಮ್ಮ ತ್ಯಾವಣಿಗಿಗೆ ಹೋಗಿ ಬಿಲ್ ಮತ್ತು ದಂಡ ಕಟ್ಟಲಿಲ್ಲ, ಅದಾಗಲಿಲ್ಲ ಅನ್ನಂಗಿತ್ತು. ಜೂಣಮ್ಮ ದುಡಿದದ್ದು ಅವಳಿಗೂ ಮತ್ತು ಅವಳ ಒಬ್ಬನೇ ಮಗ ದಾದನಿಗೆ ಸೈತ ಸಾಕಾಗ್ತಿರಲಿಲ್ಲ.

ದಾದನಿಗೆ ಈಗಾಗಲೇ ಎಂಟು ವರ್ಷ. ಪಿಂಜಾರಾದ್ರೇನು ಸಾಬ್ರೇ ತಾನೆ? ಅದಕ್ಕೇ ಅವನದನ್ನ ಕೊಯ್ಸಿ ಮುಂಜಿ ಅಂತ ಮಾಡ್‌ಬಿಟ್ರೆ ಸಾಕು ಸಾಬ್ರ ಲೆಕ್ಕಕ್ಕೆ ಜಮಾ ಆಗ್ತನೆ. ರೋಜಾ, ನಮಾಜು ಮಾಡಿದ್ರೆಷ್ಟು, ಬಿಟ್ರೆಷ್ಟು, ಬೇರೆ ನೂರಾರು ಪಿಂಜಾರರಿದ್ದಂಗೆ ಇರ‍್ತನೆ. ಅಂತ ಜೂಣಮ್ಮನ ವಿಚಾರ. ಬೇಸಿಗೆಯಲ್ಲಿ ಮುಂಜಿ ಮಾಡ್ಸಾದೊಳ್ಳೇದು. ಗಾಯ ಜಲ್ದಿ ಮಾದ್‌ಬಿಡ್ತತಿ. ಆದ್ರೆ ಇಮ್ಮಡಿ ಐನಾತಿ ಹೊತ್ತಿಗೆ ಕಣ್ಮರೆಯಾಗ್‌ಬಿಡ್ತನೆ. ಜೂಣಮ್ಮನಿಗೆ ಇದೇ ಪೀಕಲಾಟ.

‘ಯಾಕವ್ವ ಇನ್ನೂ ಹುಡುಗನಿಗೆ ಮುಂಜಿ ಮಾಡ್ಸಿಲ್ಲಾ’ ಅಂತ ಎಲ್ರೂ ಕೇಳವ್ರೇ. ಸಣ್ಣಮನೆ ರೋಸಜ್ಜಿ ಅಂದ್ರೆ ಮನೆ ಮಾಲೀಕರ ತಾಯಿ, ಜೂಣಮ್ಮನ ಕರೆದು ‘ಏಯ್ ಜೂಣಿ, ದಾದನ ಮುಂಜಿ ಯಾವಾಗ್ ಮಾಡಿಸ್ತೀಯೆ, ಈಗ್ಲೇ ಎಳೇದಿದ್ದಾಗ ಕುಯ್ಸಾಕಾದ್‌ಬಿಟ್ಟು ಅದು ಬಲ್ತು ಬಡ್ಡೆ ಆದ್ಮೇಲೆ ಕೊಯ್ಸ್‌ತೀಯೇನೇ? ನಿನ್ ಗಂಡಂದಾರ ಆಗೈತೋ ಏನಿಲ್ಲೋ, ನಿನ್ನೋಸಡುಗ’ ಎಂದು ಉಗಿಯುತ್ತಿದ್ದಳು.

ಜೂಣಮ್ಮನಿಗೆ ಸಿಟ್ಟು ಬಂದು ‘ನನಿಗೇನು ಗೊತ್ತಜ್ಜಿ? ಅವುನ್ನೆ ಕೇಳೋಗು’ ಎಂದಳು.
ಅದಕ್ಕೆ ಅಜ್ಜಿ ‘ಯಾಕೆ ಬೆಂಡ್ಳಿ, ನೋಡಿಲ್ಲೇನೆ ನೀನು ನಿನ್ ಗಂಡುಂದ?’
ಜೂಣಮ್ಮ ‘ಅಯ್ಯೋ ಸುಮ್ನಿರಜ್ಜಿ, ನನಿಗೆ ನಾಚ್ಕೆಯಾಗ್ತತಿ’ ಎಂದಳು.
ಅಜ್ಜಿ ಯಾರ ಮಾತಿಗೂ ಸೋಲುವವಳಲ್ಲ. ‘ಜೂಣಿ, ನಾಚಿದರೆ ಮಕ್ಕಳಾಗ್ತವೇನೇ?’ ಅಂದಳು.
ಜೂಣಮ್ಮನಿಗೆ ರೋಸಜ್ಜಿಯತ್ರ ವಾದಿಸಿ ಪ್ರಯೋಜನವಿಲ್ಲ ಅಂತ ಚೆನ್ನಾಗ್ಗೊತ್ತು.

ಊರಿನಲ್ಲಿ ಪೋಲಿ ಅಲೆಯುವ ಜಫ್ರು ಎಂಬುವವನು ‘ಲೇ ಇಮ್ಮಡಿ, ಮಗಂದು ಖತ್ನ ಮಾಡ್ಸಲೇ. ಅದೇನಾರ ಬಲ್ತು ಅದರಾಟ ಸುರು ಮಾಡ್ಕಂಡ್ರೆ ಬಾಳ ರೈತ ಸುರ‍್ದೋಗ್ತತಿ ನೋಡ್ತಮ. ಇದನ್ನ ಯಾವ ಡಾಕ್ಟ್ರೂ ನಿನಗೇಳಲ್ಲ. ನಾನಾಗಿದ್ಕೇಳ್ತಿನಿ. ಮಗ ಕೈಗತ್ತದಂಗೆ ಮಾಡ್ಕಂಡೀಯ ಹುಷಾರು!’ ಎನ್ನುತ್ತಿದ್ದ.

ಜೂಣಮ್ಮನಿಗೆ ಆದಷ್ಟು ಜಲ್ದಿ ದಾದನ ಮುಂಜಿ ಮಾಡ್ಸೋದಕ್ಕೆ ಆಸೆ. ಆದರೆ ಗಂಡ ಇಮ್ಮಡಿಗೆ ಹೊತ್ತಿಲ್ಲ, ಗೊತ್ತಿಲ್ಲ, ತನ್ನ ಮನೆ– ಮಠ ಹೆಂಡ್ತಿ ಮಕ್ಕಳು ಅನ್ನೋದು ಸೈತ ಖಬರಿಲ್ಲ. ಇಂಥವ್ಕೆ ಮದುವೆ ಯಾಕೆ, ಮುಂಜಿ ಯಾಕೆ? ಬಾಯಾಗ್ ಮಣ್ಣಾಕ, ಮೂಳ ಎಂದು ಬೈದುಕೊಂಡಳು ಗಂಡನ್ನ.

ಜೂಣಮ್ಮ ಏನಾರೂ ಬಯ್ಲಿ ಇಮ್ಮಡಿ ಎದುರಿದ್ದರೆ ತಾನೆ? ಅಪರೂಪಕ್ಕೊಮ್ಮೆ ಬಂದೊಂದು ನಾಕು ದಿನ ಇರ‍್ತನಲ್ಲಾ ಆಗ? ಆವಾಗೇನಾರ ನಮ್ಮೋರು, ತಮ್ಮೋರು ಅಂತಾನ? ಉಹುಂ ಇಲ್ಲ. ಮನೆನಲ್ಲೇ ನೆಂಟರಿದ್ದಂಗಿರ‍್ತನೆ. ಬಾಡ್ಕೌ. ಮಾತಿಲ್ಲ ಕತೆಯಿಲ್ಲ. ಮೂಕ ಇದ್ದಂಗಿರ‍್ತಿದ್ದ. ಮಾತಾಡಿದ್ರೆಲ್ಲಿ ದುಡ್ಡು ಕೊಡಬೇಕೋ? ಒಡನಾಟ ಹೆಚ್ಚಿಸಿಕೊಂಡ್ರೆಲ್ಲಿ ಸದರ ಆಗೋಗ್ತೀನೋ? ಸದರ ಆದಾದಂಗೆ ಜೇಬಿಗೇ ಕೈಹಾಕಬಹುದು ಜೂಣಿ. ಅದಕ್ಕೆ ಇಮ್ಮಡಿ ಮನ್ಯಾಗೆ ಗೂಬೆ ಇದ್ದಂಗಿರ‍್ತಿದ್ದ.

ಜೂಣಮ್ಮನಿಗೆ ದಾದ ಅಂದ್ರೆ ಜೀವ. ದಾದ ಎಂಬ ಎಂಟು ವರ್ಷದ ಹುಡುಗನಿಗೆ ಲೋಕ್ದಾಗ್ನಡಿಯಾದೆಲ್ಲ ಗೊತ್ತು. ಪ್ರಧಾನಮಂತ್ರಿ ಯಾರು, ಕೃಷಿ ಮಂತ್ರಿ, ರೈಲ್ ಮಂತ್ರಿ, ಗ್ರಹಗಳು, ಉಪಗ್ರಹ, ವಿಜ್ಞಾನಿಗಳು, ರಾಷ್ಟ್ರಪತಿಗಳ ಭಾಷಣ ಇತ್ಯಾದಿ ಅವನ ಬೆರಳತುದಿಯಲ್ಲಿ. ಅವನು ಕೇಳುವ ಪ್ರಶ್ನೆ ಎಲ್ಲರನ್ನೂ ದಿಗಿಲು ಬೀಳಿಸುತ್ತಿದ್ದವು. ಅವನು ಮೂರನೇ ಕ್ಲಾಸಾದರೂ ಆರನೇ ಕ್ಲಾಸಿನ ಪುಸ್ತಕಗಳು ಲೀಲಾಜಾಲ. ಸ್ವಾತಂತ್ರ್ಯ ದಿನಾಚರಣೆಯ ದಿನ ಅವನು ಮಾಡಿದ ಭಾಷಣ ಕೇಳಿ ಚನ್ಗಿರಿಯಿಂದ ಬಂದಿದ್ದ ಆಫೀಸರ್ರೇ ಥಂಡಾ ಹೊಡ್ದುಬಿಟ್ರು. ಒಂದು ಸಲ ‘ಚೆನ್ನಾಗೋದ್ಕಂಡು ಬರ್ರೀ ಸಾರ್’ ಅಂತ ಮೇಷ್ಟ್ರಿಗೇ ಹೇಳ್ಬಿಟ್ಟಿದ್ದ. ಜೂಣಮ್ಮನ ಮತ್ತು ಇಮ್ಮಡಿಯ ಮನೆಗಳಲ್ಲಿ ದಾದನೇ ಫಸ್ಟು ಅಕ್ಷರಗಳ ಮುಖ ನೋಡಿರಾದು. ಅಂತೋರ ಮನ್ಯಾಗೆ ಹುಟ್ಟಿರೋ ಈ ದಾದನ್ನೋಡಿ ಎಲ್ರಿಗೂ ಚೋಜುಗ!

ದಾದನಿಗೆ ಈ ಸಲ ಬ್ಯಾಸಿಗ್ಗೆ ತನ್ನ ಗಂಡ ಇರ‍್ಲಿ ಬಿಡ್ಲಿ ಮುಂಜಿ ಮಾಡ್ಸಾಕಿ ಬಿಡನ ಅಂತ ನಿಚ್ಚಯಿಸಿದ್ದೇ ಜೂಣಮ್ಮ ಊದ್ಬತ್ತಿ ಹಚ್ಚಿ ಹೊನ್ನೂರ್‌ ದರ್ಗಾದ ದಿಕ್ಕಿಗೆ ತಿರುಗಿ ನಿಂತ್ಕಂಡು ‘ಹೊನ್ನುರ್‌ಸ್ವಾಮಿ ಈ ವರ್ಷರೆಯ ನನ್ನ ಮಗ ದಾದನಿಗೆ ಮುಂಜಿ ಮಾಡ್ಸ ಯೋಗ ಒದಗಿಸಿದ್ರೆ ನಿನಗೆ ಅವನ ತೂಕದ ಬೋರಸಕ್ರೇನ ಕೊಡ್ತುನಿ’ ಅಂತ ಸಣ್ ಮಾಡಿ ಹರಕೆ ಕಟ್ಟಿಕೊಂಡ್ಳು. ಊರಲ್ಲೇ ಇದ್ದ ಮಹಬೂಬ್ ಸುಬಾನಿ ದರ್ಗಾಕ್ಕೂ ಅದೇ ಥರ ಊದ್ಬತ್ತಿ ಹಚ್ಚಿ ‘ಈ ಸಲ ಬ್ಯಾಸಿಗ್ಗೆ ನನ್ನ ಕಂದನ ಮುಂಜಿಯಾದ್ರೆ ಝಂಡಾ ಏರುಸ್ತೀನಿ‘ ಅಂದ್ಳು.

ಈ ಕಡೆ ದಾದನಿಗೆ ಸೌಕಾರ್ ಬಷೀರ್ ಸಾಹೇಬರ ಮಗ ನಬಿ ಆಗಾಗ ಹೇಳ್ತಿದ್ದ ಮಾತುಗಳು ನೆನಪಾದ್ವು. ‘ಮುಂಜಿ ಮಾಡ್ಸಿದ್ರೆ ದಿನಾ ಕೋಳಿ ಕೊಯ್ತರೆ, ಇಲ್ದಿದ್ರೆ ಮಟನ್ ಸಾರು, ಬೋಟಿ ಸಾರು, ತಲೆಕಾಲು ಸಾರು. ಮಜ ಕಣಲೇ ದಾದ. ಏನ್ ಮಾಡ್ತಿಯಲೇ ಒಂದೇ ಸಲ ಮುಂಜಿ ಮಾಡಕಾಗದು.’

ದಾದ: ‘ಥೂ ಹೌದು ಕಣಲೆ!’ ದಾದ ಮತ್ತು ನಬಿ ಒಂದೇ ವಾರ‍್ಗೆಯವರು. ಜತಿಗೋದ್ತರೆ. ಮೂರನೆ ಕ್ಲಾಸು.

ನಬಿ: ‘ಕಿವಿ ಎಲ್ಡದವೆ, ಕಣ್ಣು ಎಲ್ಡದವೆ, ಕೈಕಾಲು ಎಲ್ಲ ಎಲ್ಡೆಲ್ಡು. ಆದ್ರೆ ಅದು ಮಾತ್ರ ಒಂದೇ ಒಂದು.’

ದಾದ: ‘ಥೂ ಹೌದು ಕಣಲೆ!’

ದಾದನಿಗೆ ಮುಂಜಿ ಬಗ್ಗೆ ಅನೇಕ ಅನುಮಾನಗಳಿದ್ವು. ಈ ಅನುಮಾನಗಳನ್ನು ಪರಿಹಾರ ಮಾಡಿಕೊಳ್ಳಲು ಯಾರ‍್ಯಾರೂ ಇರ‍್ಲಿಲ್ಲ. ಸ್ಕೂಲಲ್ಲಿ ಮಹಲಿಂಗಪ್ಪ ಮೇಷ್ಟ್ರನ್ನ ಮುಂಜಿ ಬಗ್ಗೆ ಪ್ರಶ್ನೆ ಕೇಳಿ ಉತ್ರ ಪಡಿಯಕಾಗ್ತಿರಲಿಲ್ಲ. ಹುಡುಗರ‍್ನ ನಾಯಿಗೊಡದಂಗೆ ಹೊಡೀತಿದ್ರು. ನಬಿಯನ್ನ ಕೇಳಿದ್ರೆ ಅವ್ನಿಗೂ ಉತ್ರ ಗೊತ್ತಿಲ್ಲ. ತಮ್ಮ ತರಗತಿಯ ಕುಬೇರ, ಮುರುಗೇಶಿ, ಕರಿಯ, ಕಲ್ಲೇಶಿ ಮುಂತಾದವರು ಮುಂಜಿ ಮಾಡ್ಸಲ್ಲ. ಅವರೆಲ್ಲ ಹಿಂದೂಗಳು ಅಂತ ಹೇಳ್ತಾರೆ. ಅವರ‍್ಯಾಕೆ ಅದನ್ನ ಕೊಯ್ಸಲ್ಲ ಅಂತ ಯಾರತ್ರ ಕೇಳದು?

ದಾದ ಧೈರ್ಯ ಮಾಡಿ ಒಂದಿನ ತನ್ನ ಅಮ್ಮನನ್ನೇ ಕೇಳಿಬಿಟ್ಟ.
ದಾದ: ‘ನನ್ನ ಫ್ರೆಂಡು ಕಲ್ಲೇಶಿ ನಮ್ಮತರ ಮುಂಜಿ ಮಾಡ್ಸಲ್ವಂತೆ. ಯಾಕವ್ವ?
‘ಜೂಣಮ್ಮ: ‘ಅವ್ರು ಹಿಂದೂಗಳು ಕಣೊ.’
ದಾದ: ‘ನಾವು?’ಜೂಣಮ್ಮ: ‘ಸಾಬ್ರು’.
ದಾದ: ‘ಓಗಮ್ಮೋ ಓಗು. ಆ ಉರ್ದು ಮಾತಾಡೊ ಅಂಗಡಿ ಅಮೀರ್‌ಸಾಬು - ನಿಮ್ಗೆ ನಮ್ದು ಮಾತು ಬರಾಕಿಲ್ಲ ಏನಿಲ್ಲ. ನೀವ್ಯಾತ್ರು ಸಾಬ್ರಲೆ ಅಂತಾನೆ. ಇಲ್ಲಿ ನೀನ್ನೋಡಿದ್ರೆ ಸಾಬ್ರು ಅಂತೀಯ! ಹಿಂದೂಗಳು ಯಾಕಮ್ಮ ಮುಂಜಿ ಮಾಡ್ಸಲ್ಲ?’
ಜೂಣಮ್ಮ: ‘ಅವ್ರ ದೇವ್ರು ಅದರ ಬಗ್ಗೆ ಏನೂ ಹೇಳಿಲ್ಲ ಕಣಪ್ಪ. ಆದ್ರೆ ನಮ್ದೇವ್ರು ಅದರ ಬಗ್ಗೆ ಬಾಳ ಕಟ್ಟುನಿಟ್ಟು.’
ದಾದ: ‘ಅಂಗಾರೆ ನಮ್ದೇವ್ರು ಅವುರ ದೇವ್ರು ಬ್ಯಾರೆ ಬ್ಯಾರೆ ಏನವ್ವ?’
ಜೂಣಮ್ಮ: ‘ಊಂಕಣಪ್ಪ. ಅವುರ‍್ದು ತಿಪ್ಪೇಸ್ವಾಮಿ. ನಮ್ದು ಅಲ್ಲಾಸ್ವಾಮಿ.’
ದಾದನ ಪ್ರಶ್ನೆಗೆ ಉತ್ತರಿಸಲು ಜೂಣಮ್ಮ ತಲೆಯನ್ನೆಲ್ಲ ಖರ್ಚು ಮಾಡಿಕೊಂಡ್ಳು.

ದಾದ: ‘ಒಬ್ಬೊಬ್ರು ಒಂದೊಂದ್ತರ ಹೇಳ್ತೀರಿ. ಪುಸ್ತಕದಾಗೆ ದೇವ್ರೊಬ್ಬ ಅಂತ ಐತೆ. ನೀನು ತಿಪ್ಪೇಸ್ವಾಮಿ, ಅಲ್ಲಾಸ್ವಾಮಿ ಅಂತೀಯ. ಗುರುವಾರ ದರ್ಗಾಕ್ಕೆ ಹೋಗಿ ಸಕ್ರೆ ಓದಿಸ್ಕಂಡು ಬಾ ಅಂತೀಯ. ವರ್ಷಕ್ಕೊಂದು ಸಲ ಚೌಡಮ್ಮನಿಗೆ ಹಣ್ಣುಕಾಯಿ ಮಾಡುಸ್ತೀಯ. ಎಲ್ಲ ಕೂಡಿ ಎಷ್ಟು ದೇವ್ರಾದ್ವು?’

ದಾದನ ಮಾತುಗಳಲ್ಲಿ ಸತ್ಯವಿರುವುದು ಜೂಣಮ್ಮನಿಗೆ ಗೊತ್ತಿತ್ತು. ಆದರೆ ಆಕೆಯೂ ಗೊಂದಲದಲ್ಲಿದ್ದಳು.

ಜೂಣಮ್ಮ: ‘ಯಾವ ದೇವ್ರನ್ನೂ ಬಿಡಕಾಗಲ್ಲ. ದರ‍್ವೊಬ್ರೂ ಬೇಕು. ಯಾರಾದ್ರು ಒಳ್ಳೇದು ಮಾಡ್ಲಿ ಬಿಡು. ಎಲ್ರೂ ಒಳ್ಳೇದ್ ಮಾಡಿದ್ರೆ ಅದೂ ಒಳ್ಳೇದೇ.’

ತನ್ನ ಮಗನ್ನ ಎದ್ರು ಕುಂಡ್ರಿಸ್ಕೊಂಡು ಜೂಣಮ್ಮ ಹೇಳಿದಳು: ‘ನನ್ನ ಬಂಗಾರದಂಥ ಮಗ್ನೆ, ಈ ಬ್ಯಾಸಿಗೇಲಿ ನಿಮ್ಮಪ್ಪಿರಲಿ ಬಿಡಲಿ, ಮುಂಜಿ ಮಾಡ್ಸಿಬಿಡ್ತೀನಿ. ಮೀಯಣ್ಣರ ಅಬ್ದುಲ್ಲ, ಮದ್ದಣ್ಣರ ಟೂಟು, ಸಪೂರಮ್ಮರ ಖಾಜ ಎಲ್ರೂ ಮುಂಜಿ ಮಾಡ್ಸ್‌ತದರೆ. ಅವರ ಜೊತೆ ನಿಂದೂ ಆಗ್ಯೋಕತೆ. ನೀನು ಬೊಲೋಳ್ಳೇನು ಅಲ್ವ!’ ಹೀಗೆ ಜೂಣಮ್ಮ ಬಾಳ ಉಬ್ಸಿದಳು.

ದಾದ: ‘ಓಗಮ್ಮೋ ನಾನ್ಯಾಕೆ ಮಾಡ್ಸಿಗಳ್ಳಲಿ? ವಿಪರೀತ ನೋವಾಕ್ಕತಂತೆ.’

ಜೂಣಮ್ಮ: ‘ಮೊನ್ನೆ ಎಡವಿ ಬಿದ್ದೆಲ್ಲಪ್ಪ, ಆಗ ನಿನ್ನ ಬಲಗಾಲಿನ ಹೆಬ್ಬೆಟ್ಟು ಚರ್ಮ ಕಿತ್ತು ಹೋಗಿತ್ತು. ನಾಕು ದಿನದಾಗೆ ಹುಶಾರಾತು. ಹೌದಿಲ್ಲೊ? ಅಂಗೆ ಇದೂವ.’

ದಾದ: ‘ಸಾಯ ಅಂತ ನೋವಂತವ್ವ!’

ಜೂಣಮ್ಮ: ‘ಮೊನ್ನೆ ಸೀಸದಕಡ್ಡಿ ಕೆತ್ತಬೇಕಾದ್ರೆ ಎಡಗೈ ಹೆಬ್ಬೆರಳನ್ನೆ ಕೆತ್ತಿಕೊಂಡು ಎಷ್ಟು ರಕ್ತ ಹೋತು. ಬೆರಳು ಅರ್ಧಕ್ಕೆ ಕಟ್ಟಾಗಿತ್ತು. ಹೌದಲ್ಲೋ ದಾದ?’

ದಾದ: ‘ಹೌದು ಕಣಮ್ಮ.’

ಜೂಣಮ್ಮ: ‘ನಾಕೇ ನಾಕು ದಿನ್ದಾಗೆ ಮಾಯವಾತ್ತೋ ಇಲ್ಲೋ ಗಾಯ?’

ದಾದ: ‘ಹೌದು ಬಿಡು. ಭಾರೀ ಪಾಲಿಶ್ ಮಾಡ್ತಿ ಕಣವ್ವ ನೀನು.’

ಜೂಣಮ್ಮ: ‘ಅಂಗೇ ಕಣೋ ದಾದ. ಅಂಗೇ ನೋಡ್ಕಂಡು ಗಾಯ ವಾಸಿ ಮಾಡ್ತೀನಿ.’

ಆದರೆ ದಾದ ಏನು ಹೇಳಿದ್ರೂ ಒಪ್ಪದಾದ. ಜೂಣಮ್ಮ ಹೊಸ ಬಟ್ಟೆ ಹೊಲಿಸುವ ಆಸೆ ಹಚ್ಚಿದ್ಳು. ದಾದ ಬಿಲ್‌ಕುಲ್ ಒಪ್ಲಿಲ್ಲ. ತನ್ನ ತವರಾದ ಚಳ್ಳಕೆರೆಗೆ ಕರೆದುಕೊಂಡು ಹೋಗುವ ಆಸೆ ಹಚ್ಚಿದಳು. ದಾದ ಒಪ್ಲಿಲ್ಲ. ಕಸ್ತೂರಿ ರಂಗಪ್ಪನ ಹಳ್ಳಿಯ ಆಸೆ ತೋರಿಸಿದಳು. ದಾದ ಒಪ್ಪದಾದ.

ನಂತರ ಜೂಣಮ್ಮ ಮನಸ್ಸಿಲ್ಲದ ಮನಸ್ಸಿಂದ ಹೆದರ‍್ಸೋಕೆ ಸುರು ಮಾಡಿದ್ಳು. ‘ಮಸೀದಿಯ ಪೇಶ್ ಇಮಾಮರು, ಮೌಜಾನ್ ಸಾಹೇಬರು ಬೈಯುತ್ತಾರೆ, ಹೊಡೆಯುತ್ತಾರೆ, ದೊಡ್ಡಮನೆ ಸೌಕಾರ್ರು ಸಣ್ಣಮನೆ ಸೌಕಾರ್ರು ಸರಿಯಾಗಿ ಕೊಡ್ತರೆ ಖರ್ಚಿಗೆ’ ಅಂದ್ಳು. ಮುಂಜಿ ಮಾಡಿಸ್ಕಳ್ದಿದ್ರೆ ಅಲ್ಲಾಸ್ವಾಮಿ ನಿನ್ನ ನರಕಕ್ಕೆ ಇಳ್ಸಿ ಒಡಿಬಾರ‍್ದೊಡ್ತ, ಕೊಡ್ಬಾರ‍್ದ ಶಿಕ್ಷೆ ಕೊಡುವುದಾಗಿ ಹೆದರಿಸಿದ್ದು ಏನೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಯ ಅಸ್ತ್ರವಾಗಿ ಮೇಷ್ಟ್ರು ಮಹಲಿಂಗಪ್ಪನವರಿಗೆ ಕೈಮುಗಿದು ಕೇಳಿಕೊಂಡಳು.

ನವಿಲೇಹಾಳು ಕಂಡ ಅತ್ಯುಗ್ರ ಮೇಷ್ಟ್ರಲ್ಲಿ ಒಬ್ಬರಾದ ಮಹಲಿಂಗಪ್ಪ ಮೇಷ್ಟ್ರು ವಿದ್ಯಾರ್ಥಿಗಳಿಗೆ ಸಿಂಹಸ್ವಪ್ನರಾಗಿದ್ದರೂ ದಾದನನ್ನು ಮಾತ್ರ ಎಂದೂ ಹೊಡೆದಿರಲಿಲ್ಲ. ಮರುದಿನ ಪಾಠ ಮಾಡಿದ ಮೇಲೆ ‘ದಾದ ಯಾಕಲೇ ಮುಂಜಿಗೆ ಒಲ್ಲೆ ಅಂತೀಯಂತೆ. ನಿಮ್ಮಮ್ಮ ಅತ್ತುಬಿಡ್ತಲ್ಲಲೇ ಬಾಡ್ಕೌ. ಅದೇನು ಬೇಸಿಗೆ ರಜದಾಗ ಮಾಡಿಸ್ಕಂಡು ಆಮೇಲೆ ನನಿಗ್ಬಂದು ತೋರಿಸ್ಬೇಕು. ಅಂಗಾದ್ರೆ ಪಾಸು ಇಲ್ದಿದ್ರೆ ಫೇಲು’ ಎಂದರು. ಮೇಷ್ಟ್ರು ಹಾಗೆ ಹೇಳಿದ್ದೇ ತಡ ತರಗತಿಯ ಹುಡುಗರೆಲ್ಲ ಇದು ಯಾವುದೋ ರಜದ ಹೋಂವರ್ಕ್ ಇರಬೇಕೆಂದು ಭಾವಿಸಿಕೊಂಡು ‘ನಾವೆಲ್ಲರೂ ಮಾಡಿಸ್ಕಂಡು ಬಂದು ತೋರಿಸ್ಬೇಕ ಸಾರ್?’ ಎಂದು ರಾಗವಾಗಿ ಕೇಳಿದರು. ದಾದನ ಮುಂಜಿ ಹಕೀಕತ್ತನ್ನು ಬಲ್ಲ ಶಂಷಾದ್ ಎಂಬ ವಯಸ್ಸಿನಲ್ಲಿ ಸ್ವಲ್ಪ ದೊಡ್ಡದಾದ ಹುಡುಗಿ ತಡೆಯಲಾರದೆ ಕಿಸಕ್ಕನೆ ನಕ್ಕು, ನಿಧಾನಕ್ಕೆ ಎಲ್ಲರಿಗೂ ಅರ್ಥವಾಗಿ ಮೇಷ್ಟ್ರು ಮತ್ತು ದಾದನ್ನ ಹೊರತುಪಡಿಸಿ ರೂಮಿನಲ್ಲಿದ್ದವರೆಲ್ಲ ಬಿದ್ದುಬಿದ್ದು ನಗತೊಡಗಿದರು. ದಾದನಿಗೆ ತನ್ನೆಲ್ಲ ಸಹಪಾಠಿಗಳ ನಗು ತನ್ನನ್ನು ಕಿಚಾಯಿಸುತ್ತಿರುವಂತೆನಿಸಿ ನಾಚಿಕೆಯೂ, ಅವಮಾನವೂ ಆಯ್ತು. ಆದರೂ ಬಿದ್ದುಬಿದ್ದು ನಗುತ್ತಿದ್ದ ತನ್ನ ಪ್ರಾಣಮಿತ್ರರ ಜೊತೆ ತಾನೂ ಎಲ್ಲರಿಗಿಂತ ಹೆಚ್ಚು ನಗತೊಡಗಿದ. ಪಾಪ ಮೇಷ್ಟ್ರು ತಾನು ಯಾಕಾದರೂ ಈ ದಾದನ ಮುಂಜಿ ಬಗ್ಗೆ ಮಾತೆತ್ತಿದೆನೋ ಎಂದು ಪೆಚ್ಚಾದರು.

ಕೊನೆಗೆ ದಾದನಿಗೆ ಬಹಳ ಪ್ರಿಯವಾದ ಊಟ, ತಿಂಡಿಗಳ ನೆನಪಿಸಿಕೊಂಡಳು ಜೂಣಮ್ಮ. ಒಬ್ಬಳ ದುಡಿಮೆಯಿಂದ ಇಬ್ಬರಿಗೆ ಎರಡೊತ್ತಿನ ಊಟಕ್ಕೆ ಹೊಂದಿಸುವುದೇ ಏಳುಬಂಡಾಗಿತ್ತು. ಮಾಂಸದೂಟವೆನ್ನುವುದು ಕನಸಿನ ಮಾತಾಗಿತ್ತು. ಸೌಕಾರರ ಮನೆಯಲ್ಲಿ ಅಕಸ್ಮಾತ್ ಬಿಟ್ಟುದ್‌ಸಟ್ಟುದ್ ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲ. ತುಂಡುಗಳನ್ನು ಸೋಸಿ ಬರೀ ಉದುಕ ಮಾತ್ರ ಕೊಡ್ತಾರೆ. ಕೈತಪ್ಪಿ ಬಿದ್ದರೊಂದು ತುಂಡು ಬೀಳಬೇಕಷ್ಟೇ. ಇಂಥ ಬಂಡಿನಲ್ಲಿ ದಾದ ಮಾಂಸದೂಟದ ಬಗ್ಗೆ ಅದರಲ್ಲೂ ಕಲೀಜ ತುಂಡುಗಳ ಬಗ್ಗೆ ಅದಮ್ಯ ಆಸೆಯನ್ನಿಟ್ಟುಕೊಂಡಿದ್ದ. ಸಾರಿನಲ್ಲಿ ಬೆಂದ ಕಲೀಜದ ತುಂಡುಗಳಿಗಿಂತ ಎಣ್ಣೆಯಲ್ಲಿ ಮಸಾಲೆ ಹಚ್ಚಿ ಹುರಿದಿರುವ ಕಲೀಜ ತುಂಡುಗಳಿಗಿಂತ ಹಾಗೆಯೇ ಉಪ್ಪುಸವರಿ ಕೆಂಡದ ಮೇಲೆ ಸುಟ್ಟ ಕಲೀಜ ತುಂಡುಗಳ ತಿನ್ನುವ ಹೆಬ್ಬಯಕೆ ದಾದನದಾಗಿತ್ತು. ಹೋದ ವರ್ಷ ಬಕ್ರೀದ್ ಹಬ್ಬದಲ್ಲಿ ಕುರ್ಬಾನಿ ಕೊಟ್ಟಿದ್ದ ಒಂದೆರಡು ಮನೆಗಳವರು ಕಲೀಜ ತುಂಡು ಕೊಟ್ಟಿದ್ದು ಅವುಗಳನ್ನು ಜೂಣಮ್ಮ ದಾದನಿಗೆ ಉಪ್ಪಚ್ಚಿ ಸುಟ್ಟುಕೊಟ್ಟಿದ್ದಳು. ಸುಟ್ಟ ಕಲೀಜ ತುಂಡಿಗೆ ದಾದ ಜೀವವನ್ನೇ ಅರ್ಪಿಸಲು ಸಿದ್ಧನಿದ್ದ. ಇದನ್ನು ಜೂಣಮ್ಮ ಅರಿಯದವಳೇನಲ್ಲ.

‘ದಾದ, ಮುಂಜಿ ಮಾಡಿಸಿದ ಇಪ್ಪತ್ತೊಂದು ದಿನದ ತನಕ ನೀನು ಮನೆ ಬಿಟ್ಟು ಹೊರಗೋಗಂಗಿಲ್ಲ. ರಸ್ತ್ಯಾಗೆ ಗೋಲಿ,– ಗಜ್ಜಗ, ಬುಗುರಿ ಆಡಂಗಿಲ್ಲ. ಕಣಕ್ಕೋಗಿ ಸಾಲ್ಚೆಂಡು, ಚಿನ್ನಿದಾಂಡ, ಮರಕೋತಿ ಆಡಂಗಿಲ್ಲ. ನಿಧಾನಕ್ಕೆ ನಡೀಬೇಕು. ಓಡಂಗಿಲ್ಲ, ಎಗರಂಗಿಲ್ಲ. ಅಷ್ಟೂ ದಿನ ಸೊಂಟಕ್ಕೆ ಕೆಂಪು ವಸ್ತ್ರ ಸುತ್ತಿಕೊಂಡಿರಬೇಕು. ನಿಕ್ಕರು ಉಟ್ಕನಂಗಿಲ್ಲ. ಆದ್ರೆ ಕೇಳು

ಏನೇಳವ್ವ
ಆ ಆಷ್ಟೂದಿನ ನಿನಗೆ ಬೇಕಾದ್ದು ಬೇಡಾದ್ದು ಅಡಿಗೆ ಮಾಡಿಡತೀನಿ ಎಂದು ಮಗನನ್ನು ಅಪ್ಪಿಕೊಂಡಳು. ಇರುವ ಒಬ್ಬನೇ ಮಗನನ್ನು ಒಂದು ದೊಡ್ಡ ಗಂಡಾಂತರಕ್ಕೆ ನೂಕುತ್ತಿದ್ದೇನೇನೋ ಎನಿಸಿತವಳಿಗೆ. ಹೃದಯ ಭಾರವಾಯಿತು. ಕಣ್ಣುತುಂಬಿ ಬಂದವು. ರೆಪ್ಪೆ ಪಟಪಟನೆ ಬಡಿದುಕೊಂಡವು. ಕಣ್ಣೀರು ದಳದಳ ಸುರಿದವು. ಆಕೆಯ ಕಂದ ದಾದ ಅವ್ವನ ನೋಡಲು ಮುಖ ಮೇಲೆತ್ತಿದ. ಅವನ ಸಣ್ಣದಾದ ಅಂದವಾದ ಮುಗ್ಧವಾದ ಚೂಟಿಯಾದ ಮುಖದ ಮೇಲೆ ತಾಯಿಯ ಕಣ್ಣೀರ ಹನಿಗಳು ಬಿದ್ದು ಉರುಳಿದವು. ದಾದನಿಗೆ ಯಾವತ್ತೂ ಇಲ್ಲದ ಅಳು ನುಗ್ಗಿಬಂದಿತ್ತು.

ದೊಡ್ಡ ದೊಡ್ಡ ಗಾತ್ರದ ಹನಿಗಳು ದಾದನ ಸಣ್ಣ ಕಣ್ಣಿಂದ ಉಕ್ಕಿಹರಿದವು. ‘ಅವ್ವ, ಬ್ಯಾಡವ್ವ ಮುಂಜಿ ಬ್ಯಾಡ. ಇನ್ಯಾಕೂ ಅಲ್ಲ. ನಾನು ಸತ್ತೋದ್ರೆ ನೀನೊಬ್ಳೆ ಏನು ಮಾಡ್ತೀಯವ್ವ’ ಎಂದ. ಅವನ ಧ್ವನಿ ಬಿಕ್ಕಳಿಕೆ ಮಧ್ಯ ತುಂಡುತುಂಡಾಗಿತ್ತು. ನಿಂತಿದ್ದ ಜೂಣಮ್ಮ ಹಾಗೆಯೇ ಕುಸಿದು ಕುಕ್ಕರಗಾಲಲ್ಲಿ ಕುಳಿತು ದಾದನನ್ನು ಅಪ್ಪಿ ಕಣ್ಣೊರೆಸಿದಳು. ‘ಅಂಗನ್ಬೇಡ ಪಾಪು. ಏನೇನೂ ಆಗಲ್ಲ. ನಮ್ಮ ಪಾಲಿಗೆ ದೇವ್ರೊಬ್ಬನೇ ಇರಾದು. ಅಲ್ಲಾಸ್ವಾಮಿ ನಮ್ಮ ಕೈಬಿಡಲ್ಲ’ ಎಂದು ಬಿಕ್ಕಳಿಸಿದಳು. ಅವರಿಬ್ಬರ ಧ್ವನಿಯಲ್ಲಿ ತಬ್ಬಲಿತನ ತುಳುಕುತ್ತಿತ್ತು.

‘ಅವ್ವ, ಕಲೀಜಕ್ಕೆ ಉಪ್ಪು ಸವರಿ ಕೆಂಡದ್ಮೇಲೆ ಸುಟ್ಟು ಕೊಡ್ತೀಯೇನವ್ವ?’ ಎಂದ. ‘ಅಂಗೆ ಆಗ್ಲಿ ನನ್ಮಗನೆ. ಎಷ್ಟು ಚಂದ ಮಾತಾಡ್ತೀಯ ಗಿಣಿಯಂಗೆ’ ಅಂದ ಹೆತ್ತಕರುಳಿಗೆ ತನ್ನ ಮಗ ಕೋಳಿ ಕಲೀಜಕ್ಕಿಂತ ಕುರಿ ಮೇಕೆ ಕಲೀಜ ಇಷ್ಟಪಡ್ತಾನೆ ಅಂಬುದು ಗೊತ್ತೇಇತ್ತು. ಆದರೆ ಹತ್ತು ರೂಪಾಯಿಗೆ ಒಂದು ಕೆಜಿ ಇರುವ ಮಾಂಸ ಕೊಳ್ಳಲು ತಾನೆಷ್ಟು ದಿನ ದುಡಿಯಬೇಕೆಂದು ಲೆಕ್ಕಹಾಕತೊಡಗಿದಳು.

ಏನೇ ಆಗಲಿ ಎಷ್ಟೇ ಆಗಲಿ ಒಮ್ಮೆಯಾದರೂ ಕಲೀಜ ತಂದು ಸುಟ್ಟು ಮಗನಿಗೆ ತಿನ್ನಿಸಲೇಬೇಕೆಂದು ಜೂಣಮ್ಮ ನಿಶ್ಚಯಿಸಿದಳು. ಅವಳ ಮನಸ್ಸಲ್ಲಿ ದರ್ಗಾದ ಬೋರಾ ಸಕ್ಕರೆ, ಝಂಡಾ ಬಟ್ಟೆ, ಮುಂಜಿ ದಿನದ ಖರ್ಚು ವೆಚ್ಚ ಮತ್ತು ೨೧ ನೇ ದಿನದ ಕಾರ್ಯದ ಖರ್ಚು ನೆನೆಸಿಕೊಂಡು ಜೂಣಮ್ಮ ಚಡಪಡಿಸತೊಡಗಿದಳು. ‘ಒಂದೇ ಒಂದು ಸಲ ಕಲೀಜ ಉಪ್ಪು ಸವರಿ ಸುಟ್ಟುಕೊಡವ್ವ’ ಎಂದು ಮತ್ತೊಮ್ಮೆ ದಾದ ಉಸುರಿದ.

ಇದಾದ ನಂತರ ಮತ್ತೆಂದೂ ಜೂಣಮ್ಮ ಮಗನಿಗೆ ಮುಂಜಿ ಮಾಡಿಸಿಕೊಳ್ಳಲು ಹೇಳಲಿಲ್ಲ. ದಾದನ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಪ್ರಾರಂಭವಾದವು. ಅಂಥ ಒಂದಿನ ನವಿಲೇಹಾಳಿನ ವೈದ್ಯ ಸತ್ತಾರ್ ಬೇಗ್‌ರವರು ನಡೆದುಕೊಂಡು ಜೂಣಮ್ಮನ ಮನೆಗೆ ಬಂದರು. ಅವಳ ಮನೆಯಲ್ಲಿ ಪಿಂಜಾರರ ಒಂದು ಸಣ್ಣ ಗುಂಪೇ ನೆರೆದಿತ್ತು. ಸೌಕಾರರ ಮನೆಯಿಂದ ಒಂದು ಹಿತ್ತಾಳೆಯ ಕೊಡಪಾನ ತಂದಿದ್ದರು. ಅದನ್ನು ಬೋರಲು ಹಾಕಿ ಅದರ ಮೇಲೆ ದಾದನನ್ನು ಒಂದು ಹೂವಿನ ಹಾರ ಹಾಕಿ ಬರಿಮೈಯಲ್ಲಿ ಕೂರಿಸಿದರು.

ಅಲ್ಲಿ ನೆರೆದಿದ್ದ ಎಲ್ಲರೂ ತಲೆಯ ಮೇಲೆ ಟೋಪಿ, ಟವಲ್ಲುಗಳನ್ನು ಹಾಕಿಕೊಂಡು ದಾದನ ಸುತ್ತ ಕುಳಿತಿದ್ದರು. ಅವರಾರಿಗೂ ಉರ್ದು ಬರುತ್ತಿರಲಿಲ್ಲವಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಉರ್ದು ಭಾಷಿಕರಾಗಿದ್ದ ಸತ್ತಾರ್ ಬೇಗ್ ಮಾತ್ರ ಉರ್ದುವಿನಲ್ಲಿ ಮಾತನಾಡುತ್ತ ಎಲ್ಲರಿಗೂ ನಿರ್ದೇಶನ ಕೊಡುತ್ತಿದ್ದರು. ಪಿಂಜಾರರಾದರೂ ಉರ್ದು, ಅರಬ್ಬಿ ಓದಿದ್ದ ಮಿಯಾ ಸಾಹೇಬರು ತಮಗೆ ದಕ್ಕಿದ್ದ ಉನ್ನತ ಸ್ಥಾನಕ್ಕೆ ಖುಷಿಪಡುತ್ತ ಕುರಾನಿನ ಸೂರಾಗಳನ್ನು ರಾಗವಾಗಿ ಹೇಳುತ್ತಿದ್ದರು.

ಮನೆ ತುಂಬ ಊದುಬತ್ತಿ ಮತ್ತು ಲೋಬಾನದ ಘಮ ತುಂಬಿ ಮಿಯಾಸಾಹೇಬರ ಪಠಣ ರೋಮಾಂಚನಗೊಳಿಸುತ್ತಿರಲು ಅಲ್ಲಿದ್ದ ಎಲ್ಲರ ಮೈಯಲ್ಲಿ ಭಕ್ತಿಭಾವವು ತುಂಬಿ ಓಲಾಡತೊಡಗಿದರು. ಡಾಕ್ಟರು ತಮ್ಮ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು ಬಂದಿದ್ದ ಕತ್ತರಿಯನ್ನು ಹೊರತೆಗೆದದ್ದೇ ದಾದನು ಜೋರಾಗಿ ಕಿರುಚಿಕೊಳ್ಳತೊಡಗಿದ.

ನಾಲ್ಕೈದು ಜನ ದಾದನನ್ನು ಬಿಗಿಹಿಡಿದದ್ದೇ ತಡ ಸತ್ತಾರ್ ಬೇಗ್‌ರವರು ದಾದನ ಅದನ್ನು ಹಿಡಿದೆಳೆದು ಮುಂದಿನ ಚರ್ಮವನ್ನು ಮಾತ್ರ ಕ್ಷಣಾರ್ಧದಲ್ಲಿ ಕತ್ತರಿಸಿ, ರಕ್ತ ತೊಟ್ಟಿಕ್ಕುತ್ತಿದ್ದ ಆ ಭಾಗಕ್ಕೆ ಕಾಗದದ ಪೊಟ್ಟಣದಲ್ಲಿ ತಂದಿದ್ದ ಪುಡಿಯನ್ನು ಸವರಿದರು. ದಾದ ಉರಿ ತಡೆಯದಾಗಿ ಬಾಯಿ ಬಾಯಿ ಬಡಿದುಕೊಳ್ಳುತ್ತಿರಲು ಅವನನ್ನು ಬಿಗಿಹಿಡಿದಿದ್ದ ಗಂಡಸರು ಹೂವು ಎತ್ತಿದಂತೆ ಎತ್ತಿಕೊಂಡು ಜಮಖಾನದ ಮೇಲೆ ಮಲಗಿಸಿದರು.

ಭಯಂಕರ ನೋವು, ಉರಿ ಮತ್ತು ಎಲ್ಲರೆದುರು ಬೆತ್ತಲೆ ಮಲಗಿರುವುದು ದಾದನಿಗೆ ಸಹಿಸಲಸಾಧ್ಯವಾಗಿತ್ತು. ಜೂಣಮ್ಮನ ಜೀವ ಹಾರಿ ಹಾರಿ ಬೀಳುತ್ತಿತ್ತು. ಅವಳು ದಾದನ ತಲೆ ಮತ್ತು ಎದೆಯ ಮೇಲೆ ಕೈಯಾಡಿಸತೊಡಗಿದಾಗ ಇಬ್ಬರಿಗೂ ಎಷ್ಟೋ ಸಮಾಧಾನವಾಯಿತು. ಪಕ್ಕದಲ್ಲಿ ಕುಳಿತವರೊಬ್ಬರು ಟವಲ್ಲಿನಲ್ಲಿ ನಿಧಾನಕ್ಕೆ ದಾದನ ಕೊಯ್ದ ಭಾಗಕ್ಕೆ ಗಾಳಿ ಹಾಕುತ್ತಿದ್ದರು. ದಾದನ ತುಂಡರಿಸಿದ ಭಾಗವನ್ನು ಅಡಿಗೆಮನೆಯ ಒಲೆಯ ಮುಂದೆ ಸಣ್ಣ ಗುಂಡಿ ತೋಡಿ ಹುಗಿದು ಮಣ್ಣು ಮುಚ್ಚಿದರು.

ಇದಾಗಿ ಒಂದು ವಾರದ ತನಕ ಜೂಣಮ್ಮ ದಾದನ ಬಿಟ್ಟು ಕದಲಲಿಲ್ಲ. ಗಾಯ ನಿಧಾನಕ್ಕೆ ಒಣಗತೊಡಗಿತ್ತು. ದಾದ ನಿಧಾನಕ್ಕೆ ನಡೆಯತೊಡಗಿದ್ದ. ಇಮ್ಮಡಿ ನಾಪತ್ತೆಯಾಗಿ ತಿಂಗಳ ಮೇಲಾಗಿತ್ತು. ಮನೆಯಲ್ಲಿ ಕಾಳುಕಡಿ, ಉಪ್ಪು, ಹುಣಸೆಹಣ್ಣು ಎಲ್ಲ ಖಾಲಿಯಾಗಿ ತನ್ನ ಎಲಡಿಕೆ ಚೀಲದಲ್ಲಿ ಪುಡಿಗಾಸು ಬಿಟ್ಟರೆ ಒಂದೇ ಒಂದು ನೋಟು ಸಹಿತ ಇಲ್ಲ ಎಂಬುದು ಅವಳ ಇಳಿದ ಮುಖಕ್ಕೆ ಕಾರಣವಾಗಿತ್ತು. ಇಡೀ ಹಳ್ಳಿ ತಿರುಗಿದರೂ ಸಾಲ ಹುಟ್ಟುವ ಧೈರ್ಯವಿರಲಿಲ್ಲ. ಜನ ಎಷ್ಟು ಸಲ ಸಾಲ ಕೊಡ್ತಾರೆ ಅಂದುಕೊಂಡಳು.

‘ಜೂಣಮ್ಮ ಮಗಂದು ಮುಂಜಿ ಮಾಡಿಸಿದೆಂತಲ್ಲವ್ವ. ಎಂಗದನೀಗ. ಪಾಡದನ? ಬಿಡೊಂದು ಕಂಟಕ ಪಾರಾದ’ ಎಂದು ಕೂಗಿ ಕರೆದದ್ದು ರಜಕ್ಕೆ ತವರಿಗೆ ಬಂದಿದ್ದ ಚಳ್ಳಕೆರೆ ಬುಡ್ಡಮ್ಮ. ಆಕೆ ಪ್ರತಿಸಲ ತವರಿಗೆ ಬಂದಾಗಲೂ ಜೂಣಮ್ಮನಿಗೆ ಐದು ಹತ್ತು ರೂಪಾಯಿ ಕೊಟ್ಟು ಹೋಗುತ್ತಿದ್ದಳು. ಈ ಸಲವೂ ‘ತಗಳೆ, ದಾದನಿಗೆ ಏನಾರ ಮಾಡಿ ತಿನ್ಸು’ ಎಂದು ತನ್ನ ಎಲಡಿಕೆ ಚೀಲದಿಂದ ಇಪ್ಪತ್ತು ರೂಪಾಯಿ ಕೊಟ್ಟಳು. ಜೂಣಮ್ಮನಿಗೆ ಅಂಥ ಸಂತೋಷ ಬಹುಶಃ ದಾದ ಹುಟ್ಟಿದಾಗಲೂ ಆಗಿತ್ತೋ ಇಲ್ವೊ? ‘ಬಡುವ್ರ ಕಂಡ್ರೆ ಎಷ್ಟು ಮರುಗ್ತೀ ಚಿಗವ್ವ ನೀನು!’ ಎನ್ನುತ್ತ ಜೂಣಮ್ಮ ಆ ನೋಟನ್ನು ತನ್ನ ಎಲಡಿಕೆ ಚೀಲದಲ್ಲಿ ಭದ್ರವಾಗಿಟ್ಟುಕೊಂಡಳು.

ಬೀಬಜ್ಜಿಯ ಮನೆಯಲ್ಲಿ ಅಕ್ಕಿ ಆರಿಸುತ್ತ ಕುಳಿತಿದ್ದ ಜೂಣಮ್ಮನಿಗೆ ಕುರಿ ಕಣ್ಣಿನ ಟೀಪಣ್ಣ, ಕುರಿ ಕೊಯ್ಸಿ ಪಾಲು ಹಾಕುತ್ತಿರುವ ಸುದ್ದಿ ಯಾರಿಂದಲೋ ತಲುಪಿದ್ದೇ ತಡ, ಬಾಣದಂತೆ ಅವನ ಮನೆಗೆ ಓಡಿದಳು. ಸ್ವಲ್ಪ ತಡವಾದರೂ ಸೌಕಾರರ ಎಂಟ್ಹತ್ತು ಮನೆಗಳವರು ಮಾಂಸವನ್ನೆಲ್ಲಾ ಖಾಲಿ ಮಾಡುವ ಸಂಭವವಿತ್ತು. ಅವರಿಗೆ ಒಂದಲ್ಲಾ ಎರಡು ಕುರಿಗಳಾದರೂ ಸಾಲದೆ! ಅವರಲ್ಲದೆ ಹೊಳೆಹೊನ್ನೂರಿನವರು, ಹಂಪಜ್ಜರ ಮನೇರು, ಕೂನಜ್ಜರ ಮನೇರು, ಅಡಬಿ ಸಾಬ್, ಅಂಗಡಿ ಮನೇರು, ಬಜಾರುಸಾಬರ ಮನೇರೆಲ್ಲ ಸೇರಿದರೆ ಜೂಣಮ್ಮನ್ನ ಯಾರು ಕೇಳ್ಬೇಕು.

ಜೂಣಮ್ಮ ಒಂದು ಪಾಲು ಮಾಂಸವನ್ನು ತನಗೆ ಕಾಯ್ದಿರಿಸಲು ಟೀಪಣ್ಣನಿಗೆ ಹೇಳಿ ಹಣವನ್ನು ಮುಂಚಿತವಾಗಿಯೇ ಕೊಟ್ಟುಬಿಟ್ಟಳು. ಅವನ ಕಿವಿಯಲ್ಲಿ ತನ್ನ ಪಾಲಿನ ಗುಡ್ಡೆಯಲ್ಲಿ ಕಲೀಜದ ನಾಲ್ಕು ತುಂಡುಗಳನ್ನು ಹೆಚ್ಚಿಗೆ ಹಾಕಲು ತಿಳಿಸಿದಳು. ಮಗ ದಾದನ ಮುಂಜಿ ಮಾಡಿಸಿರುವ ಕಾರಣ ಕೊಟ್ಟಳು. ಮಕ್ಕಳಿಲ್ಲದ ಟೀಪಣ್ಣ ಕರಗಿಹೋದ. ಅರ್ಧ ಭಾಗ ಕಲೀಜವನ್ನೇ ಹಾಕುವುದಾಗಿ ತಿಳಿಸಿದ. ಟೀಪಣ್ಣನಿಗೆ ದಾದ ತಿಳಿಯದವನೇನಲ್ಲ. ದಾದನ ಬುದ್ಧಿವಂತಿಕೆಯ ಬಗ್ಗೆ ಸಣ್ಣಪ್ಪರ ಅಲ್ಲಾವುದ್ದೀನ್ ಈಗಾಗಲೇ ಒಂದು ಖಂಡುಗ ಹೇಳಿದ್ದಾನೆ!

ಸಂಜೆ ಐದಕ್ಕೆ ಸರಿಯಾಗಿ ಜೂಣಮ್ಮ ಮತ್ತು ದಾದ ಮಾಂಸ ಒಯ್ಯಲು ಟೀಪಣ್ಣನ ಮನೆಯ ಹತ್ತಿರ ಬಂದರು. ದಾದ ಕೆಂಪುವಸ್ತ್ರವನ್ನು ಸೊಂಟಕ್ಕೆ ಸುತ್ತಿಕೊಂಡು ಮೇಲೊಂದು ಬನಿಯನ್ನು ಉಟ್ಟಿದ್ದ. ಟೀಪಣ್ಣನ ಮನೆಯ ಹತ್ತಿರ ಜನರ ಒಂದು ದೊಡ್ಡ ಗುಂಪು ಜಮಾವಣೆಯಾಗಿತ್ತು. ಒಬ್ಬರಿಗೊಬ್ಬರು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಮಾಂಸ ಸಿಗದಿರುವವರು ಜಗಳಾಡುತ್ತಿರಬೇಕೆಂದು ಜೂಣಮ್ಮ ಭಾವಿಸಿದಳು.

ಆದರೆ ವಿಷಯ ಬಹಳ ಗಂಭೀರವೂ, ಸೂಕ್ಷ್ಮವೂ ಆದುದಾಗಿತ್ತು. ಅಂದು ಮುಲ್ಲಾ ಮಿಯಾ ಸಾಹೇಬರು ಊರಲ್ಲಿರಲಿಲ್ಲ. ಊರಿನಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಕುರಿ ಕೋಳಿಗಳನ್ನು ಜುಬಾ ಮಾಡುತ್ತಿರಲಿಲ್ಲ. ಆದರೆ ಕುರಿಕಣ್ಣಿನ ಟೀಪಣ್ಣ ದುಡ್ಡಿನ ಆಸೆಗೆ ತಾನೇ ಕುರಿ ಹಿಡ್ದು ಕೊಯ್ದಿದ್ದಾನೆ. ಅವನಿಗೆ ಬಿಸ್ಮಿಲ್ಲಾ ಅನ್ನಕೆ ಸೈತ ಬರಲ್ಲ. ಅವನು ಮಾಡಿರುವುದು ಹಲಾಲ್ ಅಲ್ಲ. ಅದು ಹರಾಮ್. ಅವನತ್ರ ಇವತ್ತು ಮಾಂಸ ತಗೋಬಾರ‍್ದು ತಿನ್ನಬಾರ‍್ದು ಎಂಬ ಸುದ್ದಿ ಹೇಗೋ ಊರಲ್ಲೆಲ್ಲ ಹಬ್ಬಿತ್ತು. ಇದು ನಿಜವೋ ಸುಳ್ಳು ವದಂತಿಯೋ ತಿಳಿದುಕೊಳ್ಳಲು ಇಡೀ ಊರಿನ ಪಿಂಜಾರರು ಅಲ್ಲಿ ಸೇರಿ ದೊಂಬಿ ಎದ್ದಿತ್ತು.

‘ಹರಾಮ್ ಮಾಂಸ ತಿನ್ತರೇನೋ ಟೀಪು?’
‘ಹರಾಮ್ ಮಾಂಸ ತಿನ್ಸಿ ಎಲ್ರುನ್ನೂ ನರಕಕ್ಕೆ ಕಳಿಸಕೆ ಪ್ಲಾನ್ ಮಾಡಿದಿಯೇನಲೇ?’
‘ದುಡ್ಡಿನಾಸೆಗೆ ಹಿಂಗೆ ಮಾಡ್ತರೇನಲೇ ಬಾಡ್ಕೌ’
‘ಏಯ್, ಟೀಪಣ್ಣ ಅಂಥವ್ನಲ್ಲ ಬಿಡ್ರಲೇ’ ಇತ್ಯಾದಿ ಕೂಗುಗಳು ಕೇಳುತ್ತಿದ್ದವು.

ಇದರಿಂದೆಲ್ಲ ರೊಚ್ಚಿಗೆದ್ದ ಅನ್ವರ್, ತಾಜು, ಖಾಜಾ ಸಾಹೇಬ್ ಮುಂತಾದವರು ಕುರಿಕಣ್ಣಿನ ಟೀಪಣ್ಣನ್ನ ಬಾರಿಸಲು ಮುಂದಾದರು. ಆದರೆ ಚಾಂದ್‌ಪೀರ್ ಮೇಷ್ಟ್ರು ‘ತಡಿರ‍್ಲೇ, ಅದೇನು ಹಿಂದೆ ಮುಂದೆ ವಿಚಾರ ಮಾಡಿ ಮುಂದುವರೀರಿ’ ಎಂದು ಎಲ್ಲರನ್ನೂ ತಡೆದರು.

ಟೀಪಣ್ಣ ಆಗ ‘ಚಂದಣ್ಣ ಮೇಷ್ಟ್ರೇ, ಮುಲ್ಲಾ ಮಿಯಾ ಸಾಹೇಬರು ಇವತ್ತು ಊರಲಿಲ್ಲ ಅನ್ನದು ಎಲ್ರಿಗೂ ಗೊತ್ತೇ ಐತಿ. ಆದ್ದರಿಂದ ಸಣ್ಣಪ್ಪರ ಅಲ್ಲಾವುದ್ದೀನ್ ಸಾಹೇಬರು ಇಂಜಿನಿಯರಾದ್ರೂ ಬೇಜಾರು ಮಾಡಿಕೊಳ್ಳದೇ ನನ್ನ ಮಾತಿಗೆ ಬೆಲೆ ಕೊಟ್ಟು ಜುಬಾ ಮಾಡಿ ಹೋದರು. ಅದೇನೋ ಅರ್ಜೆಂಟ್ ದಾವಣಗೆರೆಗೋಗಿದ್ದಾರೆ. ರಾತ್ರಿ ಬಸ್ಸಿಗೆ ವಾಪಸ್ ಬರ‍್ತಾರಂತೆ.

ಅವ್ರೂ ಮಾಂಸಕ್ಕೆ ದುಡ್ಡು ಕೊಟ್ಟೋಗಿದ್ದಾರೆ. ನಾನೀಗ ಕುರಾನ್ ಮೇಲೆ ಕೈಯಿಟ್ಟು ಆಣೆ ಮಾಡಿ ಹೇಳ್ತೀನಿ. ಅವುನ್ಯಾವನು ಸುಳ್ಳು ಸುದ್ದಿ ಹಬ್ಬಿಸಿರಾನು ಆಣೆ ಮಾಡ್ಲಿ ನೋಡಾನ’ ಅಂದ. ಅಲ್ಲೇ ಇದ್ದ ಸೌಕಾರ್ ಹೊನ್ನೂರ್ ಸಾಹೇಬರು ‘ಇಂಥ ಸಣ್ಣಪುಟ್ಟ ವಿಷಯಕ್ಕೆ ಯಾಕೆ ಕುರಾನ್ ಮೇಲೆ ಆಣೆ ಮಾಡ್ತೀರಿ? ಬ್ಯಾಡ. ಅಲ್ಲಾವುದ್ದೀನ್ ಲಾಸ್ಟ್ ಬಸ್ಸಿಗೆ ಬರ‍್ತಾನೆ. ಅವ್ನೇ ಗ್ರಾಮಸ್ಥರೆದುರಿಗೆ ಕುಲ್ಲಂಕುಲ್ಲ ಎಲ್ಲ ಹೇಳಿಬಿಡ್ಲಿ. ಮುಗ್ದೇ ಹೋತಪ್ಪ. ಹೌದಿಲ್ಲೋ?’ ಎಂದು ಸುಮ್ಮನಾಗಿಸಿದರು.

‘ಅಲ್ಲೀತಂಕ ಕಾಯ್ಬೇಕು’ ‘ಇದೊಳ್ಳೆ ಆತಪ್ಪ ಯಾಕೋ ಬಾಯ್ಕೆಟ್ಟುತ್ತು ಮಾಂಸ ತಿನ್ನಾನ ಅಂದ್ರೆ ಇದೇನೋ ಅಡ್ಡ’ ಹೀಗೆ ಮಾತುಗಳು ಅಲ್ಲಲ್ಲಿ ಕೇಳಿಬಂದವು. ‘ಟೀಪಣ್ಣ ಬರ‍್ಲಿ ಬಿಡ್ರಿ ಅಲ್ಲಾವುದ್ದೀನ್. ಬಂದು ಹೇಳಿಕೆ ಕೊಡ್ಲಿ. ನಾನ್ಯಾಕೆ ಹೆದುರ್ಲಿ? ನಾನ್ಯಾಕೆ ಸುಳ್ಳು ಹೇಳ್ಲಿ? ನಾನು ನಮ್ಮಪ್ಪಗುಟ್ಟಿದಿನಲೇ! ಈ ಸುಳ್ಳು ಸುದ್ದಿ ಹಬ್ಸಿರೋ ಸೂಳೆಮಕ್ಳು ಸರ್ವನಾಶ ಆಗೋಗ್ಲಿ...’ ಸಜ್ಜನ ಟೀಪಣ್ಣನಿಗೆ ಸಿಟ್ಟು ಬಂದಿತ್ತು.

‘ಯಾಕೆ ಬೇಕಪ್ಪಾ ಮಾರಾಯ. ನಮಗೆ ಇವತ್ತಿನ ಮಾಂಸವೇ ಬೇಡ. ಇನ್ನೊಂದಿನ ತಿಂದ್ರಾತು. ನಾವು ಮುಂಗಡಕೊಟ್ಟ ದುಡ್ಡ ವಾಪಸ್ ಕೊಡು. ಮುಂದಿನ್ಸಲ ನೋಡ್ಕೆಂದ್ರಾತು.’ ಹೀಗೆ ನಾನಾ ನಮೂನಿ ಮಾತು ಕೇಳಿಬಂದವು.

ಟೀಪಣ್ಣ ಜೂಣಮ್ಮ ನಿನ್ಗೂ ದುಡ್ಡು ವಾಪಸ್ ಬೇಕೇನವ್ವ? ಎಂದ.

ಜೂಣಮ್ಮ ಬ್ಯಾಡ ಎಂದಳು. ದಾದ ಕಲೀಜ ಬೇಕು ಎಂದ. ಅಲ್ಲಿದ್ದವರೆಲ್ಲಾ ಹೌದು ದಾದ ಎಂದು ನಕ್ಕರು.

ಏಳು ಗಂಟೆ ಆಗಿತ್ತು. ರಾತ್ರಿಯ ಮಾಂಸದ ಊಟ ಕಲೀಜ ಆಸೆಯಲ್ಲಿ ಮಧ್ಯಾಹ್ನದ ಊಟದ ನಂತರ ಏನೂ ತಿಂದಿದ್ದಿಲ್ಲ. ಅಲ್ಲಾವುದ್ದೀನ್ ಬರೋತಂಕ ಕಾಯ್ಲೇಬೇಕಿತ್ತು. ಅಲ್ಲಾವುದ್ದೀನ್ ದಾದನಿಗೆ ಗೌಸ್ ಸಾಹೇಬರ ಹಿಟ್ಟಿನ ಮಿಲ್ಲಿನಲ್ಲಿ ಚೆಸ್ ಕಲಿಸುತ್ತಿದ್ದ. ‘ಇನ್ನು ಹತ್ತು ವರ್ಷದಲ್ಲಿ ಇಲ್ಲಿಂದ ಒಬ್ಬ ಚಾಂಪಿಯನ್ ಬರ್ತಾನೆ. ನವಿಲೇಹಾಳು ವರ್ಲ್ಡ್ ಫೇಮಸ್ ಆಗುತ್ತೆ’ಅಂತ ಅಲ್ಲಾವುದ್ದೀನ್ ಎಷ್ಟೋಸಲ ಹೇಳಿದ್ದ.

ದಾವಣೆಗೆರೆಯಿಂದ ನವಿಲೇಹಾಳಿಗೆ ಬಸ್ಸಿರುವುದು ರಾತ್ರಿ ಎಂಟು ಮೂವತ್ತಕ್ಕೆ. ಟೀಪಣ್ಣನ ಮನೆಯೆದುರೇ ಬಸ್ಸು ಬರುವ ರೋಡಿತ್ತು. ದಾದನ ಹೊಟ್ಟೆ ಹಸಿದು ಬೆನ್ನಿಗೆ ಹತ್ತಿಕೊಂಡಿತ್ತು. ಜೂಣಮ್ಮ ದಾದನಿಗೆ ಮುಂಜಿ ಮಾಡಿಸಿ ಒಂದು ವಾರವಾದರೂ ತನ್ನ ಯೋಗ್ಯತೆಗೆ ಒಂದೇ ಒಂದು ಸಲ ಮಾಂಸದ ಸಾರು ಮಾಡಲು ಆಗದ್ದಕ್ಕೆ ತನ್ನನ್ನೇ ತಾನು ಶಪಿಸಿಕೊಂಡಳು.

ಕಂದನ ಕಲೀಜದ ಕನಸು ಸಹ ಈಡೇರಿರಲಿಲ್ಲ. ತ್ಯಾವಣಿಗಿಗೆ ಹೋದರೆ ದಿನವೂ ಕಲೀಜ ತರಬಹುದು. ದಾದ ಯಾಕೋ ಇದ್ದಕ್ಕಿದ್ದ ಹಾಗೆ ಸಣಕಲು ಕಡ್ಡಿಯಂತೆ ಕಾಣತೊಡಗಿದ. ಕೆನ್ನೆಯೆಲ್ಲಾ ಬತ್ತಿಹೋಗಿ ಕಣ್ಣುಗಳು ಗೇಣುದ್ದ ಒಳಕ್ಕೆ ಇಳಿದಿದ್ದವು. ದಾದನನ್ನು ಹತ್ತಿರಕ್ಕೆ ಎಳೆದುಕೊಂಡಳು. ಬಹಳ ಹಗುರವಾಗಿದ್ದಾನೆನಿಸಿತು. ಬತ್ತಿ ಹೋದ ತವರು, ದಿಕ್ಕಿಲ್ಲದ ಗಂಡನ ಮನೆ, ಸಮಯಕ್ಕಿಲ್ಲದ ಗಂಡ, ಜೂಣಮ್ಮನ ಕಣ್ಣುಗಳು ಮಂಜಾದವು.

ಅವ್ವ, ನಬಿ ಹೇಳ್ತಾನೆ: ‘ಉತ್ತುತ್ತಿ ಕೊಬರಿ ಲವಂಗ ಯಾಲಕ್ಕಿ ಘಮಘಮ ಅನ್ನುವ ಉತ್ತುತ್ತಿ ಕಾರ ಮಾಡ್ತಾರಂತೆ. ಮುಂಜಿ ಆದೋರು ತಿಂದ್ರೆ ಏನೂ ನೋವಾಗಲ್ವಂತೆ.’

ನಬಿ ಹೇಳ್ತಾನೆ: ‘ಕೈಮ ತಿನ್ಬೇಕು. ಹೈಕ್ಲಾಸ್ ರುಚಿ. ಗಾಯ ಚಣಾಮತ್ತಿಗೆ ಒಣಗೋಗುತ್ತೆ.’

ನಬಿ ಹೇಳ್ತಾನೆ: ‘ಆಹಾ! ಮುಂಜಿ ಮಾಡಿದೋರ‍್ನ ನೌಶು (ಮಧುಮಗ) ಅಂತಾರೆ. ಏನು ಮಜ ಮುಂಜಿ ಮಾಡಿಸ್ಕಳಾದು!’

ಮಗನಾಡುತ್ತಿದ್ದ ಮಾತುಗಳು ಜೂಣಮ್ಮನಿಗೆ ಬರೆ ಹಾಕುತ್ತಿದ್ದವು. ದಾದನಿಗೆ ಉತ್ತುತ್ತಿಕಾರ ಬ್ಯಾಡವಂತೆ. ದಾದನಿಗೆ ಕೈಮದ ಉಂಡೆನೂ ಬ್ಯಾಡವಂತೆ. ಅವನಿಗೆ ನೌಶು ಅನೋದೂ ಬ್ಯಾಡವಂತೆ. ಅವನಿಗೆ ಉಪ್ಪು ಹಚ್ಚಿ ಕಲೀಜದ ತುಂಡುಗಳನ್ನು ನಿಗಿನಿಗಿ ಕೆಂಡದ ಮೇಲೆ ಸುಟ್ಟುಕೊಟ್ರೆ ಸಾಕಂತೆ!

ಪೀರ‍್ಲಬ್ಬದಲ್ಲಿ ಊರಿನ ಜನರೆಲ್ಲ ಕೊಂಡ ಹಾಯ್ತರೆ. ಜೂಣಮ್ಮ ತಾನೂ ಕೊಂಡಕ್ಕೆ ಹಾರಿದಳು. ಜನರ ಹಿಂದೆ ಓಡಿದಳು. ಅರೆರೆ! ಒಂದೇ ಕಡೆ ನಿಂತುಬಿಟ್ಟಳು. ಸೀದ ಶಬ್ದ ವಾಸನೆ. ಜೂಣಮ್ಮ ಬೆಚ್ಚಿ ಎಚ್ಚರಾಗುತ್ತಾಳೆ.

ದಾದ ಎಷ್ಟನೆಯ ಸಲವೋ ಮಾಂಸದ ಗುಡ್ಡೆಗಳಲ್ಲಿರುವ ಕಲೀಜದ ಕಡೆ ಕಣ್ಣು ಹೊರಳಿಸಿದ. ಚಾಕ್ಲೇಟ್ ಬಣ್ಣದ, ನುಣುಪಾದ, ಮುಟ್ಟಿದರೆ ಜಾರುವಂತಹ ಕೆಂಡದಲ್ಲಿ ಸುಟ್ಟು ಬಾಯಿಗಾಕಿದರೆ ಪುಡಿಪುಡಿಯಾಗುವ ವಿಶಿಷ್ಟ ಪರಿಮಳ ಮತ್ತು ರುಚಿಯ ಕಲೀಜದ ತುಂಡುಗಳು ದೂರದಿಂದಲೇ ಹೊಳೆಯುತ್ತಿವೆ.

ಎಂಟು ಮೂವತ್ತು ಆಗೇಬಿಡ್ತು. ಆರಡಿ ಉದ್ದದ ಕುರಿಕಣ್ಣಿನ ಟೀಪಣ್ಣ ಮೈಯನ್ನು ಹಿಡಿಮಾಡಿಕೊಂಡು ಬಸ್ಸು ಕಾಯುತ್ತಿದ್ದಾನೆ. ತನ್ನ ಮಾನ ಮರ್ಯಾದೆಯ ಪ್ರಶ್ನೆ. ಬಸ್ಸು ಬಾರದೇ ಹೋದರೆ? ಅಲ್ಲಾವುದ್ದೀನ್ ಅಕಸ್ಮಾತ್ ಬಾರದೇ ಹೋದರೆ? ನೂರಾರು ರೂಪಾಯಿ ಮಾಂಸ ನಷ್ಟ, ಮಾನ ಮರ್ಯಾದೆ ನಷ್ಟ, ಸಮಾಜದಿಂದ ಬಹಿಷ್ಕಾರ?

ಮನೆಯೆದುರೇ ಬಸ್ ಬರುವ ರಸ್ತೆ. ನೂರಾರು ಜನ ಕಟ್ಟೆ ಮೇಲೆ, ನೆಲದ ಮೇಲೆ, ರೋಡಿನ ಮೇಲೆ. ಮಾತು, ಬೀಡಿ ಹೊಗೆ ವಾಸನೆ. ಮತ್ತೆ ಹದಿನೈದು ನಿಮಿಷ ಉರುಳಿದವು.

ಟೀಪಣ್ಣ: ‘ಜೂಣಮ್ಮ ನಿನ್ನ ಮಗನ್ನ ಕರ‍್ಕಂಡು ಮನೀಗೋಗವ್ವ. ಹಸಿ ಮೈಯೋನು. ನಾನೇ ಮಾಂಸ ಕಳಿಸ್ತೀನಿ ನಿಮ್ಮನೆಗೆ.’

ಜೂಣಮ್ಮ: ‘ಬ್ಯಾಡ ಬಿಡಣ್ಣ. ಎಷ್ಟೊತ್ತಾರ ಆಗ್ಲಿ. ಅಲ್ಲೂನನ್ನು ಕಂಡೇ ಹೋಗದು‘

ದಾದ: ‘ಕಲೀಜ ತಗಂಡೇ ಹೋಗದು’

ದೂರದಿಂದ ವಾಹನವೊಂದು ಬರುತ್ತಿದೆ. ಲೈಟು ಹೊಳೆಯುತ್ತಿದೆ. ಶಬ್ದ ಕೇಳುತ್ತಿದೆ. ಹತ್ತಿರ ಹತ್ತಿರ ಹತ್ತಿರವಾಯ್ತು. ಅಲ್ಲ ಸ್ವಾಮಿ, ಅದು ಲಾರಿ, ಬಸ್ಸಲ್ಲ.

‘ಸುಳ್ಳು ಸುದ್ದಿ ಹಬ್ಬಿಸಿ ಏನ್ ಕೆಲ್ಸ ಮಾಡ್ಬಿಟ್ರು ನೋಡ್ರಿ’ ಅಂದ ಟೀಪಣ್ಣ.

‘ಇದು ದೇವರ ಹಾದಿಯ ಪರೀಕ್ಷೆ. ತೀರ್ಮಾನ ಆಗ್ಲಿ ಬಿಡಲೇ ಟೀಪು’

‘ಆಗ್ಲಿ ಬಿಡಣ್ಣ. ತಪ್ಪು ಮಾಡ್ದೋರು ಹೆದರ‍್ಬೇಕು. ಹೆದರ‍್ತಾರೆ. ನಾನ್ಯಾಕೆ ಹೆದರ್ಲಿ ಅಪ್ಪನಿಗುಟ್ಟಿದಿನ್ನಾನು. ಆದ್ರೆ ಮುಂಜಿ ಮಾಡಿರೋ ದಾದನ್ನ ಮತ್ತು ಅವ್ರಮ್ಮನ್ನ ನೋಡ್ದಾಗ ಕರುಳು ಚುರುಕ್ಕಂತವ’

ಕೊನೆಗೊಮ್ಮೆ ದೂರದಲ್ಲಿ ಬೆಳಕು ಕಾಣಿಸಿತು. ವಾಹನ ಕುಣಿದಂತೆ ಬೆಳಕೂ ಕುಣಿಯಿತು. ಮೇಲಕೆ ಕೆಳಗೆ. ವಾಹನ ನಿಧಾನವಾಗಿ ಚಲಿಸುತ್ತಿದೆ. ಹಳ್ಳಿ ರಸ್ತೆ. ಗುಂಡಿಗೊಟ್ರ. ಟೀಪಣ್ಣನ ಮನೆ ಮುಂದೆ ನೂರಾರು ಜನ. ಏನಾಯಿತೋ ಎಂದು ಬಸ್ ನಿಲ್ಲಿಸಿದ ಡ್ರೈವರ್.

ಬಸ್ಸಿನಲ್ಲಿ ಸ್ವಲ್ಪ ಜನ ಮಾತ್ರ ಇದ್ದರು. ಒಬ್ಬೊಬ್ಬರಾಗಿ ಇಳಿದರು. ಕಿಟಕಿ ಬಾಗಿಲಲ್ಲಿ ಇಣುಕಿ ನೋಡಿದರು ಜನ. ಎಲ್ಲಿ ಅಲ್ಲಾವುದ್ದೀನ್?

ಅಲ್ಲಿ ಅದಾಗಲೇ ಕೆಳಗಿಳಿದಿದ್ದಾನೆ. ಜನರು ವಿಷಯ ತಿಳಿಸಿದ್ದಾರೆ. ಅಲ್ಲಾವುದ್ದೀನ್ ಹೇಳುತ್ತಿದ್ದಾನೆ ‘ಲೇ ಅದುಕ್ಕೆ ನಾನು ನಿಮ್ಮನ್ನು ಬೈಯ್ಯಾದು. ಟೀಪಣ್ಣನಿಗೆ ಈಗ ಅರವತ್ತು ವರ್ಷ. ನೀವು ನೋಡ್ತಾನೆ ಇದೀರಿ. ಅಂಥ ಸಾಚಾ ಮನುಷ್ಯ ಊರವರಿಗೆ ಹರಾಮ್ ಮಾಂಸ ಯಾಕೆ ತಿನ್ನುಸ್ತಾನೆ? ನಾನೇ ಪದ್ಧತಿ ಪ್ರಕಾರ ಕುರಿಯ ಜುಬಾ ಮಾಡಿದಿನಿ. ಯಾರೋ ಸುಮ್ಮಸುಮ್ಮನೆ ಸುಳ್ಳು ಸುದ್ದಿ ಹಬ್ಸಿ ಎಲ್ರಿಗೂ ತೊಂದರೆ ಕೊಟ್ಟಿದಾರೆ.’ ಜೂಣಮ್ಮನ ಕಡೆ ತಿರುಗಿ ‘ನಿನ್ನ ಮಗ ಅದ್ಭುತ. ಅವ್ನಿಗೆ ಗಾಡ ಉಣ್ಣಕಾಕೋಗು. ಇಗ ದಾದನಿಗೆ ಒಂದು ಜತೆ ಬಟ್ಟೆ ತಂದಿದೀನಿ. 21 ನೇ ದಿನದ ಕಾರ್ಯದಲ್ಲಿ ಅವ್ನಿಗೆ ಉಡ್ಸು’ ಎಂದ ಅಲ್ಲಾವುದ್ದೀನ್.
ಜೂಣಮ್ಮ ಹನಿಗಣ್ಣಾಗಿ ‘ನೀನು ನೂರೊರ್ಷ ಬಾಳಪ್ಪ’ ಅಂದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT