ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜು ಹೇಳಿದ ತೋಳದ ಕಥೆ

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಾಜು ಹೊಸಹಳ್ಳಿ ಎಂಬ ಊರಿನ ಪುಟ್ಟ ಬಾಲಕ. ಅವನಿಗೆ ಕಥೆ ಕೇಳುವುದೆಂದರೆ ಬಹಳ ಇಷ್ಟ. ಅವನ ಅಮ್ಮ ಅವನಿಗೆ ದಿನಾಲೂ ಹೊಸಹೊಸ ಕಥೆಗಳನ್ನು ಹೇಳುತ್ತಿದ್ದಳು. ರಾಜು ಕಥೆ ಕೇಳಿದ ನಂತರ ಅಮ್ಮನೊಡನೆ ಕಥೆಯ ಬಗ್ಗೆ ಮಾತನಾಡುತ್ತಿದ್ದ. ಒಂದು ದಿನ ಅಮ್ಮ ಅವನಿಗೆ ‘ತೋಳ ಬಂತಲ್ಲೋ ತೋಳ’ ಎಂಬ ಕಥೆಯನ್ನು ಹೇಳಿದಳು.

ಆ ಕಥೆಯಲ್ಲಿ ರಾಜುವಿನಂತೆಯೇ ಇರುವ ಪುಟ್ಟ ಹುಡುಗನೊಬ್ಬನಿರುತ್ತಾನೆ. ಅವನು ಆಡು ಮೇಯಿಸಲು ದಿನವೂ ಹತ್ತಿರದ ಕಾಡಿಗೆ ಏಕಾಂಗಿಯಾಗಿ ಹೋಗುತ್ತಾನೆ. ಅಲ್ಲಿ ಒಬ್ಬನೇ ಕುಳಿತು ಬೇಸರವಾದಾಗ  ಏನನ್ನಾದರೂ ಮಾಡಬೇಕೆಂದು ಅನಿಸುತ್ತದೆ. ಹಾಗಾಗಿ ಎತ್ತರದ ಬಂಡೆಯೊಂದನ್ನೇರಿ ಗಟ್ಟಿಯಾಗಿ, ‘ತೋಳ ಬಂತಲ್ಲೋ ತೋಳ’ ಎಂದು ಅರಚುತ್ತಾನೆ.

ಊರಿನವರೆಲ್ಲ ಆಡುಗಳನ್ನು ಹಿಡಿಯಲು ತೋಳ ಬಂದಿರಬಹುದೆಂದು ಭಾವಿಸಿ ಕೈಗೆ ಸಿಕ್ಕ ಆಯುಧಗಳನ್ನು ಎತ್ತಿಕೊಂಡು ಕಾಡಿನೆಡೆಗೆ ದೌಡಾಯಿಸುತ್ತಾರೆ. ಆದರೆ ಹುಡುಗ ಅಲ್ಲಿ ಬಂಡೆಯ ಮೇಲೆ ನಗುತ್ತಾ ನಿಂತಿರುತ್ತಾನೆ. ಅವರೆಲ್ಲ ಅವನಿಗೆ ಬೈಯುತ್ತಾ ಅಲ್ಲಿಂದ ತೆರಳುತ್ತಾರೆ. ಹೀಗೆ ಮತ್ತೆರಡು ಸಲ ಅವನು ಊರಿನವರನ್ನೆಲ್ಲ ಮೂರ್ಖರನ್ನಾಗಿಸುತ್ತಾನೆ.

ಹೀಗಿರುವಾಗ ಒಮ್ಮೆ ಹುಡುಗ ಆಡು ಮೇಯಿಸುತ್ತಿರುವಾಗ ನಿಜವಾಗಿ ತೋಳ ಬಂದುಬಿಡುತ್ತದೆ. ಹುಡುಗ ಬಂಡೆಯೇರಿ, ‘ತೋಳ ಬಂತಲ್ಲೋ ತೋಳ’ ಎಂದು ಕೂಗುತ್ತಾನೆ. ಊರಿನವರೆಲ್ಲ ಮಾಮೂಲಿನಂತೆ ಇದು ಅವನ ಕಿತಾಪತಿಯೆಂದು ತಿಳಿದು ಆ ಕಡೆಗೆ ಮುಖವನ್ನೂ ಹಾಕುವುದಿಲ್ಲ. ಆಡು ಹಿಡಿಯಲು ಬಂದ ತೋಳ ಹುಡುಗನನ್ನು ತಿಂದು ಹೋಗುತ್ತದೆ.

ಅಮ್ಮ ಕಥೆ ಹೇಳಿ ಮುಗಿಸುತ್ತಿದ್ದಂತೆ ರಾಜುವಿನ ಮುಖ ಬಾಡಿತು. ‘ಕಥೆ ಚೆನ್ನಾಗಿರಲಿಲ್ವಾ ಪುಟ್ಟಾ’ ಎಂದು ಅಮ್ಮ ಕೇಳಿದಳು. ಇಲ್ಲ ಎನ್ನುವಂತೆ ತಲೆಯಲ್ಲಾಡಿಸಿದ ರಾಜು. ‘ಹಾಗಾದರೆ ಕಥೆಯನ್ನು ಬದಲಾಯಿಸೋಣವೇನು?’ ಎಂದು ಅಮ್ಮ ಕೇಳಿದಳು. ರಾಜು ಖುಶಿಯಿಂದ ತಲೆಯಲ್ಲಾಡಿಸುತ್ತ ಅಮ್ಮನ ಮುಂದೆ ಕುಳಿತ.

ಈಗ ಕಥೆಯನ್ನು ಮೊದಲಿನಿಂದ ಪ್ರಾರಂಭಿಸೋಣ. ಒಂದು ಕೆಲಸ ಮಾಡೋಣ. ಈ ಸಲ ಕಥೆ ಹೇಳೋದು ನೀನು. ಕೇಳೋದು ನಾನು. ಇದೇ ಕಥೆಯನ್ನು ನೀನು ಹೇಳಿದರೆ ಹೇಗಿರುತ್ತದೆ ನೋಡೋಣ ಎಂದು ಅಮ್ಮ ಗಲ್ಲಕ್ಕೆ ಕೈಯ್ಯಾನಿಸಿ ಮಗುವಿನಂತೆ ಕುಳಿತಳು. ರಾಜು ಕಥೆ ಹೇಳತೊಡಗಿದ. ಹುಡುಗ ಆಡು ಮೇಯಿಸಿದ್ದು, ಜನರನ್ನೆಲ್ಲ ಮೂರ್ಖರನ್ನಾಗಿಸಿದ್ದು, ಜನರೆಲ್ಲ ಅವನಿಗೆ ಬೈದದ್ದು... ಇನ್ನೇನು ನಿಜವಾದ ತೋಳ ಬರುತ್ತದೆ.

ಅಮ್ಮ ಆಸಕ್ತಿಯಿಂದ ಕೇಳುತ್ತಿದ್ದಳು. ಅವಳಿಗೆ ಗೊತ್ತಿತ್ತು ರಾಜುವಿಗೆ ಅವನದೇ ವಯಸ್ಸಿನ ಹುಡುಗ ತೋಳದ ಬಾಯಿಗೆ ಸಿಕ್ಕಿದ್ದು ಎಳ್ಳಷ್ಟೂ ಇಷ್ಟವಿಲ್ಲವೆಂದು. ರಾಜು ಕಥೆಯನ್ನು ಮುಂದುವರೆಸಿದ.

ಈಗ ನಿಜವಾದ ತೋಳ ಬಂತು. ಹುಡುಗ ಬಂಡೆಯನ್ನೇರಿ ‘ತೋಳ ಬಂತಲ್ಲೋ ತೋಳ’ ಎಂದು ಕೂಗಿದ. ಊರಿನವರೆಲ್ಲ ಕಾಡಿನ ಕಡೆಗೆ ಓಡಿ ಬಂದರು. ಆದರೆ ಈ ಸಲ ಬರುವಾಗ ಸದ್ದು ಮಾಡದೆ ನಿಧಾನವಾಗಿ ಕಳ್ಳ ಹೆಜ್ಜೆಯಿಡುತ್ತಾ ಬಂದರು. ಹುಡುಗ ಕುಳಿತ ಬಂಡೆಯ ಹತ್ತಿರದ ಪೊದೆಯ ಹಿಂದೆ ಕುಳಿತು ನೋಡುತ್ತಾರೆ, ತೋಳ ನಿಜವಾಗಿಯೂ ಬಂದಿದೆ. ತಾವು ತಂದಿರುವ ಆಯುಧಗಳನ್ನೆಲ್ಲ ಸಜ್ಜಾಗಿಸಿಟ್ಟುಕೊಂಡು ಕ್ಷಣಕಾಲ ಕಾದರು. ತೋಳ ಇನ್ನೇನು ಹುಡುಗನ ಹತ್ತಿರ ಬಂತು ಎನ್ನುವಾಗ….

ಅಮ್ಮನಿಗೆ ಈಗ ಸುಮ್ಮನಿರಲಾಗಲಿಲ್ಲ. ಅವಳೇ ನಡುವೆ ಬಾಯಿಹಾಕಿ ಹೇಳಿದಳು. ‘ಇನ್ನೇನು ಹುಡುಗನನ್ನು ತಿನ್ನಬೇಕೆನ್ನುವಾಗ, ಜನರೆಲ್ಲ ಒಮ್ಮೆಲೆ ನುಗ್ಗಿಬಂದು ತೋಳವನ್ನು ಕೊಂದರು.’ ರಾಜು ಕೋಪವನ್ನು ನಟಿಸುತ್ತಾ ಹೇಳಿದ, ‘ಯಾರು ಹೇಳಿದರು ಹಾಗೆಂದು? ತೋಳ ಯಾಕೆ ಸಾಯಬೇಕು? ಕಥೆ ಹೇಳುತ್ತಿರುವುದು ನಾನು. ನೀನು ಸುಮ್ಮನೆ ಕೇಳಬೇಕು. ಅವರೆಲ್ಲಾ ಓಡಿಬಂದು ತೋಳವನ್ನು ಸುತ್ತುವರೆದು ಜೋರಾಗಿ ಗದ್ದಲವೆಬ್ಬಿಸಿ ಅದನ್ನು ಓಡಿಸಿದರು. ಹುಡುಗನಿಗೀಗ ತೋಳ ಪ್ರತ್ಯಕ್ಷವಾದಾಗಿನ ನಿಜವಾದ ಅನುಭವವಾಗಿತ್ತು. ಹಾಗಾಗಿ ಮುಂದೆಂದೂ ಜನರನ್ನು ಮೂರ್ಖರಾಗಿಸುವ ಕಾರ್ಯಕ್ಕೆ ಕೈಹಾಕಲಿಲ್ಲ’

ಅಮ್ಮ ರಾಜುವಿನ ಕಥೆಯ ವೈಖರಿಗೆ ಸೋತಳು. ಹೌದಲ್ಲ, ರಾಜುವೂ ಚಿಕ್ಕವನಿದ್ದಾಗ ಎಷ್ಟು ಹೇಳಿದರೂ ಕೇಳದೆ ದೀಪವನ್ನು ಮುಟ್ಟಲು ಹೋಗುತ್ತಿದ್ದ. ಆಗೊಮ್ಮೆ ತಾನು ಅವನ ಕೈಯನ್ನು ದೀಪದ ಹತ್ತಿರ ಹಿಡಿದು ಬಿಸಿಯೆಂದರೇನೆಂದು ಅನುಭವ ಮಾಡಿಸಿದ್ದನ್ನು ನೆನಪಿಸಿಕೊಂಡು ನಕ್ಕಳು. ನಾಳೆ ಇದನ್ನೇ ಕಥೆಯಾಗಿ ಹೇಳೋಣವೆಂದುಕೊಂಡಳು.

–ಸುಧಾ ಆಡುಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT