ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಟಿ ಬೇರೆ; ಹಾರ್ಟು ಒಂದೇ!

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಹಳಷ್ಟು ರಾಜಕಾರಣಿಗಳು ಪಕ್ಷಭೇದ ಮರೆತು ಪರಸ್ಪರ ಸ್ನೇಹ ಕಾಯ್ದುಕೊಂಡರೆ, ಕಾರ್ಯಕರ್ತರು ಮಾತ್ರ ಪಕ್ಷಕ್ಕಾಗಿ, ತಮ್ಮ ನಾಯಕರ ಮೇಲಿನ ಕುರುಡು ಅಭಿಮಾನಕ್ಕಾಗಿ ಹಾವು–ಮುಂಗುಸಿ ರೀತಿ ದ್ವೇಷ ಕಾರುತ್ತಾರೆ ಎನ್ನುವುದಕ್ಕೆ ಬೆಂಗಳೂರಿನ ಆರ್.ಟಿ.ನಗರದಲ್ಲಿ ಇತ್ತೀಚೆಗೆ ನಡೆದ ‘ಮೊಹಲ್ಲಾ ಕ್ಲಿನಿಕ್‌’ ಉದ್ಘಾಟನಾ ಸಮಾರಂಭ ಸಾಕ್ಷಿಯಾಯಿತು.

ಕ್ಲಿನಿಕ್‌ ಉದ್ಘಾಟನೆಗೆ ಬಂದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಅವರ ಗುಣಗಾನ ಮಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು, ‘ರಮೇಶ್‌ಕುಮಾರ್‌ ಅವರು ನನಗೆ ರಾಜಕೀಯ ಗುರುಗಳು. ಅವರು ಸ್ಪೀಕರ್‌ ಆಗಿದ್ದಾಗ ಸದನದಲ್ಲಿ ಮಾತನಾಡಲು ವಿಶೇಷ ಅವಕಾಶ ಕಲ್ಪಿಸಿದ್ದರಿಂದ ರಾಜಕೀಯದಲ್ಲಿ ಮೇಲೆ ಬಂದೆ. ಸತ್ಯ ಹೇಳಲು ಹಿಂಜರಿಕೆ ಬೇಡ. ನಮ್ಮಿಬ್ಬರದ್ದು ಪಕ್ಷ ಬೇರೆ ಬೇರೆ ಇರಬಹುದು ಆದರೆ ಹಾರ್ಟು ಮಾತ್ರ ಒಂದೇ’ ಎಂದರು.

ರಮೇಶ್‌ಕುಮಾರ್‌ ಕೂಡ ತಮ್ಮ ಸರದಿ ಬಂದಾಗ, ‘ಸದಾನಂದಗೌಡರು ನನ್ನ ಆತ್ಮೀಯ ಮಿತ್ರರು, ನನ್ನದೇ ಊರಿನವರಾದ ಶಾಸಕ ವೈ.ಎ.ನಾರಾಯಣಸ್ವಾಮಿ ಕೂಡ ನನ್ನ ಸಹೋದರ ಸಮಾನರು’ ಎಂದರು.

ವೇದಿಕೆ ಮುಂಭಾಗದಲ್ಲಿ ಆಸೀನರಾಗಿದ್ದ ಕೆಲ ಕಾರ್ಯಕರ್ತರು ಇವರ ಮಾತುಗಳನ್ನು ಕೇಳಿ, ‘ನೋಡಿ ನಮ್ಮ ನಾಯಕರು ಒಬ್ಬರನ್ನೊಬ್ಬರು ಹೇಗೆ ಗೌರವಿಸಿಕೊಳ್ಳುತ್ತಾರೆ. ನಾವೂ ಇದ್ದೀವಿ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಂತ ಒಬ್ಬರನ್‌ ಕಂಡ್ರೆ, ಮತ್ತೊಬ್ಬರಿಗೆ ಆಗಲ್ಲ. ಪಕ್ಷಭೇದ ಮರೆತು ಕಾರ್ಯಕರ್ತರು ಒಬ್ಬರನ್ನೊಬ್ಬರು ಗೌರವಿಸಿದ್ದೀವಾ?  ಎಂದು ಪ್ರಶ್ನಿಸಿಕೊಂಡು ಚರ್ಚಿಸುತಿದ್ದರು.

ಇನ್ನೇನು ಸಮಾರಂಭ ಮುಗಿದು ಎಲ್ಲರೂ ಹೊರಡಬೇಕೆನ್ನುವಷ್ಟರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೆಂದು ‍ಪರಿಚಯಿಸಿಕೊಂಡು ವೇದಿಕೆ ಬಳಿಗೆ ಬಂದ ಮೂರು–ನಾಲ್ಕು ಮಂದಿ, ‘ಉದ್ಘಾಟನಾ ಬ್ಯಾನರ್‌ನಲ್ಲಿ ಮುಖ್ಯಮಂತ್ರಿ‌ ಭಾವಚಿತ್ರವೂ ಇಲ್ಲ, ನಮ್ಮ ನಾಯಕರ ಹೆಸರುಗಳೂ ಇಲ್ಲ ಏಕೆ’ ಎಂದು ಸಚಿವರು, ಶಾಸಕರ ಎದುರೇ ಏರುದನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ವಾದ–ವಾಗ್ವಾದ ವಿಕೋಪಕ್ಕೆ ತಿರುಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಕೈಕೈ ಮಿಲಾಯಿಸಿದರು. ‘ಪಾರ್ಟಿ ಬೇರೆ ಹಾರ್ಟು ಒಂದೇ’ ಅಂದವರು ಮಾತ್ರ ಸ್ಥಳದಿಂದ ಮಿಂಚಿನ ವೇಗದಲ್ಲಿ ಮರೆಯಾಗಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT