ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ನಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕು’

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರೂಪಿಸಲಾಗಿರುವ ‘ಕರ್ನಾಟಕ ಲಿಂಗತ್ವ ಅಲ್ಪಸಂಖ್ಯಾತರ ನೀತಿ’ಗೆ ರಾಜ್ಯ ಸಚಿವ ಸಂ‍ಪುಟ ಗುರುವಾರ ಒಪ್ಪಿಗೆ ನೀಡಿದೆ.

2014 ಏಪ್ರಿಲ್ 15ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ ಗಂಡು ಮತ್ತು ಹೆಣ್ಣಿನ ಜತೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಮಾನ್ಯತೆ ನೀಡಲಾಗಿದೆ. ಕೋರ್ಟ್‌ ತೀರ್ಪಿನ ಅನ್ವಯ ಸಂವಿಧಾನ ಖಾತರಿಪಡಿಸಿದ ಮೂಲಭೂತ ಹಕ್ಕುಗಳು ಲಿಂಗತ್ವ  ಅಲ್ಪಸಂಖ್ಯಾತರಿಗೂ  ದೊರೆಯಬೇಕೆಂದು ಹೇಳಲಾಗಿದೆ. ಈ ಕಾರಣಕ್ಕ ‘ಕರ್ನಾಟಕ ಲಿಂಗತ್ವ ಅಲ್ಪಸಂಖ್ಯಾತರ ನೀತಿ’ ರೂಪಿಸಲಾಗಿದೆ. ಈ ನೀತಿಯ ಸಾಧಕ–ಬಾಧಕ ಕುರಿತು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಪ್ರತಿನಿಧಿ ಆಗಿರುವ ಅಕ್ಕೈ ಪದ್ಮಸಾಲಿ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

* ‘ಕರ್ನಾಟಕ ಲಿಂಗತ್ವ ಅಲ್ಪಸಂಖ್ಯಾತರ ನೀತಿ’ ಎಷ್ಟರಮಟ್ಟಿಗೆ ನಿಮ್ಮ  ಅಸ್ಮಿತೆ ಕಾಪಾಡಬಲ್ಲದು?

ಮೊದಲನೆಯದಾಗಿ ಮಾದರಿ ನೀತಿ ಪ್ರಕಟಿಸಿದ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನೋಡಿ ನಮ್ಮದು ಪಿತೃಪ್ರಧಾನ ಸಮಾಜ.ಇಲ್ಲಿ ಗಂಡು, ಹೆಣ್ಣು ಹೀಗೀಗೇ ಇರಬೇಕು ಎಂಬ ಪದ್ಧತಿ ಇದೆ. ಆದರೆ, ಗಂಡು, ಹೆಣ್ಣು ಎರಡೂ ಅಲ್ಲದವರನ್ನು ‘ನಪುಂಸಕ’ ಎಂದು ಕರೆಯಲಾಗುತ್ತಿದೆ. ಆದರೆ, ಲಿಂಗತ್ವ ಅಲ್ಪಸಂಖ್ಯಾತರು ಈ ಪದವನ್ನು ಒಪ್ಪುವುದಿಲ್ಲ. ನಿಘಂಟಿನಿಂದ ‘ನಪುಂಸಕ’ ಪದವನ್ನು ತೆಗೆದುಹಾಕಬೇಕೆಂಬ ವಾದ ನಮ್ಮದು. ನಮ್ಮ ಪ್ರಕಾರ ‘ನಪುಂಸಕ’ ಅನ್ನುವುದೇ ಇಲ್ಲ.

ಗಂಡು, ಹೆಣ್ಣು ಮತ್ತು ಲಿಂಗತ್ವ ಪರಿವರ್ತನೆಗೊಳಗಾದವರು ಎನ್ನುವುದನ್ನು ಮಾತ್ರ ನಾವು ಒಪ್ಪುತ್ತೇವೆ. ಲಿಂಗತ್ವ ಅನ್ನುವ ಪದದಲ್ಲಿಯೇ ವೈವಿಧ್ಯವಿದೆ. ಆ ವೈವಿಧ್ಯವೇ ನಮ್ಮ ನಿಜವಾದ ಗುರುತು, ಅಸ್ಮಿತೆ. ಈ ಅಸ್ಮಿತೆ ನಮಗೆ ಸುಲಭವಾಗಿ ದಕ್ಕಿದ್ದಲ್ಲ. ಇದರ ಹಿಂದೆ 25 ವರ್ಷಗಳ ಹೋರಾಟದ ಇತಿಹಾಸವಿದೆ. ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ ಆಂತರಿಕವಾಗಿ ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ನೆರವಾಗಲಿದೆ. ಆ ಮೂಲಕ ನಮ್ಮ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ನೆರವಾಗಬಹುದು ಎನ್ನುವ ನಿರೀಕ್ಷೆ ಇದೆ.

* ಬೆಳಿಗ್ಗೆ ಭಿಕ್ಷಾಟನೆಯಲ್ಲಿ ತೊಡಗಿ, ರಾತ್ರಿ ಲೈಂಗಿಕ ಕಾರ್ಯಕರ್ತರಾಗುವ ಲಿಂಗತ್ವ ಅಲ್ಪಸಂಖ್ಯಾತರು, ಇದರಿಂದ ಹೊರಬರುವುದಕ್ಕೆ ಸಾಧ್ಯವಿಲ್ಲವೇ?

ಖಂಡಿತಾ ಸಾಧ್ಯವಿದೆ. ನಮ್ಮನ್ನೂ ಈ ಸಮಾಜ ಮನುಷ್ಯರನ್ನಾಗಿ ಕಂಡಾಗ ಮಾತ್ರ ನಾವು ಭಿಕ್ಷಾಟನೆ, ಲೈಂಗಿಕ ಕಾರ್ಯಕರ್ತರ ಕೆಲಸವನ್ನು ತೊರೆಯಬಹುದು. ನಮ್ಮನ್ನು ‘ಹಿಜ್ರಾ’ಗಳೆಂದು ಕರೆಯುವ ಸಮಾಜ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತದೆ, ನಮ್ಮನ್ನು ವಿಚಿತ್ರವಾಗಿ ನಡೆಸಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ಶೋಷಿತ ಸಮುದಾಯಕ್ಕಿಂತಲೂ ಕಡೆಯಾಗಿ  ನಮ್ಮನ್ನು ನಡೆಸಿಕೊಳ್ಳಲಾಗುತ್ತದೆ. ಯಾವಾಗ ಈ ಶೋಷಣೆ, ತಾರತಮ್ಯ ನಿಲ್ಲುತ್ತದೋ ಆಗ ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ವೃತ್ತಿ ಬಿಟ್ಟು ಮುಖ್ಯವಾಹಿನಿಗೆ ಬರಬೇಕೆಂದು ಸಮುದಾಯ ನಿರಂತರವಾಗಿ ಪ್ರಯತ್ನಿಸುತ್ತಿದೆ. ಅದಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗಬಹುದು.

* ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಇತ್ತೀಚೆಗೆ ಸಮಾಜದ ಧೋರಣೆಯಲ್ಲಿ ಬದಲಾವಣೆ ಆಗಿದೆ ಅನಿಸುವುದಿಲ್ಲವೇ?

ಇಪ್ಪತ್ತು ವರ್ಷಗಳ ಹಿಂದೆ ಇದ್ದಂತಹ ಪರಿಸ್ಥಿತಿ ಈಗಿಲ್ಲವಾದರೂ ಪರೋಕ್ಷವಾದ ಸಾಮಾಜಿಕ ಬಹಿಷ್ಕಾರ ಮಾತ್ರ ಇನ್ನೂ ನಿಂತಿಲ್ಲ. ಈ ಹಿಂದೆ ನಮ್ಮ ಮೇಲೆ ಸೆಗಣಿ ಹಾಗೂ ಮೊಟ್ಟೆ ಎಸೆದು ಅವಮಾನ ಮಾಡಲಾಗುತ್ತಿತ್ತು. ಆ ಪರಿಸ್ಥಿತಿ ಈಗಿಲ್ಲ. ಆದರೆ, ಗೌರವ ಮತ್ತು ಘನತೆಯಿಂದ ಬದುಕುವುದಕ್ಕಾಗಿ ನಾವು ಇಂದಿಗೂ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದಾಕ್ಷಣ ನನಗೆ ಮತ್ತು ನನ್ನ ಸಮುದಾಯಕ್ಕೆ ಎಲ್ಲವೂ ಸಿಕ್ಕಿತು ಎಂದಲ್ಲ. ಈಗಲೂ ನನ್ನೂರು ಮಾಗಡಿಯಲ್ಲಿ ಪುಟ್ಟಮಕ್ಕಳೂ, ‘ಅಲ್ನೋಡು ಚಕ್ಕಾ ಬಂದ’ ಅನ್ನುತ್ತಾರೆ. ಹಾಗಂತ ಆ ಮಕ್ಕಳನ್ನು ನಾನು ಶಿಕ್ಷಿಸಲು ಆಗುವುದೇ? ಬದಲಾವಣೆ ಎಂಬುದು ನಮ್ಮ ಆಂತರ್ಯದಲ್ಲಿ ಬರಬೇಕಿದೆ. ಎಲ್ಲಿಯವರೆಗೆ ಅದು ಬರುವುದಿಲ್ಲವೊ ಅಲ್ಲಿಯವರೆಗೆ ಸಮಾಜ ಬದಲಾಗುವುದಿಲ್ಲ.

2004ರಲ್ಲಿ ತೃತೀಯಲಿಂಗಿ ಕೋಕಿಲಾ ಎನ್ನುವವರ ಮೇಲೆ ಬೆಂಗಳೂರಿನ ಬಯ್ಯಪ್ಪನಹಳ್ಳಿಯ ಪೊಲೀಸ್ ಇನ್‌ಸ್ಟೆಕ್ಟರ್ ಒಬ್ಬರು ಅತ್ಯಾಚಾರ ನಡೆಸಿದ್ದರು.ಆಗ ನಾವೆಲ್ಲಾ ಸಂಘಟಿತರಾಗಿ 12ದಿನ ಉಪವಾಸ ಸತ್ಯಾಗ್ರಹ ಮಾಡಿದೆವು. ಇದರಿಂದಾಗಿ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ನಮ್ಮ ಬಗ್ಗೆ ಚರ್ಚೆಗಳು ಶುರುವಾದವು. ಈಗಿನ ಲಿಂಗತ್ವ ಅಲ್ಪಸಂಖ್ಯಾತರ ನೀತಿಗೆ ಅಂದು ಮುನ್ನುಡಿ ಬರೆಯಲಾಯಿತು ಎಂದೇ ಹೇಳಬಹುದು.

ಉತ್ತರ ಕರ್ನಾಟಕದಲ್ಲಿ ನಮ್ಮನ್ನು ದೇವರ (ಜೋಗಪ್ಪ) ಹೆಸರಲ್ಲಿ ಸ್ವೀಕರಿಸುತ್ತಾರಾದರೂ, ಮಂಗಳೂರಿನಲ್ಲಿ ನಾವು ಮನೆಯಿಂದಲೇ ಹೊರಬರುವಂತಿಲ್ಲ. ಈಗಲೂ ನಮ್ಮ  ಮನೆಗಳಲ್ಲಿ ಪೋಷಕರು, ಸಂಬಂಧಿಕರು ನಮ್ಮನ್ನು ಸ್ವೀಕರಿಸಿ ಬೆಂಬಲಿಸುವುದಿಲ್ಲ. ನಾವು ಒಂದು ಶುಭ ಕಾರ್ಯಕ್ಕೆ ಹೋಗುವಂತಿಲ್ಲ. ನಮ್ಮ ಕುಟುಂಬಗಳಿಗೆ ನಮ್ಮ ದುಡಿಮೆ ಬೇಕು. ಆದರೆ, ನಾವು ಬೇಕಿಲ್ಲ. ಸಂಜೆಯ ಕತ್ತಲಲ್ಲಿ ತಲೆಮರೆಸಿಕೊಂಡು ಮನೆಗೆ ಹೋಗಿ ಸೂರ್ಯ ಹುಟ್ಟುವ ಮುನ್ನವೇ ನಮ್ಮ ಗೂಡುಗಳಿಗೆ ಹಿಂತಿರುಗಬೇಕು. ಈ ಧೋರಣೆ ಬದಲಾಗಬೇಕಿದೆ. ಇಂಥ ಮಕ್ಕಳು ನಮಗೆ ಬೇಡ ಅನ್ನುವಂಥ ಕುಟುಂಬಗಳ ಮನಪರಿವರ್ತನೆಯಾಗಬೇಕಿದೆ. ಮೊದಲು ಬದಲಾವಣೆ ನಮ್ಮ ನಮ್ಮ ಮನೆ–ಮನಗಳಲ್ಲಿ ಆಗಬೇಕು. ಲಿಂಗತ್ವ ಪರಿವರ್ತನೆಗೊಳಗಾದ ನನ್ನನ್ನು ಸೀರೆ ಉಟ್ಟುಕೊಂಡು ಮನೆಗೆ ಬರಲು 27 ವರ್ಷಗಳ ನಂತರ ನನ್ನ ಕುಟುಂಬ ಒಪ್ಪಿತು.

* ನಿಮ್ಮಲ್ಲೂ ಆಂತರಿಕ ಶೋಷಣೆಗಳಿವೆ ಅನ್ನುತ್ತಾರಲ್ಲ...

ಹೌದು. ನಮ್ಮಲ್ಲೂ ಆಂತರಿಕವಾಗಿ ಪಿತೃಪ್ರಧಾನ ವ್ಯವಸ್ಥೆಯನ್ನು ಪೋಷಿಸಲಾಗಿದೆ. ಇಲ್ಲಿ ನಮ್ಮ ಸೆರಗನ್ನು ಮತ್ತೊಬ್ಬರಿಗೆ ತಾಕಿಸುವಂತಿಲ್ಲ. ತಲೆ ಕೂದಲು ಕತ್ತರಿಸಿದರೆ ₹ 25 ಸಾವಿರ ದಂಡ ಹಾಕಲಾಗುತ್ತದೆ. ಭಿಕ್ಷೆ ಬೇಡಿ ತಂದ ಹಣವನ್ನು ಕ್ರೋಡೀಕರಿಸಿ ಲಿಂಗತ್ವ ಪರಿವರ್ತನೆ ಮಾಡಲಾಗುತ್ತದೆ. ಇಂಥ ಶೋಷಣೆಗಳಿಂದ ನಾವು ಮುಕ್ತರಾಗಬೇಕಿದೆ.

* ನಿಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಡವೇ?

ನಮಗೆ ರಾಜಕೀಯ ಪ್ರಾತಿನಿಧ್ಯ ಖಂಡಿತಾ ಬೇಕು. ನಮ್ಮ ವಿಷಯಗಳನ್ನ ಪ್ರತಿಪಾದಿಸಲು ನಾವೇ ಇದ್ದರೆ ಚೆನ್ನ. ನಮ್ಮ ಬಗ್ಗೆ ಅನೇಕ ರಾಜಕಾರಣಿಗಳು ಮಾತನಾಡಿದ್ದಾರೆ. ಆದರೆ, ಅದಿನ್ನೂ ಕಾರ್ಯಗತವಾಗಿಲ್ಲ. ಮಕ್ಕಳನ್ನು ಅಪಹರಣ ಮಾಡುತ್ತಾರೆ ಎಂಬ ಆರೋಪವನ್ನೂ ನಮ್ಮ ಮೇಲೆ ಹೊರಿಸಿದ್ದಿದೆ. ಆಗೆಲ್ಲ ನಮಗೆ ತುಂಬಾ ಅವಮಾನವಾಗಿದೆ.

ರಾಜಕೀಯ ಪಕ್ಷಗಳಿಗೆ ನಮ್ಮ ಬಗ್ಗೆ ಸರಿಯಾದ ಅರಿವಿಲ್ಲ. ಹಾಗಾಗಿ, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ನಮ್ಮಿಂದಲೇ ಒಬ್ಬರು ರಾಜಕೀಯ ಸ್ಥಾನಮಾನ ಪಡೆದರೆ ಒಳ್ಳೆಯದು. ನಾಮಾಕಾವಸ್ಥೆಯ ರಾಜಕೀಯ ಪ್ರಾತಿನಿಧ್ಯ ನೀಡದೇ ಅಧಿಕಾರಯುತವಾದ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಸೆ. ಬೇರೆ ಬೇರೆ ರಾಜ್ಯಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಈಗಾಗಲೇ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಶೋಷಿತರಲ್ಲಿಯೇ ಶೋಷಿತವಾದ ಸಮುದಾಯದ ಪರ ನೀತಿ ತಂದರೆ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಈ ಮಾತನ್ನು ನಮ್ಮ ರಾಜಕೀಯ ವ್ಯವಸ್ಥೆ ನಿಜರೂಪದಲ್ಲಿ ಕಾರ್ಯಕ್ಕೆ ತರಬೇಕಿದೆ.

* ಈ ನೀತಿಯಲ್ಲಿರುವ ಸಾಧಕ–ಬಾಧಕಗಳೇನು?

ಹೊಸ ನೀತಿಯಲ್ಲಿ ಅನೇಕ ಸಾಧಕ ಅಂಶಗಳಿರುವಂತೆಯೇ ಬಾಧಕವಾದ ಅಂಶಗಳೂ ಇವೆ. ಮುಖ್ಯವಾಗಿ ಭಾರತೀಯ ದಂಡ ಸಂಹಿತೆಯ ಕಲಂ 377ರ ಪ್ರಕಾರ, ನಮ್ಮನ್ನು ಅಸಹಜ ಲೈಂಗಿಕ ಅಪರಾಧಿಗಳನ್ನಾಗಿ ಚಿತ್ರಿಸಲಾಗುತ್ತಿದೆ. ಇದು ಸಾಬೀತಾದರೆ 10 ವರ್ಷ ಜೈಲು, ಇಲ್ಲವೇ ಜೀವಾವಾಧಿ ಶಿಕ್ಷೆಯಾಗುತ್ತದೆ. ಇದರ ಬಗ್ಗೆ ನೀತಿಯಲ್ಲಿ ಪ್ರಸ್ತಾಪವಾಗಿಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಮೇಲಿನ ಕೌಟುಂಬಿಕ ದೌರ್ಜನ್ಯ, ಪೊಲೀಸರು ನಡೆಸುವ ದೌರ್ಜನ್ಯ ನಿವಾರಣೆ ಬಗ್ಗೆ ಪ್ರಸ್ತಾಪವಿಲ್ಲ. ಇವನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಬೇಕಿತ್ತು.

ಲಿಂಗತ್ವ ಅಲ್ಪಸಂಖ್ಯಾತರು ಪರಸ್ಪರ ವಿವಾಹವಾಗುವ ಮತ್ತು ಮಕ್ಕಳನ್ನು ದತ್ತು ಪಡೆಯುವ ಅವಕಾಶದ ಬಗ್ಗೆಯೂ ನೀತಿಯಲ್ಲಿ ಉಲ್ಲೇಖ ಇಲ್ಲ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಸಿನಿಮಾ, ಕಿರು ತೆರೆಗಳಲ್ಲಿ ಮನರಂಜನೆ ಹೆಸರಿನಲ್ಲಿ ನಮ್ಮನ್ನು ಅಪಹಾಸ್ಯ ಮಾಡಲಾಗುತ್ತಿದೆ ಇದರ ಬಗ್ಗೆ ಕ್ರಮಕೈಗೊಳ್ಳುವ ಮಾತಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗಿರುವಂತೆ ನಮಗೂ ಪ್ರತ್ಯೇಕ ಆಸನ, ಸಾರ್ವಜನಿಕ ಶೌಚಾಲಯಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇರಬೇಕು. ವೃದ್ಧರಿಗೆ ಕನಿಷ್ಠ ₹ 5 ಸಾವಿರ ಮಾಸಾಶನ ದೊರೆಯುವಂತಾಗಬೇಕು. ವೃದ್ಧಾಶ್ರಮಗಳಾಗಬೇಕು.

* ಲಿಂಗತ್ವ ಅಲ್ಪಸಂಖ್ಯಾತರ ಬೇಡಿಕೆಗಳೇನು?

ಈ ನೀತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಲ್ಲಿ ತೃತೀಯಲಿಂಗಿಗಳ ಘಟಕ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗಾಗಿಯೇ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆಯಾಗಬೇಕಿತ್ತು.

ಮಾನವ ಹಕ್ಕುಗಳ ಆಯೋಗ, ಮಹಿಳಾ ಹಕ್ಕುಗಳ ಆಯೋಗ, ಮಕ್ಕಳ ಹಕ್ಕು ಆಯೋಗದ ಮಾದರಿಯಲ್ಲೇ ಲಿಂಗತ್ವ ಅಲ್ಪಸಂಖ್ಯಾತರಿಗೂ ಪ್ರತ್ಯೇಕ ಆಯೋಗ ರಚನೆಯಾಗಬೇಕು. 2ಎ ವರ್ಗಕ್ಕೆ ನಮ್ಮನ್ನು ಸೇರಿಸಿದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಮಗೆ ಶೇ 14ರಷ್ಟು ಮೀಸಲಾತಿ ದೊರೆಯುತ್ತದೆ. ಮುಖ್ಯವಾಗಿ ಲೈಂಗಿಕ ಅಲ್ಪಸಂಖ್ಯಾತರ ಜನಗಣತಿ ನಡೆಯಬೇಕು. ರಾಜ್ಯದಲ್ಲಿ ಅಂದಾಜು 1ಲಕ್ಷಕ್ಕಿಂತಲೂ ಹೆಚ್ಚಿನ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ‘ಮೈತ್ರಿ’ ಯೋಜನೆಯಡಿ ಕೇವಲ 1649 ಜನ ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ. 3 ಸಾವಿರ ಮಂದಿಗೆ ಮಾತ್ರ ಮತದಾನದ ಗುರುತಿನ ಚೀಟಿ ಇದೆ. ನಮ್ಮಲ್ಲಿ ವೈವಿಧ್ಯ ಇದೆ. ಅದನ್ನು ಸಾರ್ವತ್ರಿಕರಣಗೊಳಿಸಲು ನಮ್ಮ ಸಮುದಾಯ ಬಯಸುವುದಿಲ್ಲ. ಇದಕ್ಕೆ ಸಾಮಾಜಿಕ ಬಹಿಷ್ಕಾರದ ಭಯವೇ ಕಾರಣ.

*  ಇತರ ರಾಜ್ಯಗಳ ನೀತಿಗೂ ನಮ್ಮ ರಾಜ್ಯದ ನೀತಿಗೂ ಇರುವ ವ್ಯತ್ಯಾಸವೇನು?

ಕೆಲವು ನ್ಯೂನತೆಗಳಿದ್ದರೂ, ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ನೀತಿ ಚೆನ್ನಾಗಿದೆ. ಈ ನೀತಿಯ ಕರಡು ಪ್ರತಿ 2014ರಲ್ಲೇ ತಯಾರಾಗಿತ್ತು. ಆದರೆ, ಕಾರ್ಯಗತವಾಗುವುದು ವಿಳಂಬವಾಯಿತು. ತಮಿಳು ನಾಡಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ ಇದೆ. ಕೇರಳದಲ್ಲಿ ಉದ್ಯೋಗ ಮತ್ತು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ.

ಶೋಷಿತರಲ್ಲಿ ಶೋಷಿತರಾದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ನೀತಿ ಜಾರಿಯಾದಲ್ಲಿ ಮಾತ್ರ ನಮ್ಮ ಸಮುದಾಯವೂ ಸಮಾಜದಲ್ಲಿ ತಲೆ ಎತ್ತಿ ನಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT