ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಚುನಾವಣೆ ರಣಕಹಳೆ

Last Updated 29 ಅಕ್ಟೋಬರ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದ ಜನ ಇನ್ನು ಹೆಚ್ಚು ದಿನ ವಿಧಾನಸಭೆ ಚುನಾವಣೆಗೆ ಕಾಯಲು ತಯಾರಿಲ್ಲ’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿನಲ್ಲಿ ಚುನಾವಣೆ ರಣಕಹಳೆ ಊದಿದರು.

ಒಂದು ದಿನದ ಭೇಟಿಗಾಗಿ ರಾಜ್ಯಕ್ಕೆ ಬಂದಿದ್ದ ಪ್ರಧಾನಿ ಮೋದಿ ಮಧ್ಯಾಹ್ನ ಇಲ್ಲಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಅತ್ಯುತ್ಸಾಹದಿಂದ ಸೇರಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಸುಮಾರು 10 ನಿಮಿಷ ಭಾಷಣ ಮಾಡಿದರು. ಅವರ ಭಾಷಣ ರಾಜ್ಯ ವಿಧಾನಸಭೆ ಚುನಾವಣೆ, ಅಭಿವೃದ್ಧಿ ಮತ್ತು ಜಮ್ಮು–ಕಾಶ್ಮೀರ ಬಿಕ್ಕಟ್ಟಿನ ಸುತ್ತ ಕೇಂದ್ರಿಕೃತವಾಗಿತ್ತು.

‘ದೇಶದ ಬೇರೆ ರಾಜ್ಯಗಳಂತೆ ಕರ್ನಾಟಕವೂ ವೇಗವಾಗಿ ಸಾಗುತ್ತಿರುವ ಅಭಿವೃದ್ಧಿ ಪಥದಲ್ಲಿ ಒಂದಾಗಲು ಬಯಸಿದೆ. ಬರಲಿರುವ ಚುನಾವಣೆ ಬಳಿಕ ಅಭಿವೃದ್ಧಿಯ ಮುಖ್ಯಧಾರೆಗೆ ಇದೂ ಸೇರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿಧಾನಸಭೆ ಚುನಾವಣೆ ಕುರಿತು ಪ್ರಸ್ತಾಪಿಸುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಮಾತಿನ ನಡುವೆ ಆಗಾಗ್ಗೆ ಜೈಕಾರ ಹಾಕುತ್ತಿದ್ದರು. ಮೋದಿ... ಮೋದಿ... ಎಂದೂ ಕೂಗುತ್ತಿದ್ದರು.

ನವೆಂಬರ್‌ 2ರಿಂದ ಪರಿವರ್ತನೆ ಯಾತ್ರೆ ಕೈಗೊಳ್ಳುತ್ತಿರುವ ರಾಜ್ಯದ ನಾಯಕರು ಪ್ರಧಾನಿ ಅವರ ಭಾಷಣವನ್ನು ಆಸಕ್ತಿಯಿಂದ ಆಲಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ. ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ. ಸದಾನಂದಗೌಡ ಮೊದಲಾದವರು ಹಾಜರಿದ್ದರು.

ಕರಾವಳಿ (ಧರ್ಮಸ್ಥಳ), ಬೆಂಗಳೂರು ಮತ್ತು ಹೈದರಾಬಾದ್– ಕರ್ನಾಟಕದ (ಬೀದರ್‌) ಭೇಟಿ ವೇಳೆ ಜನರಿಗೆ ತಲುಪಿಸಬೇಕಾದ ಸಂದೇಶವನ್ನು ಸ್ಪಷ್ಟ ಮಾತುಗಳಲ್ಲಿ ತಲುಪಿಸಿದರು. ‘ಕರ್ನಾಟಕ ಚುನಾವಣೆಗಾಗಿ ತುದಿಗಾಲಲ್ಲಿ ನಿಂತಿದೆ’ ಎಂದು ವ್ಯಾಖ್ಯಾನಿಸುವ ಮೂಲಕ ‘ಮತದಾರರು ರಾಜ್ಯ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ’ ಎಂದು ಪರೋಕ್ಷವಾಗಿ ಟೀಕಿಸಿದರು.

ಗ್ರಾಮಾಭಿವೃದ್ಧಿ, ಡಿಜಿಟಲ್‌ ಆರ್ಥಿಕ ವ್ಯವಸ್ಥೆ ಕುರಿತು ಉಜಿರೆ ಭಾಷಣದಲ್ಲಿ ಪ್ರಧಾನಿ ಒತ್ತು ನೀಡಿದರು. ಬೀದರ್‌ನಲ್ಲಿ ತಮ್ಮ ಸರ್ಕಾರದ ಸಾಧನೆ ಮತ್ತು ಯುಪಿಎ ಸರ್ಕಾರದ ವೈಫಲ್ಯಗಳನ್ನು ಅನಾವರಣಗೊಳಿಸಿದರು. ಮೋದಿ ಅವರ ಭಾಷಣ ಬಹುತೇಕ ಚುನಾವಣೆ ಪ್ರಚಾರದಂತಿತ್ತು.

ಮೂರೂ ಕಡೆಗಳಲ್ಲೂ ನಡೆದ ಸಭೆಗಳಲ್ಲಿ ಬೃಹತ್‌ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಜನರಿಗೆ ಅವರು ಮನವಿ ಮಾಡಿದರು.

ಮೋದಿ ಧರ್ಮಸ್ಥಳ ಭೇಟಿ ಮುಗಿಸಿ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಮಯ ಮಧ್ಯಾಹ್ನ ಸುಮಾರು 2.30. ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯನ್ನು ಬರ ಮಾಡಿಕೊಂಡರು.

ಶಿಷ್ಟಾಚಾರ ಪಾಲಿಸಿದ ಮುಖ್ಯಮಂತ್ರಿ

ಬೀದರ್‌ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಸಿದ್ದರಾಮಯ್ಯ ವಿಮಾನ ನಿಲ್ದಾಣಕ್ಕೆ ಬರುವುದಿಲ್ಲ ಎಂಬ ವದಂತಿ ಹರಡಿತ್ತು. ಆದರೆ, ಶಿಷ್ಟಾಚಾರ ಪಾಲಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ, ಪ್ರಧಾನಿಗೆ ಮೈಸೂರು ಪೇಟ ತೋಡಿಸಿ, ರೇಷ್ಮೆ ಶಾಲು ಹೊದಿಸಿ ಶ್ರೀಗಂಧದ ಹಾರ ಹಾಕಿ ಕೈ ಕುಲುಕಿದರು. ಮೋದಿ ಅವರೂ ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದರು.

ಮೋದಿ , ನೇರವಾಗಿ ರಾಜ್ಯದ ವಿಚಾರಗಳನ್ನು ಪ್ರಸ್ತಾಪಿಸದೇ ಇದ್ದರೂ, ಕಾಶ್ಮೀರ ವಿಚಾರದಲ್ಲಿ ಕಾಂಗ್ರೆಸ್‌ ನಡೆದುಕೊಳ್ಳುತ್ತಿರುವ ರೀತಿಯನ್ನು ಕಾರ್ಯಕರ್ತರ ಗಮನಕ್ಕೆ ತಂದರು. ರಾಷ್ಟ್ರೀಯತೆ, ದೇಶದ ಏಕತೆ ಮತ್ತು ಅಖಂಡತೆ ವಿಚಾರದಲ್ಲಿ ತಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಂತಹ ಪ್ರಯತ್ನ ಕಾಂಗ್ರೆಸ್ ನಡೆಸಿದರೆ ಅದಕ್ಕೆ ಆಸ್ಪದ ನೀಡುವುದೂ ಇಲ್ಲ ಎಂಬ ಖಡಕ್‌ ಸಂದೇಶ ನೀಡುವ ಮೂಲಕ ರಾಷ್ಟ್ರೀಯತೆ ಬಡಿದೆಬ್ಬಿಸುವ ಪ್ರಯತ್ನ ನಡೆಸಿದರು.

ನವೆಂಬರ್‌ 2 ರಿಂದ ಬಿಜೆಪಿ ಕರ್ನಾಟಕ ಪರಿವರ್ತನೆ ಯಾತ್ರೆ ಆರಂಭಿಸಲಿದ್ದು, ಅದರ ಉದ್ಘಾಟನೆ ಅಮಿತ್ ಷಾ ನೆರವೇರಿಸಲಿದ್ದಾರೆ. ಸಮಾರೋಪದಲ್ಲಿ ಮೋದಿಯವರೇ ಭಾಗವಹಿಸಲಿದ್ದಾರೆ.

ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮೋದಿ ಅವರು ಬರುವುದಕ್ಕೆ ಮೊದಲು ರಣಾವೇಶ ಮೂಡಿಸುವ ಭಜರಂಗಿ (ಆಂಜನೇಯ), ಕಾಲಭೈರವಾಷ್ಟಕಗಳನ್ನು ರಾಕ್ ಶೈಲಿಯಲ್ಲಿ ಸಂಯೋಜಿಸಿದ್ದ ಗೀತೆಗಳು ಮೈಕ್‌ನಲ್ಲಿ  ಮೊಳಗಿದವು.

ಟೀಕಾಕಾರರಿಗೆ ತಕ್ಕ ಉತ್ತರ

ಉಜಿರೆ (ದಕ್ಷಿಣ ಕನ್ನಡ): ‘ಭಾರತದಂತಹ ದೇಶದಲ್ಲಿ ನಗದುರಹಿತ ವಹಿವಾಟು ಸಾಧ್ಯವೇ ಇಲ್ಲ ಎಂದು ಕೆಲವರು ತಿಂಗಳುಗಟ್ಟಲೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಗ್ರಾಮೀಣ ಪ್ರದೇಶದ 12 ಲಕ್ಷ ಮಹಿಳೆಯರಿಗೆ ರೂಪೇ ಕಾರ್ಡ್‌ ವಿತರಿಸಿ, ಡಿಜಿಟಲ್‌ ವಹಿವಾಟಿಗೆ ಮುನ್ನುಡಿ ಬರೆಯುವ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

84 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿ

ಬೀದರ್: ‘ದೇಶದಲ್ಲಿ 2022ರ ವೇಳೆಗೆ ₹7 ಲಕ್ಷ ಕೋಟಿ ವೆಚ್ಚದಲ್ಲಿ 84 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಬೀದರ್-ಕಲಬುರ್ಗಿ ಹೊಸ ರೈಲು ಮಾರ್ಗಕ್ಕೆ ಚಾಲನೆ ನೀಡಿದ ನಂತರ ಭಾನುವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶವನ್ನು ಪ್ರಗತಿಪಥದತ್ತ ಒಯ್ಯಲು ಹೆದ್ದಾರಿ, ರೈಲು ಹಾಗೂ ವಿಮಾನ ಯಾನ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

ಗೊಂದಲ ನಿವಾರಣೆ

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿನ ಸಣ್ಣಪುಟ್ಟ ಲೋಪಗಳನ್ನು ಶೀಘ್ರದಲ್ಲೇ ನಿವಾರಿಸಲಾಗುವುದು’ ಎಂದು ಮೋದಿ ಹೇಳಿದರು.

‘ದೇಶದ ಜನ ಜಿಎಸ್‌ಟಿ ವಿರೋಧಿಸಿಲ್ಲ. ಸಣ್ಣಪುಟ್ಟ ಸಮಸ್ಯೆಗಳ ಬಗೆಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಜಿಎಸ್‌ಟಿ ವಿಷಯದಲ್ಲಿ ವಿರೋಧ ಪಕ್ಷಗಳು ಒಂದಾಗಿ ರಾಜಕೀಯ ಮಾಡಲು ಹೊರಟಿವೆ’ ಎಂದು ಟೀಕಿಸಿದರು.

‘ವ್ಯಾಪಾರಿಗಳ ಹಳೆಯ ಕಡತ  ತೆಗೆಯಲು ಅಧಿಕಾರಿಗಳಿಗೆ ಇನ್ನು ಅವಕಾಶ ನೀಡುವುದಿಲ್ಲ. ಪ್ರಾಮಾಣಿಕವಾಗಿ ವ್ಯವಹಾರ ಮಾಡುವವರಿಗೆ ಸಹಕಾರ ನೀಡುತ್ತೇವೆ. ಅಧಿಕಾರಿಗಳು ಕಿರಿಕಿರಿ ಮಾಡಿದರೆ ಒಂದು ಪತ್ರ ಬರೆದರೂ ಸಾಕು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಹೇಳಿದರು.

ನಿರ್ಲಕ್ಷ್ಯದ ಅಪರಾಧ

‘ಹಿಂದಿನ ಸರ್ಕಾರ ನಿರ್ಲಕ್ಷ್ಯದ ಅಪರಾಧ ಮಾಡಿದ ಕಾರಣ ಸಾವಿರ ರೂಪಾಯಿಯ ಯೋಜನೆಗೆ ಒಂದು ಕೋಟಿ ರೂಪಾಯಿ ಖರ್ಚು ಮಾಡಬೇಕಾದ ಪ್ರಸಂಗ ಬಂದಿದೆ’ ಎಂದು ಹೇಳಿದರು.

‘30ರಿಂದ 40 ವರ್ಷಗಳ ಹಿಂದೆ ಅನೇಕ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ್ದು, ಅವು ಕಡತಗಳಲ್ಲಿ ಉಳಿದುಕೊಂಡಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ₹ 9 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ’ ಎಂದು ತಿಳಿಸಿದರು.

‘ಹಿಂದಿನ ಸರ್ಕಾರ ಕೊನೆಯ ಮೂರು ವರ್ಷಗಳಲ್ಲಿ 1,100 ಕಿ.ಮೀ ಹೊಸ ರೈಲು ಮಾರ್ಗ ನಿರ್ಮಿಸಿದರೆ, ನಮ್ಮ ಸರ್ಕಾರ 2,100 ಕಿ.ಮೀ ರೈಲು ಮಾರ್ಗ ನಿರ್ಮಾಣ ಮಾಡಿದೆ. ಹಿಂದಿನ ಸರ್ಕಾರ 1,300 ಕಿ.ಮೀ ಉದ್ದದ ಜೋಡಿ ರೈಲು ಮಾರ್ಗ ಮಾಡಿದರೆ, ನಮ್ಮ ಸರ್ಕಾರ 2,600 ಕಿ.ಮೀ ಜೋಡಿ ರೈಲು ಮಾರ್ಗ ನಿರ್ಮಿಸಿದೆ’ ಎಂದು ವಿವರಿಸಿದರು.

ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ, ರಮೇಶ ಜಿಗಜಿಣಗಿ, ಅನಂತಕುಮಾರ ಹೆಗಡೆ, ಸಂಸದರಾದ ಬಿ.ಎಸ್. ಯಡಿಯೂರಪ್ಪ, ಭಗವಂತ ಖೂಬಾ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಶಾಸಕ ಪ್ರಭು ಚವಾಣ್‌, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT