ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ಜೋಡಿಯ ಮೋಡಿ ಟೆಸ್ಟ್‌ಗೆ ಮಾತ್ರವೇ?

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಿಚಂದ್ರನ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜ ಅವರ ಏಕದಿನ ಮತ್ತು ಟಿ–20 ಕ್ರಿಕೆಟ್‌ ಬದುಕು ಮುಗಿಯಿತೇ?
ಇಂತಹದ್ದೊಂದು ಪ್ರಶ್ನೆ ಈಗ ಅಭಿಮಾನಿಗಳನ್ನು ಕಾಡುತ್ತಿದೆ.

ಕ್ರಿಕೆಟ್‌ ಲೋಕ ಕಂಡ ಶ್ರೇಷ್ಠ ಸ್ಪಿನ್ನರ್‌ ಎನಿಸಿರುವ ಇವರು ಮೂರು ಮಾದರಿಗಳಲ್ಲೂ ಭಾರತಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಡಿ ಇಟ್ಟ ಆರಂಭದಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದ ಈ ಜೋಡಿಯ ಜಾದೂ ಈಗ ಸೀಮಿತ ಓವರ್‌ಗಳ ಮಾದರಿಗಳಲ್ಲಿ ನಡೆಯುತ್ತಿಲ್ಲ. ಹಿಂದಿನ ಎರಡು ವರ್ಷಗಳ ಅವರ ಸಾಧನೆಯ ಅಂಕಿ ಅಂಶಗಳು ಇದನ್ನು ಸಾರಿ ಹೇಳುತ್ತವೆ.

ಈ ವರ್ಷ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಶ್ವಿನ್‌ ಮತ್ತು ಜಡೇಜ ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲಾ ಸ್ಪಿನ್‌ ಅಸ್ತ್ರಗಳನ್ನು ಪ್ರಯೋಗಿಸಿಯೂ ವಿಕೆಟ್‌ ಉರುಳಿಸಲು ಪರದಾಡಿದ್ದರು. ಪಾಕಿಸ್ತಾನದ ಎದುರಿನ ಫೈನಲ್‌ನಲ್ಲಿ 18 ಓವರ್‌ಗಳನ್ನು ಬೌಲ್‌ ಮಾಡಿದ್ದ ಈ ಜೋಡಿ 137 ರನ್‌ಗಳನ್ನು ಕೊಟ್ಟಿತ್ತು. ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಆಯ್ಕೆ ಸಮಿತಿ ವಿಶ್ರಾಂತಿಯ ಕಾರಣ ನೀಡಿ ಇವರನ್ನು ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ ಎದುರಿನ ಸರಣಿಗಳಿಂದ ಹೊರಗಿಟ್ಟಿತ್ತು.

2019ರ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿರುವ ಬಿಸಿಸಿಐ ಹೊಸಬರಿಗೆ ಹೆಚ್ಚೆಚ್ಚು ಅವಕಾಶಗಳನ್ನು ನೀಡುತ್ತಿದೆ. ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌ ಮತ್ತು ಅಕ್ಷರ್‌ ಪಟೇಲ್‌, ಸಿಕ್ಕ ಅವಕಾಶಗಳಲ್ಲಿ ಹೆಚ್ಚು ವಿಕೆಟ್‌ ಉರುಳಿಸಿ ಆಯ್ಕೆ ಸಮಿತಿಯ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಅಶ್ವಿನ್‌ ಮತ್ತು ಜಡೇಜ ಅವರ ಹಾದಿ ಇನ್ನಷ್ಟು ಕಠಿಣವಾಗಿದೆ.

2015ರ ವಿಶ್ವಕಪ್‌ ನಂತರ ಏಕದಿನ ಮತ್ತು ಟಿ–20 ಮಾದರಿಗಳಲ್ಲಿ ಸಾಂಪ್ರದಾಯಿಕ ಶೈಲಿಯ ಸ್ಪಿನ್ನರ್‌ಗಳಿಗಿಂತಲೂ ಲೆಗ್‌ಬ್ರೇಕ್‌ ಗೂಗ್ಲಿ ಶೈಲಿಯ ಸ್ಪಿನ್ನರ್‌ಗಳು ಹೆಚ್ಚು ಯಶಸ್ಸು ಕಂಡಿದ್ದಾರೆ.

ಹಿಂದಿನ ಎರಡು ವರ್ಷಗಳಲ್ಲಿ ನಡೆದ ಹಲವು ಸರಣಿಗಳಲ್ಲಿ ಇಂಗ್ಲೆಂಡ್‌ನ ಆದಿಲ್‌ ರಶೀದ್‌, ಅಫ್ಗಾನಿಸ್ತಾನದ ರಶೀದ್‌ ಖಾನ್‌ ಮತ್ತು ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹಿರ್‌ 60ಕ್ಕೂ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿರುವುದು ಇದಕ್ಕೆ ನಿದರ್ಶನ.

ಈ ಅವಧಿಯಲ್ಲಿ ಹೆಚ್ಚು ಯಶಸ್ಸು ಕಂಡ ಸಾಂಪ್ರದಾಯಿಕ ಶೈಲಿಯ ಸ್ಪಿನ್ನರ್‌ ನ್ಯೂಜಿಲೆಂಡ್‌ನ ಮಿಷೆಲ್‌ ಸ್ಯಾಂಟನರ್‌ ಮಾತ್ರ. ಅವರು 33.77ರ ಸರಾಸರಿಯಲ್ಲಿ 44 ವಿಕೆಟ್‌ಗಳನ್ನು ಪಡೆದಿದ್ದಾರೆ.

ಏಕದಿನ ಮಾದರಿಗೆ ಸಿದ್ದಪಡಿಸುವ ಪಿಚ್‌ಗಳು ಸಪಾಟಾಗಿರುತ್ತವೆ. ಇವುಗಳಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ ಹೊಳೆಯನ್ನೇ ಹರಿಸುತ್ತಾರೆ. ಈ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಪುಟಿಯುವುದಲ್ಲದೆ, ಸಾಕಷ್ಟು ತಿರುವು ಪಡೆಯುತ್ತದೆ. ಇವು ಲೆಗ್‌ ಬ್ರೇಕ್‌ ಗೂಗ್ಲಿ ಸ್ಪಿನ್ನರ್‌ಗಳಿಗೂ ನೆರವಾಗುತ್ತವೆ. ಲೆಗ್‌ ಸ್ಪಿನ್ನರ್‌ಗಳು ಇದರ ಲಾಭ ಎತ್ತಿಕೊಂಡು ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಬಲ್ಲರು. ಹೀಗಾಗಿಯೇ ಭಾರತ ತಂಡದಲ್ಲಿ ಸಾಂಪ್ರದಾಯಿಕ ಶೈಲಿಯ ಸ್ಪಿನ್ನರ್‌ಗಳಿಗೆ ಅವಕಾಶದ ಬಾಗಿಲು ಮುಚ್ಚುತ್ತಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.

ಅಶ್ವಿನ್‌ ಮತ್ತು ಜಡೇಜ ಟೆಸ್ಟ್‌ ಪರಿಣತರೆ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡಿ ಪ್ರತಿಭೆಯನ್ನು ಜಗಜ್ಜಾಹೀರು ಮಾಡಿದ್ದ ಅಶ್ವಿನ್‌ ಮತ್ತು ಜಡೇಜ ಕ್ರಮವಾಗಿ 2010 ಹಾಗೂ 2009ರಲ್ಲಿ ಏಕದಿನ ಮತ್ತು ಟಿ–20 ಮಾದರಿಗಳಿಗೆ ಪದಾರ್ಪಣೆ ಮಾಡಿದ್ದರು.

ಅಶ್ವಿನ್‌ 2011ರ ನವೆಂಬರ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯ ಆಡಿದ್ದರು. ಜಡೇಜ ಟೆಸ್ಟ್‌ ತಂಡಕ್ಕೆ ಅಡಿ ಇಡಲು ನಾಲ್ಕು ವರ್ಷ ಕಾಯಬೇಕಾಗಿತ್ತು.

ಆ ನಂತರ ಸ್ಥಿರ ಸಾಮರ್ಥ್ಯದ ಮೂಲಕ ಟೆಸ್ಟ್‌ ತಂಡದಲ್ಲಿ ಸ್ಥಾನ ಭದ್ರಮಾಡಿಕೊಂಡು ಸಾಗುತ್ತಿರುವ ಇವರು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಭಾರತ ತಂಡದ ಆಧಾರ ಸ್ತಂಭಗಳೆಂದೇ ಗುರುತಿಸಿಕೊಂಡಿದ್ದಾರೆ.

ಪ್ರಸ್ತುತ ಟೆಸ್ಟ್‌ ಬೌಲರ್‌ಗಳ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಜಡೇಜ ಎರಡನೇ ಸ್ಥಾನ ಹೊಂದಿದ್ದರೆ, ಅಶ್ವಿನ್‌ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಇವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಹೊಂದಿದ್ದಾರೆ.

ಹೀ‌‌ಗಾಗಿ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯ ಆರಂಭಿಕ ಎರಡು ಟೆಸ್ಟ್‌ ಪಂದ್ಯಗಳಿಗೆ ಪ್ರಕಟಿಸಿರುವ ತಂಡದಲ್ಲಿ ಇವರಿಗೆ ಸ್ಥಾನ ನೀಡಲಾಗಿದೆ.

***

ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ ಸಾಮರ್ಥ್ಯ ಮಾನದಂಡವೇ?

2015ರ ಏಕದಿನ ವಿಶ್ವಕಪ್‌ನಿಂದ 2017ರ ಚಾಂಪಿಯನ್ಸ್‌ ಟ್ರೋಫಿಯ ಅವಧಿಯಲ್ಲಿ ಅಶ್ವಿನ್‌ 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜಡೇಜ ಕಣಕ್ಕಿಳಿದಿದ್ದು 10 ಹೋರಾಟಗಳಲ್ಲಿ. ಈ ಅವಧಿಯಲ್ಲಿ ಇವರು ಹೆಚ್ಚು ವಿಕೆಟ್‌ ಉರುಳಿಸಿರಲಿಲ್ಲ. ಇದನ್ನೇ ಮಾನದಂಡವಾಗಿಟ್ಟುಕೊಂಡು ಆಯ್ಕೆ ಸಮಿತಿ ಏಕದಿನ ತಂಡದಿಂದ ಹೊರಗಿಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

2011ರ ವಿಶ್ವಕಪ್‌ನಿಂದ 2013 ಚಾಂಪಿಯನ್ಸ್‌ ಟ್ರೋಫಿಯ ಅವಧಿಯಲ್ಲಿ ಇವರು 30ಕ್ಕೂ ಅಧಿಕ ಏಕದಿನ ಪಂದ್ಯಗಳಲ್ಲಿ ಅಂಗಳಕ್ಕಿಳಿದಿದ್ದಾರೆ. 2013ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಆ ಟೂರ್ನಿಯಲ್ಲಿ ಜಡೇಜ 3.75ರ ಸರಾಸರಿಯಲ್ಲಿ ಬೌಲ್‌ ಮಾಡಿದ್ದರು.

2013 ಚಾಂಪಿಯನ್ಸ್‌ ಟ್ರೋಫಿಯಿಂದ 2015ರ ವಿಶ್ವಕಪ್‌ ಅವಧಿಯಲ್ಲಿ ಅಶ್ವಿನ್‌ 35 ಪಂದ್ಯಗಳನ್ನು ಆಡಿದ್ದು, ಜಡೇಜ 41 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕಾಂಗರೂಗಳ ನಾಡಿನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅಶ್ವಿನ್‌ 8 ಪಂದ್ಯಗಳಿಂದ 13 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು.

ಆ ನಂತರ ಇಬ್ಬರೂ ಪರಿಣಾಮಕಾರಿ ದಾಳಿ ನಡೆಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ವಿಫಲರಾಗಿದ್ದರು. ಇವರ ಎಕಾನಮಿ ರೇಟ್‌ ಏರಿದ್ದು ಇದಕ್ಕೆ ನಿದರ್ಶನದಂತಿತ್ತು. ಜಡೇಜ 2014ರ ಅಕ್ಟೋಬರ್‌ನಿಂದ 2017ರ ಜೂನ್‌ 19ರ ಅವಧಿಯಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ಒಮ್ಮೆಯೂ ಮೂರು ವಿಕೆಟ್‌ ಸಾಧನೆ ಮಾಡಿರಲಿಲ್ಲ.ಇದು ಅವರ ಸಾಮರ್ಥ್ಯ ಮಟ್ಟ ಕುಸಿದಿರುವುದಕ್ಕೆ ಪುಷ್ಟಿ ನೀಡುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT