ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆಯ ಕಾಫಿ, ಟೀ ಜೊತೆಗೆ ಕುರುಕಲು ಸವಿ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕ್ಯಾಪ್ಸಿಕಂ-ಕ್ಯಾಬೇಜ್ ಪಕೋಡ

ಬೇಕಾಗುವ ಸಾಮಗ್ರಿಗಳು: 1 ದೊಡ್ಡ ದಪ್ಪ ಮೆಣಸು ಸಣ್ಣಗೆ ಹೆಚ್ಚಿದ್ದು, 1 ಕಪ್ ಸಣ್ಣಗೆ ಹೆಚ್ಚಿದ ಎಲೆಕೋಸು, 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು, 1 ತುಂಡು ಶುಂಠಿ, ಸ್ವಲ್ಪ ಕರಿಬೇವು, 3 ಸಣ್ಣಗೆ ಹೆಚ್ಚಿದ ಹಸಿಮೆಣಸು, 1 ಚಮಚ ಜೀರಿಗೆ, 1 ಚಮಚ ದನಿಯ, 1 ಚಮಚ ಸೋಂಪು, ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಚಿಟಿಕೆ ಗರಂ ಮಸಾಲ, ಅರ್ಧ ಕಪ್ ಅಕ್ಕಿಹಿಟ್ಟು, ಅರ್ಧ ಕಪ್ ಮೈದಾ ಹಿಟ್ಟು, 1 ಚಮಚ ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಸಣ್ಣ ಮಿಕ್ಸಿ ಜಾರಿಗೆ ಹಸಿಮೆಣಸು, ಶುಂಠಿ, ಜೀರಿಗೆ, ದನಿಯ, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ನೀರು ಹಾಕದೇ ತರಿ ತರಿಯಾಗಿ ಪೇಸ್ಟ್ ಮಾಡಬೇಕು. ಈ ಪೇಸ್ಟ್‌ಗೆ ಹೆಚ್ಚಿದ ಕ್ಯಾಪ್ಸಿಕಂ, ಎಲೆಕೋಸು, ಈರುಳ್ಳಿ ಎಲ್ಲವನ್ನೂ ಹಾಕಿ, ಸ್ವಲ್ಪ ಬಿಸಿಯಾದ ಎಣ್ಣೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ ಇಡಬೇಕು.

10 ನಿಮಿಷದ ನಂತರ ಸ್ವಲ್ಪಸ್ವಲ್ಪ ನೀರು ಬಿಟ್ಟಿರುತ್ತದೆ, ಆಗ ಉಳಿದ ಸಾಮಗ್ರಿಗಳನ್ನೆಲ್ಲಾ ಸೇರಿಸಿ ಗಟ್ಟಿಯಾಗಿ ಕಲಸಬೇಕು. ಅಗತ್ಯ ಬಿದ್ದರೆ ಮಾತ್ರ ಸ್ವಲ್ಪ ನೀರು ಹಾಕಿ ಕಲೆಸಬೇಕು. ನಂತರ ಕಾದ ಎಣ್ಣೆಯಲ್ಲಿ ಪಕೋಡ ತರಹ ಬಿಟ್ಟು ಹೊಂಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಕ್ಯಾಪ್ಸಿಕಂ ಕ್ಯಾಬೇಜ್ ಪಕೋಡ ಸವಿಯಲು ಸಿದ್ಧ. ಟೊಮೆಟೊ ಕೆಚಪ್ ಜೊತೆ ಸವಿಯಬಹುದು.

***

ಕಡ್ಲೇಬೀಜದ ಪಪ್ಪು

ಬೇಕಾಗುವ ಸಾಮಗ್ರಿಗಳು: 2 ಕಪ್ ಕಡ್ಲೇಬೀಜ, 2 ಚಮಚ ಎಣ್ಣೆ, ಸ್ವಲ್ಪ ಕರಿಬೇವು, ಕಾಲು ಚಮಚ ಕಾಳುಮೆಣಸಿನ ಪುಡಿ, ಚಿಟಿಕೆ ಹಿಂಗು,ಅರ್ಧ ಚಮಚ ಮೆಣಸಿನ ಪುಡಿ, ಚಿಟಿಕೆ ಅರಿಶಿಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಕಡ್ಲೇಬೀಜವನ್ನು ಹುರಿದುಕೊಂಡು ಅದರ ಸಿಪ್ಪೆಯನ್ನು ತೆಗೆದು, ಕಡ್ಲೇಬೀಜವನ್ನು 2 ಬಾಗವಾಗಿ ಮಾಡಬೇಕು. ನಂತರ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ನಂತರ ಕರಿಬೇವು ಹಾಕಿ [ಬೆಂಕಿ ನಿಧಾನವಾಗಿರಲಿ] ಕರಿಬೇವಿನಲ್ಲಿರುವ ನೀರಿನ ಅಂಶ ಹೋದ ಕೂಡಲೇ ಚಿಟಿಕೆ ಹಿಂಗು, ಅರಿಶಿಣ, ಉಪ್ಪು ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಒಲೆ ಆರಿಸಿಬಿಡಿ. ನಂತರ ಮೊದಲೇ ಹುರಿದಿಟ್ಟು ಕೊಂಡಿರುವ ಕಡ್ಲೇಬಿಜವನ್ನು ಬಾಣಲೆಗೆ ಹಾಕಿ ಕಲೆಸಿ. ಸ್ವಲ್ಪ ಬಿಸಿ ಇರುವಾಗ ಕೈಯಿಂದ ಸರಿಯಾಗಿ ಕಲೆಸಿ ಕರಿಬೇವು ಪುಡಿಯಾಗಿ, ಎಲ್ಲ ಮಸಾಲೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಈಗ ಕಡ್ಲೇಬೀಜದ ಪಪ್ಪು ಸವಿಯಲು ಸಿದ್ದ.

***

ಪಾಪಡಿ

ಬೇಕಾಗುವ ಸಾಮಗ್ರಿಗಳು: 2 ಕಪ್ ಕಡ್ಲೇಹಿಟ್ಟು, 1 ಚಮಚ ಓಮ, ಸ್ವಲ್ಪ ಹಿಂಗು, 1 ಚಮಚ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ: ಒಂದು ಪಾತ್ರೆಗೆ ಕಡ್ಲೇಹಿಟ್ಟು, ಓಮ, ಹಿಂಗು, ಮೆಣಸಿನ ಪುಡಿ, ಉಪ್ಪು ಎಲ್ಲವನ್ನು ಸೇರಿಸಿ 4 ಚಮಚ ಬಿಸಿ ಎಣ್ಣೆ ಹಾಕಿ ಕಲಿಸಿ. ನಂತರ ನೀರು ಹಾಕಿ ಗಟ್ಟಿಯಾಗಿ ಹಿಟ್ಟನ್ನು ಕಲಿಸಬೇಕು. ಚಕ್ಕುಲಿ ಒರಳಿಗೆ ಪಾಪಡಿ ಅಚ್ಚು ಹಾಕಿ ಹಿಟ್ಟನ್ನು ಅದರಲ್ಲಿ ತುಂಬಿಸಿ ಕಾದ ಎಣ್ಣೆ ಬಾಣಾಲೆಗೆ ಒತ್ತಿ, ಗರಿ ಗರಿಯಾದ ನಂತರ ಎಣ್ಣೆಯಿಂದ ತೆಗೆದರೆ ರುಚಿಕರವಾದ ಪಾಪುಡಿ ಸವಿಯಲು ಸಿದ್ದ. ದಿಢೀರಾಗಿ ತಯಾರಿಸಬಹುದಾದ ಈ ತಿಂಡಿ ಸವಿಯಲು ಬಲು ರುಚಿ. ಗಾಳಿಯಾಡದ ಡಬ್ಬದಲ್ಲಿಟ್ಟರೆ 15 ದಿನಗಳವರೆಗೆ ಗರಿ ಗರಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT