ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಶಾಲೆ ಮತ್ತು ಕನ್ನಡಿಗರ ಬವಣೆ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಏಕೀಕರಣಕ್ಕೆ ಈಗ ವಜ್ರಮಹೋತ್ಸವ. ಹರಿದು ಹಂಚಿಹೋಗಿದ್ದ ಕನ್ನಡನಾಡು ಒಂದುಗೂಡಿ, ಕರ್ನಾಟಕ ಉದಯವಾಯಿತು. ಆದರೆ, ಇಂದಿಗೂ ನೆರೆ ರಾಜ್ಯಗಳಲ್ಲೇ ಉಳಿದುಕೊಂಡಿರುವ ಗಡಿಕನ್ನಡಿಗರ ಸ್ಥಿತಿ ಚಿಂತಾಜನಕವಾಗಿಯೇ ಇದೆ. ಅತ್ತ ತಾವಿರುವ ರಾಜ್ಯ, ಸಂಸ್ಕೃತಿಯನ್ನು ಅಪ್ಪಿಕೊಳ್ಳಲೂ ಆಗದ, ಇತ್ತ ಕರ್ನಾಟಕವನ್ನೂ ಸೇರಲಾಗದ ತ್ರಿಶಂಕು ಸ್ಥಿತಿ. ಅಂಥ ಗಡಿ ಕನ್ನಡಿಗರ ಬವಣೆಯನ್ನು ರಾಜ್ಯೋತ್ಸವದ ಈ ಸಂದರ್ಭದಲ್ಲಿ ತೆರೆದಿಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ರಾಜ್ಯಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಹಲವು ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಈ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ 360ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ. 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿಯೇ ಓದುತ್ತಿದ್ದಾರೆ. ಆದರೆ ಈ ಶಾಲೆಗಳಿಗೆ ದೊರಕಬೇಕಾದ ಮೂಲ ಸೌಲಭ್ಯ ಮರೀಚಿಕೆಯಾಗಿದೆ.

ಗಡಿಯಾಚೆಯ ಕನ್ನಡ ಶಾಲೆಗಳಿಗೆ ಅಗತ್ಯ ಕನ್ನಡ ಪುಸ್ತಕ ನೀಡುವಂತೆ ರಾಜ್ಯ ಸರ್ಕಾರ 2014ರಲ್ಲಿ ಆದೇಶ ಹೊರಡಿಸಿದರೂ ಬೇಡಿಕೆಯಷ್ಟು ಪುಸ್ತಕ ಪೂರೈಕೆಯಾಗುತ್ತಿಲ್ಲವೆಂಬ ಕೊರಗು ಅಲ್ಲಿನ ಮಕ್ಕಳು ಹಾಗೂ ಶಿಕ್ಷಕರನ್ನು ಕಾಡುತ್ತಿದೆ. ಕರ್ನಾಟಕವನ್ನು ಆಳಿದ ಮಹಾಶಯರು ಇವರ ಆಕ್ರಂದನವನ್ನು ಆಲಿಸಲಿಲ್ಲ ಎಂಬ ಅನಾಥಭಾವ ಕಾಡುತ್ತಲೇ ಇದೆ.

1956ರಲ್ಲಿ ಭಾಷಾವಾರು ಪ್ರಾಂತಗಳು ರಚನೆಯಾದ ನಂತರ ಗಡಿ ವಿವಾದಗಳು ಇನ್ನೂ ಹೆಚ್ಚಾದವು. ರಾಜಕೀಯ ಕಾರಣಕ್ಕಾಗಿ ಅವುಗಳಲ್ಲಿ ಹಾಗೆಯೇ ಉಳಿದುಕೊಂಡಿದ್ದೆಂದರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮಾತ್ರ. ಮೆಹರಚಂದ್‌ ಮಹಾಜನ ಆಯೋಗದ ವರದಿಯಲ್ಲಿ ಬೆಳಗಾವಿ ಕರ್ನಾಟಕದ್ದೇ ಎಂದು ನಿರ್ಧಾರಿಸಲಾಗಿದ್ದರೂ ಕೆಲವು ಮರಾಠಿಗರ ‘ಕಿರಿಕಿರಿ’ ಇನ್ನೂ ನಿಂತಿಲ್ಲ.

ಆ ಕಾಲಕ್ಕೆ ನಿರ್ಧರಿತವಾದ ಮಹಾಜನ್ ವರದಿಯನ್ನು ನಾವು ಒಪ್ಪಿಕೊಂಡಿದ್ದೇವೆ. ಆ ವರದಿ ಪೂರ್ಣ ಜಾರಿಯಾದರೆ ದಕ್ಷಿಣ ಸೊಲ್ಲಾಪುರದ ಕೆಲವು ಭಾಗಗಳು ಹಾಗೂ ಕೇರಳದ ಕಾಸರಗೋಡು ನಮ್ಮ ರಾಜ್ಯಕ್ಕೆ ಸೇರ್ಪಡೆಯಾಗುವುವು. ನಮ್ಮಲ್ಲಿನ ಒಂದು ದುರಂತವೆಂದರೆ ಹೊರನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಕನ್ನಡಿಗರ ಸಮಸ್ಯೆಗಳನ್ನು ಆಲಿಸುವ, ಪರಿಹರಿಸುವ ಒಂದು ಶಾಶ್ವತ ವ್ಯವಸ್ಥೆ ಇಲ್ಲದಿರುವುದು. ಇದರ ಪರಿಹಾರಕ್ಕೆ ಒಂದು ಸಮಗ್ರ ಗಡಿ ನೀತಿ ಹಿಂದೆಂದಿಗಿಂತ ಇಂದು ಅವಶ್ಯಕವಾಗಿದೆ.

ಇದನ್ನು ರೂಪಿಸಲು ಬದ್ಧತೆಯುಳ್ಳ ಮನಸ್ಥಿತಿಯ ಆಳುವವರ ಕೊರತೆಯಿದೆ. ಬದ್ಧತೆಯುಳ್ಳ ಕನ್ನಡಪರಹೋರಾಟಗಾರರು ಮತ್ತು ಕನ್ನಡಪರ ಸಂಘಟನೆಗಳು ಈ ಕೆಲಸಕ್ಕೆ ಮುಂದಾಗಬೇಕಿದೆ. ಆಗಮಾತ್ರ ನಾವು–ಹೊರನಾಡ ಕನ್ನಡಿಗರು ‘ನಾವೂ ತಾಯಿ ಭುವನೇಶ್ವರಿ ಮಕ್ಕಳು’ ಎಂದು ಎದೆಯುಬ್ಬಿಸಿ ಹೇಳುವ ಸ್ಥಿತಿ ನಿರ್ಮಾಣವಾಗಬಹುದು. ಇಲ್ಲದಿದ್ದರೆ ಬರುವ ವರ್ಷಗಳಲ್ಲಿ ‘ಒಂದು ಕಾಲದಲ್ಲಿ ನಾವೂ ಕನ್ನಡಿಗರಾಗಿದ್ದೆವು’ ಎಂದು ಗತವೈಭವಕ್ಕೆ ಸೀಮಿತಗೊಂಡರೆ ಅಚ್ಚರಿಪಡಬೇಕಾಗಿಲ್ಲ.

ಗಡಿಗಳಲ್ಲಿನ ಊರುಗಳಲ್ಲಿ ಕನ್ನಡಿಗರೆಂಬ ಕಾರಣಕ್ಕೆ ಪಹಣಿ, ಶೈಕ್ಷಣಿಕ ಸೌಲಭ್ಯಕ್ಕಾಗಿ ಆದಾಯ, ಜಾತಿ ಪ್ರಮಾಣಪತ್ರ ನೀಡಲು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಅಳಲು ಒಂದೆಡೆ. ಈ ಕಷ್ಟಗಳ ನಡುವೆಯೂ ಗಡಿ ಗ್ರಾಮಗಳಲ್ಲಿ ಕನ್ನಡ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಖಾಸಗಿ ಸಂಸ್ಥೆಗಳಿಗೆ ಅನುದಾನ ಸರಿಯಾಗಿ ಸಿಗುತ್ತಿಲ್ಲ. ಕೊಳೆಗೇರಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಹೊಸದಾಗಿ ಕನ್ನಡ ಶಾಲೆಗಳನ್ನು ತೆರೆಯಬೇಕೆಂದರೆ ಆಯಾ ಸರ್ಕಾರಗಳಿಂದ ಅನುಮತಿ ಸಿಗುವುದು ತುಂಬಾ ತ್ರಾಸದಾಯಕ ಕೆಲಸ.

ಅಲ್ಲಿನ ಕನ್ನಡಾಭಿಮಾನಿಗಳು ಗಡಿಗ್ರಾಮಗಳಲ್ಲಿ ಖಾಸಗಿ ಗ್ರಂಥಾಲಯಗಳನ್ನು ತೆರೆದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ನಿರಂತರವಾಗಿ ಶ್ರಮಿಸುತ್ತಲೇ ಇದ್ದಾರೆ. ಆದರೆ ಕನ್ನಡ ಪುಸ್ತಕ ಪೂರೈಕೆಯಲ್ಲಿ ಮಾತ್ರ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ‘ನಾವೀಗ ಮೂಲ ಸೌಕರ್ಯಗಳ ಸಂಕಷ್ಟದ ಸಂಕೋಲೆಯಲ್ಲಿ ಬದುಕುತ್ತಿದ್ದೇವೆ’ ಎನ್ನುತ್ತಾರೆ ಜನಸಾಮಾನ್ಯರು.

ಈ ವಿಚಾರದಲ್ಲಿ ಎಸ್.ನಿಜಲಿಂಗಪ್ಪನವರು ಸೇರಿದಂತೆ ಹಲವು ನಾಯಕರಿಂದ ಕೆಲವು ತಪ್ಪು ನಿರ್ಣಯಗಳು ಆದವು ಎಂಬುದನ್ನು ಇತಿಹಾಸ ಸಾರಿ ಸಾರಿ ಹೇಳುತ್ತದೆ. ಇದರಿಂದಾಗಿ ನಾವು ಭೌಗೋಳಿಕವಾಗಿಯೂ ಸಾಂಸ್ಕೃತಿಕವಾಗಿಯೂ ಭಾವನಾತ್ಮಕವಾಗಿಯೂ ನಷ್ಟ ಅನುಭವಿಸಿದ್ದೇವೆ ಎನ್ನುವುದು ಸುಳ್ಳಲ್ಲ. ಆಗ ನಮ್ಮನ್ನು ಆಳಿದ ನೇತಾರರು ಈ ಸೂಕ್ಷ್ಮತೆಯನ್ನು ಗಮನಿಸಿ ಅದಕ್ಕೆ ತಕ್ಕ ಕಾರ್ಯತಂತ್ರವನ್ನು ಅನುಸರಿಸಬೇಕಿತ್ತು. ಅಂದರೆ ಇದರ ಪರಿಹಾರಕ್ಕೆ ಒಮ್ಮುಖವಾದ ಆಗ್ರಹಕ್ಕಿಂತ ಹೆಚ್ಚಾಗಿ ಕೊಡು-ಕೊಳ್ಳುವಿಕೆಯ ಉಪಾಯವನ್ನು ಅನುಸರಿಸಿದ್ದರೆ ಎಂದೋ ಒಳಿತಾಗುತ್ತಿತ್ತು.

ಶೇ 70ಕ್ಕಿಂತ ಹೆಚ್ಚು ಕನ್ನಡಿಗರಿರುವ ಅನೇಕ ಭೂಭಾಗಗಳನ್ನು ಆಗ ತೋರಿದ ಹಟದಿಂದ ಕಳೆದುಕೊಂಡೆವು. ಹೀಗಾಗಿ ನಮ್ಮದೇ ನೆಲವಾದ ಕಾಸರಗೋಡು ಕೇರಳದ ಪಾಲಾದರೆ; ಆದೋನಿ, ಆಲೂರು, ರಾಯದುರ್ಗ ಮತ್ತು ಮಡಕಶಿರಾ ತಾಲ್ಲೂಕುಗಳು ಆಂಧ್ರಪ್ರದೇಶದ ಪಾಲಾದವು. ಹಾಗೆಯೇ ಜತ್ತ, ಅಕ್ಕಲಕೋಟೆ, ಸೊಲ್ಲಾಪುರ ಮತ್ತು ಲಾತೂರು ತಾಲ್ಲೂಕುಗಳು ಮಹಾರಾಷ್ಟ್ರದ ಪಾಲಾದವು. ಇನ್ನೂ ಬಹುಮುಖ್ಯವಾಗಿ ನಮ್ಮ ರಾಜಧಾನಿಗೆ ಹೊಂದಿಕೊಂಡ ಹೊಸೂರು ತಮಿಳುನಾಡಿಗೆ ಸೇರಿಹೋಯಿತು.

ಕನ್ನಡಿಗರಾದ ನಮಗೆ ಮೂಲತಃ ಸಾಮಾಜಿಕ, ಸಾಂಸ್ಕೃತಿಕ ಹಿರಿಮೆ-ಗರಿಮೆಗಳ ಬಗ್ಗೆ, ಗತಕಾಲದಲ್ಲಿ ನಮ್ಮ ನಾಡು ಹೊಂದಿದ್ದ ವಿಶಾಲವಾದ ಸರಹದ್ದಿನ ಬಗ್ಗೆ ಇರುವ ತಿಳಿವಳಿಕೆ ಸಾಲದಾಗಿದೆ. ಏಕೀಕರಣದ ಸಂದರ್ಭದಲ್ಲಿ ಆದ ಅಚಾತುರ್ಯಗಳೇ ಇದನ್ನು ಹೇಳುತ್ತವೆ.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಭಾಷಾವಾರು ಪ್ರಾಂತ್ಯಗಳ ರಚನೆಗಾಗಿ ಫಜಲ್ ಅಲಿ ಆಯೋಗದೆದುರು ನಮ್ಮವರು ಸಮರ್ಥವಾಗಿ ವಾದ ಮಂಡಿಸಬೇಕಿತ್ತು. ಆದರೆ ಏಕೀಕರಣದ ಹೋರಾಟದಲ್ಲಿ ನಮ್ಮ ನಾಯಕರು ನಮ್ಮ ಆದ್ಯತೆಗಳನ್ನು ಕಡೆಗಣಿಸಿ ಉದಾಸೀನಕ್ಕೆ ಶರಣಾದದ್ದೇ ವಿಪರ್ಯಾಸ. ಈ ಹಂತದಲ್ಲಿ ಅಲ್ಲಲ್ಲಿ ಇರುವ ಕನ್ನಡದ ಶಾಸನಗಳು, ಜನಪದರ ಹಾಡುಗಳು, ಸೋಬಾನೆ ಪದಗಳು ಹಾಗೂ ಆಡಳಿತಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಿತ್ತು. ಹೀಗೆ ಮಾಡಿದ್ದರೆ ಇಂದಿನ ಬೆಳಗಾವಿ ಗಡಿ ವಿವಾದದ ತಂಟೆಯೇ ಇರುತ್ತಿರಲಿಲ್ಲ.

1956ರಲ್ಲಿ ಕರ್ನಾಟಕ ಏಕೀಕರಣವಾದ ಮೇಲೆ ಸಮಸ್ತ ರಾಜ್ಯಕ್ಕೆ ಮೈಸೂರು ಎಂದು ಕರೆದು ಪ್ರಮಾದವನ್ನೇ ಸೃಷ್ಟಿಸಿದ್ದು ನಿಜಕ್ಕೂ ಚಾರಿತ್ರಿಕ ಲೋಪವೇ ಸರಿ. ಇದಕ್ಕೆ ಪ್ರಬಲ ಕಾರಣ ಅಖಂಡ ಕರ್ನಾಟಕದ ಜನರಲ್ಲಿ ಒಕ್ಕೊರಲಿನ ದನಿ ಮತ್ತು ಒಗ್ಗಟ್ಟು ಇಲ್ಲದೇ ಇದ್ದದ್ದು. ಅದುವೇ ಈ ಪ್ರಾಂತೀಯ ಅವಾಂತರಗಳಿಗೆ ಕಾರಣವಾಯಿತು. ಇದನ್ನು ಸರಿಪಡಿಸಲು 1973ರವರೆಗೆ ಕಾಯಬೇಕಾದ ಅನಿವಾರ್ಯ ಬಂತು.

ಇದಲ್ಲದೇ ಏಕೀಕರಣಕ್ಕೆ ಹಳೆ ಮೈಸೂರು ಭಾಗದ ಕೆಲವು ಮುಖಂಡರು ಅಪಸ್ವರ ಎತ್ತಿದ್ದರಿಂದ ಪ್ರಾದೇಶಿಕ ಅಸಮತೋಲನದ ಸಮಸ್ಯೆಗಳು ಸೃಷ್ಟಿಯಾಗಿವೆ.  ಏಕೀಕರಣದ 60 ವರ್ಷಗಳ ನಂತರದಲ್ಲಿಯೂ ಈ ಭೇದಭಾವ ಢಾಳಾಗಿಯೇ ಕಾಣುತ್ತಿದೆ.

ಕರ್ನಾಟಕ ಏಕೀಕರಣ ಆಗುವುದಕ್ಕಿಂತ ಮುಂಚೆ ಧಾರವಾಡ, ಬೆಳಗಾವಿ, ಆಗಿನ ವಿಜಾಪುರದ ಕೆಲವು ಭಾಗಗಳು ಮುಂಬೈ ಪ್ರಾಂತದ ಅಧೀನದಲ್ಲಿದ್ದವು. ಹಾಗೆಯೇ ಇತ್ತ ಕಲಬುರ್ಗಿ, ಬೀದರ್, ರಾಯಚೂರು ಸೀಮೆಗಳು ಹೈದರಾಬಾದ್‍ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು. ಆಗ ಇವುಗಳಿಗೆ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಆ ಹೆಸರಿಗೆ ಬದಲಾಗಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಎನ್ನುವ ಹೆಸರುಗಳನ್ನು ಚಾಲ್ತಿಗೆ ತರಬೇಕಾಗಿತ್ತು.

ಏಕೀಕರಣದ ಸಂದರ್ಭದಲ್ಲಿ ಭೌಗೋಳಿಕ ಏಕೀಕರಣಕ್ಕೆ ಕೊಟ್ಟ ಆದ್ಯತೆಯನ್ನು ಕರ್ನಾಟಕದ ಅಸ್ಮಿತೆಯನ್ನು ಸ್ಥಾಪಿಸುವ ಕಡೆಗೆ ಕೊಡಲಿಲ್ಲ. ವ್ಯವಸ್ಥೆಯ ಎಡವಟ್ಟುಗಳಿಂದ ಗಡಿನಾಡಿನ ಮಕ್ಕಳು ಶೈಕ್ಷಣಿಕವಾಗಿ ಹಲವು ಸೌಲಭ್ಯಗಳಿಂದ ವಂಚಿತವಾದರೂ ಕನ್ನಡ ಮಾಧ್ಯಮದಲ್ಲಿ ಓದುವ ಮನೋಭಾವದಿಂದ ಹಿಂದೆ ಸರಿದಿಲ್ಲ. ಈ ಮನೋಭಾವ ಮುಂದುವರಿಯಬೇಕಾದರೆ ಗಡಿನಾಡ ಕನ್ನಡಿಗರ ಶಿಕ್ಷಣ ವಿಷಯದಲ್ಲಿ ಇನ್ನೂ ಹೆಚ್ಚಿನ ಆದ್ಯತೆ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT