ಗಂಡು ನದಿಯ ಜಾಡು ಹಿಡಿದು

ನದಿ ದಂಡೆಗುಂಟವೇ ನಮ್ಮ ಪಯಣ. ಮೆಕ್ಕೆಜೋಳದ ರಾಶಿಯಲ್ಲಿ ತೊಡಗಿದ್ದ ರೈತರಿಗೆ ರಸ್ತೆಯೇ ಕೃಷಿ ಕಣಜ. ಹೊಲಗಳಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ಟ್ರ್ಯಾಕ್ಟರ್‌ಗಳಲ್ಲಿ ಉತ್ತರ ಕರ್ನಾಟಕದ ಜವಾರಿ ಹಾಡುಗಳು. ಅರೆರೆ ಗೊಡಚಿನಮಲ್ಕಿಯಲ್ಲಿ ಮೈದುಂಬಿಕೊಂಡಿದ್ದ ಮಾರ್ಕಂಡೇಯ ಗೋಕಾಕ್‌ ಹತ್ತಿರ ಆದಂತೆ ಸೊರಗುತ್ತಿದ್ದ

ಗಂಡು ನದಿಯ ಜಾಡು ಹಿಡಿದು

* ತಾಜುದ್ದೀನ್‌ ಆಜಾದ್‌

ಭಾರತದ ಕೆಲವೇ ಕೆಲವು ನದಿಗಳಿಗೆ ಪುರುಷ ಹೆಸರುಗಳಿವೆ. ಅಂತಹ ನದಿಗಳಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಮಾರ್ಕಂಡೇಯ ಸಹ ಒಂದು. ಈ ಗಂಡು ನದಿಯನ್ನೊಮ್ಮೆ ನೋಡಿಕೊಂಡು ಬರೋಣ ಎಂದುಕೊಂಡು ಮೊನ್ನೆ ಬೆಳ್ಳಂಬೆಳಿಗ್ಗೆ ಬೈಕ್‌ ಏರಿ ಹೊರಟಾಗ, ಚನ್ನಮ್ಮನ ಕಿತ್ತೂರು ದಾಟಿದ್ದೇ ತಡ ದಟ್ಟ ಮಂಜು. ಮಂಜು ಮುಸುಕಿದ ಹಾದಿಯಲ್ಲೇ ಸಾಗಿತು ನಮ್ಮ ಯಾನ.

ಖಾನಾಪುರ ತಾಲ್ಲೂಕು ಬೈಲೂರಿನಲ್ಲಿ ಜನಿಸುವ ಈ ನದಿಯನ್ನು ಗೊಡಚಿನಮಲ್ಕಿ ಬಳಿ ವೀಕ್ಷಿಸುವುದು ಅದೆಷ್ಟೊಂದು ಅಪ್ಯಾಯಮಾನ. ಜಲಪಾತದ ಆ ಸೊಬಗಿಗೆ ಸಾಟಿಯುಂಟೆ? ಕಾಡು ದಾರಿಯಲ್ಲಿ ಸಾಗಿಬಂದ ಆಯಾಸ ಅರೆಕ್ಷಣದಲ್ಲಿ ಮಂಗಮಾಯ. ತಿಳಿನೀಲಿ ನೀರಿನಿಂದ ತುಂಬಿದ್ದ ನದಿಯ ಮಧ್ಯದಲ್ಲಿ ಮೀನುಗಾರರ ದೋಣಿ. ದಂಡೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಅಮ್ಮನ ಕಾರ್ಯವೈಖರಿ ವೀಕ್ಷಿಸುತ್ತಿದ್ದ ಬಾಲಕಿ. ಹೆಬ್ಬಂಡೆ ಮೇಲೆ ಜೋಡಿ ಯೊಂದರ ಫೋಟೊ ತೆಗೆಯುವ ಸಂಭ್ರಮ. ಅಲ್ಲೇ ನದಿ ದಂಡೆಯ ಮೇಲೆ ಮೇಕೆಗಳ ಹಿಂಡು. ನೆತ್ತಿಗೆ ತಂಪೆರೆಯುತ್ತಿದ್ದ ಮರದತ್ತ ತಲೆ ಎತ್ತಿ ನೋಡಿದರೆ ಗೀಜಗನ ಅಂದದ ಗೂಡು. ಕಸ–ಕಡ್ಡಿಗಳಿಂದ ಅಷ್ಟು ಅಂದನೆಯ ಗೂಡು ಹೆಣೆದ ಆ ಬಾನಾಡಿ ಭಲೆ ದರ್ಜಿಯೇ ಬಿಡಿ.

ನದಿ ದಂಡೆಗುಂಟವೇ ನಮ್ಮ ಪಯಣ. ಮೆಕ್ಕೆಜೋಳದ ರಾಶಿಯಲ್ಲಿ ತೊಡಗಿದ್ದ ರೈತರಿಗೆ ರಸ್ತೆಯೇ ಕೃಷಿ ಕಣಜ. ಹೊಲಗಳಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ಟ್ರ್ಯಾಕ್ಟರ್‌ಗಳಲ್ಲಿ ಉತ್ತರ ಕರ್ನಾಟಕದ ಜವಾರಿ ಹಾಡುಗಳು. ಅರೆರೆ ಗೊಡಚಿನಮಲ್ಕಿಯಲ್ಲಿ ಮೈದುಂಬಿಕೊಂಡಿದ್ದ ಮಾರ್ಕಂಡೇಯ ಗೋಕಾಕ್‌ ಹತ್ತಿರ ಆದಂತೆ ಸೊರಗುತ್ತಿದ್ದ. ಸಣ್ಣದಾಗಿ ಹರಿಯುತ್ತಿದ್ದ ನೀರಿನಲ್ಲಿ ಎಮ್ಮೆಗಳ ಮಜ್ಜನ.

ಜಾಡು ಹಿಡಿದು ಮುಂದೆ ಹೋದಾಗ ಗೋಕಾಕ್‌ ಬಳಿಯೇ ಮಾರ್ಕಂಡೇಯ, ಘಟಪ್ರಭೆ ಮಡಿಲಿನ ತಿಳಿನೀಲದಲ್ಲಿ ಲೀನವಾಗಬೇಕೇ? ಸಂಗಮದ ಸ್ಥಳ ನೋಡಿಕೊಂಡು ಗೋಕಾಕ್‌ ಜಲಪಾತಕ್ಕೆ ಬಂದರೆ ಎರಡೂ ನದಿಗಳು ಕೊಳ್ಳಕ್ಕೆ ಬೀಳುತ್ತಿದ್ದುದು ಒಂದು ಸಣ್ಣ ತೊರೆಯಾಗಿ! ತೂಗು ಸೇತುವೆ ದಾಟಿ, ಹತ್ತಿರದ ದೇವಸ್ಥಾನ ಏರಿ ನಿಂತಾಗ ಕಂಡ ನೋಟ ಎಂತಹ ಅಮೋಘ. ಜಲಸಾಗರದ ತಾಣವಾಗಬೇಕಿದ್ದ ಮೇಲಿನ ಬಂಡೆಯಲ್ಲಿ ಜನಸಾಗರ. ಅಲ್ಲೇ ನಮ್ಮ ಯಾನಕ್ಕೂ ಬ್ರೇಕ್‌.

ಕ್ಯಾಮೆರಾದ ಚಿಪ್ ತುಂಬಿತುಳುಕುವಷ್ಟು ಫೋಟೊಗಳೇ ಫೋಟೊಗಳು. ಹಸಿದ ಹೊಟ್ಟೆಗೆ ಕಾದಿತ್ತು ಗೋಕಾಕ್ ಕರದಂಟಿನ ರಸದೌತಣ.

⇒ಚಿತ್ರಗಳು: ಲೇಖಕರವು

Comments
ಈ ವಿಭಾಗದಿಂದ ಇನ್ನಷ್ಟು
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

ಕರ್ನಾಟಕ ದರ್ಶನ
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

16 Jan, 2018
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

ಕರ್ನಾಟಕ ದರ್ಶನ
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

16 Jan, 2018
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

ಕರ್ನಾಟಕ ದರ್ಶನ
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

16 Jan, 2018
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

ಕರ್ನಾಟಕ ದರ್ಶನ
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

9 Jan, 2018
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

ಕರ್ನಾಟಕ ದರ್ಶನ
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

9 Jan, 2018