ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ತಕಾಭಿಷೇಕ ಕಾಮಗಾರಿ ಚುರುಕುಗೊಳಿಸಿ

Last Updated 31 ಅಕ್ಟೋಬರ್ 2017, 7:23 IST
ಅಕ್ಷರ ಗಾತ್ರ

ಹಾಸನ: ಶ್ರವಣಬೆಳಗೊಳದಲ್ಲಿ ಜರುಗುವ ಮಹಾಮಸ್ತಕಾಭಿಷೇಕದ ಸಿದ್ದತೆ ಇನ್ನಷ್ಟು ಚುರುಕುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಸ್ತಕಾಭಿಷೇಕದ ಪೂರ್ವ ಸಿದ್ಧತೆ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉತ್ಸವಕ್ಕೆ ಕೇವಲ ಮೂರು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಳ್ಳಬೇಕು. ಅಟ್ಟಣಿಗೆ ನಿರ್ಮಾಣ ಸೇರಿದಂತೆ ಕೆಲ ಪ್ರಮುಖ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. ಆದರೆ, ತಾತ್ಕಾಲಿಕ ಉಪನಗರಗಳ ನಿರ್ಮಾಣ, ರಸ್ತೆ, ಇತರೆ ಕೆಲಸಗಳಿಗೆ ಬೇಗ ಚಾಲನೆ ನೀಡಬೇಕು ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಉಪ ನಗರಗಳ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವ ಕೃಷಿ ಜಮೀನಿಗೆ ನೀಡುವ ಬೆಳೆ ಪರಿಹಾರದ ಜೊತೆಗೆ ಪೈಪ್ ಲೈನ್ ಹಾನಿಗೆ ನಷ್ಟ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪೈಪ್ ಲೈನ್‌ಗಳು ಒಡೆದು ಹಾನಿ ಉಂಟಾಗಿರುವ ಕಡೆ ಆ ಭಾಗವನ್ನು ಬದಲಾಯಿಸಿ ಕೊಡುವಂತೆ ಹಾಗೂ ಈ ಬಗ್ಗೆ ಲಿಖಿತ ಒಪ್ಪಿಗೆ ಪತ್ರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಹು ಗ್ರಾಮ ಕುಡಿಯುವ ನೀರಿನ ಪೂರೈಕೆ ಯೋಜನೆಯಡಿ ಶ್ರವಣಬೆಳಗೊಳಕ್ಕೆ ನೀರು ಪೂರೈಸುವುದು ಸೂಕ್ತ. ಇದರಿಂದ ಗ್ರಾಮ ಪಂಚಾಯಿತಿಗೆ ತಗಲುವ ಹೆಚ್ಚುವರಿ ವಿದ್ಯುತ್ ಶುಲ್ಕ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಭೂ ಗುರುತ್ವಾಕರ್ಷಣೆ ಶಕ್ತಿಯ ನೆರವಿನಿಂದ ಕಡಿಮೆ ಖರ್ಚಿನಲ್ಲಿ ಇತರೆ ಗ್ರಾಮ ಪಂಚಾಯಿತಿಗಳಿಗೂ ಕುಡಿಯುವ ನೀರು ಪೂರೈಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಜಾಗ ಒದಗಿಸಿದ್ದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಅತಿಥಿ ಗೃಹ ನಿರ್ಮಿಸಿ ಹಸ್ತಾಂತರಿಸ ಲಾಗುವುದು. ಇಲ್ಲದಿದ್ದಲ್ಲಿ ಹಿರೀಸಾವೆ ಬಳಿ ರಾಜಾಪುರ ಗ್ರಾಮದ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ಈ ಅತಿಥಿ ಗೃಹ ನಿರ್ಮಿಸಲಾಗುವುದು. ಇದರಿಂದ ವರ್ಷಪೂರ್ತಿ ಅತಿಥಿ ಗೃಹ ಸದ್ಭಳಕೆಯಾಗಲಿದೆ ಎಂದು ಹೇಳಿದರು.

ಕಾಮಗಾರಿಗಳ ಬಗ್ಗೆ ಸಕರಾತ್ಮಕವಾದ ಪ್ರಶಂಸೆಗಳು ಕೇಳಿ ಬರಬೇಕು. ಅನಗತ್ಯ ಟೀಕೆ ಕೆಲಸ ಮಾಡುವವರ ಉತ್ಸಾಹವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ಎಲ್ಲರ ಉತ್ಸವ ಎಂದು ಮನಗಂಡು ಅದರ ಯಶಸ್ಸಿಗೆ ಕೈಜೋಡಿಸಬೇಕು ಎಂದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಮಹಾಮಸ್ತಕಾಭಿಷೇಕ ಕಾರ್ಯಾಧ್ಯಕ್ಷ ಜಿತೇಂದ್ರ ಕುಮಾರ್ ಹಾಗೂ ವಿಶೇಷ ಕರ್ತವ್ಯಾಧಿಕಾರಿ ವರಪ್ರಸಾದ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ಜಾನಕಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮಹೋತ್ಸವ ಸಿದ್ಧತಾ ಪ್ರಗತಿ ಕುರಿತು ಮಾಹಿತಿ ನೀಡಿದರು.

ಮಹೋತ್ಸವದ ಉಸ್ತುವಾರಿ ವಿಶೇಷ ಅಧಿಕಾರಿ ರಾಕೇಶ್ ಸಿಂಗ್, ಸಚಿವರ ಆಗಮನಕ್ಕೂ ಮುನ್ನ ಪ್ರತ್ಯೇಕವಾಗಿ ಮಹಾಮಸ್ತಕಾಭಿಷೇಕದ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಸಲಹೆ, ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT