ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಲೈವ್‌: ಹೊಸ ತಂತ್ರಜ್ಞಾನ

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇನ್ನು ಮುಂದೆ ವಾಟ್ಸ್‌ ಆ್ಯಪ್‌ ತೆರೆದರೆ, ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಇರುವ ವ್ಯಕ್ತಿಗಳಲ್ಲಿ ಯಾರೆಲ್ಲಾ, ಎಲ್ಲೆಲ್ಲಿ (ಯಾವ ಸ್ಥಳದಲ್ಲಿ) ಇದ್ದಾರೆ ಎಂಬ ನಿಖರ ಮಾಹಿತಿ ಲಭಿಸುತ್ತದೆ. ಇಷ್ಟು ದಿನ ಅವರು ಕೊನೆಯ ಬಾರಿ ಯಾವಾಗ ವಾಟ್ಸ್‌ ಆ್ಯಪ್‌ ತೆರೆದು ನೋಡಿದ್ದರು ಎಂಬ ಮಾಹಿತಿ ಮಾತ್ರ ಲಭಿಸುತ್ತಿತ್ತು. ಈಗ ಅವರು ಕೊನೆಯ ಬಾರಿ ಯಾವ ಸ್ಥಳದಲ್ಲಿದ್ದರು ಎಂಬ ವಿವರವೂ ಸಿಗುತ್ತದೆ.

ಹೌದು. ವಾರದ ಹಿಂದೆ ವಾಟ್ಸ್‌ ಆ್ಯಪ್‌ ‘ಲೈವ್ ಲೊಕೇಶನ್‌’ (live location) ಎಂಬ ಈ ತಂತ್ರಜ್ಞಾವನ್ನು ಪರಿಚಯಿಸಿದೆ. ಅಂದರೆ, ಬಳಕೆದಾರರು, ತಾವು ಕಳುಹಿಸುವ ಸಂದೇಶದ ಜತೆಗೆ, ಸದ್ಯ ತಾವು ಇರುವ ಸ್ಥಳದ ಮಾಹಿತಿಯನ್ನೂ ಇನ್ನೊಬ್ಬರ ಜತೆಗೆ ಹಂಚಿಕೊಳ್ಳಬಹುದು. ಆದರೆ, ಇದರ ಆಯ್ಕೆಯನ್ನು ಸಂಪೂರ್ಣವಾಗಿ ಗ್ರಾಹಕರಿಗೆ ಬಿಟ್ಟಿದೆ. ಬಳಕೆದಾರ ಇಚ್ಛಿಸಿದರೆ ಇದನ್ನು ಚಾಲನೆಗೊಳಿಸಬಹುದು, ಅಥವಾ ಸ್ಥಗಿತಗೊಳಿಸಬಹುದು. ಸದ್ಯ ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಸುತ್ತಿರುವ ಗ್ರಾಹಕರಿಬ್ಬರಿಗೂ ಈ ತಂತ್ರಜ್ಞಾನ ಬಳಕೆಗೆ ಲಭ್ಯವಿದೆ.

ಇದು ರಿಯಲ್‌ ಟೈಮ್‌ ತಂತ್ರಜ್ಞಾನ. ಅಂದರೆ ಒಮ್ಮೆ ಬಳಕೆದಾರ ವಾಟ್ಸ್‌ ಆ್ಯಪ್‌ ಮೂಲಕ ತಾನಿರುವ ಸ್ಥಳದ (ಲೊಕೇಶನ್‌) ಮಾಹಿತಿಯನ್ನು ಇನ್ನೊಬ್ಬ ಬಳಕೆದಾರನ ಜತೆಗೆ ಹಂಚಿಕೊಂಡರೆ ನಂತರ, ಆತ  ಸ್ಥಳ ಬದಲಾವಣೆ ಮಾಡಿದ ಕೂಡಲೇ ಸ್ವಯಂಚಾಲಿತವಾಗಿ ಇದು ಅಪ್‌ ಡೇಟ್‌ ಆಗುತ್ತಿರುತ್ತದೆ. ಇನ್ನೊಂದು ತುದಿಯಲ್ಲಿರುವ ಬಳಕೆದಾರನಿಗೆ ಲೈವ್‌ ಲೊಕೇಷನ್‌ ಮಾಹಿತಿ ರವಾನೆಯಾಗುತ್ತಿರುತ್ತದೆ. ಗೂಗಲ್‌ ಮ್ಯಾಪ್‌ ತೆರೆದರೆ ಸದ್ಯ ಆ ವ್ಯಕ್ತಿ ಎಲ್ಲಿದ್ದಾನೆ, ಯಾವ ಸ್ಥಳದಲ್ಲಿದ್ದಾನೆ ಎನ್ನುವುದನ್ನು ನಿಖರವಾಗಿ ಪತ್ತೆ ಹೆಚ್ಚಬಹುದು.

‘ಈ ತಂತ್ರಜ್ಞಾನವು ಸಂವಹನದಲ್ಲಿ ತೊಡಗಿರುವ ಇಬ್ಬರು ವ್ಯಕ್ತಿಗಳ ನಡುವಿನ ಅಂತರವನ್ನು ಗಣನೀಯವಾಗಿ ತಗ್ಗಿಸುತ್ತದೆ’ ಎನ್ನುತ್ತಾರೆ ವಾಟ್ಸ್‌ ಆ್ಯಪ್‌ ಕಂಪೆನಿಯ ಮಾರುಕಟ್ಟೆ ವ್ಯವಸ್ಥಾಪಕ ಝಫೀರ್‌ ಖಾನ್‌.

ಹೀಗೆ ಬಳಸಬಹುದು: ವಾಟ್ಸ್ ಆ್ಯಪ್‌ನಲ್ಲಿ ಸಂದೇಶ ಟೈಫ್‌ ಮಾಡುವ ಸ್ಥಳದಲ್ಲಿ ಇರುವ ಅಟ್ಯಾಚ್‌ ಮೆಂಟ್‌ ಐಕಾನ್‌ ಮೇಲೆ ಕ್ಲಿಕ್‌ ಮಾಡಿದರೆ ‘ಲೊಕೇಶನ್‌’ ಎಂಬ ಆಯ್ಕೆ ಲಭಿಸುತ್ತದೆ. ಇಲ್ಲಿ ಕ್ಲಿಕ್‌ ಮಾಡಿ ನಿಮ್ಮ ಫೋನ್‌ ನಲ್ಲಿ ಲೊಕೇಶನ್‌ ಬಟನ್‌ ಚಾಲನೆಗೊಳಿಸಿದರೆ, ಸದ್ಯ ನೀವಿರುವ ಸ್ಥಳದ ಮಾಹಿತಿ ಲಭಿಸುತ್ತದೆ. ‘ಶೇರ್‌ ಲೈವ್‌ ಲೊಕೇಶನ್‌’ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡುವ ಮೂಲಕ ಈ ಮಾಹಿತಿಯನ್ನು ನೀವು ಇನ್ನೊಬ್ಬ ವಾಟ್ಸ್‌ ಆ್ಯಪ್‌ ಬಳಕೆದಾರ ಅಥವಾ ವಾಟ್ಸ್‌ ಆ್ಯಪ್‌ ಗುಂಪಿನ ಜತೆಗೆ ಹಂಚಿಕೊಳ್ಳಬಹುದು.

ಐಫೋನ್‌ ಬಳಸುತ್ತಿರುವವರು ಸಂದೇಶ ಟೈಪ್‌ ಮಾಡುವಲ್ಲಿ ಇರುವ ‘ಪ್ಲಸ್‌’ ಚಿಹ್ನೆಯನ್ನು ಒತ್ತುವ ಮೂಲಕ ಈ ಆಯ್ಕೆಯನ್ನು ಚಾಲನೆಗೊಳಿಸಬಹುದು. ಎಷ್ಟು ಸಮಯದವರೆಗೆ ನಿಮ್ಮ ಲೈವ್‌ ಲೊಕೇಶನ್‌ ಹಂಚಿಕೊಳ್ಳಲು ಬಯಸುತ್ತೀರಾ ಎಂಬ ಆಯ್ಕೆಯನ್ನೂ ವಾಟ್ಸ್‌ ಆ್ಯಪ್‌ ನೀಡಿದೆ. ಅಂದರೆ ಗ್ರಾಹಕರು 5 ನಿಮಿಷ, 10ನಿಮಿಷ, 1 ಗಂಟೆ, 8 ಗಂಟೆ ಹೀಗೆ ತಾವು ಬಯಸಿದಷ್ಟು ಸಮಯ ಸ್ಥಳ ಮಾಹಿತಿಯನ್ನು ಇನ್ನೊಬ್ಬರ ಜತೆಗೆ ಹಂಚಿಕೊಳ್ಳಬಹುದು. ನಿಗದಿತ ಸಮಯ ಮುಗಿಯುವುದಕ್ಕಿಂತ ಮುನ್ನವೇ ಈ ಸ್ಥಳ ಮಾಹಿತಿ ಹಂಚಿಕೆಯನ್ನು ಕಡಿತಗೊಳಿಸಬಹುದು. ಅಥವಾ ನಿಗದಿ ಪಡಿಸಿದ ಅವಧಿ ಮುಗಿಯುತ್ತಿದ್ದಂತೆ ಸ್ವಯಂಚಾಲಿತವಾಗಿ ಇದು ಸ್ಥಗಿತಗೊಳ್ಳುತ್ತದೆ.

ಅಕೌಂಟ್‌ ಸೆಟ್ಟಿಂಗ್ಸ್‌ ವಿಭಾಗಕ್ಕೆ ಹೋಗಿ, ಅಲ್ಲಿ ತಮ್ಮ ವಾಟ್ಸ್‌ ಆ್ಯಪ್‌ ಸಂಪರ್ಕ ಪಟ್ಟಿಯಲ್ಲಿರುವ ಹೆಸರಿನ ಮೇಲೆ ಕ್ಲಿಕ್‌ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಆಯ್ಕೆಯೂ ಇದೆ. ಲೈವ್‌ ಲೊಕೇಶನ್‌ ಆಯ್ಕೆಯನ್ನು ಸಕ್ರಿಯಗೊಳಿಸಿಕೊಂಡವರ ಹೆಸರಿನ ಮುಂದೆ ಇರುವ ‘ವೀವ್‌ ಲೈವ್‌ ಲೊಕೇಶನ್‌’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿದರೆ, ಸದ್ಯ ಅವರು ಎಲ್ಲಿ ಇದ್ದಾರೆ, ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದಾರೆ, ಸ್ವಲ್ಪ ಸಮಯದ ಹಿಂದೆ ಎಲ್ಲಿದ್ದರು ಎಂಬಿತ್ಯಾದಿ ಹೆಚ್ಚುವರಿ ಮಾಹಿತಿಯೂ ಲಭಿಸುತ್ತದೆ.

ಈ ಆಯ್ಕೆ ಚಾಲನೆಗೊಳಿಸಿದರೆ ಸದ್ಯ ಇರುವ ಸ್ಥಳದಲ್ಲಿ ವಾಹನ ದಟ್ಟಣೆ ಹೇಗಿದೆ ಎಂಬ ಮಾಹಿತಿಯನ್ನೂ ಗೂಗಲ್‌ ಮ್ಯಾಪ್‌ ನೆರವಿನಿಂದ ಪಡೆಯಬಹುದು. ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಇನ್ನೊಬ್ಬರಿಗಾಗಿ ಒಂದು ಸ್ಥಳದಲ್ಲಿ ಕಾಯುತ್ತಿದ್ದರೆ, ಬರಬೇಕಾದ ವ್ಯಕ್ತಿ ಎಲ್ಲಿದ್ದಾರೆ, ಅಲ್ಲಿ ಸಂಚಾರ ದಟ್ಟಣೆ ಇದೆಯೇ ಎಂಬ ಮಾಹಿತಿಯೂ ವಾಟ್ಸ್‌ ಆ್ಯಪ್‌ನಲ್ಲಿ ಪಡೆಯಬಹುದು.

‘ಲೈವ್ ಲೊಕೇಶನ್’ ಸೌಲಭ್ಯವನ್ನು ಗ್ರಾಹಕರ ನಡುವೆ ಅಲ್ಪಾವಧಿ ಬಳಕೆಗಾಗಿ ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಅಂದರೆ ತುರ್ತು ಪರಿಸ್ಥಿತಿಯಲ್ಲಿ, ಅಪಾಯದಲ್ಲಿದ್ದಾಗ, ಇದರ ನೆರವು ಪಡೆಯಬಹುದು’ ಎನ್ನುತ್ತಾರೆ ಝಫೀರ್‌ ಖಾನ್‌. ಬಳಕೆದಾರ ಹಂಚಿಕೊಂಡಿರುವ ಸ್ಥಳದ ಮಾಹಿತಿ ಅಪ್‌ ಡೇಟ್‌ ಆಗಿದೆಯೇ, ಅಥವಾ ಎಷ್ಟು ಹಳೆಯದು ಎಂಬ ವಿವರವನ್ನೂ ಇಲ್ಲಿ ಪಡೆಯಬಹುದು. ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಯ ಪ್ರೊಫೈಲ್‌ ಚಿತ್ರದ ಮೇಲೆ ಕ್ಲಿಕ್‌ ಮಾಡಿದಾಗ, ಆತ ಹಂಚಿಕೊಂಡ ಸ್ಥಳಕ್ಕೂ ಸದ್ಯ ನಿಂತಿರುವ ಸ್ಥಳಕ್ಕೂ ಇರುವ ಅಂತರವನ್ನೂ ತಿಳಿಯಬಹುದು.

ವಾಟ್ಸ್‌ ಆ್ಯಪ್ ಗ್ರೂಪ್‌ ಸಂವಹನದಲ್ಲಿ ಈ ತಂತ್ರಜ್ಞಾನ ಹೆಚ್ಚು ನೆರವಿಗೆ ಬರುತ್ತದೆ. ಒಂದೇ ಗುಂಪಿನ ಸದಸ್ಯರು ತಾವಿರುವ ಸ್ಥಳದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಬಹುದು. ಪ್ರವಾಸ, ಚಾರಣ ಹೋದ ಸಂದರ್ಭದಲ್ಲಿ ಅಥವಾ ಜತೆಯಾಗಿ ಪರಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಯಾರೂ ತಪ್ಪಿಸಿಕೊಳ್ಳದಂತೆ ನಿಗಾ ವಹಿಸಲು ಅಥವಾ ಎಲ್ಲರೂ ಸದಾ ಸಂಪರ್ಕದಲ್ಲಿ ಇರಲು ಈ ಆಯ್ಕೆ ಅನುಕೂಲಕ್ಕೆ ಬರುತ್ತದೆ’ ಎನ್ನತ್ತಾರೆ ಖಾನ್‌.

ಇದೇ ಮಾದರಿಯ ತಂತ್ರಜ್ಞಾನವು ಟೆಲಿಗ್ರಾಂ ಮತ್ತು ಫೇಸ್‌ ಬುಕ್‌ ಮೆಸೆಂಜರ್‌ ಸೇವೆಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ. ಆದರೆ, ಅಲ್ಲಿ ಸೀಮಿತ ಬಳಕೆಗೆ ಮಾತ್ರ ಅವಕಾಶವಿದೆ. ವಾಟ್ಸ್ ಆ್ಯಪ್‌ ನಲ್ಲಿ ಇದು 24x7 ಮಾದರಿಯಲ್ಲಿ ಲಭ್ಯವಿದೆ. ಇದರ ಒಂದೇ ಒಂದು ನಕಾರಾತ್ಮಕ ಅಂಶವೆಂದರೆ ಇದು ಮೊಬೈಲ್‌ ನ ಬ್ಯಾಟರಿಯನ್ನು ಬಹುಬೇಗ ಖಾಲಿ ಮಾಡುತ್ತದೆ. ಲೊಕೇಶನ್‌ ಆಯ್ಕೆಯನ್ನು ಚಾಲನೆಯಲ್ಲಿಟ್ಟುಕೊಂಡವರ ಡೇಟಾ ಮತ್ತು ಬ್ಯಾಟರಿ ಎರಡೂ ಮಂಜುಗಡ್ಡೆಯಂತೆ ಕರಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT