ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಲೋಕದ ವಿಶಿಷ್ಟ ಸ್ಟಾರ್ಟ್‌ಅಪ್‌

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಇರುವ ರಾಜ್ಯ ಸರ್ಕಾರದ ಜೈವಿಕ ಸಂಶೋಧನಾ ಕೇಂದ್ರದ ಪುಟ್ಟ ಕೋಣೆಯಲ್ಲಿ ನೆರೆದಿದ್ದ ವಿವಿಧ ವಿಷಯಗಳಲ್ಲಿ ಪರಿಣತರಾದ ಯುವ ತಂತ್ರಜ್ಞರು ತಮ್ಮ ಸ್ಟಾರ್ಟ್‌ಅಪ್‌, ‘ನೆಕ್ಸ್ಟ್‌ ಬಿಗ್‌ ಇನ್ನೋವೇಷನ್‌ ಲ್ಯಾಬ್‌’ನ (ಎನ್‌ಬಿಐಎಲ್‌) ಕಾರ್ಯಚಟುವಟಿಕೆಗಳನ್ನು ಒಂದೊಂದಾಗಿ ವಿವರಿಸುತ್ತ ಹೋದಂತೆ, ಭವಿಷ್ಯದ ವೈದ್ಯಕೀಯ ಮತ್ತು ಜೈವಿಕ ತಂತ್ರಜ್ಞಾನ ರಂಗದಲ್ಲಿ ಆಗಬಹುದಾದ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿರುವ ಅಲ್ಲಿನ ಪರಿಕರಗಳು, ಅವುಗಳ ಹಿಂದಿರುವ ಯುವ ಪ್ರತಿಭೆಗಳ ಬುದ್ಧಿಮತ್ತೆಗೆ ಯಾರಾದರೂ ಬೆರಗಾಗಲೇ ಬೇಕಾಗುತ್ತದೆ.

ಈ ಪುಟ್ಟ ಪ್ರಯೋಗಾಲಯದಲ್ಲಿ ಇರುವ ಚಿಕ್ಕ ಗಾತ್ರದ ಮೂರು ಆಯಾಮದ (ತ್ರೀಡಿ) ಜೈವಿಕ ಮುದ್ರಣ ಯಂತ್ರ (bio printer) ಮತ್ತು ಶಸ್ತ್ರಚಿಕಿತ್ಸರಿಗೆ ನೆರವಾಗಲಿರುವ ವಿವಿಧ ಅಂಗಾಂಗಗಳ ತ್ರೀಡಿ ಮುದ್ರಣ ಮಾದರಿಗಳು ಗಮನ ಸೆಳೆಯುತ್ತವೆ. ಭವಿಷ್ಯದಲ್ಲಿ ಜೀವರಕ್ಷಕ ಔಷಧಿಗಳು ಅಗ್ಗವಾಗುವ,  ಆಕರ ಕೋಶಗಳಿಂದಲೇ ಅಂಗಾಂಗಗಳನ್ನು ಸೃಷ್ಟಿಸಿ ಕೊಡುವ ಮಹತ್ವಾಕಾಂಕ್ಷೆಯ ಯೋಜನೆಯ ಕನಸಿನ ಬೀಜವೂ ಅಲ್ಲಿ  ಮೊಳಕೆಯೊಡೆಯುತ್ತಿದೆ.

ಅಪಘಾತ, ಸುಟ್ಟಗಾಯ, ಬದಲಿ ಮಂಡಿಚಿಪ್ಪು ಜೋಡಣೆ, ಮುಖದ ಅಂದ ಹೆಚ್ಚಿಸುವ ಸುರೂಪಿ ಶಸ್ತ್ರಚಿಕಿತ್ಸೆ (maxillo facial) ಕೈಗೊಳ್ಳುವ ಮೊದಲೇ ಆಸ್ಪತ್ರೆಗೆ ದಾಖಲಾದವರ ನಿರ್ದಿಷ್ಟ ಅಂಗಾಂಗಗಳ ಸಿಟಿ ಸ್ಕ್ಯಾನ್‌ ಆಧರಿಸಿ ಸಿದ್ಧಪಡಿಸಿದ ಮಾದರಿಗಳು ಸುಲಲಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನೆರವಾಗಲಿವೆ.

ಸಿಟಿ ಸ್ಕ್ಯಾನ್‌ನ ಎಲೆಕ್ಟ್ರಾನಿಕ್‌ ಮಾದರಿ ಪಡೆದು ವಿಡಿಯೊ ಪಡೆದುಕೊಂಡು ಅದಕ್ಕೆ ಕೋಡ್‌ ಸಿದ್ಧಪಡಿಸಿ ಎಳೆಎಳೆಯಾಗಿ ಪ್ರತಿಕೃತಿ ರೂಪಿಸುವಂತೆ ತ್ರೀಡಿ ಪ್ರಿಂಟರ್‌ ಅಭಿವೃದ್ಧಿಪಡಿಸಲಾಗಿದೆ. ಮುಂದಕ್ಕೆ ಚಾಚಿರುವ ದವಡೆಯನ್ನು ಸರಿಪಡಿಸಲೂ ಈ ತಂತ್ರಜ್ಞಾನ ನೆರವಾಗುತ್ತಿದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸಾಫ್ಟ್‌ವೇರ್ ಬಳಸಿ ‘ಮಿರರ್‌ ಇಮೇಜ್‌’ ಪಡೆದು ಸೂಕ್ತ ಚಿಕಿತ್ಸೆ ನೀಡಲು ಇದರಿಂದ ಸಾಧ್ಯವಾಗಲಿದೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಅಂಗಾಂಶದ ಸಿದ್ಧ ಮಾದರಿ ಎದುರಿನಲ್ಲಿ ಇರುವಾಗ ವೈದ್ಯರ ಕೆಲಸ ಸುಲಭವಾಗಲಿದೆ. ಶಸ್ತ್ರಚಿಕಿತ್ಸೆಯನ್ನು ಕರಾರುವಾಕ್ಕಾಗಿ ನಿರ್ವಹಿಸಲು ಇದರಿಂದ ಸಾಧ್ಯವಾಗಲಿದೆ.

ತ್ರೀಡಿ ಪ್ರಿಂಟರ್‌ ಯಂತ್ರವು ಪದರಗಳ ಮೇಲೆ ಪದರಗಳನ್ನು ಪೇರಿಸುತ್ತ ಮಾದರಿಗಳನ್ನು ಸಿದ್ಧಪಡಿಸುತ್ತದೆ. ಆಪರೇಷನ್‌ ಥೇಟರ್‌ ಪ್ರವೇಶಿಸುವ ಮುನ್ನವೇ ಶಸ್ತ್ರಚಿಕಿತ್ಸಕರು, ತಮ್ಮ ಸಹೋದ್ಯೋಗಿ ವೈದ್ಯರಿಗೆ ಎಲ್ಲಿ, ಯಾವ ಭಾಗದಲ್ಲಿ ಎಷ್ಟರಮಟ್ಟಿಗೆ ಚಿಕಿತ್ಸೆ ನಡೆಸಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ಮನದಟ್ಟು ಮಾಡಿಕೊಡಲು ಈ ತ್ರೀಡಿ ಮುದ್ರಣ ಪರಿಕರಗಳು ನೆರವಾಗುತ್ತಿವೆ.

2016ರ ಮೇ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಹುತೇಕ ಕನ್ನಡದ ಯುವ ಮನಸ್ಸುಗಳಿಂದಲೇ ಆರಂಭಗೊಂಡಿರುವ ಈ ನವೋದ್ಯಮವು ‘ತ್ರೀಡಿ ಆರೋಗ್ಯ ರಕ್ಷಣೆ ಕ್ಷೇತ್ರ’ದಲ್ಲಿ ತ್ರೀಡಿ ಬಯೊ ಪ್ರಿಂಟಿಂಗ್‌ ಸೇರಿದಂತೆ ಹಲವಾರು ತಂತ್ರಾಂಶ ಮತ್ತು ಪರಿಕರಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದೆ. ಬಿಷಪ್‌ ಕಾಟನ್‌ ಶಾಲೆಯ ಸಹಪಾಠಿಗಳು ಇಲ್ಲಿ ಜತೆಯಾಗಿದ್ದಾರೆ.

‘ಈ ಪರಿಕರಗಳು ವೈದ್ಯಕೀಯ ಬೋಧನೆಗೂ ನೆರವಾಗುತ್ತಿವೆ. ಈ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯಪ್ರವೃತ್ತವಾಗಿದೆ’ ಎಂದು ತಂಡದ ಸದಸ್ಯೆ ಪೂಜಾ ವೆಂಕಟೇಶ್‌ ಹೇಳುತ್ತಾರೆ. ಮಣ್ಣಿನಲ್ಲಿ ಕರಗಬಹುದಾದ ಕಚ್ಚಾ ಸರಕಿನಿಂದಲೇ ಈ ಪ್ರತಿಕೃತಿಗಳನ್ನು ತಯಾರಿಸಲಾಗುತ್ತಿದೆ. ಸಿಟಿ ಸ್ಕ್ಯಾನ್‌ ವಿವರಗಳ ಸಾಫ್ಟ್‌ವೇರ್‌ ಆಧರಿಸಿ ಅದರ ಪ್ರತಿಕೃತಿ ತಯಾರಿಸುವ ತ್ರೀಡಿ ಪ್ರಿಂಟರ್‌ ಅನ್ನು ಈ ಯುವ ತಂತ್ರಜ್ಞರು ತಾವೇ ಸಿದ್ಧಪಡಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ₹1.50 ಕೋಟಿ ಬೆಲೆಬಾಳುವ ಈ ಪ್ರಿಂಟರ್‌ ಅನ್ನು ಇವರು ಅರ್ಧದಷ್ಟು ಕಡಿಮೆ ಬೆಲೆಯಲ್ಲಿ (₹ 75 ಲಕ್ಷ) ಸಿದ್ಧಪಡಿಸಿದ್ದಾರೆ. ಇಂತಹ ಮುದ್ರಣ ಯಂತ್ರಗಳನ್ನೂ ಸಿದ್ಧಪಡಿಸಿ ಮಾರುವ ಆಲೋಚನೆಯೂ ಇವರಿಗೆ ಇದೆ. ಇದರ ಪೇಟೆಂಟ್‌ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಇಂತಹ ಪ್ರಿಂಟರ್‌ಗೆ ವಿಶ್ವದಾದ್ಯಂತ ಮಾರುಕಟ್ಟೆ ಇದೆ. ಈ ತಂತ್ರಜ್ಞಾನಕ್ಕೆ ‘ಭಾರತದಲ್ಲಿಯೇ ತಯಾರಿಸಿ’ ಆಂದೋಲನದ ಬೆಂಬಲವೂ ಸಿಗುತ್ತಿದೆ.

ಔಷಧಿಗಳನ್ನು ಪರೀಕ್ಷಿಸುವ ಪ್ರಯೋಗಾಲಯಗಳಿಗೂ ಈ ನವೋದ್ಯಮದ ಕೆಲಸಗಳು, ಉತ್ಪನ್ನಗಳು ನೆರವಾಗಲಿವೆ. ಎಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನ ಪದವೀಧರರು ಜತೆಯಾಗಿ ಈ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ. ಭವಿಷ್ಯದಲ್ಲಿ ಕೃತಕ ಅಂಗಾಂಶಗಳನ್ನೂ ಸಿದ್ಧಪಡಿಸುವುದು ಇವರ ಉದ್ದೇಶವಾಗಿದೆ.

ತ್ರೀಡಿ ಪ್ರಿಂಟರ್‌ನಲ್ಲಿ ಸಜೀವ ಜೀವಕೋಶಗಳನ್ನು ಒಳಗೊಂಡ ಚರ್ಮದ ಪದರುಗಳನ್ನೂ ಸೃಷ್ಟಿಸಲಾಗುತ್ತಿದೆ. ಇದು ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ನೆರವಾಗಲಿದೆ. ಜೀವರಕ್ಷಕ ಔಷಧಿಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವಾಗುವ ಉತ್ಪನ್ನಗಳನ್ನೂ ಸಿದ್ಧಪಡಿಸುವುದು ಈ ಸ್ಟಾರ್ಟ್‌ಅಪ್‌ನ ಉದ್ದೇಶವಾಗಿದೆ. ಹೊಸ ಔಷಧಿಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುವ ಮುಂಚೆಯೇ ಪರೀಕ್ಷಿಗೆ ಒಳಪಡಿಸುವ ತ್ರೀಡಿ ಜೀವಕೋಶಗಳನ್ನೂ ಇಲ್ಲಿ ಸಿದ್ಧಪಡಿಸಲಾಗುತ್ತಿದೆ.

‘ಸ್ಟಾರ್ಟ್‌ಅಪ್‌ಗಳಿಗೆ ನೆರವಾಗುವ ರಾಜ್ಯ ಸರ್ಕಾರದ ಯೋಜನೆಯಡಿ ‘ಎನ್‌ಬಿಇಎಲ್‌’ಗೆ ₹ 50 ಲಕ್ಷಗಳ ನೆರವು ದೊರೆತಿದೆ. ಇದು ಇವರ ಕನಸು ನನಸಾಗಿಸಲು ಸಾಕಷ್ಟು ನೆರವಾಗುತ್ತಿದೆ. ‘ತಮ್ಮೆಲ್ಲ ಕನಸುಗಳನ್ನು ಸಾಕಾರಗೊಳಿಸಲು ಇನ್ನೂ ಸಾಕಷ್ಟು ಹಣದ ಅಗತ್ಯ ಇದೆ. ಈ ತ್ರೀಡಿ ಜೈವಿಕ ಮುದ್ರಣದ ಉತ್ಪನ್ನಗಳನ್ನು ಪ್ರಮುಖ ಔಷಧಿ ತಯಾರಿಕಾ ಸಂಸ್ಥೆಗಳು, ಸೌಂದರ್ಯ ಪ್ರಸಾಧನ ತಯಾರಕರು ಮತ್ತು ಶೈಕ್ಷಣಿಕ ಸಂಶೋಧನಾ ಪ್ರಯೋಗಾಲಯಗಳಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ’ ಎಂದು ಸಹ ಸ್ಥಾಪಕ ಅಲೋಕ್‌ ಹೇಳುತ್ತಾರೆ.

ಮಂಡಿಚಿಪ್ಪು ಜೋಡಣೆಯ ಶಸ್ತ್ರಚಿಕಿತ್ಸೆಗೆ ಒಳಗಾದವರು ಅಪಾರ ನೋವು ಅನುಭವಿಸುತ್ತಾರೆ. ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತಾರೆ. ವ್ಯಕ್ತಿಯ ಮೊಣಕಾಲಿನ ಸಿಟಿ ಸ್ಕ್ಯಾನ್‌ ಆಧರಿಸಿ ಸಿದ್ಧಪಡಿಸಿದ ತ್ರೀಡಿ ಮುದ್ರಣ ಪ್ರತಿ ಇದ್ದರೆ, ಶಸ್ತ್ರಚಿಕಿತ್ಸೆ ಹೆಚ್ಚು ಸುಲಭಗೊಳ್ಳಲಿದೆ. ಜತೆಗೆ ನೋವು ಕೂಡ ಗಮನಾರ್ಹವಾಗಿ ತಗ್ಗಲಿದೆ. ಶಸ್ತ್ರಚಿಕಿತ್ಸಕರು ಆಪರೇಷನ್‌ ಥೇಟರ್‌ಗೆ ತೆರಳುವ ಮೊದಲೇ ಶಸ್ತ್ರಚಿಕಿತ್ಸೆಯ ವೈಖರಿಯನ್ನು ಈ ತ್ರೀಡಿ ಪ್ರಿಂಟರ್‌ ಮೇಲೆ ಪ್ರಯೋಗಿಸಿ ಪರಿಣತಿ ಸಾಧಿಸಿರುವುದರಿಂದ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ತುಂಬ ಸುಲಭವಾಗಲಿದೆ.

ಮೂಗು, ತುಟಿ, ಗಲ್ಲಗಳನ್ನು ತಿದ್ದಿ ತೀಡುವ ಸುರೂಪಿ ಶಸ್ತ್ರ ಚಿಕಿತ್ಸೆಯಲ್ಲಿಯೂ ಇಂತಹದ್ದೇ ತ್ರೀಡಿ ಪ್ರಿಂಟರ್ ಬಳಿಯಲ್ಲಿ ಇದ್ದರೆ ಶಸ್ತ್ರಚಿಕಿತ್ಸಕರ ಕೆಲಸ ಚಿಟಿಕೆ ಹೊಡೆದಷ್ಟೇ ಸುಲಭವಾಗಲಿದೆ. ಸಂಕೀರ್ಣ ಸ್ವರೂಪದ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಮುಂಚಿನ ಮತ್ತು ನಂತರದ ಬದಲಾವಣೆಗಳನ್ನೂ ತೋರಿಸಿ ಅಗತ್ಯ ಬದಲಾವಣೆಗಳನ್ನೂ ಮಾಡಬಹುದು. ಮಾನವನ ಅಂಗಾಂಗಗಳನ್ನು ಜೀವಕೋಶಗಳಿಂದ ಮರುಸೃಷ್ಟಿ ಮಾಡುವುದೇ ಈ ಸ್ಟಾರ್ಟ್‌ಅಪ್‌ ಸಹ ಸ್ಥಾಪಕರ ದೀರ್ಘಾವಧಿಯ ಕನಸಾಗಿದೆ. ದೇಹದ ಒಳಗೆ ಅಳವಡಿಸುವ ಆಕರ ಕೋಶಗಳಿಂದ ಸಿದ್ಧಪಡಿಸುವ ಅಂಗಾಂಗಗಳ ಬಗ್ಗೆ ಇನ್ನೂ ಸಾಕಷ್ಟು ಸಂಶೋಧನೆ ನಡೆಯಬೇಕಾಗಿದೆ.

ದೇಶದಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ತುಂಬ ಕಡಿಮೆ ಇದೆ. ವಿವಿಧ ಬಗೆಯ ಅಂಗಾಂಗ ಜೋಡಣೆಗೆ ಕಾದು ಕುಳಿತವರ ಸಂಖ್ಯೆ ಅಪಾರವಾಗಿದೆ. ಭವಿಷ್ಯದಲ್ಲಿ ಆಕರ ಕೋಶಗಳಿಂದಲೇ ಅಂಗಾಂಗ ಸೃಷ್ಟಿಸಿ ಈ ಕೊರತೆ ನಿವಾರಿಸುವ ಮಹತ್ವಾಕಾಂಕ್ಷೆ ನಿಜ ಮಾಡುವ ನಿಟ್ಟಿನಲ್ಲಿ ಈ ನವೋದ್ಯಮದ ಉತ್ಸಾಹಿ ತರುಣ – ತರುಣಿಯರು ಕಾರ್ಯೋನ್ಮುಖರಾಗಿದ್ದಾರೆ. ಜೀವಂತ ಜೀವಕೋಶಗಳನ್ನು ಬಳಸಿ ಚರ್ಮದ ಪದರುಗಳನ್ನು ಸೃಷ್ಟಿಸುವ ಈ ಕಾರ್ಯವು ಪರ್ಯಾಯ ಚರ್ಮದ ಕಸಿಯಲ್ಲಿ ಬಳಕೆಯಾಗಲಿದೆ. ಇಲ್ಲಿ ನಡೆಯುತ್ತಿರುವ ಸಂಶೋಧನೆಯು ದೇಶಿ ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಸ್ವರೂಪವನ್ನೇ ಬದಲಿಸಲಿದೆ.

ಪ್ಲಾಸ್ಟಿಕ್‌ ಸರ್ಜರಿ, ದಂತ ಶಸ್ತ್ರಚಿಕಿತ್ಸೆ, ಅಪಘಾತ, ಕೀಲು ಜೋಡಣೆ ಸಂದರ್ಭಗಳಲ್ಲಿ ಇದರ  ಉಪಯುಕ್ತತೆ ಹೆಚ್ಚಿದೆ.ಸದ್ಯಕ್ಕೆ ಇಂತಹ ಜೈವಿಕ ಪ್ರಿಂಟರ್‌ಗಳ ವಾಣಿಜ್ಯ ಬಳಕೆ ಕಡಿಮೆ ಇದೆ. ಅದರ ಮಾರುಕಟ್ಟೆ ವಿಸ್ತರಣೆ ಮತ್ತು ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ನವೋದ್ಯಮ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ರಾಜ್ಯ ಸರ್ಕಾರದಿಂದ ₹ 50 ಲಕ್ಷ ನೆರವು ದೊರೆತಿರುವುದು ಈ ನವೋದ್ಯಮ ಮಹತ್ವಕ್ಕೆ ಕನ್ನಡಿ ಹಿಡಿಯುತ್ತದೆ.  ಸಹ ಸ್ಥಾಪಕರು, ಮೆಕ್ಯಾನಿಕಲ್‌, ಜೈವಿಕ ತಂತ್ರಜ್ಞಾನ ಮತ್ತು ಎಂಜಿನಿಯರುಗಳು ಸೇರಿದಂತೆ ತಂಡದಲ್ಲಿ ಸದ್ಯಕ್ಕೆ 10 ಜನರು ಇದ್ದಾರೆ. ದೇಹವು ಯಾವುದನ್ನು ಸುಲಭವಾಗಿ ಸ್ವೀಕರಿಸುವುದು ಎನ್ನುವುದನ್ನು ಆಧರಿಸಿ ಸೂಕ್ತ ಉತ್ಪನ್ನ ಅಭಿವೃದ್ಧಿಪಡಿಸಲಾಗುತ್ತಿದೆ.

2016ರ ಮೇ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂದ ಈ ನವೋದ್ಯಮವನ್ನು ಆರಂಭದಲ್ಲಿ ನಾಲ್ವರು ಸೇರಿಕೊಂಡು ಸೇರಿ ಆರಂಭಿಸಿದ್ದರು. ಸಹ ಸ್ಥಾಪಕರು ಸೇರಿಕೊಂಡು ₹ 10 ಲಕ್ಷ ತೊಡಗಿಸಿದ್ದಾರೆ. ಸ್ನೇಹಿತರ ಮನೆಯಲ್ಲಿಯೇ ಕೆಲ ಕಾಲ ಕಾರ್ಯನಿರ್ವಹಿಸುತ್ತಿತ್ತು. ಈಗ ಜೈವಿಕ ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿ ತಿಂಗಳ ಬಾಡಿಗೆಯೇ ₹ 50 ಸಾವಿರ ಇದೆ.ಇಲ್ಲಿರುವ ದುಬಾರಿ ಸಲಕರಣೆಗಳನ್ನು ಉಚಿತವಾಗಿ ಬಳಸಿಕೊಳ್ಳಲು ಅವಕಾಶ ಇದೆ.

ಸದ್ಯಕ್ಕೆ ಈ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಬರುತ್ತಿಲ್ಲ. ದೀರ್ಘಾವಧಿಯಲ್ಲಿ ಲಾಭದ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರಲಿದೆ. ಅದೇ ಕಾರಣಕ್ಕೆ ಸುರುಪಿ ಚಿಕಿತ್ಸೆಯ ತ್ರೀಡಿ ಮಾದರಿಗಳನ್ನು ಹೆಚ್ಚಾಗಿ ತಯಾರಿಸಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ದೇಶದ ಮೊದಲ ತ್ರೀಡಿ ಜೈವಿಕ ಪ್ರಿಂಟರ್‌ ತಯಾರಿಸಿದ ಕಾರಣಕ್ಕೆ ಟಾಟಾ ಟ್ರಸ್ಟ್‌ನ ನೆರವಿನ ಯೋಜನೆಗೂ ಆಯ್ಕೆಯಾಗಿದೆ.

ಇದರಿಂದ ಬಾಸ್ಟನ್‌ ಸಂಶೋಧನಾ ಕೇಂದ್ರದ ಸಹಯೋಗವೂ ಇವರಿಗೆ ದೊರೆಯಲಿದೆ. ಇಲ್ಲಿ ನಡೆಯುತ್ತಿರುವ ಜೀವಕೋಶಗಳ ಅಧ್ಯಯನ ಮತ್ತು ಸಿದ್ಧಪಡಿಸುವ ತ್ರೀಡಿ ಜೀವಕೋಶಗಳು ಕ್ಯಾನ್ಸರ್‌ ಮತ್ತು ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ನೆರವಿಗೆ ಬರಲಿವೆ. ಇಂತಹ ಜೀವಕೋಶಗಳ ಅಧ್ಯಯನ ಆಧರಿಸಿ ರೋಗಿಯ ಅಗತ್ಯಕ್ಕೆ ತಕ್ಕಂತೆ ವ್ಯಕ್ತಿಗತ ಔಷಧಿ ನೀಡಬಹುದು. ಇದು ಮುಂದೆ ಬಹುದೊಡ್ಡ ಮಾರುಕಟ್ಟೆಯಾಗಿ ಬೆಳೆಯಲಿದೆ.

ಜೀವರಕ್ಷಕ ಔಷಧಿಗಳ ತಯಾರಿಕೆಯು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಆರಂಭದಲ್ಲಿ ಪ್ರಾಣಿಗಳ ಮೇಲೆ ಅವುಗಳನ್ನು ಪ್ರಯೋಗಿಸಲಾಗುತ್ತಿದೆ. ಆನಂತರ ಅವುಗಳನ್ನು ಮನುಷ್ಯನ ಮೇಲೆ ಪ್ರಯೋಗಿಸಿ ಅಡ್ಡ ಪರಿಣಾಮಗಳು ಇಲ್ಲದಿರುವುದನ್ನು ಖಾತರಿಪಡಿಸಿಕೊಂಡು ಬಳಕೆಗೆ ಅನುಮತಿ ನೀಡಲಾಗುತ್ತಿದೆ. ‘ಎನ್‌ಬಿಐಎಲ್‌’ ಒದಗಿಸಿಕೊಡುವ ತ್ರೀಡಿ ಜೀವಕೋಶಗಳ ಮಾದರಿಗಳ ಮೇಲೆ ಇಂತಹ ಪ್ರಯೋಗ ನಡೆಸುವುದರಿಂದ ಸಮಯ ಮತ್ತು ಹಣದ ಉಳಿತಾಯವಾಗಲಿದೆ. ಇಲ್ಲಿ ಪ್ರೀ ಕ್ರಿನಿಕಲ್‌ ಟ್ರಯಲ್ಸ್‌ ನಡೆಯುವುದರಿಂದ, ಅಡ್ಡ ಪರಿಣಾಮಗಳನ್ನು ಪ್ರಯೋಗಾಲಯದಲ್ಲಿಯೇ ತಡೆಗಟ್ಟಬಹುದು.

ಆಕರ ಕೋಶಗಳನ್ನು (stem cells) ಬಳಸಿ ಪ್ರಯೋಗಾಲಯದಲ್ಲಿಯೇ ಹೊಸ ಅಂಗಾಂಶಗಳನ್ನೇ ಸಿದ್ಧಪಡಿಸಬಹುದು. ಭವಿಷ್ಯದಲ್ಲಿ ಇದಕ್ಕೆ ದೊಡ್ಡ ಮಾರುಕಟ್ಟೆ ಇದೆ. ಆಕರ ಕೋಶಗಳ ವಹಿವಾಟು ವಿಸ್ತರಣೆಗೆ ವೈದ್ಯಲೋಕದಲ್ಲಿ ವಿಪುಲ ಅವಕಾಶ ಇದೆ. ಈ ತಂತ್ರಜ್ಞಾನವು ಅಂಗಾಂಗ ಬದಲಿ ಜೋಡಣೆಗೂ ನೆರವಾಗಲಿದೆ. ಸರ್ಕಾರದ ನೆರವು ಪಡೆಯಲು ‘ಏಮ್ಸ್‌’ ಜತೆ ಕೆಲಸ ಮಾಡಲಾಗುತ್ತಿದೆ.

‘ಭಾರತದ ಸಂಶೋಧನಾ ಬೆಳವಣಿಗೆ ಕಾರ್ಯಕ್ರಮ’ದ 10 ಮುಂಚೂಣಿ ಸಂಸ್ಥೆಗಳಲ್ಲಿ ಎನ್‌ಬಿಐಎಲ್‌ ಕೂಡ ಒಂದಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ. www.nextbiglab.com

***
ಏರೊಸ್ಪೇಸ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌

ಏರೊಸ್ಪೇಸ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರ ಚಿತ್ರದುರ್ಗ ಬಳಿಯ ಮೆದಿಕೆಪುರದ ಅಲೋಕ್‌ ಅವರು,  ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಜತೆಯಾದ ರತನ್‌ ದೀಪ್‌ ಅವರ ಜತೆ ಸೇರಿಕೊಂಡು ಈ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ. ಜೈವಿಕ ತಂತ್ರಜ್ಞಾನ, ಎಂಜಿನಿಯರಿಂಗ್‌, ರೋಬೊಟಿಕ್ಸ್‌ ಹಿನ್ನೆಲೆಯ ತಂತ್ರಜ್ಞರು ಇವರಿಗೆ ಕೈಜೋಡಿಸಿದ್ದಾರೆ. ವೈಮಾಂತರಿಕ್ಷ ಮತ್ತು ವಾಹನ ತಯಾರಿಕೆಯಲ್ಲಿ ಬಳಕೆಯಲ್ಲಿ ಇರುವ ಈ ತಂತ್ರಜ್ಞಾನವನ್ನು ವೈದ್ಯಕೀಯ ಲೋಕಕ್ಕೂ ಪರಿಚಯಿಸುವುದು ಇವರ ಉದ್ದೇಶವಾಗಿದೆ. ಕಡಿಮೆ ವೆಚ್ಚದಲ್ಲಿ ಜೈವಿಕ ತ್ರೀಡಿ ಪ್ರಿಂಟರ್‌ ತಯಾರಿಸುವುದು ಮತ್ತು ಅದರ ಪ್ರಯೋಜನವು ಜನರಿಗೆಲ್ಲ ತಲುಪಬೇಕು ಎನ್ನುವುದು ಅವರ ಮಹದಾಸೆಯಾಗಿದೆ. ಪರಿಣತ ವೈದ್ಯರ ಸಲಹೆ ಪಡೆದುಕೊಂಡೇ ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಮುನ್ನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT