ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಾಲ್ಯಕ್ಕೆ ಜಾರೋಣ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹನುಮಂತ ತಿರುಗಲಿಲ್ಲ...
ಬೆಂಗಳೂರಿನ ಹನುಮಂತನಗರದಲ್ಲಿರುವ ರಾಮಾಂಜನೇಯ ಗುಡ್ಡ ಆಗ ನಮಗೆಲ್ಲಾ ‘ಹನುಮಂತನ ಗುಟ್ಟೆ' ಎಂದೇ ಪರಿಚಯ. ಸುಮಾರು ಹತ್ತು ಹನ್ನೊಂದು ವರುಷದ ನಮ್ಮ ಓರಗೆ ಹುಡುಗರಿಗೆಲ್ಲಾ ಅದು ವಂಡರ್ ಪಾರ್ಕ್. ಗುಡ್ಡದ ತುದಿಯಲ್ಲೊಂದು ಮಣ್ಣಿನ ಮಾಡು ಹೊದೆಸಿದ್ದ ಸಣ್ಣ ಕಲ್ಲಿನ ಮಂಟಪ, ಅದರಲ್ಲಿ ಮುಖ ಪಕ್ಕಕ್ಕೆ ತಿರುಗಿಸಿ ಬಾಲ ಎತ್ತಿ ನಿಂತು ಒಂದು ಕೈಯಲ್ಲಿ ಪರ್ವತ ಎತ್ತಿ ಹಿಡಿದು ನಿಂತ ಆಂಜನೇಯನ ಉಬ್ಬು ಶಿಲ್ಪ. ವರ್ಷಕ್ಕೊಮ್ಮೆ, ವಾರವೆಲ್ಲಾ ನಡೆಯುತ್ತಿದ್ದ ರಾಮನವಮಿ ಬಹಳ ಜೋರಿನ ಹಬ್ಬ. ಮಧ್ಯಾಹ್ನ ಪೂಜೆ ನಂತರ ಎಲ್ಲರಿಗೂ ಕೋಸಂಬರಿ, ಕಡ್ಲೆಕಾಳಿನ ಉಸುಳಿ ಮತ್ತು ಪಾನಕದ ವಿತರಣೆ. ಕಡ್ಲೆಕಾಳಿನ ಉಸುಳಿ, ಮತ್ತು ಕೋಸಂಬರಿಗೆ ಎಲೆಯಲ್ಲಿ ಕಟ್ಟಿದ ಜೊನ್ನೆ, ಪಾನಕಕ್ಕೆ ನಮ್ಮ ಮನೆಯಿಂದಲೇ ತಂದಿರುವ ಉದ್ದನೆಯ ಕಂಚಿನ ಲೋಟ. ಎಲ್ಲರೂ, ದೇವಸ್ಥಾನದ ಸುತ್ತ ಇದ್ದ ಕಲ್ಲಿನ ಕಟ್ಟೆ ಮೇಲೆ ಸಾಲಾಗಿ ಕುಳಿತುಕೊಂಡರೆ, ಪ್ರಸಾದ ಕೊಡುವವರು ಎಲ್ಲರಿಗೂ ಪ್ರಸಾದ ಹಂಚುತ್ತಾ ಬರುತ್ತಿದ್ದರು.

ಹುಡುಗರಾದ ನಾವೆಲ್ಲರೂ ಸರದಿಯಲ್ಲಿ ಮೊದಲ ಸ್ಥಾನ ಪಡೆಯಲು ಪೈಪೋಟಿ. ಯಾಕೆಂದರೆ, ಮೊದಲಿಗೆ ಪ್ರಸಾದ ತೆಗೆದುಕೊಂಡ ತಕ್ಷಣ, ಗಬಗಬ ತಿಂದು, ಗಟಗಟ ಪಾನಕ ಕುಡಿದು, ಸಾಲಿನ ಕೊನೆಯಲ್ಲಿ ಮತ್ತೆ ಕುಳಿತುಕೊಳ್ಳುವುದು. ಮತ್ತೆ ಹೊಸದಾಗಿ ಪ್ರಸಾದ, ಪಾನಕ, ಮತ್ತೆ ಕಟ್ಟೆ ಕೊನೆಯಲ್ಲಿ ಪ್ರತ್ಯಕ್ಷ. ಇಂತಹ ಒಂದು ದಿನದಲ್ಲಿ ನಾನು ಗುಡ್ಡಕ್ಕೆ ಬರುವುದು ತಡವಾಗಿ, ಪ್ರಸಾದ-ಪಾನಕ ಸರಿಯಾಗಿ ಸಿಗಲಿಲ್ಲ. ಮತ್ತೆ ಕೇಳ ಹೋದಾಗ, ಹಂಚುತ್ತಿರುವ ಪೂಜಾರಿಯೊಬ್ಬರು, ಗುಂಪಿನಿಂದ ನನ್ನ ಕೈಹಿಡಿದು ಎಳೆದು ಹಾಕಿದರು. ನನಗೆ ತುಂಬಾ ನಿರಾಶೆ, ಅವಮಾನ ಆಯಿತು. ಆಗ ನನಗೆ ನೆನಪಾಗಿದ್ದು, ರಾಜಲಕ್ಷ್ಮಿ ಟೆಂಟಿನಲ್ಲಿ ನೆಲದ ಮೇಲೆ ಕುಳಿತು ನೋಡಿದ್ದ ಭಕ್ತ ಕನಕದಾಸ ಸಿನಿಮಾ. ಅದರಲ್ಲಿ ಕನಕದಾಸ, ಕೃಷ್ಣದೇವರನ್ನು ದೇವಾಲಯದ ಹಿಂಭಾಗ ನಿಂತು ಪ್ರಾರ್ಥಿಸಿದಾಗ, ದೇವಸ್ಥಾನದ ಗೋಡೆ ಒಡೆದು, ಕೃಷ್ಣ ಪೂರ್ವ ದಿಕ್ಕಿನಿಂದ, ಪಶ್ಚಿಮ ದಿಕ್ಕಿಗೆ ತಿರುಗಿ ನಿಂತು ದರ್ಶನ ಕೊಟ್ಟಿದ್ದು ನೆನಪಿಸಿಕೊಂಡೆ. ಹಾಗೇ ಚಿಕ್ಕ ಮಗುವಾದ ಪ್ರಹ್ಲಾದನ ಪ್ರಾರ್ಥನೆಗೆ ಓಗೊಟ್ಟು ಕಂಬ ಸೀಳಿಕೊಂಡು ನರಸಿಂಹ ದೇವರು ಬಂದಿದ್ದು ಹರಿಕಥೆಯಲ್ಲಿ ಕೇಳಿ ತಿಳಿದಿದ್ದೆ.

ತಕ್ಷಣ ದೇವಸ್ಥಾನದ ಹಿಂಭಾಗ ಹೋಗಿ, ಕಟ್ಟೆ ಮೇಲೆ ಕಣ್ಮುಚ್ಚಿ ಕುಳಿತು, ದೇವರನ್ನು ಪ್ರಾರ್ಥಿಸಿದೆ. ‘ದೇವ, ನನಗೆ ನಿನ್ನ ಪ್ರಸಾದವನ್ನು ಈ ಪೂಜಾರಿ ಕೊಡಲಿಲ್ಲ. ಆದ್ದರಿಂದ, ನೀನು ನನ್ನ ಪ್ರಾರ್ಥನೆಗೆ ಮೆಚ್ಚಿ, ನಿಂತಲ್ಲೇ ಹಿಂದೆ ತಿರುಗಿಬಿಡು, ದೇವಸ್ಥಾನದ ಗೋಡೆ ಒಡೆದುಬಿಡು. ಸಿನಿಮಾದಲ್ಲಿ ತೋರಿಸಿರುವಂತೆ ಮಂಗಳಾರತಿ ಗಾಳಿಯಲ್ಲಿ ತೇಲಿ ಬರದಿದ್ದರೂ, ಪ್ರಸಾದ-ಪಾನಕ ತೇಲಿಬರಲಿ. ಆ ಪೂಜಾರಿಗೆ ಬುದ್ಧಿ ಬರಲಿ...’ ಎನ್ನುತ್ತಾ ಸುಮಾರು ಅರ್ಧ ತಾಸು ಕುಳಿತು ಆಗಾಗ ಸ್ವಲ್ಪವೇ ಕಣ್ಣು ತೆರೆದು ದೇವಾಲಯದ ಹಿಂದಿನ ಖಾಲಿ ಗೋಡೆ ನೋಡಿಕೊಳ್ಳುತ್ತಾ, ಮತ್ತೆ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುತ್ತಾ ಕುಳಿತೆ. ಆದರೆ ಪವಾಡವೇನೂ ನಡೆಯಲಿಲ್ಲ. ಸ್ವಲ್ಪ ಹೊತ್ತಿನ ನಂತರ, ಪ್ರಸಾದ-ಪಾನಕದ ಪಾತ್ರೆಗಳನ್ನು ದೇವಾಲಯದ ಹಿಂಭಾಗಕ್ಕೆ ತಂದಿಟ್ಟ ಶಬ್ದ ಕೇಳಿ ಬಂತು. ಅನುಮಾನದಿಂದ ಪೂರ್ತಿ ಕಣ್ಣು ಬಿಟ್ಟೆ. ದೇವನೇ ಪಾತ್ರೆಗಳನ್ನು ನನ್ನ ಬಳಿಗೆ ಕಳುಹಿಸಿರಬಹುದೆಂದು ಆಸೆಯಿಂದ ಇಣುಕಿದೆ. ಪಾತ್ರೆಯೊಳಗೆ ಎಲ್ಲವೂ ಖಾಲಿ. ಪಾತ್ರೆ-ಕೊಳಗಗಳನ್ನು ತೊಳೆಯಲು ಅಲ್ಲಿಗೆ ತಂದಿಟ್ಟಿದ್ದರು.

ಹನುಮಂತ ಕೊನೆಗೂ ತಿರುಗಿ ನಿಲ್ಲಲಿಲ್ಲ. ಹಸಿವು ಹೆಚ್ಚಿದಂತಾಗಿ ಹೊಟ್ಟೆಯೊಳಗೆ ಸಂಕಟ, ಪ್ರಸಾದ-ಪಾನಕ ಸಿಗದ, ಅದಕ್ಕೆ ಸಹಾಯ ಮಾಡದ ದೇವರ ಮೇಲೆ ಕೋಪ ಎಲ್ಲಾ ಸೇರಿಕೊಂಡು, ಮತ್ತೊಮ್ಮೆ ಎಂದಿಗೂ ಈ ದೇವಾಲಯಕ್ಕೆ ಬರುವುದಿಲ್ಲವೆಂದು ಶಪಥ ಮಾಡುತ್ತಾ ಮನೆಗೆ ಬಂದೆ. ಮಾರನೆಯ ದಿನ ಪ್ರಸಾದದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಾನೇ ಕುಳಿತಿದ್ದೆ.

- ಎಸ್.ಎನ್. ಶ್ರೀಧರ
ಬೆಂಗಳೂರು
* * *

ಕಾಡುವ ಜೋಳದ ಹಾಲ್ದೆನೆ
ಶ್ರಾವಣಮಾಸದ ವೇಳೆಗೆ ಜೋಳ ಹಾಲ್ದೆನೆ ಕಾಯುತ್ತದೆ. ಅದನ್ನು ನಾವು 'ಬೆಳಸಿ' ಎಂತಲೂ ಕರೆಯುವುದುಂಟು. ಆ ಹಾಲ್ಗಾಳು ನಮ್ಮ ಹಸಿವನ್ನು ನೀಗಿಸುವ ತೆನೆಯೂಟ ನಡೆಯುವುದು ಆ ಕಾಲದಲ್ಲಿಯೇ. ಕದ್ದು ಕಿತ್ತು ತಿನ್ನುವುದರ ಮೂಲಕವಾಗಿಯೇ. ಕದಿಯುವುದು ತಪ್ಪು ಎಂಬುದು ಎಂದೂ ಮನಸ್ಸಿನಲ್ಲಿ ಮೂಡಿರಲಿಲ್ಲ! ಕದಿಯುವ ಕಲೆ ರೂಢಿಗತವಾಗಿತ್ತು. ಅದು ಉದರ ಶಾಪಗ್ರಸ್ತ ಕಲೆ!

ನಮ್ಮೂರಿನಲ್ಲಿ ಈಗಿರುವಂತೆ ಶೌಚಾಲಯದ ಪರಿಕಲ್ಪನೆ ಬಹುದೂರ ಇರಲಿಲ್ಲ. ಎಲ್ಲರದೂ ಒಂದೇ ಆಚರಣೆ-ಚಂಬು ಹಿಡಿದು ಹೋಗೋದು. ದಿನಾ ಬೆಳಿಗ್ಗೆ ಜಾತ್ರೆಗೆ ದಾರಿ ಹಿಡಿದಾಂಗೆ! ಮೆರವಣಿಗೆ ಹೊಂಟಂಗೆ!

ನಮಗಂತೂ ಬಹಿರ್ದೆಸೆ-ಹಸಿವು ನೀಗಿಸುವ ಮಾರ್ಗೋಪಾಯದ ದಾರಿಯೆಂದರೆ ನೀವು ಹುಬ್ಬೇರಿಸಬಹುದು. ಮುಜುಗರವೆನಿಸಿದರೂ ಹೊಟ್ಟೆ ಹೊರೆದ ದಾರಿಯನ್ನ ಮರೆವುದೆಂತು? ಆ ಚಂಬು ಎಷ್ಟೋ ಸಾರಿ ಹಸಿವಿನ ಧಗೆಯ ಕಿಚ್ಚಾರಿಸಿದ ಭಿಕ್ಷಾಪಾತ್ರೆ ಎಂದರೂ ಸರಿ.
ಮನೆಯ ಎದುರಿಗೆ ಊರ ಗೌಡರ ಹೊಲಗಳು. ಅದರೊಳು ತುಂಬಿನಿಂತ ಹಾಲ್ದೆನೆಗಳು. ಹಸಿವಿಗೆ ಬಾಗಿ ಬಾಗಿ ಕರೆಯುತ್ತಿದ್ದವು. ಜೋಳದ ಗರಿ ಗಾಳಿಗೆ ಮೊರೆಯುತ್ತಿದ್ದವು. ಆಗ ನಮ್ಮ ಉದರವು ಮರಗುತ್ತಿತ್ತು.

ಹೋಗುವುದು ಎರಡಕ್ಕೆಂದು, ಹೋದಾದ ಮೇಲೆ ಮೂರನೇ ಕೆಲಸವೂ ಮಾಡಿಕೊಂಡು ಬರುವುದುಂಟು! ಹಾಗೆ ಸಂಡಾಸಿಗೆಂದು ಹೊರಡೋದು ನೆಪ ಮಾತ್ರಕ್ಕೆ. ಆ ನೆಪದೊಳಗೆ ಚಂಬಿನಲ್ಲಿ ಒಡಲ ತಣಿಸುವಷ್ಟು ಜೋಳದ ತೆನೆಯ ಜಿಗಿಜಿಗಿದು ತುಂಬಿಸಿಕೊಂಡು ಬರುವ ಪರಿಪಾಠ ಬೆಳೆದಿತ್ತು. ಮನೆಯಲ್ಲಿ ಒಮ್ಮೊಮ್ಮೆ ಮಧ್ಯಾಹ್ನದೂಟ ಇಲ್ಲದಿದ್ದಾಗ ಈ ದಾರಿ ರಹದಾರಿಯೇ!

ಹಾಗೆ ಕದ್ದು ತಿಂದದ್ದಕ್ಕೆ ನ್ಯಾಯ ಬೇಡವೇ ಎಂಬಂತೆ ಶಿಕ್ಷಾ ಸಾಂಗತ್ಯದ ರುಚಿಯನ್ನೂ ಕಂಡಿದ್ದೇನೆ. ಹಲವು ಬಾರಿ ಸಿಕ್ಕಿ ಬಿದ್ದು ಒದೆ ತಿಂದ ಅನುಭವವನ್ನು ಮರೆತಿಲ್ಲ. ಹಸಿ ದಂಟಿನ ಹೊಡೆತದ ಬಾಸುಂಡೆಗಳು ಹಳತಾದರೂ, ಆ ಅಳಸಿ ಹಾಕಲಾರದ ನೆನಪುಗಳು ಬೇರಾಗಿ ಇಳಿದು ಬಿಟ್ಟಿವೆ.

ವಾರದಲ್ಲಿ ಮೂರು ದಿನ ಶಾಲೆಗೆ. ಉಳಿದ ಮೂರು ದಿನ ದನ ಕಾಯೋ ಕಾಯಕಕ್ಕೆ ಡೆಪ್ಟೇಷನ್. ದನ ಕಾಯೋದು ಪಾರ್ಟ್‌ಟೈಮ್‌ ಡ್ಯೂಟಿ. ಸಂಜೆ ಕಾರ್ಮೋಡ ಕಟ್ಟಿತೆಂದರೆ ಬೆಟ್ಟ ಗುಡ್ಡಗಳಲ್ಲಿ ಚದುರಿದ ದನ ಕುರಿ ಆಡು ಮೇಕೆಗಳೆನ್ನೆಲ್ಲ ಮನೆ ದಾರಿ ಹಿಡಿಸಬೇಕು. ಹಾಗೆ ಅವುಗಳನ್ನು ಕೆಳಗೆ ಇಳಿಸೋದು ಅಷ್ಟು ಸುಲಭದ ಕೆಲಸವಲ್ಲ. ಒಮ್ಮೆ ಕೆರೆ ಕುಂಟೆಗಳು ತುಂಬಿದ್ದವು. ಸಲೀಸಾಗಿ ಊರು ಮುಟ್ಟಬೇಕಾದರೆ ಎರಡು ಹಳ್ಳಗಳು ಮೆಟ್ಟಬೇಕಿತ್ತು. ಹನಿ ನಿಂತ ನಂತರ ಸೆಳವು ಕಡಿಮೆಯಾಗುವರೆಗೂ ಕಾದ ಮೇಲೆ ಉಬ್ಬರ ಕಡಿಮೆಯಾಯ್ತು.

ದಾಟೋದು ಕಷ್ಟವೇ ಆಗಿತ್ತು. ಈಜು ಬೇರೆ ಕಲಿತಿಲ್ಲ. ಏನು ಮಾಡೋದು ಅಂತ ಚಿಂತಿಸುವಾಗ 'ನಿನಗೆ ಬರದಿದ್ದರೇನಂತೆ ಹಸುವಿನ ಬಾಲವನ್ನು ಬಿಗಿಯಾಗಿ ಹಿಡಿ ಅವೇ ನಿನ್ನ ದಡಕ್ಕೊಯ್ಯುತ್ತವೆ' ಎಂದು ಯಾವಾಗ್ಲೋ, ಯಾರಿಂದ್ಲೋ ಕೇಳಿಸಿಕೊಂಡದ್ದು ನೆನಪಾಗಿ ಧೈರ್ಯದಿಂದ ಬಾಲ ಹಿಡಿದು ಕಣ್ಮುಂಚಿಕೊಂಡೆ. ಆಗಲೆ ಆ ಕಡೆ ದಡಕ್ಕೆ ತಂದಿದ್ದವು. ಅಬ್ಬಾ! ಜೀವ ಬದುಕುಳೀತೆಂದು ಸಮಾಧಾನ ಪಟ್ಟೆ. ನನಗೆ ಸ್ವಿಮ್ಮಿಂಗ್ ಕೋಚ್ ಆಗಿ ತರಬೇತಿಗೊಳ್ಳಿಸಿದ್ದು.ಈ ನನ್ನ ಹಸುಗಳೇ!!

ಮುಂದೆ ಈ ಹಸಿವಿನ ತೆವಲು ನನ್ನನ್ನು ಪಾಠ ಹೇಳುವ ಮೇಷ್ಟ್ರನ್ನಾಗಿ ರೂಪಿಸಿತು. ಈ ಶಾಲೆಯ ಪಠ್ಯಕ್ಕಿಂತ ಬಯಲು ಆಲಯ ಕಲಿಸಿದ್ದೆ ಅಪಾರ.

ಇಂಥ ಬಾಲ್ಯದ ನೆನಪುಗಳನ್ನು ಮರೆಯುವುದಾದರೂ ಎಂತು?

-ನಿರ್ವಿಘ್ನ ಜಿ. ಪರಗೋಡು
ಬಾಗೇಪಲ್ಲಿ
* * *


ನಮ್ಮ ರಿಸರ್ವ್‌ ಬ್ಯಾಂಕ್‌ 
ಬಾಲ್ಯವೆಂದಾಕ್ಷಣ ನೆನಪಾಗುವ ತುಂಟಾಟ-ಕುಚೇಷ್ಟೆಗಳು ಒಂದೆರಡಲ್ಲ. ಕೂತಲ್ಲಿ ಕೂರದೆ ಸದಾ ಏನಾದರೊಂದು ಕಿತಾಪತಿ ಮಾಡುತ್ತ ಅಮ್ಮನಿಂದ ಹೊಡೆತ ತಿಂದು ಮೂಲೆಗುಂಪಾಗುತ್ತಿದ್ದುದು. ಅದೇ ನೆಪದಲ್ಲಿ ಸಂಜೆಯವರೆಗೂ ರಾಗ ಎಳೆದೆಳೆದು ಅಳುತ್ತ ಅಲ್ಲೇ ನಿದ್ದೆ ಹೋಗುತ್ತಿದ್ದ ದಿನಗಳನ್ನು ನೆನೆದರೆ ಒಂಥರಾ ಖುಷಿ.

ಅಮ್ಮ ಕೂಡಿಡುತ್ತಿದ್ದ ಚಿಲ್ಲರೆ ಹಣವನ್ನು ಕದಿಯುತ್ತಿದ್ದ ದಿನಗಳು ಸಹ ನೆನಪಾಗುತ್ತವೆ. ಮನೆ ಖರ್ಚಿಗೆಂದು ಅಪ್ಪ ಕೊಟ್ಟ ಹಣದಲ್ಲಿ ಮನೆಯ ಎಲ್ಲ ಬೇಕು-ಬೇಡಿಕೆಗಳನ್ನು ನಿಭಾಯಿಸಿಕೊಂಡು ಅದರಲ್ಲಿಯೇ ಕೊಂಚ ಪುಡಿಗಾಸನ್ನು ಉಳಿತಾಯ ಮಾಡುತ್ತಿದ್ದ ಅಮ್ಮ, ಆ ಹಣವನ್ನು ಅಡುಗೆ ಮನೆಯ ರಿಸರ್ವ್‌ ಬ್ಯಾಂಕ್‌ ಆದ ಸಾಸಿವೆ-ಜೀರಿಗೆ ಡಬ್ಬಗಳಲ್ಲಿ ಇಡುತ್ತಿದ್ದಳು.

ಅಡುಗೆ ಮನೆಯಲ್ಲಿ ಕೊಂಚ ಎತ್ತರಕ್ಕೆ ಹಲಗೆ ಮೇಲೆ ನಮ್ಮ ಕೈಗೆ ಸಿಗದಂತೆ ಇಡುತ್ತಿದ್ದ ಡಬ್ಬಗಳನ್ನು, ಅಮ್ಮನಿಲ್ಲದ ವೇಳೆ ನಾವು ತನಿಖೆಗೊಳಪಡಿಸುವ ಕಾರ್ಯ ಪ್ರಾರಂಭಿಸುತ್ತಿದ್ದೆವು. ನಿಲುಕದ ಆ ಡಬ್ಬಗಳನ್ನು ಸಹೋದರನ ಬೆನ್ನ ಮೇಲೆ ಹತ್ತಿ ನಿಂತು ನಿಧಾನವಾಗಿ ತೆಗೆಯುತ್ತಿದ್ದೆ. ಅ ಕಾರ್ಯ ಯಶಸ್ವಿಯಾದರೆ ಬಾಯಿಗೆ ಹಬ್ಬವೇ ಸರಿ. ಏನು ಖುಷಿ; ಏನು ಸಂಭ್ರಮ! ಆದರೆ ‘ಆಪರೇಷನ್ ಗ್ಲಾಸ್ ಬಾಕ್ಸ್’ ಕಾರ್ಯ ಎಡವಟ್ಟಾಗಿ ಡಬ್ಬ ಮೇಲಿಂದ ಜಾರಿ ಬಿತ್ತೆಂದರೆ ಅದು ನಮ್ಮ ಪಾಲಿನ ಹೋಳಿ ಹುಣ್ಣಿಮೆಯೇ. ಹಲಗೆ ಬಾರಿಸುವಂತೆ ಹೊಡೆಯುವ ಅಮ್ಮನ ಹೊಡೆತ ನೆನೆಸಿಕೊಂಡು ಬಿದ್ದ ಡಬ್ಬವನ್ನು ಅಲ್ಲಿಯೇ ಬಿಟ್ಟು ಕಾಲಿಗೆ ಬುದ್ಧಿ ಹೇಳುತ್ತಿದ್ದವರು ಸಂಜೆಯವರೆಗೂ ಮನೆಯತ್ತ ಮುಖ ಮಾಡುತ್ತಿರಲಿಲ್ಲ.

ಹೀಗೆ ಬಾಲ್ಯದಲ್ಲಿ ಚಿಲ್ಲರೆ ಕಾಸು ಕದಿಯಲು ಹೋಗಿ ಮಾಡಿದ ಅವಾಂತರಗಳನ್ನು ನೆನೆಸಿಕೊಂಡರೆ ಇಂದಿಗೂ ಮುಖ ಅರಳುತ್ತದೆ. ಅಂದು ಹಣ ಇರುತ್ತಿರಲಿಲ್ಲ ಎಂಬುದ ಬಿಟ್ಟರೆ ಮಿಕ್ಕೆಲ್ಲ ಸಂತೋಷಗಳು ಇದ್ದವು. ಬಾಲ್ಯವದು ಬಹು ಸೊಗಸು ವರ್ಣಿಸಲಾಗದ ಕನಸು.

–ಕಲ್ಮೇಶ ತೋಟದ
ಹುಬ್ಬಳ್ಳಿ
* * *

ಹೊಲಮಾಳದ ಹಣ್ಣುಗಳ ರುಚಿ
ನನ್ನ ಬಾಲ್ಯದ ನೆನಪುಗಳ ಪಯಣ ಬಯಲುಸೀಮೆಯ ಬೇತೂರು, ಮೊಳಕಾಲ್ಮೂರು, ಚಳ್ಳಕೆರೆ ಭಾಗಗಳಲ್ಲಿ ತಳುಕು ಹಾಕಿಕೊಂಡಿದ್ದು. ನಾನು ಚಿಕ್ಕವನಿದ್ದಾಗ ನಮ್ಮೂರ ಹೊಲಮಾಳಗಳಲ್ಲಿ ನನ್ನ ಓರಗೆಯ ಗೆಳೆಯ-ಗೆಳತಿಯರೊಂದಿಗೆ ದನಗಾಯಿಯಾಗಿ ಪಾಪಚ್ಚಿ ಹಣ್ಣು, ಬಾರೆ ಹಣ್ಣು, ರೇಷ್ಮೆ ಹಣ್ಣು, ಕವಲಿ ಹಣ್ಣುಗಳನ್ನು ತಿನ್ನುತ್ತಿದ್ದ ನೆನಪುಗಳು ಈಗಲೂ ಹಸಿರಾಗಿವೆ. ಶಾಲೆಗೆ ಹೋಗುವಾಗಿನ ಹಾದಿಯ ಮನೆಯಂಗಳದಲ್ಲಿನ ಹಣ್ಣು ಕದ್ದಿದ್ದು, ಬಾವಿ, ಕೆರೆ, ಕಟ್ಟೆ, ಹೊಂಡಗಳಲ್ಲಿ ಗೆಳೆಯರೊಂದಿಗೆ ಈಜಾಡಿದ್ದು. ಕೆರೆದಡ, ಗೋಲಿಯಾಟ, ಲಗೋರಿ, ಕಣ್ಣಾಮುಚ್ಚಾಲೆ, ಮರಕೋತಿಯಾಟ, ಕರಡಿ ಮೇಲಿನ ಸವಾರಿ, ಸೀತಾಫಲದ ಹಣ್ಣಿಗಾಗಿ ಬೆಟ್ಟಗಳಲ್ಲಿ ಸಂಚರಿಸಿದ ಕ್ಷಣಗಳು...

ಆ ಅನುಭವಗಳಿಗೆ ಎಣೆಯುಂಟೆ? ಮತ್ತೊಂದೆಡೆ ಅಮ್ಮನ ಕೈತುತ್ತು, ಅಪ್ಪನ ಪ್ರೀತಿ, ತಂಗಿ-ತಮ್ಮ, ಗೆಳೆಯರ ಜತೆಗಿನ ಮುನಿಸುಗಳ ಜತೆ ಜತೆಗೆ ಹುಣಸೆ ಕಣ್ಣಿನ ಚಿಗಳಿ, ಬೆಸನ್ ಮತ್ತು ರವೆ ಉಂಡಿ ಮೆಲುಕು.

ರಜೆಯಲ್ಲಿ ಎಮ್ಮೆ ಮೇಲಿನ ಸವಾರಿ, ಹಸುವಿನ ಕೆಚ್ಚಲಲ್ಲಿ ಹೀರಿದ ಕ್ಷೀರಧಾರೆ, ಕೆರೆಯ ಏರಿ ಮೇಲಿನ ಸೈಕಲ್ ಸವಾರಿ, ದೀಪಾವಳಿಯ ಸಮಯದಲ್ಲಿ ಅಪ್ಪ ಮೂವರು ಮಕ್ಕಳಿಗೂ ಸೇರಿ ಕೊಡುವ 100 ರೂಪಾಯಿಗೆ 12 ಕಿ.ಮೀ ಸೈಕಲ್
ತುಳಿದು ಮೊಳಕಾಲ್ಮೂರಿನಿಂದ ರಾಯದುರ್ಗಕ್ಕೆ ಹೋಗಿ ಪಟಾಕಿ ತರುತ್ತಿದ್ದುದು, ಸಿನಿಮಾ ನೋಡಲು ಅಜ್ಜಿಯ ಸೊಂಟವೇರಿದ್ದು, ಎತ್ತಿನ ಗಾಡಿಯ ಪಯಣ, ಮನೆ ಪಾಠಕ್ಕೆ ಹೋಗದೆ ಅಪ್ಪನಿಂದ ಹಣ ಪಡೆದು ಸಿನಿಮಾ ನೋಡಿ ಬೆತ್ತದೇಟು ತಿಂದದ್ದು, ಗೆಳೆಯರ ಜೊತೆಗೂಡಿ ಗುರುಶಿಷ್ಯರು ನಾಟಕ ಮಾಡಿ 25 ರೂಪಾಯಿ ಬಹುಮಾನ ಪಡೆದದ್ದು... ಹೀಗೆ ಮೊಗೆದಷ್ಟು ಉಕ್ಕುವ ಜಲಧಾರೆ ನಮ್ಮೆಲ್ಲರ ಬಾಲ್ಯ. ನಾನಾಡಿದ ಚಿನ್ನಿದಾಂಡು ಗೆದ್ದಲು ಮುಟ್ಟುವ ಮುನ್ನ, ನಾನಾಡಿದ ಜೋಕಾಲಿ ಕಳಚಿ ಬೀಳುವ ಮುನ್ನ ಮತ್ತೊಮ್ಮೆ ಬರಬಾರದೇ ಓ ಬಾಲ್ಯವೇ...
- ವೆಂಕಟೇಶ್ ಬಿ.ಟಿ.
ಹಿರಿಯೂರು
* * *

ಗುಬ್ಬಚ್ಚಿ ತಿಥಿ
ಈಗಿನಂತೆ ಮೊಬೈಲು, ಟಿ.ವಿ ಮತ್ತು ಕಂಪ್ಯೂಟರ್ ಎಂಬ ಯಂತ್ರಗಳೊಂದಿಗೆ ನಮ್ಮ ಸಂಬಂಧವಿರಲಿಲ್ಲ. ನಾವು ಮನಸು ಗಳೊಂದಿಗೆ ನಲಿಯುತ್ತಿದ್ದೆವು. ಅಂತೆಯೇ ನನ್ನ ಬಾಲ್ಯದ ನೆನಪಿನ ಸುರುಳಿಯಲ್ಲಿ ಬಿಚ್ಚಿಕೊಳ್ಳುವ ಹತ್ತಾರು ಘಟನೆಗಳಲ್ಲಿ ಇದೂ ಒಂದು.

ನಮ್ಮೂರಲ್ಲಿ ಎಲ್ಲರ ಮನೆಗಳಲ್ಲೂ ದನಕರುಗಳಿದ್ದವು. ಹೈನುಗಾರಿಕೆ ಎಲ್ಲರ ಉಪಕಸುಬಾಗಿತ್ತು. ನಾವು ನಮ್ಮ ಬೀದಿಯಲ್ಲಿ ಹೆಣ್ಣು ಗಂಡು ಮಕ್ಕಳೆಲ್ಲ ಸೇರಿ ಸುಮಾರು ಹತ್ತರಿಂದ ಹದಿನೈದು ಮಕ್ಕಳಿದ್ದೆವು. ಅಂದು ಭಾನುವಾರ. ಬೀದಿಯ ಎಲ್ಲ ಹಿರಿಯರು ಸಂಬಂಧಿಕರ ಮನೆಯ ಮದುವೆಗೆಂದು ಹಳ್ಳಿಗೆ ಹೋಗಿದ್ದರು. ಬೀದಿಯ ಲೈಟ್ ಕಂಬದ ಕೆಳಗೆ ಒಂದು ಗುಬ್ಬಿಯ ಮರಿ ಬಿದ್ದಿತ್ತು. ಅದನ್ನ ಒಬ್ಬರು ನೋಡಿದಾಕ್ಷಣ ಎಲ್ಲರಿಗೂ ಸುದ್ದಿ ಮುಟ್ಟಿ ಓರಗೆಯವರೆಲ್ಲ ಅಲ್ಲಿ ಜಮಾಯಿಸಿದೆವು. ಒಬ್ಬೊಬ್ಬರಾಗಿ ಅಲ್ಲಿ ಬಿದ್ದಿದ್ದ ಗುಬ್ಬಿ ಮರಿಯನ್ನು ನೋಡಿ ಅಯ್ಯೋ ಪಾಪ! ಎಂದು ಮುಟ್ಟಲು ಹೋದಾಗ, ದೊಡ್ಡವನಾದ ಒಬ್ಬ ‘ಏಯ್ ಮುಟ್ಟಬೇಡಿ ಕಣ್ರೇ, ಅದನ್ನ ಮುಟ್ಟಿದ್ರೆ ಅದರಮ್ಮ ಅದನ್ನ ಮನೆಗೆ ಸೇರಿಸಲ್ವಂತೆ ಗೊತ್ತಾ?’ ಅಂದಾಗ ನಾವು ಅದನ್ನ ಕಡ್ಡಿಯಿಂದ ಅಲುಗಾಡಿಸಿ ನೋಡಿದೆವು, ಅದು ನಿಜವಾಗಿ ಸತ್ತು ಹೋಗಿತ್ತು.

ನಾವುಗಳೆಲ್ಲ ಸೇರಿ ಎಲ್ಲರೂ ಕುಳಿತು ಚರ್ಚೆ ಮಾಡಿ ಗುಬ್ಬಿಯ ಸಂಸ್ಕಾರ ಮಾಡಬೇಕೆಂದು ನಿರ್ಧರಿಸಿದೆವು. ಅಲ್ಲೇ ಬೀದಿಯ ಪಕ್ಕದಲ್ಲಿ ಹುಡುಗರೆಲ್ಲ ಸೇರಿ ಪುಟ್ಟ ಗುಂಡಿ ತೋಡಿದರು, ಹೆಣ್ಣು ಮಕ್ಕಳೆಲ್ಲ ಮನೆಯಿಂದ ಅರಿಶಿಣ ಕುಂಕುಮ, ಗಂಧದಕಡ್ಡಿ ಹಾಗೂ ಅಲ್ಲೇ ಬೇಲಿಯ ಮೇಲಿನ ಹೂ ತಂದು ಎಲ್ಲ ಸೇರಿ ನೀರು ಹಾಕಿ ಪೂಜೆಮಾಡಿ ಗುಬ್ಬಿಯ ಸಂಸ್ಕಾರ ಮಾಡಿದೆವು. ಇನ್ನು ಸಂಸ್ಕಾರ ಮಾಡಿದ ಮೇಲೆ ತಿಥಿ ಮಾಡಬೇಕಲ್ಲವೆ?

ಬೀದಿಯಲಿ ಅಂದು ಯಾರೂ ಹಿರಿಯರಿಲ್ಲದ ಕಾರಣ ತಿಥಿಯನ್ನು ಕೂಡ ಅಂದೇ ಮಾಡುವುದೆಂದು ತೀರ್ಮಾನಿಸಿದೆವು.

ತಿಥಿ ಮಾಡುವುದೆಂದರೆ ಸಾಮಾನ್ಯವೆ? ತಿಥಿ ಊಟ ಮಾಡಬೇಕಲ್ಲ. ತಿಥಿಗೆ ಬೇಕಾದ ಸಣ್ಣ ಪುಟ್ಟ ಸಾಮಾನುಗಳನ್ನು ಎಲ್ಲರ ಮನೆಯಿಂದಲು ಒಬ್ಬೊಬ್ಬರು ಒಂದೊಂದು ವಸ್ತುವನ್ನು ತಂದೆವು. ತಿಥಿ ಊಟಕ್ಕೆ ಕೊನೆ ಪಕ್ಷ ಚಿತ್ರಾನ್ನ ಪಾಯಸವನ್ನಾದ್ರು ಮಾಡ್ಬೇಕು.

ಅನ್ನ ಮಾಡಲು ಅಕ್ಕಿ ಬೇಕು, ಪಾಯಸಕ್ಕೆ ಬೆಲ್ಲ ಬೇಕು. ಪಾತ್ರೆ ಪಡಗಗಳು ಬಿಡಿ ಎಲ್ಲರ ಮನೆಯಿಂದ ತಂದರಾಯ್ತು. ಅಕ್ಕಿ, ಬೆಲ್ಲ, ತರುವ ರೀತಿ ಹೇಗೆಂದು ಚರ್ಚೆಯಾಯ್ತು. ನಮ್ಮ ಬೀದಿಯಲ್ಲಿ ಹಾಗೂ ಸುತ್ತಮುತ್ತ ಹತ್ತಾರು ದಿನಸಿ ಅಂಗಡಿಗಳಿದ್ದವು.

ಮನೆಗೆ ಅಕ್ಕಿ ತರುವುದಾದರೆ ಯಾವುದಾದರೂ ದಿನಸಿ ಅಂಗಡಿಗೆ ಹೋಗಿ ಸ್ಯಾಪಂಲ್ ತರುತ್ತಿದ್ದುದು ರೂಢಿಯಲ್ಲಿತ್ತು. ನಾವುಗಳು ಒಂದೊಂದು ಅಂಗಡಿಗೆ ಒಬ್ಬೊಬ್ಬರು ಹೋಗಿ ಅಕ್ಕಿ ಇದೆಯಾ?
ಕೆ.ಜಿ.ಗೆ ಎಷ್ಟು? ಸ್ವಲ್ಪ ತೋರಿಸಿಕೊಂಡು ಬರ್ತೀವಿ ಕೊಡಿ ಎಂದು ಮೂರು ನಾಲ್ಕು ರೀತಿಯ ಅಕ್ಕಿಯನ್ನು ಸಣ್ಣ ಪೇಪರ್ ತುಂಡುಗಳಲ್ಲಿ ಮುದುರಿ ಹತ್ತಾರು ಅಂಗಡಿಗಳಿಂದ ಎಲ್ಲರೂ ತಂದ ಅಕ್ಕಿಯನ್ನು ಸೇರಿಸಿದಾಗ ಸುಮಾರು ಎರಡು ಮೂರು ಪಾವಿನಷ್ಟಾಯಿತು. ಮನೆಯ ಮುಂದೆ ಎರಡು ಕಲ್ಲು ಇಟ್ಟು ಆಯ್ದ ಪುಳ್ಳೆಗಳು ಪೇಪರು ಸೇರಿಸಿ ಒಲೆ ಹಚ್ಚಿದೆವು.

ಅವಳ ಮಾತಿಗೆ ಗಮನ ಕೊಡದೆ ಒಂದು ಪಾತ್ರೆಯಲ್ಲಿ ಅನ್ನ ಮಾಡಿದೆವು, ಅದೋ ಮುದ್ದೆ ಮುದ್ದೆ ಆಗಿತ್ತು. ಅಂತೂ ಅದನ್ನೆ ಹೇಗೋ ಅರಿಶಿಣ ಹಾಕಿ ಚಿತ್ರಾನ್ನ ಮಾಡಿದೆವು. ಇನ್ನು ಪಾಯಸ ಅಂದರೆ ಬೆಲ್ಲ ನೀರು ಹಾಕಿ ಕಾಯಿಸಿದ್ದಷ್ಟೆ. ಊಟಕ್ಕೆ ಅವರವರ ಮನೆಯಿಂದ ಪ್ಲೇಟುಗಳನ್ನು ತಂದು ಉರಿಬಿಸಿಲಲ್ಲಿ ಅಂಗಳದಲ್ಲಿ ಕುಳಿತು ತಿಥಿ ಊಟ ಮುಗಿಸಿದೆವು. ಎಲ್ಲ ಮುಗಿಯಿತು. ತಿಥಿ ಮಾಡಿದ ಸಂಭ್ರಮದಲ್ಲಿದ್ದೆವು, ಅಷ್ಟರಲ್ಲಿ ಮದುವೆಗೆ ಹೋಗಿದ್ದ ಬೀದಿಯ ಹೆಂಗಸರೆಲ್ಲ ಬಂದರು.

ಪಕ್ಕದ ಮನೆಯ ಮುಂದೆ ಹಾಕಿದ್ದ ಬೆಂಕಿ ನೋಡಿ ಎಲ್ಲ ಮಕ್ಕಳನ್ನು ಕರೆದು ಮನೆಯ ಮುಂದೆ ಬೆಂಕಿ ಹಾಕುವುದು ಅಶುಭ ಎಂದು ಎಲ್ಲರನ್ನು ಬೈದು ಹೆದರಿಸಿ ಒಬ್ಬರಿಗೆ ಏಟು ಕೊಟ್ಟಾಗ, ನಾನಲ್ಲ ಅವಳು ನಾನಲ್ಲ ಅವನು ಎಂದು ಒಬ್ಬರ ಮೇಲೊಬ್ಬರು ಹೇಳಿದೆವು. ಮೆಲ್ಲಗೆ ಒಬ್ಬಳು ‘ಗುಬ್ಬಚ್ಚಿ ಪಾಪ... ಸತ್ತೋಗಿತ್ತು ಅದಕ್ಕೆ ತಿಥಿ ಯಾರು ಮಾಡ್ತಾರೆ ಅಂತ ನಾವು ಮಾಡಿದೆವು’ ಎಂದಾಗ, ಎಲ್ಲ ಅಮ್ಮಂದಿರು ಒಟ್ಟಿಗೆ ಆಹಾ! ಗುಬ್ಬಚ್ಚಿ ತಿಥಿ ಮಾಡ್ತಾರಂತೆ ಗುಬ್ಬಚ್ಚಿ ತಿಥಿ! ಬನ್ನಿ ಮನೆಗೆ ನಿಮ್ಮ ತಿಥಿ ಇದೆ ಇವತ್ತು ಎನ್ನೋದೆ!

ಮನೆಗೆ ಹೋದ ಮೇಲೆ ಎಲ್ಲರೂ ಒದೆ ತಿಂದದ್ದೇ. ಗುಬ್ಬಿ ಮರಿಯ ತಿಥಿ ಮಾಡಲು ಹೋಗಿ ಒದೆ ತಿಂದದ್ದನ್ನ ಜೀವನದಲ್ಲಿ ಮರೆಯುವಂತೆಯೇ ಇಲ್ಲ. ಅದೇನೇ ಇರಲಿ, ಮುಗ್ಧ ಮನಸುಗಳಲ್ಲಿದ್ದ ಸಹೃದಯತೆ, ಪುಟ್ಟ ಪಕ್ಷಿಯ ಸಾವಿಗೆ ಸ್ಪಂದಿಸಿದ ಮನಸು, ಹಿರಿತನದಲ್ಲಿ ಇಲ್ಲವೆನೋ ಎನಿಸುತ್ತದೆ. ಬಾಲ್ಯವೆಂದರೆ ಬದುಕಿನಲ್ಲಿ ಬೆಲೆ ಕಟ್ಟಲಾರದ್ದು, ಬದುಕಿನ ಎಲ್ಲ ಘಟ್ಟಗಳಲ್ಲೂ ಮಿಗಿಲಾದುದು. ಮರಳಿ ಸಿಗಲಾರದ್ದು.

–ರಾಜೇಶ್ವರಿ ಹುಲ್ಲೇನಹಳ್ಳಿ
ಹಾಸನ
* * *

ಬಾಲ್ಯವೆಂಬ ಬಂಗಾರದ ಬಿಲ್ಲೆ
ಬಾಲ್ಯದ ನೆನಪುಗಳ ಬೆನ್ನತ್ತಿದಾಗ ಅದ್ದೂರಿಯಾದ ಬೆರಗಿನ ಬದುಕು ಸಿಗುತ್ತದೆ. ಅಂತಸ್ತು, ಜಾತಿ, ತಟವಟ ಗೊತ್ತಿಲ್ಲದ ಆ ಎಳೆಯ ವಯಸ್ಸಿನಲ್ಲೇ ತಟಸ್ಥವಾಗಿ ನಿಂತುಬಿಡಬೇಕಿತ್ತು ಅನ್ನಿಸಿಬಿಡುತ್ತದೆ. ಗುಮ್ಮಯ್ಯ ಬರುತ್ತಾನೆಂದು ಬೆದರಿಸಿ ತುತ್ತನ್ನು ಬಾಯಿಗೆ ತುರುಕುತ್ತಾ, ಹಠ ಹೆಚ್ಚಾದರೆ ನಾಲ್ಕು ತದುಕುತ್ತಾ ಮುತುವರ್ಜಿಯಿಂದ ಊಟ ಉಣ್ಣಿಸುತ್ತಿದ್ದ ಅವ್ವ ಕಾಗಕ್ಕ ಗೂಬಕ್ಕನ ಕಥೆ ಹೇಳಿ ಮಲಗಿಸುತ್ತಿದ್ದಳು. ತಲೆಯ ನೆತ್ತಿಗೆ ಪಚಪಚ ಅಂತ ಹರಳೆಣ್ಣೆಯನ್ನು ಮೆತ್ತಿಬಿಡುತ್ತಿದ್ದಳು. ಇದನ್ನೆಲ್ಲಾ ಈಗ ನೆನೆದರೆ ಮನಸ್ಸು ತಂಪಾಗದೆ ಇದ್ದಿತೇ?

ಅಂದಹಾಗೆ ನಮ್ಮೂರ ಶಾಮಯ್ಯ ಮೇಷ್ಟ್ರು, ನಾನು ಕುಳ್ಳಗಿದ್ದೇನೆಂದು ಇಸ್ಕೂಲಿಗೆ ಸೇರಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾಗ ನನ್ನ ಬಲಗೈಯನ್ನು ತಲೆಯ ಮೇಲಿನಿಂದ ಬಳಸಿ ಕಿವಿಗೆ ಕೈಬೆರಳು ಎಟುಕಿಸಿ ಒಂದನೇ ತರಗತಿಗೆ ಸೇರಿಕೊಂಡ ನೆನಪು ಹಸಿಹಸಿಯಾಗಿದೆ.

ಗೆಳೆಯನ ಚೋಟುದ್ದದ ಪೆನ್ಸಿಲ್ ಕದ್ದಿದ್ದೆ. ಶಾಲೆಗೆ ಚಕ್ಕರ್ ಹಾಕಲು ಹೊಟ್ಟೆನೋವೆಂದು ಯಾಸ ತೆಗೆದಿದ್ದೆ. ಓರಗೆಯವರೆಲ್ಲಾ ಸೇರಿ ಮರಕೋತಿ ಆಟ ಆಡುವಾಗ ಜಾರಿಬಿದ್ದು ಮೊಣಕೈ ಮೇಲೆ ಆದ ಗಾಯದ ಗುರುತು ಈಗಲೂ ಇದೆ. ಅಂಗಾಲನ್ನು ಮಣ್ಣಿನಿಂದ ಮುಚ್ಚಿ ಮಣ್ಣಿನಗೂಡು ಮಾಡಿದಾಗ ಹಕ್ಕಿಬಂದು ಕೂತು ಮೊಟ್ಟಯಿಡುತ್ತದೆಂಬ ನನ್ನ ನಂಬಿಕೆ ನಿಜವಾಗಲೇ ಇಲ್ಲ. ದೋಸ್ತಿಗಳೆಲ್ಲಾ ಒಂದೆಡೆ ಸೇರಿ ಅರೆಕಲ್ಲಿನ ಮೇಲೆ ಬೆಂಕಿಹಾಕಿ ಕಾಚಕ್ಕಿಯನ್ನು ಸುಟ್ಟುಕೊಂಡು ತಿಂದು ತೇಗುತ್ತಿದ್ದೆವು. ಹೊಳೆಯಲ್ಲಿ ಕಾಗದದ ದೋಣಿ ಮಾಡಿ ತೇಲಿಬಿಡುತ್ತಿದ್ದೆವು. ವಿಪರೀತ ಹುಳಿಯನ್ನೂ ಲೆಕ್ಕಿಸದೆ ಹುಣಸೆ ಹಣ್ಣನ್ನು ಚೀಪಿ ರಾತ್ರಿ ಉಪ್ಸಾರಿನ ಅವರೆಕಾಳು ಅಗಿಯಲಾರದೆ ಹಲ್ಲುಗಳೆಲ್ಲಾ ಜುಮ್ ಜುಮ್ಮೆಂದು ಮರಗಟ್ಟಿಬಿಡುತ್ತಿದ್ದವು. ಇದೊಂದು ಹಿತಯಾತನೆಯೇ ಸರಿ!

ಗಣೇಶ ಹಬ್ಬದಲ್ಲಿ ರೋಡಿಗೆ ನಿಂತು ಚಂದಾ ವಸೂಲಿ ಮಾಡುತ್ತಿದ್ದ ಚಂದದ ದಿನ ಅವತ್ತಿನವು. ಬಸವಣ್ಣನ ದೇವಸ್ಥಾನದ ಬಾಳೆಹಣ್ಣಿನ ರಸಾಯನವನ್ನು ನೂಕುನುಗ್ಗಲಿಗೆ ಅಂಜದೆ ಕನಿಷ್ಠ ಮೂರ್ನಾಲ್ಕು ಬಾರಿ ಯಾಮಾರಿಸಿ ಲಪಟಾಯಿಸಿತ್ತಿದ್ದದ್ದು, ಆಯುಧ ಪೂಜೆಯಲ್ಲಿ ದೊಪ್ಪನೇ ಕುಕ್ಕುವ ಬೂದುಗುಂಬಳ ಕಾಯಿಯೊಳಗಿನ ಚಿಲ್ಲರೆ ಕಾಸಿಗೆ ಪೈಪೋಟಿ ಬೀಳುತ್ತಿದ್ದದ್ದೆಲ್ಲಾ ಈಗ ಇತಿಹಾಸ.

ಚಿನ್ನಿದಾಂಡು, ಲಗೋರಿ, ಗೋಲಿ ಗೆಜ್ಜಗ ಆಡಿಕೊಂಡು ಅಪಾಪೋಲಿಯಂತೆ ಅಲೆದಾಡುತ್ತಾ ಕತ್ತಲಾದರೂ ಮನೆ ಸೇರದೆ ಇದ್ದಾಗ ಊರೆನ್ನೆಲ್ಲಾ ಅಡ್ಡಬಳಸಿ ಅಟ್ಟಾಡಿಸಿಕೊಂಡು ಅಪ್ಪ ಕೊಟ್ಟ ರಪರಪ ಗೂಸದ ರುಚಿ ನನ್ನೊಬ್ಬನಿಗೆ ಮಾತ್ರ ಗೊತ್ತು.

ಎರಡು ಜಡೆ ಬಜಾರಿಯ ಮೇಲಾದ ಮೊದಲ ಪ್ರೇಮಪ್ರಕರಣ, ಅವಳ ಹೆಸರನ್ನು ನಮ್ಮೂರ ಆಲದ ಮರದ ಮೇಲೆ ಕೆತ್ತಿದ್ದು, ಮೊದಲ ಕವನ ಗೀಚಿದ್ದೆಲ್ಲಾ ಅವಿಸ್ಮರಣೀಯ. ಪುಸ್ತಕದಲ್ಲಿಟ್ಟ ನವಿಲುಗರಿ ಮರಿ ಹಾಕುತ್ತದೆಂದು ಪೆನ್ಸಿಲ್ ಒರೆದು ಅದಕ್ಕೆ ದಿನನಿತ್ಯ ಊಟ ಹಾಕುತ್ತಾ ಮರಿಗಾಗಿ ಕಾದು ಕಾದು ಬೆಪ್ಪನಾಗಿದ್ದೆ.

ಯಕ್ಕದಗಿಡದ ಮೊಗ್ಗುಗಳನ್ನು ಟಪ್ ಟಪ್ ಅನ್ನಿಸುತ್ತಾ ಪಾಸು ಫೇಲಿನ ರಿಸಲ್ಟುಗಳನ್ನು ಪತ್ತೆಮಾಡುವ ಕಲೆಗಳೆಲ್ಲಾ ಗೊತ್ತಿತ್ತು. ಮಗ್ಗಿ ಹೇಳದಿದ್ದಾಗ ಕೋಣ ಬಗ್ಗಿಸಿ ಕುಂಡಿಗೆ ನಾಲ್ಕು ಬಿಗಿದು ಬದುಕ ತಿದ್ದಿ ಹದಗೊಳಿಸಿದ ದುಂಡುಮಾದಯ್ಯ ಮಾಸ್ತರರು ನೆನಪಾಗದೆ ಇರಲಾರರು. 'ಪೀಂ ಪೀಂ' ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಅರ್ಧಂಬರ್ಧ ಬರೆದಿದ್ದ ನೋಟುಬುಕ್ಕುಗಳೆಲ್ಲಾ ಐಸ್ಕಂಡಿ ಆಸೆಗೆ ರದ್ದಿಯಾಗಿ ಬಿಡುತ್ತಿದ್ದವು. ಊರಿಗಿದ್ದ ಒಂದೇ ಟೀವಿಯ ಮುಂದೆ ಎಲ್ಲರ ಠಿಕಾಣಿ ಇರುತ್ತಿತ್ತು. ಚಲನಚಿತ್ರದಲ್ಲಿ ಫೈಟಿಂಗ್ ಸೀನುಗಳಿದ್ದರೆ ಲೋಕವೇ ಮರೆತುಬಿಡುತ್ತಿತ್ತು.

ಬಗೆದಷ್ಟೂ ಬರಿದಾಗದೆ ಉಕ್ಕುವ ಬಾಲ್ಯದ ನೆನಪುಗಳು ಕೊನೆಯ ಉಸಿರು ಇರುವವರೆಗೂ ಮನದಲ್ಲಿ ಪಿಸಪಿಸ ಸದ್ದು ಮಾಡುತ್ತಾ ಮುದಗೊಳಿಸುವ ಬೆಲೆಕಟ್ಟಲಾಗದ ಈ ಬಂಗಾರದ ಬಾಲ್ಯದ ನೆನಪುಗಳಿಗೆ ಸಾಷ್ಟಾಂಗ ನಮಸ್ಕಾರ.

–ಹೃದಯರವಿ
ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT