ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಚಾಲಕನ ಎಸ್‌ಯುವಿ

ಇಸುಜು ಎಂಯುಎಕ್ಸ್‌
Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇಸುಜು ಎಂಬ ಹೆಸರು ಬಹಳ ಜನಕ್ಕೆ ಪರಿಚಿತವಲ್ಲದೇ ಇರಬಹುದು. ಆದರೆ ಆಟೊಮೊಬೈಲ್ ಎಂಜಿನಿಯರಿಂಗ್ ಮತ್ತು ಟೂರ್‌ ಆಪರೇಟಿಂಗ್ ವ್ಯವಹಾರದಲ್ಲಿ ಬಹಳ ಕಾಲದಲ್ಲಿ ಇದ್ದವರಿಗೆ ಇಸುಜು ಚಿರಪರಿಚಿತ.

20-30 ವರ್ಷಗಳ ಹಿಂದೆ ಭಾರತದಲ್ಲಿ ಪ್ರವೇಶಮಟ್ಟದ ಉತ್ತಮ ಡೀಸೆಲ್ ಕಾರುಗಳು ಇರಲಿಲ್ಲ. ಮಹೀಂದ್ರಾದವರ ಜೀಪ್‌ಗಳು, ಟಾಟಾ ಮೋಟಾರ್ಸ್‌ನವರ ಎಸ್ಟೇಟ್, ಸಿಯೆರಾ, ಸುಮೊ ಇದ್ದವಾದರೂ ಅವು ಕಾರುಗಳಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಆ ಕಾಲದಲ್ಲಿ ಜನಪ್ರಿಯ ಡೀಸೆಲ್ ಕಾರ್‌ಗಳೆಂದರೆ ಹಿಂದೂಸ್ತಾನ್ ಮೋಟಾರ್ಸ್‌ನವರ ಅಂಬಾಸೆಡರ್‌ ಡೀಸೆಲ್ ಮತ್ತು ಕಾಂಟೆಸಾ ಡೀಸೆಲ್. ಎರಡೂ ಕಾರುಗಳು ದಶಕಗಳ ಟೂರ್ ಆಪರೇಟಿಂಗ್ ಕ್ಷೇತ್ರಗಳನ್ನು ಆಳಿದ್ದು ಸುಳ್ಳಲ್ಲ. ಉತ್ತಮ ಮೈಲೇಜ್ ಮತ್ತು ಕಡಿಮೆ ವೆಚ್ಚದ ನಿರ್ವಹಣೆ ಈ ಡೀಸೆಲ್ ಕಾರುಗಳನ್ನು ಜನಪ್ರಿಯಗೊಳಿಸಿದ್ದವು. ಆದರೂ ಈ ಕಾರುಗಳು ವೇಗದ (ಪರ್ಫಾರ್ಮೆನ್ಸ್‌) ಕಾರುಗಳಾಗಿರಲಿಲ್ಲ. ಹೀಗಾಗಿ ಮನೆಬಳಕೆಯ ಕಾರುಗಳಲ್ಲಿ ಪೆಟ್ರೋಲ್ ಅಂಬಾಸೆಡರ್-ಕಾಂಟೆಸಾಗಳಿಗೇ ಮೊದಲ ಸ್ಥಾನವಿತ್ತು. ಈ ಎರಡೂ ಡೀಸೆಲ್ ಕಾರುಗಳಲ್ಲಿ ಇದ್ದದ್ದು ಇಸುಜು ಅವರ ಡೀಸೆಲ್ ಎಂಜಿನ್. ಟರ್ಬೊ ಚಾರ್ಜರ್‌ ತಂತ್ರಜ್ಞಾನ ಭಾರತದಲ್ಲಿ ಜನಪ್ರಿಯವಾಗಿಲ್ಲದ ಆ ಕಾಲದಲ್ಲೇ ಈ ಎಂಜಿನ್‌ಗಳು ಆ ದೈತ್ಯ ಕಾರುಗಳಲ್ಲೇ 16-18 ಕಿ.ಮೀ ಮೈಲೇಜ್ ನೀಡುತ್ತಿದ್ದವು. ಇದು ಟೂರ್‌ ಆಪರೇಟರ್‌ಗಳನ್ನು ಆಕರ್ಷಿಸಿತ್ತು. ಆಗ ಹಳೆಯ ಪೆಟ್ರೋಲ್ ಕಾರುಗಳನ್ನು (ಅಂಬಾಸೆಡರ್-ಕಾಂಟೆಸಾ) ಹೊಂದಿದ್ದವರು ಅವುಗಳಲ್ಲಿ ಇಸುಜು ಡೀಸೆಲ್ ಎಂಜಿನ್‌ಗಳನ್ನು ಅಳವಡಿಸಿಕೊಳ್ಳತೊಡಗಿದ್ದರು.

ಆಗ ಎಂಜಿನ್ ಬದಲಾವಣೆಗೆ-ಪರಿವರ್ತನೆಗೆ ಕಾನೂನುಬದ್ಧವಾಗಿ ಅವಕಾಶವಿತ್ತು. ಆದರೆ ಪರಿವರ್ತನೆಗೆ ಹೊಸ ಡೀಸೆಲ್ ಎಂಜಿನ್ ಸಿಗುತ್ತಿರಲಿಲ್ಲ. ಬದಲಿಗೆ ಜಪಾನ್-ಥಾಯ್ಲೆಂಡ್‌ನಲ್ಲಿ ಗುಜರಿಗೆ ಹಾಕಿದ ಇಸುಜು ವಾಹನಗಳ ಎಂಜಿನ್‌ಗಳು ಗುಜರಿ ಲೆಕ್ಕದಲ್ಲಿ ಚೆನ್ನೈಗೆ ಬರುತ್ತಿದ್ದವು. ಆ ಎಂಜಿನ್ ಮತ್ತು ಗಿಯರ್‌ ಬಾಕ್ಸ್‌ಗಳನ್ನು ಕೊಯಮತ್ತೂರಿನಲ್ಲಿ ಪೆಟ್ರೋಲ್‌ ಕಾರುಗಳಿಗೆ ಅಳವಡಿಸಲಾಗುತ್ತಿತ್ತು. ಆ ಎಂಜಿನ್‌ಗಳು ಚೆನ್ನೈಗೆ ಗುಜರಿ ಲೆಕ್ಕದಲ್ಲಿ ಬರುವ ಮೊದಲೇ 1.5-2 ಲಕ್ಷ ಕಿ.ಮೀ. ಓಡಿರುತ್ತಿದ್ದವು. ಆದರೂ ಅವನ್ನು ಇಲ್ಲಿ ಯಾವುದೇ ರಿಪೇರಿ ಇಲ್ಲದೆ ಇನ್ನೂ 1-1.5 ಲಕ್ಷ ಕಿ.ಮೀ. ಓಡಿಸಬಹುದಿತ್ತು. ಈ ಪರಿವರ್ತನೆಗೆ ಆಗ 60-70 ಸಾವಿರ ವೆಚ್ಚವಾಗುತ್ತಿತ್ತು. ಈ ಹಳೆಯ ಎಂಜಿನ್‌ಗಳು ಪ್ರತಿ ಲೀಟರ್‌ ಡೀಸೆಲ್‌ಗೆ 20 ಕಿ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸುತ್ತಿದ್ದವು.

ಕೊಯಮತ್ತೂರಿನ ಜಯಂ ಆಟೊಮೋಟಿವ್ಸ್ ಈ ಪರಿವರ್ತನೆಯಲ್ಲಿ ಹೆಚ್ಚು ವಿಶ್ವಾಸಾರ್ಹ ಸಂಸ್ಥೆಯಾಗಿತ್ತು. ಜಯಂ ಆಟೊಮೋಟಿವ್ಸ್‌ನಲ್ಲಿ ಎಂಜಿನ್‌ ಜತೆಗೆ ಕಾರಿನ ಡಿಫರೆನ್ಷಿಯಲ್‌ಗಳನ್ನೂ ಬದಲಿಸಲಾಗುತ್ತಿತ್ತು. ಹೀಗಾಗಿ ಕಾರಿನ ಫೈಲನ್ ಡ್ರೈವ್ ಸಂಯೋಜನೆ ಬದಲಾಗುತ್ತಿತ್ತು. ಹೀಗೆ ಪರಿವರ್ತಿಸಿದ ಅಂಬಾಸೆಡರ್‌-ಕಾಂಟೆಸಾಗಳು 150-160 ಕಿ.ಮೀ ವೇಗದಲ್ಲಿ ನಿರಾಯಾಸವಾಗಿ ಓಡುತ್ತಿದ್ದವು. ಅದೂ 15-16 ಕಿ.ಮೀ ಮೈಲೇಜ್‌ ಜತೆಗೆ. ಟೊಯೊಟಾ ಮತ್ತು ಫೋರ್ಸ್‌ನವರ ಮೆಟಡೋರ್ ಎಂಜಿನ್‌ಗಳನ್ನೂ ಹೀಗೆ ಪರಿವರ್ತಿಸಲಾಗುತ್ತಿತ್ತು. ಆದರೆ ಇಸುಜು ಎಂಜಿನ್‌ಗೆ ಆದ್ಯತೆ ಇತ್ತು.

ಇಸುಜು ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ಕಂಪನಿ ಭಾರತದಲ್ಲೇ ತಯಾರಿಕಾ ಘಟಕ ಆರಂಭಿಸಿ, ತನ್ನದೇ ಪಿಕ್‌ಅಪ್‌ ಟ್ರಕ್‌ಗಳು ಮತ್ತು ಎಸ್‌ಯುವಿಗಳನ್ನು ನಮ್ಮ ಮಾರುಕಟ್ಟೆಗೆ ಬಿಟ್ಟಿದೆ. ಡಿ-ಮ್ಯಾಕ್ಸ್, ವಿಕ್ರಾಸ್, ಎಂಯು-7 ಮತ್ತು ಈಚೆಗೆ ಎಂಯುಎಕ್ಸ್‌ ಅನ್ನು ನಮ್ಮ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆ ಹಳೆಯ ಎಂಜಿನ್‌ಗಳಂತೆಯೇ ಈ ಹೊಸ ವಾಹನಗಳಲ್ಲಿರುವ ಎಂಜಿನ್‌ಗಳು ಗಟ್ಟಿ-ಮುಟ್ಟು ಮತ್ತು ಶಕ್ತಿಯುತವಾಗಿವೆ.

ಎಂಯುಎಕ್ಸ್ ಅನ್ನು ದೀರ್ಘ ಟೆಸ್ಟ್‌ ಡ್ರೈವ್‌ ಮಾಡಲು ಕಂಪನಿ ಪ್ರಜಾವಾಣಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ಎಸ್‌ಯುವಿಯಲ್ಲಿ 3 ಲೀಟರ್‌ನ, ಟರ್ಬೊ ಚಾರ್ಜರ್ ಡೀಸೆಲ್ ಎಂಜಿನ್ ಇದೆ. ಈ ಎಂಜಿನ್ 3,600 ಆರ್‌ಪಿಎಂನಲ್ಲಿ ಬರೋಬ್ಬರಿ 177 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ ಮತ್ತು 1,800-2,800 ಆರ್‌ಪಿಎಂ ನಡುವೆ 360 ನ್ಯೂಟಾನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. 3 ಲೀಟರ್‌ ಸಾಮರ್ಥ್ಯದ ಎಂಜಿನ್‌ಗೆ ಇಷ್ಟು ಶಕ್ತಿ ಕಡಿಮೆಯೇ. ಆದರೆ ಇದಕ್ಕಿಂತಲೂ ಹೆಚ್ಚು ಶಕ್ತಿ ಉತ್ಪಾದಿಸುವ ಇತರ ಎಸ್‌ಯುವಿಗಳ ಎಂಜಿನ್‌ಗಳಿಗಿಂತ ಈ ಎಂಜಿನ್‌ನ ತ್ರಾಸವಿಲ್ಲದೆ ಕೆಲಸ ಮಾಡುತ್ತದೆ. ಇದು ಪೂರ್ಣ ಪ್ರಮಾಣದ ಎಸ್‌ಯುವಿ ಆಗಿದ್ದುದ್ದರಿಂದ ಟೆಸ್ಟ್‌ ಡ್ರೈವ್‌ಗೆ ಹೆದ್ದಾರಿ, ಕಚ್ಚಾ ರಸ್ತೆ, ಘಾಟ್ ಮತ್ತು ರಸ್ತೆಯೇ ಇಲ್ಲದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಇದರಲ್ಲಿ ಇರುವುದು 5 ಸ್ಪೀಡ್ ಸೀಕ್ವೆನ್ಷಿಯಲ್ ಆಟೊಮ್ಯಾಟಿಕ್ ಗಿಯರ್ ಬಾಕ್ಸ್ ಮಾತ್ರ. ಹೀಗಾಗಿ ಗಿಯರ್ ಬದಲಾವಣೆಯ ಅವಶ್ಯಕತೆ/ಶ್ರಮ ಬೇಕಿಲ್ಲ. ದೊಡ್ಡ ಎಂಜಿನ್‌ ಇರುವ ಕಾರಣಕ್ಕೆ ಈ ಎಸ್‌ಯುವಿ ಹೆದ್ದಾರಿಯಲ್ಲಿ 100-120 ಕಿ.ಮೀ ವೇಗದಲ್ಲಿ ನಿರಾಯಾಸವಾಗಿ ಹೋಗುತ್ತದೆ. ಓವರ್‌ಟೇಕಿಂಗ್‌ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ.

ಈ ಎಂಜಿನ್ ದಿನಪೂರ್ತಿ 150 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಎಸ್‌ಯುವಿಯನ್ನು ಹೊತ್ತೊಯ್ಯಲು ಶಕ್ತವಾಗಿದೆ. ಆದರೆ ತಿರುವುಗಳಲ್ಲಿ ವೇಗದ ಚಾಲನೆಯನ್ನು ಧೈರ್ಯವಾಗಿ ಮಾಡಲು ಸಾಧ್ಯವಿಲ್ಲ. ಎಲ್ಲಾ ಲ್ಯಾಡರ್‌ ಆನ್ ಫ್ರೇಂ ಎಸ್‌ಯುವಿಗಳೂ ತಿರುವುಗಳಲ್ಲಿ ವೇಗವಾಗಿ ಚಲಾಯಿಸಿದಾಗ ಹೆಚ್ಚು ವಾಲುತ್ತವೆ. ಎಂಯುಎಕ್ಸ್‌ ಸಹ ಹಾಗೆಯೇ. ಹೀಗಾಗಿ ತಿರುವುಗಳಲ್ಲಿ ಇದನ್ನು ವೇಗವಾಗಿ ಚಲಾಯಿಸುವುದು ಆರಾಮದಾಯಕ ಅಲ್ಲ. ಇನ್ನು ಬ್ರೇಕಿಂಗ್ ಉತ್ತಮವಾಗಿದೆ. ಇದರಲ್ಲಿ ಎಬಿಎಸ್‌, ಎಲೆಕ್ಟ್ರಾನಿಕ್ ಬ್ರೇಕ್‌ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಅಸಿಸ್ಟ್ (ಇಬಿಎ) ಸವಲತ್ತುಗಳು ಇವೆ. ಹೀಗಾಗಿ ತುರ್ತು ಬ್ರೇಕಿಂಗ್‌ನಲ್ಲಿ ಬ್ರೇಕ್ ಉತ್ತಮವಾಗಿ ಸ್ಪಂದಿಸುತ್ತದೆ. ಎಸ್‌ಯುವಿ ಒಂದಿನಿತೂ ಕೊಸರಾಡದೆ ಗಕ್ಕನೆ ನಿಲ್ಲುತ್ತದೆ.

ಅಗಲ ತೀರಾ ಕಡಿಮೆ ಇರುವ ಮತ್ತು ಭಾರಿ ತಿರುವುಗಳು ಇರುವ ಎಸ್ಟೇಟ್ ರಸ್ತೆಯಲ್ಲಿ ವೇಗದಲ್ಲಿ ಎಂಯುಎಕ್ಸ್‌ ಚಲಾಯಿಸಿ ಪರೀಕ್ಷಿಸಲಾಯಿತು. ಎಸ್‌ಯುವಿಯಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಇದ್ದುದ್ದರಿಂದ ಇಂತಹ ಪರೀಕ್ಷೆ ಅನಿವಾರ್ಯವಾಗಿತ್ತು. ತಿರುವುಗಳಲ್ಲಿ ಮೂರಂಕಿ ವೇಗದಲ್ಲಿ ತಿರುಗಿಸಿದಾಗಲೂ ಎಂಯುಎಕ್ಸ್‌ ರಸ್ತೆಬಿಟ್ಟು ಅತ್ತಿತ್ತ ಸರಿಯುತ್ತಿರಲಿಲ್ಲ. ಎಸ್‌ಯುವಿಯ ಭಾರದ ದೇಹ ಹೆಚ್ಚು ಓಲಾಡುತ್ತಿರಲಿಲ್ಲ. ಕೆಲವೊಮ್ಮೆ ಚಕ್ರಗಳಿಗೆ ರಸ್ತೆ ಹಿಡಿತ ತಪ್ಪಿ ತುಸು ಡ್ರಿಫ್ಟ್ ಆಗುತ್ತಿದ್ದಂತೆಯೇ ಟ್ರ್ಯಾಕ್ಷನ್ ಕಂಟ್ರೋಲ್ ಕೆಲಸ ಆರಂಭಿಸಿ ಎಸ್‌ಯುವಿ ರಸ್ತೆ ಬದಿಗೆ ಜಾರಿ ಹೋಗದಂತೆ ನೋಡಿಕೊಳ್ಳುತ್ತಿತ್ತು. ಇನ್ನು ಎಲೆಕ್ಟ್ರಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಇದ್ದ ಕಾರಣ ಎಸ್‌ಯುವಿ ರಸ್ತೆ ಬಿಟ್ಟು ಅತ್ತಿತ್ತ ಜಿಗಿಯುತ್ತಿರಲಿಲ್ಲ. ಸ್ಟೆಬಿಲಿಟಿ ಕಂಟ್ರೋಲ್‌ ಅನ್ನು ಪರೀಕ್ಷಿಸುವ ಸಲುವಾಗಿಯೇ ಮೂರಂಕಿ ವೇಗದಲ್ಲಿ ಬ್ರೇಕ್ ಒತ್ತದೆಯೇ ಕೇವಲ ಹ್ಯಾಂಡ್‌ ಬ್ರೇಕ್ ಎಳೆಯಲಾಯಿತು. ಆಗಲೂ ಎಸ್‌ಯುವಿ ಹೆಚ್ಚು ಎಳೆದಾಡದೆ ರಸ್ತೆಯಿಂದ ಸ್ವಲ್ಪವಷ್ಟೇ ಬದಿಗೆ ಸರಿದು ನಿಂತುಕೊಂಡಿತು. ಹೀಗಾಗಿ ಬ್ರೇಕ್ ವೈಫಲ್ಯದ ಸಂದರ್ಭದಲ್ಲಿ ಹ್ಯಾಂಡ್‌ ಬ್ರೇಕ್‌ ನೆಚ್ಚಿಕೊಳ್ಳಲು ಅಡ್ಡಿಯಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆ ರಸ್ತೆ ಹಳ್ಳ-ಗುಂಡಿಗಳಿಂದ ಕೂಡಿತ್ತು. ಆದರೂ ಹಳ್ಳ-ಗುಂಡಿಗಳು ಚಾಲಕ-ಪ್ರಯಾಣಿಕರ ಅನುಭವಕ್ಕೆ ಬರದಂತೆ ಸಸ್ಪೆನ್ಷನ್ ಉತ್ತಮವಾಗಿ ಕೆಲಸ ಮಾಡಿತು.

ಇನ್ನು ಎಂಯುಎಕ್ಸ್ ಟಾಪ್ಎಂಡ್ ಅವತರಣಿಕೆಯಲ್ಲಿ ಫೋರ್‌ ವ್ಹೀಲ್ ಡ್ರೈವ್ ಸವಲತ್ತು ಇದೆ. ಇದು ಲೋ ಗಿಯರ್‌ ಅನ್ನೂ ಹೊಂದಿರುವ ಶಿಫ್ಟ್ ಆನ್ ಫ್ಲೈ ಫೋರ್‌ ವ್ಹೀಲ್ ಡ್ರೈವ್ ವ್ಯವಸ್ಥೆ. ಹೀಗಾಗಿ ರಸ್ತೆ ಇರದ ಕಡೆಯೂ ಎಸ್‌ಯುವಿಯನ್ನು ಚಲಾಯಿಸಬಹುದು. ಡಿಫೆರೆನ್ಷಿಯಲ್ ಲಾಕ್ ಮತ್ತು ಲಿಮಿಟೆಡ್ ಸ್ಲೀಪ್ ಡಿಫರೆನ್ಷಿಯಲ್ ಇಲ್ಲದಿದ್ದರೂ ಟ್ರ್ಯಾಕ್ಷನ್ ಕಂಟ್ರೋಲ್ ಇರುವುದರಿಂದ ಕೆಸರು, ಮರಳು, ಉದುರು ಮಣ್ಣು ಇರುವ ಕಡೆ ಚಾಲನೆ ಮಾಡಬಹುದು. 220 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ ಇರುವುದರಿಂದ ಮತ್ತು ಲೋ ಗಿಯರ್‌ ಇರುವುದರಿಂದ 1.5 ಅಡಿ ಎತ್ತರದ ಬಂಡೆಗಲ್ಲುಗಳನ್ನು ನಿರಾಯಾಸವಾಗಿ ಹತ್ತಿ ಇಳಿಸಬಹುದು. ಈ ಎಸ್‌ಯುವಿಗೆ ಕಂಪನಿ ಹೈವೆ ಟೈರ್‌ಗಳನ್ನು ಅಳವಡಿಸಿರುತ್ತದೆ. ಅದನ್ನು ಆಲ್‌ ಟೆರೇನ್ ಟೈರ್‌ಗಳಿಗೆ ಬದಲಿಸಿಕೊಂಡರೆ ಕಚ್ಚಾ ರಸ್ತೆ ಪ್ರಯಾಣ ಇನ್ನೂ ಸುಲಭ ಮತ್ತು ಸುರಕ್ಷಿತವಾಗಿರುತ್ತದೆ.

ಇದು ಪೂರ್ಣ ಪ್ರಮಾಣದ ಎಸ್‌ಯುವಿ ಆಗಿರುವುದರಿಂದ ಸಾಧಾರಣ ಗಾತ್ರದ ಮತ್ತು ಸಾಧಾರಣ ಎತ್ತರದ (5 ಅಡಿ 6 ಅಂಗುಲ) 7 ವಯಸ್ಕರು ಆರಾಮಾಗಿ ದೂರದ ಪ್ರಯಾಣ ಮಾಡಬಹುದು. ಮುಂಬದಿ ಮತ್ತು ಎರಡನೇ ಸಾಲಿನ ಸೀಟುಗಳಲ್ಲಿ ಪ್ರಯಾಣ ಹೆಚ್ಚು ಆರಾಮದಾಯಕ ವಾಗಿದೆ. ಮೂರನೇ ಸಾಲಿನ ಸೀಟಿನ ಪ್ರಯಾಣ ಆರಾಮ ದಾಯಕ ಎನ್ನಬಹುದು. ಇನ್ನು ಎರಡು ಮತ್ತು ಮೂರನೇ ಸಾಲಿನ ಸೀಟುಗಳಲ್ಲು ಪೂರ್ತಿ ಮಡಚಿದರೆ ಇಬ್ಬರು ವಯಸ್ಕರು ಆರಾಮಾಗಿ ಮಲಗುವಷ್ಟು ವಿಶಾಲ ಪ್ಲಾಟ್‌ಫಾರಂ ಸಿದ್ಧವಾಗುತ್ತದೆ. ಇಷ್ಟೆಲ್ಲಾ ಅನುಕೂಲ ಮತ್ತು ಸವಲತ್ತು ಇರುವ ಕಾರಣ ಈ ಎಸ್‌ಯುವಿಯನ್ನು ಭಾರತದ ಯಾವುದೇ ಭಾಗದಲ್ಲಿ ನಿರಾಯಾಸವಾಗಿ ಚಾಲನೆ ಮಾಡಬಹುದು.

ಬೆಂಗಳೂರಿನಲ್ಲಿ ಟಾಪ್ಎಂಡ್ ಅವತರಣಿಕೆಯ ಆನ್‌ರೋಡ್ ಬೆಲೆ 31 ಲಕ್ಷಕ್ಕಿಂತ ತುಸು ಹೆಚ್ಚು. ಇಷ್ಟು ಬೆಲೆಯ ಎಸ್‌ಯುವಿಯಲ್ಲಿ ಎರಡೇ ಏರ್‌ಬ್ಯಾಗ್‌ಗಳಿವೆ. ಆದರೆ ಚಾಲನೆಗೆ ಅಡಚಣೆ ಮಾಡುವ ಎಲೆಕ್ಟ್ರಿಕಲ್ ಗ್ಯಾಜೆಟ್ ಇಲ್ಲದ ಕಾರಣ ಇದು ಪಕ್ಕಾ ಚಾಲಕರ ಎಸ್‌ಯುವಿ. ಆದರೆ ಹಿಂಬದಿ ಪ್ರಯಾಣಿಕರಿಗೆ 10 ಇಂಚಿನ ಎಲ್‌ಇಡಿ ಪರದೆ ಇರುವ ಮನರಂಜನಾ ವ್ಯವಸ್ಥೆ ಇದೆ. ಹೀಗಾಗಿ ವಿದ್ಯುನ್ಮಾನ-ಮನರಂಜನಾ ಸವಲತ್ತುಗಳು ಇರುವ ಪ್ರತಿಸ್ಪರ್ಧಿ ಎಸ್‌ಯುವಿಗಳ ಮಧ್ಯೆ ಎಂಯುಎಕ್ಸ್‌ ಭಿನ್ನವಾಗಿ ನಿಲ್ಲುತ್ತದೆ.

ಸೂಚನೆ: ಎಲ್ಲಾ ರೀತಿಯ ಚಾಲನೆಯನ್ನೂ ಖಾಸಗಿ ಎಸ್ಟೇಟ್‌ನಲ್ಲಿ ನಡೆಸಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ಇಲ್ಲದ ಮತ್ತು ಸಂಪೂರ್ಣ ನಿಯಂತ್ರಿತ ರಸ್ತೆಯಲ್ಲಿ ವೇಗದ ಚಾಲನೆ-ತಿರುವು-ಡ್ರಿಫ್ಟ್‌ಗಳನ್ನು ಮಾಡಲಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿಯ ಚಾಲನೆ ಅಪಾಯಕಾರಿ ಮತ್ತು ಶಿಕ್ಷಾರ್ಹ ಅಪರಾಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT