ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಗಮಗದ ಹಿಂದಿನ ಕತ್ತಲೆ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮದುವೆಯೆಂದೆರೆ ಅದೆಷ್ಟು ಸಂಭ್ರಮ. ಬಳೆ-ಒಡವೆಗಳ ಖರೀದಿ. ಶಾಪಿಂಗ್‌ಗೆ ಸುತ್ತಾಟ. ಇದ್ದ ಎಲ್ಲ ಅಂಗಡಿಗಳ ಮೆಟ್ಟಿಲು ಹತ್ತಿ ಇಳಿದು ಸುಸ್ತೋ ಸುಸ್ತು. ಆದರೆ ಆ ಸಂಭ್ರಮದ ದಿನ ಜೀವನದಲ್ಲಿ ಪದೇ ಪದೇ ಬರುವಂತಹುದಲ್ಲ. ಮನೆ ತುಂಬಾ ಜನ. ಕೈಯಲ್ಲಿ ಕೆಂಪಾದ ಮದರಂಗಿ. ಉದ್ದನೆಯ ಜಡೆ. ಅದಕ್ಕೆ ಮಲ್ಲಿಗೆಯ ಅಲಂಕಾರ. ಕುಚ್ಚು ಕಟ್ಟಿರುವ ವಿಭಿನ್ನ ಶೈಲಿಯ ಸೀರೆಗಳು. ಕೈತುಂಬಾ ಹಸಿರು ಬಳೆಗಳು, ಸುಂದರವಾದ ದಿನಗಳು.

ರಿಸೆಪ್ಷನ್ ದಿನ ಫೋಟೊಕ್ಕೆ, ವೀಡಿಯೊಕ್ಕೆ ಹಲ್ಲು ಕಿರಿದು ಸಾಕಾಗಿಬಿಟ್ಟಿತ್ತು. ಅದೇನು ಕ್ಯೂ ಫೋಟೊಕ್ಕಾಗಿಯೇ ಮದುವೆಯೋ ಎಂಬಂತೆ ಆ ಸರದಿ ಮುಗಿಯುವುದೇ ಇಲ್ಲ. ಯಾರು ಈ ರಿಸೆಪ್ಷನ್ ಕಂಡು ಹಿಡಿದಿದ್ದಾರೋ ಅನಿಸಿಬಿಟ್ಟಿತ್ತು. ಅಂತೂ ಸರದಿ ಮುಗಿದ ಮೇಲೆ ಊಟದ ಹಾಲ್‌ಗೆ ಬಂದೆ. ತುಂಬಾ ಹಸಿವಾಗಿತ್ತು. ಜನದಟ್ಟಣೆಯಲ್ಲಿ ನೀರು ಕುಡಿಯಲೂ ಸಾಧ್ಯವಾಗಿರಲಿಲ್ಲ.

ಊಟದ ಹಾಲ್ ಸುತ್ತ ಕಣ್ಣಾಡಿಸಿದೆ. ಎಲ್ಲಿ ನೋಡಿದರೂ ನೀರಿನ ಬಾಟಲ್‌ಗಳು ಬಾಳೆ ಎಲೆಗಳ ಪಕ್ಕದಲ್ಲಿದ್ದವು. ಕೆಲವೊಂದು ಪೂರ್ತಿ ಖಾಲಿಯಾಗಿದ್ದರೆ, ಕೆಲವೊಂದು ಅಲ್ಲಲ್ಲಿ ಬಿದ್ದು ಹೊರಳಾಡುತ್ತಿದ್ದವು. ಬಾಳೆ ಎಲೆಯಲ್ಲಿ ಅನ್ನ, ಸಿಹಿ ತಿನಿಸು, ಹಪ್ಪಳ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನಸ್ಸು ಬೇಸರಗೊಂಡಿತು. ‘ಹೇ... ಊಟ ಮಾಡೆ. ನಾಳೆ ಮದುವೆ ಬಗೆಗೆ ಕನಸು ಕಾಣೋಕೆ ಶುರು ಮಾಡಿದ್ಯಾ’ ಎಂದು ಅಕ್ಕ ಕೇಳಿದಾಗಲೇ ತುತ್ತು ಬಾಯಿಗಿಟ್ಟಿದ್ದೆ. ಆ ತುತ್ತೇಕೋ ಗಂಟಲಿಗೆ ಇಳಿಯಲೇ ಇಲ್ಲ.

ಲೇಟಾಗಿದೆ ಎಲ್ಲರೂ ಮನೆಗೆ ಹೋಗೋಣ ಎಂದು ಅಪ್ಪ ಕರೆದಾಗ ನನ್ನವರಿಗೆ ಹೇಳಿ ಓಡಿಹೋಗಿ ಕಾರು ಹತ್ತಿದೆ. ಪಕ್ಕಕ್ಕೆ ಕಣ್ಣು ಹೊರಳಿಸಿದೆ. ಹಸಿದ ಕಂದಮ್ಮಗಳು ಎಸೆದ ಬಾಳೆ ಎಲೆಗಳ ಮೇಲಿನ ಸಿಹಿತಿನಿಸು ಆಯುತ್ತಿದ್ದವು. ಹಸುಗಳ ಹಿಂಡು ಬಾಳೆ ಎಲೆಯೊಂದಿಗೆ ಪ್ಲಾಸ್ಟಿಕ್ ಕೂಡ ಅಗೆಯುತ್ತಿದ್ದವು. ಆಲಿಕಲ್ಲು ಮಳೆಯಿಂದ ಹಾಳಾದ ಬಾಳೆ ಎಲೆ ದಿಟ್ಟಿಸುತ್ತಿರುವ ರೈತನೊಬ್ಬ ನೆನಪಾದ. ಅಲಂಕರಿಸಿದ ಹೂವಿನ ದಿನ ಮುಗಿದಿತ್ತು. ತಾನು ಬಿಸಿಲಿನಲ್ಲಿ ಒಣಗುತ್ತಿದ್ದರೂ ಮಲ್ಲಿಗೆಯ ಹಾರಕ್ಕೆ ನೀರು ಚಿಮುಕಿಸುತ್ತಿದ್ದ ಹೂ ಮಾರುವ ಗಂಗಮ್ಮ ಕಣ್ಣೆದುರಿಗೆ ಬಂದಳು. ನಮಗೆ ದಿನಗಳೇನು, ವರ್ಷಗಳೇ ಸಾಕಾಗುವುದಿಲ್ಲ. ಆದರೆ ಹೂವಿಗೆ ಕ್ಷಣವೇ ಜೀವನ. ಕರುಳು ಕಿವುಚಿದಂತಾಯಿತು.

‘ಅಪ್ಪಾ ಇಷ್ಟೊಂದು ಅದ್ದೂರಿ ಮದುವೆಯ ಅವಶ್ಯಕತೆ ಇತ್ತಾ’ ಎಂದು ಕೇಳಿದೆ. ‘ಜನರನ್ನು ಸಂತೃಪ್ತಿಗೊಳಿಸಬೇಕಲ್ಲಮ್ಮಾ’ ಎಂದರು. ‘ಜನರನ್ನು ಮೆಚ್ಚಿಸುವುದಷ್ಟು ಸುಲಭದ ಮಾತಾ? ಮೂಗು ಮುರಿಯುವವರು ಇದ್ದೇ ಇರುತ್ತಾರಲ್ಲಪ್ಪಾ’ ಎಂದಾಗ ಅಪ್ಪ ನಕ್ಕು ಸುಮ್ಮನಾಗಿದ್ದರು. ಮದುವೆಯಾದ ಜೋಡಿಗಳು ಹೊಂದಾಣಿಕೆಯಿಂದ ಇದ್ದರೆ ಚೆನ್ನ. ಆದರೆ ಇಂದು ವಿಚ್ಛೇದನಗಳು ಅಧಿಕವಾಗಿ ಕಂಡು ಬರುತ್ತಿವೆ. ನೊಂದ ಮನಸ್ಸುಗಳು ಆತ್ಮಹತ್ಯೆಗೆ ಶರಣಾದರೆ, ಸಾಲ ಮಾಡಿದ ಕುಟುಂಬ ಬೀದಿಗೆ ಬರುತ್ತದೆ.

ನಾನು ಮಲೆನಾಡಿನಲ್ಲಿರುವ ಸ್ನೇಹಿತೆಯ ಮದುವೆಗೆ ಹೋಗಿದ್ದೆ. ತುಂಬಾ ಸರಳ ಮದುವೆ. ಮಾವಿನ ಎಲೆಯ ತೋರಣ. ಬಾಳೆಯ ದಿಂಡಿನಿಂದ ಅಚ್ಚುಕಟ್ಟಾಗಿ ಅಲಂಕರಿಸಿದ ಮದುವೆ ಮಂಟಪ. ಮದುವೆ ಮಂಟಪದ ಚಪ್ಪರಕ್ಕೆ ವಿವಿಧ ಬಣ್ಣದ ಸೀರೆಗಳ ವಿನ್ಯಾಸ. ಅಂಗಳದ ಕಂಬಗಳಿಗೆ ಹಿತ್ತಲಿನ ಹೂವುಗಳೇ ಅಲಂಕಾರ.

ಗೆಳತಿಯರೇ ಕೈಗೆ ಮೆಹಂದಿ ಹಾಕಿದರೆ, ಹೆಂಗಳೆಯರು ರಂಗೋಲಿ ಬಿಡಿಸುತ್ತಿದ್ದರು. ಗಂಡಸರಿಗೆ ಅಡುಗೆ ಜವಾಬ್ದಾರಿ. ಊಟಕ್ಕೆ ಕೂಡ ಅಚ್ಚುಕಟ್ಟಾಗಿ ಬಡಿಸಲಾಗುತ್ತಿತ್ತು. ಚೆಲ್ಲುವುದಕ್ಕೆ ಅವಕಾಶವೇ ಇರದ ಹಾಗೆ. ನೀರನ್ನು ಕೂಡ ಕೇಳಿ ಹಾಕುತ್ತಿದ್ದರು. ವರದಕ್ಷಿಣೆ ಆ ಜನರಲ್ಲಿ ಇಲ್ಲವೇ ಇಲ್ಲ. ಪ್ರೀತಿಯಿಂದ ಕೊಟ್ಟಿದ್ದಷ್ಟೆ. ಅಲ್ಪದರಲ್ಲೂ ತೃಪ್ತಿ ಪಡುವ ದೊಡ್ಡ ಗುಣ. ಹಳ್ಳಿಯ ಹೆಣ್ಣು ಮಕ್ಕಳಿಗೆ ಅಪ್ಪನ ಬೆವರಿನ ಬೆಲೆ ಗೊತ್ತು.

ಹಳ್ಳಿಯ ಜನರಿಗೆ ತಿಂಗಳ ಆದಾಯವಿಲ್ಲ. ವಾರ್ಷಿಕ ಆದಾಯದಲ್ಲೇ ಎಲ್ಲವನ್ನೂ ನಿಭಾಯಿಸಬೇಕು. ಮುಂದಿನ ವರ್ಷದ ಭರವಸೆಯಿಲ್ಲ. ಮಳೆ ಬಂದರೆ, ವಾತಾವರಣ ಹದ ಆಗಿದ್ದರಷ್ಟೆ ಬೆಳೆ. ಮುನಿಸು ತೋರುವ ಮಳೆರಾಯ, ಬತ್ತಿ ಹೋಗುವ ಕೆರೆ. ಸುಟ್ಟ ರೊಟ್ಟಿಯಂತಾಗುವ ತೆಂಗಿನ ಗರಿ. ಕೊಳೆತು ನಾರುವ ಅಡಿಕೆ. ಭರವಸೆಯೇ ಇಲ್ಲದ ಬದುಕು ಅವರದ್ದು. ಕೆಲವರು ಬಿಡುವಿನ ಸಮಯದಲ್ಲಿ ಹಪ್ಪಳ, ಸಂಡಿಗೆ ಮಾಡಿ ಮಾರಾಟ ಮಾಡುತ್ತಾರೆ. ಕೆಲವರು ಬೀದಿಬದಿಯಲ್ಲಿ ನಿಂತು ಹೂ ಮಾರುತ್ತಾರೆ. ಹಾಗೆ ಹೀಗೆ ಹಣ ಕೂಡಿಡುತ್ತಾರೆ. ನಗರದಂತೆಯೇ ಎಲ್ಲದಕ್ಕೂ ಹಣ ಕೊಟ್ಟು ತರುವಂತಿದ್ದರೆ ಹಳ್ಳಿಗರ ಜೀವನ ಕೇಳುವಂತಿರಲಿಲ್ಲ. ಕೆಲವರು ಹಾಲು ಮಾರಿಯಾದರೂ ಜೀವನ ಸಾಗಿಸುತ್ತಿದ್ದರು. ಈಗ ಮೇವಿನ ಕೊರತೆ. ನೀರಿನ ಕೊರತೆಯಾಗಿ ಜಾನುವಾರುಗಳೂ ಬರಡಾಗಿವೆ.

ನಾವು ನಗರದಲ್ಲಿ ದೀಪಗಳನ್ನು ಆರಿಸುವುದೇ ಇಲ್ಲ. ಬೀದಿ ದೀಪಗಳು ಬೆಳಗಾದರೂ ಉರಿಯುತ್ತಲೇ ಇರುತ್ತವೆ. ನಗರದ ಆಡಂಬರ ಕಡಿಮೆಯಾಗಬೇಕಾದರೆ ಹಳ್ಳಿಗೊಮ್ಮೆ ಭೇಟಿ ನೀಡಬೇಕು. ಕತ್ತಲಲ್ಲೇ ಅವರ ಜೀವನ ಕವಿದಿರುತ್ತದೆ. ಮನೆಯಂಗಳದಲ್ಲಿ ಮದುವೆಯಾಗುವ ಅವಕಾಶ ಎಷ್ಟು ಜನರಿಗಿರುತ್ತದೆ? ಮದುವೆ ದಿನಗಳ ಆಡಂಬರದಲ್ಲಿ ಮುಳುಗಿರುವ ನಮಗೆ ಅಪ್ಪನ ಜೇಬಿನಲ್ಲಿ ತೂತು ಬಿದ್ದಿರುವುದು ಅರಿವಾಗದೇ ಇರುವುದು ವಿಪರ್ಯಾಸ! ಚಿಮಣಿ ದೀಪದ ಮಂದ ಬೆಳಕೂ ಮನಸ್ಸಿಗೆ ಹಿತನೀಡುವ ಅನುಭವವಲ್ಲವೇ? ಗಾಳಿ ಬಂದಾಗ ಆರಿಹೋಗುವ ಚಿಮಣಿ ದೀಪದ ಬೆಳಕಿನಂತಾಗದಿರಲಿ ವಲಸೆ ಹಕ್ಕಿಗಳ ಬದುಕು.

– ಸೌಮ್ಯ ಜಂಬೆ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT