ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ಸಂಸ್ಕೃತಿ ಮತ್ತು ತಿಳಿವಳಿಕೆಗಳ ಸಂಗಮ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಶಿಕ್ಷಣದ ಬಗ್ಗೆ ನಮಗೆಲ್ಲರಿಗೂ ತುಂಬ ಗೌರವವಿದೆ. ಶಿಕ್ಷಣವಿಲ್ಲದೆ ನಮಗೆ ಉದ್ಯೋಗ ಸಿಗದು; ಉದ್ಯೋಗವಿಲ್ಲದೆ ಅನ್ನ ಇಲ್ಲ. ಹೀಗಿರುವುದರಿಂದ ನಮಗೆಲ್ಲ ಅದರ ಅವಶ್ಯಕತೆ ಮನವರಿಕೆಯಾಗಿದೆ. ಆದರೆ ‘ಶಿಕ್ಷಣ ಎಂದರೇನು?’ ಈ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. ಜಗತ್ತಿನ ಹಲವರು ಚಿಂತಕರು ಈ ಪ್ರಶ್ನೆಗೆ ಉತ್ತರ ಕೊಡುವ ಕೆಲಸವನ್ನು ಮಾಡಿದ್ದಾರೆ.

ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರು ಎ. ಎನ್‌. ವೈಟ್‌ಹೆಡ್‌. ಅವರ ಒಂದು ಸಣ್ಣ ಪುಸ್ತಿಕೆ ‘The Aims of Education’. ಶಿಕ್ಷಣದ ಹಲವು ಆಯಾಮಗಳನ್ನು ಕುರಿತ ಪ್ರಬಂಧಗಳ ಸಂಗ್ರಹವಿದು. ಇದರ ಮೊದಲ ಪ್ರಬಂಧದ ಶೀರ್ಷಿಕೆಯೇ ಪುಸ್ತಕದ ಶೀರ್ಷಿಕೆಯೂ ಆಗಿದೆ. ಶಿಕ್ಷಣದ ನಿಜವಾದ ಉದ್ದೇಶ ಏನಾಗಿರಬೇಕು – ಎನ್ನುವುದನ್ನು ಇದು ತುಂಬ ಸೊಗಸಾಗಿ ನಿರೂಪಿಸುತ್ತದೆ.

‘Culture is activity of thought, and receptiveness to beauty and humane feeling. Scraps of information have nothing to do with it. A merely well-informed man is the most useless bore on God's earth. What we should aim at producing is men who possess both culture and expert knowledge in some special direction.’ ಇವು ಈ ಪುಸ್ತಕದ ಮೊದಲ ಸಾಲುಗಳು. ಶಿಕ್ಷಣ ಹೇಗಿರಬೇಕು ಎನ್ನುವುದನ್ನು ಈ ಮಾತುಗಳು ಸ್ಪಷ್ಟವಾಗಿ ಸೂಚಿಸುತ್ತಿವೆ.

‘ಸಂಸ್ಕೃತಿ ಎನ್ನುವುದು ಅರಿವಿನ ಕ್ರಿಯಾಶೀಲತೆ, ಸೌಂದರ್ಯದ ಗ್ರಹಿಕೆ ಮತ್ತು ಮಾನವೀಯತೆಯ ಸಂವೇದನೆ. ಮಾಹಿತಿಯ ಮೂಟೆಗೂ ಇದಕ್ಕೂ ಸಂಬಂಧವೇನಿರದು. ಮಾಹಿತಿಯಿಂದಷ್ಟೆ ತುಂಬಿರುವ ವ್ಯಕ್ತಿ ಈ ಭೂಮಿಯಲ್ಲೇ ಅತ್ಯಂತ ನೀರಸ ವ್ಯಕ್ತಿಯೇ ಹೌದೆನ್ನಿ. ಸಂಸ್ಕೃತಿಯನ್ನೂ ಹಾಗೂ ಯಾವುದಾದರೊಂದು ನಿರ್ದಿಷ್ಟ ದಿಕ್ಕಿನ ವಿಷಯ ತಜ್ಞತೆಯನ್ನೂ ಪಡೆದವರಂಥವರನ್ನು ನಾವಿಂದು ನಿರ್ಮಾಣ ಮಾಡಬೇಕಿದೆ.’

‘ಮೌಲ್ಯಯುತ ತಿಳಿವಳಿಕೆ ಎಂದರೆ ಅದು ನಮ್ಮತನದ ಏಳೆಗೆಯೇ ಹೌದು’ ಎಂದೂ ವೈಟ್‌ಹೆಡ್‌ ಪ್ರತಿಪಾದಿಸಿರುವುದನ್ನು ಗಮನಿಸಬೇಕು. ಈ ವಿಕಾಸ ಒಬ್ಬ ವ್ಯಕ್ತಿಯಲ್ಲಿ ಅವನ ಹದಿನಾರರಿಂದ ಮೂವತ್ತನೆಯ ವರ್ಷದವರೆಗೆ ನಡೆಯುತ್ತದೆ – ಎನ್ನುವುದನ್ನೂ ಅವರು ಹೇಳಿರುವುದನ್ನು ನಮ್ಮ ಶಿಕ್ಷಣವ್ಯವಸ್ಥೆಯೂ ಕುಟುಂಬವ್ಯವಸ್ಥೆಯೂ ಗಮನಿಸಬೇಕು. ‘ಹೆಚ್ಚೆಚ್ಚು ವಿಷಯಗಳನ್ನು ವಿದ್ಯಾರ್ಥಿಗೆ ಕಲಿಸಬೇಕೆಂಬ ಉತ್ಸಾಹಕ್ಕಿಂತಲೂ, ಕಲಿಸುವುದನ್ನು ನಿಖರವಾಗಿಯೂ ಪೂರ್ಣವಾಗಿಯೂ ಕಲಿಸುವುದರ ಕಡೆಗೆ ಗಮನವನ್ನು ಕೋಡಬೇಕೆ’ ಎಂಬ ಅವರ ಸೂಚನೆಯನ್ನೂ ನಮ್ಮ ಶಿಕ್ಷಣವ್ಯವಸ್ಥೆ ಗಂಭೀರವಾಗಿ ಆಲೋಚಿಸಬೇಕಿದೆ.

ಇಂದು ನಮ್ಮದು ಮಾಹಿತಿ ಪ್ರಧಾನ ಶಿಕ್ಷಣವ್ಯವಸ್ಥೆ. ನಮ್ಮ ಪಠ್ಯಪುಸ್ತಕಗಳೂ ಪರೀಕ್ಷೆಗಳೂ ಕೇವಲ ಮಾಹಿತಿಪ್ರಧಾನ ಗುಣವನ್ನೇ ನೆಚ್ಚಿಕೊಂಡಿವೆ. ಮಾಹಿತಿಯನ್ನೇ ನಾವು ತಿಳಿವಳಿಕೆ ಎಂದು ತಪ್ಪಾಗಿ ಗ್ರಹಿಸುತ್ತಿದ್ದೇವೆ. ಈಜುವುದು ಹೇಗೆ ಎಂದು ಎಷ್ಟು ಪುಸ್ತಕಗಳನ್ನು ಓದಿದರೂ ಬರೆದರೂ ಪ್ರಯೋಜವಿಲ್ಲ. ನಮಗೆ ಈಜು ಬರಬೇಕು ಎಂದಾದರೆ ನಾವು ನೀರಿಗೆ ಇಳಿಯದೆ ವಿಧಿಯಿಲ್ಲ; ಹಾಗೆಯೇ ನಮಗೆ ಈಜಲು ಬರುವುದರ ಪ್ರಯೋಜನ ಒದಗುವುದು ನಾವು ನೀರಿಗೆ ಬಿದ್ದಾಗಲೇ. ಹೀಗೆ ನಮ್ಮ ಓದು ಮತ್ತು ಜೀವನ – ಎರಡೂ ಒಂದಾಗಿ ನಡೆಯುವಂಥ ಶಿಕ್ಷಣಪದ್ಧತಿ ಸಮಾಜದಲ್ಲಿ ನೆಲೆಯಾಗಬೇಕು ಎಂಬ ಧ್ವನಿಯನ್ನು ವೈಟ್‌ಹೆಡ್‌ ಅವರ ಮಾತುಗಳಲ್ಲಿ ನೋಡಬಹುದು. ರಾಶಿ ರಾಶಿ ಪುಸ್ತಕಗಳನ್ನು ಓದಿದ್ದ ಪಂಡಿತನೊಬ್ಬನಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ ಅವನು ಪ್ರವಾಹದ ಅಪಾಯದಲ್ಲಿ ದುರಂತ ಕಂಡ – ಎಂಬ ನೀತಿಕಥೆಯ ಬಗ್ಗೆ ನಮಗೆ ತಿಳಿದಿದೆ. ಜೀವನಕ್ಕೆ ನೇರ ಒದಗದ ಓದಿನಿಂದ ಪ್ರಯೋಜನ ಇಲ್ಲ – ಎನ್ನುವುದೇ ಈ ಕಥೆಯ ಸಂದೇಶ ಕೂಡ.

ನಾವಿಂದು ಮಾಹಿತಿಗಳ ರಾಶಿಯನ್ನು ನುಂಗಿ ದೊಡ್ಡ ದೊಡ್ಡ ಪದವಿಯನ್ನು ಪಡೆದು ಬುದ್ಧಿವಂತರಾಗುತ್ತಿದ್ದೇವೆ; ನಿಜ. ಆದರೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವಲ್ಲಿ ಈ ಬುದ್ಧಿವಂತತನ ಸೋಲುತ್ತಿದೆ. ಬದುಕಿನ ಎಂಥ ಕ್ಷಣವನ್ನೂ ಸರಿಯಾಗಿ ಎದುರಿಸುವಂಥ ವಿವೇಕವನ್ನು ನೀಡುವಲ್ಲಿ ನಮ್ಮ ಪದವಿಪತ್ರಗಳು ಸೋಲುತ್ತಿವೆ. ಜೀವನಸೌಂದರ್ಯವನ್ನು ಸವಿಯುವಂಥ ಮಾನಸಿಕತೆಯನ್ನು ಒದಗಿಸುವಲ್ಲಿ ನಮ್ಮ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ. ಈ ಸಂಗತಿಗಳ ಬಗ್ಗೆ ನಾವೆಲ್ಲರೂ ಇಂದು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT