ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ಹುಕುಂ ಅಕ್ರಮ: ಕಾಂಗ್ರೆಸ್‌ ಪ‍್ರತಿಭಟನೆ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಗರ್‌ಹುಕುಂ ಯೋಜನೆಯಡಿ ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ₹10 ಸಾವಿರ ಕೋಟಿ ಬೆಲೆಬಾಳುವ ಜಾಗವನ್ನು ಅನರ್ಹರಿಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪುರಭವನದ ಎದುರು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ಸೇರಿದ್ದ ಕಾರ್ಯಕರ್ತರು, ‘ಕಳುಹಿಸಿ ಕಳುಹಿಸಿ ಬಿಜೆಪಿಯ ಭ್ರಷ್ಟರನ್ನು ಜೈಲಿಗೆ ಕಳುಹಿಸಿ’, ‘ಗಂಡನ ಹೆಸರಿನಲ್ಲಿ ಬಂಗಲೆ, ಪತ್ನಿ ಕೂಲಿ ಎಂದು ಜಮೀನು ಗುಳುಂ’, ‘ಭ್ರಷ್ಟ ಬಿಜೆಪಿ ನಾಯಕರಿಗೆ ಧಿಕ್ಕಾರ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಪಕ್ಷದ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ನಗರ ಘಟಕಗಳ ಸಹಯೋಗದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಆರ್‌.ಅಶೋಕ ನೇತೃತ್ವದ ಸಮಿತಿಯು 2,402 ಎಕರೆ ಜಮೀನನ್ನು ಅನರ್ಹರಿಗೆ ನಿಯಮಬಾಹಿರ
ವಾಗಿ ಹಂಚಿದೆ. ಪಾಲಿಕೆಯ ಮಾಜಿ ಸದಸ್ಯರು, ಭೂನ್ಯಾಯ ಮಂಡಳಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಅವರ ಕುಟುಂಬದವರು ಇದರ ಫಲಾನುಭವಿಗಳು’ ಎಂದು ಆರೋಪಿಸಿದರು.

‘ಈ ಯೋಜನೆಯಡಿ ಜಮೀನು ಸಕ್ರಮ ಮಾಡಲು ಫಲಾನುಭವಿಗಳು ಕೆಲ ಅರ್ಹತೆ ಹೊಂದಿರಬೇಕೆಂಬ ನಿಯಮವಿದೆ. ಈ ಎಲ್ಲ ಅಂಶಗಳನ್ನು ಸಮಿತಿ ಗಾಳಿಗೆ ತೂರಿತ್ತು. ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ನ್ಯಾಯಾಲಯವು ವಿಚಾರಣೆ ನಡೆಸಿ 248 ಎಕರೆಯನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆಯಲು ಆದೇಶಿಸಿತ್ತು. ಈ ಆದೇಶವನ್ನು ಜಿಲ್ಲಾಧಿಕಾರಿ ಎತ್ತಿ ಹಿಡಿದಿದ್ದರು. ಈ ಅಕ್ರಮದ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ವಿಧಾನಮಂಡಲದ ಸರ್ಕಾರಿ ಭರವಸೆಗಳ ಸಮಿತಿಯು ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಅವರು ಇತ್ತೀಚೆಗೆ ಸಮಿತಿಗೆ ವರದಿ ಸಲ್ಲಿಸಿದ್ದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಿತಿ ನಿರ್ದೆಶನ ನೀಡಿದೆ’ ಎಂದರು.

‘ಭೂ ಮಂಜೂರಾತಿ ಅಕ್ರಮವು ನಗರದ ಅತೀ ದೊಡ್ಡ ಹಗರಣವಾಗಿದೆ. ಅಶೋಕ ಸೇರಿ ಎಲ್ಲರ ವಿರುದ್ಧ ಸರ್ಕಾರವೇ ಸ್ವಯಂಪ್ರೇರಿತ
ವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವರನ್ನು ಬಂಧಿಸಿ ತಕ್ಕ ಪಾಠ ಕಲಿಸಬೇಕು’ ಎಂದು ಅವರು ಒತ್ತಾಯಿಸಿದರು.

ವಿಧಾನಪರಿಷತ್‌ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ‘ಬಿಜೆಪಿ ಅಧಿಕಾರದ ಅವಧಿಯಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಹಾಗೂ ಅಕ್ರಮಗಳು ನಡೆದಿವೆ. ಈಗ ಭೂ ಮಂಜೂರಾತಿ ಹಗರಣ ಬಯಲಿಗೆ ಬಂದಿದೆ. ₹1 ಲಕ್ಷ ಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಂಧನವಾಗಿತ್ತು. ಅದಾದ ನಂತರ ಬಿಜೆಪಿಯ ಹಲವು ಶಾಸಕರು ಜೈಲಿಗೆ ಹೋಗಿಬಂದರು. ಇಂಥ ಸ್ಥಿತಿಯಲ್ಲಿ ‘ಭಾರತೀಯ ಜನತಾ ಪಾರ್ಟಿ’ ಎಂಬ ಹೆಸರನ್ನು ‘ಭಾರತೀಯ ಭ್ರಷ್ಟ ಜನರ ಪಕ್ಷ’ ಎಂದು ಮರುನಾಮಕರಣ ಮಾಡಿಕೊಳ್ಳುವುದು ಒಳ್ಳೆಯದು’ ಎಂದು ಲೇವಡಿ ಮಾಡಿದರು.

‘ಭ್ರಷ್ಟಾಚಾರದ ರೂವಾರಿ ಆರ್‌.ಅಶೋಕ ಅವರು ಉತ್ತರಹಳ್ಳಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಆ ಶಾಲೆಯ ಜಾಗ ಯಾರದ್ದು ಎಂಬುದಕ್ಕೆ ಅವರೇ ಉತ್ತರಿಸಬೇಕು. ಭೂ ಮಂಜೂರಾತಿ ಅಕ್ರಮದ ಬಗ್ಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಾದರೆ, ಅಶೋಕ ಜೈಲಿಗೆ ಹೋಗುವುದು ಖಚಿತ. ಇದು ಸೂರ್ಯ ಹುಟ್ಟುವಷ್ಟೇ ಸತ್ಯ’ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಎಂ.ನಾರಾಯಣ ಸ್ವಾಮಿ, ‘ಆಸ್ತಿ ಭಾಗ ಮಾಡುವ ರೀತಿಯಲ್ಲಿ ಅಶೋಕ ಅವರು ಆರ್‌ಎಸ್‌ಎಸ್‌, ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಅನುಯಾಯಿಗಳಿಗೆ ಭೂಮಿ ಹಂಚಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

ಅಕ್ರಮದ ವರದಿ ಮಾಡಿದ್ದ ‘ಪ್ರಜಾವಾಣಿ’


ಬಗರ್‌ಹುಕುಂ ಯೋಜನೆಯಡಿ ದಕ್ಷಿಣ ತಾಲ್ಲೂಕಿನಲ್ಲಿ 62 ಗ್ರಾಮಗಳ 1,516 ಮಂದಿಗೆ ಬಗರ್‌ಹುಕುಂ ಸಮಿತಿಯು 2,157 ಎಕರೆ ಜಾಗವನ್ನು ನಿಯಮಬಾಹಿರವಾಗಿ ಮಂಜೂರು ಮಾಡಿದ್ದನ್ನು ಪತ್ತೆ ಹಚ್ಚಿದ್ದ ಕಂದಾಯ ಇಲಾಖೆ ‘ವಿಧಾನಮಂಡಲದ ಸರ್ಕಾರಿ ಭರವಸೆಗಳ ಸಮಿತಿ’ಗೆ ವರದಿ ಸಲ್ಲಿಸಿತ್ತು. ಬಿಜೆಪಿ ಶಾಸಕ ಆರ್‌. ಅಶೋಕ ಹಾಗೂ ಮಾಜಿ ಶಾಸಕ ಎಂ. ಶ್ರೀನಿವಾಸ ಅವರು ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಹೆಚ್ಚಿನ ಮಂಜೂರಾತಿಗಳು ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಅ. 18ರ ಸಂಚಿಕೆಯಲ್ಲಿ ‘ಬಗರ್‌ಹುಕುಂ: 2,157 ಎಕರೆ ಸಕ್ರಮ ‘ಅಕ್ರಮ’ ಹಾಗೂ ಅ.21ರ ಸಂಚಿಕೆಯಲ್ಲಿ ‘₹150 ಕೋಟಿ ಆಸ್ತಿ ಒಡೆಯನಿಗೂ ಬಗರ್‌ಹುಕುಂ ಜಾಗ!’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT