ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಭಯೋತ್ಪಾದಕನ ಅಟ್ಟಹಾಸ: ಇದು ಕೊನೆಗೊಳ್ಳಲಿ

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಮತ್ತೆ ಭಯೋತ್ಪಾದನಾ ದಾಳಿ ನಡೆದಿದೆ. ಅಲ್ಲಿನ ಪ್ರಮುಖ ನಗರ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಬಳಿ ಉಜ್ಬೇಕಿಸ್ತಾನದ 29 ವರ್ಷದ ಯುವಕ ಸೈಫುಲ್ಲೊ ಸಾಯ್‌ಪೋವ್‌ ಎಂಬಾತ ಪಾದಚಾರಿ ಮಾರ್ಗಕ್ಕೆ ಟ್ರಕ್‌ ನುಗ್ಗಿಸಿ 8 ಜನರನ್ನು ಕೊಂದಿದ್ದಾನೆ.

ಈ ಕೃತ್ಯದ ಬಗ್ಗೆ ಆತನಿಗೆ ಕಿಂಚಿತ್ತೂ ಪಶ್ಚಾತ್ತಾಪ ಉಂಟಾದಂತಿಲ್ಲ. ಆತ ಐಎಸ್‌ (ಇಸ್ಲಾಮಿಕ್‌ ಸ್ಟೇಟ್) ಉಗ್ರನಲ್ಲ. ಆದರೆ ಅದರಿಂದ ಪ್ರಭಾವಿತನಾದವನು ಎನ್ನುವುದನ್ನು ಆತನ ನಡವಳಿಕೆಯೇ ಹೇಳುತ್ತದೆ. ಆತನ ಮೊಬೈಲ್‌ನಲ್ಲಿಯೂ ಐಎಸ್‌ಗೆ ಸಂಬಂಧಿಸಿದ ಮಾಹಿತಿಗಳೇ ತುಂಬಿಕೊಂಡಿದ್ದವು, ಐಎಸ್‌ ನಡೆಸಿದ ಶಿರಚ್ಛೇದದ ವಿಡಿಯೊಗಳಿದ್ದವು.

ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರೂ ಆಸ್ಪತ್ರೆಯ ತನ್ನ ಕೊಠಡಿಯ ಹೊರಗೆ ಐಎಸ್‌ ಧ್ವಜ ಹಾರಿಸುವಂತೆ ಹೇಳಿರುವುದು ಅವನಿಗೆ ಪ್ರೇರಣೆ ಎಲ್ಲಿಂದ ಬಂತು ಎಂಬುದರ ಸೂಚನೆ ನೀಡುತ್ತದೆ.

‘ಆತ ಇಸ್ಲಾಮಿಕ್‌ ಧಾರ್ಮಿಕ ಕಟ್ಟಳೆಗಳ ಪ್ರಕಾರ ಆಡಳಿತ ನಡೆಯಬೇಕು ಎಂಬ ಗುರಿ ಇಟ್ಟುಕೊಂಡವನು; ಅವನಂತೆಯೇ ಗುರಿ ಇಟ್ಟುಕೊಂಡ ಇನ್ನೂ ಅನೇಕರು ನ್ಯೂಯಾರ್ಕ್‌ನಲ್ಲಿ ಇದ್ದಾರೆ’ ಎಂದು ಐಎಸ್‌ ಹೇಳಿದೆ. ಇದು ನಿಜವೇ ಆಗಿದ್ದರೆ ಕಳವಳದ ಸಂಗತಿ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಅಮಾಯಕರನ್ನು ಹತ್ಯೆ ಮಾಡುವ ಉಗ್ರರ ಆಲೋಚನೆಗಳನ್ನು ಚಿವುಟಿ ಹಾಕಬೇಕು. ನಾಗರಿಕ ವಿಶ್ವದಲ್ಲಿ ಭಯೋತ್ಪಾದನೆಗೆ ಜಾಗ ಇಲ್ಲ ಎನ್ನುವುದು ಪದೇ ಪದೇ ದೃಢಪಡುತ್ತಿದ್ದರೂ ಕೆಲ ಮತಿಗೇಡಿಗಳು ಜನರಲ್ಲಿ ಭಯ ಹುಟ್ಟಿಸುವ ಕೃತ್ಯಕ್ಕೆ ಕೈಹಾಕುತ್ತಿರುವುದು ದುರದೃಷ್ಟಕರ.

ನ್ಯೂಯಾರ್ಕ್‌ನ ಇದೇ ಪ್ರದೇಶದಲ್ಲಿಯೇ 2001ರ ಸೆಪ್ಟೆಂಬರ್‌ 11ರಂದು ಉಗ್ರರ ಭೀಕರ ದಾಳಿ ನಡೆದಿತ್ತು. ಅದು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಅದರ ನಂತರ ಅಲ್ಲಿ ನಡೆದ ಮೊದಲ ದಾಳಿ ಇದು. ಇದರ ಮಧ್ಯೆ, ಅಮೆರಿಕದ ಅನೇಕ ಕಡೆ ಭಯೋತ್ಪಾದಕರು ತಮ್ಮ ಇರುವಿಕೆ ತೋರಿಸಿದ್ದರು. ಅಮಾಯಕರನ್ನು ಕೊಂದಿದ್ದರು. ಅವರ ಕೃತ್ಯ ಬಂದೂಕು– ಸ್ಫೋಟಕಗಳ ಬಳಕೆಗೆ ಸೀಮಿತವಾಗಿತ್ತು. ಆದರೆ ಈ ಬಾರಿ ಟ್ರಕ್‌ ಬಳಕೆಯಾಗಿದೆ.

ಬ್ರಿಟನ್‌, ಫ್ರಾನ್ಸ್‌ ಮತ್ತಿತರ ದೇಶಗಳಲ್ಲಿ ಸ್ಫೋಟಕ ತುಂಬಿದ ವಾಹನಗಳನ್ನು ಬಳಸಿ, ಜನರ ಮೇಲೆ ಕಾರು ಹರಿಸಿ, ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಭಯೋತ್ಪಾದನಾ ಚಟುವಟಿಕೆ ನಡೆಸಲಾಗಿತ್ತು. ನ್ಯೂಯಾರ್ಕ್‌ನಲ್ಲಿ 2001ರ ದಾಳಿಯಲ್ಲಿ ವಿಮಾನಗಳನ್ನು ಬಳಸಲಾಗಿತ್ತು. ಅಂದರೆ, ಭಯೋತ್ಪಾದಕರು ಹೊಸ ಹೊಸ ಸಾಧನಗಳನ್ನು, ತಂತ್ರಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಆದ್ದರಿಂದ ಭದ್ರತಾ ಪಡೆಗಳು ಮತ್ತು ಬೇಹುಗಾರಿಕೆ ದಳಗಳ ಮೇಲಿನ ಒತ್ತಡ ಹೆಚ್ಚಿದೆ.

ಅವು ಇನ್ನೂ ಹೆಚ್ಚು ದಕ್ಷತೆ ಪ್ರದರ್ಶಿಸಲೇಬೇಕು. ದಾಳಿಕೋರನಿಗೆ ಮರಣದಂಡನೆ ವಿಧಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಟ್ವೀಟ್‌ ಮಾಡಿ ಪ್ರತಿಪಾದಿಸಿದ್ದಾರೆ. ಅಮೆರಿಕದ ಅಧ್ಯಕ್ಷರು ಸಾಮಾನ್ಯವಾಗಿ ವಿಚಾರಣೆಯ ಹಂತದಲ್ಲಿರುವ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಆದರೆ ಆ ಸಂಪ್ರದಾಯವನ್ನು ಟ್ರಂಪ್‌ ಇಲ್ಲಿ ಬದಿಗೊತ್ತಿದ್ದಾರೆ. ಅಂದರೆ ದಾಳಿ ಬಗ್ಗೆ ಅವರಿಗೂ ಕಳವಳ ಉಂಟಾಗಿದೆ.

ಮತಾಂಧ ಉಗ್ರರಿಂದಾಗಿ ಈಗಾಗಲೆ ವಿಶ್ವದೆಲ್ಲೆಡೆ ಪರಿಸ್ಥಿತಿ ನಾಜೂಕಾಗಿದೆ. ಉಗ್ರರನ್ನು ಮಟ್ಟಹಾಕುವ ಪ್ರಯತ್ನಗಳ ನಡುವೆಯೂ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಲೇ ಇವೆ. ಇವು ಮತೀಯ, ಜನಾಂಗೀಯ ಸಾಮರಸ್ಯವನ್ನು ಮತ್ತಷ್ಟು ಹಾಳು ಮಾಡುತ್ತವೆ. ಅಪನಂಬಿಕೆ ಹೆಚ್ಚಿಸುತ್ತವೆ. ಅಮಾಯಕರ ಸಾವಿಗೆ ಕಾರಣವಾಗುತ್ತವೆ. ಇಂತಹ ಪಾಶವಿ ಪ್ರವೃತ್ತಿ ಬೇಗ ಅಂತ್ಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT