ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 4–11–1967

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಭಾಷಾ ರಾಜ್ಯ ತತ್ವಕ್ಕೆ ರಾಷ್ಟ್ರಪತಿ ಸಮರ್ಥನೆ(ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ನ. 3–
ಭಾರತ ತಮ್ಮ ಸರ್ಕಾರಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಜನರನ್ನು ಶಕ್ತರನ್ನಾಗಿಸುವ ಪ್ರಜಾಸತ್ತಾತ್ಮಕ ತತ್ವವೇ ಭಾಷೆಯ ಆಧಾರದ ಮೇಲೆ ಭಾರತದ ನಕಾಶೆಯನ್ನು ಪುನರ್ರೂಪಿಸುವುದರ ಹಿಂದಿರುವ ತತ್ವ ಎಂದು ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಇಂದು ಇಲ್ಲಿ ನುಡಿದರು.

ರಾಜಧಾನಿಯಲ್ಲಿ ಇಂದು ಸಂಜೆ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸುತ್ತ, ಮೈಸೂರು ಉತ್ತರ ಮತ್ತು ದಕ್ಷಿಣಗಳ ಸಾಂಸ್ಕೃತಿಕ ಸಂಪ್ರದಾಯಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡು ತನ್ನದೇ ಆದ ವಿಶಿಷ್ಟ ಕಲೆ ಮತ್ತು ಸಾಹಿತ್ಯವನ್ನು ಸೃಷ್ಟಿಸಿದೆ ಎಂದು ರಾಷ್ಟ್ರಪತಿಗಳು ನುಡಿದರು.

ವೈಷ್ಣವ ವಾದಕ್ಕೆ ಮೇಲುಕೋಟೆ, ಶೈವ ಸಿದ್ಧಾಂತಕ್ಕೆ ಶೃಂಗೇರಿ ನೆಲೆಯಾಗಿರುವುದು ಮೈಸೂರಿನ ಪ್ರಾಚೀನ ಸಂಪ್ರದಾಯವಾದ ಮತ ಮತ್ಸರರಾಹಿತ್ಯಕ್ಕೆ ಒಂದು ಉತ್ತಮ ನಿದರ್ಶನ ಎಂದರು.

ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ಮುನ್ನಡೆಯಲ್ಲಿ ಮೈಸೂರು ಸಾಧಿಸಿದ್ದನ್ನು ಡಾ. ಹುಸೇನ್ ಪ್ರಸ್ತಾಪಿಸಿ, ಈ ಎಲ್ಲ ಸಾಧನೆಗೆ ‘ವಿವೇಕಯುತ ಹಾಗೂ ಸಮರ್ಥ’ ನಾಯಕತ್ವವೇ ಕಾರಣ ಎಂದರು. ಮೈಸೂರಿನಲ್ಲಿ ಉಚಿತ ಸೆಕೆಂಡರಿ ಶಿಕ್ಷಣಕ್ಕೆ ಅವಕಾಶವಿರುವುದರ ಬಗ್ಗೆ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಔದಾರ‍್ಯದ ನಾಡಿದು ಮೈಸೂರು
ನವದೆಹಲಿ, ನ. 3–
ಮೈಸೂರು ರಾಜ್ಯ ‘ಮಾನಸಿಕ ಬಹು ಉದಾರಿ, ಆರ್ಥಿಕವಾಗಿ ತೀರಾ ಅನಾಕ್ರಮಣಕಾರಿ’ ಇದು ಮೈಸೂರು ವಾರ್ತಾ ಸಚಿವ ಶ್ರೀ ದೇವರಾಜ ಅರಸರ ಬಣ್ಣನೆ.

11ನೇ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಶ್ರೀ ಅರಸ್, ಈ ಧೋರಣೆ ಮೈಸೂರು ಜನತೆಯ ದಿನನಿತ್ಯದ ವಹಿವಾಟಿನಲ್ಲೂ ‘ಗೋಚರ’ ಆಗುತ್ತದೆಂದರು.

ಇದರ ಫಲವೆಂದರೆ ಪ್ರಗತಿ ಸಾಧನೆಗೆ ಅನಿವಾರ್ಯವಾದ ರಾಜಕೀಯ ಮತ್ತು ಆರ್ಥಿಕ ಭದ್ರತೆ ಎಂದು ಅವರು ಹೇಳಿ ಕೈಗಾರಿಕೋದ್ಯಮಿಗಳನ್ನು ಮತ್ತೆ ‘ಮೈಸೂರಿಗೆ ಬನ್ನಿ’ ಆಹ್ವಾನವಿತ್ತರು.

ರಾಜ್ಯದ 8 ನೀರು ಪೂರೈಕೆ ಯೋಜನೆಗೆ ಎಲ್.ಐ.ಸಿ. ಸಾಲ
ಬೆಂಗಳೂರು, ನ. 3–
ರಾಜ್ಯದ ಎಂಟು ಪುರಸಭೆಗಳ ಕುಡಿಯುವ ನೀರು ಪೂರೈಕೆ ಯೋಜನೆಗಳಿಗಾಗಿ 3.53 ಕೋಟಿ ರೂಪಾಯಿಗಳ ಸಾಲ ನೀಡಲು ಭಾರತ ಜೀವವಿಮಾ ಸಂಸ್ಥೆಯು ಒಪ್ಪಿಕೊಂಡಿದೆ.

ಪ್ರಸಕ್ತ ವರ್ಷದಲ್ಲಿಯೇ ಈ ಸಾಲದ ಪ‍್ರಯೋಜನ ಪಡೆಯಲಿರುವ ಎಂಟು ಪುರಸಭೆಗಳು: ಚಿತ್ರದುರ್ಗ, ದಾವಣಗೆರೆ, ರಾಣೆಬೆನ್ನೂರು, ಲಕ್ಷ್ಮೇಶ್ವರ, ಬೈಲಹೊಂಗಲ, ಬಿಜಾಪುರ, ಬಿದರೆ ಮತ್ತು ರಾಯಚೂರು.

ರಾಜ್ಯ ರೈತರಿಗೆ ನೆಲದೊಳಗಿನ ನೀರಿನ ಬಳಕೆ ಮಾರ್ಗದರ್ಶನ
ಬೆಂಗಳೂರು, ನ. 3–
ಉಪಯೋಗವಾಗದೆ, ಒಳಗೇ ಹರಿದು ನದಿಗಳನ್ನು ಸೇರುತ್ತಿರುವ ನೆಲದೊಳಗಿನ ನೀರು. ಈ ನೀರನ್ನು ಸುಲಭವಾಗಿ ಪಡೆವ ಸಾಧ್ಯತೆ ಹಾಗೂ ವಿಧಾನಗಳ ಬಗ್ಗೆ ವ್ಯವಸಾಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಬಲ್ಲ ಯೋಜನೆಯೊಂದು ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

ಭೂಗರ್ಭ ಹಾಗೂ ಗಣಿಗಳ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ ಈ ಯೋಜನೆ ಈಗಾಗಲೇ ರೈತರಲ್ಲಿ ತೀವ್ರ ಆಸಕ್ತಿಯನ್ನುಂಟು ಮಾಡಿದೆ.

1966ರ ಸೆಪ್ಟೆಂಬರ್ 1ರಂದು ರಾಜ್ಯದಲ್ಲಿ ಭೂಗರ್ಭ ಹಾಗೂ ಗಣಿಗಳ ಇಲಾಖೆ ಆರಂಭಿಸಿದೆ. ಈ ಯೋಜನೆಗೆ ತಗಲುವ ಖರ್ಚಿನಲ್ಲಿ ಕೇಂದ್ರ ಸರಕಾರ ಅರ್ಧವನ್ನು ಒದಗಿಸುತ್ತದೆ.

ಈ ಇಲಾಖೆಯ ಭೂಗರ್ಭ ಶಾಸ್ತ್ರಜ್ಞರು, ರಾಜ್ಯದ ನಾನಾ ಭಾಗಗಳಲ್ಲಿ ಪ್ರಯೋಗಗಳ ಮೂಲಕ ನೆಲದೊಳಗಿನ ನೀರಿನ ಪ್ರಮಾಣ ಮತ್ತಿತರ ವಿವರಗಳನ್ನು ಪಡೆದು ರೈತರಿಗೆ ಆ ವಿವರಗಳ ಆಧಾರದ ಮೇಲೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಬೆಳಬಾವಿ ಕಬಳಿಸಲು ಮರಾಠಿಗರ ಮತ್ತೊಂದು ಮಸಲತ್ತು: ಕೊಂಕಣದ ನೆಪ (ಪ್ರಜಾವಾಣಿ ಪ್ರತಿನಿಧಿಯಿಂದ)
ಪಣಜಿ, ನ. 3–
ಗೋವಾ ಹಾಗೂ ಬೆಳಗಾವಿ ಕಾರವಾರಗಳೂ ಸೇರಿ ಮೈಸೂರು– ಮಹಾರಾಷ್ಟ್ರ ವಿವಾದಗ್ರಸ್ತ ಗಡಿ ಪ್ರದೇಶಗಳನ್ನೊಳಗೊಂಡಂತೆ ಕೊಂಕಣ ರಾಜ್ಯ ಸ್ಥಾಪನೆ ಸಾಧ್ಯತೆಗಳನ್ನು ಇಲ್ಲಿ ಮಹಾರಾಷ್ಟ್ರ ಪಕ್ಷಪಾತಿ ರಾಜಕೀಯ ವರ್ತುಲಗಳು ಅತೀವ ಆಸಕ್ತಿಯಿಂದ ಪರಿಶೀಲಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT