ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ– ಪ್ರಜ್ಞೆಗಳ ಸಂಗಮವೇ ಕವಿ

Last Updated 31 ಜುಲೈ 2018, 16:33 IST
ಅಕ್ಷರ ಗಾತ್ರ

ಹಕ್ಕಿಯನ್ನು ಕೊಂದ ಬೇಡನನ್ನು ಕಂಡ ಕೂಡಲೇ ವಾಲ್ಮೀಕಿ ಮಹರ್ಷಿಗೆ ಸಹಜವಾಗಿ ಒದಗಿದ ಸಂವೇದನೆ ಎಂದರೆ ಕರುಣೆ. ಈ ಕರುಣಾಭಿವ್ಯಕ್ತಿಯು ಎರಡು ಆಯಾಮಗಳಲ್ಲಿ ಪ್ರಕಟಗೊಂಡಿತು. ಮೊದಲನೆಯದು ಬೈಗುಳವಾಗಿ; ಅದೇ ‘ಸಂಸ್ಕರಣ’ಗೊಂಡು ಶಾಪವಾಯಿತು; ಎರಡನೆಯದು ಆ ಶಾಪವು ವಿಶೇಷ ರೀತಿಯಲ್ಲಿ ಹೊರಹೊಮ್ಮಿದ್ದು; ಅದೇ ಶ್ಲೋಕವಾಯಿತು. ಮೊದಲನೆಯದನ್ನು ಲೌಕಿಕಾಭಿವ್ಯಕ್ತಿ ಎಂದೂ, ಎರಡನೆಯದನ್ನು ಅಲೌಕಿಕಾಭಿವ್ಯಕ್ತಿ ಎಂದೂ ಕರೆಯಲಾದೀತು. ತಮಗೆ ಇಷ್ಟವಲ್ಲದ ಕೆಲಸವನ್ನು ಮಾಡಿದವರನ್ನು ಶಪಿಸುವುದು ಲೋಕದಲ್ಲಿ ಸಾಮಾನ್ಯಸಂಗತಿ. ಆದರೆ ಯಾರಾದರೂ ಈ ಶಾಪವನ್ನು ರಾಗವಾಗಿ ಹಾಡುವುದುಂಟೆ? ಪದ್ಯವಾಗಿ ಹೇಳುವುದುಂಟೆ? ವಾಲ್ಮೀಕಿಗಳ ಶಾಪ ಪದ್ಯಶರೀರವನ್ನು ಪಡೆದದ್ದರಿಂದ ಅವರಿಗೆ ಅಚ್ಚರಿಯಾದದ್ದು ಸಹಜವೇ ಹೌದು. ಈ ಪದ್ಯಶರೀರದಲ್ಲಿಯೇ ರಾಮಾಯಣಕಾವ್ಯದ ಆತ್ಮ ಅಡಗಿತ್ತೆನ್ನಿ! ಭೋಜರಾಜನು ರಾಮಾಯಣವನ್ನು ಚಂಪೂಕಾವ್ಯವಾಗಿ ರಚಿಸಿದವನು. ಅವನ ‘ಚಂಪೂರಾಮಾಯಣ’ದ ಬಾಲಕಾಂಡದಲ್ಲಿ ಈ ಪ್ರಸಂಗವನ್ನು ಸೊಗಸಾಗಿ ನಿರೂಪಿಸಿದ್ದಾನೆ:

‘ಆ ನದೀತಟದಲ್ಲಿ ಕ್ರೌಂಚಮಿಥುನದಲ್ಲಿ ಮನ್ಮಥನ ಬಾಣಗಳಿಂದ ಆಗಲೇ ಗಾಸಿಗೊಂಡಿದ್ದ ಒಂದು ಕ್ರೌಂಚವು ಬೇಡನಿಂದ ಹೊಡೆಯಲ್ಪಟ್ಟುದನ್ನು ಗಮನಿಸುತ್ತಿದ್ದ ವಾಲ್ಮೀಕಿಯ ಮುಖಕಮಲದಿಂದ ಛಂದೋಮಯವಾದ ಅಪೂರ್ವ ವಾಗ್ರೂಪ ಹೊರಹೊಮ್ಮಿತು.’

(ಅನುವಾದ: ಮಹೇಶ ಅಡಕೋಳಿ)

ಛಂದೋಮಯವಾದ ಮಾತನ್ನು ಭೋಜ ‘ಛಂದೋಮಯೀ ಸರಸ್ವತೀ’ ಎಂದಿದ್ದಾನೆ. ಮಾತು ಸರಸ್ವತಿಯ ರೂಪವಲ್ಲದೆ ಮತ್ತೇನು? ಅವಳು ಮಾತಿನ ಒಡತಿ; ವಾಗ್ದೇವಿ. ಅವಳು ಸಂಚರಿಸುವ ದಾರಿಗಳು ಎರಡು ವಿಧವಾಗಿವೆಯಂತೆ:

ದ್ವೇ ವರ್ತ್ಮನೀ ಗಿರೋ ದೇವ್ಯಾಃ ಶಾಸ್ತ್ರಂ ಚ ಕವಿಕರ್ಮ ಚ |

ಪ್ರಜ್ಞೋಪಜ್ಞಂ ತಯೋರಾದ್ಯಂ ಪ್ರತಿಭೋದ್ಭವಮಂತಿಮಮ್‌ ||

‘ವಾಗ್ದೇವಿಗೆ ಮಾರ್ಗಗಳು ಎರಡು: ಒಂದು ಶಾಸ್ತ್ರ, ಇನ್ನೊಂದು ಕಾವ್ಯ. ಇವುಗಳಲ್ಲಿ ಮೊದಲನೆಯದು ಪ್ರಜ್ಞೆಯಿಂದ ಜನಿಸಿದ್ದು; ಕೊನೆಯದು ಪ್ರತಿಭೆಯಿಂದ ಉದ್ಭವಿಸಿದ್ದು.’

ಇಲ್ಲಿ ‘ಶಾಸ್ತ್ರ’ ಮತ್ತು ‘ಕಾವ್ಯ’ ಎಂಬ ಎರಡು ವಿಭಾಗ ಮಾಡಿರುವುದು ಗಮನೀಯ. ಆದರೆ ಎರಡನ್ನೂ ಸರಸ್ವತೀತತ್ತ್ವವನ್ನಾಗಿಯೇ ಕಾಣಿಸಿರುವುದನ್ನೂ ಮರೆಯುವಂತಿಲ್ಲ. ‘ಪ್ರಜ್ಞೆ’ ಮತ್ತು ‘ಪ್ರತಿಭೆ’ – ಇವೆರಡರ ಬಗ್ಗೆ ಭಾರತೀಯ ಪರಂಪರೆಯಲ್ಲಿ ಸಾಕಷ್ಟು ಚಿಂತನೆ ನಡೆದಿದೆ; ಜಗತ್ತಿನ ಬೇರೆ ಭಾಗಗಳಲ್ಲೂ ಇಂಥ ಚಿಂತನೆ ನಡೆದಿದೆ. ಭಾರತದಲ್ಲಿ ನಡೆದಿರುವ ಚಿಂತನೆಯ ಸಾರ ಈ ಎರಡು ಸೊಲ್ಲುಗಳಲ್ಲಿ ಅಡಗಿದೆ ಎನ್ನಬಹುದು. ಪ್ರಜ್ಞೆಯನ್ನು ಕುರಿತ ಮಾತು ಹೀಗಿದೆ:

ಸ್ಮೃತಿರ್ವ್ಯತೀತವಿಷಯಾ ಮತಿರಾಗಮಿ– ಗೋಚರಾ |

ಬುದ್ಧಿಸ್ತಾತ್ಕಾಲಿಕೀ ಜ್ಞೇಯಾ ಪ್ರಜ್ಞಾ ತ್ರೈಕಾಲಿಕೀ ಮತಾ ||

ಇದರ ಸರಳ ತಾತ್ಪರ್ಯ: ಹಿಂದೆ ಆದದ್ದನ್ನು ನೆನೆಯುವುದು ‘ಸ್ಮೃತಿ’; ಈಗ ನಡೆಯುವುದನ್ನು ಪರಿಶೀಲಿಸುವುದು ‘ಬುದ್ಧಿ’ ಮುಂದೆ ಆಗುವುದನ್ನು ಊಹಿಸುವುದು ‘ಮತಿ’. ಈ ಮೂರು ಕಾಲದ ವಿಷಯಗಳನ್ನೂ ಒಳಗೊಂಡಿರುವುದೇ ‘ಪ್ರಜ್ಞೆ’.

ಪ್ರತಿಭೆಯನ್ನೂ ಪ್ರಜ್ಞೆಯನ್ನೂ ಒಟ್ಟಾಗಿ ಹೇಳಿರುವ ಪ್ರಸಿದ್ಧ ಮಾತೊಂದು ಹೀಗಿದೆ:

ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ.

ಇದು ಭಟ್ಟತೌತ ಎಂಬ ಪ್ರಾಚೀನ ಆಲಂಕಾರಿಕನ ಮಾತು. ‘ಕ್ಷಣಕ್ಷಣವೂ ಹೊಸಹೊಸದಾಗಿ ಬೆಳಗುವ ಪ್ರಜ್ಞೆಯೇ ಪ್ರತಿಭೆ’ ಎಂದು ಈ ಮಾತನ್ನು ಸರಳವಾಗಿ ಅರ್ಥೈಸಬಹುದು.

ಮೇಲಿನ ಎರಡು ಮಾತುಗಳಲ್ಲಿ ನಾವು ಗಮನಿಸಬೇಕಾದದ್ದು: ಕಾವ್ಯತ್ವ ಮತ್ತು ಶಾಸ್ತ್ರತ್ವ; ಪ್ರತಿಭೆ ಮತ್ತು ಪ್ರಜ್ಞೆ. ಎರಡೆರಡಾಗಿ ಕಾಣುವ ಈ ಜೋಡಿಗಳು ವಾಸ್ತವದಲ್ಲಿ ಒಂದೇ ತತ್ತ್ವದ ಎರಡು ಮುಖಗಳಷ್ಟೆ. ದಿಟದ ಕವಿಗೆ ಈ ಎರಡು ವಿವರಗಳು ಕೂಡ ಸಹಜವಾಗಿರುತ್ತವೆ. ಕ್ರೌಂಚಪಕ್ಷಿಗಳ ಪ್ರಸಂಗ ಈ ತತ್ತ್ವದ ಸೊಗಸಾದ ಮೀಮಾಂಸೆಯಂತಿದೆ. ಹೀಗಾಗಿಯೇ ಇಲ್ಲಿ ಇಷ್ಟು ವಿವರಗಳು ಅವಶ್ಯಕವಾಗಿವೆ. ವಾಲ್ಮೀಕಿ ರಾಮಾಯಣವು ಆದಿಕಾವ್ಯವಷ್ಟೇ ಅಲ್ಲ; ಕಾವ್ಯ
ಮೀಮಾಂಸೆಯ ಆದಿಗ್ರಂಥವೂ ಹೌದು. ವಾಲ್ಮೀಕಿಯು ಶ್ಲೋಕರೂಪವಾದ ಶಾಪವನ್ನು ಹೇಳಿ ಸುಮ್ಮನಾಗಲಿಲ್ಲ; ಆ ಹೇಳಿಕೆಯ ಸ್ವರೂಪದ ಬಗ್ಗೆಯೂ ಚಿಂತನೆ ನಡೆಸಿದ. ‘ಅದು ಪಾದಬದ್ಧವಾಗಿದೆ; ಹಾಡಲು ಯೋಗ್ಯವಾಗಿದೆ’ – ಹೀಗೆ ಅದರ ಮೀಮಾಂಸೆಯನ್ನೂ ಮಾಡಿದ. ಕವಿ ಹುಟ್ಟಿದ ಕೂಡಲೇ ಅವನ ಹಿಂದೆಯೇ ಕಾವ್ಯಮೀಮಾಂಸಕ ಕೂಡ ಹುಟ್ಟಿದ. ರಾಮಾಯಣದ ಮುಂದಿನ ಸಂದರ್ಭಗಳಲ್ಲಿ ಈ ವಿವರ ಮತ್ತಷ್ಟು ವಿಶದವಾಗುತ್ತದೆಯೆನ್ನಿ! ಅನುಭವ, ಅದರ ವರ್ಣನೆ ಮತ್ತು ವರ್ಣನೆಯ ವಿಶ್ಲೇಷಣೆ – ಇವಿಷ್ಟು ಸಾಹಿತ್ಯ, ಅಥವಾ ಮತ್ತಾವುದೇ ಕಲೆಯ ಹುಟ್ಟಿಗೂ ಆಸ್ವಾದಕ್ಕೂ ಕಾರಣ
ವಾಗಿರುವ ವಿವರಗಳು. ದರ್ಶನ–ವರ್ಣನ–ಮನನ – ಈ ಮೂರು ತತ್ತ್ವಗಳೇ ರಸಾನುಭವಕ್ಕೆ ಒದಗುವಂಥವು.

ಕವಿಯೂ ಋಷಿಯೂ ತತ್ತ್ವಜ್ಞನೂ ಆದ ವಾಲ್ಮೀಕಿಗೆ ಏಕಕಾಲದಲ್ಲಿ ಈ ಮೂರು ತತ್ತ್ವಗಳ ಸಾಕ್ಷಾತ್ಕಾರ ಒದಗಿತು. ಋಷಿಯಾಗಿದ್ದರಿಂದ ಪಕ್ಷಿಪ್ರಪಂಚದ ಸಂಕಟದ ದರ್ಶನವಾಯಿತು; ಕವಿಯಾದದ್ದರಿಂದ ಆ ಸಂಕಟವು ವರ್ಣನೆಯಾಗಿ ಅರಳಿತು; ತತ್ತ್ವಜ್ಞನಾದುದ್ದರಿಂದ ಆ ವರ್ಣನೆಯ ಗುಣ–ಲಕ್ಷಣಗಳ ಮೀಮಾಂಸೆಯೂ ಸಿದ್ಧವಾಯಿತು. ವಾಲ್ಮೀಕಿಗೆ ತನ್ನ ಆ ಆಕಸ್ಮಿಕ ಉದ್ಗಾರದ ಮಹತ್ವದ ಅರಿವೂ ಇದ್ದಿತು. ಆದುದರಿಂದಲೇ ಅದು ಉಳಿಯಬೇಕೆಂದು ಶಿಷ್ಯನಿಗೆ ಸೂಚಿಸಿದ್ದು. ಭರದ್ವಾಜ ಅದನ್ನು ಕಂಠಪಾಠ ಮಾಡಿದ. ಅದರಿಂದ ವಾಲ್ಮೀಕಿಗೆ ಸಂತೋಷವಾಯಿತು. ಆನಂತರ ತಮಸಾನದಿಯಲ್ಲಿ ಸ್ನಾನ ಮಾಡಿ ಆಶ್ರಮಕ್ಕೆ ಹಿಂದಿರುಗಿದರು. ದಾರಿಯುದ್ದಕ್ಕೂ ವಾಲ್ಮೀಕಿ ಆ ಶ್ಲೋಕವನ್ನು ಚಿಂತಿಸುತ್ತಲೇ ಹೆಜ್ಜೆ ಹಾಕುತ್ತಿದ್ದನಂತೆ.

ಕವಿಯಾದವನಿಗೆ ಕಾವ್ಯವಸ್ತುವಿನ ದರ್ಶನವಾದರೆ ಹೇಗೆ ಅವನ ಮನಸ್ಸು ಲೋಕರೂಢಿಗಿಂತಲೂ ಭಿನ್ನವಾಗಿರುತ್ತದೆ ಎನ್ನುವುದಕ್ಕೆ ವಾಲ್ಮೀಕಿಯ ಅಂದಿನ ನಡೆ ಉದಾಹರಣೆಯಂತಿದೆ. ದರ್ಶನವೇನೋ ಸರಿ; ಅದು ವರ್ಣನೆಗೂ ಎಟುಕಬೇಕಾದರೆ ಕವಿಯಾದವನು ಕೇವಲ ಸಾಮಾನ್ಯ ಮನುಷ್ಯನಾದರಷ್ಟೆ ಸಾಧ್ಯ
ವಾಗದು; ಅವನು ಸಾಕ್ಷಾತ್‌ ಬ್ರಹ್ಮನಂತೆಯೇ ಸೃಷ್ಟಿಶೀಲಶಕ್ತಿಯನ್ನು ಸಂಪಾದಿಸಿಕೊಳ್ಳಬೇಕು, ಅಲ್ಲವೆ? ಬಹುಶಃ ಈ ಕಾರಣದಿಂದಲೇ ಇರಬೇಕು, ವಾಲ್ಮೀಕಿಯ ಆಶ್ರಮಕ್ಕೆ ಬ್ರಹ್ಮನೇ ಬರುವಂತಾಯಿತು.

***

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT