ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಾರ್ಹ ಮರುಸೃಷ್ಟಿ

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇತ್ತೆಫಾಕ್ (ಹಿಂದಿ)
ನಿರ್ಮಾಣ: ಶಾರುಖ್‌ ಖಾನ್, ಕರಣ್‌ ಜೋಹರ್‌
ನಿರ್ದೇಶನ: ಅಭಯ್‌ ಚೋಪ್ರಾ
ತಾರಾಗಣ: ಅಕ್ಷಯ್‌ ಖನ್ನಾ, ಸಿದ್ದಾರ್ಥ್‌ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ

ಮರುಸೃಷ್ಟಿ ಎಲ್ಲ ಕಲಾಪ್ರಕಾರಗಳಲ್ಲೂ ಇತ್ತೀಚೆಗೆ ವ್ಯಾಪಕವಾಗುತ್ತಿದೆ. ಸಿನಿಮಾ ತಯಾರಿಕೆಗೂ ಇದನ್ನು ಅನ್ವಯಿಸಬಹುದು. ಒಂದು ಯಶಸ್ವಿ ಚಿತ್ರದ ಮುಂದುವರಿದ ಭಾಗಗಳ ಚಿತ್ರೀಕರಣ ನಡೆಸಿ, ವಹಿವಾಟು ನಡೆಸುವ ಜನಪ್ರಿಯ ಮಾರ್ಗ ಒಂದು. ಹಳೆಯ ವಸ್ತುವನ್ನು ಮರುಸೃಷ್ಟಿ ಮಾಡಿ, ಕೌಶಲದ ದೃಷ್ಟಿಯಲ್ಲಿ ಹೊಸತನದ ನಿಕಷಕ್ಕೆ ಒಡ್ಡಿಕೊಳ್ಳುವ ಮಾರ್ಗ ಇನ್ನೊಂದು. ನಿರ್ದೇಶಕ ಅಭಯ್ ಚೋಪ್ರಾ ಕ್ರಿಯಾಶೀಲತೆಯ ಎರಡನೇ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

1969ರಲ್ಲಿ ಯಶ್ ಚೋಪ್ರಾ ನಿರ್ದೇಶಿಸಿದ್ದ ‘ಇತ್ತೆಫಾಕ್’ ಸಿನಿಮಾಗೆ ಜಿ.ಆರ್. ಕಾಮತ್ ಚಿತ್ರಕಥೆ ಬರೆದಿದ್ದರು. ಈಗ ಶ್ರೇಯಸ್‌ ಜೈನ್ ಹಾಗೂ ನಿಖಿಲ್ ಮೆಹ್ರೋತ್ರಾ ಅವರೊಡಗೂಡಿ ಅದೇ ವೈನ್‌ ಅನ್ನು ಬೇರೆ ಬಾಟಲಿಯಲ್ಲಿ ಸುರಿದು ಕೊಟ್ಟಿದ್ದಾರೆ ಅಭಯ್. ಈ ಪ್ರಕ್ರಿಯೆಯಲ್ಲಿ ಅವರ ಕೌಶಲ ಮೆಚ್ಚಲು ಕಾರಣಗಳು ಸಿಗುತ್ತವೆ.

ಅಪರಾಧ ವಸ್ತುವಿನ ಕೌತುಕ ಕಥನ ನೋಡುಗರನ್ನು ಲಾಗಾಯ್ತಿನಿಂದ ಹಿಡಿದಿಟ್ಟುಕೊಳ್ಳುತ್ತಾ ಬಂದಿದೆ. ಆಧುನಿಕ ತಂತ್ರಜ್ಞಾನದ ಬಲ ಹಾಗೂ ಮೆದುಳಿನ ಮೇಲಿನ ನಂಬಿಕೆಯಿಂದ ‘ತಲ್ವಾರ್’ನಂಥ ಸಿನಿಮಾ ಯಶಸ್ವಿಯಾಯಿತು. ಅಭಯ್ ಚೋಪ್ರಾ ‘ತಲ್ವಾರ್’ ಮಾದರಿಯ ನಿರೂಪಣೆಗೆ ಅಂಟಿಕೊಂಡಿದ್ದಾರೆ.

ಜೋಡಿ ಕೊಲೆ ನಡೆಯುತ್ತದೆ. ಅದರ ತನಿಖೆಯ ವೇಳೆ ವ್ಯಕ್ತಗೊಳ್ಳುವ ಆರೋಪಿಗಳ ನಿರೂಪಣೆಯನ್ನೇ ದೃಶ್ಯವತ್ತಾಗಿ ಅಭಯ್ ತೋರಿಸಿದ್ದಾರೆ. ಇಬ್ಬರ ಅಭಿಪ್ರಾಯಗಳ ನಡುವೆ ಇರುವ ಸತ್ಯವನ್ನು ತನಿಖೆ ನಡೆಸುವ ಪೊಲೀಸ್ ಅಧಿಕಾರಿ ಹುಡುಕುತ್ತಾನೆ. ಆ ಹುಡುಕಾಟ ಪ್ರೇಕ್ಷಕನದ್ದೂ ಆಗುವುದರಿಂದ ಇದನ್ನು ನಿಸ್ಸಂಶಯವಾಗಿ ಗಟ್ಟಿಶಿಲ್ಪದ ಸಿನಿಮಾ ಎನ್ನಬಹುದು.

ಅಕ್ಷಯ್ ಖನ್ನಾ ಚುರುಕು ನೋಟ ಹಾಗೂ ತಣ್ಣಗಿನ ಮಾತು ಅವರೊಳಗಿನ ಹದವರಿತ ನಟನನ್ನು ನೆನಪಿಸುತ್ತದೆ. ಸೋನಾಕ್ಷಿ ಸಿನ್ಹ ಈ ಪಾತ್ರವನ್ನು ಅದು ಹೇಗೆ ಒಪ್ಪಿಕೊಂಡರೋ ಎನಿಸುತ್ತದೆ. ಯಾಕೆಂದರೆ, ನಟನಾವಕಾಶ ಇದರಲ್ಲಿ ಕಡಿಮೆ. ಅಭಿನಯದಲ್ಲಿ ಅಕ್ಷಯ್ ಅವರಿಗೆ ಹೋಲಿಸಿದರೆ ಸಿದ್ಧಾರ್ಥ್ ಮಲ್ಹೋತ್ರ ಪೀಚು ಎನಿಸಿಬಿಡುತ್ತಾರೆ. ತನುಷ್ ಬಾಗ್ಚಿ ಸಂಗೀತ ಚಿತ್ರದ ಚೌಕಟ್ಟನ್ನು ಅರಿತಂತಿದೆ. ಮೈಕಲ್ ಲ್ಯೂಕಾ ಕ್ಯಾಮೆರಾ ಮುಂಬೈನ ಕತ್ತಲಲ್ಲಿ ಬೆಳಕನ್ನು ಹುಡುಕುವ ಪರಿಯೂ ಔಚಿತ್ಯಪೂರ್ಣ.

ತುಲನೆಯಲ್ಲಿ ‘ತಲ್ವಾರ್’ಗಿಂತ ಈ ಸಿನಿಮಾ ತುಸು ಕುಸಿದಂತೆ ಕಾಣುವುದು ‘ಕಾಮಿಕ್ ರಿಲೀಫ್’ನ ಕೊರತೆಯಿಂದ. ಗಂಭೀರ ಸಿನಿಮಾದಲ್ಲೂ ಚರ್ಚೆ, ವ್ಯಂಗ್ಯ ಹಾಗೂ ತಮಾಷೆಗೆ ಜಾಗ ಇರಬೇಕಾಗುತ್ತದೆ. ಅಭಯ್‌ ಅವರಿಗೆ ಅದನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಸಹಜವಾಗಿ ಥ್ರಿಲ್ಲರ್‌ಗಳ ಅಂತ್ಯ ರೋಚಕವಾಗಿರುತ್ತದೆ. ಈ ಚಿತ್ರ ಅದಕ್ಕೂ ಅಪವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT