ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದೋನ್ನತಿಗೆ ಕಾಯುತ್ತಿರುವ ಬೋಧಕರು

Last Updated 4 ನವೆಂಬರ್ 2017, 9:03 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹುದ್ದೆ ಉನ್ನತಿ ಯೋಜನೆ (ಸಿಎಎಸ್‌) ಅನುಸಾರವಾಗಿ ಬಡ್ತಿ ನೀಡುವುದು ವಿಳಂಬವಾಗುತ್ತಿದೆ.

ಯುಜಿಸಿ ಆದೇಶದ ಅನುಸಾರ 2010ರ ಆ.30ರೊಳಗೆ ಆಯ್ಕೆ ಶ್ರೇಣಿ ಉಪನ್ಯಾಸಕರಿಗೆ ಪದೋನ್ನತಿ ನೀಡಬೇಕು ಎಂದಿದೆ. ಆದರೆ, ಅದನ್ನು ವಿ.ವಿ ಪಾಲಿಸಿಲ್ಲ. ಇದರಿಂದಾಗಿ 36 ಮಂದಿಗೆ ಸಹ ಪ್ರಾಧ್ಯಾಪಕ ಹುದ್ದೆ ಸಿಗುವುದು ತಪ್ಪಿಹೋಗಿದೆ. ನಿಯಮದಂತೆ ಪದೋನ್ನತಿ ನೀಡದಿರುವುದನ್ನು ಪ್ರಶ್ನಿಸಿ ಉಪನ್ಯಾಸಕರು ಕೋರ್ಟ್ ಮೆಟ್ಟಿಲೇರಿದ್ದರು. ಪದೋನ್ನತಿ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರ್ಟ್ ಸಹ ಆದೇಶಿಸಿದೆ.

ಮಹಾರಾಜ, ಯುವರಾಜ ಕಾಲೇಜು ಸಿಂಹಪಾಲು:
‘ಸಿಎಎಸ್’ ಸೌಲಭ್ಯದಿಂದ ವಂಚಿತರಾದವರಲ್ಲಿ ಮಹಾರಾಜ, ಯುವರಾಜ ಕಾಲೇಜಿನ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಯುವರಾಜ ಕಾಲೇಜಿನಲ್ಲಿ 65 ಬೋಧಕರಿದ್ದು, 59 ಮಂದಿಗೆ ಪಿಎಚ್‌.ಡಿ ಪದವಿ ಇದೆ. ಇವರಲ್ಲಿ 23 ಬೋಧಕರು ಸಿಎಎಸ್‌ಗೆ ಅರ್ಹರು. ಮಹಾರಾಜ ಕಾಲೇಜಿನಲ್ಲಿ 13 ಬೋಧಕರು ಅರ್ಹರು. ಇವರೆಲ್ಲರೂ ‘ಸಿಎಎಸ್‌’ ಮೂಲಕ ತಮಗೆ ಪದೋನ್ನತಿ ಕೊಡುವಂತೆ ಸಾಕಷ್ಟು ಬಾರಿ ವಿ.ವಿಗೆ ಮನವಿ ಸಲ್ಲಿಸಿದ್ದಾರೆ.

ಮಾನಸಗಂಗೋತ್ರಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಸಿಎಎಸ್‌ಗೆ ಅರ್ಹರಾಗಿರುವವರು ಕಡಿಮೆ ಮಂದಿಯಿದ್ದಾರೆ. ಪ್ರೊ.ಜೆ.ಶಶಿಧರ ಪ್ರಸಾದ್‌ ಕುಲಪತಿಯಾಗಿದ್ದಾಗ 108 ಬೋಧಕರ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ, ಈ ಬೋಧಕರಿಗೆ ಷರತ್ತುಬದ್ಧ ಪ್ರೊಬೇಷನ್ ಪ್ರಮಾಣ ಪತ್ರವನ್ನು ವಿ.ವಿ ನೀಡಿದೆ. ಆದರೆ, ಇದೇ ಕಾರಣವನ್ನು ಮುಂದಿಟ್ಟುಕೊಂಡು ಬೋಧಕರಿಗೆ ಪದೋನ್ನತಿ ನೀಡುತ್ತಿಲ್ಲ ಎಂದು ವಿ.ವಿ ಕಾರಣ ನೀಡುತ್ತದೆ. ಯುಜಿಸಿಯ ‘ಸಿಎಎಸ್‌’ ನಿಯಮಗಳ ಪ್ರಕಾರ, ಯಾವುದೇ ಸಿಬ್ಬಂದಿಯ ಮೇಲೆ ಪ್ರಕರಣ ಇದ್ದರೂ ತೊಂದರೆ ಆಗದು ಎಂದು ವಿ.ವಿ ಬೋಧಕರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಿಎಎಸ್‌’ ವ್ಯವಸ್ಥೆಯಲ್ಲಿ ಪದೋನ್ನತಿ ಪಡೆಯಲು ಹಲವು ಹಂತದ ಪರೀಕ್ಷೆಗಳನ್ನು ಬೋಧಕರು ಎದುರಿಸಬೇಕಾಗುತ್ತದೆ. ನೇಮಕಾತಿ ಮಂಡಳಿಯ ಮುಂದೆ ಸಂದರ್ಶನಕ್ಕೂ ಹಾಜರಾಗಬೇಕು. ಹಾಗಾಗಿ, ಅರ್ಹತೆ ಇರುವವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಪ್ರೊ.ವಿ.ಜಿ.ತಳವಾರ ಅವರ ಅವಧಿಯಿಂದಲೇ ಸೌಲಭ್ಯ ಸಿಗಬೇಕಿತ್ತು. ಇದುವರೆಗೂ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ ಎಂದು ಬೋಧಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಚಿವರಿಗೂ ಮನವಿ: ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೂ ಗುರುವಾರ ಮನವಿ ಸಲ್ಲಿಸಿದ್ದಾರೆ. ಈ ಕುರಿತು ವಿ.ವಿಗೆ ನಿರ್ದೇಶನ ನೀಡುವಂತೆ ಸಚಿವರನ್ನು ಕೋರಿದ್ದಾರೆ.

ಶೀಘ್ರವೇ ಪ್ರಕ್ರಿಯೆ ಜಾರಿ
‘ಸಿಎಎಸ್‌’ ಜಾರಿಗೊಳಿಸಲು ವಿ.ವಿ ಉತ್ಸುಕವಾಗಿದೆ. ಈಗಾಗಲೇ ಸಿಂಡಿಕೇಟ್‌ನಲ್ಲಿ ನಿರ್ಣಯವೂ ಆಗಿದೆ. ‘ಹಲವು ವರ್ಷಗಳಿಂದ ಪದೋನ್ನತಿ ನೀಡದೇ ಇರುವುದು ನಿಜ. ಅದಕ್ಕಾಗಿ ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು. ಅನೇಕ ಹಂತಗಳಲ್ಲಿ ಪರೀಕ್ಷಿಸಿ ಪದೋನ್ನತಿ ನೀಡಲಾಗುವುದು’ ಎಂದು ವಿ.ವಿ ಕುಲಸಚಿವರಾದ ಡಿ.ಭಾರತಿ ‍ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT