ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಖಾಲಿ ಕುರ್ಚಿ

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

1. ಕತ್ತು ಜಾರಿ ಎದುರಿಗಿರುವ ಡೆಸ್ಕಿಗೆ ತಾಗುವವರೆಗೂ, ನಾನೀಗ ಆಫೀಸಿನಲ್ಲಿದ್ದೇನೆ, ಇದೊಂದು ಬರಿ ಕನಸು ಅಂತ ಗೊತ್ತಾಗಲೇ ಇಲ್ಲ. "ಪರೀಕ್ಷೆ ಶುರುವಾಗುವದಕ್ಕೆ ಇನ್ನು ಹತ್ತೇ ನಿಮಿಷಗಳು ಬಾಕಿ. ಹಣೆಗೆ ಎಂಥದೋ ಭಯದ ಗಂಟು ಕಟ್ಟಿ ನಿಂತಿರುವ ಗೆಳೆಯರ ವೃಂದ. ಇನ್ನೇನು ಪರೀಕ್ಷಾ ಕೊಠಡಿಗೆ ಕಾಲಿಡಬೇಕು. ಜೇಬಿನಲ್ಲಿ ಕೈ ಹಾಕಿ ನೋಡಿದರೆ ಹಾಲ್ ಟಿಕೆಟೇ ಇಲ್ಲ. ಎದೆ ಧಸ್ ಅಂದು ಬಿಟ್ಟಿತು. ಎದೆಯ ಮೇಲೆ ಕೈಯಿಟ್ಟು ಹಿಂತಿರುಗಿ ನೋಡಿದೆ. ನಮ್ಮೂರ ಬೋಳು ಹೊಲ, ಭಾವಿ, ತೋಟ, ಮನೆ, ಕಟ್ಟೆ, ಆಲದ ಮರಗಳು ಕಂಡವು. ಮುಂತಿರುಗಿದರೆ ಚಿತ್ರಣವೇ ಬದಲಾಗಿದೆ. ಅಲ್ಲೊಂದು ದೊಡ್ಡ ಆಸ್ಪತ್ರೆ. ಆಸ್ಪತ್ರೆಯಲ್ಲಿ ಡಾಕ್ಟ್ರು ಮತ್ತು ನರ್ಸು ಅತ್ತಿಂದಿತ್ತ ಓಡಾಡುತ್ತಿದ್ದಾರೆ. ನಾಲ್ಕು ಜನ ನನ್ನನ್ನು ಎತ್ತಿ ಸ್ಟ್ರೆಚ್ಚರ್ ಮೇಲೆ ಮಲಗಿಸಿ, ಬಿಳಿ ಬಟ್ಟೆ ಹೊದಿಸುತ್ತಿದ್ದಾರೆ. ದೂರದಿಂದ ಯಾರೋ ಅಳುತ್ತ ಓಡಿ ಬರೋದು ಮಂಜು ಮಂಜಾಗಿ ಕಾಣುತ್ತಿದೆ. ಅದೆಷ್ಟೇ ಪ್ರಯತ್ನಿಸಿದರೂ ಕಣ್ಣು ತೆರೆಯಲು ಆಗುತ್ತಿಲ್ಲ. ಓಡಿ ಬಂದ ವ್ಯಕ್ತಿ ನನಗೆ ಹೊದಿಸಿದ ಬಿಳಿ ಬಟ್ಟೆ ತೆಗೆದು, ನನ್ನ ಎದೆ ತಟ್ಟಿ ಜೋರು ಜೋರಾಗಿ ಅಳುತ್ತಿದ್ದಾನೆ. ಆ ವ್ಯಕ್ತಿ ಯಾರು ಅಂತಲೇ ತಿಳಿಯುತ್ತಿಲ್ಲ". ಕಣ್ತೆರೆದು ಮಂಪರಿನಲ್ಲಿ ನೋಡಿದರೆ ಎಲ್ಲವೂ ಮಾಯ. ಗೆಳೆಯರು, ಅವರ ಪಿಸುಗುಡುವ ಸದ್ದು, ಪೆನ್ಸಿಲ್ಲು, ಎಕ್ಸಟ್ರಾ ಪೆನ್ನು, ಜಾಮಿಟ್ರಿ ಬಾಕ್ಸು, ಪರೀಕ್ಷಾ ಕೊಠಡಿ, ಆಸ್ಪತ್ರೆ, ನರ್ಸು, ಡಾಕ್ಟ್ರು, ಆಸ್ಪತ್ರೆಯ ದೇವರು, ಸ್ಟ್ರೆಚ್ಚರ್ರು, ರೋಗಿಗಳು, ಆ ವ್ಯಕ್ತಿ, ಕಣ್ಣೀರು, ಆಕ್ರಂದನ - ಹೀಗೆ ಎಲ್ಲವೂ.

ಭಯದಿಂದ ಎದ್ದ ರೋಮಗಳ ನಿಮಿರು ಇಳಿದಿರಲಿಲ್ಲ. ತೊಡೆಗಣಕದ ತಲೆ ಚಚ್ಚಿ ಎದ್ದು ಹೊರಬಂದೆ. ಶುಕ್ರವಾರ ಸಾಯಂಕಾಲದ ಕೊನೆಯ ಹಂತದ ಕಿರಣಗಳು ನಮ್ರವಾಗಿ ಬರಮಾಡಿಕೊಂಡವು. ಗಾಜಿನ ಕಿಟಕಿಗೆ ಮುಖ ಮಾಡಿ ನಿಂತರೆ, ಸೂರ್ಯನ ಮುದಿ ಕಿರಣಗಳು ನನ್ನ ಮುಖಕ್ಕೆ ಚುಂಬಿಸುತ್ತಿದ್ದವು. ಥೇಟ್ ಅಜ್ಜಿಯ ಕೈಬೆರಳಂತೆ. ನಿಂತಲ್ಲೇ ದರ್ಶನವಾಗುವ ಸೂರ್ಯಾಸ್ತ ನೋಡಿ, ದೇವನೊಬ್ಬ ಪ್ರತ್ಯಕ್ಷನಾಗಿ ಹಣೆ ಮುಟ್ಟಿ, ಯಾವುದೊ ಒಂದು ದಿವ್ಯ ಶಕ್ತಿ ಅನುಗ್ರಹಿಸುವ ಹಾಗೆ ಕಂಡಿತು. ಕಣ್ಣು ಮುಚ್ಚಿ ಆಸ್ವಾದಿಸಿದೆ. ಆಧ್ಯಾತ್ಮದ ಪದರೊಂದು ಕಣ್ಮುಂದೆ ಹಾದು ಹೋದಂತಾಯಿತು.

ಬಟ್ಟೆ ಕೊಳೆಯಾಗಿತ್ತು. ಕಣ್ಣು ಭಾರವಾಗಿತ್ತು. ಗಾಜಿನ ಕಿಟಕಿಯಿಂದ ಕೆಳಗಡೆ ಕಣ್ಣು ಹಾಯಿಸಿದೆ. ಟೆಕ್ ಪಾರ್ಕಿನ ಹೊರಗಡೆ, ಸಾಲಾಗಿ ನಿಂತ ತಿಂಡಿಯ ಬಂಡಿಗಳು ಕಂಡವು. ದೋಸೆ ಹೊಯ್ಯುವವನು "ಕಮ್ ಸರ್, ಪ್ಲೀಸ್ ಕಮ್" ಅಂತ ಬರಮಾಡಿಕೊಂಡಂತೆ ಕಾಣುತ್ತಿತ್ತು. ಈ ಬಂಡಿಗಳಲ್ಲಿ ಏನು ಸಿಗಲ್ಲ? ಟೀ, ಕಾಫಿ, ತಿಂಡಿ, ಊಟ, ಸಿಗರೇಟ್, ಜ್ಯೂಸು, ಬಬಲ್ ಗುಮ್ಮು, ಪರೋಠ, ದೋಸಾ, ಇಡ್ಲಿ, ಉಪಮಾ, ಎಲೆ, ಅಡಕೆ - ಹೀಗೆ ಎಲ್ಲವೂ. ನಾಲಿಗೆ ಬೇಡುವ ಸಕಲ ರುಚಿಗಳ ಸಂಗಮವಿದು. ಟೆಕಿಗಳ ಜಾಗೃತ ಜಾಗವಿದು. ಬೆಳಿಗ್ಗೆ ಏಳಾದರೆ ಸಾಕು, ಟೆಕ್ ಪಾರ್ಕಿನ ಹೊರಗಡೆ ಜನಜಂಗುಳಿ ಇರುತ್ತದೆ. ಬಿಸಿಲಾದರೂ ಇರುಳಾದರೂ ಈ ಜಾಗಕ್ಕೆ ವಿರಾಮವಿಲ್ಲ. ಇಲ್ಲಿ ಯಾರಿಗೂ ಕುಂತು ತಿನ್ನುವಷ್ಟು ವ್ಯವಧಾನವಿಲ್ಲ. ಒಂದು ವೇಳೆ ನೀವು ಕುಳಿತು ತಿನ್ನುತ್ತಿದ್ದರೆ, ನಿಮಗೆ ಪ್ರೊಜೆಕ್ಟಿನಲ್ಲಿ ಕೆಲಸವಿಲ್ಲ ಎಂದಂತಲೇ ಅರ್ಥ. ಅವರು ಆಕಾಶಕ್ಕೆ ಮುಖಮಾಡಿ ಬಿಡುವ ಸಿಗರೇಟಿನ ಹೊಗೆಯೊಳಗೆ ಇಡೀ ಜನ್ಮಕ್ಕಾಗುವ ನಿರಾಳತೆ ಅಡಗಿರುತ್ತದೆ. ಅದರೊಳಗೇ ಶುದ್ಧ ಪ್ರಾಮಾಣಿಕ ಮಾತುಗಳು ಹೊರಬೀಳುತ್ತವೆ. ಕಂಪನಿ ಬಿಡೋದರಿಂದ ಹಿಡಿದು, ಕೆಲಸೇತರ ಗಾಸಿಪ್ಪುಗಳು ಜಗಜ್ಜಾಹೀರುಗೊಳ್ಳುವುದು ಇಲ್ಲೇ. ನೀಟಾಗಿ ಇನ್ ಮಾಡಿ ಶೂ ಹಾಕಿಕೊಂಡು, ನಿಂತಲ್ಲೇ ತುಸು ಮುಂದಕ್ಕೆ ವಾಲಿ ತಿನ್ನುವ ಜೀವಿಗಳು, ಮೇಲ್ವರ್ಗ ಮತ್ತು ಕೆಳವರ್ಗದ ಮಧ್ಯ ಸಿಕ್ಕಿಬಿದ್ದಿರುವ ಆತ್ಮದಂತೆ ಕಾಣುತ್ತವೆ. ಸಾಲು ಸಾಲಾಗಿ ನಿಂತಿರುವ ಬಂಡಿಗಳು ಎರಡೂ ಜಗತ್ತನ್ನು ಜೋಡಿಸುವ ಸೇತುವೆಯಂತೆ ಕಾಣುತ್ತವೆ.

ಅಷ್ಟರಲ್ಲೇ ಬಂದ ಜಯಮ್ಮ, ಇಷ್ಟು ಹೊತ್ತಾದರೂ ಆಫೀಸಿನಲ್ಲಿ ನನ್ನ ಉಪಸ್ಥಿತಿಯನ್ನು ಕಂಡು "ಯಾಕ್ ಸ್ವಾಮಿ ಇನ್ನೂ ಹೋಗಿಲ್ವಾ?" ಅಂತ ಕೇಳಿದಳು. ಜಯಮ್ಮ ನಮ್ಮ ಆಫೀಸಿನ ಕೆಲಸದಾಕೆ. ಆಫೀಸಿನ ತುಂಬಾ ಜನರಿಗೆ ಪರಿಚಿತ ಹೆಸರು. ಹಿರೀ ಜೀವ. ನಾವು ಈಗಿರುವ ಫ್ಲೋರಿಗೆ ಆಕೆಗೆ ಸ್ವಚ್ಛತೆಯ ಉಸ್ತುವಾರಿ. ಆಫೀಸಿನ ಪಕ್ಕದಲ್ಲೇ ಇರುವ ಒಂದು ಸಣ್ಣ ಹರುಕು ಮನೆಯಲ್ಲಿ ವಾಸವಾಗಿದ್ದಾಳೆ. ಸೂರ್ಯ ಹುಟ್ಟೋದಕ್ಕಿಂತ ಮುಂಚೆ ಎದ್ದು, ಮನೆ ಕೆಲಸ ಮಾಡಿ, ಆಫೀಸಿನ ಕೆಲಸಕ್ಕೆ ಬರುವಳು. ಬೆಳಿಗ್ಗೆ ಏಳು ಗಂಟೆಯೊಳಗೆ ಆಫೀಸಿಗೆ ಬಂದು, ಇಡೀ ಫ್ಲೋರಿನ ಕಸ ಗುಡಿಸಿ, ಇಡೀ ನೆಲಹಾಸು ಒರಸುತ್ತಾಳೆ. ಸದಾ ಪ್ರಸನ್ನವದನಳಾಗಿರುವದರಿಂದ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು. ಹಬ್ಬದ ಪ್ರಯುಕ್ತ ಮನೆಯಲ್ಲಿ ಏನಾದ್ರು ಸಿಹಿ ತಿನಿಸು ಮಾಡಿದ್ರೆ ತಪ್ಪದೇ ಕೊಡುವಳು. "ಏನ್ ಜಯಮ್ಮ, ಹಬ್ಬ ಜೋರಾ?" ಅಂತ ಕೇಳಿದ್ರೆ, "ಏನ್ ಜೋರು ಸ್ವಾಮಿ, ರಜೆನೇ ಕೊಟ್ಟಿಲ್ಲ ನಮಗೆ" ಅಂತ ಮುಖ ಸಪ್ಪಗೆ ಮಾಡುತ್ತಿದ್ದಳು. ಒಮ್ಮೆ ನನಗೆ ದೀಪಾವಳಿ ಹಬ್ಬಕ್ಕೆ, ಪ್ರೊಜೆಕ್ಟಿನಿಂದ ಸ್ವೀಟ್ಸ್, ಪಟಾಕಿ, ಮತ್ತು ಸಾವಿರ ರೂಪಾಯಿಯ ವೊಚರ್ ಬೇರೆ ಕೊಟ್ಟಿದ್ದರು. ಅವತ್ತು ಆಕೆಗೆ ಏನನಿಸ್ತೋ ಗೊತ್ತಿಲ್ಲ, "ಸ್ವಾಮಿ ನಮಗೇನಿಲ್ವ ಹಬ್ಬಕ್ಕೆ?" ಅಂತ ಬಾಯಿಬಿಟ್ಟು ಕೇಳಿದ್ದಳು.

ಮರುದಿನ ನಾನು ಅಮ್ಮನಿಗೆ ಅಂತ ಎತ್ತಿಟ್ಟಿದ ಸೀರೆ ಕೊಟ್ಟೆ. ತುಂಬಾ ಒಂಟಿ ಅನಿಸಿದಾಗ ತನ್ನ ಮನೆಯ ಬಗ್ಗೆ ಹೇಳುತ್ತಿದ್ದಳು. ವಯಸ್ಸಿಗೆ ಬಂದ ಮಗ ತೀರಿ ಹೋಗಿದ್ದು. ಗಂಡನ ಅತಿಯಾದ ಕುಡಿತ. ಮನೆಯಲ್ಲಿ ದೈಹಿಕ ಹಿಂಸೆ. ಅನ್ನಕ್ಕೆ ಪರದಾಡುವದು - ಹೀಗೆ ಎಲ್ಲವೂ. "ಮಗ ಬದುಕಿದ್ರೆ ನಿಮ್ ವಯಸ್ಸೇ ಅವನಿಗೆ" ಅಂತ ಹೇಳುತ್ತಿದ್ದಳು. "ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿರಬೇಕಾದ್ರೆ, ಆಯ ತಪ್ಪಿ ಮಷಿನಿನೊಳಗೆ ಬಿದ್ದು ಬಿಟ್ಟನಂತೆ. ಮಣ್ಣು ಮಾಡೋದಕ್ಕೂ ಬಾಡಿ ಸಿಕ್ಕಿಲ್ಲ" ಕಣ್ಣೀರಿಡುತ್ತ ಹೇಳುತ್ತಿದ್ದಳು. ಕೊನೆಯದಾಗಿ ಕಣ್ತುಂಬ ನೋಡಕ್ಕೂ ಅವಕಾಶ ಸಿಕ್ಕಿಲ್ಲ ಅನ್ನೋದು ತುಂಬಾ ನೋವಿನ ವಿಷಯವಾಗಿತ್ತು ಆಕೆಗೆ. ತುತ್ತು ಅನ್ನಕ್ಕಾಗಿ ಕೆಲಸ ಹುಡುಕುತ್ತಿರುವಾಗ, ಅವಳ ಬಳಗದವರೊಬ್ಬರು ಈ ಕಂಪನಿಗೆ ಶಿಫಾರಸು ಮಾಡಿದರಂತೆ. ತುಂಬಾ ಭಕ್ತಿಯಿಂದ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ತುಂಬಾ ವರ್ಷಗಳಿಂದ ಇಲ್ಲೇ ಇದ್ದುದ್ದರಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.

ಜಯಮ್ಮಳ "ಯಾಕಿನ್ನೂ ಹೋಗಿಲ್ಲ?" ಅನ್ನೋ ಪ್ರಶ್ನೆಗೆ ನನ್ನ ಹತ್ತಿರ ಉತ್ತರವಿರಲಿಲ್ಲ. ಕಳೆದುಕೊಂಡ ಆತ್ಮದಂತೆ ಸುಮ್ಮನೆ ನಿಂತಿದ್ದೆ. ಒಂದು ಅನಾಥ ಮೌನ ನನ್ನನ್ನು ಸುತ್ತುವರೆದಿತ್ತು. ಜಯಮ್ಮ ಕೂಡ ಪಕ್ಕ ಬಂದು ಕೂತಳು.

ಜಯಮ್ಮ "ಏನಾಯ್ತು?" ಅಂತ ಹೆಗಲ ಮೇಲೆ ಕೈಯಿಟ್ಟಳು. ಗಂಟಲು ಉಬ್ಬಿ ಮಾತೇ ನಿಂತು ಹೋಯಿತು. ಸ್ಮಶಾನ ಮೌನ ಇಬ್ಬರಲ್ಲೂ ಆವರಿಸಿತು. ಇಪ್ಪತೆಂಟನೆಯ ವಯಸ್ಸಿಗೆ ಹೃದಯಾಘಾತ ಆಗಬಹುದು ಅಂದ್ರೆ ನೀನು ನಂಬ್ತಿಯ? ಅಂತ ಕೇಳಿದೆ. ಯಾರಿಗೆ? ಏನಾಯ್ತು? ಅಂತ ಕೇಳಿದಳು. "ಸಾತೋಸೆ ಸತ್ತೋದ ಜಯಮ್ಮ. ಇಲ್ಲೇ, ಇಲ್ಲೇ ಒದ್ದಾಡಿ ಒದ್ದಾಡಿ ಸತ್ಹೋದ ಅವನು" ಇದನ್ನು ಹೇಳಿ ಮುಗಿಸುವಷ್ಟರಲ್ಲಿ ಕಣ್ಣು ತುಂಬಿ ಬಂದಿತ್ತು. ಜಯಮ್ಮ, ಅವನಿಗೆ ಇಪ್ಪತ್ತೆಂಟೇ ವಯಸ್ಸು. ಮೊನ್ನೆ ತಾನೆ ನಿಶ್ಚಿತಾರ್ಥವಾಗಿತ್ತು. ತಿಂಗಳ ಹಿಂದೇ ಅವನ ಹುಟ್ಟು ಹಬ್ಬ ಆಚರಿಸಿದ್ದೆ. ಎಲ್ಲಾ ವ್ಯವಸ್ಥೆ ಆ ಹುಡುಗಿ ನಂದಿನಿಯೇ ಮಾಡಿದ್ದಳು.

ಅವನೆಂದರೆ ತುಂಬಾ ಪ್ರೀತಿ ಆಕೆಗೆ. ಅವತ್ತು ರಾತ್ರಿ ಕೇಕು ಕಟ್ ಮಾಡಬೇಕಾದ್ರೆ ಅವಳು ಹೇಳ್ತಿದ್ಳು "ಆದಷ್ಟು ಬೇಗ ನೀನೂ ಹುಡುಗಿ ನೋಡಿಟ್ಟಿರು, ಒಳ್ಳೆ ಹುಡಗಿ ಸಿಗೋದು ತುಂಬಾ ಕಷ್ಟ ಈಗಿನ ಕಾಲದಲ್ಲಿ" ಅಂತ. ಆದ್ರೆ ನನ್ನ ಕನಸಿನ ಕಾಳಜಿ ವಹಿಸಿದವಳ ಕನಸೇ ದುಃಸ್ವಪ್ನವಾಗೋದು ಯಾರು ತಾನೇ ಊಹಿಸಿರುತ್ತಾರೆ. ಕನಸುಗಳನ್ನ ಅಮಾನುಷವಾಗಿ ದರೋಡೆ ಮಾಡೋದು ಅಂದ್ರೆ ಇದೇನಾ ಜಯಮ್ಮ?

ಆಫೀಸಿನ ಕ್ಯಾಂಟೀನಿನಲ್ಲಿ ಊಟ ಮಾಡುತ್ತಿದ್ದ ಒಬ್ಬ ವ್ಯಕ್ತಿ, ಅಚಾನಕ್ಕಾಗಿ ಎದೆ ಹಿಡಿದು ಸಾಯುವದೆಂದರೆ ಯಾರು ನಂಬುತ್ತಾರೆ ಹೇಳು? ನಾನು ನನ್ನ ಗೆಳೆಯನೊಂದಿಗೆ ಪಕ್ಕದ ಟವರಿನಲ್ಲಿ ಊಟ ಮಾಡುತ್ತಿದ್ದೆ. ಗೋಡೆಯ ಆಚೆಗೆ ಆತ ತನ್ನ ಟೀಮ್ ಜೊತೆಗೆ ನಗುನಗುತ್ತಾ ಊಟ ಮಾಡುತ್ತಿದ್ದ. ಇತ್ತ ಈ ಪಾಪಿ ಹೊಟ್ಟೆ ಮೌಂಸ ತಿನ್ನುತ್ತಿತ್ತು. ಅತ್ತ ಜೀವವೊಂದು ಎದೆ ಹಿಡಿದು ನರಳುತ್ತಿತ್ತು. ಎಲ್ಲಾ ನಡೆದದ್ದು ಗೋಡೆಯೊಂದರ ಅಂತರದ ನಡುವೆಯೇ. ಯಾರು ಸಹಾಯಕ್ಕೆ ಬರಲಿಲ್ಲಂತೆ ಗೊತ್ತಾ? ಕೊನೆಗೆ ಪ್ಲೇಟು ಎತ್ತಿಡೋಳೇ ಓಡಿ ಸಹಾಯಕ್ಕೆ ಬಂದಳಂತೆ. ಅರ್ಧಗಂಟೆ ನಂತರ ಬಂದ ಆಂಬುಲೆನ್ಸ್ ಗೆ ಹಾಕಿ, ಹೊರಡುವಷ್ಟರಲ್ಲಿ ಪ್ರಾಣ ಹೊರಟು ಹೋಗಿತ್ತಂತೆ. ನನಗೆ ವಿಷಯ ತಿಳಿದು ಓಡಿ ಬರುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು.

ಇವತ್ತು ಬೆಳಿಗ್ಗೆಯಷ್ಟೇ ನನ್ನ ಜೊತೆ ಫೋನಿನಲ್ಲಿ ಮಾತಾಡಿದ್ದ. ತುಂಬಾ ಖುಷಿಯಲ್ಲಿದ್ದ. "ನನಗೆ ರಜೆ ಸಿಗುತ್ತದೆ ಇಲ್ವೋ?" ಅಂತ ನನಗೆ ಕೇಳಿದ್ದ. ನಾನು "ಸಿಗುತ್ತೆ ಹೋಗು ಮಾರಾಯ. ನಿನ್ ಮದುವೆಗೆ ಕೊಡದೆ ಇನ್ಯಾರ ಮದುವೆಗೆ ಕೊಡ್ತಾರೆ?" ಅಂತ ಹೇಳಿದ್ದೆ. "ಶೀಘ್ರ ರಜಾ ಪ್ರಾಪ್ತಿರಸ್ತು" ಅಂತ ಹೇಳಿದ್ದಕ್ಕೆ ನಗುತ್ತಲೇ ಫೋನಿಟ್ಟಿದ್ದ.

ಅವನ ಹಣೆಬರಹ ಎಂಥದ್ದು ನೋಡು? ನಾನು ಇಲ್ಲೇ ಇದ್ದೆ, ಆದ್ರೂ ಅವನ ಹತ್ತಿರ ಇರಲಿಲ್ಲ. ಹತ್ತಿರ ಇದ್ರೂ, ಕಣ್ಣಿಗೆ ಕಾಣುವಂತಿರಲಿಲ್ಲ. ಊಟಕ್ಕೆ ಹೋಗುವ ಮುನ್ನ ಮ್ಯಾನೇಜರ್ ಜೊತೆಗೆ ಮಾತುಕತೆ ಮಾಡಿ, ಪರತ್ ನನಗೆ ಫೋನಿಸಿ ಒಂದು ತಿಂಗಳು ರಜೆ ಕೊಟ್ರು ಅಂತ ಜೋರು ಜೋರಾಗಿ ಕಿರುಚಿ ಹೇಳಿದ್ದ. ಆಗಲೇ ನನಗೆ ಊಟಕ್ಕೆ ಕರೆದ. ನನ್ನ ಹಳೆಯ ಗೆಳೆಯನೊಬ್ಬ ಬಂದಿದ್ದಾನೆ. ಅವನ ಜೊತೆ ಹೋಗಬೇಕು ಅಂತ ಹೇಳಿದ್ದೆ. ಅಬ್ಬಾ....ಎಂಥ ನಿರ್ಧಾರ ನನ್ನದು.

ಆ ಹೊತ್ತಿನಲ್ಲಿ ಏನು ಮಾಡಬೇಕು ಅನ್ನೋದೇ ತಿಳಿಯಲಿಲ್ಲ. ಅವರ ಮನೆಯವರಿಗೆ ತಿಳಿಸಲು ಫೋನ್‌ ನಂಬರ್ ಇರಲಿಲ್ಲ. ಅವನ ಹುಟ್ಟು ಹಬ್ಬದ ದಿವಸ ನಂದಿನಿಯ ಫೋನಿನಿಂದ ಕರೆ ಮಾಡಿದ್ದ. ಅದನ್ನು ಹೆಕ್ಕಿ ತೆಗೆದೆ. ಆದರೆ, ಆಕೆಗೆ ಫೋನು ಮಾಡಲು ಧೈರ್ಯವೇ ಸಾಕಾಗಲಿಲ್ಲ. ನಡಗುವ ಕೈಯಲ್ಲಿ ಫೋನೆತ್ತಿಕೊಂಡೆ. ಬೆರಳುಗಳು ಸಹಕರಿಸಲೇ ಇಲ್ಲ. ಹೋದ ತಿಂಗಳಷ್ಟೇ ನಿಶ್ಚಿತಾರ್ಥವಾದ ಹುಡುಗಿಗೆ ಸಾವಿನ ಸುದ್ದಿ ಮುಟ್ಟಿಸುವ ಸಾಹಸ ಮಾಡಲಾಗಲಿಲ್ಲ. ಮದುವೆ ನಿಶ್ಚಯವಾದಾಗಿನಿಂದ ಆಕೆಗೆ ಯಾವಾಗಲೂ ತಮಾಷೆ ಮಾಡುತ್ತಿದ್ದೆ. ಸಾತೋಸೆಯ ಮೊಬೈಲು ನಿಂತು ಹೋಗಿದೆ, ದಯವಿಟ್ಟು ಸಿಸಿಡಿಯ ಹತ್ತಿರ ಬಾ ಅಂತ ಕರೆಸುತ್ತಿದ್ದೆ. ಇನ್ನು ಕೆಲವೊಮ್ಮೆ ಆತನಿಗೆ ಮೈ ಹುಷಾರಿಲ್ಲ, ಆಫೀಸಿನ ವೆಲ್ನೆಸ್ ರೂಮಿಗೆ ಬೇಗ ಬಾ ಅಂತ ಕರೆಸುತ್ತಿದ್ದೆ. ಇದೆಲ್ಲ ಸುಳ್ಳು ಅಂತ ಗೊತ್ತಿದ್ದರೂ ಆಕೆ ಓಡೋಡಿ ಬರುತ್ತಿದ್ದಳು. ಆದರೇ ಈಗ ಆತ ಬದುಕೇ ಇಲ್ಲ ಅಂತ ಹೇಳುವ ಧೈರ್ಯ ಬಹುಶಃ ಆ ದೇವರಿಗೂ ಇಲ್ಲ.

ಧೈರ್ಯ ಸಾಲದೇ ಕೊನೆಗೆ ಟೀಮಿನ ಬೇರೊಬ್ಬ ವ್ಯಕ್ತಿಯಿಂದ ಫೋನಿಸಿ ಕ್ಯಾಂಟೀನಿನ ಹತ್ತಿರ ಬರಲು ಹೇಳಿಸಿದ್ದೆ. ಇವರು ಮತ್ತೆ ತಮಾಷೆ ಮಾಡ್ತಾ ಇದ್ದಾರೆ ಅಂತ ಯೋಚಿಸುತ್ತಲೇ ಬರುತ್ತಿದ್ದಳು. ಆಕೆಗೆ ಎದುರಿಸುವ ಸ್ಥಿತಿಯಲ್ಲಿರಲಿಲ್ಲ. ಆಕೆ ಹತ್ತಿರ ಬಂದಷ್ಟು ಕಣ್ಣು ತಪ್ಪಿಸಿಕೊಳ್ಳುತ್ತಿತ್ತು. ನನ್ನ ನೋಡಿ ನಗುತ್ತಲೇ ಬರುತ್ತಿತ್ತು ಆ ಕೂಸು. ಆ ನಗು ನನಗೆ ಈಗಲೂ ಇರಿಯುತ್ತಲೇ ಇದೆ.

ಯಾಕೋ ನನ್ನ ಮನಸ್ಸು ಒಪ್ಪಲೇ ಇಲ್ಲ. ಸಾತೋಸೆ ಇರೋದಕ್ಕೆ ಸಾಧ್ಯವೇ ಇಲ್ಲ ಅಂತ ಬೈಕು ಹತ್ತಿ ನಂದಿನಿಯನ್ನು ಕರೆದುಕೊಂಡು ಮಣಿಪಾಲ್ ಆಸ್ಪತ್ರೆಗೆ ಓಡಿದೆ. ಆಸ್ಪತ್ರೆಯ ಒಂದು ವಾರ್ಡಿನಲ್ಲಿ ಅವನಿದ್ದ. ಅವನ ಹತ್ತಿರ ಹೋದೆ. ಸ್ಟ್ರೆಚ್ಚರಿನ ಮೇಲೆ ಅವನು ಅಂಗಾತ ಮಲಗಿದ್ದ. ಬಾಯಿ ತೆರೆದಿತ್ತು. ಕಂಪನಿ ಐಡಿ ಕಾರ್ಡು ಕೊರಳಿಂದ ಸ್ಟ್ರೆಚ್ಚರಿನ ಎಡಬದಿ ಜೋತು ಬಿದ್ದಿತ್ತು. ಆ ಸ್ಟ್ರೆಚರ್ ಮೇಲೆ ಮಲಗಿದ ಸಾತೋಸೆ, ಗೊತ್ತು ಗುರಿಯಿರದ ಕಡಲತೀರದಲ್ಲಿ, ಗುರಿ ಸೇರುವ ಮೊದಲೇ ಯಾವುದೋ ನಡುಗಡ್ಡೆಯಲ್ಲಿ ಆಯಾಸಗೊಂಡ ದಣಿದ ದೋಣಿಯಂತೆ ಕಾಣುತ್ತಿದ್ದ.

ಸ್ಟ್ರೆಚ್ಚರಿನ ಎಡಬದಿ ಜೋತುಬಿದ್ದ ಕಂಪೆನಿಯಿಯ ಐಡಿ ಕಾರ್ಡು ದೋಣಿಯ ಕೈಸೋತ ಹುಟ್ಟಿನಂತೆ ಕಾಣುತ್ತಿತ್ತು. ಡಾಕ್ಟ್ರು ಅಟೆಂಡ್ ಮಾಡೋದಕ್ಕೆ ಅರ್ಧಗಂಟೆ ಮುಂಚೆಯೇ ಪ್ರಾಣ ಹೋಗಿತ್ತು ಅಂತ ತಿಳಿಯಿತು. ಹೃದಯಾಘಾತ ಅದು. ಅವನಿಗೂ ಮತ್ತು ಅವನಿಗೆ ಸಂಬಂಧಿಸಿದವರಿಗೂ. ಅರ್ಧಗಂಟೆ ಮುಂಚೆ ಬಂದಿದ್ರೆ ಏನಾದ್ರು ಮಾಡಬಹುದಿತ್ತು ಅಂತ ಡಾಕ್ಟ್ರು ಹೇಳ್ತಿದ್ರು. ನಂದಿನಿ ನಿಂತಲ್ಲೇ ಕುಸಿದಳು. ನನಗೆ ದಿಕ್ಕೆಟ್ಟು ಹೋದಂಗಾಯಿತು. ಎಲ್ಲವೂ ಮಂಜು ಮಂಜು. ಕ್ಷಣಮಾತ್ರದಲ್ಲೇ ಅನಾಥನಾದಂತನಿಸಿತು.

ಡಾಕ್ಟ್ರು ಬಂದು, ಅವರ ಮನೆಯವರಿಗೆ ಕರೆಸಿ ಅಂತ ಹೇಳಿ ಹೋದರು. ನಂದಿನಿಯನ್ನು ಸಂಭಾಳಿಸಲು ತುಂಬಾ ಕಷ್ಟ ಆಗುತ್ತಿತ್ತು. ಅವಳ ಕೋಮಲ ಕನಸುಗಳು ಒಂದೇ ಘಳಿಗೆಯಲ್ಲಿ ನುಚ್ಚು ನೂರಾಗಿದ್ದವು. ತನ್ನ ಜಗತ್ತೇ ಆಗಿದ್ದವನನ್ನು ಕಳೆದುಕೊಂಡವಳಿಗೆ ಸಮಾಧಾನಿಸಲು ಪದಗಳೇ ಇರಲಿಲ್ಲ. ತುಸು ಹೊತ್ತಿನ ನಂತರ, ಕಂಪನಿಯ ಎಚ್ ಆರ್ ಕಡೆಯಿಂದ ಅವರ ಮನೆಗೆ ಕರೆ ಹೋಗಿದೆ ಅಂತ ಸುದ್ದಿ ತಿಳಿದು ಬಂತು. ಸಮಯ ಕಳೆದಂತೆ ಬೆಂಗಳೂರಿನಲ್ಲೇ ಇದ್ದ ಸಾತೋಸೆಯ ಕೆಲ ಗೆಳೆಯರು ಬರುತ್ತಿದ್ದರು.

ನಿಂಗೊತ್ತಾ ಜಯಮ್ಮ, ನಮ್ಮ ಟೀಮಿನಿಂದ ಒಂದಿಬ್ಬರು ಬಿಟ್ಟರೆ ಯಾರೂ ಬಂದಿರಲಿಲ್ಲ. ಕ್ಯಾಂಟೀನಿನಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ ’ಅಯ್ಯೋ ಪಾಪ ಹೀಗಾಯ್ತಾ’ ಅಂತ ಮಾತಾಡಿ ಬಂದು, ಅವರವರ ಕೆಲಸದಲ್ಲಿ ಮುಳುಗಿದ್ದರು. ಯಾಕೆಂದರೆ ಸತ್ತವನು ಅವರ ಅಣ್ಣನಾಗಿರಲಿಲ್ಲ, ತಮ್ಮನು ಆಗಿರಲಿಲ್ಲ, ಅವರ ಯಾವುದೇ ದೂರದ ಸಂಬಂಧಿಕನೂ ಆಗಿರಲಿಲ್ಲ. ತಮ್ಮ ಜೊತೆ ಓಡಾಡಿ ನಕ್ಕು ನಲಿದಾಡಿದ ಜೀವವೊಂದು ಕಣ್ಮುಚ್ಚಿದಾಗ, ಅದರ ಘನತೆ ಕಾಪಾಡುವಷ್ಟು ಉಳಿಸಿಕೊಳ್ಳದ ಅವರ ಮಾನವೀಯತೆ ನೋಡಿ ಹೇಸಿಗೆ ಬಂದಂತಾಗಿತ್ತು. ಎಲ್ಲರ ಕಡೆಯೂ ಒಂದು ಕಣ್ಣು ಹಾಯಿಸಿದೆ. ಸಾತೋಸೆಯ ಡೆಸ್ಕು ಕಂಡಿತು. ಅವನ ಟಿಫಿನು ಡಬ್ಬ, ಅವನು ತಗೊಂಡ ಅವಾರ್ಡು, ಡೆಸ್ಕಿನ ಮೇಲೆ ಇಟ್ಟಿರುವ ಲಕ್ಕಿ ಪ್ಲಾಂಟು, ಸಾಯಿಬಾಬಾ ಫೋಟೋ, ಸ್ಟಿಕಿ ನೋಟ್ಸು, ಮೊಬೈಲ್ ಚಾರ್ಜರು, ಕಾಫಿ ಮಗ್ಗು - ಎಲ್ಲವೂ ಇತ್ತು. ಆದರೇ ಅವನಿರಲಿಲ್ಲ. ಅವನ ಕುರ್ಚಿ ಖಾಲಿಯಿತ್ತು. ಆ ಕುರ್ಚಿ ನೋಡಿ ನನ್ನ ಆತ್ಮಕ್ಕೇ ಮಂಕು ಕವಿದಂತಾಗಿತ್ತು. ಕುರ್ಚಿಯ ಮೇಲೆ ಕೂತಾಗೊಮ್ಮೆ ’ಚರ್ ಚರ್’ ಎನ್ನುವ ಅದರ ಸದ್ದು ಸಾತೋಸೆಯ ಆರ್ತನಾದದಂತೆ ಕೇಳಿಸುತ್ತಿತ್ತು.

ಜಯಮ್ಮ ನನ್ನ ಸ್ವಗತ ಕೇಳಿಸಿಕೊಳ್ಳುತ್ತಿದ್ದಳು. ಆಕೆಗೂ ಏನು ಹೇಳಬೇಕು ಅನ್ನೋದು ತೋಚಲೇ ಇಲ್ಲ. ಏನೋ ಹೇಳಲು ಬರುತ್ತಿದ್ದಳು. ನಾಲಿಗೆ ಸಹಕರಿಸಲಿಲ್ಲ, ಮಾತು ಹೊರಡಲಿಲ್ಲ. ಆತನ ಮಗನೂ ಕೆಲಸ ಮಾಡುತ್ತಿರುವಾಗಲೇ ಸತ್ತಿದ್ದು ಅಂತ ನೆನೆಸಿಕೊಂಡಿರಬೇಕು. ’ಸರಿ ಹೋಗ್ತದೆ....ಎಲ್ಲ ಸರಿ ಹೋಗ್ತದೆ....’ ಅಂತ ಎದ್ದು ಹೊರಟು ಹೋದಳು.

2. ನನಗಿಗೂ ನೆನಪಿದೆ. ಕಾಲೇಜಿನಲ್ಲಿರುವಾಗಲೇ ನನಗೆ ಕೆಲಸ ಸಿಕ್ಕಿದೆ ಅಂತ ಮನೆಗೆ ಫೋನು ಮಾಡಿದಾಗ, ಇಡೀ ಊರಿಗೂರೇ ಹೆಮ್ಮೆ ಪಟ್ಟಿತ್ತು. ಸುದ್ದಿ ತಿಳಿದ ತಕ್ಷಣ ಅಪ್ಪನ ಕಣ್ಣಿಂದ ನೀರೇ ಬಂದಿತ್ತಂತೆ. ಎಂಜಿನೀರಿಂಗ್ ಮುಗಿಸಿ ಮೊದಲ ಸಲ ಇಲ್ಲಿ ಕಾಲಿಟ್ಟಾಗ, ಇದೊಂದು ವಿಸ್ಮಯದ ಗೂಡೇ ಆಗಿತ್ತು. ಒಂದೇ ಸಲಕ್ಕೆ ಯಾವ ಕಟ್ಟಡವೂ ಕಣ್ಣಿನೊಳಗೆ ಪೂರ್ತಿಯಾಗಿ ತುಂಬುತ್ತಿರಲಿಲ್ಲ. ಕಟ್ಟಡದ ಸುತ್ತಲೂ ಹುಲ್ಲಿನ ನೆಲಹಾಸು, ಆ ನೆಲಹಾಸಿನ ತುಂಬೆಲ್ಲ ಹೂವಿನ ಗಿಡಗಳು, ಪಾರ್ಕಿನ ಮಧ್ಯದಲ್ಲಿ ಭೂಮಿಯ ಎದೆ ಸೀಳಿ ಎದ್ದ ನೀರುಬುಗ್ಗೆ. ಅಬ್ಬಾ....ಗಂಧರ್ವಲೋಕದಲ್ಲಿ ಪ್ರವೇಶಪಡೆದಂತಿತ್ತು. ಅಪ್ಪನಿಗೆ ಕಟ್ಟಡದ ಬಗ್ಗೆ ಹೇಳಬೇಕಾದ್ರೆ ’ನಿಮ್ಮ ಟೋಪಿ ಕೆಳಗೆ ಬೀಳುವಷ್ಟು ದೊಡ್ಡ ದೊಡ್ಡ ಬಿಲ್ಡಿಂಗ್ ಗಳು’ ಅಂತ ಹೇಳ್ತಿದ್ದೆ.

ಈ ಗಾಜಿನ ಗುಹೆಯೊಳಗೆ ಮೊದಲು ಪರಿಚಯ ಆದದ್ದೇ ಸಾತೋಸೆ. ಅಮಿತ್ ಪಾಂಡುರಂಗ ಸಾತೋಸೆ. ನಾನು ಪ್ರೊಜೆಕ್ಟಿಗೆ ಸೇರಿಕೊಂಡಾಗ ಆತನಿಗೆ ಆಗಲೇ ಐದು ವರ್ಷದ ಅನುಭವವಿತ್ತು. ಫೈನಾನ್ಸ್ ಟೀಮಿನಲ್ಲಿ ಡೆವೆಲಪರ್ ಆಗಿದ್ದ. ಎರಡು ವರ್ಷ ಜರ್ಮನಿಯಲ್ಲಿದ್ದು ಬಂದಿದ್ದನು. ಆಫೀಸ್ ಕಮ್ಯುನಿಕೇಟರನಲ್ಲಿ "ಪಾಂಡುರಂಗ, ಸಾತೋಸೆ ಅಮಿತ್" ಇದ್ದುದ್ದರಿಂದ, ಅವನಿಗೆ ತುಂಬಾ ಜನ ಪಾಂಡುರಂಗ ಅಂತಲೇ ಕರೆಯುತ್ತಿದ್ದರು. ಅವನು ಪ್ರತಿಸಲ "ನನ್ನ ಹೆಸರು ಅಮಿತ್, ಪಾಂಡುರಂಗ ನಮ್ಮ ತಂದೆಯವರ ಹೆಸರು" ಅಂತ ತಿದ್ದುತ್ತಿದ್ದ. ನಾನು ಮಾತ್ರ ಅವನಿಗೆ ಸಾತೋಸೆ ಅಂತಲೇ ಕರೆಯುತ್ತಿದ್ದೆ. ಕೆಲವರಿಗೆ ತಮ್ಮ ಅಡ್ಡಹೆಸರಿನಿಂದ ಕರೆದರೆ ತುಂಬಾ ಖುಷಿಯಾಗುತ್ತದೆ. ಅದರಲ್ಲಿ ಅಮಿತ್ ಕೂಡ ಒಬ್ಬ.

ಸಾತೋಸೆಯದು ಆರಡಿ ಎರಡಿಂಚಿನ ಭೀಮಕಾಯ, ದುಂಡು ಮುಖ, ಉದ್ದವಲ್ಲದ ಮುದ್ದಾದ ಮೂಗು, ಅಗಲವಾದ ಹಣೆ, ಆಳವಾದ ಚೂಪು ಕಣ್ಣುಗಳು. ನೋಡಿದರೆ ಒಂದೇ ಸಲಕ್ಕೆ ಜ್ಞಾಪಕದಲ್ಲಿ ಉಳಿಯುವ ಮುಖ. ಆತ ಬೆಳಗಾವಿಯವನು. ಮರಾಠಿ ಭಾಷೆಯ ಜೊತೆ ಜಾಸ್ತಿ ಒಡನಾಟವಿತ್ತು. ಬೆಂಗಳೂರಿಗೆ ಬಂದು ಸುಮಾರು ಆರು ವರ್ಷಗಳಾಗಿದ್ದವು. ಪ್ರೊಜೆಕ್ಟ ಸೇರಿದ ಹೊಸದರಲ್ಲಿ, ನನ್ನ ಟೀಮ್ ಯಾವುದು ಅಂತ ಇನ್ನೂ ನಿರ್ಧರಿಸಿರಲಿಲ್ಲ. ಸುಮಾರು ಒಂದು ತಿಂಗಳದ ನಂತರ ಪೇಮೆಂಟ್ಸ್ ಟೀಮಿಗೆ ಸೇರಿಸಿದರು. ಪೇಮೆಂಟ್ಸ್ ಟೀಮ್ ಕೂಡ, ಫೈನಾನ್ಸ್ ಟೀಮಿನ ಭಾಗವಾಗಿದ್ದರಿಂದ ನಾನು ಸಾತೋಸೆಗೆ ರಿಪೋರ್ಟ್ ಮಾಡುತ್ತಿದ್ದೆ. ನನ್ನ ಮಾತೃಭಾಷೆ ಕೂಡ ಮರಾಠಿಯಾಗಿದ್ದರಿಂದ ನಮ್ಮಿಬ್ಬರ ನಡುವೆ ಸ್ನೇಹ ಬೆಸೆಯಲು ಜಾಸ್ತಿ ಸಮಯ ಹಿಡಿಯಲಿಲ್ಲ.

ಸಾತೋಸೆ ತನ್ನ ಕೆಲಸದಲ್ಲಿ ಎತ್ತಿದ ಕೈಯಂತಿದ್ದ. ಆತ ಪ್ರೋಗ್ರಾಮಿಂಗ್ ಮಾಡೋ ರೀತಿ ತುಂಬಾ ಆಕರ್ಷಕವಾಗಿತ್ತು. ಇಂಟರ್‌ಕಂಪನಿ ಕೋಡಿಂಗ್ ಕಾಂಪಿಟೇಷನ್ನಲ್ಲಿ ಮೂರು ಬಾರಿ ಗೆದ್ದಿದ್ದ. ಅವನು ಪಡೆದ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳು ಡೆಸ್ಕಿನಮೇಲೆ ಜೋಡಿಸಿಟ್ಟರೆ ಹೋಗಿಬರುವವರಿಗೆ ಅಸೂಯೆಯಾಗುತ್ತಿತ್ತು. ಆತ ಕೆಲಸದ ಗುಣಮಟ್ಟದಲ್ಲಿ ಯಾವತ್ತೂ ರಾಜಿಯಾಗುತ್ತಿರಲಿಲ್ಲ. ಅದಕ್ಕಾಗಿಯೇ ಆತನಿಗೆ ಎರಡು ವರ್ಷ ಜರ್ಮನಿಗೆ ಕಳಿಸಿದ್ದರು. ಈಗಲೂ ಗೋ-ಲೈವ್ ಸಪೋರ್ಟ್ ಗೆ ಅವನೇ ಬೇಕು ಅಂತ ಕ್ಲೈಂಟ್ ತಕರಾರು ತಗೆಯುತ್ತಾರೆ. ಕೆಲಸದ ಜೊತೆಗೆ ಒಳ್ಳೆ ಮಾತುಗಾರ ಕೂಡ. ಆತ ಇಂಗ್ಲಿಷ್ ನಲ್ಲಿ ಜಗಳವಾಡಿದರೂ ಜೋಗುಳದಂತೆ ! ಈ ಕಾರಣದಿಂದಲೇ ಆನ್‌ಸೈಟು ಬಾಗಿಲು ಸದಾ ತೆರೆದೇ ಇರುತ್ತಿತ್ತು.

ನನ್ನ ಮತ್ತು ಸಾತೋಸೆಯ ಮುಖಾಮುಖಿ ಯಾಗಿದ್ದು ಪ್ರೊಡಕ್ಷನನಲ್ಲಿ ಒಂದು ಸಮಸ್ಯೆ ಎದುರಾದಾಗ. ಆ ಕುರಿತಾಗಿ ತುಂಬಾ ಒದ್ದಾಡುತ್ತಿದ್ದೆ. ಈ ವಿಷಯದ ಕುರಿತಾಗಿ ಆತನ ಜೊತೆ ಚರ್ಚೆ ಮಾಡಿದೆ. ಆತ ಥಟ್ಟಂತೆ, ಇಂಥಿಂಥಾ ಜಗದಲ್ಲಿ ಇಂಥಿಂಥಾ ಕೋಡು ಹೊಡೆದು ಹಾಕು ಅಂತ ಹೇಳಿದ. ಅವನು ಹೇಳಿದ ಹಾಗೆ ಮಾಡಿದೆ. ಎಲ್ಲವೂ ಸರಿ ಹೋಯಿತು. ಐದು ವರ್ಷದಿಂದ ಒಂದೇ ವಿಷಯದ ಮೇಲೆ ಕೆಲಸ ಮಾಡುತ್ತಿದ್ದರಿಂದ, ಅದರ ಕಾರ್ಯ ವೈಖರಿ ಅರಿದು ಕುಡಿದುಬಿಟ್ಟಿದ್ದ. ಆತ ಯಾವಾಗಲೂ ಹೇಳುತ್ತಿದ್ದ "ಸಮಸ್ಯೆ ಅರ್ಥ ಮಾಡಿಕೊಂಡವನಿಗೆ ಮಾತ್ರ ಉತ್ತರದ ಹಾದಿ ಕಾಣುತ್ತದೆ" ಅಂತ. ನಾನು ವಿಧೇಯತೆಯಿಂದ ಆಲಿಸುತ್ತಿದ್ದೆ. ದಿನ ಕಳೆದಂತೆ ನಮ್ಮ ನಡುವೆ ಸಲುಗೆ ಬೆಳೆಯಿತು. ನಾವಿಬ್ಬರವು ಹೆಚ್ಚಾಗಿ ಮರಾಠಿಯಲ್ಲೇ ಮಾತಾಡುತ್ತಿದ್ದೆವು. ಟೀಮು ಡಿನ್ನರ್ ಅಂತ ತಿಂಗಳಿಗೊಮ್ಮೆ ಯಾವುದಾದರೂ ಹೋಟೆಲ್ಲು ಬುಕ್ ಮಾಡಬೇಕಾದರೆ ಅಥವಾ ಟೀಮು ಔಟಿಂಗ್ ಗೆ ರೆಸಾರ್ಟ್ ಬುಕ್ ಮಾಡಬೇಕಾದರೆ ನನಗೇ ಜವಾಬ್ದಾರಿ ವಹಿಸುತ್ತಿದ್ದ. "ನೀನೇ ಮಾತಾಡು ಮಾರಾಯ....ನಮ್ಮವರ ಇಂಗ್ಲೀಷು ಅವರಿಗೆ ಸಹಿಸೋಕ್ಕೆ ಆಗಲ್ಲ" ಅಂತ ತಮಾಷೆಗೆ ಹೇಳುತ್ತಿದ್ದ.

ಆಗಾಗ ಕಾಫಿಗೆ ಕರೆದುಕೊಂಡು ಹೋಗಿ, ನಮ್ಮ ಟೀಮಿನವರು ಮಾಡಿಕೊಂಡ ಕೆಲ ಯಡವಟ್ಟು ತುಂಬಾ ರಸವತ್ತಾಗಿ ಹೇಳುತ್ತಿದ್ದ. ಟೀಮಿನಲ್ಲಿ ಅಭಿಷೇಕ ಅನ್ನುವವನಿಗೆ ಮಗುವಾಗಿತ್ತು. ಆತ "ಬ್ಲೆಸ್ಡ್ ವಿಥ್ ಬೇಬಿ ಗರ್ಲ್, ಬೋಥ್ ಕಿಡ್ ಅಂಡ್ ಮಾಮ್ ಆರ್ ಡುಯಿಂಗ್ ವೆಲ್" ಅಂತ ಮೇಲ್ ಮಾಡಿದ್ದ. ಇದಾದ ಒಂದು ತಿಂಗಳ ನಂತರ ಕಿರಣ್ ಮಹಾಶಯನಿಗೆ ಗಂಡು ಮಗುವಾಗಿತ್ತು. ಆತನು ಅಭಿಷೇಕ್ ಹಾಕಿದ ಮೇಲನ್ನೇ ತೆರೆದು ’ಬೇಬಿ ಗರ್ಲ್ ಹೊಡೆದುಹಾಕಿ ಬೇಬಿ ಬಾಯ್’ ಅಂತ ತಿದ್ದಿ ಕಳುಹಿಸಿದ. ಸ್ವಲ್ಪ ಹೊತ್ತಾದ ನಂತರ ಎಲ್ಲರೂ ನಗಲಾರಂಭಿಸಿದ್ದರು. ರಿಗಾರ್ಡ್ಸ್ ಅಭಿಷೇಕ್ ಬದಲು ಕಿರಣ್ ಅಂತ ಹಾಕಲು ಮರೆತಿದ್ದ.

ಹೀಗೆ ನಕ್ಕು ನಗಾಡುತ್ತಾ ದಿನಗಳು ಕಳೆದುಹೋದವು. ನೋಡುನೋಡುತ್ತಿದ್ದಂತೆ ವರ್ಷಗಳೇ ಉರುಳಿ ಹೋದದ್ದು ನನ್ನ ಲಕ್ಷಕ್ಕೇ ಬರಲಿಲ್ಲ. "ಅರೇ ಮೊಟ್ಟಾ ಝಾಲಸ್ ತು ಆತಾ" ಅಂತ ಸಾತೋಸೆ ಹೇಳ್ತಿದ್ದ. ಅಂದ್ರೆ ನೀನೀಗ ದೊಡ್ಡವನಾಗಿದ್ದೀಯ ಅಂತ. ಆದರೇ ನನಗೆ ಸತತವಾಗಿ ಎರಡನೆಯ ವರ್ಷಕ್ಕೂ ಕಳಪೆ ಮಟ್ಟದ ರೇಟಿಂಗ್ ಬಂದಿದ್ದರಿಂದ ತುಂಬಾ ಬೇಜಾರಿನಲ್ಲಿದ್ದೆ. ಅಂದು ರಾತ್ರಿ ನನ್ನನ್ನು "ಟ್ರೀಟ್ ಕೊಡಿಸುತ್ತೇನೆ ಬಾ" ಅಂತ ಕರೆದುಕೊಂಡು ಹೋಗಿದ್ದ. "ನೋಡು, ನೀನು ಮಾಡ್ತಿರುವ ಕೆಲಸ ಗುಪ್ತ ರೋಗದ ಥರ ಮುಚ್ಚಿಡಬಾರದು. ಅವರು ಅಹುದಹುದು ಅನ್ನೊವರೆಗೂ, ಇಷ್ಟೆಲ್ಲಾ ಕೆಲಸ ಮಾಡಿದ್ದೀನಿ ಅಂತ ಎತ್ತಿ ಎತ್ತಿ ತೋರಿಸಬೇಕು. ನೀನು ಮಾಡಿರುವ ಕೆಲಸ ಮಾರ್ಕೆಟಿಂಗ್ ಮಾಡಲಿಲ್ಲ ಅಂದ್ರೆ, ಇನ್ನ್ಯಾವನೋ ಕ್ರೆಡಿಟ್ ತಗೋಳ್ತಾನೆ" ಅಂತ ಕಾರ್ಪೊರೇಟ್ ಜಗತ್ತಿನ ರಹಸ್ಯವನ್ನು ಕ್ಷಣ ಮಾತ್ರದಲ್ಲೇ ನನ್ನೆದುರಿಗೆ ಕಟ್ಟಿಹಾಕಿದ. "ಈಗ ಮಾಡ್ತಿರುವ ಕೆಲಸದ ಜೊತೆಗೆ, ಪ್ರಾಜೆಕ್ಟೇತರ ಕೆಲಸದಲ್ಲೂ ಉತ್ಸಾಹ ತೋರಿಸು. ಅಂದ್ರೆ ಪ್ರಾಜೆಕ್ಟ್ ಲೆವಲಲ್ಲೆ ನಡೆಯುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸು. ಅಲ್ಲಿ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಮೇಲಧಿಕಾರಿಯ ದೃಷ್ಟಿಯ ಪರಿಧಿಯೊಳಗೆ ನಿನ್ನ ಆತ್ಮ ಸದಾ ಓಡಾಡುತ್ತಲೇ ಇರಬೇಕು. ಜೋ ದಿಕ್ತಾ ಹೈ, ವಹಿ ಬಿಕ್ತಾ ಹೈ ಬಾಸ್" ಅಂತ ಹೇಳಿದ್ದ. "ನೋಡು ಈ ವರ್ಷದ ಪಾಟ್ಲಾಕ್ ಇವೆಂಟ್ ನಿನ್ನ ಕೈಗೆ ವಹಿಸುತ್ತೇನೆ. ನೀನೆ ನಿರ್ವಹಿಸು. ವರ್ಷದ ಕೊನೆಗೆ ಅಪ್ರೈಸಲ್ ಸಮಯದಲ್ಲಿ ’ಟೀಮ್ ಬಿಲ್ಡಿಂಗ್’ ಖಾತೆಯೊಳಗೆ ಇದನ್ನ ನಮೂದಿಸು." ಅಂತ ಸಲಹೆ ಕೂಡ ಕೊಟ್ಟಿದ್ದ.

ನಾನು ಈ ಕಂಪನಿ ಸೇರಿದ ಆರು ತಿಂಗಳಲ್ಲಿ, ಇಲೆಕ್ಟ್ರಾನಿಕ್ ಸಿಟಿಯಲ್ಲಿ ಅರವತ್ತು ಲಕ್ಷ ಒಂದು ಅದ್ಭುತ ಅಪಾರ್ಟ್‌ಮೆಂಟ್ ಖರೀದಿಸಿದ್ದ. ಇತ್ತೀಚಿಗೆ ಒಂದೆರೆಡು ಸಲ ಅವನ ಮನೆಗೂ ಹೋಗಿ ಬಂದಿದ್ದೆ. ನಿಜವಾಗಲೂ ಅದು ಅದ್ಭುತವಾಗಿತ್ತು. ಒಂದೆರೆಡು ಸಲ ಅವನ ಅಪಾರ್ಟ್ಮೆಂಟಲ್ಲೇ ಲೇಟ್ ನೈಟ್ ಪಾರ್ಟಿ ಕೂಡ ಆಗಿದ್ದವು. ಸಾತೋಸೆಯ ಕೊನೆಯ ಹುಟ್ಟು ಹಬ್ಬವು ಇದೇ ಅಪಾರ್ಟ್ಮೆಂಟಲ್ಲಿ ಆಗಿತ್ತು. ಅವನು ಖರೀದಿಸಿದ ಅಪಾರ್ಟ್ಮೆಂಟು ಮತ್ತದರ ವಿವರಗಳು ನಾನು...

ಕುತೂಹಲಕ್ಕೆ ಕೇಳುತ್ತಿದ್ದೆ. ಅದ್ಯಾಕೋ ಆತ ಸಿಟ್ಟಿಗೇಳುತ್ತಿದ್ದ. ಸುಮ್ನೆ ಯಾಕೆ ಅಪಾರ್ಟ್ಮೆಂಟ ತಗೋತಿಯ. ಅದರ ತಿಂಗಳ ಕಂತುಗಳು ಕಟ್ಟಬೇಕಾದರೆ ಹೃದಯ ಬಾಯಿಯವರೆಗೂ ಬರುತ್ತದೆ ಅಂತಿದ್ದ. ನಾವು ಯಾವ ಲೋಟದಲ್ಲಿ ಕಾಫಿ ಕುಡಿಯುತ್ತಿದ್ದೀವಿ ಅನ್ನೋದು ಮುಖ್ಯ ಅಲ್ಲ. ಕಾಫಿ ಚನ್ನಾಗಿದಿಯ? ಅಂತ ನೋಡ್ಬೇಕು. ಕಾಫಿ ಚೆನ್ನಾಗಿದ್ರೆ ಲೋಟ ಹೆಂಗಿದ್ದರೇನು? ಲೋಟ ಚಂದ ಮಾಡುವ ಆಟದಲ್ಲಿ ಕಾಫಿ ಕೆಡಸ್ಕೊಬಾರದು ಅಂತ ಹೇಳ್ತಿದ್ದ.

ಸಾತೋಸೆ ಇತ್ತೀಚಿಗೆ ನನ್ನೆದುರು ಆತನ ತುಂಬಾ ಖಾಸಗಿ ವಿಚಾರವನ್ನು ಹಂಚಿಕೊಂಡಿದ್ದ. ಅದು ಅವನ ಮದುವೆಯ ವಿಚಾರವಾಗಿತ್ತು. ‘‘ನೋಡು ಈ ವಿಷಯ ಇನ್ನೂ ಯಾರಿಗೂ ಗೊತ್ತಿಲ್ಲ. ದಯವಿಟ್ಟು ನೀನು ಯಾರಿಗೂ ಹೇಳಬೇಡ. ನಿನ್ನಿಂದ ಒಂದು ಸಹಾಯವಾಗಬೇಕು’’ ಅಂತ ಹೇಳಿದ.
‘‘ಏನಪ್ಪಾ ಅಂಥಾದ್ದು?’’ ಅಂತ ಕೇಳಿದೆ.

ಏನಿಲ್ಲ, ನಾನು ಮದುವೆಯಾಗಬೇಕಿರುವ ಹುಡುಗಿ ನಿಮ್ಮೂರ ಕಡೆಯವಳೇ. ಇದೇ ಟೆಕ್ ಪಾರ್ಕಿನ ಇನ್ನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಅಂತ ವಿಷಯ ಬಿಚ್ಚಿಟ್ಟ. ನಾನು ಲವ್ವು ಅಂತ ರಾಗ ಎಳೆದೆ. ಅದಕ್ಕವನು ‘‘ಲವ್ವಿಲ್ಲ ಗಿವ್ವಿಲ್ಲ. ನಾನು ಮೊದಲು ಜಾತಿ ನೋಡೋದು, ನಂತರ ಮೋತಿ ನೋಡೋದು’’ ಅಂತ ಹೇಳಿದ. ‘‘ಅಂದ್ರೆ?’’

‘‘ಅಂದ್ರೆ, ಅವಳು ಫೇಸ್ಬುಕ್ಕಿನಲ್ಲಿ ಸಿಕ್ಕಿದ್ದು. ಆಗಾಗ ಚಾಟ್ ಮಾಡುತ್ತಿದ್ದಳು, ಫೋನು ನಂಬರ್ ಕೂಡ ಸಿಕ್ಕು ಮಾತು ಶುರುವಾಯಿತು. ಬರಿ ಫ್ರೆಂಡ್ಸ್ ಅಂದವರು ಈಗ ಮದುವೆ ಹಂತಕ್ಕೆ ನಿಂತಿದೆ. ಮದುವೆ ನಿಶ್ಚಯ ಆದ ಹಾಗೆಯೇ ಇದೆ. ಮುಂದಿನ ತಿಂಗಳಲ್ಲಿ ದಿನಾಂಕ ಫಿಕ್ಸ್ ಮಾಡಬೇಕು. ಆದ್ರೆ ನನ್ನ ಮೇಲೆ ಈಗ ಸಿಟ್ಟಾಗಿದ್ದಾಳೆ. ಸುಮಾರು ಮೂರು ವರ್ಷದ ಹಿಂದೆ ನಡೆದು, ಮುಗಿದು ಹೋದ ಒಂದು ಲವ್ ಅಫೇರ್ ಆಕೆಗೆ ಗೊತ್ತಾಗಿದೆ ಅಂತ ಹೇಳಿದ. ‘‘ಅದೊಂದು ಮುಗಿದು ಹೋದ ಅಧ್ಯಾಯ. ಈಗ ಆಕೆಯ ಜೊತೆ ಯಾವುದೇ ರೀತಿಯ ಸಂಬಂಧದಲ್ಲಿ ಇಲ್ಲ’’ ಅಂತ ಅದೆಷ್ಟೇ ಆಕೆಗೆ ಹೇಳಿದರು ಒಪ್ಪುತ್ತಿಲ್ಲ. ಫೋನು ಎತ್ತುತ್ತಿಲ್ಲ. ಮೆಸೇಜ್‌ಗೆ ರಿಪ್ಲೈ ಕೂಡ ಮಾಡ್ತಿಲ್ಲ. ನೀನೇ ಏನಾದರು ಸಹಾಯ ಮಾಡು ಅಂತ ಹೇಳಿದ್ದ.

ನನಗೂ ಆ ಹೊತ್ತಿನಲ್ಲಿ ಏನು ಹೊಳೆಯಲಿಲ್ಲ. ಮರುದಿನ ಬಂದು ‘‘ನೋಡು, ಫೋನಿಗೆ ಉತ್ತರಿಸುತ್ತಿಲ್ಲ ಅಂದ್ರೆ, ನೀನು ನಿನ್ನ ಮಾತು ಹೇಗಾದರೂ ಮಾಡಿ ಆಕೆಗೆ ತಲುಪಿಸಬೇಕು. ನಿನ್ನತನವನ್ನು ಆಕೆಯ ಮುಂದೆ ಬಿಚ್ಚಿಡಬೇಕು. ಶರಣಾಗಬೇಕು. ಆ ಸಂಬಂಧದ ಬಗ್ಗೆ ನಿನ್ನ ಪ್ರಾಮಾಣಿಕ ವಿವರಣೆಯೇ ನಿನಗೆ ಕಾಪಾಡಬಹುದು. ಒಂದು ಪತ್ರ ಹಾಕು ಆಕೆಗೆ’’ ಅಂತ ಸೂಚಿಸಿದೆ.

ಅವನಿಗೆ ಆಘಾತವಾದಂತಾಯಿತು. ಫೇಸ್ಬುಕ್, ವಾಟ್ಸಪ್ಪಿನ ಕಾಲದಲ್ಲಿ ಪತ್ರ ಬರೆಯೋದೇ? ಅಂತ ಕೇಳಿದ. ಫೇಸ್ಬುಕ್, ವಾಟ್ಸಪ್ಪ ಮಾಡೋದು ತುಂಬಾ ಮೇನ್ ಸ್ಟ್ರೀಮ್. ಸ್ವಲ್ಪ ಹಿಂದೆ ಹೋಗಣ ಅಂತ ನಗುತ್ತ ಹೇಳಿದೆ.

ಮೊದಲು ಇದೆಲ್ಲ ವರ್ಕೌಟ್ ಆಗತ್ತಾ? ಸುಮ್ನೆ ಮೇಲ್ ಮಾಡಲಾ? ಅಥವಾ ಫೇಸ್ಬುಕ್ಕಿನಲ್ಲಿ ಮೆಸ್ಸೇಜ್ ಹಾಕಲಾ? ಅಂತ ತುಂಬಾ ಗೊಂದಲದಲಿದ್ದ. ಕೊನೆಗೂ ಪತ್ರ ಬರೆಯುವದಕ್ಕೆ ರಾಜಿಯಾದ. ಸರಿ ಅಂತ ಟೆಕ್ ಪಾರ್ಕಿನ ಸಿಸಿಡಿಯಲ್ಲಿ ಕಾಫಿ ಹೀರುತ್ತಾ, ಕಾರ್ಯಕ್ರಮ ಶುರುಹಚ್ಕೊಂಡ್ವಿ. ತುಂಬಾ ಸರಿ ತಪ್ಪುಗಳ ನಡುವೆ ಸವಿವರವಾದ ಪತ್ರ ಸಿದ್ಧವಾಯಿತು. ಆ ಹೊತ್ತಿನ ಸಾತೋಸೆಯ ಮನಃಸ್ಥಿತಿ, ಅವರ ಮನೆಯವರ ಪರಿಸ್ಥಿತಿ, ಆ ಹುಡುಗಿಯ ವಿಚಾರ ಮತ್ತು ಆಕೆಯೇ ತೆಗೆದುಕೊಂಡ ನಿರ್ಧಾರ ಎಲ್ಲವೂ ಆ ಪುಟ್ಟ ಪತ್ರದೊಳಗೆ ದಾಖಲಿಸಿದ್ದ. ಅವಳ ಆಫೀಸಿನ ವಿಳಾಸಕ್ಕೆ ಪೋಸ್ಟ್ ಮಾಡಿ ಬಿಟ್ವಿ. ಆದರೇ ಉತ್ತರ ಮಾತ್ರ ಬರಲಿಲ್ಲ. ಒಂದು ವಾರ ಕಾದ್ರು ಉಪಯೋಗವಾಗಲಿಲ್ಲ. ಮದುವೆ ಇನ್ನೇನು ಮುರಿದಹಾಗೆಯೇ ಅಂತ ಅನ್ಕೊಂಡಿದ್ವಿ. ಆ ಹೊತ್ತಿನಲ್ಲಿ ಮತ್ತೊಂದು ಐಡಿಯಾ ನನ್ನ ತಲೆಗೆ ಹೊಳೆಯಿತು.

ಒಂದು ಟೆನ್ನಿಸ್ ಬಾಲು ಖರೀದಿಸಲು ಹೇಳಿದೆ. ಅದನ್ನು ಗಿಫ್ಟ್ ಪ್ಯಾಕ್ ಮಾಡಲೂ ಹೇಳಿದೆ. ‘‘THE BALL IS IN YOUR COURT, TO FORGIVE AND MEET OVER A CUP OF COFFEE’’ ಅಂತ ಅದರೊಳಗೆ ಪತ್ರ ಬರೆದಿಟ್ಟು ಅಮೆಜಾನ್ ದಿಂದ ಪಾರ್ಸೆಲ್ ಬಂದಿದೆ ಅಂತ ಒಬ್ಬನಿಗೆ ಹೊರಗಡೆ ನಿಲ್ಲಿಸಿದೆ. ಪತ್ರದೊಳಗೆ ಸಮಯ ಮತ್ತು ಸಾತೋಸೆಯ ಹೆಸರೂ ನಮೂದಿಸಿದ್ದೆ. ಸ್ವಲ್ಪ ಸಮಯದ ನಂತರ ಬಂದು ಟೆನ್ನಿಸ್ ಬಾಲ್ ನೋಡಿ ಪತ್ರ ಓದಿದಳು. ಅತ್ತಿತ್ತ ನೋಡಿ, ನಕ್ಕು ಅಲ್ಲಿಂದ ಹೊರಟುಹೋದಳು.

ಸಂಜೆ ಐದರ ಸಮಯ ಕೊಟ್ಟಿತ್ತು. ಸಾತೋಸೆ ಆಕೆಗೆ ಕಾಯುತ್ತಿದ್ದ. ಸಾಯಂಕಾಲದ ಹೊತ್ತು. ಹಗಲು ಮತ್ತು ರಾತ್ರಿ ಒಂದೆಡೆ ಜರಗುವ ಅದ್ಭುತ ಘಳಿಗೆ. ಸಾತೋಸೆ ಹಗಲಾಗಿ ಕುಳಿತಿದ್ದ. ಆಕೆ ಇರುಳಾಗಿ ಬಂದಳು. ಇಳಿಸಂಜೆ ಎಂಬ ಪವಾಡ ಆವಿರ್ಭವಿಸಿತು.

ತುಂಬಾ ಖುಷಿಯಾಗಿದ್ದ. ಅದು ಯಾವ ಕಾರಣಕ್ಕೆ ಒಪ್ಪಿಕೊಂಡಿದ್ದಳೋ ಗೊತ್ತಿಲ್ಲ. ಆದರೆ ಕೊಟ್ಟ ಐಡಿಯಾ ವರ್ಕೌಟ್ ಆಗಿತ್ತು. ಆತ ಖುಷಿಯಿಂದ ಇಡೀ ಟೀಮಿಗೆ ವಿಷಯ ತಿಳಿಸಿದ. ದಿನಾಂಕ ಇನ್ನೇನು ಸ್ವಲ್ಪದರಲ್ಲೇ ಅಂತ ಹೇಳಿದ್ದ. ಟೀಮಿನವರಿಗೆ ಕೋರಮಂಗಲದ ಬಾರ್ಬೆಕ್ಯೂ ನೇಶನ್ ನಲ್ಲಿ ಅದ್ಧುರಿಯಾಗಿ ಪಾರ್ಟಿ ಕೊಡಿಸಿದ್ದ. ಎರಡು ಮೂರು ವಾರದೊಳಗೆ ನಿಶ್ಚಿತಾರ್ಥ ಕೂಡ ಆಯಿತು.

ನಿಶ್ಚಿತಾರ್ಥ ಆದಮೇಲೆ ಫೋನಿನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ. ‘‘ನಡೆಯಲಿ ನಡೆಯಲಿ ನಿಮ್ಮ ಸವಾರಿ’’ ಅಂತ ನಾನು ಅವನನ್ನು ಸದಾ ಕಾಡಿಸುತ್ತಿದ್ದೆ. ಆತ ನಾಚಿ ನೀರಾಗುತ್ತಿದ್ದ. ನನ್ನ ಅಮ್ಮನ ಜೊತೆ ತುಂಬಾ ಸಲುಗೆಯಿಂದಿದ್ದ. ಅಪರೂಪಕ್ಕೆ ನಾನು ಅಮ್ಮನ ಜೊತೆ ಮಾತಾಡುವಾಗ ಮಧ್ಯದಲ್ಲೇ ಫೋನು ಕಸಿದುಕೊಂಡು ‘‘ತುಮಾಚ್ಯಾ ಪೋರಲಾ ಪಣ್ ಲಗ್ನ ಠರವಾ’’ ಅಂದ್ರೆ ನಿಮ್ಮ ಮಗನನ್ನು ಮದುವೆ ಮಾಡಿಸಿ ಅಂತ ದಂಬಾಲು ಬೀಳುತ್ತಿದ್ದ.

ಇದಾದ ಒಂದು ತಿಂಗಳಲ್ಲೇ ಇದೆಲ್ಲ ಜರುಗಿ ಹೋಯಿತು. ಸಾತೋಸೆ ಹೋದ ನಂತರ ಅವನ ನೆನಪುಗಳು ದಟ್ಟವಾಗಿ ಕಾಡತೊಡಗಿದವು. ನಾವು ಮೊದಲು ಭೇಟಿಯಾದದ್ದು. ಕಂಪನಿ ಮತ್ತು ಕೆರಿಯರ್ ಬಗ್ಗೆ ಮಾತಾಡಿದ್ದು. ಒಟ್ಟಿಗೆ ಕೂತು ಹರಟೆ ಹೊಡೆದದ್ದು. ಕ್ಯಾಂಟೀನು, ಸ್ಮೋಕಿಂಗ್ ಝೋನು, ಕ್ರಿಕೆಟ್ ಗ್ರೌಂಡು, ಟೇಬಲ್ ಟೆನ್ನಿಸ್ಸು, ಕೇರಮ್ಮ, ಬರ್ತ್ ಡೇ ಪಾರ್ಟಿಗಳು, ಲೇಟ್ ನೈಟ್ ಔಟಿಂಗು, ಎಂಜಿ ರೋಡು, ಬ್ರಿಗೇಡ್ ರೋಡು, ಸಿಸಿಡಿ, ನಂದಿನಿಗೆ ಬರೆದ ಪತ್ರ - ಎಲ್ಲವೂ ನೆನಪಾಗಿ ಜೀವ ಹಿಂಡಿದಂತಾಗುತಿತ್ತು.

ಸಾತೋಸೆ ಹೋದಮೇಲೆ ಎಚ್ ಆರ್ ಮತ್ತು ಮ್ಯಾನೇಜ್ಮೆಂಟ್ ಮಟ್ಟದಲ್ಲಿ ದೊಡ್ಡ ಚರ್ಚೆಯೇ ಆಗಿತ್ತು. ಪೆನಷನ್ ಪ್ರಾಜೆಕ್ಟು ಕೈತಪ್ಪಿ ಹೋಗಿದ್ದರಿಂದ ಕೆಲವರನ್ನ ರಿಲೀಸ್ ಮಾಡುವ ಯೋಚನೆ ನಡೀತಾ ಇತ್ತು. ಅದರಲ್ಲಿ ಸಾತೋಸೆಯ ಹೆಸರು ಕೂಡ ಇತ್ತು. ಈ ವಿಷಯ ಸಾತೊಸೆಗೆ ಗೊತ್ತಾಗಿತ್ತಾ? ಈ ವಿಷಯ ಅವನಿಗೆ ಗುಟ್ಟಾಗಿ ಯಾರಾದ್ರೂ ಸುದ್ದಿ ಮುಟ್ಟಿಸಿದ್ರಾ? ಒಂದು ವೇಳೆ ಅವನಿಗೆ ಗೊತ್ತಾಗಿದ್ರೆ, ಮದುವೆ ಸಮಯದಲ್ಲಿ ಕೆಲಸಕ್ಕೆ ಕತ್ತು ಬರುತ್ತಿದೆ ಅಂತ ಅವನಿಗೆ ಹೀಗಾಯಿತೇ? ಅಂತ ತುಂಬಾ ಗಂಭೀರ ಚರ್ಚೆ ನಡೆದಿತ್ತು. ಎಲ್ಲರೂ ’ನಾನು ಹೇಳಿಲ್ಲ’ ಅಂತ ಹೇಳಿ ತಮ್ಮ ಜಾಗ ಭದ್ರಪಡಿಸಿಕೊಂಡಿದ್ದರು. ಆದರೆ ಈ ವಿಷಯ ಅವನಿಗೆ ಗೊತ್ತಿತ್ತೋ ಅಥವಾ ಇಲ್ವೋ ಅನ್ನೋದು ಅವನ ಜೊತೆಗೆ ಜೊತೆಗೆ ಹೋಯಿತು.

ಎಲ್ಲೂ ಮನಸ್ಸು ಹತ್ತುತ್ತಿರಲಿಲ್ಲ. ಮ್ಯಾನೇಜರ್ ಜೊತೆ ಮಾತಾಡಿ ಒಂದು ವಾರ ರಜೆ ತೆಗೆದುಕೊಂಡು ಊರಿಗೆ ಹೊರಟೆ. ಅಮ್ಮ ಸಾತೋಸೆಯ ವಿಷಯ ಕೇಳಿ ವಿಷಾದ ಸೂಚಿಸಿದಳು. ಕೆಲಸ ಬಿಟ್ಟು ಇಲ್ಲೇ ಇರಲು ಹೇಳಿದಳು. ನನ್ನ ಮನಸು ಒಪ್ಪಲಿಲ್ಲ. ಮನಸ್ಸು ಏನೋ ಕಳೆದುಕೊಂಡಿತ್ತು. ಏನೋ ಹುಡುಕಲು ತವಕಿಸುತ್ತಿತ್ತು. ಆದರೆ ಏನು ಅಂತ ಗೊತ್ತಾಗುತ್ತಿರಲಿಲ್ಲ. ಈ ಘಟನೆಯಲ್ಲಿ ನನ್ನ ದೋಷ ಎಷ್ಟಿದೆ. ನಾನೇಕೆ ಅವತ್ತು ಅವನ ಜೊತೆ ಊಟಕ್ಕೆ ಹೋಗಲಿಲ್ಲ. ಜೊತೆಯಲ್ಲಿದ್ದರೆ ಏನಾದರು ಮಾಡಬಹುದಿತ್ತು. ಪಾಪ ನಂದಿನಿಯ ಪಾಡು ಏನು? ತನ್ನದೇನೂ ತಪ್ಪಿಲ್ಲದೆ ಅವಳು ಅನುಭವಿಸುವ ಶಿಕ್ಷೆ ಎಷ್ಟು ಕ್ರೂರ. ಸಾತೋಸೆಯ ಅಮ್ಮನಿಗೆ ಎಂಥ ದೊಡ್ಡ ಆಘಾತವಾಗಿರಬೇಕು. ವಯಸ್ಸಿಗೆ ಬಂದ ಮಗ ಕಳೆದುಕೊಳ್ಳೋದು, ಮನೆಯ ಶಕ್ತಿಯೇ ಕಳೆದುಕೊಂಡ ಹಾಗೆ. ದೇವರು ಆ ಶಕ್ತಿ ಮತ್ತೆ ಭರಿಸುವನೇ? ಜಯಮ್ಮನಿಗೂ ಹೀಗೆ ಆಗಿರಬೇಕಲ್ಲ. ಅವಳು ಹೇಗೆ ಇದನ್ನೆಲ್ಲಾ ಸಹಿಸಿಕೊಂಡಳು? ಜಯಮ್ಮನಿಗೆ ಸಿಕ್ಕ ಬದುಕುವ ಧೈರ್ಯ ಸಾತೊಸೆಯ ಅಮ್ಮನಿಗೆ ಸಿಗುವುದೇ? ಜಯಮ್ಮ ಹೇಗೆ ಈಗ ಎಲ್ಲ ಮರೆತು ನಗುತ್ತ ಬದುಕು ನಡೆಸುತ್ತಿದ್ದಾಳೆ? ಆ ನಗುವಿನ ಹಿಂದಿನ ಪ್ರೇರಣೆಯಾದ್ರು ಯಾವುದು? ಆ ಪ್ರೇರಣೆ ಸಾತೋಸೆಯ ಅಮ್ಮನಿಗೂ ಲಭಿಸಲಿ ಅಂತ ಮನಸ್ಸು ಒದ್ದಾಡುತ್ತಿತ್ತು. ಊರಲ್ಲೂ ನೆಮ್ಮದಿ ಸಿಗಲಿಲ್ಲ. ತಿರುಗಿ ಮತ್ತೆ ಬಂದೆ.

ಮೊದಲಿಲ್ಲಿ ಬಂದಾಗ ಎಷ್ಟು ನವಿರಾದ ಭಾವವಿತ್ತು. ಅಪ್ಸರೆಯಂತೆ ಕಂಡ ಕಟ್ಟಡಗಳು ಈಗ ಅಖಾಡಕ್ಕಿಳಿದ ರಾಕ್ಷಸರಂತೆ ಕಾಣುತ್ತಿವೆ. ಹುಲ್ಲು ಹಾಸಿಗೆ ಮುಳ್ಳಿನ ಹೊದಿಕೆಯಾಗಿದೆ. ಹೂವುಗಳು ಬೆಂಕಿಯ ಕೆಂಡದಂತೆ ಕಾಣುತ್ತಿವೆ. ನೀರಿಬುಗ್ಗೆ ಈಗ ರಕ್ತದ ಬುಗ್ಗೆಯಾಗಿ ಚಿಮ್ಮುತ್ತಿದೆ. ಗಂಧರ್ವಲೋಕವೀಗ ನರಕ ಯಾತನೆಯಾಗಿ ಬದಲಾಗಿದೆ. ಇಲ್ಲಿ ಇರಲಾಗುತ್ತಿಲ್ಲ. ಹೊರಡಬೇಕು ಇಲ್ಲಿಂದ. ಎಲ್ಲಾದರೂ ದೂರ.

3. ಟೆಕ್ ಪಾರ್ಕಿನ ಪ್ರಾಂಗಣದಲ್ಲಿ ಅಂದು ಹಗುರಾಗಿ ಬಿದ್ದ ಬೇಸಿಗೆಯ ಅನಿರೀಕ್ಷಿತ ಮಳೆಗೆ, ಗುಂಪು ಗುಂಪಾಗಿ ಅಲ್ಲಲ್ಲಿ ಹರಡಿರುವ ಸಕಲ ಜೀವಿಗಳು, ತಂತಮ್ಮ ತಪ್ತ ಮನಸುಗಳನ್ನು ಸಡಿಲಿಸಿ ನಿಂತಿದ್ದವು. ಯಾವುದೋ ಮ್ಯೂಸಿಯಂ ನೋಡಲು ಬಂದವರಂತೆ, ನಿಂತು ಹೋದ ಮಳೆಯನ್ನು ನೋಡಲು ಜನಸಾಗರವೇ ಗುಂಪು ಗುಂಪಾಗಿ ರಸ್ತೆಗಿಳಿಯುತ್ತಿತ್ತು. ರಸ್ತೆಯ ಮೇಲೆ ನಿಂತ ನೀರನ್ನು ಒದೆಯುತ್ತಾ, ‘‘ಐ ಲೈಕ್ ದಿ ರೈನ್ ವೆರಿ ಮಚ್ ಯು ನೋ’’ ಅಂತ ಹೇಳುತ್ತಾ ಬರುತ್ತಿದ್ದ ಟೆಕ್ಕಿಗಳು, ಟೆಕ್ ಪಾರ್ಕಿನ ಹೊರಗಡೆ ಸಾಲು ಸಾಲಾಗಿ ನಿಂತಿರುವ ಚಹಾ, ಭಜ್ಜಿ, ಸಮೋಸ, ವಡಪಾವಗಳ ಬಂಡಿಗಳ ಮೇಲೆ ಮುತ್ತಿಕ್ಕುತ್ತಿದ್ದರು. ಸಂಜೆ ನಾಲ್ಕರ ಸುಮಾರಿಗೆ, ಪಾರ್ಕಿನೊಳಗೇ ಇರುವ ಸಿಸಿಡಿಯಲ್ಲಿ ಭೇಟಿಯಾಗೋಣ ಅಂತ ಹೇಳಿದ್ದ ಮ್ಯಾನೇಜರ್ ರಿಷಬ್ ಪರಾಶರ್, ನಾಲ್ಕೂವರೆ ಆದರೂ ಪತ್ತೆಯಿರಲಿಲ್ಲ. ತುಸು ಹೊತ್ತಿನ ನಂತರ, ದೂರದಿಂದ ಕುಬ್ಜನಂತೆ ಕಂಡವನು, ಹತ್ತಿರ ಬರು ಬರುತ್ತ ಭೀಮಕಾಯದಂತೆ ಬೆಳೆದು ಎದುರಿಗೆ ನಿಂತ. ಅವನ ಆಗಮನಕ್ಕೆ ಎದ್ದು ನಿಂತ ನನಗೆ ಕೈಕುಲುಕಿ, ‘‘ಸಾರೀ ಫಾರ್ ದಿ ಲೇಟ್’’ ಅಂತ ಹೇಳಿ ಕುಳಿತುಕೊಂಡ. ‘‘ಕಾಫಿ ಹೇಳಿದೀಯಾ?’’ ಅಂತ ಕೇಳಿದ.

ನಾನು ‘‘ಹೇಳಿದ್ದೀನಿ, ಎರಡು ಕ್ಯಾಪಚಿನೋ’’ ಅಂತ ಹೇಳಿದೆ. ‘‘ಗುಡ್.... ಆಲ್ರೈಟ್.... ನಾನು ಆಫೀಸಿನ ಮೀಟಿಂಗ್ ರೂಮಲ್ಲೇ ಮಾತಾಡಬೇಕು ಅನ್ಕೊಂಡಿದ್ದೆ, ಆದರೆ ಮೀಟಿಂಗ್ ರೂಮಿನ ಕಮಟು ವಾಸನೆ ತುಂಬಾ ಹಿಂಸೆ ಆಗುತ್ತದೆ’’ ಅಂತ ಹೇಳಿದ. ನಾನು ಸರಿ ಅಂತ ನಕ್ಕು ಸುಮ್ಮನಾದೆ.

‘‘ನೋಡು, ನಾನು ಸುತ್ತಿ ಬಳಸಿ ಮಾತಾಡೋದಿಲ್ಲ. ಸಾತೋಸೆ ತೀರಿ ಹೋದದ್ದು ನಿನ್ನ ಮೇಲೆ ಎಷ್ಟು ಪರಿಣಾಮ ಬೀರಿದ್ದೆ ಅಂತ ನಮಗೆಲ್ಲರಿಗೂ ಗೊತ್ತು. ನಮಗೂ ಅಷ್ಟೇ ದುಃಖವಾಗಿದೆ. ಅದಕ್ಕೆ ಯಾರು ಏನು ಮಾಡಕ್ಕಾಗಲ್ಲ. ಇಟ್ ಜಸ್ಟ್ ಹ್ಯಾಪನ್ಡ್ ಅಷ್ಟೇ.

ನೀನು ರಜೆಗೆ ಹೋದಾಗ ಎಚ್ ಆರ್ ಜೊತೆ ಮಾತಾಡಿದ್ದೆನೆ. ಕಂಪನಿಯ ಪಾಲಿಸಿ ಪ್ರಕಾರ ಸಿಗಬೇಕಾದ ಸವಲತ್ತುಗಳನ್ನು ಆದಷ್ಟು ಬೇಗ ಸಿಗಲು ಶಿಫಾರಸ್ಸು ಮಾಡಿದ್ದೇನೆ. ಸಾತೋಸೆಯ ಅಮ್ಮನಿಗೂ ಫೋನಿಸಿ ಸಮಾಧಾನ ಹೇಳಿದ್ದೇನೆ. ಪಿ ಎಫ್ ದುಡ್ಡು ತೆಗೆದುಕೊಳ್ಳಲು ಬಂದಾಗ ಭೇಟಿಯಾಗಲು ಹೇಳಿದ್ದೇನೆ. ನನ್ನ ಕೈಯಿಂದಾಗಲಿ ಅಥವಾ ಕಂಪನಿಯ ಕೈಯಿಂದಾಗಲಿ ಯಾವುದೇ ಸಹಕಾರಕ್ಕೂ ನಾವು ಸಿದ್ಧ’’ ಅಂತ ಹೇಳಿದ. ಮತ್ತೆ ಮುಂದುವರೆದು ‘‘ನೋಡು, ನೀನು ತೆಗೆದುಕೊಂಡ ನಿರ್ಧಾರ ತುಂಬಾ ಅವಸರದ್ದು. ನೀನು ಕಂಪನಿ ಬಿಡುತ್ತಿರುವ ವಿಷಯ, ಮ್ಯಾನೇಜ್ಮೆಂಟ್ ಬಳಗದಲ್ಲಿ ಆಗಲೇ ಚರ್ಚೆ ನಡೆಯುತ್ತಿದೆ. ಅವನಿಗೆ ಒಂದು ತಿಂಗ್ಳು ಆನ್‌ಸೈಟ ಕೊಟ್ಟು ಇರಸ್ಕೊಳ್ಳಿ ಅಂತ ಹೇಳ್ತಿದ್ದಾರೆ. ನಿನಗೆ ಗೊತ್ತಿರಬೇಕು, ಪೆನಷನ್ ಪ್ರಾಜೆಕ್ಟು ಕೈತಪ್ಪಿ ಹೋಗಿದೆ. ಹೀಗಾಗಿ ಕೆಲವರನ್ನ ರಿಲೀಸ್ ಮಾಡುವ ಯೋಚನೆ ನಡೀತಾ ಇದೆ. ಆ ಮೀಟಿಂಗ್ ಅಟೆಂಡ್ ಮಾಡಿಯೇ ಇಲ್ಲಿ ಬಂದಿದ್ದೇನೆ. ಯೋಚನೆ ಮಾಡು’’ ಅಂತ ಹೇಳಿದ. ನಾನು ಸುಮ್ಮನೆ ಕುಳಿತಿದ್ದೆ.

‘‘ನೋಡು ನಿನಗೆ ಆನ್‌ಸೈಟ್ ಬೇಡ ಅಂದ್ರೆ, ಟೀಮ್ ಲೀಡ್‌ ಪೊಸಿಷನ್ ಕೊಡ್ತೀವಿ. ಹೇಗೂ ಈಗ ಸಾತೋಸೆ ಇಲ್ಲ. ಅವನ ಜಾಗ ನೀನು ತುಂಬು. ಒಂದು ವರ್ಷದಲ್ಲಿ ನೀನು ನಿನ್ನ ಸಾಮರ್ಥ್ಯ ತೋರಿಸು, ಮುಂದೆ ಬರುವ ಅಪ್ರೈಸಲ್ ಅಲ್ಲಿ ಪ್ರಮೋಟ್ ಮಾಡ್ತೀವಿ. ಒಂಥರಾ ಹಂಗಾಮಿ ನಾಯಕನ ಪಾತ್ರ. ನೀನು ನಮ್ಮನ್ನ ಯಾವತ್ತೂ ನಿರಾಸೆ ಮಾಡಲಾರೆ ಅಂತ ಖುದ್ದು ಡೆಲಿವರಿ ಮ್ಯಾನೇಜರ್ ಹೇಳಿ ಕಳಿಸಿದ್ದಾರೆ’’ ಅಂದ. ‘‘ನೋಡು, ಈ ವಿಷಯ ಇನ್ನು ಅಧಿಕೃತವಾಗಿ ಹೊರಬಂದಿಲ್ಲ. ಸೊ, ಈ ವಿಷಯ ಗೌಪ್ಯವಾಗಿದಷ್ಟು ಸಲೀಸಾಗಿ ನಡೆದು ಹೋಗುತ್ತದೆ’’ ಅಂತ ಹೇಳಿ ಮುಗಿಸಿದ.

ರಿಷಬನ ಮಾತು ಕೇಳಿ ತಣ್ಣನೆಯ ಕ್ರೌರ್ಯದ ವಾಸನೆ ಮೂಗಿಗೆ ಅಪ್ಪಳಿಸಿದಂತಾಯಿತು. ಕೈ ಹಿಡಿದು ನಡೆಸಿದ ಅಪ್ಪನನ್ನೇ ಕೊಂದು, ಅವನ ಜಾಗ ಆಕ್ರಮಿಸಿದಂತೆ ಕಂಡಿತು. ಇಂದು ಸಾತೋಸೆ, ನಾಳೆ ನಾನು. ಒಬ್ಬರಿಗೊಬ್ಬರು ತಿಂದಂತೆ ಅನಿಸಿತು. ನನ್ನನ್ನು ತಿನ್ನೋನು ಈಗ ಕಾಲೇಜಿನ ಕೊನೆಯ ಸೆಮಿಸ್ಟರಲ್ಲೋ ಅಥವಾ ಇಂಟರ್ವ್ಯೂ ಕೊಡುತ್ತಲೋ ಅಥವಾ ಈಗಾಗಲೇ ಕಂಪನಿ ಸೇರಿರಬೇಕು ಅಂತನಿಸಿತು. ರಿಷಬ್ ಎದ್ದು ನಿಂತು ‘‘ನಾನೀಗ ಹೊರಡಬೇಕು, ಇನ್ನೊಂದು ಮೀಟಿಂಗ್ ನನ್ನನ್ನ ಕಾಯ್ತಿದೆ’’ ಅಂತ ಹೊರಟು ಹೋದ.

ಕತ್ತಲಾಗಿತ್ತು. ಮನೆಗೆ ಹೋಗುವ ಮನಸಿರಲಿಲ್ಲ. ಎದ್ದು ನನ್ನ ಲ್ಯಾಪ್‌ಟಾಪು ಮತ್ತು ಬ್ಯಾಗು ತೆಗೆದುಕೊಳ್ಳಲು ಆಫೀಸಿನ ಒಳಗಡೆ ಬಂದೆ. ಸ್ಮಶಾನ ಮೌನ ಆವರಿಸಿತ್ತು. ಸಾತೋಸೆಯ ಆ ಖಾಲಿ ಕುರ್ಚಿ ಕಂಡಿತು. ರಿಷಬನ ಆಫರ್ ಸ್ವೀಕರಿಸಿದರೆ ನಾಳೆಯಿಂದ ಇದೇ ಕುರ್ಚಿಯಮೇಲೆ ಕುಳಿತುಕೊಳ್ಳಬೇಕು. ಆ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಹಾಗೆ ನೆನೆಸಿಕೊಂಡೆ. ‘ಚರ್....’ ಎನ್ನುವ ಕುರ್ಚಿಯ ಸದ್ದು ಕೇಳಿಸಿತು. ಎದೆ ಝಲ್ ಎಂದಂಗಾಯಿತು. ಎದೆಯಮೇಲೆ ಕೈಯಿಟ್ಟು ನೋಡಿದೆ. ಸಾತೋಸೆಯ ಆತ್ಮ ಕಂಪಿಸಿದಂತಾಯಿತು. ಸುತ್ತ ಕಣ್ಣು ಹಾಯಿಸಿದೆ. ನೋಡಿದಲೆಲ್ಲ ಖಾಲಿ ಕುರ್ಚಿಗಳೇ ಕಂಡವು. ಎಲ್ಲಾ ಕುರ್ಚಿಗಳೂ ಚರ್.... ಚರ್.... ಅಂತ ಒಂದೇ ಸಮನೆ ರೋದಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT