ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ರಾಜಕಾರಣಕ್ಕಾಗಿ ಪಕ್ಷ

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಎಂಬ ಹೆಸರಿನ ಪಕ್ಷ ಕಟ್ಟಿಕೊಂಡು ನಟ ಉಪೇಂದ್ರ ರಾಜ್ಯ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. ‘ರಿಯಲ್‌ ಸ್ಟಾರ್‌’ ಸಿನಿಮಾ ಕ್ಷೇತ್ರದಲ್ಲಿ ಅವರಿಗಿರುವ ಬಿರುದು. ಈ ‘ಸ್ಟಾರ್‌’ ರಿಯಲ್‌ ರಾಜಕೀಯದಲ್ಲಿಯೂ ಖುಲಾಯಿಸುತ್ತದೆಯೇ ಎಂಬ ಪ್ರಶ್ನೆಗೆ ಮತದಾರರೇ ಉತ್ತರಿಸಬೇಕು. ‘ಪ್ರತಿನಿಧಿ’ ಪ್ರಜೆಗಳ ‘ಕೂಲಿಕಾರನಾಗಿರಬೇಕು’ ಎಂಬ ಕಾರಣಕ್ಕೆ ಖಾಕಿ ಬಟ್ಟೆ ತೊಟ್ಟೇ ಪಕ್ಷದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಉಪೇಂದ್ರ, ತಮ್ಮ ಹೊಸ ಪಕ್ಷದ ರೂಪುರೇಷೆ ಕುರಿತು ಮಾತನಾಡಿದ್ದಾರೆ.

* ಹೊಸ ರಾಜಕೀಯ ಪಕ್ಷ ಕಟ್ಟಬೇಕು ಅನಿಸಿದ್ದು ಯಾಕೆ?
ರಾಜಕೀಯಕ್ಕೆ ಬರಬೇಕು ಎನ್ನುವುದು ತುಂಬ ಚಿಕ್ಕ ವಯಸ್ಸಿನಿಂದಲೂ ಇದ್ದ ಆಸೆ. ಕರ್ನಾಟಕ ಎಷ್ಟುದ್ದ, ಎಷ್ಟಗಲ ಇದೆ ಎನ್ನುವುದು ಗೊತ್ತಿಲ್ಲದ ವಯಸ್ಸಿನಿಂದಲೇ ಈ ರಾಜ್ಯಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು, ಇಲ್ಲಿ ಎಲ್ಲವೂ ಚೆನ್ನಾಗಿರಬೇಕು ಅನಿಸುತ್ತಿತ್ತು. ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿ ಗಳಿಸಿದರೆ ಜನ ನನ್ನ ಮಾತು ಕೇಳುತ್ತಾರೆ ಎಂಬ ಕಾರಣಕ್ಕೆ ಸಿನಿಮಾಗೆ ಹೋದೆ. ಎಷ್ಟೋ ಸಿನಿಮಾಗಳಲ್ಲಿ  ಬದಲಾವಣೆ ಕುರಿತು ಹೇಳಲು ಪ್ರಯತ್ನಿಸಿದೆ. ನನ್ನಿಂದ ಏನಾದರೂ ಬದಲಾವಣೆ ತರಲು ಸಾಧ್ಯವಾಗಬಹುದಾ ಎಂಬ ಆಸೆ ಮತ್ತು ಅನುಮಾನಗಳ ನಡುವಿನ ಸಂಘರ್ಷದಲ್ಲಿ ಆಸೆಯೇ ಗೆದ್ದು ಒಂದು ಹೆಜ್ಜೆ ಮುಂದಕ್ಕಿಟ್ಟಿದ್ದೀನಿ.

* ನಿಮ್ಮ ಪಕ್ಷದ ಮುಖ್ಯ ಉದ್ದೇಶ ಏನು?
ಒಂದೇ ಶಬ್ದದಲ್ಲಿ ಹೇಳಬೇಕು ಎಂದರೆ ‘ಸತ್ಯ’. ಸತ್ಯ ಏನು ಎಂದು ಹುಡುಕಿದರೆ ಅದರಲ್ಲಿಯೇ ಎಲ್ಲವೂ ಸಿಕ್ಕುಬಿಡುತ್ತದೆ. ನಾವು ಒಂದು ವ್ಯವಸ್ಥೆಗೆ ತೆರಿಗೆ ಕಟ್ಟುತ್ತೇವೆ. ಆ ವ್ಯವಸ್ಥೆಯಿಂದ ನಮಗೆ ತಿರುಗಿ ಸರಿಯಾದ ಮೂಲಭೂತ ಸೌಕರ್ಯಗಳು ಸಿಗಬೇಕು. ಇದು ಪ್ರಜಾಪ್ರಭು ತ್ವದ ಮೂಲತತ್ವ. ಆದರೆ, ಆ ವ್ಯವಸ್ಥೆಯೇ ಈಗ ದಂಧೆಯಾಗಿ ಬಿಟ್ಟಿದೆ. ಮೂಲ ಉದ್ದೇಶದ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಮತ್ತೊಂದು ಪ್ರಮುಖ ಉದ್ದೇಶ, ನೂರಕ್ಕೆ ನೂರರಷ್ಟು ಪಾರದರ್ಶಕ ವ್ಯವಸ್ಥೆ ತರುವುದು. ಇಂದು ಬಹುತೇಕ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದತ್ತ ತಲೆಯನ್ನೇ ಹಾಕುವುದಿಲ್ಲ. ಜನರ ನಡುವೆ ಇದ್ದು, ಅವರ ಬದುಕನ್ನು ಅರಿತುಕೊಂಡು ಕೆಲಸ ಮಾಡುವಂಥ ಪ್ರತಿನಿಧಿಗಳನ್ನು ರೂಪಿಸಬೇಕು. ದುಡ್ಡು, ಜಾತಿ, ಜನಬಲ, ಜನಪ್ರಿಯತೆ ಇಲ್ಲದಿದ್ದರೆ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಭಾವನೆಯನ್ನು ಜನರ ಮನಸ್ಸಲ್ಲಿ ಗಟ್ಟಿಯಾಗಿ ನೆಟ್ಟುಬಿಟ್ಟಿದ್ದೀವಿ ನಾವು. ಅದನ್ನು ಮುರಿದು ಸತ್ಯದ ಆಧಾರದ ಮೇಲೆ ಪರ್ಯಾಯ ದಾರಿಯನ್ನು ಹುಡುಕಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶ. ಇಂದಿನ ವ್ಯವಸ್ಥೆಯನ್ನು ಬದಲಾಯಿಸಲು ಸ್ವಲ್ಪ ಸ್ಮಾರ್ಟ್‌ನೆಸ್‌ ಬೇಕು.

* ಕರ್ನಾಟಕದಲ್ಲಿ ಸಿನಿಮಾ ನಟರು ರಾಜಕೀಯದಲ್ಲಿ ದೊಡ್ಡ ಯಶಸ್ಸು ಕಂಡಿದ್ದು ತುಂಬ ವಿರಳ. ನಟನಾಗಿ ನಿಮ್ಮ ಜನಪ್ರಿಯತೆ ರಾಜಕೀಯದಲ್ಲಿ ಹೇಗೆ ಸಹಾಯಕ ಆಗಬಹುದು?

ಯಾರೊಬ್ಬರೂ ಪರ್ಯಾಯ ಪಕ್ಷ ಕಟ್ಟಿದ ಉದಾಹರಣೆಗಳೇ ಇಲ್ವಲ್ಲ ನಮ್ಮಲ್ಲಿ. ವೈಯಕ್ತಿಕವಾಗಿ ಬೇರೆ ರಾಜಕೀಯ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಿದವರಿದ್ದಾರೆ. ನಾನು ಆ ಬಗ್ಗೆಯೂ ಯೋಚಿಸಿದೆ. ಆದರೆ, ನಮ್ಮಲ್ಲಿ ಬಿಜಿನೆಸ್‌ ರಾಜಕೀಯ ಇದೆ. ನಾನು ಆ ವರ್ತುಲದಲ್ಲಿ ಸಿಲುಕಿ ಭ್ರಮನಿರಸನ ಹೊಂದುವ ಬದಲು ನಾನೇ ಹೊಸ ಪಕ್ಷ ಕಟ್ಟಿದರೆ, ಅದರಿಂದ ಜನರಿಗೆ ಒಂದು ಸಂದೇಶವಾದರೂ ಹೋಗುತ್ತದೆ ಎಂಬುದು ನನ್ನ ಉದ್ದೇಶ.

* ಕರ್ನಾಟಕದಲ್ಲಿ ಎರಡು ಪ್ರಮುಖರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷ ಇದೆ. ಅಂಥ ಘಟಾನುಘಟಿಗಳ ಜತೆ ನೀವು ಹೇಗೆ ಸ್ಪರ್ಧಿಸುತ್ತೀರಿ?

ನಾನು ರಾಜಕೀಯದಲ್ಲಿ ಬದಲಾವಣೆ ತರಲು ಹೋಗ್ತಿಲ್ಲ. ರಾಜಕೀಯವನ್ನೇ ಬದಲಾಯಿಸಿ ಪ್ರಜಾಕೀಯ ಮಾಡಲು ಹೋಗುತ್ತಿದ್ದೀನಿ. ನಾನು ಯಾರ ಜತೆಗೂ ಸ್ಪರ್ಧಿಸಲು ಹೋಗುತ್ತಿಲ್ಲ. ನಾನು ಪ್ರತ್ಯೇಕವಾಗಿ ಪ್ರಜೆಗಳ ಜತೆ ಇದ್ದೇನೆ. ಅವರು ಏನು ಮಾಡಬಹುದು ಎಂಬುದನ್ನು ಹೇಳು
ತ್ತಿದ್ದೇನೆ. ಈ ಕೆಲಸವನ್ನು ನಾನೇ ಮಾಡಬೇಕು ಅಂತಲೂ ಇಲ್ಲ. ಈಗಾಗಲೇ ಇರುವ ಪಕ್ಷಗಳು ನನಗಿಂತ ಸುಲಭವಾಗಿ ಮಾಡಬಹುದು.

* ಕರ್ನಾಟಕದಲ್ಲಿ ಈ ಹಿಂದೆ ಪರ್ಯಾಯ ರಾಜಕೀಯ ದಾರಿ ಹುಡುಕಿಕೊಳ್ಳುವ ಪ್ರಯತ್ನಗಳು ವಿಫಲವಾಗಿರುವುದೇ ಹೆಚ್ಚು. ನೀವು ರಾಜಕೀಯದಲ್ಲಿ ಗಟ್ಟಿಯಾಗಿ ನಿಲ್ಲುತ್ತೀರಿ ಎಂಬ ನಂಬಿಕೆ ಇದೆಯೇ?

ಇಲ್ಲಿ ಶೇ 20ರಷ್ಟು ಜನ ಗಲಾಟೆ ಮಾಡ್ತಿದ್ದಾರೆ. ಉಳಿದ ಶೇ 80ರಷ್ಟು ಜನ ಕಷ್ಟಪಟ್ಟು ದುಡಿದು, ಮಕ್ಕಳನ್ನು ಕಷ್ಟಪಟ್ಟು ಓದಿಸಿಕೊಂಡು ಸುಮ್ಮನೇ ಅವರಷ್ಟಕ್ಕೆ ಇದ್ದಾರೆ, ಪಾಪ. ಆ 80ರಷ್ಟು ಜನ ಮಾತನಾಡದೇ ಇರುವುದರಿಂದ ಮಾತಾಡುವ 20ರಷ್ಟು ಜನರನ್ನೇ ನೂರರಷ್ಟು ಎಂಬಂತೆ ಬಿಂಬಿಸುತ್ತಿದ್ದೇವೆ. ಇದರಿಂದ ಎಲ್ಲರೂ ಸರಿ ಇಲ್ಲ ಎಂಬ ಭಾವನೆ ಗಟ್ಟಿಯಾಗಿದೆ. ಈ ಮನಸ್ಥಿತಿ ಬದಲಾಗಬೇಕು. ಪ್ರತಿಯೊಂದನ್ನೂ ಪ್ರಶ್ನಿಸುವ ವಾತಾವರಣ ನಿರ್ಮಾಣ ಮಾಡಬೇಕು.

* ಚುನಾವಣೆ ಎದುರಿಸಲು ಆರ್ಥಿಕ ಸಂಪನ್ಮೂಲ ಹೇಗೆ ಹೊಂದಿಸಿಕೊಳ್ಳುತ್ತೀರಿ?

ಏನು ಸಂಪನ್ಮೂಲ ಬೇಕು? ಒಂದು ಕಾಲದಲ್ಲಿ ಈ ರ‍್ಯಾಲಿಗಳು, ಸಮಾವೇಶಗಳು ಬೇಕಾಗಿದ್ದವು ಆದರೆ ಈಗ ಜನರು ಬೈಯುತ್ತಿದ್ದಾರೆ. ಟ್ರಾಫಿಕ್‌ ಜಾಮ್‌, ಅದೂ ಇದು ಎಂದು. ‘ಯಾಕಾದರೂ ಇವರೆಲ್ಲ ಬರ್ತಾರೋ’ ಎಂದು ಬೈಯುವಂಥ ಜನ ಶೇ 80ರಷ್ಟಿದ್ದಾರೆ. ಅದರ ಬದಲು ಮಾಧ್ಯಮಗಳ ಮೂಲಕವೇ ಜನರನ್ನು ತಲುಪಬಹುದಲ್ವಾ? ಟಿ.ವಿ., ಪತ್ರಿಕೆಗಳು ಮನೆಮನೆಗಳಿಗೂ ತಲುಪುತ್ತವೆ. ಸಾಮಾಜಿಕ ಜಾಲತಾಣಗಳಿವೆ. ಅವೆಲ್ಲವನ್ನೂ ಬಿಟ್ಟು ಇನ್ನೂ ಯಾಕೆ ಹಳೇ ಶೈಲಿಯಲ್ಲಿ ಹಣ ಖರ್ಚು ಮಾಡಬೇಕು?

* ನಿಮ್ಮ ಪಕ್ಷದಿಂದ ಜನರು ಯಾವ ರೀತಿಯ ಅಭ್ಯರ್ಥಿಗಳನ್ನು ನಿರೀಕ್ಷಿಸಬಹುದು?

ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಮ್ಮ ಜವಾಬ್ದಾರಿ. ಅವರು ಕರ್ನಾಟಕದ ಬಗ್ಗೆ ಏನು ತಿಳಿದುಕೊಂಡಿದ್ದಾರೆ? ಅವರ ಬಳಿ ಒಳ್ಳೆಯ ಯೋಜನೆಗಳು ಇವೆಯಾ? ಸಂವಿಧಾನದ ಬಗ್ಗೆ ತಿಳಿದುಕೊಂಡಿದ್ದಾರಾ? ಸಮಸ್ಯೆಗಳನ್ನು ಬಗೆಹರಿಸಲು ಯಾವ ರೀತಿ ದಾರಿ ಹುಡುಕಿದ್ದಾರೆ? ಇದನ್ನೆಲ್ಲ ಪರೀಕ್ಷಿಸಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT