ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ವಿಶ್ವಕಪ್‌ ಅರ್ಹತೆ ಕನಸು

ಮಹಿಳೆಯರ ಏಷ್ಯಾ ಕಪ್ ಹಾಕಿ; ಪ್ರಶಸ್ತಿಗಾಗಿ ಚೀನಾ ಎದುರು ಪೈಪೋಟಿ
Last Updated 4 ನವೆಂಬರ್ 2017, 19:36 IST
ಅಕ್ಷರ ಗಾತ್ರ

ಕಾಕಮಿಗಾರ, ಜಪಾನ್: ಮುಂಬರುವ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಕನಸಿನೊಂದಿಗೆ ಕಣಕ್ಕಿಳಿಯಲಿರುವ ಭಾರತ ಮಹಿಳೆಯರ ಹಾಕಿ ತಂಡ ಏಷ್ಯಾಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾನುವಾರ ಚೀನಾ ತಂಡದೊಂದಿಗೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಇಲ್ಲಿ ಪ್ರಶಸ್ತಿ ಗೆದ್ದರೆ ಭಾರತ ತಂಡ ಮುಂದಿನ ವರ್ಷ ನಡೆಯುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದೆ. ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ರಾಣಿ ರಾಂಪಾಲ್‌ ಬಳಗ ಲೀಗ್ ಹಂತದಲ್ಲಿ ಚೀನಾ ತಂಡವನ್ನು 4–1 ಗೋಲುಗಳಲ್ಲಿ ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಕಜಕಸ್ತಾನ ಹಾಗೂ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಭಾರತದ ಆಟಗಾರ್ತಿಯರು ಗೆದ್ದಿದ್ದರು. ಇದೇ ಸಾಮರ್ಥ್ಯದೊಂದಿಗೆ ಆಡಿದರೆ ಚೀನಾ ಎದುರು ಗೆಲುವು ಕಟ್ಟಿಟ್ಟ ಬುತ್ತಿ.

ಆದರೆ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿರುವ ಚೀನಾ ತಂಡ ಯಾವುದೇ ಕ್ಷಣದಲ್ಲಿಯೂ ಪುಟಿದೇಳುವ ಸಾಮರ್ಥ್ಯ ಹೊಂದಿದೆ. ಈ ತಂಡದ ಫಾರ್ವರ್ಡ್ ಆಟಗಾರ್ತಿಯರು ವಿಶೇಷ ಪರಿಣತಿ ಹೊಂದಿದ್ದಾರೆ. ಭಾರತದ ಡಿಫೆಂಡರ್‌ಗಳಿಗೆ ಅವರು ಪ್ರಬಲ ಸವಾಲು ಒಡ್ಡಬಲ್ಲರು. ಎದುರಾಳಿ ತಂಡದ ಗೋಲುಗಳನ್ನು ತಡೆಯಲು ಭಾರತ ವಿಭಿನ್ನ ತಂತ್ರಗಳನ್ನು ರೂಪಿಸಬೇಕಿದೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಗುಂಪು ಹಂತದ ಪಂದ್ಯದಲ್ಲಿ 2–3 ಗೋಲುಗಳಲ್ಲಿ ಚೀನಾ ಎದುರು ಸೋಲು ಕಂಡಿತ್ತು. ಆದರೆ ಫೈನಲ್‌ನಲ್ಲಿ 2–1ರಲ್ಲಿ ಚೀನಾವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಜಪಾನ್ ವಿರುದ್ಧದ ಪಂದ್ಯದಲ್ಲಿ 4–2 ಗೋಲುಗಳ ಅಂತರದಲ್ಲಿ ಜಯಿಸಿದ ಬಳಿಕ ಭಾರತದ ಆಟಗಾರ್ತಿಯರಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೆಚ್ಚಿದೆ.

ಭಾರತದ ಫಾವರ್ಡ್‌ ವಿಭಾಗ ಬಲಿಷ್ಠವಾಗಿದೆ. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಆಡಿದೆ. ಟೂರ್ನಿಯಲ್ಲಿ ಭಾರತ ಒಟ್ಟು 27 ಗೋಲುಗಳನ್ನು ದಾಖಲಿಸಿದೆ. ಇದರಲ್ಲಿ ಎಂಟು ಗೋಲುಗಳನ್ನು ಗುರ್ಜಿತ್ ಕೌರ್ ತಂದುಕೊಟ್ಟಿದ್ದಾರೆ. ಇಲ್ಲಿ ದಾಖಲಾದ ವೈಯಕ್ತಿಕ ಮೂರನೇ ಅತ್ಯಧಿಕ ಸ್ಕೋರ್ ಇದಾಗಿದೆ. ನವಜ್ಯೋತ್ ಹಾಗೂ ನವನೀತ್ ತಲಾ ನಾಲ್ಕು ಗೋಲು ಗಳಿಸಿದ್ದಾರೆ.

ಜಯದ ವಿಶ್ವಾಸದಲ್ಲಿ ರಾಣಿ: ‘ಭಾರತ ಪುರುಷರ ತಂಡ ಏಷ್ಯಾ ಕಪ್ ಜಯಿಸಿದ್ದು ನಮಗೆ ಸ್ಪೂರ್ತಿ ನೀಡಿದೆ. ಈಗ ನಮ್ಮ ಸರದಿ. ಡ್ರೆಸಿಂಗ್ ಕೊಠಡಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿ ಆಟಗಾರ್ತಿಯರು ಇದ್ದಾರೆ. ಫೈನಲ್‌ ಪಂದ್ಯಕ್ಕಾಗಿ ಅತ್ಯುತ್ತಮ ಸಿದ್ದತೆ ನಡೆಸಿದ್ದೇವೆ’ ಎಂದು ಭಾರತ ತಂಡದ ನಾಯಕಿ ರಾಣಿ ರಾಂಪಾಲ್ ಹೇಳಿದ್ದಾರೆ.

‘ಜಪಾನ್ ಎದುರು ನಾವು ಉತ್ತಮವಾಗಿ ಆಡಿದ್ದೆವು. ಫೈನಲ್‌ ಪಂದ್ಯದಲ್ಲಿ ಹೊಸ ಪ್ರಯೋಗಗಳನ್ನು ಮಾಡಲಿದ್ದೇವೆ. ಕೋಚ್ ಈ ಪಂದ್ಯಕ್ಕಾಗಿ ನಮಗೆ ವಿಶೇಷ ತರಬೇತಿ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಫೈನಲ್ ಪಂದ್ಯವಾಗಿದ್ದರಿಂದ ಚೀನಾ ತಂಡವನ್ನು ನಾವು ಸುಲಭವಾಗಿ ಪರಿಗಣಿಸುವಂತಿಲ್ಲ. ಹೊಸ ಯೋಜನೆಯೊಂದಿಗೆ ಪ್ರಬಲ ಪೈಪೋಟಿ ಒಡ್ಡಲಿದ್ದೇವೆ’ ಎಂದು ರಾಂಪಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT