ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಂಡವ ವನದ ಹಕ್ಕಿ

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹೇಳುವೆ ಕೇಳಿರಿ ಚಿಣ್ಣರೆ ನಿಮಗೆ
ಹಕ್ಕಿಯ ತ್ಯಾಗದ ಕತೆಯೊಂದು
ಆಶ್ರಯ ಕೊಟ್ಟ ಮರಕ್ಕಾಗಿ ತನ್ನ
ಪ್ರಾಣವ ತೆತ್ತ ಪರಿಯನ್ನು

ಅಗ್ನಿ ದೇವಗೆ ಅಜೀರ್ಣವಾಗಿ
ಹೊಟ್ಟೆಯ ನೋವು ಬಂದಿತ್ತು
ಧನ್ವಂತರಿಯೆಂಬ ವೈದ್ಯರನ್ನು
ತಕ್ಷಣ ಕರೆಯಿಸಲಾಗಿತ್ತು

ಅಗ್ನಿದೇವನ ಪರೀಕ್ಷಿಸಿ ವೈದ್ಯರು
ಸಲಹೆಯೊಂದನು ಕೊಟ್ಟರು
ಉದರ ನೋವಿನ ಶಮನಕೆ ಔಷಧಿ
ಸಸ್ಯಗಳೇ ಮದ್ದು ಎಂದರು

ಖಾಂಡವ ವನದಲಿ ಗಿಡಮೂಲಿಕೆಗಳು
ಯಥೇಚ್ಛವಾಗಿ ದೊರೆಯುವವು
ಈಗಲೇ ಹೋಗಿ ವನವನು ಸವಿಯಲು
ನೋವಿಗೆ ಮುಕ್ತಿಯು ಲಭಿಸುವುದು

ವೈದ್ಯರ ಮಾತಿಗೆ ಮನ್ನಣೆ ಕೊಟ್ಟು
ಖಾಂಡವ ವನವನು ಧಹಿಸಲು
ಶುರುವನು ಹಚ್ಚಿದ ಅಗ್ನಿದೇವನು
ಔಷಧೀ ಸಸ್ಯಗಳೆಲ್ಲವನು

ವನವದು ಹೊತ್ತಿ ಉರಿಯಲು ಇಂದ್ರಗೆ
ಕೋಪವು ನೆತ್ತಿಗೆ ಏರಿತ್ತು
ತಡವನು ಮಾಡದೆ ವನದೊಳು ರಭಸದಿ
ಸುರಿಯಲು ತೊಡಗಿದ ಮಳೆಯನ್ನು

ಅಗ್ನಿದೇವನು ಓಡುತ ಹೋಗಿ
ಕಂಡನು ಕೃಷ್ಣಾರ್ಜುನರನ್ನು
ಖಾಂಡವ ವನವನು ಧಹಿಸಲು ತನಗೆ
ರಕ್ಷಣೆಯನ್ನು ಕೋರಿದನು

ಒಡನೆ ಅರ್ಜುನ ತನ್ನಯ ಬಾಣದಿ
ಗಗನಕೆ ಚಪ್ಪರ ತೊಡಿಸಿದನು
ಕೆಳಗಡೆ ಒಂದ್ಹನಿ ಬೀಳದ ಹಾಗೆ
ತಡೆಯನು ಮಳೆಗೆ ಒಡ್ಡಿದನು

ಇಂದ್ರನ ಸುತನಿಗೆ ಧನ್ಯತೆ ಅರ್ಪಿಸಿ
ನಿರ್ಭಯಗೊಂಡು ಅಗ್ನಿದೇವನು
ಖಾಂಡವ ವನವನು ಸುಟ್ಟು ಹಾಕಲು
ಸಂತಸದಿಂದಲಿ ತೊಡಗಿದನು

ಆ ವನದಲಿ ಇರುವಾ ಮರದಲಿ ಒಂದು
ಹಕ್ಕಿಯು ಆಶ್ರಯ ಪಡೆದಿತ್ತು
ಅಗ್ನಿದೇವನ ಉದರಕೆ ಆ ಮರ
ಆಹುತಿಯಾಗಲು ತೊಡಗಿತ್ತು

ಗಾಬರಿಗೊಂಡಾ ಹಕ್ಕಿಯು ಮರವನು
ಉಳಿಸಲು ಉಪಾಯ ಹೂಡಿತ್ತು
ಹತ್ತಿರ ಹರಿಯುವ ತೊರೆಯಲಿ ಮುಳುಗಿ
ರೆಕ್ಕೆಯ ನೆನೆಸಿ ತಂದಿತ್ತು

ನೆನೆದಾ ದೇಹದ ರೆಕ್ಕೆಗಳಿಂದಲಿ
ಮರಕೆ ನೀರನು ಸಿಡಿಸಿತ್ತು
ಹೊತ್ತಿದ ಅಗ್ನಿಗೆ ಹಕ್ಕಿಯ ಅಲ್ಪ
ನೀರದು ನಿಲುಕದೆ ಹೋಗಿತ್ತು

ಎಷ್ಟೋ ಹೊತ್ತು ಹಕ್ಕಿಯು ಹೀಗೆ
ಪ್ರಯಾಸವನ್ನು ಪಟ್ಟಿತ್ತು
ತನ್ನಯ ಪ್ರಾಣವು ಮರದಾ ಜೊತೆಗೆ
ದಹಿಸುವವರೆಗೂ ಶ್ರಮಿಸಿತ್ತು

ಹಕ್ಕಿಯ ಕಾಳಜಿ ಕಣ್ಣಾರೆ ಕಂಡ
ಇಂದ್ರನ ಮನವು ಕಲುಕಿತ್ತು
ಖಾಂಡವ ದಹನದ ಜೊತೆಯಲಿ ಹಕ್ಕಿಯ
ತ್ಯಾಗದ ಕತೆಯೂ ಬೆರೆತ್ತಿತ್ತು.

ಚಿತ್ರಗಳು; ಮದನ್‌ ಸಿ.ಪಿ.
.......
ಸೋಮಲಿಂಗ ಬೇಡರ ಆಳೂರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT