ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪೊಪ್ಪಿಕೊಂಡರೂ ಆಯಿತು ಬಿಡುಗಡೆ!

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿರುವ ಒಂದು ಬಂಗಲೆಯಲ್ಲಿ 60ರ ಆಸುಪಾಸಿನ ಗೀತಾ ಮತ್ತು ಲತಾ ಸಹೋದರಿಯರು ವಾಸವಾಗಿದ್ದರು. ಅವಿವಾಹಿತರಾಗಿದ್ದ ಇಬ್ಬರೂ ಈ ಮನೆಯಲ್ಲಿಯೇ ಬಹಳ ವರ್ಷಗಳಿಂದ ನೆಲೆಸಿದ್ದರು. ಗೌರಿ ಎಂಬಾಕೆ ದಿನನಿತ್ಯವೂ ಆ ಮನೆಗೆ ಕೆಲಸಕ್ಕೆ ಬಂದು ಹೋಗುತ್ತಿದ್ದಳು.

ಈ ಸಹೋದರಿಯರ ಸಂಬಂಧಿಯೊಬ್ಬರು ಅಮೆರಿಕದಲ್ಲಿ ವಾಸವಾಗಿದ್ದರು. ಬೆಂಗಳೂರಿನಲ್ಲಿದ್ದ ಅವರ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿವೇಶನವೊಂದನ್ನು ಅವರು ಮಾರಲು ಇಚ್ಛಿಸಿದ್ದರು. ಆದ್ದರಿಂದ ಅದರ ‘ಪವರ್‌ ಆಫ್‌ ಅಟಾರ್ನಿ’ಯನ್ನು ಗೀತಾ ಅವರ ಹೆಸರಿಗೆ ಮಾಡಿ, ಅದನ್ನು ಮಾರುವಂತೆ ವಿನಂತಿಸಿಕೊಂಡರು. ನಿವೇಶನ ಮಾರಾಟವಾಯಿತು.

ಈ ಮಾರಾಟದ ಸುದ್ದಿಯನ್ನು ದೂರವಾಣಿ ಮೂಲಕ ಸಂಬಂಧಿಗೆ ತಿಳಿಸಿದರು ಗೀತಾ. ‘ಇಷ್ಟು ಕೋಟಿ ರೂಪಾಯಿಗೆ ನಿವೇಶನ ಮಾರಾಟ ಆಗಿದೆ. ಹಣವೂ ನಮ್ಮ ಕೈಸೇರಿದೆ’ ಎಂದರು. ಇದನ್ನೆಲ್ಲಾ ಅಲ್ಲಿಯೇ ಇದ್ದ ಗೌರಿ ಕೇಳಿಸಿಕೊಂಡಳು.

***

ಇದಾದ ಎರಡು ದಿನಗಳ ನಂತರ ಗೌರಿ ಕೆಲಸಕ್ಕೆಂದು ಬಂದು ನೋಡಿದಾಗ ಇಬ್ಬರೂ ಸಹೋದರಿಯರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿತು. ಚಾಕುವಿನಿಂದ ಇರಿದು ಇಬ್ಬರ ಹತ್ಯೆ ಮಾಡಲಾಗಿತ್ತು. ಕೂಡಲೇ ಆಕೆ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸುತ್ತಾಳೆ. ಎರಡು ದಿನಗಳಿಂದ ತಾನು ಕೆಲಸಕ್ಕೆ ಬಂದಿರಲಿಲ್ಲವೆಂದೂ, ಪೊಲೀಸರಿಗೆ ಹೇಳಿಕೆ ನೀಡುತ್ತಾಳೆ.

ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಸಹೋದರಿಯರ ಚಿನ್ನದ ಕಿವಿಯೋಲೆ, ಕುತ್ತಿಗೆಯಲ್ಲಿದ್ದ ಚೈನು, ಚಿನ್ನದ ಬಳೆಗಳೆಲ್ಲಾ ಕೊಲೆಗಾರರು ತೆಗೆದುಕೊಂಡು ಹೋಗಿರುವುದು ತಿಳಿಯುತ್ತದೆ. ಇದು ಹಣಕ್ಕಾಗಿ ನಡೆದ ಕೊಲೆ ಎಂದು ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡುತ್ತಾರೆ.

ಅಕ್ಕಪಕ್ಕದವರನ್ನೆಲ್ಲಾ ವಿಚಾರಿಸಿ, ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ನೇರವಾಗಿ ಸಂದೇಹ ಬರುವುದು ಗೌರಿಯ ಮೇಲೆ. ಎರಡು ದಿನಗಳ ಹಿಂದೆ ಗೌರಿ ಮನೆಗೆ ಬಂದದ್ದನ್ನು ಪಕ್ಕದ ಮನೆಯಲ್ಲಿದ್ದ ವಕೀಲರೊಬ್ಬರು ತಾವು ನೋಡಿರುವುದಾಗಿ ಹೇಳುತ್ತಾರೆ. ಅಷ್ಟೇ ಅಲ್ಲದೆ ಕೊಲೆಯಾಗಿದ್ದರ ಬಗ್ಗೆ ದೂರು ದಾಖಲು ಮಾಡಲು ಹೋದಾಗ ಗೌರಿಯ ಮುಖದಲ್ಲಾದ ಬದಲಾವಣೆಗಳನ್ನು ಗಮನಿಸಿದ್ದ ಪೊಲೀಸರಿಗೆ ಆಕೆಯೇ ಕೊಲೆ ಮಾಡಿರಬಹುದು ಎಂದು ಸಂದೇಹ ಶುರುವಾಗುತ್ತದೆ.

ತನಿಖೆ ಮುಂದುವರಿಯುತ್ತದೆ. ಗೌರಿಯ ಜೊತೆ ಆಕೆಯ ಗಂಡ ಸುಬ್ಬು ಕೂಡ ಈ ಕೊಲೆಯಲ್ಲಿ ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೊಲೀಸರು ಅವನ ವಿರುದ್ಧವೂ ದೂರು ದಾಖಲು ಮಾಡಿಕೊಂಡು ಠಾಣೆಗೆ ಕರೆದೊಯ್ಯುತ್ತಾರೆ. ಇವರಿಬ್ಬರೇ ಕೊಲೆಗಾರರು ಎಂಬ ಸಂದೇಹ ಪೊಲೀಸರಿಗೆ ಬಲವಾಗುತ್ತಿದ್ದಂತೆಯೇ ಆರೋಪಿಗಳ ಬಾಯಿ ಬಿಡಿಸಲು ಸಕಲ ರೀತಿಯಲ್ಲೂ ಯತ್ನಿಸುತ್ತಾರೆ. ‘ತಮ್ಮದೇ ಆದ ರೀತಿ’ಯಲ್ಲಿ ವಿಚಾರಣೆ ನಡೆಸಿದಾಗ ದಂಪತಿ ತಾವೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾರೆ. ‘ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನವನ್ನು ಸಹೋದರಿಯರು ಮಾರಾಟ ಮಾಡಿರುವ ಬಗ್ಗೆ ಹಾಗೂ ಅದರ ಹಣವನ್ನು ಪಡೆದಿರುವ ಬಗ್ಗೆ ಗೀತಾ ಅವರು ದೂರವಾಣಿಯಲ್ಲಿ ಕರೆ ಮಾಡಿ ಹೇಳುತ್ತಿದ್ದರು. ಅದನ್ನು ನಾನು ಕೇಳಿಸಿಕೊಂಡೆ. ಆ ಹಣ ಪಡೆಯುವ ಸಲುವಾಗಿ ಗಂಡನ ಜೊತೆಗೂಡಿ ಕೊಲೆ ಮಾಡಿದೆ. ಕೊಲೆಯ ನಂತರ ಮನೆಯೆಲ್ಲಾ ಹುಡುಕಾಡಿದರೂ ಆ ಹಣ ಸಿಗಲಿಲ್ಲ. ಬಹುಶಃ ಅವರು ಅದನ್ನು ಅದಾಗಲೇ ಬ್ಯಾಂಕ್‌ಗೆ ಜಮಾ ಮಾಡಿರಬೇಕು. ಆದ್ದರಿಂದ ಸಿಕ್ಕ ಅಲ್ಪ ಸ್ವಲ್ಪ ಹಣ ಮತ್ತು ಸಹೋದರಿಯರ ಮೈಮೇಲೆ ಇದ್ದ ಒಡವೆಗಳನ್ನು ಕದ್ದು ಪರಾರಿಯಾದೆವು’ ಎನ್ನುತ್ತಾಳೆ. ಗಂಡ ಸುಬ್ಬು ಕೂಡ ಇದನ್ನು ಒಪ್ಪಿಕೊಳ್ಳುತ್ತಾನೆ. ಆ ಒಡವೆಗಳು ಎಲ್ಲಿವೆ ಎಂದು ಪೊಲೀಸರು ಕೇಳಿದಾಗ ಅದನ್ನು ತಾನು ಒಬ್ಬರಿಗೆ ಮಾರಾಟ ಮಾಡಿರುವುದಾಗಿ ಹೇಳಿ ಅವರ ವಿಳಾಸವನ್ನೂ ಗೌರಿ ನೀಡುತ್ತಾಳೆ.‌

ಪೊಲೀಸರಿಗೆ ಇಷ್ಟೇ ಸಾಕ್ಷ್ಯ ಸಾಲುವುದಿಲ್ಲ. ಆರೋಪಿಗಳು ಖುದ್ದು ತಪ್ಪು ಒಪ್ಪಿಕೊಂಡರೂ ಅದನ್ನು ಕೋರ್ಟ್‌ ಸಾಕ್ಷ್ಯದ ರೂಪದಲ್ಲಿ ಪರಿಗಣಿಸುವುದಿಲ್ಲ ಎಂದು ಅರಿತಿದ್ದ ಪೊಲೀಸರು ಕೋರ್ಟ್‌ಗೆ ಸಾಕ್ಷ್ಯ ಒದಗಿಸುವ ಸಲುವಾಗಿ ಇಬ್ಬರನ್ನೂ ಸುಳ್ಳುಪತ್ತೆ ಪರೀಕ್ಷೆ (ನಾರ್ಕೊ ಅನಾಲಿಸಿಸ್‌ ಟೆಸ್ಟ್‌) ಹಾಗೂ ಮಂಪರು ಪರೀಕ್ಷೆ (ಪಾಲಿಗ್ರಫಿ ಟೆಸ್ಟ್‌)ಗೆ ಒಳಪಡಿಸುತ್ತಾರೆ. ಆಗಲೂ ಆರೋಪಿಗಳು ಈ ಕೊಲೆಯನ್ನು ತಾವೇ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾರೆ.

ಕೋರ್ಟ್‌ನಲ್ಲಿ ಇಷ್ಟು ಸಾಕ್ಷ್ಯಾಧಾರಗಳನ್ನು ನೀಡಿದರೆ ಆರೋಪಿಗಳಿಗೆ ಖಂಡಿತವಾಗಿಯೂ ಶಿಕ್ಷೆ ಆಗುತ್ತದೆ ಎಂದುಕೊಂಡ ಪೊಲೀಸರು, ಆ ಪರೀಕ್ಷೆಗಳ ವರದಿಯನ್ನು ದಾಖಲೆ ರೂಪದಲ್ಲಿ ತಯಾರಿಸಿಕೊಂಡು ಸುಮ್ಮನಾಗುತ್ತಾರೆ.

ಕೊಲೆ ಆರೋಪ ಹೊತ್ತ ದಂಪತಿ ಪರವಾಗಿ ನಾನು ವಕಾಲತ್ತು ವಹಿಸಿದೆ. ಅವರಿಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿ ಕೂಡ ಆದೆ.

ಜಾಮೀನು ಅವಧಿ ಮುಗಿದ ಒಂದು- ಒಂದೂವರೆ ವರ್ಷದ ನಂತರ ಆರೋಪದ ಕುರಿತಾದ ವಿಚಾರಣೆ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ನಲ್ಲಿ ಶುರುವಾಯಿತು. ಸುಳ್ಳುಪತ್ತೆ ಮತ್ತು ಮಂಪರು ಎರಡೂ ಪರೀಕ್ಷೆಗಳಲ್ಲಿ ಆರೋಪಿಗಳು ತಾವೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡೂ ಆಗಿತ್ತು. ಆದ್ದರಿಂದ ಅವರನ್ನು ಹೇಗೆ ಬಚಾವು ಮಾಡುವುದು ಎಂಬ ಬಗ್ಗೆ ಯೋಚಿಸತೊಡಗಿದೆ. ಕೊಲೆ ನಡೆದ ದಿನದಿಂದ ಹಿಡಿದು ಗೌರಿ ಪೊಲೀಸರಿಗೆ ದೂರು ನೀಡಿದ್ದು, ನಂತರ ಆಕೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡದ್ದು, ಪೊಲೀಸರು ನಡೆಸಿದ ತನಿಖೆ, ಆರೋಪಪಟ್ಟಿ ನಿಗದಿ... ಇತ್ಯಾದಿ ಎಲ್ಲ ದಾಖಲೆಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದೆ. ಆಗ ನನಗೆ ಏನು ಬೇಕಿತ್ತೋ ಅದು ಸಿಕ್ಕೇಬಿಟ್ಟಿತ್ತು!

ವಿಚಾರಣೆ ದಿನ ಬಂತು. ತನಿಖಾಧಿಕಾರಿಯನ್ನು (ಪೊಲೀಸ್‌ ಇನ್ಸ್‌ಪೆಕ್ಟರ್‌) ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನೆ ಕೇಳಲು ಶುರು ಮಾಡಿದೆ. ‘ಈ ಪ್ರಕರ
ಣದಲ್ಲಿ ಕೊಲೆ ನಡೆದಿರುವುದನ್ನು ನೋಡಿರುವ ಪ್ರತ್ಯಕ್ಷ ಸಾಕ್ಷಿಗಳು ಇದ್ದಾರೆಯೇ’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರಿಂದ ಬಂದ ಉತ್ತರ ‘ಇಲ್ಲ’. ಗೌರಿ ದೂರು ದಾಖಲು ಮಾಡಿರುವ ಎರಡು ದಿನಗಳ ಹಿಂದೆ ಆಕೆ ಸಹೋದರಿಯ ಮನೆಗೆ ಹೋಗಿದ್ದನ್ನು ತಾನು ನೋಡಿರುವುದಾಗಿ ಪಕ್ಕದ ಮನೆಯ ವಕೀಲರೊಬ್ಬರು ಹೇಳಿದ್ದು, ಅದನ್ನು ತಾವು ದಾಖಲು ಮಾಡಿಕೊಂಡಿರುವುದಾಗಿ ತನಿಖಾಧಿಕಾರಿ ಹೇಳಿದರು. ‘ಅವರು ನೋಡಿರಬಹುದು. ಆದರೆ ಕೊಲೆ ಮಾಡಿರುವುದನ್ನು ಪ್ರತ್ಯಕ್ಷವಾಗಿ ನೋಡಿಲ್ಲವಲ್ಲ’ ಎಂದೆ. ಅದಕ್ಕೆ ಅವರು ‘ಇಲ್ಲ’ ಎಂದರು. ಸಾಕ್ಷಿದಾರರಾದ ಆ ವಕೀಲರನ್ನು ಸವಾಲಿಗೆ ಒಳಪಡಿಸಿದಾಗಲೂ ಅವರು ತಾವು ಕೊಲೆಯಾದದ್ದನ್ನು ನೋಡಿಲ್ಲ ಎಂದರು.

ಹಾಗಿದ್ದರೆ, ಈ ಘಟನೆಯಲ್ಲಿ ಯಾರೂ ಪ್ರತ್ಯಕ್ಷ ಸಾಕ್ಷಿಗಳು ಇಲ್ಲ, ಬದಲಿಗೆ ಎಲ್ಲವೂ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ನಿಂತಿದೆ ಎಂದು ವಾದಿಸಿದೆ. ಅದನ್ನು ನ್ಯಾಯಾಧೀಶರು ಒಪ್ಪಿಕೊಂಡರು.

ಆದರೆ ನನ್ನ ಕಕ್ಷಿದಾರರು ನಿರಪರಾಧಿಗಳು ಎಂದು ಸಾಬೀತು ಮಾಡಲು ಇಷ್ಟು ಸಾಕಿರಲಿಲ್ಲ. ಆಗ ನನ್ನ ಬತ್ತಳಿಕೆಯ ಎರಡನೆಯ ಬಾಣವನ್ನು ಬಿಟ್ಟೆ. ಅದೇ ಮಾಮೂಲಾಗಿ ಎಲ್ಲಾ ಪ್ರಕರಣಗಳಲ್ಲಿ ಮಾಡುವಂತೆ ಈ ಪ್ರಕರಣದಲ್ಲೂ ಪೊಲೀಸರು ಮಾಡಿದ್ದ ಎಡವಟ್ಟು!

ಕಟಕಟೆಯಲ್ಲಿದ್ದ ತನಿಖಾಧಿಕಾರಿಗೆ ಮತ್ತಷ್ಟು ಪ್ರಶ್ನೆ ಕೇಳಿದೆ. ನಮ್ಮಿಬ್ಬರ ನಡುವೆ ನಡೆದ ಸವಾಲು- ಜವಾಬು ಇಂತಿದೆ:
ನಾನು- ‘ಕೊಲೆಯಾದ ಸಹೋದರಿಯ ಮೈಮೇಲೆ ಇದ್ದ ಆಭರಣಗಳನ್ನು ತಾವು ಕದ್ದಿರುವುದಾಗಿ ಆರೋಪಿಗಳು ಒಪ್ಪಿಕೊಂಡದ್ದು ಯಾವಾಗ?
ತನಿಖಾಧಿಕಾರಿ- ಅವರನ್ನು ವಿಚಾರಣೆಗೆ ಒಳಪಡಿಸಿದಾಗ.

ನಾನು- ಅಂದರೆ ಅವರನ್ನು ಬಂಧಿಸಿದ ತಕ್ಷಣವಲ್ಲವೇ...?

ತನಿಖಾಧಿಕಾರಿ- ಹೌದು.

ನಾನು- ನೀವೇ ದಾಖಲೆಯಲ್ಲಿ ಉಲ್ಲೇಖಿಸಿರುವಂತೆ, ಆ ಆಭರಣಗಳನ್ನು ಖರೀದಿ ಮಾಡಿರುವವರ ವಿವರಗಳನ್ನು ಅದೇ ದಿನ ಆರೋಪಿಗಳು ತಿಳಿಸಿದ್ದರಲ್ಲವೇ?
ತನಿಖಾಧಿಕಾರಿ- ಹೌದು. ನಾವು ದಾಖಲೆಯಲ್ಲಿ ವಿವರಿಸಿದ್ದರಲ್ಲಿ ಸತ್ಯಾಂಶ ಇದೆ.
ನಾನು- ಅವರು ಹೇಳಿದ ಎಲ್ಲಾ ಆಭರಣಗಳನ್ನು ತಾವು ವಶಪಡಿಸಿಕೊಂಡಿರುವಿರಾ?
ತನಿಖಾಧಿಕಾರಿ- ಹೌದು. ಅದನ್ನು ಕೋರ್ಟ್‌ಗೆ ಈಗಾಗಲೇ ಸಲ್ಲಿಸಿದ್ದೇವೆ.
ನಾನು- ನೀವು ವಶಪಡಿಸಿಕೊಂಡಿರುವ ಆಭರಣಗಳ ಪೈಕಿ ಒಂದೇ ಕಿವಿಯೋಲೆ ಇದೆಯಲ್ಲ, ಕಿವಿಯೋಲೆ ಎಂದ ಮೇಲೆ ಎರಡೂ ಇರಬೇಕಲ್ಲವೇ?
ತನಿಖಾಧಿಕಾರಿ- ನಮಗೆ ಇನ್ನೊಂದು ಸಿಕ್ಕಿಲ್ಲ.
ನಾನು- ಆರೋಪಿಗಳು ಆಭರಣಗಳ ಬಗ್ಗೆ ತಪ್ಪೊಪ್ಪಿಕೊಂಡ ತಕ್ಷಣವೇ ತಾವು ಖರೀದಿದಾನಲ್ಲಿಗೆ ಹೋಗಿದ್ದರೆ ಅದು ಸಿಗುತ್ತಿತ್ತ
ಲ್ಲವೇ? ತಾವು ಹೋಗಿದ್ದು ಯಾವಾಗ...?
ತನಿಖಾಧಿಕಾರಿ- ಒಂದು ವರ್ಷದ ಬಳಿಕ...
ಆಗ ನನ್ನ ಮುಖದಲ್ಲಿ ಮಂದಹಾಸ ಮೂಡಿತ್ತು. ತನಿಖಾಧಿಕಾರಿಗೆ ತಾವು ಮಾಡಿದ್ದ ತಪ್ಪಿನ ಅರಿವಾಗಿ ಮುಖ ಕೆಂಪಗಾಗಿತ್ತು. ಕಾರಣ ಇಷ್ಟೇ... ಯಾವುದೇ ಪ್ರಕರಣದಲ್ಲಿ ಆರೋಪಿಗಳು ತಪ್ಪು ಒಪ್ಪಿಕೊಂಡು ಯಾವುದಾದರೂ ಸುಳಿವು ನೀಡಿದರೆ, ಅದರ ಬೆನ್ನತ್ತಿ ಪೊಲೀಸರು ತಕ್ಷಣವೇ ಹೋಗಬೇಕು. ಅದರಲ್ಲೂ ಮುಖ್ಯವಾಗಿ, ಆಭರಣ ಮಾರಾಟ ಇತ್ಯಾದಿಗಳ ಬಗ್ಗೆ ಸುಳಿವು ನೀಡಿದಾಗ ಅದನ್ನು ಕೂಡಲೇ ವಶಕ್ಕೆ ಪಡೆದುಕೊ
ಳ್ಳುವುದು ಪೊಲೀಸರಿಗೆ ದೊಡ್ಡ ಕೆಲಸವೇನಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಎಡವಟ್ಟು ಮಾಡಿದ್ದರು. ಆ ಎಡವಟ್ಟು ಆರೋಪಿಗಳ ಪರವಾಗಿ ಕೇಸು ವಾಲುವಂತೆ ಮಾಡಿತು. ‘ಆರೋಪಪಟ್ಟಿ ತಯಾರಿಸಿದ ನಂತರವೂ ಕದ್ದ ವಸ್ತುಗಳನ್ನು ಪಡೆದುಕೊಳ್ಳದ ಪೊಲೀಸರ ನಡವಳಿಕೆ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಸಾಲದು ಎಂಬುದಕ್ಕೆ ಎರಡೂ ಕಿವಿಯೋಲೆಗಳನ್ನು ಎಲ್ಲಿ ಮಾರಿದ್ದು ಎಂದು ಆರೋಪಿಗಳು ಹೇಳಿದ್ದರೂ ಪೊಲೀಸರು ಒಂದೇ ಕಿವಿಯೋಲೆ ತಂದಿದ್ದಾರೆ’ ಎಂದು ವಾದಿಸಿದೆ. ‘ಈ ವಿಳಂಬ ಹಾಗೂ ಒಂದೇ ಕಿವಿಯೋಲೆಯಿಂದ ಇವರೇ ಅಪರಾಧಿಗಳು ಎಂದು ಸಾಬೀತಾಗುವುದಿಲ್ಲ’ ಎಂದೆ.

ಆಗ ಸರ್ಕಾರಿ ವಕೀಲರು (ಪಬ್ಲಿಕ್‌ ಪ್ರಾಸಿಕ್ಯೂಟರ್‌) ಎದ್ದುನಿಂತು ಮಂಪರು ಪರೀಕ್ಷೆ ಹಾಗೂ ಸುಳ್ಳು ಪತ್ತೆ ಪರೀಕ್ಷೆಯ ಫಲಿತಾಂಶಗಳ ಬಗ್ಗೆ ವಾದಿಸಿದರು. ಎರಡೂ ಪರೀಕ್ಷೆಗಳಲ್ಲಿ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದನ್ನು ಅವರು ನ್ಯಾಯಾಧೀಶರ ಗಮನಕ್ಕೆ ತಂದರು. ‘ಆರೋಪಿಗಳೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಕೊಲೆ ಮಾಡಿರುವುದು ಅವರೇ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಅವರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದರು. ಆಗ ನ್ಯಾಯಾಧೀಶರು ‘ಇದಕ್ಕೆ ನೀವೇನು ಹೇಳಲು ಬಯಸುತ್ತೀರಿ’ ಎಂದು ನನ್ನನ್ನು ಪ್ರಶ್ನಿಸಿದರು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರಿಂದ ಈ ಪ್ರಶ್ನೆಯನ್ನು ನಾನು ಮೊದಲೇ ನಿರೀಕ್ಷಿಸಿದ್ದರಿಂದ ಅದಕ್ಕೂ ತಯಾರಾಗಿ ಹೋಗಿದ್ದೆ. ಆಗ ನಾನು, ‘ಯಾವುದೇ ಪ್ರಕರಣದಲ್ಲಿ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ ಕಾನೂನಿನ ಅಡಿ ಅದನ್ನು ಸಾಕ್ಷ್ಯವೆಂದು ಪರಿಗಣಿಸುವಂತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಮಂಪರು ಪರೀಕ್ಷೆ ಹಾಗೂ ಸುಳ್ಳುಪತ್ತೆ ಪರೀಕ್ಷೆಗಳು ಕೂಡ ಇದೇ ವ್ಯಾಖ್ಯಾನಕ್ಕೆ ಒಳಪಡುತ್ತವೆ. ಇಲ್ಲಿ ಆರೋಪಿ ತಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡರೂ ಅದನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ
ಸ್ಪಷ್ಟಪಡಿಸಿದೆ. ಎಲ್ಲಾ ಪ್ರಕರಣಗಳಲ್ಲೂ ಈ ಪರೀಕ್ಷೆಗಳನ್ನು ಸಾಕ್ಷ್ಯದ ರೂಪದಲ್ಲಿ ಪರಿಗಣಿಸುವಂತಿಲ್ಲ ಎಂದು ಕೋರ್ಟ್‌ ಹೇಳಿದೆ ಎಂದ ನಾನು ಸುಪ್ರೀಂಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದೆ. ಈ ತೀರ್ಪು ಈ ಪ್ರಕರಣಕ್ಕೂ ಅನ್ವಯ ಆಗುತ್ತದೆ’ ಎಂದೆ. ಪೊಲೀಸರು ಮಾಡಿರುವ ಎಲ್ಲಾ ಎಡವಟ್ಟುಗಳು ಈ ಪರೀಕ್ಷೆಗಳ ಫಲಿತಾಂಶಗಳಿಂದ ಮುಚ್ಚಿಹೋಗುತ್ತವೆ ಎಂದು ಭಾವಿಸಿದ್ದ ಪ್ರಾಸಿಕ್ಯೂಷನ್‌ಗೆ ಅಲ್ಲೂ ನಿರಾಸೆ ಕಾದಿತ್ತು.

ಪೊಲೀಸರ ಎಲ್ಲಾ ವೈಫಲ್ಯಗಳು ಈಗ ನ್ಯಾಯಾಧೀಶರ ಮುಂದೆ ಇದ್ದವು. ಆದ್ದರಿಂದ ತೀರ್ಪು ಸಹಜವಾಗಿಯೇ ಆರೋಪಿಗಳ ಪರ ಒಲಿಯಿತು. ‘ಆರೋಪಿಗಳೇ ಕೊಲೆಗಾರರು ಎಂಬುದನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ. ತನಿಖೆಯಲ್ಲಿ ಸಾಕಷ್ಟು ದೋಷಗಳು ಕಾಣಿಸಿಕೊಂಡಿವೆ. ತನಿಖೆಯ ವರದಿಯನ್ನು ನೋಡಿದರೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ, ಪ್ರಕರಣವು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಅವಲಂಬಿಸಿದೆಯೇ ವಿನಾ, ಪ್ರತ್ಯಕ್ಷ ಸಾಕ್ಷಿಗಳೂ ಇಲ್ಲ. ಇವೆಲ್ಲವನ್ನೂ ಪರಿಗಣಿಸಿ ಸಂದೇಹದ ಆಧಾರದ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಕೋರ್ಟ್‌ ಹೇಳಿತು. ಜೋಡಿ ಕೊಲೆಯ ಪ್ರಕರಣ ಅಲ್ಲಿಗೇ ಇತ್ಯರ್ಥವಾಯಿತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಗೋಜಿಗೂ ಸರ್ಕಾರ ಹೋಗಲಿಲ್ಲ...!

ಹೆಸರು ಬದಲಾಯಿಸಲಾಗಿದೆ

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT