ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಮರೆಗೆ ಸರಿಯುತ್ತಿದೆ ‘ಲಾಳ’ ಕಸಬು

Last Updated 5 ನವೆಂಬರ್ 2017, 5:24 IST
ಅಕ್ಷರ ಗಾತ್ರ

ವಿಜಯಪುರ: ಜನರಿಗೆ ಓಡಾಡಲು ಚಪ್ಪಲಿಗಳಿದ್ದಂತೆ ರೈತ ಮಿತ್ರ ಎತ್ತುಗಳಿಗೆ ಲಾಳಗಳು ಚಪ್ಪಲಿಗಳಿದ್ದಂತೆ. ಲಾಳಗಳನ್ನು ಸಮರ್ಪಕವಾಗಿ ಹಾಕಲು ಪರಿಣಿತರಿಂದ ಮಾತ್ರ ಸಾಧ್ಯ ಎಂದು ಹಿರಿಯ ರೈತ ನಂಜುಂಡಪ್ಪ ಹೇಳಿದರು. ಬಹಳಷ್ಟು ಗ್ರಾಮೀಣ ಭಾಗದ ಕಸುಬುಗಳಲ್ಲಿ ಎತ್ತುಗಳ ಕಾಲುಗಳಿಗೆ ಲಾಳ ಹೊಡೆಯುವ ಕಸುಬು ಒಂದಾಗಿದೆ. ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿರುವಂತೆ ಈ ಕಸುಬು ತೆರೆಮರೆಗೆ ಸರಿಯುತ್ತಿದೆ.

ಆ ಪರಿಣತಿ ಸಾಧಿಸಿರುವವರಿಗಾಗಿ ಎತ್ತುಗಳ ಒಡೆಯರು ಕಾಯುತ್ತಾರೆ. ಸಾಮಾನ್ಯವಾಗಿ ಜೂನ್‌ನಿಂದ ಆಗಸ್ಟ್‌ವರೆಗೆ ನಡೆಯುವ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಎತ್ತುಗಳಿಗೆ ವಿಶ್ರಾಂತಿ ಸಿಕ್ಕುವ ಸಮಯದಲ್ಲಿ ಲಾಳಗಳನ್ನು ಹೊಡೆಸುತ್ತಾರೆ.

ಇತ್ತೀಚೆಗೆ ಕೃಷಿ ಕ್ಷೇತ್ರದಲ್ಲೂ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿರುವ ಕಾರಣ ರೈತನ ಮಿತ್ರನಂತೆ ಹಗಲಿರುಳು ದುಡಿಯುತ್ತಿದ್ದ ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದ್ದರೂ, ಕೆಲವು ಕಡೆಗಳಲ್ಲಿ ಹಿರಿಯ ರೈತರು ತಮ್ಮೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡಿದ್ದ ಎತ್ತುಗಳನ್ನು ಸಾಕುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ತಾವು ಸಾಕಿರುವ ಎತ್ತುಗಳ ಆರೋಗ್ಯ ರಕ್ಷಣೆ ಮಾಡುವ ಉದ್ದೇಶದಿಂದ ಕಾಲಕ್ಕೆ ಸರಿಯಾಗಿ ಲಾಳ ಹೊಡೆಸುವ ಕೆಲಸ ಮಾಡುತ್ತಾರೆ.

ಎತ್ತುಗಳಿಗೆ ಲಾಳ ಹಾಕುವುದು ಸಾಮಾನ್ಯ ಸಂಗತಿಯೇನಲ್ಲ. ಮೊದಲು ಎತ್ತನ್ನು ಒಂದು ಕಡೆ ಮಲಗಿಸಲಾಗುತ್ತದೆ. ಅದರ ಕಾಲಿಗೆ ಹಗ್ಗ ಬಿಗಿದು, ಮೂರು ಜನ ಹಿಡಿದು ಒಂದು ಕಡೆಯಿಂದ ಚಕ್ಕನೆ ಎಳೆಯುವುದರ ಮೂಲಕ ಮಗುವಿನಂತೆ ಮಲಗಿಸಬಲ್ಲ ಚಾಕಚಕ್ಯತೆ ಎಂಥವರನ್ನೂ ಅಚ್ಚರಿಗೊಳಿಸುತ್ತದೆ.

ನಂತರ ಸವೆದಿರುವ ಲಾಳಗಳನ್ನು ಮತ್ತು ಅದರ ಮೊಳೆಗಳನ್ನು ಕಿತ್ತು ಬಿಡಿಸುತ್ತಾರೆ. ಒರಟಾದ ಪಾದಗಳನ್ನು ಉಜ್ಜಿ ಹೊಸ ಲಾಳವನ್ನಿಟ್ಟು ಮೊಳೆ ಹೊಡೆಯುತ್ತಾರೆ. ಮೊಳೆ ಹೊಡೆಯುವಾಗ ಕೊಂಚ ಎಚ್ಚರ ತಪ್ಪಿದರೂ ಎತ್ತಿಗೆ ಗಾಯವಾಗುತ್ತದೆ.

ಮೊದಲೆಲ್ಲಾ ಎತ್ತುಗಳನ್ನು ತುಂಬ ಸಾಕುತ್ತಿದ್ದರು. ಈಗ ಬಹಳ ಕಡಿಮೆ. ಕೆಲ ದಿನಗಳು ಬೋಣಿಯೇ ಆಗುವುದಿಲ್ಲ. ಒಂದು ಎತ್ತಿನ ನಾಲ್ಕು ಕಾಲುಗಳಿಗೆ ಲಾಳ ಹೊಡೆಯಲು ₹200 ಪಡೆಯುತ್ತೇನೆ. ಅದರಲ್ಲಿ ಲಾಳದ ವಸ್ತುಗಳ ಖರ್ಚು ₹120 ಬರುತ್ತದೆ.

ನಲವತ್ತು ವರ್ಷಗಳಿಂದ ಇದೇ ವೃತ್ತಿಯನ್ನು ಮಾಡುತ್ತಿದ್ದೇನೆ. ಪಟ್ಟಣ ಪ್ರದೇಶಗಳಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಮಾಡುವ ಘಟಕಗಳಿಗೆ ನೀರು ಹೊಡೆಯುವವರು ಮಾತ್ರ ಎತ್ತುಗಳನ್ನು ಇಟ್ಟುಕೊಂಡಿದ್ದಾರೆ. ಅಂತಹವರು ಮಾತ್ರ ಎತ್ತುಗಳಿಗೆ ಲಾಳ ಹಾಕಿಸುತ್ತಾರೆ ಎನ್ನುತ್ತಾರೆ ಸೈಯದ್ ರಜಾಕ್.

ಎಂ.ಮುನಿನಾರಾಯಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT