ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರಿನ ‘ಶಂಖತೀರ್ಥ’ದ ಪುಣ್ಯಕ್ಷೇತ್ರ

Last Updated 5 ನವೆಂಬರ್ 2017, 6:27 IST
ಅಕ್ಷರ ಗಾತ್ರ

ಕಡೂರು ತಾಲ್ಲೂಕಿನ ಹಲವಾರು ಪುಣ್ಯಕ್ಷೇತ್ರಗಳ ಪೈಕಿ ತಾಲ್ಲೂಕಿನ ಮಲ್ಲಿದೇವಿಹಳ್ಳಿಯ ಬಳಿ ವೇದಾವತಿ ನದಿ ದಂಡೆಯಲ್ಲಿರುವ ಶಂಖತೀರ್ಥವೂ ಒಂದಾಗಿದ್ದು, ಇಲ್ಲಿರುವ ಐತಿಹಾಸಿಕ ಕಲ್ಯಾಣರಾಮ ದೇವಸ್ಥಾನ ವಿಶೇಷವಾಗಿದೆ. ಕಡೂರಿನ ವೇದಾ ಮತ್ತು ಆವತಿ ನದಿಗಳು ಸಂಗಮರಾಮೇಶ್ವರ ಎಂಬಲ್ಲಿ ಸಂಗಮವಾಗಿ ವೇದಾವತಿಯಾಗಿ ಹರಿಯುತ್ತವೆ. ಇದೇ ವೇದಾವತಿ ನದಿ ಮಲ್ಲಿದೇವಿಹಳ್ಳಿಯ ಪಕ್ಕದಲ್ಲಿ ಹರಿಯುತ್ತದೆ.

ಈ ಜಾಗಕ್ಕೆ ‘ಶಂಖತೀರ್ಥ’ ಎಂಬ ಹೆಸರೂ ಇದೆ. ಇಲ್ಲಿಂದ ಅನತಿ ದೂರದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ನಿಂತು ನೋಡಿದರೆ ಶಂಖದಿಂದ ತೀರ್ಥ ಹೊರಬಿದ್ದಂತೆ ಕಾಣುತ್ತದೆ ಆದ್ದರಿಂದ ಈ ಜಾಗಕ್ಕೆ ಈ ಹೆಸರು ಬಂದಿದೆ. ವಿಶಾಲವಾದ ಕಲ್ಲು ಹಾಸುಗಳ ನಡುವೆ ನದಿ ಮಂದಗಯಿಂದ ಹರಿಯುತ್ತಿದ್ದು, ಈ ಕಲ್ಲುಹಾಸುಗಳ ನಡುವೆ ಗಂಗಮ್ಮನವರ ಕೊಳವಿದೆ. ಗಂಗಾಪೂಜೆಗಾಗಿ ನೂರಾರು ಜನರುಇಲ್ಲಿ ಬಂದು ಪೂಜೆ ಮಾಡುತ್ತಾರೆ.

2 ಅಡಿ ವ್ಯಾಸದ ಈ ಕೊಳದಲ್ಲಿ ಯಾವಾಗಲೂ ನೀರು ಇರುವುದು ವಿಶೇಷ. ಸುತ್ತಮುತ್ತಲಿನ ಗ್ರಾಮೀಣ ಭಾಗದ ದೇವರ ಮೂರ್ತಿಗಳನ್ನು ಇಲ್ಲಿಗೆ ತಂದು ತೀರ್ಥ
ಸ್ನಾನ ಮಾಡಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇಂತಹ ಪ್ರಶಾಂತ ತಾಣದಲ್ಲಿರುವ ಕಲ್ಯಾಣ ರಾಮ ದೇಗುಲ 15 ನೇ ಶತಮಾನದಲ್ಲಿ ಪಾಳೆಗಾರರಿಂದ ಜೀರ್ಣೋದ್ಧಾರಗೊಂಡಿತ್ತು ಎಂಬ ಉಲ್ಲೇಖವಿದೆ. ಈ ದೇಗುಲದಲ್ಲಿ ಕಲ್ಯಾಣ ರಾಮನ ಬಲಗಡೆ ಸೀತಾಮಾತೆ ಇರುವುದು ವಿಶೇಷ.

ಕರ್ನಾಟಕದಲ್ಲಿ ಹೀಗೆ ಸೀತೆ ಬಲಭಾಗದಲ್ಲಿರುವುದು ಹಿರೇಮಗಳೂರು, ಚುಂಚನಕಟ್ಟೆ ಮತ್ತು ಇಲ್ಲಿ ಮಾತ್ರ. ಶಿಥಿಲವಾಗಿದ್ದ ಕಲ್ಯಾಣರಾಮ ದೇಗುಲವನ್ನು ಇಲ್ಲಿನ ಭಕ್ತರು ಸಮಿತಿ ರಚಿಸಿ ಧರ್ಮಾಧಿಕಾರಿ ಎಂ.ಟಿ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಹಳೇ ವಾಸ್ತುಶಿಲ್ಪವನ್ನು ಉಳಿಸಿಕೊಂಡು ದೇಗುಲವನ್ನು ಪುರ್ನನಿರ್ಮಾಣ ಮಾಡಲಾಯಿತು. ಕಲ್ಯಾಣರಾಮನ ಹಳೆ ವಿಗ್ರಹವೂ ಶಿಥಿವಾಗಿದ್ದರಿಂದ ಹೊಸ ವಿಗ್ರಹಗಳನ್ನು ಕೋಲಾರದ ಶಿವಾರಪಟ್ಟಣದಲ್ಲಿ ಕೆತ್ತಿಸಲಾಯಿತು. ಈಗ 20 ವರ್ಷಗಳ ಹಿಂದೆ ದೇಗುಲದ ಪುನಃ ಪ್ರತಿಷ್ಠಾಪನೆಯನ್ನು ಹಿರೇಮಗಳೂರು ಸವ್ಯಸಾಚಿಯವರು ನೆರವೇರಿಸಿದರು.

ಹಳೇ ವಿಗ್ರಹಗಳನ್ನು ಪುಟ್ಟ ಗುಡಿ ಮಾಡಿ ಅಲ್ಲಿರಿಸಿದ್ದು, ಕಲ್ಯಾಣರಾಮನ ದೇಗುಲವಾದ್ದರಿಂದ ಇಲ್ಲಿ ಆಂಜನೇಯನಿಲ್ಲ. ರಾಮ, ಸೀತಾ, ಲಕ್ಷ್ಮಣ ವಿಗ್ರಹವಿರುವ ಪೀಠದಲ್ಲಿ ಸಾಂಕೇತಿಕವಾಗಿ ಕೆತ್ತಲಾಗಿದೆ. ಹತ್ತಿರದಲ್ಲಿಯೇ ಇರುವ ಚಿಕ್ಕ ಗುಡ್ಡದ ಮೇಲೆ ಕರ್ನಾಟಕದ ಏಕೈಕ ಸಪ್ತಲಿಂಗ ದೇಗುಲವಿದೆ. ಈಚೆಗೆ ದೇಗುಲದ ಹೊರಭಾಗದಲ್ಲಿ ನಿರ್ಮಿಸಿರುವ ಬೃಹತ್ ಧ್ಯಾನಾಸಕ್ತ ಹನುಮನ ವಿಗ್ರಹ ಗಮನ ಸೆಳೆಯುತ್ತದೆ. ಇಲ್ಲಿ ಚಿಕ್ಕ ಕಲ್ಯಾಣ ಮಂಟಪವೂ ಇದ್ದು, ಸಮಿತಿಯಿಂದ ನಿರ್ವಹಿಸಲಾಗುತ್ತಿದೆ.

ಈ ಪ್ರಶಾಂತ ತಾಣಕ್ಕೆ ಹಿಂದೆ ವರದಪುರದ ಶ್ರೀಧರಸ್ವಾಮಿಗಳು ಬಂದು ಎರಡು ದಿನವಿದ್ದು ರಾಮೋತ್ಸವವನ್ನು ವೈಭವದಿಂದ ನಡೆಸಿದ್ದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ವೇದಾವತಿ ನದಿಯಲ್ಲಿ ಈಗ ಸಾಕಷ್ಟು ನೀರು ಹರಿಯುತ್ತಿಲ್ಲವಾದರೂ ಶಂಖತೀರ್ಥದಲ್ಲಿ ಪ್ರತೀ ದಿನ ಕಲ್ಯಾಣರಾಮನ ದರ್ಶನಕ್ಕೆ ನೂರಾರು ಜನರು ಭೇಟಿ ನೀಡುತ್ತಾರೆ. ಧಾರ್ಮಿಕವಾಗಿ ಮಾತ್ರವಲ್ಲದೆ ಸುಂದರ ತಾಣವೂ ಆಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT