ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ನಾಟಕೋತ್ಸವಕ್ಕೆ ನಟ ಪ್ರಕಾಶ್ ರೈ ಚಾಲನೆ

Last Updated 5 ನವೆಂಬರ್ 2017, 6:36 IST
ಅಕ್ಷರ ಗಾತ್ರ

ಹೊಸದುರ್ಗ: ‘ರಂಗಚಟುವಟಿಕೆಯ ಜತೆ ಶರಣ ಸಂಸ್ಕೃತಿ ಪರಿಚಯವಾಯಿತು. ರಂಗಭೂಮಿಯ ಮೂಲಕ ನಾನೊಬ್ಬ ನಟನಾದೆ. ಸಮಾಜಮುಖಿಯಾಗಿ ಚಿಂತಿಸುವ ವ್ಯಕ್ತಿಯಾದೆ’ ಎಂದು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಹೆಮ್ಮೆಯಿಂದ ನುಡಿದರು. ಸಾಣೆಹಳ್ಳಿಯಲ್ಲಿ ಶನಿವಾರದಿಂದ ಆರಂಭವಾದ ಶಿವಕುಮಾರ ಕಲಾಸಂಘದ ‘ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘12ನೇ ಶತಮಾನದ ಶರಣರ ಆದರ್ಶವನ್ನು ಸಾಣೇಹಳ್ಳಿ ಶ್ರೀಗಳು ಇಲ್ಲಿ ಜಾರಿಗೊಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನು ಸಾಣೆ ಹಿಡಿದುಕೊಡುತ್ತಿದ್ದ ಗ್ರಾಮ ಇಂದು ಸಾಂಸ್ಕೃತಿಕ, ಬೌದ್ಧಿಕ ಮನಸ್ಸಿಗೆ ಸಾಣೆ ಹಿಡಿಯುತ್ತಾ, ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳವಂತಾಗಿದೆ’ ಎಂದರು.

ಮೈಸೂರಿನ ಹಿರಿಯ ರಂಗಕರ್ಮಿ ಥೆರೆಸಾ ಡಿಸೋಜಾ 2017ರ ಶಿವಸಂಚಾರ ನಾಟಕಗಳ ಉದ್ಘಾಟಿಸಿ ಮಾತನಾಡಿ, ‘ಸಾಣೇಹಳ್ಳಿಯಲ್ಲಿ ನಡೆಯುವ ಪರಿಶುದ್ಧ ಕಾರ್ಯಕ್ರಮಗಳನ್ನು ನೋಡಿದರೆ ಇಲ್ಲಿಯೇ ಇರಬೇಕು ಎನ್ನಿಸುತ್ತಿದೆ’ ಎಂದರು. ‘ನನಗೆ ರಂಗ ಕಲೆಯೇ ಆಸ್ತಿ. ಈಗಿನ ರಂಗ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಯಬೇಕು ’ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ, ‘ಬೆಂಗಳೂರಿನಲ್ಲಿ ಸಂಸ್ಕೃತಿ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ವಿಕೃತಿ ಬಿತ್ತುವಂತೆ ಇರುತ್ತವೆ. ಆದರೆ, ಸಾಣೇಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಗಳು 12ನೇ ಶತಮಾನದ ಬಸವಾದಿ ಶಿವಶರಣರ ಸಮ ಸಮಾಜ ನಿರ್ಮಾಣದ ಚಿಂತನೆಯನ್ನು ಪ್ರಚಾರ ಪಡಿಸುತ್ತವೆ’ ಎಂದರು.

‘ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಪ್ರಜ್ಞೆ ಅಳಿಸುತ್ತಿರುವಾಗ, ರಂಗಕ್ಷೇತ್ರದ ಮೂಲಕ ಕನ್ನಡ ಉಳಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮಲ್ಲಿ ಎಂಟು, ಹತ್ತು ಜನರ ವಚನಗಳನ್ನು ಮತ್ತೆ, ಮತ್ತೆ ಹಾಡುತ್ತೇವೆ. ನಮ್ಮನ್ನು ಚಿಂತನ ಶೀಲರಾಗಿಸುವ ನಿಜ ಶಕ್ತಿ ವಚನಕ್ಕಿದೆ’ ಎಂದರು.

‘ಓದಿನ ಮಿತಿಯೊಳಗೆ ಸಾಹಿತ್ಯ ಸೃಷ್ಟಿಯಾಗಿದೆ. ಆದರೆ, ಒಂದು ಚಳವಳಿ ನಡೆಯುತ್ತಿರುವಾಗ ವಚನ ರಾಶಿ ಹುಟ್ಟಿದೆ. ಹಲವು ಸಂಘರ್ಷದ ರೂಪದೊಳಗೆ ವಚನಗಳು ರೂಪ ತಾಳಿವೆ’ ಎಂದರು.

‘ಪ್ರಾದೇಶಿಕ ಭಾಷೆಗಳು ಆತಂಕ ಎದುರಿಸುತ್ತಿವೆ. ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿ ಉದ್ಯೋಗಗಳಿಂದ ಪ್ರಾದೇಶಿಕ ಭಾಷೆಯ ವಿದ್ಯಾವಂತರು ವಂಚಿತರಾಗುತ್ತಿದ್ದಾರೆ. ಈ ಬ್ಯಾಂಕಿನ ನೆಲದೊಳಗೆ ಕನ್ನಡಿಗರಿಗೆ ಅನ್ಯಾಯ ಆಗುತ್ತಿರುವುದು ವಿಪರ್ಯಾಸದ ಸಂಗತಿ’ ಎಂದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು. ಸ್ಥಳೀಯ ಗುರುಪಾದೇಶ್ವರ ಪ್ರೌಢಶಾಲೆ, ಶಿವಕುಮಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯರೂಪಕ ಪ್ರದರ್ಶಿಸಿದರು. ಶಿವಸಂಚಾರ ಕಲಾವಿದರು ಕವಿ ದ ರಾ ಬೇಂದ್ರೆ ರಚನೆಯ, ನಟರಾಜ ಹೊನ್ನವಳ್ಳಿ ನಿರ್ದೇಶನದ ‘ಸಾಯೋ ಆಟ’ ನಾಟಕವನ್ನು ಅಭಿನಯಿಸಿದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ, ಶಾಸಕ ಬಿ.ಜಿ.ಗೋವಿಂದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT