ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಬೃಹತ್ ಸಮಾವೇಶ ಡಿ.24ಕ್ಕೆ

Last Updated 5 ನವೆಂಬರ್ 2017, 6:54 IST
ಅಕ್ಷರ ಗಾತ್ರ

ಗದಗ: ‘ವೀರಶೈವ– ಲಿಂಗಾಯತ ಬೃಹತ್ ಸಮಾವೇಶ ಗದುಗಿನಲ್ಲಿ ಡಿ. 24ರಂದು ನಡೆಯಲಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಕಟಣೆ ತಿಳಿಸಿದೆ.
ಇದಕ್ಕೆ ಸಂಬಂಧಿಸಿ ಗದುಗಿನ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ವೀರಶೈವ ಪಂಚಪೀಠಗಳ ಒಕ್ಕೂಟದ ಸಂಚಾಲಕ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಭೆಯಲ್ಲಿ ಭಾಗವಹಿಸಿದ್ದರು.

‘ವೀರಶೈವ–ಲಿಂಗಾಯತ ಒಂದೇ, ಬೇರೆ ಬೇರೆ ಅಲ್ಲ. ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಕೆಲವರು ಒತ್ತಾಯಿಸುತ್ತಿದ್ದು, ಅದು ಅವರ ಸಂಕುಚಿತ ಮನೋಭಾವ ತೋರಿಸುತ್ತದೆ. ವೀರಶೈವ ಧರ್ಮದ ಇತಿಹಾಸ, ಪರಂಪರೆ ಅರಿಯದವರು ಸ್ವತಂತ್ರ ಲಿಂಗಾಯತ ಧರ್ಮ ಹುಟ್ಟು ಹಾಕಲು ಹೊರಟಿರುವುದು ಸರಿಯಲ್ಲ’ಎಂದು ಅವರು ಸಭೆಯಲ್ಲಿ ಅಭಿಪ್ರಾಯಪಟ್ಟರು.

‘ಯಾರೋ ನಾಲ್ಕು ಜನ ಸೇರಿ ಹೊಸ ಧರ್ಮ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಧರ್ಮ ಪೀಠಗಳು, ಮಠಾಧೀಶರು ಸೇರಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆದರೆ, ರಾಜಕಾರಣಿಗಳಿಂದಲ್ಲ. ಅವರು ರಾಜಕೀಯ ಕಾರ್ಯಗಳತ್ತ ಗಮನಹರಿಸಲಿ ಅದನ್ನು ಬಿಟ್ಟು, ಧರ್ಮದ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ’ ಎಂದು ಸ್ವಾಮೀಜಿ ಹೇಳಿದ್ದಾರೆ.

‘ವೀರಶೈವ ಲಿಂಗಾಯತ ಬೃಹತ್ ಸಮಾವೇಶದ ಯಶಸ್ವಿಗೆ ಎಲ್ಲರು ಶ್ರಮಿಸಬೇಕು. ಇದಕ್ಕಾಗಿ ಸಮಿತಿ ರಚಿಸಿ, ಕಾರ್ಯಾರಂಭ ಮಾಡಬೇಕು ಎಂದು ಅವರು ಸಭೆಯಲ್ಲಿ ಸೂಚಿಸಿದರು. ‘ವೀರಶೈವ ಧರ್ಮ ಪ್ರಾಚೀನ ಇತಿಹಾಸ ಹೊಂದಿದೆ. ಆಚಾರ್ಯರ, ಶರಣರ ವಿಚಾರ ಧಾರೆಗಳಿಂದ ಈ ಧರ್ಮ ಸಮೃದ್ಧವಾಗಿ ಬೆಳೆದಿದೆ. ಶರಣರು ವೀರಶೈವ ಧರ್ಮದ ಹಿರಿಮೆಯನ್ನು ಕೊಂಡಾಡಿದ್ದಾರೆ. ತಮ್ಮ ವಚನಗಳಲ್ಲಿ ವೀರಶೈವ ಹೆಚ್ಚು ಬಳಸಿದ್ದು, ಕೆಲವು ವಚನಗಳಲ್ಲಿ ಮಾತ್ರ ಲಿಂಗಾಯತ ಪದ ಬಳಕೆ ಮಾಡಿದ್ದಾರೆ.

ಈ ಎರಡಲ್ಲೂ ಭಿನ್ನ ಭಾವ ಯಾರೂ ಕಂಡಿಲ್ಲ. ಇದನ್ನು ಭಕ್ತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಗದುಗಿನಲ್ಲಿ ವೀರಶೈವ ಲಿಂಗಾಯತ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಂಡರಗಿಯ ಡಾ.ಅನ್ನದಾನೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೊಸಪೇಟೆ ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಸ್ವತಂತ್ರ ಲಿಂಗಾಯತ ಸಮಾವೇಶ ಮಾಡುವವರು ಹಣ ನೀಡಿ ಸಮಾರಂಭಕ್ಕೆ ಜನರನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ನಡೆಸಬೇಕೆಂದಿರುವ ವೀರಶೈವ–ಲಿಂಗಾಯತ ಸಮಾವೇಶ ಸ್ವಾಭಿಮಾನ, ಧರ್ಮ ನಿಷ್ಠೆಯಿಂದ ಕೂಡಿದೆ’ ಎಂದರು.

ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಡಾ.ಶೇಖರ ಸಜ್ಜನ, ಎಚ್.ವಿ.ಶಾನುಭೋಗ, ರಾಜು ಕಾನಪ್ಪನವರ, ಲಿಂಗರಾಜ ಗುಡಿಮನಿ, ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT