ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ಸರ್ಕಾರಗಳಿಗೆ ಪಾಠ

Last Updated 5 ನವೆಂಬರ್ 2017, 6:59 IST
ಅಕ್ಷರ ಗಾತ್ರ

ಹಾಸನ: ರೈತರ ಬದುಕು ಮೂರಾಬಟ್ಟೆ ಮಾಡಿರುವ ಸರ್ಕಾರಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರೈತರ ಸಾಲ ಮನ್ನಾಕೆ ಅರ್ಜಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಒಂದು ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನದಲ್ಲಿ ಅವರು ವಾಗ್ದಾಳಿ ನಡೆಸಿದರು.

‘ಪ್ರತಿ ಗ್ರಾಮದಲ್ಲಿ ಬ್ಯಾಂಕ್ ತೆರೆದುಕೊಡು, ಅಲ್ಲಿ ದುಡ್ಡು ಹಾಕ್ತಿವಿ ಅಂತ ಮೋದಿಗೆ ಹೇಳೋಣ. ಮಹಿಳಾ ರೈತರಿಗೆ ಸಾಲ ಕೊಟ್ಟು ಶೇ 35 ರಷ್ಟು ಬಡ್ಡಿ ಪಡೆಯುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸಂಸ್ಥೆಗೆ ಧಿಕ್ಕಾರ ಹೇಳೋಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿಗೆ ಬಂಡವಾಳಶಾಹಿಗಳ ರಕ್ಷಣೆಯೇ ಮುಖ್ಯ, ಬ್ಯಾಂಕ್ ಸಿಬ್ಬಂದಿ ಬಳಸಿಕೊಂಡು ರೈತರ ಜೀವ ಹಿಂಡು ತ್ತಿದ್ದಾರೆ. ಬ್ಯಾಂಕ್‌ನವರು ಸಾಲ ವಸೂಲಿಗೆ ಮನೆ ಬಾಗಿಲಿಗೆ ಬಂದರೆ ಕಟ್ಟಿ ಹಾಕಬೇಕು. ಅಧಿಕಾರಿಗಳನ್ನು ಬಿಡಿಸಿಕೊಳ್ಳಲು ಶಾಸಕ, ಜಿಲ್ಲಾಧಿಕಾರಿ ಬರುತ್ತಾರೆ. ಆಗ ಅವರಿಗೂ ಅದೇ ಶಿಕ್ಷೆ ನೀಡಬೇಕು’ ಎಂದು ಗುಡುಗಿದರು.

‘ಬೆಳೆಗಳಿಗೆ ವೈಜ್ಞಾನಿಕ ಬೆಲೆಗಾಗಿ ಇಷ್ಟು ದಿನ ಹೋರಾಡಿದೆವು. ಇನ್ನು ಮುಂದೆ ಸರ್ಕಾರಿ ನೌಕರರಷ್ಟೇ ವೇತನದಷ್ಟೇ ರೈತರಿಗೂ ಸಿಗುವಂತೆ ಆಗ್ರಹಿಸುತ್ತೇವೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ರೈತರ ಅರ್ಜಿ ಸ್ವೀಕರಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ತಾಲ್ಲೂಕು ಕಚೇರಿಗಳಲ್ಲೂ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಕೇಂದ್ರ, ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಎರಡು ಸಾವಿರಕ್ಕೂ ಅಧಿಕ ರೈತರು ಸಾಲ ಮನ್ನಾ ಅರ್ಜಿ ಸಲ್ಲಿಸಲು ಬಂದಿದ್ದರು. 10 ಕೌಂಟರ್ ತೆರೆಯಲಾಗಿತ್ತು. ಆದರೂ ರೈತರ ನುಕುನುಗ್ಗಲು ಹೆಚ್ಚಾಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಆನೆಕೆರೆ ರವಿ, ಜಿಲ್ಲಾ ಘಟಕದ ಅಧ್ಯಕ್ಷ ಬಾಬು, ಮುಖಂಡರಾದ ಮೀಸೆ ಮಂಜೇಗೌಡ, ಗ್ಯಾರಂಟಿ ರಾಮಣ್ಣ, ಅಣ್ಣೇಗೌಡ, ಜಡಿಯಪ್ಪ ದೇಸಾಯಿ, ಜಯರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT