ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ವೀರಸೇನಾನಿಗಳು ಹುಟ್ಟಿ ಬರಲಿ

Last Updated 5 ನವೆಂಬರ್ 2017, 7:29 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯ ವೀರಸೇನಾನಿಗಳ ನಾಡು. ಈ ಪುಣ್ಯ ಭೂಮಿಯಿಂದ ಮತ್ತಷ್ಟು ಯುವಕರು ವೀರಸೇನಾನಿಗಳಾಗಿ ಹುಟ್ಟಿ ಬಂದು ದೇಶಸೇವೆ ಮಾಡಲಿ’ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಕರೆ ನೀಡಿದರು.

ಜಿಲ್ಲೆಯ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಪ್ರತಿಮೆಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

‘ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅತೀವ ಸಂತಸ ಉಂಟಾಗುತ್ತಿದೆ. ಇಬ್ಬರೂ ಸಹ ಸೇನೆಯ ಮಹಾನ್‌ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕಾರ್ಯಪ್ಪ ಅವರು ಮೂರು ರಕ್ಷಣಾ ಪಡೆಗಳ ಪ್ರಥಮ ದಂಡನಾಯಕರಾಗಿದ್ದವರು. ಕಠಿಣ ಸಂದರ್ಭದಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರ ಸೇವೆ, ಧೈರ್ಯ ಹಾಗೂ ಸಾಧನೆಗಳನ್ನು ವರ್ಣಿಸಲು ಪದಗಳೂ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ತಿಮ್ಮಯ್ಯ ಅವರೂ ಸಹ ಕೊಡಗಿನಲ್ಲಿ ಹುಟ್ಟಿ ದೇಶಸೇವೆ ಮಾಡಿದವರು. ಇಂತಹ ಮಹಾನ್‌ ನಾಯಕರು ಕೊಡಗಿನಲ್ಲಿ ಜನಿಸಿರುವುದು ಈ ನಾಡಿನ ಪುಣ್ಯ’ ಎಂದು ಅವರು ತಿಳಿಸಿದರು. ‘ನಿವೃತ್ತ ಯೋಧರ ಆರೋಗ್ಯ ದೃಷ್ಟಿಯಿಂದ ಹಲವು ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ.

ಕೆಲವು ಇಸಿಎಚ್‌ಎಸ್‌ಗಳು (ನಿವೃತ್ತ ಸೈನಿಕರ ಆಸ್ಪತ್ರೆ) ಉತ್ತಮ ಸೇವೆ ಮಾಡುತ್ತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಿವೃತ್ತ ಯೋಧರಿಗೆ ಗುಣಮಟ್ಟದ ಔಷಧಿಗಳು ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಮೆಡಿಕಲ್‌ಗಳಿಂದ ಔಷಧಿ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ರಾವತ್‌ ಮಾಹಿತಿ ನೀಡಿದರು.

‘ಕೆ.ಎಂ. ಕಾರ್ಯಪ್ಪ ಹಾಗೂ ಮಾಣಿಕ್‌ ಷಾ ಅವರು ನಿವೃತ್ತರಾದ ಜ.14 ಅನ್ನು ನಿವೃತ್ತ ಸೇನಾಧಿಕಾರಿಗಳ ದಿನವಾಗಿ ಆಚರಿಸಲಾಗುತ್ತಿದೆ. ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಸೈನಿಕರಿಗೆ ಜನರ ಪ್ರೋತ್ಸಾಹ, ಬೆಂಬಲ ಅಗತ್ಯವಾಗಿ ಬೇಕಿದೆ’ ಎಂದು ಹೇಳಿದರು.

ಕೌಶಲ ಪ್ರಮಾಣ ಪತ್ರ: ನಿವೃತ್ತರಾದ ಬಳಿಕ ಜೀವನ ಭದ್ರತೆಗೆ ಅನುಕೂಲವಾಗಲಿ ಎಂದು ಕೌಶಲ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೇ ಅವರಿಗೆ ಪ್ರಮಾಣ ಪತ್ರವನ್ನೂ ವಿತರಣೆ ಮಾಡುತ್ತಿದೆ. ಜತೆಗೆ, ನಿವೃತ್ತ ವೇತನ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT