ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡ ತಂದ ಸಮೃದ್ಧ ಫಸಲು

Last Updated 5 ನವೆಂಬರ್ 2017, 8:33 IST
ಅಕ್ಷರ ಗಾತ್ರ

ತಾವರಗೇರಾ: ಕಳೆದ ಮೂರು ವರ್ಷದಿಂದ ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದ ಸಮೀಪದ ಚಿಕ್ಕ ತೆಮ್ಮಿನಾಳ ಗ್ರಾಮದ ರೈತರ ಹೊಲಗಳಲ್ಲಿ ಕೃಷಿ ಇಲಾಖೆ ನಿರ್ಮಿಸಿದ ಕೃಷಿ ಹೊಂಡಗಳಿಂದ ಸಮೃದ್ಧ ಬೆಳೆ ಕಾಣುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಮೆಣೆದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಪುಟ್ಟ ಗ್ರಾಮದಲ್ಲಿ ಕಳೆದ ಆರು ತಿಂಗಳ ಹಿಂದೆ ಗ್ರಾಮದ 30 ರೈತರ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. ಕೆಲವು ರೈತರ ಜಮೀನಿನಲ್ಲಿ ಈಗಾಗಲೆ ನೀರಾವರಿಗಾಗಿ ಬೋರ್‌ವೆಲ್ ಕೊರೆಸಿ ವ್ಯವಸಾಯ ಮಾಡುತ್ತಿದ್ದರೂ ಉತ್ತಮ ಫಸಲು ಕಂಡಿರಲಿಲ್ಲ.

ಅಂತರ್ಜಲ ಕೊರತೆಯಿಂದ ಹೊಲದಲ್ಲಿ ಇದ್ದ ಬೋರ್‌ವೆಲ್‌ಗಳಲ್ಲಿ ನೀರು ಬಾರದೆ ತೊಂದರೆ ಅನುಭವಿಸಿದ್ದರು. ಆದರೆ ಈಗ ಕೃಷಿ ಹೊಂಡ ನಿರ್ಮಿಸಿ ನಿತ್ಯ ಹೊಲದಲ್ಲಿ ನೀರು ದೊರೆಯುವಂತೆ ಮಾಡಿಕೊಂಡಿದ್ದಾರೆ. ಈ ಮೂಲಕ ಕೃಷಿ ಇಲಾಖೆಯಿಂದ ದೊರೆತ ಸೌಲಭ್ಯವನ್ನು ಗ್ರಾಮದ ರೈತರು ಸದುಪಯೋಗಪಡಿಸಿಕೊಂಡು ಉತ್ತಮ ಬೆಳೆ ಬೆಳೆದಿದ್ದಾರೆ.

ಮಳೆ ಆಧಾರಿತ ಬೆಳೆಗಳಾದ ಸಜ್ಜೆ, ನವಣೆ, ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆಗಳನ್ನು ರೈತರು ತಮ್ಮ ಹೊಲದಲ್ಲಿನ ಬೋರ್‌ವೆಲ್‌ಗಳಿಂದ ಸಿಗುವ ಅಲ್ಪ ನೀರಿನಿಂದ ಬೆಳೆ ಬೆಳೆಯುತ್ತಿದ್ದರು. ಆದರೆ ಈಗ ಕೃಷಿ ಹೊಂಡ ನಿರ್ಮಾಣದಿಂದ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಿರುವುದರಿಂದ ಆರು ತಿಂಗಳಿಂದ ಇಲ್ಲಿನ ಬೋರ್‌ವೆಲ್‌ಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಬರುತ್ತಿದೆ ಪ್ರತಿ ಬೆಳೆಗೂ ಕೃಷಿ ಹೊಂಡದ ನೀರನ್ನೆ ಬಳಸುತ್ತಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದಾರೆ.

ಕೃಷಿ ಇಲಾಖೆಯಿಂದ ಗ್ರಾಮದ 28 ಮಂದಿ ರೈತರಿಗೆ ತುಂತುರು ಹನಿ ನೀರಾವರಿಗಾಗಿ ಸ್ಪಿಂಕ್ಲರ್‌ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಆಯಿಲ್ ಎಂಜಿನ್ ಸಹ ನೀಡಲಾಗಿದೆ. ಸಾಮಾನ್ಯ ವರ್ಗಕ್ಕೆ ಸೇರಿದ ನಾಲ್ವರು ರೈತರನ್ನು ಒಳಗೊಂಡ ಒಂದು ಗುಂಪಿಗೆ ಒಂದು ಆಯಿಲ್ ಇಂಜಿನ್ ಇಲಾಖೆಯಿಂದ ಉಚಿತವಾಗಿ ನೀಡಲಾಗಿದೆ. ನೀರು ಸಂಗ್ರಹಕ್ಕೆ ತಾಡಪಾಲು ಸಹ ನೀಡಿದ್ದು, ₹16 ಲಕ್ಷ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಾಣ, ₹2 ಲಕ್ಷ ಆಯಿಲ್ ಇಂಜಿನ್ ವಿತರಣೆ, ₹ 2 ಲಕ್ಷದ ತಾಡಪಾಲ್ , ₹ 4 ಲಕ್ಷ ವೆಚ್ಚದಲ್ಲಿ ಸ್ಪಿಂಕ್ಲರ್‌ ವಿತರಿಸಲಾಗಿದೆ.

‘ಇತ್ತಿಚೆಗೆ ಸುರಿದ ಮಳೆಯಿಂದ ಗ್ರಾಮದ ಕೆಲವು ರೈತರು ಕೃಷಿಹೊಂಡದಲ್ಲಿ ನೀರು ತುಂಬಿ ಹೆಚ್ಚಾದ ನೀರನ್ನು ಹೊರಗೆ ಬಿಟ್ಟ ಉದಾಹರಣೆಗಳು ಇವೆ. ಸರ್ಕಾರದ ಸಹಾಯಧನದಲ್ಲಿ ಇಲಾಖೆ ನೀಡಿದ್ದು ನಮಗೆ ಅನೂಕೂಲವಾಗಿದೆ’ ಎಂದು ರೈತರಾದ ಲಕ್ಷ್ಮಪ್ಪ ಮರುಕುಂಬಿ, ವೆಂಕಟೇಶ, ಶರಣಪ್ಪ ಶಾಸಲಮರಿ, ಹನಮಂತಪ್ಪ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT