ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರಿಕೆಯಾಗದಿರಲಿ ಮಕ್ಕಳ ಕಲಿಕೆ

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

–ಕೆ.ವಿ. ರಾಜಲಕ್ಷ್ಮಿ

**

ಇತ್ತೀಚಿಗೆ ವಿಡಿಯೋವೊಂದು ವಾಟ್ಸಪ್‌ನಲ್ಲಿ ಬಂತು. ಅದನ್ನು ನೋಡುತ್ತಿದ್ದಂತೇ ಕರುಳು ಹಿಂಡಿದಂತಾಯ್ತು. 3ರಿಂದ 4 ವರ್ಷ ವಯಸ್ಸಿನ ಮಗುವಿಗೆ 1, 2, 3 ಕಲಿಸಾಟ! ಮಗು, ಅಂಕಿಗಳನ್ನು ಹೇಳಲು ಗುರುತಿಸಲು ಕಷ್ಟಪಡುತ್ತಿದೆ, ಹೆದರಿದೆ; ಕಲಿಸುವಾಕೆ ಛಟೀರನೆ ಒಂದೇಟು ಕೊಟ್ಟೊಡನೆ ಮತ್ತಷ್ಟು ಬೆದರಿ, ಕೋಪ ಮತ್ತು ಅಸಹನೆಯೊಂದಿಗೆ ಕಲಿಯತೊಡಗುತ್ತದೆ.

ಇದೆಂಥ ಶೋಷಣೆ? ಅಕ್ಷಮ್ಯವಲ್ಲವೇ? ಲಾಲಯೇತ್ ಪಂಚ ವರ್ಷಾಣಿ... ಎಲ್ಲ ಮರೆತೇ ಹೋಗಿ ರಾತ್ರೋರಾತ್ರಿ ಮಗು ಸೂಪರ್ ಚೈಲ್ಡ್, ಆಲ್ ರೌಂಡರ್ ಆಗಬೇಕೆನ್ನುವ ಪೋಷಕರ ಹುಚ್ಚಾಟಕ್ಕೆ ಕಡಿವಾಣ ಬೀಳಲೇಬೇಕು. ಇಲ್ಲವಾದಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗುವ ಬದಲು ಭಯಾನಕವಾಗುವ ಸಾಧ್ಯತೆಗಳೇ ಹೆಚ್ಚು.

ಮಕ್ಕಳು ಗಳಿಸುವ ಅಂಕಗಳನ್ನೇ ಮಾನದಂಡವಾಗಿಟ್ಟು ಬುದ್ಧಿವಂತ, ಅತಿ ಬುದ್ಧಿವಂತ, ದಡ್ಡ ಇತ್ಯಾದಿಯಾಗಿ ಅವರನ್ನು ಗುರುತಿಸುತ್ತಾರೆ. ಅಂಕಗಳಿಗೆ ಸರಿಯಾದ ಜ್ಞಾನವಿದೆಯೇ ಎಂದು ಪ್ರಶ್ನಿಸಿ ಪ್ರಯೋಗಿಸಿದರೆ ಬಹುಶಃ ನಿರಾಶೆ ಕಾದಿದೆಯೇನೋ. ಮೊದಲು 'ದಡ್ಡ'ನನ್ನು ನೋಡೋಣ. ಆರು ವರ್ಷದ ಹಿಂದಿನ ಘಟನೆ. 'ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಾನೆ. ಹೇಗಾದರೂ ಮಾಡಿ ಪೂರಕ ಪರೀಕ್ಷೆಯಲ್ಲಿ ಅವನು ಪಾಸಾಗುವಂತೆ ಕಲಿಸಿ' ಎಂದು ಶಿಫಾರಸ್ಸಿನೊಂದಿಗೆ ಹುಡುಗನ ಹೆತ್ತವರು ಬಂದು ಅವಲತ್ತುಕೊಂಡಾಗ 'ಸರಿ ನೋಡಿಯೇ ಬಿಡೋಣ’ ಎಂದು ಒಪ್ಪಿಕೊಂಡೆ.

ಮೊದಲ ಎರಡು ದಿನದಲ್ಲಿ ಹುಡುಗ ಚುರುಕಿದ್ದಾನೆ ಎಂದು ಅಳೆದೆ. ಗಣಿತ, ವಿಜ್ಞಾನ, ಹಿಂದಿ ತಲೆಗೆ ಹೋಗದ ಕಬ್ಬಿಣದ ಕಡಲೆ. ಹೇಗೋ ಈ ಪರೀಕ್ಷೆಯಲ್ಲಿ ಪಾಸ್ ಆದರೆ ಇನ್ನು ಜನ್ಮಕ್ಕೆ ಈ ವಿಷಯಗಳನ್ನು ಓದಬೇಕಿಲ್ಲ' ಎಂದೆಲ್ಲ ಪುಸಲಾಯಿಸಿ ಉಳಿದಿದ್ದ ಇಪ್ಪತ್ತು ದಿನದಲ್ಲಿ ಉತ್ತರಿಸಿದ ಪ್ರಶ್ನಪತ್ರಿಕೆಗಳಲ್ಲಿ ಸರಳ ಉತ್ತರವಿರುವಂತ ಪ್ರಶ್ನೆಗಳನ್ನು ಆಯ್ದು ಅವನನ್ನು ಪರೀಕ್ಷೆಗೆ ತಯಾರಿಸತೊಡಗಿದೆ. ಇಲ್ಲಿ ಹೇಳಲೇ ಬೇಕಾದ ಅಂಶ ಅವನಲ್ಲಿದ್ದ ಚಿತ್ರಕಲೆಯನ್ನು ಬಳಸಿಕೊಂಡಿದ್ದು. ವಿಜ್ಞಾನ ಮತ್ತು ರೇಖಾಗಣಿತಕ್ಕೆ ಇದು ಬಹಳ ಸಹಾಯಕವಾಗಿತ್ತು. 'ಚಿತ್ರ ಬಿಡಿಸು, ವಿವರಣೆ ಬರದಿದ್ದರೆ ಅಡ್ಡಿಯಿಲ್ಲ. ಸ್ವಲ್ಪವಾದರೂ ಅಂಕ ಬರುತ್ತೆ’ ಎಂಬೆಲ್ಲ ಲೆಕ್ಕಾಚಾರ ಹಾಕಿ ಪ್ರೋತ್ಸಾಹಿಸಿದ್ದೆ. ಅರ್ಥವಾಗುತ್ತದೋ ಬಿಡುತ್ತದೋ, ಸರಳ ಪದಗಳಲ್ಲಿ  ಉತ್ತರಿಸಲು ತರಬೇತಿ ಕೊಟ್ಟಿದ್ದೆ. ಅಂತೂ ಅಷ್ಟು ದಿನ ಸಾಕಷ್ಟು ಮನೆಕೆಲಸ ಕೊಟ್ಟು ತಯಾರು ಮಾಡಿದ್ದೆ. ಪರೀಕ್ಷೆ ಮುಗಿದು ಫಲಿತಾಂಶ ಬಂತು ಅವನು ಗೆದ್ದಿದ್ದ. ಮನೆಯಲ್ಲಿ ಡಿಪ್ಲೊಮೊ ಅಥವಾ ವಿಜ್ಞಾನ ವಿಭಾಗಕ್ಕೆ ಸೇರಲು ಒತ್ತಾಯ ಬಂದಾಗ ‘ಆಂಟಿಯನ್ನು ಕೇಳೋಣ’ ಎಂದು ನನ್ನೆಡೆಗೆ ತೋರಿದ್ದ. ಅವನ ತೀಕ್ಷ್ಣಮತಿಗೆ ವಾಣಿಜ್ಯವನ್ನು ಸೂಚಿಸಿದೆ. ವಾಣಿಜ್ಯದಲ್ಲಿ ಉತ್ತಮ ಅಂಕಗಳು ಬಂದು ನಂತರ ಬಿ.ಬಿ.ಎಂ. ಪದವಿ ಪಡೆದು ಅಪ್ಪನ ಬಿಸಿನೆಸ್ ಯಶಸ್ವಿಯಾಗಿ ನಿರ್ವಹಿಸುತ್ತಿರುವಾಗ ಹೆಮ್ಮೆ ಎನ್ನಿಸುತ್ತದೆ.

ಇನ್ನೊಬ್ಬ ವಿದ್ಯಾರ್ಥಿನಿ ಭಾಷೆ, ಸಮಾಜಪರಿಚಯ ಓಕೆ; ಗಣಿತ ಮತ್ತು ವಿಜ್ಞಾನ ಏಕೆ? ಹೀಗೆ ಗೊಣಗುತ್ತಿದ್ದವಳಿಗೆ ಇದೇ ಮಂತ್ರ ಮೊದಲ ದರ್ಜೆಯನ್ನು ತಂದಿತ್ತು. ಮುಂದೆ ಪಿಯುಸಿಯಲ್ಲಿ ತನಗಿಷ್ಟದ ಅರ್ಥಶಾಸ್ತ್ರದಲ್ಲಿ ಅತ್ಯುನ್ನತ ಅಂಕ ಗಳಿಸಿ ಸರ್ಕಾರದ ವಿದ್ಯಾರ್ಥಿವೇತನ ಪಡೆದು ಮುನ್ನಡೆದಳು.

ಇನ್ನು 'ಬುದ್ಧಿವಂತ'ರ ಕಡೆಗೆ ಬರೋಣ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90 ಗಳಿಸಿದ ಹುಡುಗನ ಕನ್ನಡ ಮತಿತು ಆಂಗ್ಲಭಾಷಾ ಜ್ಞಾನವನ್ನು ನೋಡಿ ಬೆವರೊರೆಸಿಕೊಂಡೆ!

ಇನ್ನೊಂದೆಡೆ, ಸಾಮಾನ್ಯ ದರ್ಜೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ದಾಟಿ, ಡೊನೇಷನ್ ಕೊಟ್ಟು ದೊಡ್ಡ ಕಾಲೇಜಿನಲ್ಲಿ 4 ವರ್ಷದ ಎಂಜಿನಿಯರಿಂಗ್ ಕೋರ್ಸ್ಅನ್ನು ಮತ್ತೆ ನಾಲ್ಕು ವರ್ಷ ಕಲಿತು ಅಂತೂ ಎಂಜಿನಿಯರ್ ಆಗಿ, ಅವನ ಬುದ್ಧಿವಂತಿಕೆಗೆ ತಕ್ಕ ಕೆಲಸ ಸಿಗದೇ ಎಳ್ಳು ಸಲ್ಲದ ಯುವಕನನ್ನು ನೋಡಿದರೆ ಅಯ್ಯೋ ಎನ್ನಿಸುತ್ತದೆ. ಒಣಪ್ರತಿಷ್ಠೆಗಾಗಿ ಮಗನನ್ನು ಇಂಜಿನಿಯರ್ ಮಾಡಿದ ಪರಿಣಾಮ - ಇದು ಹೆತ್ತವರಿಗೆ ಸುಖ ಕೊಡುವ ವಿಷಯವೇ?

ಮತ್ತೊಂದೆಡೆ ಕಲಿತಿದ್ದು ಎಂಜಿನಿಯರಿಂಗ್, ಉದ್ಯೋಗ ಬ್ಯಾಂಕ್‌ ಕ್ಲಾರ್ಕ್. ಗುಮಾಸ್ತನ ಕೆಲಸಕ್ಕೆ ವೃತ್ತಿಪರ ಓದು ಬೇಕಿರಲಿಲ್ಲ ಅಲ್ಲವೇ? ಸಾಧಾರಣ ದರ್ಜೆಯಲ್ಲಿ ಪಾಸಾಗುವ ವೃತ್ತಿಪರರಿಗೆ ಯಾರೂ ಮಣೆ ಹಾಕರು. ಕ್ಯಾಂಪಸ್‌ನಲ್ಲಿ ಆಯ್ಕೆ ಆಗದೆ ಜೀವ ತೆಗೆದುಕೊಂಡ ಅಥವಾ ಖಿನ್ನತೆಗೊಳಗಾದವರನ್ನು ಕಾಣುವಾಗ ಯಾರನ್ನು ತೆಗಳಬೇಕು? ಸೋಲನ್ನು ಒಪ್ಪಿಕೊಳ್ಳದೇ ಪೋಷಕರ ದುರಾಸೆಗೆ ಬಲಿಯಾಗುವ, ಗೆಲುವು ಸಾಧಿಸಲಾಗದ ಅಸಹಾಯಕ ಮಕ್ಕಳನ್ನು ಕಾಣುವಾಗ ಕನಿಕರವೆನಿಸುತ್ತದೆ.

ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುವ ಧೈರ್ಯವಿಲ್ಲದೆಯೋ ಅಥವಾ ಹೆತ್ತವರ ಭಾವನಾತ್ಮಕ ಒತ್ತಡಕ್ಕೆ ಮಣಿದು ತಮ್ಮೆಲ್ಲ ಅಸೆ ಬದಿಗೊತ್ತಿ ಬೇರೆ ದಾರಿಯಲ್ಲಿ ಕ್ರಮಿಸಬೇಕಾದ ಅನಿವಾರ್ಯತೆಯೋ - ಗುರಿ ತಲುಪುವಲ್ಲಿ ಹಿನ್ನಡೆಯಾದಾಗ ಬಹು ದೂರ ಸಾಗಿರುತ್ತಾರೆ - ಹಿಂದಿರುಗಿ ನೋಡಲಾಗದಷ್ಟು ಸಮಯ, ಶ್ರಮಗಳು ವ್ಯರ್ಥವಾಗಿರುತ್ತವೆ.

ಪ್ರಾಥಮಿಕ ಶಿಕ್ಷಣದ ಅವಧಿಯಲ್ಲೇ ಸೋಲು–ಗೆಲುವುಗಳನ್ನು ಸಮವಾಗಿ ಸ್ವೀಕರಿಸುವ ಮನೋಭಾವವನ್ನು ತುಂಬಬೇಕಾದ ಜವಾಬ್ದಾರಿಯು ಹೆತ್ತವರ ಮೇಲಿದೆ ಅಲ್ಲವೇ?

ವಿಷಯ ಯಾವುದೇ ಕಲಿಯಿರಿ, ಇಷ್ಟಪಟ್ಟು ಕಲಿಯಿರಿ ಅದರಲ್ಲಿ ಮೇಲ್ಪದರದಲ್ಲಿದ್ದರಷ್ಟೇ ಹೆಚ್ಚು ಮನ್ನಣೆ ಬೆಲೆ ಎಂದು ಉತ್ತೇಜಿಸಬಾರದೇಕೆ? ತಮ್ಮ ಕನಸಿನ ಬದಲು ಮಕ್ಕಳ ಕನಸನ್ನು ನನಸಾಗಿಸುವ ದಿಸೆಯಲ್ಲಿ ಯೋಚಿಸಬಾರದೇಕೆ? ಇಲ್ಲಿ ಹೇಳಬಯಸಿರುವುದು ಇಷ್ಟೇ. ವಿಜ್ಞಾನೇತರ ವಿಷಯಗಳನ್ನು ಓದಿ ದೇಶದ ಅತ್ಯುನ್ನತ ಹುದ್ದೆಯನ್ನಲಂಕರಿಸಿರುವವರು, ಕಲಿಕೆಯ ಹೊರತಾಗಿ ಕ್ರೀಡೆ, ಕಲೆ, ಮಾಧ್ಯಮ ಇತ್ಯಾದಿ ವಿಭಾಗಗಳಲ್ಲಿ ವಿಜೃಂಭಿಸಬಹುದೆಂದು ಈ ಒಣಪ್ರತಿಷ್ಠೆಯ ಹಿಂದೆ ಬಿದ್ದಿರುವ ಪೋಷಕರಿಗೇಕೆ ಅರ್ಥವಾಗದೋ? ವಿದ್ಯಾರ್ಥಿಗಳ ಗುರಿ, ಶಕ್ತಿ–ಅಶಕ್ತಿಗಳನ್ನು ಪರಿಗಣಿಸಿ ಅವರಿಗಿಷ್ಟವಾಗುವ ವಿಷಯದಲ್ಲಿ ತೊಡಗಿಸಿದರೆ ಪೋಷಕರಿಗೂ ಯಶಸ್ಸು ಸಿಕ್ಕಂತೆ. ಬದುಕನ್ನು ರೂಪಿಸಿಕೊಳ್ಳಲು ನೂರಾರು ಮಾರ್ಗಗಳಿವೆ. ಯಾರೋ ಎಂಜಿನಿಯರ್ ಡಾಕ್ಟರ್ ಆಗುತ್ತಾರೆಂದು ನಮ್ಮ ಮಕ್ಕಳಿಗೆ ಅಯಿಷ್ಟ, ಅಸಹನೆ, ಅಜೀರ್ಣ ಅನ್ನಿಸಿದರೂ ಗಣಿತ–ವಿಜ್ಞಾನಗಳನ್ನು ಹೇರಿಸಿದರೆ ಅವು ಹೇರಿಕೆಯಾಗುವುದರಲ್ಲಿ ಸಂಶಯವಿಲ್ಲ. ಮತ್ತೂ ಮುಂದುವರೆದು ಪೋಷಕರನ್ನೂ ಸಮಾಜವನ್ನೂ ದ್ವೇಷಿಸುವ ಮಟ್ಟಕ್ಕೆ ಋಣಾತ್ಮಕವಾಗಿ ಅವರು ಬೆಳೆಯುತ್ತಾರೆ.

ಇಂದಿನ ಪುಟಾಣಿಗಳನ್ನು ನಾಳಿನ ಉತ್ತಮ, ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅವರು ಸಮಾಜಕ್ಕೆ ಆಸ್ತಿಯಾಗದಿದ್ದರೂ ಪರವಾಗಿಲ್ಲ, ಹೊರೆಯಾಗಬಾರದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT