ಸಾಧನೆ

ದಾವಣಗೆರೆಯ ಕುಸ್ತಿ ಕಲಿಗಳು

ಕುಸ್ತಿಪಟುಗಳ ಸಾಧನೆಯಿಂದಾಗಿ ದಾವಣಗೆರೆಯ ಕುಸ್ತಿ ತರಬೇತಿ ಕೇಂದ್ರ ನಿಯಮಿತವಾಗಿ ಸುದ್ದಿಯಲ್ಲಿರುತ್ತದೆ. ಕೆಲವು ವರ್ಷಗಳಿಂದ ‘ದೇವನಗರಿ’ಯ ಯುವ ಪೈಲ್ವಾನರು ವಿಶ್ವ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌, ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌, ವಿಶ್ವ ಶಾಲಾ ಕ್ರೀಡೆ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವರು ಪದಕಗಳೊಡನೆ ಹಿಂತಿರುಗಿದ್ದಾರೆ ಕೂಡ.

ಕಾರ್ತಿಕ್‌ ಕಾಟೆ ಮತ್ತು ಶ್ರೀನಿವಾಸ ಇ.

ಕುಸ್ತಿಪಟುಗಳ ಸಾಧನೆಯಿಂದಾಗಿ ದಾವಣಗೆರೆಯ ಕುಸ್ತಿ ತರಬೇತಿ ಕೇಂದ್ರ ನಿಯಮಿತವಾಗಿ ಸುದ್ದಿಯಲ್ಲಿರುತ್ತದೆ. ಕೆಲವು ವರ್ಷಗಳಿಂದ ‘ದೇವನಗರಿ’ಯ ಯುವ ಪೈಲ್ವಾನರು ವಿಶ್ವ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌, ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌, ವಿಶ್ವ ಶಾಲಾ ಕ್ರೀಡೆ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವರು ಪದಕಗಳೊಡನೆ ಹಿಂತಿರುಗಿದ್ದಾರೆ ಕೂಡ.

ದಾವಣಗೆರೆಯಲ್ಲಿ ತರಬೇತಿ ಪಡೆಯುವ ಧಾರವಾಡದ ರಫೀಕ್‌ ಹೊಳಿ ವಿಶ್ವ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ಗಳಲ್ಲಿ (2016, ಬೆಳ್ಳಿ) ಭಾಗವಹಿಸಿದರೆ, ಬಾಗಲಕೋಟೆ ತಾಲ್ಲೂಕು ಬೇವಿನಮಟ್ಟಿಯ ಅರ್ಜುನ್‌ ಹಲಕುರ್ಕಿ ಏಷ್ಯನ್‌ ಚಾಂಪಿಯನ್‌ಷಿಪ್‌ (ಫಿಲಿಪೀನ್ಸ್, 4ನೇ ಸ್ಥಾನ), ವಿಶ್ವ 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌, (ಟರ್ಕಿ, ಬೆಳ್ಳಿ ಪದಕ), ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ (2 ಬಾರಿ– ಫ್ರಾನ್ಸ್‌, ಫಿನ್ಲೆಂಡ್‌)ನಲ್ಲಿ ಸ್ಪರ್ಧಿಸಿದ್ದಾರೆ.

ಇದೇ ತರಬೇತಿ ಕೇಂದ್ರದಲ್ಲಿರುವ ಪ್ರತಿಭಾನ್ವಿತ ಕುಸ್ತಿಪಟುಗಳಾದ ಆನಂದ ಎಲ್‌, ಇ. ಶ್ರೀನಿವಾಸ್‌, ಎನ್‌.ಕೆಂಚಪ್ಪ, ಕಾರ್ತಿಕ್‌ ಕಾಟೆ ಕೂಡ ಈಗಾಗಲೇ ವಿವಿಧ ಹಂತದ ಸ್ಪರ್ಧೆಗಳಲ್ಲಿ ಯಶಸ್ಸು ಕಾಣುತ್ತಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ನಿಲಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿ ವ್ಯವಸ್ಥೆಯೂ ಇದೆ. ತರಬೇತಿ ಕೇಂದ್ರದ ಕುಸ್ತಿ ಪೈಲ್ವಾನರ ಸಾಧನೆ ಕಿರಿಯರಿಗೆ ಸ್ಫೂರ್ತಿ, ಪ್ರೇರಣೆಯಾಗುತ್ತಿದೆ ಎನ್ನುತ್ತಾರೆ ಇವರಿಗೆಲ್ಲ ತರಬೇತಿ ನೀಡುತ್ತಿರುವ ಅಂತರರಾಷ್ಟ್ರೀಯ ತರಬೇತುದಾರ ಆರ್‌. ಶಿವಾನಂದ

ಸಿಂಹಪಾಲು: ಕಳೆದ ತಿಂಗಳು (ಅ. 13ರಿಂದ 15) ತಮಿಳುನಾಡಿನ ಮೆಟ್ಟೂರಿನಲ್ಲಿ ದಕ್ಷಿಣ ಭಾರತ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕರ್ನಾಟಕ ತಂಡದಲ್ಲಿದ್ದ ದಾವಣಗೆರೆ ಕುಸ್ತಿ ತರಬೇತಿ ಕೇಂದ್ರದ ಪೈಲ್ವಾನರೆಲ್ಲ ಪದಕ ಕೊರಳಿಗೇರಿಸಿಕೊಂಡಿದ್ದರು. ರಾಜ್ಯ ತಂಡದಲ್ಲಿದ್ದ 20 ಮಂದಿಯಲ್ಲಿ 16 ಮಂದಿ ದಾವಣಗೆರೆ ಕುಸ್ತಿ ತರಬೇತಿ ಕೇಂದ್ರದವರು, ಯಾರೂ ಬರಿಗೈಲಿ ಮರಳಲಿಲ್ಲ. 14 ಮಂದಿ ಚಿನ್ನ ಗೆದ್ದರೆ, ಇಬ್ಬರು ಬೆಳ್ಳಿ ಪದಕ ಗೆದ್ದುಕೊಂಡಿದ್ದರು ಎಂದು ಶಿವಾನಂದ ನೆನಪಿಸುತ್ತಾರೆ.

ಕುಸ್ತಿ ತರಬೇತಿ ಕೇಂದ್ರದ ಇಬ್ಬರು ಸ್ಪರ್ಧಿಗಳು ಮೈಸೂರಿನಲ್ಲಿ ಸೆಪ್ಟೆಂಬರ್‌ ಕೊನೆಯಲ್ಲಿ ನಡೆದ ದಸರಾ ಕುಸ್ತಿ ಸ್ಪರ್ಧೆಗಳಲ್ಲೂ ಬಿರುದು ಗೆದ್ದರು. ಕಾರ್ತಿಕ್‌ ಕಾಟೆ ‘ಪ್ರತಿಷ್ಠಿತ ದಸರಾ ಕಂಠೀರವ’ (+86 ಕೆ.ಜಿ) ಬಿರುದು ಪಡೆದರೆ, ಇ. ಶ್ರೀನಿವಾಸ್‌ ‘ದಸರಾ ಕಿಶೋರ್’ (70 ಕೆ.ಜಿ. ವಿಭಾಗ)ಪಟ್ಟ ಪಡೆದರು. ದಾವಣಗೆರೆಯ ಇತರ ಕೆಲವು ಕುಸ್ತಿಪಟಗಳು ಇತರೆ ವಿಭಾಗಗಳಲ್ಲಿ ಪದಕಗಳನ್ನು ಗೆದ್ದರು.

(ಶ್ರೀನಿವಾಸ್, ಕಾರ್ತಿಕ್‌ ಕಾಟೆ ಜೊತೆ ತರಬೇತುದಾರ ಶಿವಾನಂದ ಆರ್‌.)

ಕುಸ್ತಿವೀರ– ಕಾಟೆರಾಜ್ಯ, ಅಂತರರಾಜ್ಯ ಮಟ್ಟದಲ್ಲಿ (ಕರ್ನಾಟಕ, ಮಹಾರಾಷ್ಟ್ರದ) ವಿವಿಧೆಡೆ ನಡೆದಿರುವ ಸುಮಾರು 75 ಜಂಗಿ ಕುಸ್ತಿ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಕಾರ್ತಿಕ್‌ ಕಾಟೆ ಈ ಬಾರಿ ‘ದಸರಾ ಕಂಠೀರವ’ ಪ್ರಶಸ್ತಿ ಗೆಲ್ಲುವುದು ಅನಿರೀಕ್ಷಿತವೇನೂ ಆಗಿರಲಿಲ್ಲ. ಕಳೆದ ವರ್ಷ ಸೆಮಿಫೈನಲ್‌ ತಲುಪಿದ್ದ ಅವರು ಈ ಬಾರಿ ಬೆಳಗಾವಿಯ ಶಿವಪ್ರಸಾದ್‌ ಖೋತ್ ವಿರುದ್ಧ ಗೆಲ್ಲಲು ತೀವ್ರ ಸೆಣಸಾಟ ನಡೆಸಬೇಕಾಯಿತು.

ಕಾರ್ತಿಕ್‌ 2013 ಮತ್ತು 2014ರಲ್ಲಿ ‘ದಸರಾ ಕೇಸರಿ’ ಪಟ್ಟ ಪಡೆದಿದ್ದರು. ಎರಡು ಬಾರಿ (2015 ಮತ್ತು 2016– ಕ್ರಮವಾಗಿ ಕುರುಕ್ಷೇತ್ರ ಮತ್ತು ಮೈಸೂರು ವಿ.ವಿ.) ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಸ್ಪರ್ಧೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

‘ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ತೋರುವುದೇ ನನ್ನ ಮುಂದಿರುವ ಗುರಿ’ ಎನ್ನುತ್ತಾರೆ ಕಾರ್ತಿಕ್‌. ಈ ತಿಂಗಳ 15 ರಿಂದ 17ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಚಾಂಪಿಯನ್‌ಷಿಪ್‌ ನಿಗದಿಯಾಗಿದೆ.

‘ಕಾರ್ತಿಕ್‌ ಮಟ್ಟಿ ಕುಸ್ತಿಯಲ್ಲಿ (ನಾಡಕುಸ್ತಿ) ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾನೆ. ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದೇನೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದರೆ ಅವಕಾಶಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಅವಕಾಶಗಳು ತೆರೆಯುತ್ತವೆ’ ಎನ್ನುತ್ತಾರೆ ತರಬೇತುದಾರ ಶಿವಾನಂದ.

ಕುಸ್ತಿಯಲ್ಲಿನ ಸಾಧನೆಗಾಗಿ 2014ರಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ‘ಕ್ರೀಡಾ ರತ್ನ ಪ್ರಶಸ್ತಿ’ ಕಾರ್ತಿಕ್‌ ಅವರದಾಗಿತ್ತು. ರಾಣೆಬೆನ್ನೂರಿನ ಈ ಪೈಲ್ವಾನ್‌ ಹತ್ತು ವರ್ಷಗಳಿಂದ ದಾವಣಗೆರೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರತಿಭಾನ್ವಿತ ಮಲ್ಲ ಶ್ರೀನಿವಾಸ್

ದಾವಣಗೆರೆ ನಗರದವರೇ ಆದ ಇ. ಶ್ರೀನಿವಾಸ್‌ ಅವರೂ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಈ ಪ್ರತಿಭಾನ್ವಿತ ಮೊದಲ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡಿದ್ದು 2010ರಲ್ಲಿ. ಭೋಪಾಲ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಶಾಲಾ ಕುಸ್ತಿ ಸ್ಪರ್ಧೆಗಳ 32 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದು, ಈ ಸಾಧನೆಗಾಗಿ ರಾಜ್ಯಪಾಲರಿಂದ ‘ಉತ್ತಮ ಕುಸ್ತಿ ಪ್ರತಿಭೆ’ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

ಈ ಯಶಸ್ಸಿನ ನಂತರ ರಾಜ್ಯದ ವಿವಿಧ ಕಡೆ ನಡೆದಿರುವ ಕುಸ್ತಿಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ನವದೆಹಲಿಯಲ್ಲಿ ಈ ವರ್ಷದ ಜನವರಿಯಲ್ಲಿ ನ್ಯಾಷನಲ್‌ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ (ಎಸ್‌ಜಿಎಫ್‌ಐ) ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳ (19 ವರ್ಷದೊಳಗಿನವರ) 74 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಬೆಳ್ಳಿ ಪದಕದ ಸಾಧನೆ ಕಡಿಮೆಯೇನೂ ಅಲ್ಲ.

ಕಳೆದ ಫೆಬ್ರುವರಿಯಲ್ಲಿ ಹುಬ್ಬಳ್ಳಿ–ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್‌ ಕೂಟದಲ್ಲಿ ಪ್ರಥಮ ಸ್ಥಾನ ಈತನದಾಗಿತ್ತು. ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 74 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿರುವ ಶ್ರೀನಿವಾಸ್‌, ಅದಕ್ಕೆ ಮೊದಲು ದಸರಾದಲ್ಲಿ ‘ದಸರಾ ಕಿಶೋರ್’ ಬಿರುದು ಪಡೆದಿದ್ದಾರೆ. ದಸರಾ ಕ್ರೀಡೆಗೆ ಸ್ವಲ್ಪ ಮೊದಲು ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳದಲ್ಲಿ ವಿವಿಧ ಸಂಘ–ಸಂಸ್ಥೆಗಳು ನಡೆಸಿದ್ದ ಕುಸ್ತಿ ಸ್ಪರ್ಧೆಯ ಮುಖ್ಯ ಆಕರ್ಷಣೆಯಾದ ‘ಕರ್ನಾಟಕ ಕೇಸರಿ’ ಪಟ್ಟವೂ ಈತನ ಪಾಲಾಗಿತ್ತು.

ಕಳೆದ ತಿಂಗಳು ದಕ್ಷಿಣ ಭಾರತ ಮಟ್ಟದ ಚಾಂಪಿಯನ್‌ಷಿಪ್‌ನ 74 ಕೆ.ಜಿ ವಿಭಾಗದ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಗೆದ್ದಿರುವ 18ರ ಹರೆಯದ ಈ ಯುವಕನಿಗೆ  ಆದಷ್ಟು ಬೇಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಬೇಕೆಂಬ ಕನಸು ಇದೆ.

**

‘ಪೊಲೀಸ್‌ ಇಲಾಖೆ ಉದ್ಯೋಗ ನೀಡಲಿ’

ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಕುಸ್ತಿಯಲ್ಲಿ ಉತ್ತಮಸಾಧನೆ ತೋರಿದವರಿಗೆ ಕ್ರೀಡಾ ಕೋಟಾದಡಿ ನೇಮಕ ಮಾಡಿಕೊಳ್ಳಲಾಗುತಿತ್ತು. ನಂತರದ ವರ್ಷಗಳಲ್ಲಿ ಇದು ನಿಂತುಹೋಯಿತು.

ಪೊಲೀಸ್‌ ಇಲಾಖೆಯಲ್ಲಿ ನೌಕರಿ ನೀಡಿದರೆ ಕುಸ್ತಿ ಪಟುಗಳು, ರಾಜ್ಯದಲ್ಲೇ ನೆಲೆ ನಿಲ್ಲಲು ಸಾಧ್ಯವಾಗುತ್ತದೆ. ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡುತ್ತಾರೆ ತರಬೇತುದಾರ ಶಿವಾನಂದ.

ದಾವಣಗೆರೆ ತಾಲ್ಲೂಕಿನ ತೋಳಹುಣಸೆಯವರಾದ ಶಿವಾನಂದ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ನಡೆಯುತ್ತಿರುವ ಕ್ರೀಡಾ ಕೇಂದ್ರದಲ್ಲಿ ಹಲವು ವರ್ಷಗಳಿಂದ ನೀಡುತ್ತಿದ್ದಾರೆ. ಜೀವಮಾನದ ಸಾಧನೆಗಾಗಿ 2015ರಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಹದಿನಾರರ ಪೋರಿಯ ಚಿನ್ನದ ಬೇಟೆ

ಶೂಟಿಂಗ್‌
ಹದಿನಾರರ ಪೋರಿಯ ಚಿನ್ನದ ಬೇಟೆ

12 Mar, 2018
ಕರ್ನಾಟಕದ ಕೀರ್ತಿ

ರೋಯಿಂಗ್‌
ಕರ್ನಾಟಕದ ಕೀರ್ತಿ

12 Mar, 2018
ಚಿನ್ನದ ಕನಸಿನಲ್ಲಿ...

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌
ಚಿನ್ನದ ಕನಸಿನಲ್ಲಿ...

12 Mar, 2018
ಆಟ ಮುನ್ನೋಟ

ಆಟ-ಅಂಕ
ಆಟ ಮುನ್ನೋಟ

12 Mar, 2018
ಜಾವೆಲಿನ್‌: ಭರವಸೆಯ ಮಿಂಚು

ಆಟ-ಅಂಕ
ಜಾವೆಲಿನ್‌: ಭರವಸೆಯ ಮಿಂಚು

12 Mar, 2018