ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಕಾರ್‌ ರ‍್ಯಾಲಿಯಲ್ಲಿ ಮಿಂಚುವ ಕನಸು...

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕದ ಕೆ.ಪಿ.ಅರವಿಂದ್‌, ಮೋಟಾರ್‌ ಸ್ಪೋರ್ಟ್ಸ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

19ನೇ ವಯಸ್ಸಿನಲ್ಲಿ ಬೈಕ್‌ ಸಾಹಸದ ಪಯಣ ಶುರು ಮಾಡಿದ ಅವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 16 ಬಾರಿ ಕಿರೀಟ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ. ಜೊತೆಗೆ ವಿದೇಶಗಳಲ್ಲಿ ನಡೆದ ಹಲವು ಮೋಟಾರ್‌ ಕ್ರಾಸ್‌ ಚಾಂಪಿಯನ್‌ಷಿಪ್‌ಗಳಲ್ಲೂ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ವಿಶ್ವ ಪ್ರಸಿದ್ಧ ಡಕಾರ್‌ ರ‍್ಯಾಲಿಯಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

2018ರ ಜನವರಿ 6ರಿಂದ 20ರವರೆಗೆ ನಡೆಯುವ 40ನೇ ಆವೃತ್ತಿಯ ಡಕಾರ್‌ ರ‍್ಯಾಲಿಯಲ್ಲೂ ಕಣಕ್ಕಿಳಿಯುತ್ತಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಹೋದ ವರ್ಷ ಡಕಾರ್‌ ರ‍್ಯಾಲಿಗೆ ಪದಾರ್ಪಣೆ ಮಾಡಿದ್ದೀರಿ. ಆ ಅನುಭವ ಹೇಗಿತ್ತು?

ಪ್ರತಿಯೊಬ್ಬ ಮೋಟಾರು ಬೈಕ್‌ ಸಾಹಸಿಗೂ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸಬೇಕೆಂಬ ಆಸೆ ಇರುತ್ತದೆ. ನನ್ನ ಆ ಕನಸು ಹೋದ ವರ್ಷ ಸಾಕಾರಗೊಂಡಿತು. ಅಲ್ಲಿ ವಿಶ್ವದ ಶ್ರೇಷ್ಠ ರ‍್ಯಾಲಿಪಟುಗಳು ಭಾಗವಹಿಸಿದ್ದರು. ಹೀಗಾಗಿ ಸ್ಪರ್ಧೆ ತುಂಬಾ ಕಠಿಣವಾಗಿತ್ತು. ದುರ್ಗಮ ಹಾದಿಯಲ್ಲಿ ಸಾಗುವುದು ಸವಾಲೆನಿಸಿತ್ತು. ಮೊದಲ ಬಾರಿ ಪಾಲ್ಗೊಂಡಿದ್ದರಿಂದ ರ‍್ಯಾಲಿ ಸಾಗುವ ಮಾರ್ಗಗಳ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಹೀಗಾಗಿ 9 ಸಾವಿರ ಕಿಲೊ ಮೀಟರ್ಸ್‌ ದೂರ ಪೂರ್ಣಗೊಳಿಸಲು ಆಗಲಿಲ್ಲ.

ಹಿಂದಿನ ರ‍್ಯಾಲಿಯಿಂದ ನೀವು ಕಲಿತಿದ್ದೇನು?

ಹೆಚ್ಚು ಅವಸರ ಮಾಡದೆ ಯೋಜನಾ ಬದ್ಧವಾಗಿ  ಬೈಕ್‌ ಚಲಾಯಿಸಿದರೆ ಮಾತ್ರ ರ‍್ಯಾಲಿ ಪೂರ್ಣಗೊಳಿಸಬಹುದು ಎಂಬ ಸತ್ಯ ಅರಿತುಕೊಂಡೆ. ಜೊತೆಗೆ ವಿಶೇಷ ತರಬೇತಿ ಮಾಡಿಕೊಂಡೇ ಭಾಗವಹಿಸಬೇಕು ಎಂಬುದನ್ನೂ ತಿಳಿದುಕೊಂಡೆ.

ಈ ಬಾರಿ ಸಿದ್ಧತೆ ಹೇಗೆ ನಡೆದಿದೆ?

ಈ ವರ್ಷ ಬಾಜ ಆ್ಯರಗನ್‌, ಮೆರ್ಜುಗಾ, ಪಾನ್‌ ಆಫ್ರಿಕಾ ಮತ್ತು ಒಲಿಬಿಯಾ ರ‍್ಯಾಲಿಗಳಲ್ಲಿ ಭಾಗವಹಿಸಿದ್ದೇನೆ. ಈ ಪೈಕಿ ಮೂರು ಡಕಾರ್‌ ಸರಣಿಯ ರ‍್ಯಾಲಿಗಳು. ಡಕಾರ್‌ನಲ್ಲಿರುವಂತೆ ಇವುಗಳಲ್ಲೂ ಕಠಿಣ ಹಂತಗಳಿದ್ದವು. ಅವುಗಳನ್ನು ದಾಟಿ ಗುರಿಯತ್ತ ಮುನ್ನಡೆಯುವ ಕಲೆ ಕರಗತ ಮಾಡಿಕೊಂಡಿದ್ದೇನೆ. ಮೆರ್ಜುಗಕ್ಕೆ ಹೋದಾಗ ಮೂರು ತಿಂಗಳ ಕಾಲ ಫ್ರಾನ್ಸ್‌ ಮತ್ತು ಸ್ಪೇನ್‌ನಲ್ಲಿ ವಿಶೇಷ ತರಬೇತಿ ಪಡೆದಿದ್ದೆ. ಇದು ಈ ಬಾರಿ ನೆರವಾಗುತ್ತದೆ ಎಂಬ ವಿಶ್ವಾಸ ಇದೆ.

ನಿಮ್ಮ ತಂಡದ ಬಗ್ಗೆ ಹೇಳಿ?

ಸ್ಪೇನ್‌ನ ಜೊವಾನ್‌ ಪೆಡ್ರೆರೊ ಮತ್ತು ಫ್ರಾನ್ಸ್‌ನ ಆಡ್ರಿಯನ್‌ ಮೆಟ್ಜೆ ತಂಡದಲ್ಲಿದ್ದಾರೆ. ಆಡ್ರಿಯನ್‌ ಮೂರನೇ ಬಾರಿ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಪೆಡ್ರೆರೊ, 9 ರ‍್ಯಾಲಿಗಳಲ್ಲಿ ಭಾಗವಹಿಸಿದ ಅನುಭವಿ. ನಾವೆಲ್ಲರೂ ತುಂಬಾ ಆತ್ಮೀಯವಾಗಿದ್ದೇವೆ. ರ‍್ಯಾಲಿ ಮುಗಿದ ಬಳಿಕ ಒಂದೆಡೆ ಸೇರಿ ಖುಷಿಯಿಂದ ಕಾಲ ಕಳೆಯುತ್ತೇವೆ. ಹೀಗಾಗಿ ಒತ್ತಡ ರಹಿತವಾಗಿ ಕಣಕ್ಕಿಳಿಯಲು ಸಹಾಯವಾಗುತ್ತದೆ.

ಆಡ್ರಿಯನ್‌ ಮತ್ತು ಪೆಡ್ರೆರೊ ಅವರಿಂದ ನೀವು ಕಲಿತಿದ್ದೇನು?

ಸಾಕಷ್ಟು ಹೊಸ ವಿಷಯಗಳನ್ನು ಅವರು ಹೇಳಿಕೊಟ್ಟಿದ್ದಾರೆ. ಹೆಚ್ಚು ಯೋಜನಾಬದ್ಧವಾಗಿರಬೇಕು. ಮಾರ್ಗಸೂಚಿಯ ಮೇಲೆ ತುಂಬಾ ಗಮನ ಹರಿಸಬೇಕು ಎಂಬುದನ್ನು ಅವರನ್ನು ನೋಡಿ ಕಲಿತಿದ್ದೇನೆ.

ಡಕಾರ್‌ನಲ್ಲಿ ಸ್ಪರ್ಧೆ ಹೇಗಿರುತ್ತದೆ?

ಬೆಟ್ಟ, ಗುಡ್ಡ, ಕಲ್ಲು, ಮಣ್ಣು, ಮರಳು, ಇಳಿಜಾರು ಹೀಗೆ ಎಲ್ಲಾ ಬಗೆಯ ಹಾದಿಗಳಲ್ಲಿ ಬೈಕ್‌ ಚಲಾಯಿಸಬೇಕು. ಕೆಲ ಹಂತಗಳಲ್ಲಿ ಸ್ವಲ್ಪ ಮೈಮರೆತರೂ ಪ್ರಾಣ ಕಳೆದುಕೊಳ್ಳುವ ಅಪಾಯ ಇರುತ್ತದೆ. ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಎಲ್ಲರೂ ವೃತ್ತಿಪರರು ಮತ್ತು ಸಾಕಷ್ಟು ಪರಿಣತಿ ಹೊಂದಿದವರಾಗಿರುತ್ತಾರೆ. ರ‍್ಯಾಲಿಯ ಸ್ಪರ್ಧಿಗಳ ಪಟ್ಟಿಯ ಆರಂಭಿಕ 25 ಸ್ಥಾನಗಳಲ್ಲಿರುವವರು ಜೀವವನ್ನೇ ಪಣಕ್ಕಿಟ್ಟು ಬೈಕ್‌ ಓಡಿಸುತ್ತಾರೆ. ಅವರು ಸ್ಪರ್ಧೆ ಶುರುವಾದ ಕ್ಷಣದಿಂದ ಮುಗಿಯುವವರೆಗೂ ಮಿಂಚಿನ ಗತಿಯಲ್ಲೇ ಸಾಗುತ್ತಾರೆ.

ಸೂಪರ್‌ ಕ್ರಾಸ್‌ನಿಂದ ಡಕಾರ್‌ವರೆಗೆ ನಿಮ್ಮ ಜೀವನದಲ್ಲಿ ಆಗಿರುವ ಬದಲಾವಣೆ?

ತುಂಬಾ ಬದಲಾವಣೆಗಳಾಗಿವೆ. ಉಡುಪಿಯಿಂದ ಶುರುವಾದ ಪಯಣ ಡಕಾರ್‌ವರೆಗೆ ಸಾಗಿದೆ. ಮೊದಲು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳತ್ತ ಮಾತ್ರ ಚಿತ್ತ ಹರಿಸುತ್ತಿದ್ದೆ. ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಕನಸು ಕಾಣುತ್ತಿದ್ದೇನೆ. ಕಲಿಕೆಯ ವಿಚಾರದಲ್ಲೂ ಸಾಕಷ್ಟು ಪ್ರಗತಿಯಾಗಿದೆ.

ಭಾರತದಲ್ಲಿ ಮೋಟಾರ್‌ ಸ್ಪೋರ್ಟ್ಸ್‌ ಬೆಳವಣಿಗೆ ಹೇಗಿದೆ?

ಆರಂಭಿಕ ದಿನಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಅಲ್ಪ ಸುಧಾರಿಸಿದೆ. ಮೊದಲೆಲ್ಲಾ ರ‍್ಯಾಲಿಗಳು ಮನರಂಜನೆಗೆ ಸೀಮಿತವಾಗಿದ್ದವು. ಈಗ ಸಾಕಷ್ಟು ಮಂದಿ ಇದನ್ನು ವೃತ್ತಿಪರವಾಗಿ ಸ್ವೀಕರಿಸುತ್ತಿದ್ದಾರೆ. ಡಕಾರ್‌ಗೆ ಅರ್ಹತೆ ಗಳಿಸಬೇಕಾದರೆ ನಾವು ಮೊರಕ್ಕೊದಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಿತ್ತು. ಈಗ ಡಕಾರ್‌ ಸರಣಿಯ ‘ಇಂಡಿಯಾ ಬಾಹ’ ರ‍್ಯಾಲಿಯನ್ನು ಭಾರತದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದು ಕೂಡ ಉತ್ತಮ ಬೆಳವಣಿಗೆ.

ಎರಡನೇ ಬಾರಿ ಡಕಾರ್‌ನಲ್ಲಿ ಭಾಗವಹಿಸುತ್ತಿದ್ದೀರಿ. ಈ ಸಲ ನಿಮ್ಮ ಗುರಿ ?

ಈ ಬಾರಿ ಪೆರುವಿನಲ್ಲಿ ಶುರುವಾಗುವ ರ‍್ಯಾಲಿ ಲಿಮಾ, ಲಾ ಪಜ್‌, ಬೊಲಿವಿಯಾ ಮಾರ್ಗವಾಗಿ ಸಾಗಿ ಅರ್ಜೆಂಟೀನಾದ ಕೊರ್ಡೊಬದಲ್ಲಿ ಕೊನೆಗೊಳ್ಳಲಿದೆ. ಈ ಹಾದಿಯಲ್ಲಿ ಶೇಕಡ 100 ರಷ್ಟು ಮರಳು ಇರುತ್ತದೆ. ಪೆರುವಿನಲ್ಲಿ ಇಳಿಜಾರುಗಳಲ್ಲೇ ಬೈಕ್‌ ಓಡಿಸಬೇಕು. ಮರಳಿನ ದಾರಿಯಲ್ಲಿ ಮತ್ತು ಇಳಿಜಾರಿನಲ್ಲಿ ಬೈಕ್‌ ಚಲಾಯಿಸುವ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದೇನೆ. ಹೀಗಾಗಿ ವಿಶ್ವಾಸ ಹೆಚ್ಚಿದೆ.

ರ‍್ಯಾಲಿಪಟುಗಳಿಗೆ ಫಿಟ್‌ನೆಸ್‌ ಎಷ್ಟು ಮುಖ್ಯ?

ಫಿಟ್‌ನೆಸ್‌‌, ಕ್ರೀಡಾಪಟುಗಳ ಯಶಸ್ಸಿನ ಕೀಲಿ ಕೈ ಇದ್ದಂತೆ. ದೈಹಿಕ ಕ್ಷಮತೆ ಕಾಪಾಡಿಕೊಂಡರೆ ಮನಸ್ಸು ಕೂಡ ಉಲ್ಲಸಿತವಾಗಿರುತ್ತದೆ. ಏಕಾಗ್ರತೆ ಕಾಪಾಡಿಕೊಳ್ಳಲೂ ಫಿಟ್‌ನೆಸ್‌ ಅಗತ್ಯ.

ಫಿಟ್‌ನೆಸ್‌ಗಾಗಿ ನೀವು ಏನೆಲ್ಲಾ ಮಾಡುತ್ತೀರಿ?

ವಾರದಲ್ಲಿ ಮೂರು ದಿನ ಸೈಕ್ಲಿಂಗ್‌ ಮಾಡುತ್ತೇನೆ. ಬ್ಯಾಡ್ಮಿಂಟನ್‌, ಸ್ಕ್ವಾಷ್‌, ಬಾಕ್ಸಿಂಗ್‌ ಮತ್ತು ಕಿಕ್‌ ಬಾಕ್ಸಿಂಗ್‌ನಲ್ಲಿ ತೊಡಗಿಕೊಳ್ಳುತ್ತೇನೆ.

ಕುಟುಂಬ ಮತ್ತು ಟಿವಿಎಸ್‌ ತಂಡದ ಬೆಂಬಲದ ಬಗ್ಗೆ ಹೇಳಿ?

ನನ್ನೆಲ್ಲಾ ಸಾಧನೆಗೆ ಕುಟುಂಬ ಮತ್ತು ಟಿವಿಎಸ್‌ ತಂಡದ ಬೆಂಬಲವೇ ಕಾರಣ. ಅವರ ಸಹಕಾರ ಮತ್ತು ಪ್ರೋತ್ಸಾಹದಿಂದಲೇ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT