ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸೈನರ್ ಬೇಬಿ’ ಮತ್ತು ಆಹಾರ ಭದ್ರತೆ

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

- ಶಾಂಭವಿ ನಾಯಕ್

ತಳಿಗುಣಗಳ ಸಂಯೋಜನೆಯು (Gene editing) ಅಪಾರ ಸಾಧ್ಯತೆಗಳನ್ನು ಒಳಗೊಂಡು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವಾಗಿದೆ. ಆದರೆ, ಇದನ್ನು ರಚನಾತ್ಮಕವಾಗಿ ಭಾರತದ ಹಿತಾಸಕ್ತಿಗೆ ಪೂರಕವಾಗುವಂತೆ ಬಳಸಿಕೊಳ್ಳಬೇಕಾದರೆ ನಿಯಂತ್ರಣ ವ್ಯವಸ್ಥೆ ರೂಪಿಸುವ ಅಗತ್ಯವಿದೆ.

ಅಮೆರಿಕದಲ್ಲಿ ಇತ್ತೀಚೆಗೆ ವೈಜ್ಞಾನಿಕ ಆವಿಷ್ಕಾರವೊಂದರ ಹಿನ್ನೆಲೆಯಲ್ಲಿ ಬಿರುಗಾಳಿ ಬೀಸತೊಡಗಿದೆ. ಅಲ್ಲಿನ ವಿಜ್ಞಾನಿಗಳು ಮೊದಲ ಬಾರಿಗೆ, ಹುಟ್ಟಿನಿಂದಲೇ ಅಪಾಯಕಾರಿ ಹೃದಯ ರೋಗ ತಂದೊಡ್ಡಲಿದ್ದ ವಂಶವಾಹಿಯನ್ನು (DNA) ಭ್ರೂಣದಲ್ಲೇ ಮಾರ್ಪಾಡು ಮಾಡಿದ್ದಾರೆ. ಇದು ‘ವಿನ್ಯಾಸಗೊಂಡ ಶಿಶು’ಗಳ (ಡಿಸೈನರ್ ಬೇಬಿ) ಕುರಿತು ಹಾಗೂ ಅದರ ನೈತಿಕ ಪರಿಣಾಮಗಳ ಬಗೆಗೆ ಎಡೆಬಿಡದ ಚರ್ಚೆ ಹುಟ್ಟುಹಾಕಿದೆ. ಪೋಷಕರು ತಮಗೆ ಎಂತಹ ಮಗು ಬೇಕೋ ಥೇಟ್ ಅಂತಹದ್ದನ್ನೇ ಪಡೆಯುವುದು ಎಂದರೆ, ಅದ್ಯಾವುದೋ ವೈಜ್ಞಾನಿಕ ಕಾದಂಬರಿಯಲ್ಲಿ ಬರುವ ಕಾಲ್ಪನಿಕ ಪ್ರಸಂಗದಂತೆ ಭಾಸವಾಗುತ್ತದೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಸಿಆರ್‍ಐಎಸ್‌ಪಿಆರ್- ಸಿಎಎಸ್9 ಎಂಬ ತಾಂತ್ರಿಕತೆ ನೆರವಿನಿಂದ ಈ ‘ತಳಿನಕ್ಷೆ ತಿದ್ದುಪಡಿ’ ನಡೆದಿದೆ. ಸಾಂಪ್ರದಾಯಿಕ ತಳಿ ಎಂಜಿನಿಯರಿಂಗ್‌ಗಿಂತ ಅತ್ಯಂತ ಅಗ್ಗ ಹಾಗೂ ಸುಲಭ ವಿಧಾನವಾದ ಇದು, ’ಮಾಲಿಕ್ಯುಲರ್ ಸಿಜರ್ಸ್’ ಎಂದೇ ಹೆಸರಾಗಿದೆ. ಹೀಗಾಗಿ ತಳಿ ಎಂಜಿನಿಯರಿಂಗ್ ಅನ್ನು ಈಗಿರುವುದಕ್ಕಿಂತ ಹೆಚ್ಚು ನಿಖರ ಮತ್ತು ಕೈಗೆಟುಕುವಂತೆ ಮಾಡುವ ಸಾಧ್ಯತೆ ಇದೆ.

ಆದರೂ ‘ವಿನ್ಯಾಸಿತ ಶಿಶು’ಗಳ ಪರಿಕಲ್ಪನೆ ಸದ್ಯಕ್ಕೆ ದೂರಗಾಮಿ ಎನ್ನುವಂತೆಯೇ ಇದೆ. ಆರಂಭದಲ್ಲಿ, ಯಾವುದೇ ಗುಣಲಕ್ಷಣಗಳು ವೈಯಕ್ತಿಕ ಗುಣಾಣುಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಬದಲಿಗೆ ಗುಣಲಕ್ಷಣದ ತೋರ್ಪಡಿಕೆಯನ್ನು ‘ವಿವಿಧ ಗುಣಾಣು’ಗಳು ಹಾಗೂ ಬೆಳೆಸುವ ರೀತಿಯಂತಹ ಸಂಗತಿಗಳು ನಿಯಂತ್ರಿಸುತ್ತವೆ. ವ್ಯಕ್ತಿಯ ಎತ್ತರ, ಬುದ್ಧಿವಂತಿಕೆ ಅಥವಾ ರೂಪಕ್ಕೆ ನಿಶ್ಚಿತವಾಗಿ ಯಾವ ವಂಶವಾಹಿಗಳು ಕಾರಣ ಎಂಬುದನ್ನು ಸದ್ಯದ ಮಾನವ ತಳಿಸೂತ್ರ ನಕ್ಷೆಯಿಂದ ನಿಖರವಾಗಿ ಹೇಳಲಾಗದು. ಹೀಗಾಗಿ ‘ವಿನ್ಯಾಸಿತ ಶಿಶು’ಗಳು ಸದ್ಯದ ಭವಿಷ್ಯದಲ್ಲಿ ವಾಸ್ತವವಾಗುವ ಸಾಧ್ಯತೆ ಇಲ್ಲ.
ಆದರೆ ‘ವಿನ್ಯಾಸಿತ ಶಿಶು’ಗಳ ಈ ದೂರದ ಸಾಧ್ಯತೆಯು ಜೈವಿಕ ತಂತ್ರಜ್ಞಾನದ ಇತರ ಉಪಯೋಗಗಳಿಂದ, ವಿಶೇಷವಾಗಿ ‘ತಳಿ ತಿದ್ದುಪಡಿ’ಯ ಪ್ರಸ್ತುತ ಲಾಭಗಳಿಂದ ನಮ್ಮನ್ನು ವಂಚಿಸಬೇಕಾಗಿಲ್ಲ.

ಮೇಲಿನ ವಿದ್ಯಮಾನಕ್ಕೆ ಸಂಬಂಧಿಸಿದಂತೆ, ಬಹುತೇಕ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಭಾರತದ ಮಾಧ್ಯಮಗಳು, ಈ ನೂತನ ಅಧ್ಯಯನದಲ್ಲಿ ಭಾರತೀಯ ಮೂಲದ ವಿಜ್ಞಾನಿಯೊಬ್ಬರೂ ಸೇರಿದ್ದರು ಎಂಬ ಅಂಶದ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸಿವೆ. ಆದರೆ, ಇದು ಅದಕ್ಕಿಂತ ಮುಖ್ಯವಾದ ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಮನುಷ್ಯ, ಪ್ರಾಣಿ ಅಥವಾ ಗಿಡ- ಹೀಗೆ ಯಾವುದೇ ಆದರೂ ಅವುಗಳ ತಳಿನಕ್ಷೆ ಭೇದಿಸಲು ಇಂದು ಪ್ರಯೋಗಾಲಯಗಳು ತೀವ್ರ ಪ್ರಯತ್ನದಲ್ಲಿ ನಿರತವಾಗಿವೆ. ಚೀನಾ ದೇಶವು ತನ್ನ ಆಹಾರ ಭದ್ರತಾ ನೀತಿಯ (ಹುಯಾಂಗ್ ಎಟ್ ಅಲ್, 2005) ಮೈಲುಗಲ್ಲಾಗಿ 1990ರ ದಶಕದಿಂದಲೂ ಕುಲಾಂತರಿ ಧಾನ್ಯಗಳನ್ನು ಬಳಸುತ್ತಿದೆ. ಅಮೆರಿಕದಲ್ಲಿ ಶೇ 90ರಷ್ಟು ಮೆಕ್ಕೆಜೋಳ ಮತ್ತು ಶೇ 85ರಷ್ಟು ಹತ್ತಿ ಬೆಳೆಯ ಪ್ರದೇಶದಲ್ಲಿ ಈಗ ಕುಲಾಂತರಿ ತಂತ್ರಜ್ಞಾನದ ಬೀಜಗಳ ಬಳಕೆಯಾಗುತ್ತಿದೆ. ದುರದೃಷ್ಟವಶಾತ್, ಭಾರತದಲ್ಲಿನ ನಿಯಂತ್ರಿತ ಸನ್ನಿವೇಶವು ಇತರ ರಾಷ್ಟ್ರಗಳಲ್ಲಿರುವಂತೆ ಅನುಕೂಲಕರವಾಗಿಲ್ಲ. ಇದರಿಂದಾಗಿ ಅತ್ಯಾಧುನಿಕ ತಾಂತ್ರಿಕತೆಯ ಸಾಧ್ಯತೆಗಳನ್ನು ಬಳಸಿಕೊಳ್ಳುವುದಕ್ಕೆ ಅಡ್ಡಿಯಾಗುತ್ತಿದೆ.

ಈಗ ವಸ್ತುಸ್ಥಿತಿಯ ಬಗ್ಗೆ ಅವಲೋಕಿಸೋಣ. ಭಾರತವು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ; ಅತ್ಯಧಿಕ ಖಾದ್ಯ ತೈಲಗಳನ್ನು ಬಳಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಹೀಗಾಗಿ ಭಾರತದ ಹಣದುಬ್ಬರವು ದ್ವಿದಳ ಧಾನ್ಯಗಳ ಬೆಲೆಯ ಏರಿಳಿತವನ್ನು ಆಧರಿಸಿದೆ. ಜತೆಗೆ, ಇವುಗಳಿಗಾಗಿ ಹಾಗೂ ಎಣ್ಣೆಬೀಜಗಳಿಗಾಗಿ (ಅಂದಾಜು ಶೇ 70ರಷ್ಟು) ಆಮದಿನ ಮೇಲೆ ಅವಲಂಬಿತವಾಗಿದೆ. ಚೋದ್ಯದ ಸಂಗತಿ ಎಂದರೆ, ಭಾರತ ಆಮದು ಮಾಡಿಕೊಂಡು ಬಳಸುತ್ತಿರುವ ಬಹುತೇಕ ಖಾದ್ಯ ತೈಲಗಳು ಕುಲಾಂತರಿ ಬೆಳೆಗಳದ್ದಾಗಿವೆ; ಆದರೆ ಇವೇ ಬೆಳೆಗಳನ್ನು ಬೆಳೆಯುವುದರ ಮೇಲೆ ಇಲ್ಲಿ ಈಗಲೂ ನಿಷೇಧ ಮುಂದುವರಿದಿದೆ!

ನೇರವಾಗಿ ಹೇಳಬೇಕೆಂದರೆ, ಕುಲಾಂತರಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಭಾರತದ ನೀತಿ ನಿಯಮಾವಳಿಯು ಗೋಜಲು ಗೋಜಲಾಗಿದೆ. ತಾತ್ವಿಕವಾಗಿ ಹೇಳುವುದಾದರೆ, ದೇಶದಲ್ಲಿ ಯಾವುದೇ ಕುಲಾಂತರಿ ಉತ್ಪನ್ನವನ್ನು ಪರೀಕ್ಷಿಸಿ, ಕ್ಷೇತ್ರ ಪ್ರಯೋಗಕ್ಕೆ ಅನುಮತಿ ನೀಡಿ, ಅಂತಿಮವಾಗಿ ಅವುಗಳ ಮಾರಾಟಕ್ಕೆ ಸಮ್ಮತಿ ಕೊಡುವುದು ಜಿಇಎಸಿ (ಕುಲಾಂತರಿ ಎಂಜಿನಿಯರಿಂಗ್ ಪರಾಮರ್ಶೆ ಸಮಿತಿ) ಕಾರ್ಯವಾಗಿದೆ. ಆದರೆ ಇದು ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿ ಬರುವುದರಿಂದ ಹಿತಾಸಕ್ತಿ ಸಂಘರ್ಷದಿಂದ ನಲುಗಿದೆ ಎಂದು ದೂರಲಾಗುತ್ತಿದೆ. ಇದರ ಜತೆಗೆ, ಈ ಸಮಿತಿಯು ಯಾವುದೇ ಅನುಮತಿ ನೀಡುವ ಮುನ್ನ ತನ್ನ ವರದಿಗಳನ್ನು ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ, ಈ ಸಮಿತಿಯು ಮುಚ್ಚುಮರೆ ಮಾಡುತ್ತಿದೆ ಎಂದು ಸ್ವಯಂ ಸೇವಾ ಸಂಸ್ಥೆಗಳು ಮತ್ತು ರೈತ ಹಿತಾಸಕ್ತಿ ಸಂಘಟನೆಗಳು ಆರೋಪಿಸುತ್ತಿವೆ. ದುರ್ಬಲ ಮತ್ತು ಗೊಂದಲಮಯ ನಿಯಂತ್ರಿತ ನೀತಿಯಿಂದಾಗಿ ಉದ್ಭವಿಸುತ್ತಿರುವ ದೋಷಪೂರ್ಣ ಮಾಹಿತಿ ಹಾಗೂ ಅಪನಂಬಿಕೆಗಳು ಹಲವಾರು ಕುಲಾಂತರಿ ಧಾನ್ಯಗಳ ವ್ಯಾಪಾರೀಕರಣದ ಹಾದಿ ತಪ್ಪಿಸಿ, ಸಂಶೋಧನೆ- ಅಭಿವೃದ್ಧಿಗೆ ಸಂಬಂಧಿಸಿದಂತೆ ಖಾಸಗಿ ಹೂಡಿಕೆದಾರರ ಆಸಕ್ತಿಗೆ ತಣ್ಣೀರೆರಚುತ್ತಿವೆ.

ನಮ್ಮಲ್ಲಿ ನಿಯಂತ್ರಿತ ಸನ್ನಿವೇಶವು ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿದಂತೆ ಈ ಪರಿ ತೊಡರುಗಾಲಾಗಿದ್ದರೆ ಅದು ಹೇಗೆ ನಾವು ಅತ್ಯಾಧುನಿಕ ಜಾಗತಿಕ ಬೆಳವಣಿಗೆಗಳ ಜತೆ ಸರಿಸಮಾನವಾಗಿ ಸಾಗಲು ಸಾಧ್ಯ? ‘ವಂಶವಾಹಿ ಥೆರಪಿ’ಯು ಆಹಾರ ಭದ್ರತೆ ಮಾತ್ರವಲ್ಲದೆ ರೈತರ ಆದಾಯದ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದಾಗಿದೆ; ಜತೆಗೆ ಅಸಂಖ್ಯ ರೋಗಗಳಿಗೆ ಚಿಕಿತ್ಸೆಯ ಗುಣಮಟ್ಟವನ್ನೂ ಹೆಚ್ಚಿಸಬಲ್ಲದು. ಸೂಕ್ತ ನಿಯಂತ್ರಿತ ನೀತಿ ನಿಯಮಾವಳಿ ಇಲ್ಲವೆಂಬ ಒಂದೇ ಕಾರಣಕ್ಕೆ ಜನರ ಜೀವನವನ್ನು ಸಂರಕ್ಷಿಸುವ ಅಥವಾ ಅವರ ಗುಣಮಟ್ಟವನ್ನು ಸುಧಾರಿಸುವ ನಮ್ಮ ಸಾಧ್ಯತೆಗಳಿಗೆ ನಾವೇ ತಡೆಯೊಡ್ಡಿಕೊಳ್ಳುವುದು ಮೂರ್ಖತನವಾಗುತ್ತದೆ.

ಹೀಗೆಂದ ಮಾತ್ರಕ್ಕೆ ಸುರಕ್ಷೆಯು ಆದ್ಯತೆಯ ಸಂಗತಿ ಆಗಬಾರದು ಎಂದೇನಲ್ಲ. ಆದರೆ, ಸುರಕ್ಷೆಯ ಮಾನದಂಡಗಳನ್ನು ವೈಜ್ಞಾನಿಕ, ಅನುಕೂಲಕರ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ನಿಭಾಯಿಸಬೇಕಾಗುತ್ತದೆ. ಈ ತಂತ್ರಜ್ಞಾನದ ಸಂಭಾವ್ಯ ಅಪಾಯಗಳನ್ನು ಗುರುತಿಸಬೇಕು; ತಾಂತ್ರಿಕತೆಯ ಸುರಕ್ಷಿತ ಬಳಕೆಗಾಗಿ ಕಠಿಣ ಮಾನದಂಡಗಳನ್ನು ನಿಗದಿ ಮಾಡಬೇಕು. ಸರ್ಕಾರ ಇಂತಹ ಮಾನದಂಡಗಳ ನಿಗದಿಗಷ್ಟೇ ತನ್ನ ನಿಯಂತ್ರಣವನ್ನು ಸೀಮಿತಗೊಳಿಸಿಕೊಳ್ಳಬೇಕು. ಖಾಸಗಿ ಹೂಡಿಕೆಗೆ ಪುನಶ್ಚೇತನ ನೀಡುವುದು ಮತ್ತು ಸಂಶೋಧನೆ- ಅಭಿವೃದ್ಧಿಗೆ ಒತ್ತು ಕೊಡುವುದು ಅದರ ಗುರಿಯಾಗಬೇಕು.

ಜಾಗತಿಕ ಜೈವಿಕ ತಂತ್ರಜ್ಞಾನದ ಓಟದಲ್ಲಿ ತಾನೂ ಪಾಲ್ಗೊಳ್ಳುವ ನಿಟ್ಟಿನಲ್ಲಿ ಭಾರತವು ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಮಾನದಂಡಗಳನ್ನು ನಿಗದಿ ಮಾಡಲು ಸ್ವತಂತ್ರ, ಪಾರದರ್ಶಕ ಹಾಗೂ ವಿಶ್ವಾಸಾರ್ಹವಾದ ನಿಯಂತ್ರಣ ವ್ಯವಸ್ಥೆ ರಚಿಸಬೇಕಿದೆ; ಕುಲಾಂತರಿ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಮ್ಮತಿ ನೀಡುವ ಸೂಕ್ತ ವಿಧಿವಿಧಾನಗಳು ನಿಗದಿಯಾಗಬೇಕು; ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಗತಿಗೆ ಮುಕ್ತವಾದ ವಾತಾವರಣ ನಿರ್ಮಾಣವಾಗಬೇಕಾಗಿದೆ. ತಾಂತ್ರಿಕ ಬೆಳವಣಿಗೆಗೆ ತಕ್ಕಂತೆ ಸುರಕ್ಷಾ ಮಾನದಂಡಗಳು ನಿರಂತರವಾಗಿ ವಿಕಸನಗೊಳ್ಳುವುದು ಅತ್ಯಗತ್ಯ. ಇದರ ಎಲ್ಲ ವಾರಸುದಾರರೊಂದಿಗೆ ( ಗ್ರಾಹಕರಿಂದ ಶುರುವಾಗಿ ರೈತರು ಮತ್ತು ವಿಜ್ಞಾನಿಗಳವರೆಗೆ) ಸಮಾಲೋಚಿಸಿ ಮಾನದಂಡಗಳನ್ನು ನಿಗದಿ ಮಾಡಬೇಕಿದೆ.

ಸಿಆರ್‍ಐಎಸ್‌ಪಿಆರ್‌ನಂಥ ಅಗ್ಗದ ಹಾಗೂ ಅಧಿಕ ಸಾಮರ್ಥ್ಯದ ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರವಾಗಿರುವುದನ್ನು ಪರಿಗಣನೆಗೆ ತೆಗೆದುಕೊಂಡು, ವಿಜ್ಞಾನಿಗಳು ಮತ್ತು ಸರ್ಕಾರ ಸೇರಿ ತಳಿನಕ್ಷೆ ತಿದ್ದುಪಡಿ ಕುರಿತು ಸಾರ್ವಜನಿಕರಿಗೆ ಸೂಕ್ತವಾಗಿ ಮನದಟ್ಟು ಮಾಡಿಕೊಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ವಂಶವಾಹಿ ತಿದ್ದುಪಡಿಯ ಉಪಯೋಗಗಳು, ರೂಢಿಗತ ಬೀಜೋತ್ಪಾದನಾ ವಿಧಾನದೊಂದಿಗೆ ಸಿಆರ್‍ಐಎಸ್‌ಪಿಆರ್ ಹೊಂದಿರುವ ಸಾಮ್ಯತೆಗಳ ಬಗ್ಗೆ ಗಮನಸೆಳೆಯುವ ಜತೆಗೆ ರೈತರ ಅಗತ್ಯಗಳಾದ ಅಧಿಕ ಇಳುವರಿ, ಬರ ಪ್ರತಿರೋಧ, ಕೀಟನಿರೋಧಕ ಗುಣಗಳನ್ನುಳ್ಳ ಧಾನ್ಯಗಳ ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆಗೆ ಸೂಕ್ತ ವಾತಾವರಣ ಕಲ್ಪಿಸಬೇಕು.

ಇದು ಇಂದಿನ ಮಟ್ಟಿಗೆ ಕಠಿಣವಾದ ಹಾದಿಯೇ ಇರಬಹುದು; ಆದರೆ ವಿಜ್ಞಾನದ ಮುನ್ನಡೆಯನ್ನು ತಡೆಯಲಾಗದು. ಭಾರತ ಇದರಲ್ಲಿ ಮುಂಚೂಣಿಯಲ್ಲಿರಬೇಕೋ ಅಥವಾ ಹಿಂದುಳಿಯಬೇಕೋ ಎಂಬುದನ್ನು ನಿರ್ಧರಿಸಬೇಕು.

(ಲೇಖಕಿ ತಕ್ಷಶಿಲಾ ಸಂಸ್ಥೆಯಲ್ಲಿ ಸಾರ್ವಜನಿಕ ನೀತಿ ನಿರೂಪಣಾ ವಿಷಯದ ವಿದ್ಯಾರ್ಥಿನಿ. ಕ್ಯಾನ್ಸರ್ ಜೀವಶಾಸ್ತ್ರದಲ್ಲಿ ಪಿಎಚ್.ಡಿ. ಮಾಡಿರುವ ಅವರು, ಭಾರತ ಮತ್ತು ಬ್ರಿಟನ್‌ನ ಹೆಸರಾಂತ ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT