ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಲಿಂಗತ್ವ ಅಸಮಾನತೆ ತಡೆಯಲು ಕ್ರಮ ಕೈಗೊಳ್ಳಿ

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಲಿಂಗತ್ವ ಅಸಮಾನತೆ ತೀವ್ರತರ ರೀತಿಯಲ್ಲಿ ಮುಂದುವರಿದಿದೆ. ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಕಳೆದ ವಾರ ಬಿಡುಗಡೆ ಮಾಡಿದ 2017ರ ಜಾಗತಿಕ ಲಿಂಗ ಅಸಮಾನತೆ ಸೂಚ್ಯಂಕದಲ್ಲಿ ಇದು ಮತ್ತೊಮ್ಮೆ ವ್ಯಕ್ತವಾಗಿದೆ. ಈ ಲಿಂಗತ್ವ ಅಂತರ ಸೂಚ್ಯಂಕದಲ್ಲಿ 144 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 108ರಲ್ಲಿದೆ. ಕಳೆದ ವರ್ಷ ಈ ಸೂಚ್ಯಂಕದಲ್ಲಿ ಭಾರತದ ಸ್ಥಾನ 87ರಲ್ಲಿತ್ತು. ಎಂದರೆ ಮತ್ತೆ 21 ಸ್ಥಾನಗಳಷ್ಟು ಇಳಿಕೆ ಕಂಡುಬಂದಿದೆ.

2006ರಲ್ಲಿ ಈ ಸೂಚ್ಯಂಕದ ಪ್ರಕಟಣೆ ಆರಂಭವಾದಾಗಲಿಂದ ಅತ್ಯಂತ ಕೆಳಗಿನ ಸ್ಥಾನ ಇದು ಎಂಬುದು ನಾವಿನ್ನೂ ಸಾಗಬೇಕಾಗಿರುವ ದಾರಿಗೆ ದಿಕ್ಸೂಚಿ. ಈ ಸೂಚ್ಯಂಕ ತಯಾರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ರಾಜಕೀಯ ಅಧಿಕಾರ, ಉದ್ಯೋಗ, ಆರೋಗ್ಯಕರ ಜೀವನ ನಿರೀಕ್ಷೆ ಮತ್ತು ಸಾಕ್ಷರತೆ ವಿಚಾರಗಳಲ್ಲಿ ಲಿಂಗತ್ವ ಅಸಮಾನತೆ ಹೆಚ್ಚಿರುವುದು ಜಾಗತಿಕ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿಯಲು ಕಾರಣ ಎಂದು ವರದಿ ಹೇಳಿದೆ. ಹೆಣ್ಣುಮಗು ಹುಟ್ಟಲು ಅವಕಾಶವೇ ಇಲ್ಲದ ಸ್ಥಿತಿ ಭಾರತದಲ್ಲಿದೆ. ಲಿಂಗಾನುಪಾತ ಕುಸಿತದ ವಿರುದ್ಧದ ಭಾರತದ ಹೋರಾಟ ಇನ್ನೂ ಫಲ ನೀಡಿಲ್ಲ.

ಹೆಣ್ಣುಮಕ್ಕಳು ಶಿಕ್ಷಣ ಪಡೆದುಕೊಳ್ಳುವುದು ಜಾಸ್ತಿಯಾಗುತ್ತಿದ್ದರೂ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಶೇ 27ರಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂಬುದು ಆತಂಕಕಾರಿ ವಿದ್ಯಮಾನ. 2004–05 ಹಾಗೂ 2011–12ರ ನಡುವೆ ಸುಮಾರು 1.96 ಕೋಟಿ ಮಹಿಳೆಯರು ಉದ್ಯೋಗ ಕ್ಷೇತ್ರದಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲ ಪುರುಷರು ಹಾಗೂ ಮಹಿಳೆಯರು ಸಮಾನ ಕೆಲಸ ನಿರ್ವಹಿಸಿದರೂ ಮಹಿಳೆಗೆ ಕಡಿಮೆ ವೇತನ ನೀಡುವುದೂ ಮುಂದುವರಿದಿದೆ ಎಂಬುದನ್ನು ವಿಶ್ವ ಆರ್ಥಿಕ ವೇದಿಕೆ ವರದಿ ಎತ್ತಿ ಹೇಳಿದೆ. ಮಹಿಳೆಯರು ಮಾಡುವ ಬಹುತೇಕ ಕೆಲಸಕ್ಕೆ ಬೆಲೆ ಇಲ್ಲ. ಮನೆಯಲ್ಲಿ, ಹೊಲ ಗದ್ದೆಗಳಲ್ಲಿ ಹಾಗೂ ಶಿಶುಪಾಲನೆಯಲ್ಲಿ ಅವರ ಶ್ರಮ ಅಗೋಚರ. ಈ ಮಾನವ ಸಂಪನ್ಮೂಲ ಪರಿಗಣನೆಗೇ ಬರುವುದಿಲ್ಲ ಎಂಬುದು ವಿಷಾದನೀಯ. ಕೃಷಿ ಕ್ಷೇತ್ರದ ಬಿಕ್ಕಟ್ಟು ಮತ್ತು ಕಳೆದ ವರ್ಷ ಅಧಿಕ ಮೌಲ್ಯದ ನೋಟು ರದ್ದತಿ, ಮಹಿಳೆಯ ಆರ್ಥಿಕ ಸ್ಥಿತಿಗತಿ ಮೇಲೆ ಬೀರಿದ ಪರಿಣಾಮವೂ ಈ ಅಸಮಾನತೆ ಹೆಚ್ಚಾಗಲು ಕಾರಣವಾಗಿದೆಯೇ ಎಂಬುದರ ವಿಶ್ಲೇಷಣೆ ಆಗಬೇಕು. ದಶಕಗಳ ಆರ್ಥಿಕ ಪ್ರಗತಿ ಮಹಿಳೆಯ ಬದುಕಿನಲ್ಲಿ ಮಾಡಿರುವ ಬದಲಾವಣೆಗಳೇನು ಎಂಬುದು ಗಂಭೀರವಾದ ಪ್ರಶ್ನೆ.

ಜಾಗತಿಕ ನೆಲೆಯಲ್ಲಿಯೂ ಪುರುಷ ಹಾಗೂ ಮಹಿಳೆಯರ ಮಧ್ಯದ ಅಂತರ ಮುಚ್ಚಲು ಬಹುಶಃ ಶತಮಾನಗಳೇ ಬೇಕಾಗಬಹುದು ಎಂಬುದು ಕಳವಳಕಾರಿಯಾದ ಸಂಗತಿ. ಅಸಮಾನತೆ ನಿವಾರಣೆಗೆ ಭಾರತದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಈ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮರು ಮೌಲ್ಯಮಾಪನ ಮಾಡಬೇಕಾದುದು ಅಗತ್ಯ. ಆರೋಗ್ಯ ಹಾಗೂ ಪೌಷ್ಟಿಕ ಆಹಾರ ವಿಚಾರದಲ್ಲಿ ಹೆಚ್ಚಿನ ಹಣಹೂಡಿಕೆ ಮಾಡಬೇಕು. ಲಿಂಗತ್ವ ನ್ಯಾಯ ಇರುವ ಸಮಾಜ ನಿರ್ಮಾಣಕ್ಕಾಗಿ ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕಾದುದು ಅಗತ್ಯ. ಜೊತೆಗೆ ನಾಯಕತ್ವ ಸ್ಥಾನಗಳಲ್ಲಿ ಮಹಿಳೆಯರ ಪ್ರಮಾಣವೂ ಹೆಚ್ಚಬೇಕು. ಲಿಂಗತ್ವ ಅಸಮಾನತೆ ನಿವಾರಣೆಯಲ್ಲಿ ನೆರೆಯ ಬಾಂಗ್ಲಾ ಹಾಗೂ ಚೀನಾ ದೇಶಗಳೂ ಮುಂದಿವೆ ಎಂಬುದು ನಮಗೆ ನೆನಪಿರಬೇಕು. ಡಬ್ಲ್ಯುಇಎಫ್‌ ಸೂಚ್ಯಂಕದಲ್ಲಿ ಬಾಂಗ್ಲಾದೇಶ 47ನೇ ಸ್ಥಾನದಲ್ಲಿದೆ.

ಬಾಂಗ್ಲಾದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಶೇ 45ರಷ್ಟು ಮಹಿಳೆಯರಿದ್ದಾರೆ. ಇದು ಕೂಡ ಅಲ್ಲಿ ಅಸಮಾನತೆ ನಿವಾರಣೆಗೆ ಕಾರಣವಾಗಿದೆ. ಅಲ್ಲದೆ ಬಾಂಗ್ಲಾ ಸಂಸತ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 20ರಷ್ಟಿದೆ. ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಕೇವಲ ಶೇ 12ರಷ್ಟು ಸಂಸತ್ ಸದಸ್ಯರು ಮಹಿಳೆಯರು. ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸುವುದಕ್ಕಾಗಿ ಇನ್ನಾದರೂ ಮಹಿಳಾ ಮೀಸಲು ಮಸೂದೆಗೆ ಮರುಜೀವ ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT