ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಮತ್ತೆ ಗರಿಗೆದರಿದ ಭಿನ್ನಮತ

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿಷನ್–150’ ಗುರಿ ಸಾಧನೆಗಾಗಿ 75 ದಿನಗಳ ಸುದೀರ್ಘ ಅವಧಿಯ ಬಿಜೆಪಿಯ ಪರಿವರ್ತನಾ ಯಾತ್ರೆ ಆರಂಭವಾದ ಬೆನ್ನಲ್ಲೇ ಪಕ್ಷದೊಳಗಿನ ಭಿನ್ನಮತೀಯ ಚಟುವಟಿಕೆ ಗರಿಗೆದರಿದೆ.

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಟ್ಟಪ್ಪಣೆ, ಆರ್‌ಎಸ್‌ಎಸ್ ಮುಖ್ಯಸ್ಥರ ಮಧ್ಯಸ್ಥಿಕೆಯಿಂದಾಗಿ ಬಿಜೆಪಿ ಬಣ ರಾಜಕೀಯ ತೆರೆಮರೆಗೆ ಸರಿದಿತ್ತು. ಎಲ್ಲರೂ ಒಟ್ಟಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪತಾಕೆ ಹಾರಿಸುತ್ತೇವೆ ಎಂದು ಪಕ್ಷದ ನಾಯಕರು ಬಿಂಬಿಸಿಕೊಂಡಿದ್ದರು. ಬಹಿರಂಗ ಸಮಾವೇಶ, ಸಭೆಗಳಲ್ಲಿ ಎಲ್ಲರೂ ಕೈ ಕೈ ಜೋಡಿಸಿ ಭಾವಚಿತ್ರಕ್ಕೆ ಫೋಸು ಕೊಡುತ್ತಿದ್ದರು. ಆದರೆ, ಪರಿವರ್ತನಾ ಯಾತ್ರೆಯ ಉದ್ಘಾಟನೆ ಹಾಗೂ ಯಾತ್ರೆಯ ಮೊದಲ ಮೂರು ದಿನಗಳಲ್ಲಿ ಪಕ್ಷದಲ್ಲಿನ ಅಸಮಾಧಾನ ಹೊರಬಿದ್ದಿದೆ.

ತುಮಕೂರು ಜಿಲ್ಲೆಯ ಕುಣಿಗಲ್‌ ವಿಧಾನಸಭಾ ಕ್ಷೇತ್ರದಿಂದ ಆರಂಭವಾದ ಯಾತ್ರೆಗೆ ತುರುವೇಕೆರೆ ಕ್ಷೇತ್ರದಲ್ಲಿ ಮೊದಲ ವಿಘ್ನ ಎದುರಾಯಿತು. ‘ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾದವರಿಗೆ ಮನ್ನಣೆ ನೀಡಲಾಗುತ್ತಿದೆ, ಮೂಲ ಕಾರ್ಯಕರ್ತರಿಗೆ ಆದ್ಯತೆ ನೀಡುತ್ತಿಲ್ಲ’ ಎಂದು ಆಪಾದಿಸಿದ ಕಾರ್ಯಕರ್ತರು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕಾರಿನ ಎದುರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು. ಕೆಲವರು ಕಲ್ಲು ತೂರಿದರು.

ತುಮಕೂರಿನಲ್ಲಿ ಶನಿವಾರ (ನ.4)  ನಡೆದ ಬಹಿರಂಗ ಸಮಾವೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ, ಸ್ಥಳೀಯ ಬಿಜೆಪಿ ನಾಯಕರ ವೈಮನಸು ಅಲ್ಲಿ ಬಹಿರಂಗವಾಯಿತು. ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದು, ‘ಸಂಘಟನೆ ಉಳಿಸಿ’ ಹೆಸರಿನಲ್ಲಿ
ರಚಿಸಿದ್ದ ಪ್ರತ್ಯೇಕ ಬಳಗದ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ‘ಇದು ಬಿಜೆಪಿಯಾತ್ರೆಯಲ್ಲ, ಕೆಜೆಪಿ ಯಾತ್ರೆ’ ಎಂದು ಟೀಕಿಸಿದ್ದಾರೆ.

‘ಯಾತ್ರೆ ಆಯೋಜನೆ ಹಾಗೂ ಎಲ್ಲರನ್ನೂ ಒಳಗೊಂಡು ಯಾತ್ರೆ ಯಶಸ್ವಿಗೊಳಿಸಬೇಕು ಎಂಬ ಭಾವನೆ ನಾಯಕರಲ್ಲಿ ಇಲ್ಲದೇ ಇರುವುದೇ ಭಿನ್ನಮತ ಸ್ಪೋಟಗೊಳ್ಳಲು ಕಾರಣ. ತಪ್ಪುಗಳನ್ನು ಸರಿಪಡಿಸುತ್ತೇವೆ, ಎಲ್ಲರೂ ಒಂದುಗೂಡಿ ಹೋಗಿ ಎಂದು ಪಕ್ಷ ಹಾಗೂ ಸಂಘದ ಹಿರಿಯರು ಹೇಳಿದ್ದರು. ಅದರಂತೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಎಂಟು ತಿಂಗಳ ಹಿಂದೆ ನೀಡಿದ ಭರವಸೆ ಈಗಲೂ ಈಡೇರಿಲ್ಲ. ಯಡಿಯೂರಪ್ಪ ಮತ್ತು ಅವರ ಆಪ್ತರ ಏಕಾಧಿಪತ್ಯದ ಧೋರಣೆ ಬದಲಾಗಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿದೆ’ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

‘150 ಸ್ಥಾನ ಗೆಲ್ಲುವುದಕ್ಕಾಗಿ ಯಾತ್ರೆ ನಡೆಸಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್, ಜೆಡಿಎಸ್‌ ಕಾರ್ಯಕರ್ತರು ನಮ್ಮ ಜತೆಗೆ ಬಂದರೂ ನಾವು ಆದರದಿಂದ ಸ್ವಾಗತಿಸಿ, ಪ್ರೀತಿಯಿಂದ ನಡೆಸಿಕೊಳ್ಳಬೇಕು. ನಮ್ಮ ಪಕ್ಷದಲ್ಲಿ ಹತ್ತಾರು ವರ್ಷ ದುಡಿದ ನಾಯಕರು, ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಯಡಿಯೂರಪ್ಪ ಮತ್ತು ಅವರ ಜತೆಗಿರುವವರು ತಮ್ಮ ನಡವಳಿಕೆಯನ್ನು ಈಗಲಾದರೂ ಬದಲಾವಣೆ ಮಾಡಿಕೊಳ್ಳದೇ ಇದ್ದರೆ ಯಾತ್ರೆ ಹೋದಲ್ಲೆಲ್ಲ ಇಂತಹ ಅತೃಪ್ತಿ, ಅಸಮಾಧಾನ ಬೀದಿಗೆ ಬರಲಿದೆ’ ಎಂದು ಸಂಘಟನೆ ಉಳಿಸಿ ಬಳಗದ ಜತೆಗೆ ಗುರುತಿಸಿಕೊಂಡಿದ್ದ ನಾಯಕರೊಬ್ಬರು ಪ್ರತಿಪಾದಿಸಿದರು.

‘ಉದ್ಘಾಟನಾ ಕಾರ್ಯಕ್ರಮದ ಅವ್ಯವಸ್ಥೆ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕರ್ತರು ಸೇರದೇ ಇರುವುದನ್ನು ಅಮಿತ್‌ ಷಾ ಗಮನಿಸಿದ್ದಾರೆ. ತಪ್ಪು ಸರಿಪಡಿಸಿಕೊಳ್ಳಲು ಸೂಚಿಸಿದ್ದಾರೆ. ಹಾಗಿದ್ದರೂ ಬದಲಾವಣೆಯಾಗಿಲ್ಲ ಎಂದರೆ ಯಾರು ಏನು ಮಾಡಲು ಸಾಧ್ಯ’ ಎಂದೂ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT